ಎಲ್ಲವನ್ನೂ ಕಳೆದುಕೊಂಡು ಜೀವನ ಗೆದ್ದವ !
ವಿದೇಶವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್
@.
21ನೇ ವಯಸ್ಸಿನಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ. ಆಡಿದ ಮೊದಲ ಡೇವಿಸ್ ಕಪ್ ಪಂದ್ಯಾಟದಲ್ಲಿ ಆತ ಭಾರತವನ್ನು ಎದುರಿಸಿದ್ದ. ಜತೆಗೆ, ಆರ್ತರ್ ಆಶೆ ಮತ್ತು ವಾಲಿವೈ ವಾಶಿಂಗ್ಟನ್ ನಂತರ ಅಮೆರಿಕದ ಪರವಾಗಿ ಡೆವಿಸ್ ಕಪ್‌ನಲ್ಲಿ ಆಡಿದ ಮೂರನೆಯ ಆಫ್ರಿಕನ್ ಅಮೆರಿಕನ್ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾದ.
ಒಬ್ಬ ವ್ಯಕ್ತಿಯನ್ನು ಯಾವುದಾದರೂ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಹೋಲಿಸಿದರೆ ಖುಷಿಯಾಗುತ್ತದೆ. ಪ್ರಸಿದ್ಧ ಚಲನ ಚಿತ್ರ ತಾರೆ, ಕ್ರೀಡಾಪಟು, ರಾಜಕಾರಣಿ ಇತ್ಯಾದಿ. ಅದೇ ಯಾವುದಾದರೂ ಕಳ್ಳ, ದರೋಡೆಕೋರರಂತಹ ಕುಖ್ಯಾತ ವ್ಯಕ್ತಿಗಳೊಂದಿಗೆ ಹೋಲಿಸಿದರೆ ಬೇಸರವಾಗುತ್ತದೆ, ಕೆಲವೊಮ್ಮೆ ಸಿಟ್ಟು ಬರುತ್ತದೆ.
ಹೊಗಳಿದಾಗ ಸಂತೋಷವಾಗುವುದು, ತೆಗಳಿದಾಗ ಬೇಸರವಾಗುವುದು, ಮನುಷ್ಯನ ಸಹಜ ಗುಣ ಬಿಡಿ. ಇದ ಕ್ಕಿಂತಲೂ ಭಿನ್ನವಾದದ್ದು ಇನ್ನೊಂದಿದೆ, ಮೊದಲು ಒಳ್ಳೆಯವರಿಗೆ ಹೋಲಿಸಿ, ನಂತರ ಕೆಟ್ಟವರೊಂದಿಗೆ ಹೋಲಿ ಸುವುದಿದೆಯಲ್ಲ, ಅದರಂಥ ಅವಮಾನ ಇನ್ನೊಂದಿಲ್ಲ. ಅದಕ್ಕಿಂತಲೂ, ಜೀವನವಿಡೀ ಕಷ್ಟಪಟ್ಟು ಏನನ್ನಾದರೂ ಸಾಧಿಸಿ, ಸಮಾಜದಲ್ಲಿ ಗೌರವಯುತ ಸ್ಥಾನಕ್ಕೆ ಏರಿದಂಥವರ ಮೇಲೆ ಸುಳ್ಳು ಆರೋಪ ಹೊರಿಸಿದರೆ, ಆ ವ್ಯಕ್ತಿಯ ಪರಿಸ್ಥಿತಿ ಹುಯಿಲೋ ಹುಯಿಲು. ಅಂತಹ ಪರಿಸ್ಥಿತಿಯಲ್ಲೂ ಜಯಿಸಲು ಸಾಧ್ಯ ಎನ್ನುವುದಕ್ಕೆ ಆತ ಉದಾಹರಣೆ.
