ಬದುಕಿನ ಪುಟಗಳ ನಡುವೆ ನೆನಪುಗಳ ಮೆರವಣಿಗೆ !
ಯಶೋ ಬೆಳಗು
ಯಶೋಮತಿ ಬೆಳಗೆರೆ
@.
ನೆನಪಿನ ಶಕ್ತಿ ಎನ್ನುವುದು ಎಲ್ಲರಲ್ಲಿಯೂ ಒಂದೇ ರೀತಿಯಾಗಿರುವುದಿಲ್ಲ. ಕೆಲವರಿಗೆ ಅದು ಎಲಿಫೆಂಟಿಕ್ ಮೆಮೊರಿಯಾದರೆ ಮತ್ತೆ ಕೆಲವರಿಗೆ ವೀಕ್ ಮೆಮೊರಿ. ಮೊಬೈಲ್ ಫೋನನ್ನು ತಮ್ಮ ಕೈಯ ಇಟ್ಟುಕೊಂಡು ಅದರ ಎಲ್ಲರಿಗೂ ಫೋನ್ ಮಾಡಿ ಕೇಳುತ್ತಿರುತ್ತಾರೆ ನನ್ನ ಫೋನೆಲ್ಲಿದೆ ಯಾರಾದ್ರೂ ನೋಡಿದ್ರಾ? ಅಂತ.
ಇನ್ನು ಕೇವಲ ನಾಲ್ಕು ದಿನಗಳಷ್ಟೆ. ನಂತರ 2021 ಅನ್ನುವುದು ಕಾಲಗರ್ಭದಲ್ಲಿ ನೆನಪಾಗಿ ಮುದುರಿ ಮಲಗಿ ಬಿಡುತ್ತದೆ. ಮತ್ತೊಂದು ಭರವಸೆಯ ಹೊಸತನಹೊತ್ತು ಬರುತ್ತದೆ ಎಲ್ಲರೂ ಕಾತರದಿಂದ ಎದುರು ನೋಡುತ್ತಿರುವ 2022!
ಹಿಂತಿರುಗಿ ನೋಡಿದಾಗ ಇಷ್ಟು ದೂರದ ಹಾದಿ ಕ್ರಮಿಸುವಾಗ ಏನೆಲ್ಲ ಏರಿಳಿತಗಳು, ನೋವು-ನಲಿವುಗಳನ್ನು ದಾಟುತ್ತ ಬಂದಿದ್ದೇವಲ್ಲ ಅನ್ನುವುದರ ಜೊತೆ ಜೊತೆಗೆ ಇನ್ನೂ ಎಷ್ಟು ದೂರದ ಹೆಜ್ಜೆಗಳು ಬಾಕಿ ಉಳಿದಿವೆ ಎನ್ನುವ ಖಚಿತವಾದ ಮಾಹಿತಿಯಿಲ್ಲದೆ ನಡೆವಷ್ಟು ದಿನ ಕುಸಿಯದಂತೆ ಸೋಲನ್ನೇ ಸೋಲಿಸುತ್ತಾ ಗೆಲುವಿನ ಹಾದಿ ಹೀಗೇ ಅನವರತ ತೆರೆದುಕೊಳ್ಳುತ್ತ ಸಾಗುತಿರಲಿ.
‘ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೇ…’ ಬೊಗಸೆಯಷ್ಟಿರುವ ಈ ಮೆದುಳು ದಿನದಲ್ಲಿ ನಡೆಯುವ ಘಟನೆಗಳಿಂದ ಹಿಡಿದು ಎಂದೋ ನಡೆದು ಹೋದ ಘಟನೆಗಳವರೆಗೂ ಅದೆಷ್ಟೆಲ್ಲ ವಿಷಯಗಳನ್ನು ನೆನಪಿನಲ್ಲಿ ಟ್ಟುಕೊಳ್ಳುತ್ತದೆ ಅನ್ನುವುದೇ ವಿಸ್ಮಯದ ಸಂಗತಿ. ಎರಡು ನಿಮಿಷ ಕಣ್ಮುಚ್ಚಿ ಕುಳಿತರೆ ಸಾಲುಗಟ್ಟಿ ಲಗ್ಗೆಯಿಡುವ ನೆನಪುಗಳು ನಾವು ನೋಡುವ ಸಕಲ ವಸ್ತುಗಳೊಂದಿಗೂ ಬೆಸೆದು ಕೊಳ್ಳುವುದು ಈ ನೆನಪುಗಳಿಂದಲೇ!
