ಕಾಶಿಯ ವಿನಾಶಕ್ಕೆ ಹಾಕಿನ್ಸ್ ಹಾಕಿದ ನಾಂದಿ
ಸುಪ್ತ ಸಾಗರ
ರಾಧಾಕೃಷ್ಣ ಭಡ್ತಿ
@.
ಕಾಶಿ ಅವಿನಾಶಿ ಎಂಬುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ. ದಾಳಿ-ನಿರ್ಮಾಣಗಳ ಹಾವು ಏಣಿಯಾಟವನ್ನು ಇತಿಹಾಸದುದ್ದಕ್ಕೂ ಕಂಡಿರುವ ಬನಾರಸ್, ಕೇವಲ ಸಂಸ್ಕೃತಿ, ಧರ್ಮದ ಪ್ರತೀಕವಾಗಿದ್ದರೆ ಎಂದೋ ನಾಶವಾಗಿ ಬಿಡುತ್ತಿತ್ತೇನೋ. ಆದರೆ ಅದು ನಾಗರಿಕತೆಯೊಂದರ ಪ್ರತೀಕ. ನಾಗರಿಕತೆಗೆ ಸಾವಿಲ್ಲ; ಅವಸ್ಥಾಂತರವಾಗಬಹುದು.
ಬಹಳ ಹಿಂದೆ ಹೋಗುವುದು ಬೇಡ. ತೀರಾ ಇತ್ತೀಚೆಗೆ, ಅಂದರೆ ತೀರಾ ಇತ್ತೀಚೆಗಲ್ಲ, ಸ್ವಲ್ಪ ಹಿಂದೆ… ಅಯ್ಯೋ, ಅಷ್ಟು ಹಿಂದೆ ಹೋಗಬೇಡಿ. ಸರಿ, ಕಳೆದ ಶತ ಮಾನದ ಆರಂಭದ ದಶಕಗಳು, ಸರಿಯೇ? ಹೌದು, ಕಾಶಿಯ ಬಗ್ಗೆ ಹೇಳಲು ಹೊರಟರೆ ಹತ್ತಾರು ಸ್ತರಗಳ ಇತಿಹಾಸ ಬಿಚ್ಚಿಕೊಳ್ಳುತ್ತದೆ.
ಹುಟ್ಟಿದ ನಂತರ ಕಾಶಿಯನ್ನು ಕೆಡವಿ, ಕಟ್ಟಿ, ಕಟ್ಟಿದ್ದನ್ನು ಮತ್ಯಾರೋ ಕಟ್ಟಿ, ಮತ್ಯಾರೋ ಬಂದು ಕಟ್ಟಿ … ಇದೀಗ ಮತ್ತೆ ತಲೆ ಎತ್ತಿನಿಂತಿದೆ; ನಿಲ್ಲುತ್ತಿದೆ ಕಾಶಿ. ಬಹುಶಃ ಕಾಶಿ ವಿಶ್ವನಾಥ ಧಾಮ್ ಕಾರಿಡಾರ್‌ನ ಸುದ್ದಿ ಹಳತಾಗಿ ಎರಡು ವಾರಗಳೇ ಕಳೆದವು. ಹಾಗೆಂದು ಕಾಶಿ ಹಳತಾಗುವುದೇ ಇಲ್ಲ, ಹಾಳಾಗುವುದೂ ಇಲ್ಲ. ಏಕೆಂದರೆ ಅದು ಅವಿನಾಶಿ. ಬಗೆದಷ್ಟೂ ಮುಗಿಯದ, ಬರೆದಷ್ಟೂ ತೀರದ ಅನಂತತೆ ಕಾಶಿಯದ್ದು. ಅಷ್ಟಕ್ಕೂ ಈ ಕಾಶಿ ಹೀಗೆಯೇ ಇತ್ತೇ? ಇಲ್ಲದಿದ್ದರೆ ಹೀಗಾಗಲು ಕಾರಣರಾರು? ಸ್ವಲ್ಪ ಹಿಂದಕ್ಕೆ ಹೋಗೋಣ.
