ಯಾರಪ್ಪಂದೇನೈತಿ ? ಬೆಳಗಾವಿ ನಮ್ದೈತಿ…
ಪ್ರಚಲಿತ
ಮರಿಲಿಂಗಗೌಡ ಮಾಲಿಪಾಟೀಲ್
@.
ರಾಜಕೀಯಕ್ಕೆ ಬರುವುದಕ್ಕೆ ಮೊದಲು ಬೊಮ್ಮಾಯಿಯವರೂ ಕನ್ನಡಪರ ಹೋರಾಟಗಾರರಾಗಿದ್ದರು. ಕನ್ನಡ ಶಾಲೆಗಳಿಗೆ ಹಣ ಬಿಡುಗಡೆ ಮಾಡಿ ಕನ್ನಡತನ ತೋರಿದ್ದಾರೆ. ಅಂತಹವರು ಮುಖ್ಯಮಂತ್ರಿಯಾಗಿರುವ ಕಾಲದಲ್ಲಿಯೇ ಇಂತಹ ಘಟನೆ ನಡೆದಿದ್ದೂ, ಬೊಮ್ಮಾಯಿಯವರು ಸುಮ್ಮನಿದ್ದಾರೆ ಅಂದರೆ ಅದು ಅವರ ವ್ಯಕ್ತಿತ್ವಕ್ಕೆ ಒಂದು ಕಪ್ಪು ಚುಕ್ಕೆ.
ಮಸಿ ಬಳಸಿ ಯಾರನ್ನಾದರೂ ಕೊಲೆ ಮಾಡುವುದು ಸಾಧ್ಯವೇ? ಬೆಳಗಾವಿ ಪೊಲೀಸರ ಪ್ರಕಾರ ಸಾಧ್ಯ! ಯಾಕೆಂದರೆ ಎಂಇಎಸ್ ಅಧ್ಯಕ್ಷ ದೀಪಕ್ ದಲ್ವಿಯ ಮುಖಕ್ಕೆ ಮಸಿ ಬಳಿದ ಕಾರಣಕ್ಕಾಗಿ ಕರ್ನಾಟಕ ನವ ನಿರ್ಮಾಣ ಪಡೆಯ ಸಂಪತ್‌ಕುಮಾರ್ ಮತ್ತು ಇತರ ಮೂವರ ಮೇಲೆ ಬೆಳಗಾವಿಯ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನದ ಕೇಸು ದಾಖಲಾಗಿದೆ!
ಇದು ಕನ್ನಡಪರ ಹೋರಾಟಗಾರರಿಗೆ ಸಿಕ್ಕಿದ ಬಳುವಳಿ. ಕರ್ನಾಟಕದ ಮುಖ್ಯಮಂತ್ರಿ ಬೊಮ್ಮಾಯಿ ಚಳಿಗಾಲದ ಅಧಿವೇಶನದ ಪ್ರಯುಕ್ತ ಬೆಳಗಾವಿಯಲ್ಲಿಯೇಇದ್ದಾರೆ. ಅವರು ಇದಕ್ಕೆ ಚಕಾರವೆತ್ತಿಲ್ಲ. ಇನ್ನು ಕಾಂಗ್ರೆಸ್, ಆಡಳಿತ ಪಕ್ಷದ ವಿರುದ್ಧ ನಡೆಸಬೇಕೆಂಬ ಪ್ರತಿ ಭಟನಾ ಮೆರವಣಿಗೆಗೆ೫ಸಾವಿರ ಜನರನ್ನು ಸೇರಿಸುವಲ್ಲಿ ಬ್ಯುಸಿಯಾಗಿದೆ. ಹಾಗಾಗಿ ಅವರೂ ಇತ್ತ ಗಮನ ಹರಿಸಿಲ್ಲ. ಹೀಗಾಗಿ ಎಂಇಎಸ್‌ನ ಪುಂಡಾಟಕ್ಕೆ ಪ್ರತಿಕ್ರಿಯಿಸಬೇಕೆಂದು ಪ್ರಮುಖ ರಾಜಕಾರಣಿಗಳಿಗೆ ಅನ್ನಿಸಿಯೇ ಇಲ್ಲ. ಒಟ್ಟಿನಲ್ಲಿ ಕನ್ನಡ ವಿರೋಧಿ ಮನಃಸ್ಥಿತಿಯನ್ನು ವಿರೋಧಿಸಿದರೆ ಕೇಸು ಹಾಕಿಸಿಕೊಂಡು ತೆಪ್ಪಗಿರುವ ಸ್ಥಿತಿ ಕನ್ನಡಪರ ಹೋರಾಟಗಾರರದು.