ಟೆನಿಸ್ ಇಷ್ಟಪಡುವವರು ಆತನ ಹೆಸರು ಕೇಳದೇ ಇರುವ ಸಾಧ್ಯತೆ ಕಮ್ಮಿ. ಆತ ವಿಶ್ವದ ನಾಲ್ಕು ಪ್ರತಿಷ್ಠಿತ ಪ್ರಶಸ್ತಿಗಳಾದ ವಿಂಬಲ್ಡನ್, ಯುಎ ಓಪನ್, ಫ್ರೆಂಚ್ ಓಪನ್ ಅಥವಾ ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾಟ ಗಳ ಪೈಕಿ ಯಾವುದೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನೂ, ಒಮ್ಮೆಯೂ ಗೆಲ್ಲಲಿಲ್ಲ. ಗೆಲ್ಲುವುದು ಬಿಡಿ, ತನ್ನ ಹದಿಮೂರು ವರ್ಷದ ಟೆನಿಸ್ ಜೀವನದಲ್ಲಿ ಒಮ್ಮೆ ಮಾತ್ರ ಗ್ರ್ಯಾಂಡ್ ಸ್ಲ್ಯಾಮ್ ಉಪಾಂತ್ಯದ ಹಂತದವರೆಗೆ ತಲುಪಿದ್ದು. ಅದೂ ಡಬಲ್ಸ್‌ನಲ್ಲಿ. ಒಮ್ಮೆ ಡೇವಿಸ್ ಕಪ್ ಮತ್ತು ಎರಡು ಬಾರಿ ಹಾಪ್‌ಮಾನ್ ಕಪ್ ಸೇರಿದಂತೆ ಆತ ಒಟ್ಟೂ ಹತ್ತು ಪಂದ್ಯಾಟಗಳನ್ನು ಮಾತ್ರ ಜಯಿಸಿದ್ದು. ಆದರೆ ಆತನ ಪರಿಶ್ರಮ, ಸಾಧನೆ, ಅನುಭವಿಸಿದ ಅವಮಾನ ಮತ್ತು ಅದನ್ನು ಕಳೆದು ಪುನಃ ಪುಟಿದೆದ್ದು ಬಂದದ್ದನ್ನು ಪದಗಳಲ್ಲಿ ಕಟ್ಟಿಕೊಡುವುದು ತೀರಾ ಕಷ್ಟದ ಕೆಲಸ.
ಆತ ಜನಿಸಿದ್ದು ಅಮೆರಿಕದ ನ್ಯೂಯಾಕ್ ನಲ್ಲಿ. ತಂದೆ ಥಾಮಸ್ ರೇನಾಲ್ಡ್ಸ್ ಬ್ಲೇಕ್, ಆಫ್ರಿಕನ್ ಅಮೇರಿಕನ್. ನಾಲ್ಕು ಜನ ಅಣ್ಣಂದಿರ ಪೈಕಿ ಥಾಮಸ್ ಟೆನಿಸ್ ಆಡುತ್ತಿದ್ದ. ಆತ ಐದು ವರ್ಷದವನಿರುವಾಗಲೇ ಅಣ್ಣನ ಆಟದಿಂದ ಪ್ರಭಾವಿತನಾಗಿದ್ದ. ತನ್ನಷ್ಟೇ ಉದ್ದದ ಟೆನಿಸ್ ರಾಕೆಟ್ ಹಿಡಿದು ಅಣ್ಣನೊಂದಿಗೆ ಆಡಲುಹೋಗುತ್ತಿದ್ದ. ಆದರೆ ಹದಿಮೂರು ವರ್ಷದ ಸಣ್ಣ ಪ್ರಾಯದ ಮೊದಲ ಬಾರಿ ಬದುಕಿನ ಮೊದಲ ವಕ್ರಕ್ಕೆ ಗುರಿಯಾಗಿದ್ದ. ಆತನಿಗೆ ಸ್ಕೋಲಿಯೋಸಿಸ್ ಇದೆ ಎಂದು ತಿಳಿಯಿತು. ಅದು ಬೆನ್ನುಮೂಳೆ ಅಡ್ಡಡ್ಡ ಬಾಗಿ, ಓರೆಕೋರೆಯಾಗಿರುವ ಸ್ಥಿತಿ. ಬೆನ್ನಿಗೆ ಪ್ರತಿನಿತ್ಯ ಹದಿನೆಂಟು ಗಂಟೆಗಳವರೆಗೆ ಕಟ್ಟುಪಟ್ಟಿ ಕಟ್ಟಿಕೊಂಡಿರಬೇಕು ಎಂದು ವೈದ್ಯರು ಸಲಹೆ ನೀಡಿದ್ದರು. ಒಪ್ಪದೇ ಬೇರೆ ಉಪಾಯವಿರಲಿಲ್ಲ. ಟೆನಿಸ್ ಆಡುವ ಸಮಯದಲ್ಲಿ ಅದನ್ನು ತೆಗೆಯಬಹುದಾಗಿತ್ತು. ಆದರೆ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಮಾರುವ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ತಂದೆಯ ವರ್ಗಾವಣೆ ಆತನನ್ನು ಕೆಲಕಾಲ ಆಟದಿಂದ ದೂರ ಇರುವಂತೆ ಮಾಡಿತು.