ಸ್ವಾತಂತ್ರ್ಯಾ ನಂತರ ನಾನಾ ಸಂಸ್ಥಾನಗಳನ್ನು ಭಾರತದ ಒಕ್ಕೂಟದಲ್ಲಿ ವಿಲೀನಗೊಳಿಸುವ ಕಸರತ್ತು ನಡೆಯುತ್ತಿತ್ತು.15ಅಕ್ಟೋಬರ್ 1548ರವರೆಗೂ ಬನಾರಸ್ ಅಥವಾ ಬನಾರಸಿ ರಾಜ್ಯ(ಇಂದಿನ ಉತ್ತರ ಪ್ರದೇಶ) ಭಾರತದಲ್ಲಿನ ಒಂದು ಸಾಮ್ರಾಜ್ಯ. ಅಲ್ಲಿದ್ದುದು ರಾಜಪ್ರಭುತ್ವ. 88ನೇ ದೊರೆ ವಿಭೂತಿ ನಾರಾಯಣ ಸಿಂಗ್ ಆಡಳಿತ ನಡೆಸುತ್ತಿದ್ದ. ಪ್ರತಿಷ್ಠೆ, ಸಾಮ್ರಾಜ್ಯ ದಾಹಕ್ಕೆ ಹೆಸರಾದ ರಾಜವಂಶವದು. ಕೊನೆಗೂ ಆ ದಿನ, ಭಾರತೀಯ ಒಕ್ಕೂಟಕ್ಕೆ ಸೇರಲು ರಾಜಾ ವಿಭೂತಿ ನಾರಾಯಣ್ ಸಿಂಗ್ ಸಹಿ ಹಾಕಿದ.
ಅಷ್ಟರೆಲ್ಲಾಗಲೇ ಕಾಶಿ ಏನೆಲ್ಲ ಆಗಬಾರದಿತ್ತೋ ಅದು ಆಗಿತ್ತು. ಮೊನ್ನೆಮೊನ್ನೆ ಪ್ರಧಾನಿ ಮೋದಿ, ಕಾಶಿ ವಿಶ್ವನಾಥ ಧಾಮ್ ಕಾರಿಡಾರ್ ಉದ್ಘಾಟಿಸುವವರೆಗೂ ಕಾಶಿ ಹೇಗಿತ್ತೋ ಹಾಗೆಯೇ ಇತ್ತು ಕೊನೆಯ ದೊರೆ ಅದನ್ನು ಭಾರತದಲ್ಲಿ ವಿಲೀನಗೊಳಿಸಿದಾಗ. ನಾರಾಯಣ ಸಿಂಗ್‌ನ ಪೂರ್ವಜರು ಮೂಲತಃ ಜಮೀನ್ದಾರರು. ಔರಂಗಜೇಬನ ಬಳಿಕ ಮೊಘಲ್‌ರ ಅವಸಾನದ ಲಾಭ ಪಡೆದ ಇಂಥ ಜಮೀನ್ದಾರರಲ್ಲೊಬ್ಬ ರಾಜಾ ಬಲ್ವಂತ್ ಸಿಂಗ್ 18ನೇ ಶತಮಾನದ ಮಧ್ಯಭಾಗದಲ್ಲಿ ತನ್ನನ್ನು ತಾನೇ ‘ರಾಜಾ ಆಫ್ ಬನಾರಸ್’ ಎಂದು ಕರೆದುಕೊಂಡು ‘ಬನಾರಸಿ ರಾಜ್ಯ’ ಸ್ಥಾಪಿಸಿದ.
ಅವನ ವಂಶಸ್ಥರು ಅವದ್ ವಿಮೋಚನೆಯ ನಂತರ ಅಲ್ಲಿಂದ ಬನಾರಸ್ ಸುತ್ತಮುತ್ತಲಿನ ಪ್ರದೇಶಕ್ಕೆ ಬಂದು ನೆಲೆಸಿದವರು. ಕೊನೆಗೆ ಪ್ರತಿಷ್ಠೆ ಉಳಿಸಿಕೊಳ್ಳಲುಎಲ್ಲರಿಗಿಂತ ಮೊದಲೇ ಈಸ್ಟ್ ಇಂಡಿಯಾ ಕಂಪನಿಯ ಸಾಮಂತರಾಗಿ ಶರಣಾದವರು. 1910ರಲ್ಲಿ ‘ಬನಾರಸ್’ ಬ್ರಿಟಿಷ್ ಇಂಡಿಯಾದ ಪೂರ್ಣ ಪ್ರಮಾಣದರಾಜ್ಯವೆಂದು ಘೋಷಣೆಯಾಯಿತು. ರಾಜ ನೆಪಕ್ಕೆ ಉಳಿದಿದ್ದ; ಅವರ ಪ್ರತಿನಿಧಿಯಾಗಿ. ಈ ಘನಕಾರ್ಯಕ್ಕೇ ಅಲ್ಲಿನ ರಾಜನಿಗೆ ‘ಸರ್’ ಪದವಿ ನೀಡಿತು ಬ್ರಿಟಿಷ್ಸರಕಾರ. ಏನಾದರೂ ಮಾಡಿಕೊಂಡಿರಲಿ, ಅದಲ್ಲ ವಿಷಯ.