ಇಷ್ಟಕ್ಕೂ ನಡೆದುದನ್ನು ಅವಲೋಕಿಸಿದರೆ ಎಂಇಎಸ್‌ನ ಉದ್ಧಟತನ ಎದ್ದು ಕಾಣುತ್ತದೆ. ‘ಬೆಳಗಾವಿ ಕರ್ನಾ ಟಕದ್ದು’ ಎಂದು ಒಪ್ಪಲು ಸಿದ್ಧವಿಲ್ಲದ ಮಹಾರಾಷ್ಟ್ರ ಏಕೀಕರಣ ಸಮಿತಿ ಮೊದಲಿನಿಂದಲೂ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ತನ್ನ ನಿಲುವನ್ನು ಪ್ರತಿಪಾದಿಸುತ್ತಲೇ ಬಂದಿದೆ. ಬೆಳಗಾವಿ ಕರ್ನಾಟಕದ್ದೇ ಭಾಗವಲ್ಲದುದರಿಂದ ಕರ್ನಾಟಕದ ವಿಧಾನಸಭೆಯ ಅಧಿವೇಶನ ಬೆಳಗಾವಿಯಲ್ಲಿ ನಡೆಯುವಂತಿಲ್ಲ ಎನ್ನುವುದು ಎಂಇಎಸ್ ಆಕ್ಷೇಪ. ಹೀಗಾಗಿ ಚಳಿಗಾಲದ ಅಧಿವೇಶನವನ್ನು ಪ್ರತಿಭಟಿಸಿ ಎಂದಿನಂತೆ ‘ಮಹಾಮೇಳಾವ’ ವನ್ನು ನಡೆಸಲು ಎಂಇಎಸ್ ಮುಂದಾಗಿತ್ತು. ಇದಕ್ಕಾಗಿ ‘ತಿಲಕವಾಡಿ’ ವ್ಯಾಪ್ತಿಯಲ್ಲಿನ ವ್ಯಾಕ್ಸಿನ್ ಡಿಪೋದಲ್ಲಿ ಒಂದು ಪೆಂಡಾಲನ್ನು ಹಾಕಲಾಗಿತ್ತು.
ನೆನಪಿರಲಿ, ಇದಕ್ಕಾಗಿ ಎಂಇಎಸ್ ಸ್ಥಳೀಯ ಅಧಿಕಾರಿಗಳಿಂದ ಯಾವುದೇ ಅನುಮತಿಯನ್ನೂ ಪಡೆದಿರಲಿಲ್ಲ. ಸ್ಥಳೀಯ ಪೊಲೀಸರು ಬಂದು ಪೆಂಡಾಲನ್ನುತೆರವುಗೊಳಿಸಿದರು. ಪೊಲೀಸರೊಡನೆ ಮಾತಿನ ಚಕಮಕಿ ಡೆಸುತ್ತಿದ್ದ ಎಂಇಎಸ್ ಮುಖಂಡ ದೀಪಕ್ ದಲ್ವಿಯ ಮುಖಕ್ಕೆ ಸ್ಥಳಕ್ಕಾಗಮಿಸಿದ ಕರ್ನಾಟಕ ನವ ನಿರ್ಮಾಣ ಪಡೆಯ ಯುವ ಘಟಕದ ಅಧ್ಯಕ್ಷ ಸಂಪತ್ ಕುಮಾರ್ ಮತ್ತು ಬೆಂಬಲಿಗರು ಮಸಿ ಸುರಿದರು. (ಪ್ರತಿಭಟನಾ ಕಾರರನ್ನು ಸ್ಥಳದಿಂದ ನಿರ್ಗಮಿಸುವಂತೆ ಪೊಲೀಸರು ಮಾಡುತ್ತಿದ್ದರು. ಕರ್ನಾಟಕ ನವನಿರ್ಮಾಣ ಪಡೆಯವರದ್ದು ಅನಗತ್ಯ ಮಧ್ಯಪ್ರವೇಶ ಎಂದು ಅನ್ನಿಸಬಹುದು. ಅದಕ್ಕೆ ತಕರಾರಿಲ್ಲ. ಆದರೆ ಅವರ ಮೇಲೆ ಕೊಲೆ ಯತ್ನದ ಪ್ರಕರಣ ದಾಖಲಿಸಿದ್ದಷ್ಟೇ ಆಕ್ಷೇಪ). ದಳವಿಯ ಜತೆಗೆ ಇದ್ದ ಮಾಜಿ ಶಾಸಕ ಮನೋಹರ ಕಿನೇಕರ್ ಅವರ ಮುಖಕ್ಕೆ ಮಸಿ ಚೆಡಿದೆ. ಇದಕ್ಕೆ ಪೊಲೀಸರು ಸಂಪತ್ ಕುಮಾರ್ ಮತ್ತು ಬೆಂಬಲಿಗರನ್ನು ಬಂಧಿಸಿ ದಾಖಲಿಸಿದ್ದು ಕೊಲೆ ಯತ್ನದ ಪ್ರಕರಣ!