ಆತ ತೆನಿಸ್ ಆಟಗಾರ ಆರ್ತರ್ ಆಶೆಯನ್ನು ಇಷ್ಟಪಡುತ್ತಿದ್ದ. ಆರ್ತರ್‌ನ ಆಟದೊಂದಿಗೆ ಮಾತೂ ಆತನಿಗೆ ಇಷ್ಟ ವಾಗುತ್ತಿತ್ತು. ಆರ್ತರ್‌ನ ಮಾತುಗಳಿಂದ ಪ್ರೇರೇಪಿತನಾಗಿ ಮತ್ತೆ ಟೆನಿಸ್ ಆಡಲು ನಿರ್ಧರಿಸಿದ. ಹತ್ತನೆಯ ತರಗತಿ ಮುಗಿಯುತ್ತಿದ್ದಂತೆ, ಟೆನಿಸ್ ಆಟದಲ್ಲಿಯೇ ಬದುಕು ಕಟ್ಟಿಲೊಳ್ಳಲು ನಿರ್ಧರಿಸಿ, ಓದಿಗೆ ಬೈ ಬೈ ಹೇಳಿದ. ಟೆನಿಸ್ ಗುರು ಬ್ರಿಯಾನ್ ಬಾರ್ಕರ್‌ನ ಇಷ್ಟದ ಶಿಷ್ಯನಾದ.
ಆತ ತನ್ನ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ. ಆಡಿದ ಮೊದಲ ಡೇವಿಸ್ ಕಪ್ ಪಂದ್ಯಾಟದಲ್ಲಿ ಆತ ಭಾರತವನ್ನು ಎದುರಿಸಿದ್ದ. ಜತೆಗೆ, ಆರ್ತರ್ ಆಶೆ ಮತ್ತು ವಾಲಿವೈ ವಾಶಿಂಗ್ಟನ್ ನಂತರ ಅಮೆರಿಕದ ಪರವಾಗಿ ಡೆವಿಸ್ ಕಪ್‌ನಲ್ಲಿ ಆಡಿದ ಮೂರನೆಯ ಆಫ್ರಿಕನ್ ಅಮೆರಿಕನ್ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾದ.
ಅದೇ ವರ್ಷ ಆತ ಸಿನ್ಸಿನಾಟಿ ಮಾಸ್ಟರ್ಸ್ ಪಂದ್ಯಾಟದಲ್ಲಿ ವೈಲ್ಡ ಕಾರ್ಡ್ ಪ್ರವೇಶ ಪಡೆದು, ನೂರಿಪ್ಪತ್ತನೇ ಶ್ರೇಯಾಂಕಿತನಾಗಿ ವಿಶ್ವದ ಅಗ್ರರ ಪಟ್ಟಿಯಲ್ಲಿ ಸ್ಥಾನ ಪಡೆದ. ಎಲ್ಲಕ್ಕಿಂತ ಮಿಗಿಲಾಗಿ, ಆ ವರ್ಷ ಯುಎಸ್ ಓಪನ್ ಪಂದ್ಯಾಟದಲ್ಲಿ ಜಯಿಸಿದ ಅಗ್ರ ಶ್ರೇಯಾಂಕಿತ ಆಸ್ಟ್ರೇಲಿಯಾದ ಲೆವ್ಟನ್ ಹೆವಿಟ್ ವಿರುದ್ಧದ ಪಂದ್ಯ ದಲ್ಲಿ ಕೊನೆಯವರೆಗೂ ಸೆಣಸಿದ. ತನ್ನ ಆಟದಿಂದ ಮೊದಲ ಬಾರಿ ವಿಶ್ವದ ಗಮನ ಸೆಳೆದ. ಅದಾಗಿ ಒಂದು ವರ್ಷದ ನಂತರ ಮೊದಲ ಎಟಿಪಿ ಟೂರ್ ಮತ್ತು ಎಟಿಪಿ ಮಾಸ್ಟರ್ಸ್ ಪ್ರಶಸ್ತಿಯನ್ನೂ ಪಡೆದ. ಆ ವರ್ಷ ಆತ ಆಂಡ್ರಿ ಅಗಾಸಿಯಂತಹ ದಿಗ್ಗಜರನ್ನು ಸೋಲಿಸಿದ್ದ.