ಕಾಶೀ ಹೀಗಾಗಿದ್ದು ಹೇಗೇ? ಅವತ್ತು ಕಾಶಿ ಮಹಾರಾಜ, ಪಂಡಿತ್ ಮದನ ಮೋಹನ ಮಾಳವೀಯರ ಮಾತಿಗೆ ತುಸುವಾದರೂ ಬೆಲೆಕೊಟ್ಟಿದ್ದರೆ, ಸ್ವಂತ ವಿವೇಚನೆಯನ್ನಾದರೂ ಬಳಸಿದ್ದರೆ ಇಂದು ಕಾಶಿ ಈ ಪರಿಸ್ಥಿತಿಗೆ ಈಡಾಗುತ್ತಿರಲಿಲ್ಲ. ಮಹಾರಾಜನೆದುರು ಅವತ್ತಿದ್ದುದು ಅತ್ಯಂತ ಸುಂದರ ದೊಡ್ಡ ಪಟ್ಟಣದ ಒಡೆಯನಾಗಬೇಕೆಂಬ ಹಪಾಹಪಿ ಮಾತ್ರವೇ. ಅಂಥ ಮೋಹ ಅವನನ್ನು ಕುರುಡಾಗಿಸಿತ್ತು. ಸಾಮಾಜಿಕ ಜವಾಬ್ದಾರಿ, ಸಮುದಾಯದ ಹಿತ, ಪರಿಸರದ ಸಹಜತೆಗಳನ್ನು ಮೀರಿಯೂ ವಿಶ್ವದಲ್ಲಿ ವಾರಾಣಸಿಯನ್ನು ಮನಮೋಹಕ ನಗರವನ್ನಾಗಿ ರೂಪಿಸಬೇಕೆಂಬ ಹಮ್ಮಿನೊಂದಿಗೆ ರಾಜ ಮುನ್ನಡಿಯಿಟ್ಟಿದ್ದ. ಅದಕ್ಕೆ ಸಾಥಿಯಾಗಿ ನಿಂತವನು ಬ್ರಿಟಿಷ್ ಅಧಿಕಾರಿ ಹಾಕಿನ್ಸ್.
ಅದು 1932. ಹಾಕಿನ್ಸ್ ಆಗ ಭಾರತದಲ್ಲಿ ಬ್ರಿಟಿಷ್ ಕಮಿಷನರ್ ಆಗಿದ್ದವ. ತಿಳಿ ನೀರಿನೊಂದಿಗೆ ಪ್ರಜ್ವಲಿಸುತ್ತಿದ್ದ ಗಂಗೆಯನ್ನು ಕಂಡು ಅವನ ಕಣ್ಣು ಕುಕ್ಕಿರಬೇಕು. ವಾರಾಣಸಿಯ ಮಗ್ಗುಲಲ್ಲೇ ದೇವನದಿ ಎನಿಸಿಕೊಂಡು, ಸರ್ವರ ಪ್ರೀತಿ, ಪೂಜ್ಯತೆಗಳನ್ನು ಒಳಗೊಳ್ಳುತ್ತ ವಿಶ್ವನಾಥನ ಆರಾಧನೆಗೊಂದು ವಿಶೇಷ ಮೆರುಗು ನೀಡುತ್ತಿದ್ದ ಗಂಗೆ ಹಾಕಿನ್ಸ್‌ನ ಪಾಲಿಗೆ ಒಂದು ನಿರ್ಜೀವ ನೀರಿನ ಹರಿವಷ್ಟೆ. ಅದರ ಬಗ್ಗೆ ಯಾವ ಭಾವನೆಗಳೂ ಬ್ರಿಟಿಷರಲ್ಲಿ ಇರಲಿಲ್ಲ. ನಾವು ಭಾರತೀಯರಿಗೆ ಅದೂ ಕೇವಲ ನದಿಯೊಂದೇ ಅಲ್ಲ.