ಕೊಲೆ ಕೇಸು ದಾಖಲಿಸಿದ್ದನ್ನು ಬೊಮ್ಮಾಯಿ ಖಂಡಿಸಿಲ್ಲ! ಆದರೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ‘ಕನ್ನಡ ಪರ ಸಂಘಟನೆಯ ಕೃತ್ಯವನ್ನು ಖಂಡಿಸಿ ಇಂತಹ ಯತ್ನಗಳಿಂದ ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಯತ್ನಕ್ಕೆ ಯಾವುದೇ ಹಿನ್ನಡೆಯಾಗುವುದಿಲ್ಲ’ ಎಂದಿzರೆ. ಅಂದರೆ ಮಹಾರಾಷ್ಟ್ರ ಸಂಘಟನೆಯೊಂದು ಕರ್ನಾಟಕಕ್ಕೆ ಬಂದು ಉದ್ಧಟತನ ತೋರಿದರೆ ಮಹಾರಾಷ್ಟ್ರದ ರಾಜಕಾರಣಿಗಳ ಬೆಂಬಲವಿರುತ್ತದೆ. ಆದರೆ ನೆರೆ ರಾಜ್ಯದ ಸಂಘಟನೆಯ ಉದ್ಧಟತನವನ್ನು ಪ್ರತಿಭಟಿಸಿದ ಕನ್ನಡ ಪರ ಸಂಘಟನೆಗೆ ಸ್ಥಳೀಯ ಸರಕಾರದಿಂದ ಯಾವುದೇ ಬೆಂಬಲವಿಲ್ಲ. ಸರಕಾರದ ಇಚ್ಛಾಶಕ್ತಿಯ ಹೊರತಾಗಿ ಯಾವುದೇ ಹೋರಾಟವೂ ಯಶಸ್ಸು ಸಾಧಿಸುವುದು ಸಾಧ್ಯವಿಲ್ಲ ಎಂಬುದು ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಅರಿವಿಲ್ಲವೇ? ಎಂಇಎಸ್ ಉದ್ಧಟತನ ಇಂದು ನಿನ್ನೆಯದಲ್ಲ.
2005ರಲ್ಲಿ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಬೆಳಗಾವಿಯ ಪಾಲಿಕೆ ಮೇಯರ್ ವಿಜಯ್ ಮೋರೆ ನೇತೃತ್ವದಲ್ಲಿ ನಿರ್ಣಯ ತೆಗೆದು ಕೊಂಡಿತ್ತು! ಆಗಲೂ ವಿಜಯ್ ಮೋರೆಯ ಮುಖಕ್ಕೆ ಮಸಿ ಬಳಿಯಲ್ಪಟ್ಟಿದ್ದು ಹೋರಾಟಗಾರರ ಹೊಟ್ಟೆಯಲ್ಲಿದ್ದ ಕಿಚ್ಚಿನ ಧ್ಯೋತಕ. ಮಸಿ ಬಳಿದವರ ಮೇಲೆ ಪ್ರಕ ರಣ ದಾಖಲಾಗುತ್ತದೆ. ಆದರೆ ಉದ್ಧಟತನದ ನಿರ್ಣಯ ಕೈಗೊಂಡವರು ಪಾರಾಗುತ್ತಾರೆ. ಎಂಇಎಸ್ ರಾಜ್ಯ ಸರಕಾರದ ಅಣಕು ಶವ ಯಾತ್ರೆ ನಡೆಸುತ್ತದೆ. ಕನ್ನಡ ಬಾವುಟ ಗಳಿಗೆ ಬೆಂಕಿ ಹಾಕುತ್ತದೆ. ಆದರೆ ಇಂತಹ ಉದ್ಧಟತನದ ಕೃತ್ಯಗಳಿಗೆ ಯಾವುದೇ ಶಿಕ್ಷೆಯಾಗುವುದಿಲ್ಲ. ಯಾಕೆಂದರೆ ಇದಕ್ಕೆ ಮಹಾರಾಷ್ಟ್ರದ ಸರಕಾರದ ಶ್ರೀರಕ್ಷೆ ಇದೆ.