2004ರ ಮೇ ತಿಂಗಳಿನಲ್ಲಿ ಆತ ಆಘಾತದ ಮೇಲೆ ಆಘಾತ ಕಂಡಿದ್ದ. ಆ ವರ್ಷ ಮಾಸ್ಟರ್ಸ್ ಪಂದ್ಯಾಟಕ್ಕೆ ರೋಮ್‌ನಲ್ಲಿ ಅಭ್ಯಾಸ ನಡೆಸಿದ್ದ. ಮಣ್ಣಿನ ಕೋರ್ಟ್ ನಲ್ಲಿ ಅಭ್ಯಾಸ ನಡೆಸುತಿದ್ದಾಗ ಆತನ ಕಾಲು ಜಾರಿ ಬಿದ್ದು ಟೆನಿಸ್ ಕಂಬಕ್ಕೆ ಡಿಕ್ಕಿ ಹೊಡೆದ. ಡಿಕ್ಕಿಯ ಹೊಡೆತಕ್ಕೆ ಆರು ಅಡಿ ಒಂದು ಇಂಚು ಎತ್ತರದ ಕಟ್ಟುಮಸ್ತು ಆಳಿನ ಕತ್ತಿನ ಮೂಳೆ ಮುರಿದಿತ್ತು. ಅದೃಷ್ಟವಶಾತ್ ನರಗಳಿಗೆ ತೊಂದರೆ ಆಗದ ಕಾರಣ, ಕೆಲವೇ ತಿಂಗಳಿನಲ್ಲಿ ಚೇತರಿಸಿಕೊಂಡ. ಆದರೆ ಅದೇ ಸಂದರ್ಭದಲ್ಲಿಹೊಟ್ಟೆಯ ಕ್ಯಾನ್ಸರ್‌ನಿಂದಾಗಿ ಆತನ ತಂದೆ ತೀರಿಹೋದರು.
ಪ್ರೀತಿಯ ತಂದೆಯನ್ನು ಕಳೆದುಕೊಂಡು ಅನಾಥ ಭಾವದಿಂದ ಹೊರಬರುವುದಕ್ಕೆ ಮುಂಚೆಯೇ ಆತನಿಗೆ ಇನ್ನೊಂದು ಆಘಾತ ಕಾದಿತ್ತು. ಸರ್ಪಸುತ್ತಿನಿಂದಾಗಿ ಆತನ ಅರ್ಧ ಮುಖ ತಾತ್ಕಾಲಿಕವಾಗಿ ಸ್ಪರ್ಷತೆಯ ಅನುಭವವನ್ನು ಕಳೆದುಕೊಂಡಿತ್ತು. ಆತನ ಒಂದು ಕಣ್ಣು ಮಂಜಾ ಯಿತು. ಆ ಸಂದರ್ಭದಲ್ಲಿ ಆತ ತನ್ನ ಟೆನಿಸ್ ಜೀವನ ಇಲ್ಲಿಗೇ ಮುಗಿಯಿತು ಎಂಬ ಆತಂಕಕ್ಕೆ ಒಳಗಾದ. ವಿಶ್ವ ಶ್ರೇಯಾಂಕದಲ್ಲಿ ಆತ ಇನ್ನೂರ ಹತ್ತನೆಯ ಸ್ಥಾನಕ್ಕೆ ಕುಸಿದಿದ್ದ. ಎಷ್ಟೇ ಕಷ್ಟವಾದರೂಸರಿ, ಮತ್ತೊಮ್ಮೆ ಆಡಲೇಬೇಕು ಎಂಬ ಸಂಕಲ್ಪದೊಂದಿಗೆ ಮತ್ತೆ ಮೈದಾನಕ್ಕಿಳಿದ. ಕಠಿಣ ಅಭ್ಯಾಸದ ನಂತರ ಸಣ್ಣ ಸಣ್ಣ ಪಂದ್ಯಾಟಗಳಲ್ಲಿ ಭಾಗವಹಿಸಲುಆರಂಭಿಸಿದ. ಆ ವರ್ಷದ ಅಂತ್ಯದಲ್ಲಿ ವಿಶ್ವ ಶ್ರೇಯಾಂಕಿತರ ಪಟ್ಟಿಯಲ್ಲಿ ಮೊದಲನೆಯ ಸ್ಥಾನದಲ್ಲಿದ್ದ ರೋಜರ್ ಫೆಡೆರರ್ ಮತ್ತು ಎರಡನೆಯ ಸ್ಥಾನದಲ್ಲಿದ್ದ ರಫೆಲ್ ನಡಾಲ್‌ರನ್ನು ಸೋಲಿಸಿ ಎಲ್ಲರೂ ಆಶ್ಚರ್ಯಪಡುವಂತೆ ಮಾಡಿದ.