ನಮ್ಮ ಆರಾಧ್ಯ ದೈವ ಶಿವನ ಅರ್ಧಾಂಗಿ, ಗಂಗಾ ಮಾತೆಯಾಗಿ ಆ ನದಿ ಪೂಜೆಗೊಳ್ಳುತ್ತಿದ್ದು ವಿಚಿತ್ರ ಅಪಹಾಸ್ಯದ ಸಂಗತಿಯಾಗಿ ಆತನಿಗೆ ಕಂಡಿತ್ತು. ಅದ ರೊಂದಿಗಿನ ನಮ್ಮ ಭಾವನಾತ್ಮಕ ಸಂಬಂಧ ವಿಚಿತ್ರ ಹುಚ್ಚಿನಂತೆ ತೋರಿತ್ತು. ಅವತ್ತು ಕಾಶಿ ದೇಶದ ಪವಿತ್ರ ಯಾತ್ರಾ ಸ್ಥಳವಷ್ಟೇ ಆಗಿರಲಿಲ್ಲ. ನಮ್ಮ ಬಹುಮುಖ್ಯ ವಿದ್ಯಾಕೇಂದ್ರ, ಪ್ರಮುಖ ವಾಣಿಜ್ಯ ವಹಿವಾಟಿನ ನಗರಿಯಾಗಿಯೂ ಸೇವೆಯಲ್ಲಿತ್ತು. ಹೀಗಾಗಿ ಪಟ್ಟಣದ ಜನಸಂಖ್ಯಾ ಬಾಹುಳ್ಯ ಸಹಜವಾಗಿಯೇ ಇತರ ಪಟ್ಟಣ ಗಳಿಗೆ ಹೋಲಿಸಿದರೆ ತುಸು ಹೆಚ್ಚೇ ಇತ್ತು.
ಹೀಗಾಗಿ ಪಟ್ಟಣದ ಸ್ವಚ್ಛತೆ ಸಮಸ್ಯೆಯಾಗಿ ಸ್ಥಳೀಯ ಆಡಳಿತಕ್ಕೆ ಕಾಡುತ್ತಿತ್ತು. ರಾಜನಿಗೆ ಅದು ಪ್ರತಿಷ್ಠೆಯ ಪ್ರಶ್ನೆಯಾಗಿಯೂ ಬಾಧಿಸುತ್ತಿತ್ತು. ಇಂಥ ಸಂದರ್ಭ ವನ್ನೇ ಉಪಯೋಗಿಸಿಕೊಳ್ಳಲು ಹವಣಿಸಿದ್ದ ಹಾಕಿನ್ಸ್. ನಗರದ ಎಲ್ಲ ಜನವಸತಿಯ ತ್ಯಾಜ್ಯವನ್ನು ಚರಂಡಿಗಳಿಗೇ ಹರಿಸುವುದು. ಅಲ್ಲಿಂದ ಚರಂಡಿ ಹಾಗೂ ನಗರದ ಪ್ರಮುಖ ಕಾಲುವೆಗಳನ್ನು ನೇರವಾಗಿ ಗಂಗೆಗೆ ತಂದು ಜೋಡಿಸುವ ನಗರಾಭಿವೃದ್ಧಿ(?) ಯೋಜನೆಯೊಂದನ್ನು ರೂಪಿಸಿದ.
ಅಲ್ಲಿಯವರೆಗೂ ನಗರದ ಕೊಳಚೆ ನೀರು ಹಾಗೂ ಮಳೆ ನೀರು ಮೋರಿಗಳನ್ನು ಗಂಗೆಯಿಂದ ಪ್ರತ್ಯೇಕಿಸಿ ನಗರದ ಹೊರಭಾಗಕ್ಕೆ ಹರಿದುಬಿಡುವ ವ್ಯವಸ್ಥೆ ಇತ್ತು. ‘ಇದರಿಂದ ನಗರದ ಹೊರಭಾಗ ಮಾಲಿನ್ಯಗೊಳ್ಳುತ್ತಿದೆ. ಪ್ರವಾಸಿಗರು ಮತ್ತು ಯಾತ್ರಿಗಳಿಗೆ ಇದರಿಂದ ಪಟ್ಟಣ ಪ್ರವೇಶಕ್ಕೆ ಮುನ್ನವೇ ಕಾಶಿಯ ಬಗ್ಗೆ ಕೀಳು ಭಾವನೆ ಮೊಳೆಯುತ್ತದೆ’ ಎಂಬುದು ಹಾಕಿನ್ಸ್‌ನ ಪ್ರತಿಪಾದನೆಯಾಗಿತ್ತು. ಆದರೆ ನಮ್ಮ ಪಾಲಿಗೆ ಗಂಗೆ ವಿಶ್ವನಾಥನ ಅಭಿಷೇಕಕ್ಕಿರುವ ಪವಿತ್ರ ಜಲ. ನಮ್ಮ ಪವಿತ್ರ ಸ್ನಾನ, ತರ್ಪಣಗಳ ಮೂಲಕ ಅಧ್ಯಾತ್ಮಿಕ ಶುದ್ಧತೆಯ ಕೇಂದ್ರ ಗಂಗಾ ನದಿ.