ನಮ್ಮ ಹುಟ್ಟು, ಅಪ್ಪ-ಅಮ್ಮ, ಒಡಹುಟ್ಟಿದವರು, ನೆರೆಹೊರೆಯವರು, ಸ್ವಂತ ಮನೆ, ಬಾಡಿಗೆ ಮನೆ, ಇರುವ ಬೀದಿಯಿಂದ ಹಿಡಿದು ಊರು, ಕೇರಿ, ಜಿಲ್ಲೆ, ರಾಜ್ಯ, ದೇಶ, ಜಾತಿ, ಭಾಷೆ, ನಡೆ, ನುಡಿ, ಆಚರಣೆ ಎಲ್ಲವುಗಳಲ್ಲೂ ನೆನಪೆಂಬುದು ಹಾಸುಹೊಕ್ಕಾಗಿದೆ. ಈ ನೆನಪೆಂಬುದೇ ಇಲ್ಲದೆ ಹೋಗಿದ್ದಿದ್ದರೆ ಹೇಗಿರುತ್ತಿತ್ತು ಈ ಜಗತ್ತು? ಜೀವನ? ಸಂಬಂಧಗಳು? ಲೆಕ್ಕಾಚಾರಗಳು? ಕೆಲಸ ಕಾರ‍್ಯ ಗಳು? ಎನ್ನುವುದನ್ನು ನೆನಪಿಸಿಕೊಳ್ಳುವುದೇ ಎಷ್ಟು ಕಷ್ಟ. ಸಾಮಾನ್ಯವಾಗಿ ಯಾರನ್ನಾದರೂ ಮೊದಲ ಬಾರಿ ಭೇಟಿಯಾದಾಗ ಅಂದು ಅವರು ಧರಿಸಿದ್ದ ಬಟ್ಟೆಯ ಬಣ್ಣ, ಭೇಟಿಯಾದ ಸ್ಥಳ, ಆಡಿದ ಮಾತು… ಎಲ್ಲವೂ ಚಿತ್ರಸಹಿತ ನೆನಪಿನ ಕೋಶದಲ್ಲಿ ದಾಖಲಾಗಿಬಿಟ್ಟಿರುತ್ತದೆ.
ಹೀಗಾಗಿ ಸಾಕಷ್ಟು ವರುಷಗಳ ನಂತರ ಅವರನ್ನು ಮತ್ತೆ ಭೇಟಿ ಯಾಗುವ ಸಂದರ್ಭ ಎದುರಾದರೆ ಮೊದಲ ಭೇಟಿಯ ಆ ಸವಿ ಸವಿ ನೆನಪುಗಳು ಕಣ್ಣಮುಂದೆ ಹರಿದಾಡುತ್ತ ಮಧುರ ಅನುಭೂತಿಯನ್ನುಂಟುಮಾಡುತ್ತವೆ. ಆದರೆ ಈ ನೆನಪಿನ ಶಕ್ತಿ ಎನ್ನುವುದು ಎಲ್ಲರಲ್ಲಿಯೂ ಒಂದೇ ರೀತಿಯಾಗಿರುವುದಿಲ್ಲ. ಕೆಲವರಿಗೆ ಅದು ಎಲಿಫೆಂಟಿಕ್ ಮೆಮೊರಿಯಾದರೆ ಮತ್ತೆ ಕೆಲವರಿಗೆ ವೀಕ್ ಮೆಮೊರಿ. ಮೊಬೈಲ್ ಫೋನನ್ನು ತಮ್ಮ ಕೈಯ ಇಟ್ಟುಕೊಂಡು ಅದರ ಎಲ್ಲರಿಗೂ ಫೋನ್ ಮಾಡಿ ಕೇಳುತ್ತಿರುತ್ತಾರೆ ನನ್ನ ಫೋನೆಲ್ಲಿದೆ ಯಾರಾದ್ರೂ ನೋಡಿದ್ರಾ? ಅಂತ.