ವರ್ಷಾಂತ್ಯಕ್ಕೆ ವಿಶ್ವ ಶ್ರೇಯಾಂಕಿತರ ಪಟ್ಟಿಯಲ್ಲಿ ಮೇಲೇರಿ ಇಪ್ಪತ್ತೆರಡನೆಯ ಸ್ಥಾನದಲ್ಲಿದ್ದ. ಎಲ್ಲಕ್ಕಿಂತ ಹೆಚ್ಚಾಗಿ, ತನ್ನ ಆತ್ಮವಿಶ್ವಾಸವನ್ನು ಶಿಖರದೆತ್ತರಕ್ಕೆ ವೃದ್ಧಿಸಿಕೊಂಡಿದ್ದ. ಅದರ ಮುಂದಿನ ವರ್ಷ ಆತನ ಟೆನಿಸ್ ಜೀವನದ ಸುವರ್ಣ ಯುಗ. ಕೆಲವು ದಿಗ್ಗಜರನ್ನು ಮಣಿಸಿ ಆತ ಶ್ರೇಯಾಂಕಿತರ ಪಟ್ಟಿಯಲ್ಲಿನಾಲ್ಕನೆಯ ಸ್ಥಾನಕ್ಕೇರಿದ್ದ. ಆ ವರ್ಷ ಆತ ಅಮೆರಿಕದ ಅಗ್ರ ಶ್ರೇಯಾಂಕಿತ ಆಟಗಾರನಾಗಿದ್ದ. ನಂತರದ ಮೂರು ವರ್ಷ ಸಣ್ಣ ಪುಟ್ಟ ಏರಿಳಿತ ಕಂಡರೂ ವಿಶ್ವದ ಹತ್ತು ಅಗ್ರಮಾನ್ಯರಲ್ಲಿ ಒಬ್ಬನಾಗಿದ್ದ.
ಆಗ ವಿಧಿ ಮತ್ತೊಮ್ಮೆ ಆತನೆಡೆಗೆ ವಕ್ರದೃಷ್ಟಿ ಬೀರಿತ್ತು. ಮೊಣಕಾಲಿನ ಗಾಯದಿಂದಾಗಿ ಆತ ಮತ್ತೆ ಕೆಲವು ದಿನ ಆಟದ ಅಂಗಳದಿಂದ ಹೊರಗುಳಿಯು ವಂತಾಯಿತು. ನಂತರ2013ರ ವರೆಗೂ ಆಗಾಗ ಗಾಯಾಳುವಾಗಿ ಚೇತರಿಸಿಕೊಂಡು ಮತ್ತೆ ಮೈದಾನಕ್ಕೆ ಇಳಿಯುತ್ತಿದ್ದರೂ, ಮೊದಲಿನ ಸ್ಥಾನಕ್ಕೆ ಏರಲುಆಗಲೇ ಇಲ್ಲ. ಕೊನೆಗೆ 2013 ರಲ್ಲಿ ಆತ ಟೆನಿಸ್ ಅಂಗಳಕ್ಕೆ ವಿದಾಯ ಹೇಳಿದ. ಟೆನಿಸ್ ಇತಿಹಾಸದಲ್ಲಿ ಅತ್ಯಂತ ವೇಗದ (ಪ್ರತಿ ಗಂಟೆಗೆ ಇನ್ನೂರು ಕಿಲೋ ಮೀಟರ್) ಮುಂಗೈ ಆಟಗಾರ ಎಂಬ ಕೀರ್ತಿಗೆ ಪಾತ್ರನಾದವ, ಆಟದಿಂದಲೇ ಸುಮಾರು ಎಂಟು ಮಿಲಿಯನ್ ಡಾಲರ್‌ನಷ್ಟು ಬಹುಮಾನ ಪಡೆದವ ಟೆನಿಸ್ ಆಟದಿಂದ ಸನ್ಯಾಸ ಸ್ವೀಕರಿಸಿದ್ದ. ಆದರೆ ಅಲ್ಲಿಗೆ ಕತೆ ಮುಗಿಯಲಿಲ್ಲ.