ಅಂಥ ನದಿಗೆ ನಗರದ ಹಾಗೂ ಮಾನವ ತ್ಯಾಜ್ಯವನ್ನು ಜೋಡಿಸುವುದು ಮಹತ್ ಪಾಪ. ಕಾಶಿ ಮಹಾರಾಜನಿಗೆ ಇದರ ಅರಿವೂ ಇತ್ತು. ಇದಕ್ಕಾಗಿ ನಾಗರಿಕ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಲಾಯಿತು. ಪಂಡಿತ್ ಮದನಮೋಹನ ಮಾಳವೀಯರ ನೇತೃತ್ವದ ನಾಗರಿಕ ಸಮೂಹದಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಗಂಗೆ ಕುಲಗೆಟ್ಟು ಹೋಗುತ್ತದೆ. ಇಡೀ ನದಿ ಮಾಲಿನ್ಯಕ್ಕೊಳಗಾಗುತ್ತದೆ. ದೇವಗಂಗೆಯ ಅಸ್ತಿತ್ವಕ್ಕೇ ಇದು ಮಾರಕ ಎಂದು ಪರಿಪರಿಯಲ್ಲಿ ವಿವರಿಸಲಾಯಿತು. ಆದರೆ ಹಾಕಿನ್ಸ್‌ನ ವಾದವೇ ಬೇರೆ ಇತ್ತು.
‘ನಗರ ತ್ಯಾಜ್ಯವನ್ನು ಗಂಗೆಗೆ ಜೋಡಿಸುವುದರಿಂದ ಖಂಡಿತಾ ನದಿಯ ಜಲಮಾಲಿನ್ಯವಾಗದು. ಒಂದು ಕಿಲೊಮೀಟರ್‌ನೊಳಗೆ ಎಲ್ಲ ತ್ಯಾಜ್ಯಗಳನ್ನು ಬಸಿದು ತಳಸೇರಿಸಿಕೊಂಡು ಮತ್ತೆ ಶುದ್ಧವಾಗಿ ಹರಿಯುವ ಸಾಮರ್ಥ್ಯ ಗಂಗೆಗಿದೆ. ಅಲ್ಲದೇ ಗಂಗೆಯ ಒಡಲಿನ ಅಪಾರ ಜಲರಾಶಿಯೆದುರು ಕಾಶಿ ಪಟ್ಟಣದ ತ್ಯಾಜ್ಯದ ಪ್ರಮಾಣ ನಗಣ್ಯ. ಗಂಗೆ ಯಾತ್ರಿಗಳ ಪಾಪವನ್ನಷ್ಟೇ ಅಲ್ಲ, ದೇಶದ ಪ್ರಮುಖ ಧಾರ್ಮಿಕ ನಗರ ಕಾಶಿಯ ಪಾಪವನ್ನೂ ತೊಳೆದು ಶುದ್ಧವಾಗಿಯೇ ಉಳಿಯಬಲ್ಲಳು’ ಎಂಬ ಪ್ರತಿಪಾದನೆಯನ್ನಾತ ರಾಜನ ಮುಂದಿಟ್ಟ.
ಎಂಥಾ ಮಾಲಿನ್ಯವನ್ನೂ ತನ್ನೊಡಲಲ್ಲಿ ಕರಗಿಸಿಕೊಂಡು ಸ್ವಲ್ಪವೇ ಅಂತರದಲ್ಲಿ ಮತ್ತೆ ಶುದ್ಧ ಹರಿವನ್ನು ಕಾಪಿಟ್ಟುಕೊಳ್ಳಬಲ್ಲ ಗಂಗೆಯ ನೀರಿನ ಇಂಥ ಗುಣವೇ ದೇವನದಿಗೆ ಮುಂದೊಂದು ದಿನ ಹೀಗೆ ಶಾಪವಾಗಿ ಪರಿಣಮಿಸಬಲ್ಲುದೆಂದು ಅಂದು ಊಹಿದ್ದರೂ, ಅದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಆಡಳಿತ ಇರಲಿಲ್ಲ. ಮದನಮೋಹನ ಮಾಳವೀಯ ಮತ್ತವರ ಜತೆಗಾರರು ಬಾಯಿಮುಚ್ಚಿಕೊಳ್ಳುವುದು ಅನಿವಾರ್ಯವಾಯಿತು. ಮಾತೆ ಗಂಗೆ ಮೊದಲ ಬಾರಿಗೆ ಆಕೆಯ ಮಕ್ಕಳಿಂದಲೇ ಅತ್ಯಾಚಾರಕ್ಕೆ ಗುರಿಯಾದಳು! ಅಷ್ಟೇ ಆಗಿದ್ದರೆ, ಏನೋ ಆಗುತ್ತಿತ್ತು. ಆದರೆ ಹಾಗಾಗಗೊಡಲಿಲ್ಲ. ಬ್ರಿಟಿಷರಿಂದ ಮೊದಲ ಬಾರಿಗೆ ನಾವು ನಮ್ಮ ನೀರಿನ ಸಂಸ್ಕೃತಿಯನ್ನು ಮರೆತೆವು.