ಇನ್ನು ಕನ್ನಡಕದ ಕತೆಯಂತೂ ಕೇಳುವುದೇ ಬೇಡ. ವಯಸ್ಸಾದಂತೆಲ್ಲ ನಮ್ಮ ದೇಹದ ಒಂದು ಅಂಗವಾಗಿ ಸದಾ ಕಣ್ಣ ಮುಂದಿನ ಪರದೆಯಾಗಿ ಕಂಗೊಳಿಸುವ ಸುಲೋಚನ ವನ್ನು ನಮ್ಮ ಆಲೋಚನೆಯ ನಡುವೆ ಮರೆತು ಎದರೂ ಇಟ್ಟೆವೆಂದರೆ ಅದಕ್ಕಾಗಿ ಮನೆಪೂರ್ತಿ ಹುಡುಕಾಟ ತಪ್ಪಿದ್ದಲ್ಲ. ಮೊಬೈಲಿನಂತೆ ಮಿ ಕಾಲ್ ಕೊಟ್ಟು ಪತ್ತೆ ಹಚ್ಚುವ ಅವಕಾಶವೂ ಇರದೆ ಸದ್ದು ಮಾಡದೆ ಕಣ್ಣಿಗೆ ಕಾಣದೆ ಇದ್ದ ಸುಮ್ಮನೆ ಇದ್ದು ಬಿಡುವ ಕನ್ನಡಕದ ಹುಡುಕಾಟವನ್ನು ಬಲ್ಲವರೇ ಬಲ್ಲರು ಅದರ ಸಂಕಟವನ್ನು!
ಹಿಂದಿಯ ಪ್ರಖ್ಯಾತ ಕಪಿಲ್ ಶರ್ಮಾನ ಕಾರ್ಯಕ್ರಮವೊಂದರಲ್ಲಿ, ದಿನ ಬೆಳಗಾದರೆ ಹಲ್ಲುಜ್ಜಿದ್ದಾನಾ? ಅನ್ನುವುದೇ ಮರೆತು ಹೋಗುತ್ತದೆ ಎಂದ ರಾಣಿ ಮುಖರ್ಜಿಯ ಮಾತು ಕೇಳಿ ಗೊಳ್ಳನೆ ನಕ್ಕಿತ್ತು ವೀಕ್ಷಕ ಸಮೂಹ. ಸಾಮಾನ್ಯವಾಗಿ8-10ನೇ ವರುಷದ ನಂತರದ ಘಟನೆಗಳು ಸ್ಮೃತಿಪಟಲದಲ್ಲಿ ಶೇಖರ ಗೊಳ್ಳುತ್ತಾ ಹೋಗುತ್ತದೆ. ಆದರೆ ಪಂಚಭಾಷಾ ತಾರೆಯಾದ ಜೂಲಿ ಲಕ್ಷ್ಮಿಗೆ ತಮ್ಮ ಎರಡನೇ ವಯಸ್ಸಿನಲ್ಲಿ ನಡೆದ ಘಟನೆಗಳು ಈಗಲೂ ಸಹ ನೆನಪಿವೆ ಎಂಬುದು ಕೇಳಿದಾಗ ಅಚ್ಚರಿಯಾಗಿತ್ತು.