ಇತಿಹಾಸವನ್ನು ಕೆದಕುವುದಾದರೆ1881ರ ಗಣತಿಗಳ ಪ್ರಕಾರ ಬೆಳಗಾವಿಯಲ್ಲಿ ಕನ್ನಡ ಭಾಷಿಕರ ಸಂಖ್ಯೆ ಶೇ.64ಇತ್ತು. ಬ್ರಿಟಿಷ್ ಇಂಡಿಯಾದ ಅವಧಿಯಲ್ಲಿ ಗುಜರಾತ್, ಮಹಾರಾಷ್ಟ್ರ ಮತ್ತು ಕರ್ನಾಟಕದ ಸ್ವಲ್ಪ ಭಾಗ ಬಾಂಬೆ ಪ್ರೆಸಿಡೆನ್ಸಿಗೆ ಸೇರಿತ್ತಾದರೂ ಸ್ವಾತಂತ್ರ್ಯಾ ನಂತರ1956ರಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಯ ವೇಳೆಗೆ ಬೆಳಗಾವಿ ಮೈಸೂರು ರಾಜ್ಯಕ್ಕೆ ಸೇರ್ಪಡೆಯಾಗಿತ್ತು. ಆದರೆ1948ರಲ್ಲಿ ಹುಟ್ಟಿಕೊಂಡ ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಪಟ್ಟು ಹಿಡಿದಿತ್ತು.
ಬೆಳಗಾವಿ ಮುನ್ಸಿಪಾಲಿಟಿಯಲ್ಲಿ ಮರಾಠಿ ಭಾಷೆ ಮಾತನಾಡುವ ರಾಜಕಾರಣಿಗಳ ಸಂಖ್ಯೆ ಹೆಚ್ಚತೊಡಗಿದಂತೆಲ್ಲ ಎಂಇಎಸ್ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಒತ್ತಡ ಹೇರ ತೊಡಗಿತ್ತು. ಈ ಬಗ್ಗೆ ನಿರ್ಣಯಿಸಲು ಮಹಾಜನ್ ಸಮಿತಿ 1966ರಲ್ಲಿ ರೂಪುಗೊಂಡಿತು. ಆಗ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ವಿ.ಪಿ. ನಾಯಕ್, ಮಹಾಜನ್ ಸಮಿತಿ ನೀಡುವ ವರದಿ ಏನೇ ಇದ್ದರೂ ಅದನ್ನು ಒಪ್ಪಿಕೊಳ್ಳುವುದಾಗಿ ಬಹಿರಂಗವಾಗಿ ಹೇಳಿದ್ದರು. ಮೆಹರ್ ಚಂದ್ ಮಹಾಜನ್ ನೇತೃತ್ವದ ಸಮಿತಿ ಹಲವಾರು ದಾಖಲೆಗಳನ್ನು ಪರಿಶೀಲಿಸಿ, ಜನಾಭಿಪ್ರಾಯವನ್ನು ಪಡೆದು ಬೆಳಗಾವಿ ತನ್ನದೆಂಬ ಮಹಾರಾಷ್ಟ್ರದ ವಾದವನ್ನು ತಿರಸ್ಕರಿಸಿ, ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದೆಂದು ವರದಿ ನೀಡಿತು. ಆದರೆ ಎಂಇಎಸ್ ಇದನ್ನು ಒಪ್ಪಿಕೊಳ್ಳುತ್ತಿಲ್ಲ.
