ಹಗ್ಗ ಕೊಟ್ಟು ಕೈ ಕಟ್ಟಿಸಿಕೊಳ್ಳುವ ಬಿಜೆಪಿ
ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
.@.
ಕರ್ನಾಟಕದಲ್ಲಿ ಮತ್ತೆ ಸಿಎಂ ಬದಲಾವಣೆ ಕೂಗು ಶುರುವಾಗಿದೆ. ಈ ಕೂಗಿನ ಮೂಲ ದೆಹಲಿಯದ್ದೋ ಅಥವಾ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದೆಯೋಎನ್ನುವ ಬಗ್ಗೆ ಈಗಲೂ ಸ್ಪಷ್ಟನೆ ಯಿಲ್ಲ. ಮತ್ತೆ ಈ ಕೂಗಿನಿಂದ ನಿಜವಾಗಿಯೂ ಬಸವರಾಜ ಬೊಮ್ಮಾಯಿ ಅವರು ಬದಲಾಗು ವರೇ ಎನ್ನುವ ಬಗ್ಗೆಯೂ ಸ್ಪಷ್ಟನೆ ಸಿಗುತ್ತಿಲ್ಲ. ಆದರೆ ಸುದ್ದಿಯಂತೂ ಜೋರಾಗಿಯೇ ಓಡುತ್ತಿದೆ. ಈ ಸುದ್ದಿಯ ಸದ್ದಿನಿಂದ ನೇರ ಪರಿಣಾಮ ಅನುಭವಿಸುತ್ತಿರುವುದಂತೂ, ಬಿಜೆಪಿ ಸಂಘಟನೆಯ ಮತ್ತು ಸರಕಾರವೇ ಹೊರತು ಮತ್ತೇನು ಅಲ್ಲ.
2018ರಲ್ಲಿ ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಅಧಿಕಾರ ಹಿಡಿಯುವುದಕ್ಕೆ ಬೇಕಿರುವ ಸ್ಪಷ್ಟ ಬಹುಮತ ಸಿಗದೇ ಇದಿದ್ದರಿಂದ ಬರೋಬ್ಬರಿ ಒಂದು ವರ್ಷಗಳ ಕಾಲ ಹೋರಾಡಿ ‘ಆಪರೇಷನ್ ಕಮಲ‘ದ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದು, ಯಡಿಯೂರಪ್ಪ ಅವರು ಸಿಎಂ ಆದರು. ಸಿಎಂ ಗಾದಿಯಲ್ಲಿ ಕೂತ ಬಳಿಕ ನಡೆದ ಹಲವು ಘಟನಾವಳಿಗಳಿಂದ ಎರಡು ವರ್ಷ ಅಧಿಕಾರ ನಡೆಸಿದ ಬಳಿಕ ಅವರನ್ನು ಕೆಳಗೆ ಇಳಿಸಿ ಅಚ್ಚರಿಯ ರೀತಿಯಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ತಂದು ಬಿಜೆಪಿ ವರಿಷ್ಠರು ಕೂರಿಸಿದರು.
2021ರ ಜುಲೈ 28ಕ್ಕೆ ಅಧಿಕಾರಕ್ಕೆ ಏರಿದ ಬೊಮ್ಮಾಯಿ ಅವರ ಅವಧಿ ಆರು ತಿಂಗಳು ಮುಗಿಯುವ ಮೊದಲೇ, ಮತ್ತೊಮ್ಮೆ ಸಿಎಂ ಬದಲಾವಣೆಯ ಗುಸು-ಗುಸು ಬಿಜೆಪಿ ಮೊಗಸಾಲೆಯಲ್ಲಿ ಕೇಳಿಬರುತ್ತಿದೆ. ಈ ಪಿಸು ಮಾತಿಗೆ, ಇಲ್ಲಿಯವರೆಗೆ ಪಕ್ಷದ ವರಿಷ್ಠರಾಗಲಿ, ಬೊಮ್ಮಾಯಿ ಅವರಾ ಗಲಿ, ಪಕ್ಷದ ರಾಜ್ಯಾಧ್ಯಕ್ಷನಳಿನ್‌ಕುಮಾರ್ ಕಟೀಲ್ ಅವರಾಗಲಿ ಅಧಿಕೃತ ಮುದ್ರೆ ಒತ್ತಿಲ್ಲವಾದರೂ, ನಡೆಯುತ್ತಿ ರುವ ಬೆಳವಣಿಗೆ ನೋಡಿದಾಗ ಈ ಪಿಸು ಮಾತು ಶೀಘ್ರ ದಲ್ಲಿಯೇ ಗಟ್ಟಿ ಧ್ವನಿಯಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.