ಆತ ತನ್ನ ಪತ್ನಿ ಮತ್ತು ಇಬ್ಬರು ಪುತ್ರಿಯ ರೊಂದಿಗೆ ಸುಖದ ಜೀವನ ನಡೆಸುತ್ತಿದ್ದ. 2015ರ ಸೆಪ್ಟೆಂಬರ್ ತಿಂಗಳಿನಲ್ಲಿ ಒಂದು ದಿನ ಆತ ನ್ಯೂಯಾರ್ಕ್ ನಗರದ ಗ್ರ್ಯಾಂಡ್ ಹಯಾತ್ ಹೊಟೇಲಿನ ಹೊರಗೆ ನಿಂತಿದ್ದ. ಇದ್ದಕ್ಕಿದ್ದಂತೆ ಅವನ ಮೇಲೆ ಎರಗಿದ ಸಮವಸ ಧರಿಸದ ಪೋಲೀಸ್ ಸಿಬ್ಬಂದಿಯೊಬ್ಬ ಆತನನ್ನು ನೆಲಕ್ಕೆಕೆಡವಿ, ಕೈಗೆ ಕೊಳ ತೊಡಿಸಿದ. ಸುಮಾರು 15 ನಿಮಿಷದ ವರೆಗೂ ತನ್ನೊಂದಿಗೆ ಏನಾಗುತ್ತಿದೆ ಎಂಬುದೇ ಆತನಿಗೆ ತಿಳಿ ಯಲಿಲ್ಲ. ಕಾರಣ ತಿಳಿದಾಗ ಆತ ಕಂಗಾಲಾಗಿದ್ದ.
ವಿಷಯ ಏನೆಂದರೆ, ಆತ ಉಳಿದುಕೊಂಡಿದ್ದ ಹೊಟೇಲಿನಲ್ಲಿಯೇ ಕ್ರೆಡಿಟ್ ಕಾರ್ಡ್ ವಂಚನೆಯ ಪ್ರಕರಣ ಮಾಡಿದ ವ್ಯಕ್ತಿಯೊಬ್ಬ ಉಳಿದುಕೊಂಡಿದ್ದ. ಈ ಮಾಹಿತಿ ಯನ್ನು ಅನುಸರಿಸಿದ ಪೋಲೀಸರು ವಂಚಕನನ್ನು ಹಿಡಿಯುವುದಕ್ಕೆ ಹೊಟೇಲಿನ ಹೊರಗೆ ಕಾದು ಕುಳಿತಿದ್ದರು. ಆತನ ದುರಾದೃಷ್ಟಕ್ಕೆ, ಆತನಿಗೂ, ವಂಚಕನಿಗೂ ತೀರಾ ಹತ್ತಿರದ ಸಾಮ್ಯತೆ ಇತ್ತು. ಇಬ್ಬರ ನಡುವೆ ಭೇದ ಗುರುತಿಸಲಾಗದ ಪೊಲೀಸ್ ಸಿಬ್ಬಂದಿಯೊಬ್ಬ ಆತನನ್ನೇ ವಂಚಕನೆಂದು ತಪ್ಪಾಗಿ ತಿಳಿದು ಆತನನ್ನು ಬಂಧಿಸಿದ್ದ. ಆತ ನಿರಪರಾಧಿ ಎಂದು ತಿಳಿದು ಆತನನ್ನು ಬಿಡುಗಡೆ ಮಾಡಿದ್ದೂ ಆಯಿತು, ನ್ಯೂಯಾರ್ಕ್ ಸಿಟಿ ಪೋಲೀಸ್ ಡಿಪಾರ್ಟ್ಮೆಂಟ್ ಕಮಿಷನರ್ ತಮ್ಮ ಇಲಾಖೆಯಿಂದ ತಪ್ಪಾಗಿದೆ ಎಂದು ಒಪ್ಪಿದ್ದೂ ಆಯಿತು.