ಅಲ್ಲಿಂದಲೇ ಆರಂಭವಾಯಿತು ಜಲಮೂಲಗಳಿಗೆ ನಮ್ಮ ತ್ಯಾಜ್ಯವನ್ನು ಸೇರಿಸುವ ಅಪಸವ್ಯ. ಅದನ್ನೇ ಆಧರಿಸಿ, ತ್ಯಾಜ್ಯವನ್ನು ನದಿಗೆ ಬಿಡಲು ಅನುಕೂಲ ವಾಗುವಂತೆ ಗಂಗೆಯ ಗುಂಟವೇ ನಗರ ಬೆಳೆಯುತ್ತ ಹೋಯಿತು. ಹಾಕಿನ್ಸ್ ಹಾಕಿಕೊಟ್ಟ ಮಾರ್ಗದಲ್ಲೇ ಕಾಶಿ ಕಲ್ಮಶದ ದರಬಾರು ಆರಂಭವಾಯಿತು. ಬ್ರಿಟಿಷ್ ಆಡಳಿತದಲ್ಲಿ ಆದ ತಪ್ಪನ್ನು ನಾವು ಮುಂದೆ ಸರಿ ಪಡಿಸಿಕೊಳ್ಳುವ ಗೋಜಿಗೇ ಹೋಗಲಿಲ್ಲ. ಇವತ್ತಿನ ಅನಾಹುತಗಳಿಗೆಲ್ಲ ಅದೇ ನಾಂದಿಯಾಗಿತ್ತು.
ಹಾಗಿದ್ದರೆ, ಅದಕ್ಕೂ ಹಿಂದೆ ಹೇಗಿತ್ತು ಕಾಶಿ? ಹನ್ನೊಂದನೇ ಶತಮಾನದ ಹಿಂದೆ ಹೇಗಿತ್ತೋ ಹಾಗೆ ಕಾಶಿಯನ್ನು ಪುನರುಜ್ಜೀವನಗೊಳಿಸಲು ಪ್ರಧಾನಿ ಮೋದಿ ಇದೀಗ ಕನಸು ಕಂಡಿದ್ದಾರೆ. ಅದರ ಮೊದಲ ಹಂತವೇ ಮೊನ್ನೆ ಉದ್ಘಾಟನೆಗೊಂಡದ್ದು. ಅಂದರೆ ಕಾಶಿಯ ಇಂದಿನ (ಕಾರಿಡಾರ್ ಯೋಜನೆಗೂ ಮೊದಲಿನ) ಸ್ಥಿತಿ ನಿರ್ಮಾಣಗೊಂಡದ್ದು ಹನ್ನೊಂದನೆ ಶತಮಾನದ ನಂತರವೇ ಎಂದಾಯಿತು? ಅದಕ್ಕೆ ಕಾರಣವೇನೆಂದು ಹುಡುಕಿದರೆ ಔರಂಗಜೇಬನ ಭಾರತೀಯತೆ ಹಾಗೂ ಸಂಸ್ಕೃತ ದ್ವೇಶದ ಮುಖ ತೆರೆದುಕೊಳ್ಳುತ್ತದೆ. ಕಾಶಿ, ದೇಶದ ಬಹುದೊಡ್ಡ ವಿದ್ಯಾಕೇಂದ್ರವಾಗಿತ್ತೆಂಬುದು ಗೊತ್ತೇ ಇದೆ. ಧರ್ಮ, ಸಂಸ್ಕೃತಿ, ಅಧ್ಯಾತ್ಮ, ತತ್ತ್ವಶಾಸಗಳಿತ್ಯಾದಿಗಳನ್ನು ಬೋಧಿಸಲಾಗುತ್ತಿತ್ತು ಅಲ್ಲಿ. ಅದೇ ಬನಾರಸ್ ವಿಶ್ವವಿದ್ಯಾಲಯದಲ್ಲಿ ಔರಂಗಜೇಬನ ಸೋದರ ದಾರಾ ಶಿಕೋಹ್ ಸಂಸ್ಕೃತ ಕಲಿತದ್ದು. ಔರಂಗಜೇಬನ ದುರಾಡಳಿತವನ್ನು ಖಂಡಿಸಿ, ಆತನ ವಿರುದ್ಧ ಬಂಡೆದ್ದು, ಇಸ್ಲಾಂ ಅನ್ನೂ ಧಿಕ್ಕರಿಸಿ ಆತ ಬನಾರಸ್‌ಗೆ ಬಂದಿದ್ದ.