ಎಂದೋ ಘಟಿಸಿ ಹೋದ ಸಂಗತಿಗಳನ್ನು ನಮ್ಮ ಕಣ್ಣಿಗೆ ಕಟ್ಟುವಂತೆ ಎಳೆಎಳೆಯಾಗಿ ಅದರ ಪ್ರತಿ ವಿವರಗಳನ್ನು ಬಿಡಿಸಿಡುತ್ತ ಆ ಘಟನೆಗೆ ಮರುಜೀವ ಬಂದು ನಮ್ಮೆದುರಲ್ಲಿ ಈಗ ನಡೆಯುತ್ತಿದೆಯೇನೋ ಎಂಬಂತೆ ಹೇಳುವ ಅದ್ಭುತ ಕಲೆಯ ಒಡೆಯನಾಗಿದ್ದ ರವಿ ಬೆಳಗೆರೆಯವರ ನೆನಪಿನ ದೈತ್ಯಶಕ್ತಿಯನ್ನು ಕಂಡು ಬೆರಗಾಗಿದ್ದೇನೆ. ಅದಕ್ಕೆ ತದ್ವಿರುದ್ಧ ವಾಗಿ ನನ್ನದು  . ಬೇಕೆಂದಿದ್ದನ್ನು ಮಾತ್ರ ನೆನಪಿಟ್ಟುಕೊಂಡು ಉಳಿದದ್ದನ್ನು ಪ್ರಜ್ಞಾಪೂರ್ವಕವಾಗಿಅಳಿಸಿ ಹಾಕಿಬಿಡುವ ಜಾಣ ಮರೆವು. ಅನಗತ್ಯವಾದದ್ದನ್ನೆಲ್ಲ ನೆನಪಿನ ತಿಜೋರಿಯಲ್ಲಿ ತುಂಬುತ್ತಾ ಹೋದರೆ ಕಾಣುವ ಹೊಸ ಹೊಸ ವಿಷಯಗಳಿಗೆ ಜಾಗವಿರ ದಂತಾಗಿ ಹಳೆಯ ನೆನಪಿನ ಚಕ್ರಸುಳಿಯ ಸಿಕ್ಕಿಹಾಕಿಕೊಂಡು ಮೇಲೇರಲಾಗದಂತೆ ಉಸಿರುಗಟ್ಟಿಸಿಕೊಳ್ಳಬೇಕಾಗುತ್ತದೆ.
ನೆನೆದಷ್ಟೂ ಮುಗಿಯದೆ ಆವರಿಸಿಕೊಳ್ಳುವ ಬಾಲ್ಯದ ನೆನಪುಗಳೇ ಮಧುರ. ಬಳಪದ ಕಡ್ಡಿ ಹಿಡಿದು ಸ್ಲೇಟಿನ ಮೇಲೆ ಅಮ್ಮ ತಿದ್ದಿಸುತ್ತಿದ್ದ ಅಕ್ಷರಗಳು, ಹೆಗಲಿನ ಚೀಲವೇರಿಸಿಕೊಂಡು ಸ್ನೇಹಿತರೊಂದಿಗೆ ಶಾಲೆಗೆ ಓಡುತ್ತಿದ್ದ ದಿನಗಳು, ‘ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ’ ಎಂದು ಹಾಡುತ್ತ ಮಾಡುತ್ತಿದ್ದ ಪ್ರಾರ್ಥನೆ, ಗಣ್ಯರ ನಿಧನದ ಸಮಯದಲ್ಲಿ ಮಾಡುತ್ತಿದ್ದ ಮೌನಾ ಚರಣೆ, ಆ ನಿಶ್ಶಬ್ದದಲ್ಲಿ ಸಾಲಾಗಿ ನಿಂತ ಸಹಪಾಠಿಗಳ ನಡುವೆ ಶುರುವಾಗುತ್ತಿದ್ದನಗೆಯ ಬುಗ್ಗೆಗೆ ತಡೆಯಲಾರದೆ ನಾವೂ ನಕ್ಕು ಸಿಕ್ಕಿಬಿದ್ದು ಅನುಭವಿಸಿದ ಶಿಕ್ಷೆ, ಮಾಡದ ಹೋಮ್ ವರ್ಕ್‌ಗಳಿಗಾಗಿ ಅಂಗೈ ಮೇಲೆ ಬರೆಯೇಳು ವಂತೆ ತಿಂದ ಬೆತ್ತದೇಟುಗಳು.