ಮಹಾಜನ್ ವರದಿ ಪಕ್ಷಪಾತತನದಿಂದ ಕೂಡಿದೆ ಎನ್ನುತ್ತಿದ್ದು, ಎಂಇಎಸ್‌ನ ತಕರಾರು ಬೆಳಗಾವಿ ಯಾವ ರಾಜ್ಯಕ್ಕೆ ಸೇರಿದ್ದು ಎಂದು ನಿರ್ಧರಿಸುವ ಮಹಾಜನ್ವರದಿ ಅಂತಿಮವಲ್ಲ ಎನ್ನುವುದು. ಮಹಾಜನ್ ವರದಿಯಂತೆಯೇ ಆಗಬೇಕಿದ್ದರೆ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕಲ್ಲವೇ? ಎನ್ನುವುದು ಅವರ ಪ್ರಶ್ನೆ.ಇದಕ್ಕೆ ವೋಟ್ ಬ್ಯಾಂಕ್‌ನ ಮೇಲೆ ದೃಷ್ಟಿ ನೆಟ್ಟ ರಾಜಕಾರಣಿಗಳೂ ತಾಳಹಾಕಿ ಸಮಸ್ಯೆ ಎಂಬ ಬೆಂಕಿಗೆ ತುಪ್ಪ ಸುರಿದರು. ಹೀಗಾಗಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂಬ ತನ್ನ ನಿಲುವನ್ನು ಪದೇ ಪದೇ ಹೇಳುತ್ತ, ಪ್ರತಿಭಟನೆ ಇತ್ಯಾದಿಗಳನ್ನು ಹಮ್ಮಿಕೊಂಡು ಸಮಸ್ಯೆಯನ್ನು ಎಂಇಎಸ್ ಜೀವಂತವಾಗಿ ಇಟ್ಟಿದೆ. ರಾಜ್ಯದ ನೆಲವನ್ನು ಒಂದಿಂಚೂ ಬಿಟ್ಟು ಕೊಡುವುದಿಲ್ಲ ಎನ್ನುವ ನಿಲುವಿನ ಕನ್ನಡ ಪರ ಹೋರಟಗಾರರು ಎಂಇಎಸ್‌ನ ನಿಲುವನ್ನು ಪ್ರತಿಭಟಿಸುತ್ತಲೇ ಬಂದಿದ್ದಾರೆ.
ಆದರೆ, ಕನ್ನಡ ಪರ ಹೋರಾಟಕ್ಕೆ ಸರಕಾರದ ಬೆಂಬಲವೇ ಇಲ್ಲ. ಕನ್ನಡ ಪರ ಹೋರಾಟಗಾರರೊಬ್ಬರು ಹೇಳುವಂತೆ ನಲವತ್ತು ವರ್ಷಗಳ ಹಿಂದೆಯೂ ಬೆಂಗಳೂರಿನಲ್ಲಿ ಅಂಗಡಿಗಳಿಗೆ ಕನ್ನಡ ಫಲಕಗಳನ್ನೇ ಹಾಕುವಂತೆ ಪ್ರತಿಭಟನೆಗಳು ನಡೆದಿದ್ದವು. ಆದರೆ ಪ್ರತಿಭಟನೆಗಳ ಫಲಿತಾಂಶ ಶೂನ್ಯ! ಯಾಕೆಂದರೆ ಇಂದಿಗೂ ಬೆಂಗಳೂರಿನ ಅಂಗಡಿಗಳಲ್ಲಿ ಕನ್ನಡ ಫಲಕಗಳಿಲ್ಲ. ಇದ್ದರೂ ಅನ್ಯ ಭಾಷೆಗಳ ಫಲಕಗಳೇ ರಾರಾಜಿಸುತ್ತಿವೆ. ಆದರೆ ಕೇರಳಕ್ಕೆ ಹೋದರೆ ಮಲಯಾಳಂ ಹೊರತಾಗಿ ಇನ್ನೊಂದು ಭಾಷೆ ಅಂಗಡಿಗಳ ಫಲಕಗಳಲ್ಲಿ ಕಾಣುವುದಿಲ್ಲ.