ಪರಿಣಾಮ1669ರಲ್ಲಿ ಕಾಶಿಯ ಅಧಃಪತನದ ಆರಂಭ. ಇದಕ್ಕೆ ಮುನ್ನುಡಿ ಬರೆದವನು ಸಹಜವಾಗಿಯೇ ಔರಂಗಜೇಬ. ಆತನೇ ನಿರ್ಮಿಸಿದ ಮಸೀದಿ (ಜ್ಞಾನ ವಾಪಿ-ಜ್ಞಾನದ ಬಾವಿ)ಯ ಜಾಗದಲ್ಲೇ ವಿಶಾಲ ವಿಶ್ವನಾಥನ ಧಾಮ (ಚಂದ್ರಸಾಲೆ- ಕಾರಿಡಾರ್) ವಿದ್ದುದು. ಆತನ ದೌರ್ಜನ್ಯಕ್ಕೆ ಕಂಗಾಲಾದ ಹಿಂದೂ ಗಳು, ಇನ್ನು ವಿಶ್ವನಾಥನ ಆರಾಧನೆಗೆ ಅವಕಾಶವಿಲ್ಲವೆಂದರಿತು, ಬೀದಿಬೀದಿಗಳಲ್ಲಿ ಮಂದಿರಗಳನ್ನು ನಿರ್ಮಿಸಿಕೊಂಡು ವೈಯಕ್ತಿಕ ಉಪಾಸನೆಗಿಳಿದರು. ಏತನ್ಮಧ್ಯೆ 1750ರ ಸುಮಾರಿಗೆ ಸರ್ದಾರ್ ದತ್ತಾ ಜಿ ಸಿಂಽಯಾ ಮತ್ತು ಮಲ್ಹರ ರಾವ್ ಹೋಳ್ಕರ್ ನೃತೃತ್ವದಲ್ಲಿ ಒಂದಷ್ಟು ಸ್ಥಳೀಯರು ಒಗ್ಗೂಡಿ ದೇವಾಲಯ ವಿಮೋ ಚನೆಗೆ ಯತ್ನಿಸಿದರು. ಇದು ತುಸುಮಟ್ಟಿಗೆ ಯಶಕಂಡದ್ದು ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರಿಂದ. ದೇಗುಲವನ್ನು ಈಗಿನಂತೆ ಪುನರುಜ್ಜೀವನಗೊಳಿಸಿದ್ದು ಆಕೆಯೇ. ಅದಕ್ಕೆ ಹೊನ್ನ ಕಳಶವಿಟ್ಟವರು 1836ರಲ್ಲಿ ಮಹಾರಾಜ ರಂಜಿತ್ ಸಿಂಗ್.
ಆದರೆ, ಔರಂಗಜೇಬನ ಕಾಲದಲ್ಲಿ ಆದ ದೌರ್ಜನ್ಯದಿಂದ ಯೋಜನೆ ಕಳೆದುಕೊಂಡ ಕಾಶಿಯಲ್ಲಿ ಕಂಡಕಂಡಲ್ಲಿ ಸ್ಥಳೀಯರು ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಅದನ್ನು ಪುನಃ ಯೋಜಾನಾಬದ್ಧವಾಗಿಸಲು ಆಗಿರಲೇ ಇಲ್ಲ. ಸಾಲದ್ದಕ್ಕೆ ಹಾಕಿನ್ಸ್ ನಗರ ಯೋಜನೆಯಡಿ ದೇಗುಲದ ಮಗ್ಗುಲಿಗೇ ಹರಿಯುತ್ತಿದ್ದ ಗಂಗೆಯ ತಪ್ಪಲಲ್ಲೇ ಇನ್ನಷ್ಟು ‘ಕೊಳೆಗೇರಿ’ಗಳು ತಲೆಎತ್ತಿದವು. ಕಾಶಿ ವಿಶ್ವನಾಥನ ಮೇಲಿನ ದೌರ್ಜನ್ಯಕ್ಕೆ ಇನ್ನೂ ಹಿಂದಿನ ಕರಾಳ ಇತಿಹಾಸವಿದೆ. ಮೊಟ್ಟ ಮೊದಲ ಬಾರಿಗೆ 1034ರಲ್ಲೇ ದೇಗುಲದ ಮೇಲೆ ದಾಳಿ ನಡೆದಿತ್ತಂತೆ.