ಊಟದ ಸಮಯದಲ್ಲಿ ಹಂಚಿಕೊಂಡು ತಿನ್ನುತ್ತ, ಪಕ್ಕದ ಮಾರುತ್ತಿದ್ದ ಮಾವಿನ ಕಾಯಿ, ಸೀಬೇಕಾಯಿಗಳಿಗೆ ಉಪ್ಪು ಖಾರ ಹಾಕಿಸಿಕೊಂಡು ತಿನ್ನುತ್ತಾ, ಬುಧವಾರ, ಶನಿವಾರಗಳಂದು ಶುಭ್ರವಾಗಿ ಬಿಳಿ ಸಮವಸ ಧರಿಸಿ ಹೋಗುತ್ತಿದ್ದ ದಿನಗಳು, ನಾಡಹಬ್ಬಗಳಿಗೆ ಒಟ್ಟಾಗಿ ಹಾಡುತ್ತ, ಕುಣಿಯುತ್ತ ನಲಿಯುತ್ತಿದ್ದ ದಿನಗಳು, ಸಣ್ಣ ಪುಟ್ಟ ಮಾತಿಗೆ ಆಡುತ್ತಿದ್ದ ಜಗಳಗಳು, ಮರುಕ್ಷಣ ಮರೆತು ಮೊದಲಿನಂತೆ ಒಟ್ಟಿಗಿರುತ್ತಿದ್ದ ದಿನಗಳು, ಸಮಯ ಸಿಕ್ಕ ಕೂಡಲೇ ಗೋಲಿ, ಬುಗುರಿ, ಲಗೋರಿ, ಗಿಲ್ಲಿದಾಂಡು, ಚೌಕಾಬಾರ, ಅಣ್ಣಿಕಲ್ಲು, ಹಳಗುಳಿ ಮನೆ, ನದಿ-ದಡ, ಕುಂಟೆ ಬಿ, ಕಣ್ಣಾ ಮುಚ್ಚಾಲೆ, ರತ್ತೋ ರತ್ತೋ ರಾಯನ ಮಗಳೆ, ಗುಲಾಬಿ ಹೂವೆ ಬಿಸಿಲಲಿಕುಳಿತೆ, ಟೋಪಿ ಬೇಕಾ ಟೋಪಿ ಎಂದು ಬೀದಿಯ ಮಕ್ಕಳೆಲ್ಲ ಸೇರಿ ಆಡುತ್ತಿದ್ದ ಆಟಗಳು, ಆಟದ ನಡುವೆ ಬಿದ್ದು ಗಾಯ ಮಾಡಿಕೊಂಡು ಅಮ್ಮ ಬೈತಾಳೆ ಎಂದು ಹೇಳದೆ ಸಹಿಸಿಕೊಂಡ ನೋವಿನ ಕ್ಷಣಗಳೆಲ್ಲ ಇಂದು ಸುಂದರ ನೆನಪುಗಳು.