ಈ ಪಿಸು ಮಾತು ಶುರುವಾಗಿ ತಿಂಗಳು ಕಳೆದರೂ, ಚಳಿಗಾಲದ ಅಧಿವೇಶನದ ಸಮಯದಲ್ಲಿ ಬೊಮ್ಮಾಯಿ ಅವರು ಶಿಗ್ಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದ ರಲ್ಲಿ ‘ಅಧಿಕಾರ ಶಾಶ್ವತವಲ್ಲ‘ ಎಂದು ಕಣ್ಣೀರು ಹಾಕಿದ್ದು, ಆ ಹೇಳಿಕೆ ಬೆನ್ನಲ್ಲೇ, ‘ಬೊಮ್ಮಾಯಿ ಅವರು ಕೇಂದ್ರ ಸಚಿವರಾಗಲಿದ್ದಾರೆ‘ ಎಂದು ನಿರಾಣಿ ಅವರು ಹೇಳಿದ್ದು, ಈ ಎಲ್ಲದಕ್ಕೂ ಮೊದಲು ಮುರುಗೇಶ್ ನಿರಾಣಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹಿರಿಯ ಸಚಿವ ಈಶ್ವರಪ್ಪ ಅವರು ಬಹಿರಂಗ ಹೇಳಿಕೆ ನೀಡಿದ್ದು ನೋಡಿದಾಗ ಒಂದಕ್ಕೊಂದು ತಾಳೆಯಾಗುತ್ತದೆ.
ಕೇವಲ ಈ ಹೇಳಿಕೆಗಳು ಮಾತ್ರವಲ್ಲ, ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆ ಹಿಡಿದಾಗಲೆಲ್ಲ ಬಿಜೆಪಿ ನಾಯಕರು ನಡೆದುಕೊಂಡಿರುವ ರೀತಿಯೂ ಇದಕ್ಕೆ ಪೂರಕ ಎನ್ನುವಂತಿದೆ. ಶಾಂತವಾಗಿರುವ ನೀರಲ್ಲಿ ಕಲ್ಲು ಹಾಕಿಕೊಂಡು ಹಾಳು ಮಾಡಿಕೊಳ್ಳುವುದು ಅಥವಾ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಳ್ಳುವಂತೆಯೇ ಬಿಜೆಪಿ ನಾಯಕರು ಕರ್ನಾಟಕದ ರಾಜಕಾರಣದಲ್ಲಿ ಮಾಡುವುದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ. 2018ರಲ್ಲಿ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿಅಧಿಕಾರದ ಗದ್ದುಗೆ ಏರಿದ ಬಿಜೆಪಿ ಸರಕಾರದ ಸಾರಥಿಯಾಗಿದ್ದು ಯಡಿಯೂರಪ್ಪ ಅವರು. ಆದರೆ ಅಧಿಕಾರಕ್ಕೆ ಬಂದ 3 ವರ್ಷದಲ್ಲಿ ಶುರುವಾದ ಭ್ರಷ್ಟಾಚಾರ ಆರೋಪ, ಲೋಕಾಯುಕ್ತ ತನಿಖೆ, ಬಂಧನದ ಕಾರಣಕ್ಕೆ ಯಡಿಯೂರಪ್ಪ ಅವರು ರಾಜೀನಾಮೆ ನೀಡಿ, ಸದಾನಂದ ಗೌಡ ಅವರನ್ನು ಖುರ್ಚಿ ಮೇಲೆ ಕೂರಿಸಲಾಯಿತು.