11ನೇ ಶತಮಾನದಲ್ಲಿ ರಾಜಾ ಹರಿಶ್ಚಂದ್ರ ಅದನ್ನು ನವೀಕರಿಸಿ, ವಿಶ್ವನಾಥನ ಪುನರ್ ಪ್ರತಿಷ್ಠಾಪನೆ ಮಾಡಿದ್ದ ಎನ್ನುತ್ತದೆ ಇತಿಹಾಸ. ಬಳಿಕ 1194ರಲ್ಲಿ ಮೊಹಮ್ಮದ್ ಘೋರಿಯೂ ಲೂಟಿ ಮಾಡಿ, ನಾಶ ಮಾಡಿದ. ಸ್ಥಳೀಯರೇ ದೇಗುಲವನ್ನು ಮತ್ತೆ ಕಟ್ಟಿಕೊಂಡರು. 1447ರಲ್ಲಿ ಕಾನ್ಪುರದ ಸುಲ್ತಾನ ಮತ್ತೆ ಕೆಡವಿದ್ದದೇಗುಲವನ್ನು 1585ರಲ್ಲಿ ದೆಹಲಿ ಸುಲ್ತಾನ ಅಕ್ಬರನೇ ಅದನ್ನು ಕಟ್ಟಿಸಿದ್ದ. ದುರಂತವೆಂದರೆ ಅಕ್ಬರನ ಮೊಮ್ಮಗ ಷಹಜಹಾನ್ ಪುನಃ 1632ರಲ್ಲಿ ದೇಗುಲ ವನ್ನು ನಾಶ ಮಾಡಲ ಮುಂದಾಗಿದ್ದ. ಆತನ ಮಗ, ಅಂದರೆ ಅಕ್ಬರನ ಮರಿಮೊಮ್ಮಗ ಔರಂಗಜೇಬ ಅದರಲ್ಲಿ ಸಂಪೂರ್ಣ ಯಶಸ್ವಿಯಾದ.
ಕಾಶಿ ಅವಿನಾಶಿ ಎಂಬುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ. ದಾಳಿ-ನಿರ್ಮಾಣಗಳ ಹಾವು ಏಣಿಯಾಟವನ್ನು ಇತಿಹಾಸದುದ್ದಕ್ಕೂ ಕಂಡಿರುವ ಬನಾರಸ್, ಕೇವಲ ಸಂಸ್ಕೃತಿ, ಧರ್ಮದ ಪ್ರತೀಕವಾಗಿದ್ದರೆ ಎಂದೋ ನಾಶವಾಗಿ ಬಿಡುತ್ತಿತ್ತೇನೋ. ಆದರೆ ಅದು ನಾಗರಿಕತೆಯೊಂದರ ಪ್ರತೀಕ. ನಾಗರಿಕತೆಗೆ ಸಾವಿಲ್ಲ;ಅವಸ್ಥಾಂತರವಾಗಬಹುದು. ಏಕೆಂದರೆ ಎಲ್ಲ ನಾಗರಿಕತೆಗೂ ತೊಟ್ಟಿಲಾಗಿ ನಿಲ್ಲುವುದು ಒಂದಲ್ಲ ಒಂದು ನದಿಯೇ. ಇಲ್ಲಿಯೂ ಪಕ್ಕದಲ್ಲಿ ನದಿ ಗಂಗೆ ಪ್ರವಹಿಸುತ್ತಳೇ ಇದ್ದಾಳೆ. ಗಂಗೆ ಇರುವವರೆಗೆ ಕಾಶಿಗೆ ಅಳಿವಿಲ್ಲ. ಗಂಗೆಗಂತೂ ಸಾವೆಂಬುದೇ ಇಲ್ಲ. ಏಕೆಂದರೆ ಅದು ಜೀವ ಪ್ರವಾಹ. ಜೀವಿಗಳಿರುವವರೆಗೆ ನದಿಯ ಜೀವಂತಿಕೆ ಇದ್ದೇ ಇರುತ್ತದೆ. ಜೀವಿಗಳು ಜನಿಸುವುದೇ ಪ್ರೀತಿಯ ಸೆಲೆಯಲ್ಲಿ. ಹೀಗಾಗಿ ಗಂಗೆಯೂ ಜೀವ ಪ್ರೀತಿಯ ಸಲೆ.
ಜಿಡ್ಡು ಕೃಷ್ಣಮೂರ್ತಿ ಹೇಳಿಲ್ಲವೇ; ಪ್ರೀತಿ ನದಿಯಂತೆ. ಅದನ್ನು ಬತ್ತಿಸಲು ಸಾಧ್ಯವೇ ಇಲ್ಲ.