ಶಿಸ್ತಿನ ಸಮವಸವನ್ನು ಕಳಚಿ ಅಕರ್ಷಕ ವಿನ್ಯಾಸದ ವಸಗಳೊಂದಿಗೆ ಕಂಗೊಳಿಸುತ್ತ ಕಾಲೇಜಿಗೆ ಅಡಿಯಿಡುವ ಹೊತ್ತಿಗಾಗಲೇ ಹುಚ್ಚುಖೋಡಿ ಮನಸು ಅದು ಹದಿನಾರರ ವಯಸು! ಚೆಲುವಿನ ಹರೆಯದ ದಿನಗಳಲ್ಲಿ ಕಂಡದ್ದೆಲ್ಲ ಸುಂದರ! ಮಾತು, ನೋಟ, ಭಾವನೆಗಳ ಬದಲಾವಣೆಯೊಂದಿಗೆ ಬದಲಾಗುವ ದಿನಗಳ ತುಂಬೆಲ್ಲ ರಂಗು ರಂಗಿನ ಕನಸುಗಳದ್ದೇ ಸಾಮ್ರಾಜ್ಯ. ಪಾಠ ಹೇಳುವ ಉಪನ್ಯಾಸಕರೂ ಆಕರ್ಷಕವಾಗಿ ಕಾಣುವ ವಯಸ್ಸು, ಸಿನಿಮಾದಲ್ಲಿ ಕಾಣುವ ಹೀರೋ ವನ್ನು ನಿಜಜೀವನದಲ್ಲಿ ಕಾಣುವ ಹಂಬಲ.
ಕಾಲೇಜ್ ಕ್ಯಾಂಪಸ್ ತುಂಬ ಬಣ್ಣ ಬಣ್ಣದ ಹಕ್ಕಿಗಳ ಕಲರವದಂತೆ ಹೋದಲ್ಲಿ ಬಂದಲ್ಲಿ ಸದ್ದಿಲ್ಲದೆ ಹಿಂಬಾಲಿಸುವ ಜೋಡಿಗಣ್ಣುಗಳು, ಪ್ರೀತಿಯ ಅಮಲೇ ರಿದ ಜೋಡಿ ಹಕ್ಕಿಗಳು, ಮಾತ ಮೋಡಿ ಮಾಡುವ ಜೇನುದನಿಗಳು, ಕದ್ದು ನೋಡುವ ಚಿತ್ರಗಳು, ಓದಿಗಿಂತ ಚೆಟವೇ ಪ್ರಧಾನವಾಗಿ ದಿನಗಳು ಕ್ಷಣಗಳಂತೆ ನೋಡ ನೋಡುತ್ತ ಕರಗಿ ಹೋಗಿ ಬೀಳ್ಕೊಡುಗೆಯ ದಿನದಲ್ಲಿ ಎಲ್ಲ ರಿಂದ ತೆಗೆದುಕೊಂಡ ಆಟೋಗ್ರಾಫಿನಲ್ಲಿ ಬರೆದ ಸಾಲುಗಳ ನೆನಪುಗಳನ್ನು ಯಾರು ತಾನೆ ಮರೆಯಲು ಸಾಧ್ಯ? ಈ ಹಾರಾಟಗಳಿಗೆಲ್ಲ ಬ್ರೇಕು ಬಿದ್ದಂತೆ ವಿವಾಹದ ಬಂಧನದೊಳಗೆ ಕೂಡಿಹಾಕಿ ನೈಜತೆಯ ದರ್ಶನ ಮಾಡಿ ಸುತ್ತ ಮಗ್ಗುಲು ಬದಲಿಸುತ್ತದೆ ಬದುಕು! ಬದುಕಿನ ಮಿತಿಗಳ ಅರಿವಾಗುತ್ತ ಬಂದಂತೆಲ್ಲ ಕಳೆದ ದಿನಗಳು ನೆನಪಾಗಿ ಕಾಡಲು ಶುರುವಾಗುತ್ತದೆ.