ಆದರೆ ಅಮೆರಿಕದ ತುಂಬ ಆಗಲೇ ಇದು ದೊಡ್ಡ ಸುದ್ದಿಯಾಗಿತ್ತು. ಕೆಲವರು ಅದಕ್ಕೆ ವರ್ಣಭೇದದ ಬಣ್ಣ ಬಳಿದಿದ್ದರು. ಮೊದಲಿಗೆ ಆತನೂ ಹಾಗೆಯೇ ತಿಳಿದಿದ್ದ. ತನ್ನನ್ನುಬಂಽಸಿದಪೋಲೀಸ್ ಅಧಿಕಾರಿಯ ಮೇಲೆ ದಾವೆಯನ್ನೂ ಹೂಡಿದ. ಅದು ಬೇಕಂತಲೇ ದುರುದ್ದೇಶದಿಂದ ಮಾಡಿದ ಕೆಲಸವಲ್ಲ ಎಂದು ಅರಿತಾಗ ಅದನ್ನು ಕೈಬಿಟ್ಟ ನಾದರೂ ಅವನೊಳಗೆ ಒಬ್ಬ ಸಾಮಾಜಿಕ ಕಾರ್ಯಕರ್ತ ಜನ್ಮತಳೆದಿದ್ದ. ಆಟದ ಮೈದಾನ ಬಿಟ್ಟುಬಂದವನ ಒಳಗೆ, ವರ್ಣಭೇದ ನೀತಿಯನ್ನುವಿರೋಽಸುವ ಒಬ್ಬ ಚಳವಳಿಕಾರ ಹುಟ್ಟಿಕೊಂಡಿದ್ದ. ಈ ಎಲ್ಲಾ ಸಂಗತಿಗಳನ್ನೂ ಆತ ಆಂಡ್ರ್ಯೂ ಫ್ರೈಡ್ಮನ್ಜತೆ ಸೇರಿ ಬರೆದ   &          ಮತ್ತು ಕರೋಲ್ ಟೈಲರ್ ಜತೆ ಸೇರಿ ಬರೆದ    &   , ,        ಪುಸ್ತಕದಲ್ಲಿ ಸ್ವತಃ ಹೇಳಿಕೊಂಡಿದ್ದಾನೆ.
ಅಲ್ಲಿಗೂ ಕತೆ ಮುಗಿಯಲಿಲ್ಲ. ಎರಡನೆಯ ಪುಸ್ತಕದಲ್ಲಿ ತನ್ನ ಹೆಸರು ಬರೆದದ್ದರಿಂದ ತನಗೆ ಅವಮಾನವಾಗಿದೆ ಎಂದು ಆತನನ್ನು ಬಂಧಿಸಿದ ಪೋಲೀಸ್ ಸಿಬ್ಬಂದಿ ಆತನ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ. ಆದರೆ ವಿಚಾರಣೆಯ ನಂತರ ನ್ಯಾಯಾಲಯ ಅದನ್ನು ತಳ್ಳಿಹಾಕಿತು. ಆತ ಇಂದಿಗೂ ತನ್ನ ಜೇಮ್ಸ್ ಬ್ಲೇಕ್ಫೌಂಡೇಷನ್ ವತಿಯಿಂದ ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಮತ್ತು ಕ್ಯಾನ್ಸರ್ ರೋಗದ ಕುರಿತು ಸಂಶೋಧನೆಗೆ ಸಹಾಯ ಹಸ್ತ ನೀಡುತ್ತಿದ್ದಾನೆ. ನಾಳೆ ಡಿಸೆಂಬರ್ 28ಕ್ಕೆ ಜೇಮ್ಸ್ ಬ್ಲೇಕ್‌ನ ಜನ್ಮದಿನ. ಆತನಿಗೆ ಶುಭ ಹಾರೈಕೆಗಳು.