ಮಲಯಾಳಂ ಬಾರದ ವ್ಯಕ್ತಿ ಕೇರಳದಲ್ಲಿ ವ್ಯವಹರಿಸುವುದು ಸಾಧ್ಯವೇ ಇಲ್ಲ. ಆದರೆ, ಬೆಂಗಳೂರಿನಲ್ಲಿ ಎಲ್ಲವೂ ಚಲ್ತಾ ಹೈ! ಅದು ತಪ್ಪು ಎಂದೂ ಅರ್ಥವಲ್ಲ. ಹೊರಗಿನಿಂದ ಬಂದವರಿಗೆ ಸಹಕರಿಸುವುದು ನಮ್ಮ ಸೌಜನ್ಯ, ಹೌದು. ಆದರೆ ಕನ್ನಡಕ್ಕೆ ಪ್ರಾಶಸ್ತ್ಯ ಇರುವಂತೆ ನೋಡಿಕೊಳ್ಳಬೇಕಾದದ್ದು ಆಡಳಿತ ಸೂತ್ರ ಹಿಡಿದವರ ಕರ್ತವ್ಯವೂ ಹೌದು. ನಲವತ್ತು ವರ್ಷಗಳ ಹಿಂದೆ ಇದ್ದ ಸ್ಥಿತಿಯೇ ಆಗಲೂ ಇದೆ ಎನ್ನುವುದಾದರೆ ಅದು ಸರಕಾರದ ಇಚ್ಛಾಶಕ್ತಿಯ ಕೊರತೆಯಿಲ್ಲದೇ ಇನ್ನೇನು?ಈಗಲಾದರೂ ಬಸವರಾಜ ಬೊಮ್ಮಾಯಿ ತನ್ನ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು.
ಕನ್ನಡಪರ ಹೋರಾಟಗಾರರನ್ನು ಬೆಂಬಲಿಸಬೇಕು. ರಾಜಕೀಯಕ್ಕೆ ಬರುವುದಕ್ಕೆ ಮೊದಲು ಬೊಮ್ಮಾಯಿಯವರೂ ಕನ್ನಡ ಪರ ಹೋರಾಟಗಾರರಾಗಿದ್ದರು. ಕನ್ನಡ ಶಾಲೆಗಳಿಗೆ ಹಣ ಬಿಡುಗಡೆ ಮಾಡಿ ಕನ್ನಡತನ ತೋರಿದ್ದಾರೆ. ಅಂತಹ ಬೊಮ್ಮಾಯಿಯವರ ಕಾಲದಲ್ಲಿಯೇ ಇಂತಹ ಘಟನೆ ನಡೆದಿದ್ದೂ, ಬೊಮ್ಮಾಯಿ ಯವರು ಸುಮ್ಮನಿದ್ದಾರೆ ಅಂದರೆ ಅದು ಅವರ ವ್ಯಕ್ತಿತ್ವಕ್ಕೆ ಒಂದು ಕಪ್ಪು ಚುಕ್ಕೆ ಎಂದು ಕನ್ನಡಾಭಿಮಾನಿಗಳು ಭಾವಿಸುವಂತಾಗುತ್ತದೆ. ಸ್ಥಳೀಯ ಆಡಳಿತದ ಅನುಮತಿ ಪಡೆಯದೇ ಪೆಂಡಾಲ್ ನಿರ್ಮಿಸಿದ ದೀಪಕ್ ದಲ್ಪಿ ಮತ್ತು ಆತನಿಗೆ ಬೆಂಬಲವಾಗಿ ನಿಂತ ಮನೋಹರ್ ಕಿನೇಕರ್ ವಿರುದ್ಧ ಪ್ರಕರಣ ದಾಖಲಿಸಬೇಕು. ಕನ್ನಡ ಪರ ಹೋರಾಟಗಾರರ ಮೇಲೆ ದಾಖಲಿಸಲಾದ ‘ಕೊಲೆ ಯತ್ನ’ದ ಪ್ರಕರಣ ಕೈ ಬಿಡುವಂತೆ ಪೊಲೀಸರಿಗೆ ಆದೇಶಿಸಬೇಕು.
ಎಲ್ಲಕ್ಕಿಂತ ಹೆಚ್ಚಾಗಿ ‘ಬೆಳಗಾವಿ ಕನ್ನಡದ್ದೇ’ ಎನ್ನುವುದು ಎಂದೋ ನಿರ್ಧಾರವಾದ ವಿಷಯ. ಅದನ್ನು ಮತ್ತೆ ಮತ್ತೆ ಕೆದಕುತ್ತಿರುವ ಎಂಇಎಸ್ ಕರ್ನಾಟಕದಲ್ಲಿ ಯಾವುದೇ ಚಟುವಟಿಕೆಯನ್ನು ನಡೆಸದಂತೆ ನಿಷೇಽಸಬೇಕು. ಈ ಬಗ್ಗೆ ದೃಢವಾದ ನಿರ್ಣಯವನ್ನು ಸದನದಲ್ಲಿಯೇ ಕೈಗೊಳ್ಳಬೇಕು.