ನಿನ್ನ ನೆನಪು ಬಾರದಂತೆ ‘ಕವನ ಕಟ್ಟಿ ಹಾಡದಂತೆ ತಡೆದೆ ನಾನು ನನ್ನನೆ… ’ ಎಂದು ಸಮಾಧಾನಗೊಳ್ಳುತ್ತ ಬದುಕಿನೊಂದಿಗೆ ರಾಜಿ ಮಾಡಿಕೊಂಡು ಮುನ್ನಡೆಯುತ್ತೇವೆ. ಎಲ್ಲರ ಬೆರಳ ತುದಿಯಲ್ಲಿರುವ ಕಂಪ್ಯೂಟರ್ ಹಾಗೂ ಮೊಬೈಲ್‌ಗಳಲ್ಲಿರುವ ಗಿಗಾಬೈಟ್‌ಗಳಿಗಿಂತಲೂ ಹೆಚ್ಚಿನ ಮಟ್ಟದ ನೆನಪನ್ನು ನೆನಪಿ ನಲ್ಲಿಟ್ಟುಕೊಳ್ಳುವ ತಾಕತ್ತು ಈ ಪುಟ್ಟ ಮೆದುಳಿಗಿದೆ. ಸೃಷ್ಟಿಯ ಜೀವಸಂಕುಲದಲ್ಲಿ ಮೆದುಳೇ ಇಲ್ಲದ ಪ್ರಾಣಿಗಳು ಬೆರಳೆಣಿಕೆಯಷ್ಟು ಮಾತ್ರ!
ವಿದ್ಯಾರ್ಥಿ ದೆಸೆಯಲ್ಲಿ ಓದಿದ್ದನ್ನು ಮೇಲಿಂದ ಮೇಲೆ ಮನನ ಮಾಡುತ್ತ ಅದನ್ನು ನೆನಪಿನಲ್ಲಿಟ್ಟುಕೊಂಡು ಪರೀಕ್ಷೆ ಗಳಲ್ಲಿ ದಾಖಲಿಸಿ ಉತ್ತಮ ಅಂಕಗಳನ್ನು ಗಳಿಸಿವುದೇ ಮುಖ್ಯ ಉದ್ದೇಶ. ಹೀಗಾಗಿ ನೆನಪನ್ನು ಉಳಿಸಿ ಬೆಳೆಸುವುದು ಹೇಗೆ ಅನ್ನುವುದರ ಬಗ್ಗೆಯೇ ಸಾಕಷ್ಟು ಸಿದ್ಧ ತಂತ್ರ ಗಳು ಈಗಾಗಲೇ ಬಳಕೆಯಲ್ಲಿವೆ. ಅದರಲ್ಲಿ ಅವಧಾನದ ಕಲೆಯೂ ಒಂದು. ವಿಷಯವನ್ನೋ, ವಸ್ತುವನ್ನೋ ನಿರ್ದಿಷ್ಟವಾಗಿ ಸ್ಪಷ್ಟಪಡಿಸಿ ಮನಸ್ಸಿಗೆ ನಾಟುವಂತೆ ಮಾಡಿ ಗಮನವನ್ನು ಕೇಂದ್ರೀ ಕರಿಸುವುದೇ ಅವಧಾನದ ಕೆಲಸ.
ಪ್ರಜ್ಞಾವಸ್ಥೆಯಲ್ಲಿ ಮನಸ್ಸು ಎದುರಿನ ಎಲ್ಲ ವಿಷಯಗಳ ಕಡೆಗೂ ಹರಿದಿರುತ್ತದಾದರೂ ಯಾವುದೋ ನಿರ್ದಿಷ್ಟ ವಿಷಯದಲ್ಲಿ ಮಾತ್ರ ವಿಶೇಷವಾಗಿ ಕೆಲಸ ಮಾಡುತ್ತಿರು ತ್ತದೆ. ಆಸಕ್ತಿಗಳಿಗೆ ತಕ್ಕಂತೆ ಅವಧಾನ, ಅವಧಾನಕ್ಕೆ ತಕ್ಕಂತೆ ಅರಿವು. ಎಲ್ಲ ಇಂದ್ರಿಯ ಶಕ್ತಿಗಳನ್ನೂ ಏಕೀಭವಿಸುವಂತೆ ಮಾಡಿ ಪ್ರಕೃತ ವಿಷಯ ದತ್ತ ಮಾತ್ರ ಉಪಯೋಗಿಸಿದಲ್ಲಿ ಏಕಾಗ್ರತೆ ಅತಿ ತೀವ್ರವಾಗುತ್ತದೆ. ಇದನ್ನೇ ಚಿತ್ತೇಕಾಗ್ರತೆ ಎನ್ನುವುದು. ಮನಸ್ಸು ಗುರಿಯನ್ನಲ್ಲದೆ ಬೇರೆಯದನ್ನು ಯೋಚಿಸ ಬಾರದು. ಹೀಗಾಗಿ ಜೀವನದಲ್ಲಿ ಉತ್ತಮ ಅವಧಾನಗಳನ್ನು ರೂಢಿಸಿಕೊಳ್ಳುವುದು ಅವಶ್ಯಕ.