ಅನಿವಾರ್ಯವಾಗಿ ಯಡಿಯೂರಪ್ಪ ಅವರಿಂದ ರಾಜೀನಾಮೆ ಪಡೆದು ಗೌಡರಿಗೆ ನೀಡಿದ್ದ ಮುಖ್ಯಮಂತ್ರಿ ಖುರ್ಚಿ ಮೇಲೆ ಡಿವಿಎಸ್‌ಗೆ ಎರಡು ವರ್ಷ ಕೂರಲು ಬಿಡಲಿಲ್ಲ. ಆಂತರಿಕ ಕಿತ್ತಾಟದಿಂದ ವರ್ಷ ಪೂರೈಸುವ ಮೊದಲೇ, ಅವರನ್ನು ಕೆಳಗೆ ಇಳಿಸಿ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾ ಯಿತು. ಹಾಗೂ ಹೀಗೂ ಐದು ವರ್ಷ ಪೂರೈಸಿದ ಬಿಜೆಪಿ ಸರಕಾರ, ಈ ಅವಽಯಲ್ಲಿ ಮೂರು ಮುಖ್ಯಮಂತ್ರಿಗಳನ್ನು ಕಂಡಿತ್ತು. ಪದೇಪದೆ ಮುಖ್ಯಮಂತ್ರಿಗಳ ಬದಲಾವಣೆ ಅಥವಾ ಆ ರೀತಿಯ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದ್ದು ಸುಳ್ಳಲ್ಲ. ಇದಕ್ಕೆ ಸರಿಯಾಗಿ ಯಡಿಯೂರಪ್ಪ ಅವರು ಪ್ರತ್ಯೇಕ ಪಕ್ಷ ಕಟ್ಟಿಕೊಂಡು ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದರಿಂದ, ಬಿಜೆಪಿ 2013ರಲ್ಲಿ ಹೀನಾಯವಾಗಿ ಸೋಲು ಅನುಭವಿಸಿತ್ತು.
ಈ ರೀತಿಯ ಆಂತರಿಕ ಸಮಸ್ಯೆಯಿಂದ ಅಧಿಕಾರ ಕಳೆದುಕೊಂಡ ಉದಾಹರಣೆ ಬಿಜೆಪಿಯಲ್ಲಿದೆ. ಈ ತಪ್ಪಿನ ಬಗ್ಗೆ ಆಗ್ಗಾಗೆ ಬಿಜೆಪಿ ನಾಯಕರು ವಿವಿಧ ವೇದಿಕೆಯಲ್ಲಿ ಹೇಳಿಕೊಂಡು ಓಡಾಡುವುದನ್ನು ನೋಡಿದ್ದೇವೆ. ಆದರೆ ಈಗ ಆಪರೇಷನ್ ಕಮಲದ ಮೂಲಕ ಮೂರುವರೆ ವರ್ಷದ ಅವಧಿಗೆ ಅಧಿಕಾರದ ಗದ್ದುಗೆ ಏರಿದ ಬಿಜೆಪಿ ಈಗಲೂ ಬುದ್ದಿ ಕಲಿತಂತೆ ಕಾಣುತ್ತಿಲ್ಲ. ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ ಬಳಿಕ ಲಿಂಗಾಯತ ವೋಟ್ ಬ್ಯಾಂಕ್‌ಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಬೊಮ್ಮಾಯಿ ಅವರನ್ನು ತಂದು ಕೂರಿಸಿದ್ದಾರೆ. ಆದರೀಗ ಆರು ತಿಂಗಳು ತುಂಬುವ ಮೊದಲೇ, ಮಂಡಿ ನೋವಿನ ಕಾರಣ ಎತ್ತಿ ತೋರಿಸಿ ಬದಲಾವಣೆಯ ಸುದ್ದಿ ಚಾಲ್ತಿಗೆ ಬರುವಂತೆ ಬಿಜೆಪಿಯಲ್ಲಿನ ಪ್ರಮುಖರ ಮಾಡುತ್ತಿದ್ದಾರೆ ಎನ್ನುವುದರಲ್ಲಿ ಒಪನ್ ಸಿಕ್ರೆಟ್.