ಉತ್ತಮ ಆಸಕ್ತಿಗಳನ್ನು ರೂಢಿಸಿಕೊಂಡು ಅದರ ಮೂಲಕ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಯಕ್ಷಗಾನ ಆಧಾರಿತ, ಸಂಗೀತ ಆಧಾರಿತ, ಚಿತ್ರಕಲೆಆಧಾರಿತ, ಸಾಹಿತ್ಯಾಧಾರಿತ ಅವಧಾನ ಕಲೆಗಳು ವಿಶೇಷವಾಗಿ ತೆಲುಗು, ಕನ್ನಡ ಹಾಗೂ ಸಂಸ್ಕೃತದಲ್ಲಿ ಬಳಕೆಯಲ್ಲಿವೆ. ಅದರಲ್ಲಿ ಪೃಚ್ಛಕರ ಸಂಖ್ಯೆಗನುಗುಣ ವಾಗಿ ಅಷ್ಟಾವಧಾನ, ದಶಾವಧಾನ, ತ್ರಿಗುಣಿತ ಅಷ್ಟಾವಧಾನ, ಶತಾವಧಾನ ಹಾಗೂ ಸಹಸ್ರಾವಧಾನಗಳಿವೆ. ಪೃಚ್ಛಕ ಎಂದರೆ ಪ್ರಶ್ನೆ ಕೇಳುವವನು. ಅವಧಾನಿ ಎಂದರೆ ಏಕಾಗ್ರಚಿತ್ತನಾಗಿ ಅವನ ಪ್ರಶ್ನೆಗೆ ಉತ್ತರಿಸುವವನು. ಶತಾವಧಾನ ಎಂದ ಕೂಡಲೇ ನೆನಪಿಗೆ ಬರುವ ಹೆಸರು ನಮ್ಮ ಶತಾವಧಾನಿ ಆರ್. ಗಣೇಶ್ರವರದ್ದು! ಪ್ರತಿದಿನ, ಪ್ರತಿಕ್ಷಣ ಮರೆಯದೇ ನೆನಪಿಟ್ಟುಕೊಳ್ಳುವ ಈ ಪುಟ್ಟ ಮೆದುಳಿನ ನೆನಪಿನ ಶಕ್ತಿ ವಯಸ್ಸಾದಂತೆಲ್ಲ ಕ್ಷೀಣವಾ ಗುತ್ತಾ ಹೋಗುತ್ತದೆ.
ಆಘಾತಗಳಿಂದ, ಒತ್ತಡಗಳಿಂದ, ಚಿಂತೆಗಳಿಂದ, ಮಾನಸಿಕ ಖಿನ್ನತೆಗಳಿಂದ ನೆನಪುಗಳು ಅಳಿದು ಮರೆವುಂಟಾಗುತ್ತದೆ. ಹೀಗಾಗಿ ದಿನದ ಪ್ರತಿಕ್ಷಣ ವನ್ನು ಒಂದು ಸುಂದರ ನೆನಪಾಗಿಸಿಕೊಳ್ಳುವತ್ತ ನಮ್ಮ ನಿರಂತರ ಪ್ರಯತ್ನವಿರಲಿ. ಈ ನಾಲ್ಕು ದಿನದ ಜೀವನದಲ್ಲಿ ನಾವು ಎಲ್ಲರ ಮಧುರ ನೆನಪುಗಳಾಗಿರಬೇಕೇ ಹೊರತು ದುಃಸ್ವಪ್ನಗಳಲ್ಲ!