ಆದರೆ ಚುನಾವಣೆಗೆ ಇನ್ನೊಂದು ವರ್ಷ ಬಾಕಿಯಿರು ವಾಗ, ಈ ರೀತಿಯ ನಿರ್ಧಾರವನ್ನು ಪಕ್ಷದ ವರಿಷ್ಠರು ತಗೆದುಕೊಳ್ಳುವರೇ ಎನ್ನುವುದು ಈಗಲೂ ತಿಳಿಯದ ಸಂಗತಿ. ಮ್ಮಾಯಿ ಅವರು ಕಾಮನ್ ಮ್ಯಾನ್ ಸಿಎಂ ಎನ್ನುವ ಮನಸ್ಥಿತಿಯಲ್ಲಿಯೇ ಇದ್ದು, ಸರಕಾರ ಟೇಕ್ ಆಫ್ ಆಗಿಲ್ಲ ಎನ್ನುವುದು ಸಿಎಂ ಬದಲಾವಣೆಗೆ ಇರುವ ಕಾರಣ ಎನ್ನುವುದು ಕೆಲವರ ವಾದ. ಆದರೆ ಚುನಾವಣಾ ವರ್ಷದಲ್ಲಿ, ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬೇಕಿರುವುದನ್ನು ಬಿಟ್ಟು ಈ ರೀತಿ ಮತ್ತೊಮ್ಮೆ ಸಿಎಂ ಬದಲಾವಣೆ ಮಾಡಿ, ಪುನಃ ಗೊಂದಲ ಮೂಡಿಸುವ ಕೆಲಸಕ್ಕೆ ಕೈಹಾಕಿದರೆ ಲಾಭವಾಗುತ್ತದೆ ಎನ್ನುವುದು ಒಪ್ಪಿತವಲ್ಲ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಈ ಹಿಂದೆ ಐದು ವರ್ಷದಲ್ಲಿ ಮೂರು ಮುಖ್ಯಮಂತ್ರಿ ಗಳನ್ನು ರಾಜ್ಯಕ್ಕೆ ನೀಡಿದ್ದ ಬಿಜೆಪಿಯನ್ನೇ ಜನರು ಒಪ್ಪಿರಲಿಲ್ಲ. ಇದೀಗ ಅಧಿಕಾರ ನಡೆಸಿದ ನಾಲ್ಕು ವರ್ಷಕ್ಕೆ ಮೂರು ಸಿಎಂ ಎಂದರೆ ಆಡಳಿತಾತ್ಮಕವಾಗಿ ಸರಕಾರಕ್ಕೆ ಭಾರಿ ಹೊಡೆತ ಬೀಳುತ್ತದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಈ ಹಿಂದಿನ ಘಟನಾವಳಿಗಳು ಈಶ್ವರಪ್ಪ, ನಿರಾಣಿ ಸೇರಿದಂತೆ ಬಹುತೇಕ ನಾಯಕರಿಗೆ ಅರಿವಿದ್ದರೂ, ಈ ರೀತಿಯ ಹೇಳಿಕೆ ನೀಡಿ ಗೊಂದಲ ಮೂಡಿಸುವ ಕೆಲಸದಿಂದ ಆಗುವ ಲಾಭವೇನು ಎನ್ನುವುದನ್ನು ಅವರೇ ಹೇಳಬೇಕು. ಒಂದು ವೇಳೆ ಬೊಮ್ಮಾಯಿ ಅವರನ್ನು ಬದಲಾಯಿಸಿದ್ದೇ ಆದರೆ, ಆರು ತಿಂಗಳ ಮಟ್ಟಿಗೆ ಏಕೆ ಅವರನ್ನು ಈ ಹುದ್ದೆ ಯನ್ನುಕೂರಿಸಲಾಯಿತು? ಯಡಿಯೂರಪ್ಪ ಅವರನ್ನು ಬದಲಾಯಿಸಿದಾಗಲೇ, ‘ಅರ್ಹ’ ಕ್ಯಾಂಡಿಡೇಟ್ ಅನ್ನು ಆ ಸ್ಥಾನದಲ್ಲಿ ಕೂರಿಸಬಹುದಾಗಿತ್ತು ಅಲ್ಲವೇ? ಬೊಮ್ಮಾಯಿ ಅವರೊಬ್ಬರ ಅತ್ಯತ್ತಮ ತಂತ್ರಗಾರಿಕಾ ನಿಪುಣ, ಆಡಳಿತ ಯಾವ ರೀತಿ ನಡೆಯ ಬೇಕು ಎಂದು backendನಲ್ಲಿ ಕೂತು  ನಾಯಕರಿಗೆ ಹೇಳುವ ರಾಜಕಾರಣಿ ಹೊರತು, ಮಾಸ್ ಲೀಡರ್ ಅಲ್ಲ ಎನ್ನುವುದು ಮೊದಲೇ ತಿಳಿದಿರಲಿಲ್ಲವೇ? ಅಧಿಕಾರದಲ್ಲಿ ಕೂರಿಸಿ ಈಗ ಪುನಃ ಬದಲಾವಣೆ ಎಂದರೆ, ಆಸಮುದಾಯದಲ್ಲಿ ಪುನಃ ಗೊಂದಲ ಸೃಷ್ಟಿಯಾ ಗುವುದರಲ್ಲಿ ಅನುಮಾನವಿಲ್ಲ.
ಬದಲಾವಣೆ ಹೋಗಲಿ, ಬದಲಾವ ಣೆಯ ಮಾತುಗಳು ಕೇಳಿಬಂದರೂ, ಪಕ್ಷಕ್ಕೆ ನಷ್ಟ ಎನ್ನುವುದನ್ನು ರಾಜ್ಯ ನಾಯಕರು ಮರೆಯಬಾರದು. ಆದರೆ ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೊಂದಿದೆ. ಆಡಳಿತ ಪಕ್ಷ ಬಿಜೆಪಿಯಲ್ಲಿ ಆಗುತ್ತಿರುವ ಈ ರಾಜಕೀಯ ಗೊಂದಲ, ಸ್ಥಿತ್ಯಂತರದ ಸಂಪೂರ್ಣ ಲಾಭವನ್ನು ಕಾಂಗ್ರೆಸ್ ಪಡೆಯಬಹುದಾಗಿತ್ತು. ಆದರೆ ಕಾಂಗ್ರೆಸ್ ನಾಯಕರ ನಡೆಯನ್ನು ನೋಡಿದರೆ, ಈ ರೀತಿ ಯಾವುದೇ ನಡೆಯನ್ನು ಅನುಸರಿಸುತ್ತಿಲ್ಲ. ಅದಕ್ಕೆ ಎರಡು ಕಾರಣವಿರ ಬಹುದು, ಒಂದು ‘ಅವರವರೇ ಬಡಿದಾಡಿ ಕೊಳ್ಳುತ್ತಿರುವ ಸಮಯದಲ್ಲಿ, ಮಧ್ಯೆ ನಾವು ಬಾಯಿ ಹಾಕಿ ಸರಕಾರ ಕೆಡಿ ಸುವ ಕೆಲಸವನ್ನು ನಾವೇಕೆ ಮಾಡಬೇಕು‘ ಎನ್ನುವ ಅಭಿಪ್ರಾಯವಿರಬಹುದು.
ಇನ್ನೊಂದು ವಿಷಯ ಏನೆಂದರೆ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್‌ನಲ್ಲಿಯೇ ಸಿದ್ದರಾಮಯ್ಯ ಬಣ-ಡಿ.ಕೆ.ಶಿವಕುಮಾರ್ ಬಣ ಎನ್ನುವ ಆಂತರಿಕ ಬಣ ರಾಜಕೀಯ ಶುರುವಾಗಿದ್ದು, ಅದನ್ನು ನಿಯಂತ್ರಿಸಿಕೊಂಡು ಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಿದರೆ ಸಾಕೆನ್ನುವ ಸ್ಥಿತಿಯಲ್ಲಿ ಅಲ್ಲಿನ ನಾಯಕರಿದ್ದಾರೆ. ಆದ್ದರಿಂದ ಈ ಹಂತದಲ್ಲಿ ಅವರಿಗೆ ತಮ್ಮ ಪಕ್ಷದ ಆಂತರಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವತ್ತ ಮಾತ್ರ ಯೋಚಿಸುತ್ತಿ ರುವ ಸಾಧ್ಯತೆಯೇ ಹೆಚ್ಚಿದೆ.ಕರ್ನಾಟಕ ರಾಜ್ಯ ರಾಜಕಾರಣದ ಮಟ್ಟಿಗೆ ನೋಡುವುದಾದರೆ, ‘ಬಿಜೆಪಿಗೆಅಽಕಾರನಡೆಸಲು ಬರೋಲ್ಲ. ಕಾಂಗ್ರೆಸ್ ಗೆ ಪ್ರತಿಪಕ್ಷ ಸ್ಥಾನದಲ್ಲಿ ಕೂರಲು ಬರುವುದಿಲ್ಲ’ ಎನ್ನುವುದು ಈ ಘಟನಾವಳಿಗಳಿಂದ ಮತ್ತೊಮ್ಮೆ ಸ್ಪಷ್ಟವಾಗುತ್ತದೆ.
ಬಾಕಿಯಿರುವ ಒಂದುವರೆ ವರ್ಷದ ಚುನಾವಣಾ ಅವಧಿಯಲ್ಲಿ ಪಕ್ಷ ಸಂಘಟಿಸುವ, ಸರಕಾರವನ್ನು ಟೇಕ್‌ಆಫ್ ಆಗುವಂತೆ (ಬಹಿರಂಗವಾಗಿ ಕಾಣಿಸುವಂತಾ ದರೂ) ಮಾಡಬೇಕಾದವರೇ, ಒಬ್ಬರ ಕಾಲನ್ನು ಒಬ್ಬರು ಎಳೆಯುತ್ತಾ ಕೂತರೆ ಇದರ ನೇರ ಲಾಭ, 2013ರಲ್ಲಿ ಕಾಂಗ್ರೆಸ್ ಪಡೆದುಕೊಂಡ ರೀತಿಯಲ್ಲಿ ಮತ್ತೊಮ್ಮೆ ಆಗುವುದರಲ್ಲಿ ಸಂದೇಹವೇ ಇಲ್ಲ.