ನಾಗರಹಾವು ರಾಮಾಚಾರಿ; ಇಂದು ಇಷ್ಟವಾಗಲಾರ
ರಾವ್ ಭಾಜಿ
ಪಿ.ಎಂ.ವಿಜಯೇಂದ್ರ ರಾವ್
@.
ಇಂಗ್ಲೆಂಡ್ ತಂಡದ ನಾಯಕ ಆಜಾನುಬಾಹು ಟೋನಿ ಗ್ರೇಗ್ ಸೆಂಚುರಿ ಗಳಿಸಿದ ನಮ್ಮ ವಾಮನಮೂರ್ತಿ ಜಿ.ಆರ್. ವಿಶ್ವನಾಥ್‌ರನ್ನು ಮಗುವಿನಂತೆ ಕೈಯತ್ತಿ ಜೋಗುಳ ಹಾಡಿದ ಪ್ರಸಂಗ ಕ್ರಿಕೆಟ್ ಇತಿಹಾಸದ ಅತ್ಯಪರೂಪದ ದೃಶ್ಯಗಳಂದು.
ಚಲನಚಿತ್ರದ ಆರಂಭ ಕ್ಕೆ ಮುನ್ನ ಪ್ರದರ್ಶಿತವಾಗುತ್ತಿದ್ದ ಫಿಲ್ಮ್ಸ್ ಡಿವಿಷನ್‌ನ ನ್ಯೂಸ್ ರೀಲ್‌ನಲ್ಲಷ್ಟೆ ಲಭ್ಯವಿದ್ದ ಆ ಮನಮೋಹಕ ದೃಶ್ಯವನ್ನು ಮೆಲುಕು ಹಾಕಲು ನಾಗರಹಾವು ಚಿತ್ರವನ್ನು ಎರಡು ಬಾರಿ ನೋಡಿದ್ದೆ. ಪರಿಣಾಮಕಾರಿ ಚಿತ್ರವದು. ಎರಡೆರಡು ಸಲ ನೋಡಿದ್ದಕ್ಕೆ ಮತ್ತಷ್ಟು ಪರಿ ಣಾಮ ಬೀರಿತ್ತು. ಅದನ್ನು ಪ್ರಸಕ್ತ ಸಾಮಾಜಿಕ- ರಾಜಕೀಯ ಸಂದರ್ಭಕ್ಕೆ ಒರೆ ಹಚ್ಚುವ ಪ್ರಯತ್ನ ಸೂಕ್ತ. ತೀಕ್ಷ್ಣವಾಗಿ ಅವಲೋಕಿಸಿದರೆ ಸಂದರ್ಭವೇನೂ ಬದಲಾಗಿಲ್ಲ, ಅವಲೋಕನೆಗೆ ಹೆಚ್ಚು ಕಾರಣಗಳು ಸಿಕ್ಕಿವೆ ಅಷ್ಟೆ. ಅವಲೋಕನೆಯ ಫಲವನ್ನು ಹಂಚಿಕೊಳ್ಳಲು ಅಂದಿಗಿಂತ ಹೆಚ್ಚು ವೇದಿಕೆಗಳಿವೆ. ಮಾಧ್ಯಮದ ಅನುಕೂಲಸಿಂಧು ಮಡಿವಂತಿಕೆಯ ಮಟ್ಟ ಗಮನಾರ್ಹವಾಗೇನೂ ಇಳಿದಿಲ್ಲ.
ಮಡಿವಂತಿಕೆ ಎಂದಾ ಕ್ಷಣ ಕಣ್ಮುಂದೆ ಬರುವುದು (ನಾಗರ ಹಾವಿನ) ರಾಮಾಚಾರಿಯ ಅಪ್ಪ ಮಧ್ವಾ ಚಾರ್ಯರ ಪಾತ್ರ. ಮಾರ್ಗರೆಟ್ ರಾಮಾಚಾರಿಯ ಎರಡನೇ ಆಯ್ಕೆ. ಅದಕ್ಕೆ ಅವಳಮ್ಮನಷ್ಟೇ ವಿರೋಧ ಆಚಾರ್ಯ ರದ್ದೂ. ಸಂಧಾನಕ್ಕೆ ತೆರಳುವ ಚಾಮಯ್ಯ ಮೇಷ್ಟ್ರು ಸಂಪ್ರದಾಯಸ್ಥ ತಂದೆಯನ್ನು ಅವರಿಗೆ ಮಗನ ಹಿತ ಮುಖ್ಯವೋ, ತಮ್ಮ ಮಠದ ತೀರ್ಥ ಮುಖ್ಯವೋ ಎಂದು ಪ್ರಶ್ನಿಸುತ್ತಾರೆ. ಮಠದ ತೀರ್ಥ ಮೇಷ್ಟ್ರೇ, ತೀರ್ಥ ಎಂದು ಗೊಂದಲವಿಲ್ಲದೆ ಘೋಷಿಸುವ ಮಧ್ವಾಚಾರ್ಯರು. ಈ ದೃಶ್ಯವೂ ಮನದಲ್ಲಿ ನಿಂತುಬಿಟ್ಟಿದೆ.
ಸ್ವಜಾತಿಯ ಅಲಮೇಲುವಿನ ಜತೆ ಫಲಿಸದ ಪ್ರೇಮ. ಮಾರ್ಗರೆಟ್ ರಾಮಾಚಾರಿಯ ಎರಡನೇ ಆಯ್ಕೆ. ತಾಯಿ ಮೇರಿಯಮ್ಮನೂ, ಮಾರ್ಗರೆಟ್‌ನಿಂದ ದೂರ ವಾಗದಿದ್ದರೆ ಅದಾವನೋ ನಾಯ್ಡು ಅಂಕಲ್‌ಗೆ ಹೇಳಿ ರಾಮಾಚಾರಿಗೆ ತದುಕಿಸುವ ಬೆದರಿಕೆ ಒಡ್ಡುತ್ತಾಳೆ. ಅವನ ಆ ಆಯ್ಕೆಗೆ ಮುನ್ನ ಮಿತ್ರ ವರದ ತಂದ ದೂರಿನ ಮೇರೆಗೆ ಅವನ ತಂಗಿ ಅಲಮೇಲುವಿನ ತಂಟೆಗೆ ಬಂದ ಜಲೀಲನನ್ನು ಥಳಿಸುತ್ತಾನೆ. ಅಲಮೇಲುವನ್ನು ಜಲೀಲ್ ಚುಡಾಯಿಸುವುದು ಇಂದು ವ್ಯಾಪಕ ವಾಗುತ್ತಿರುವ ಲವ್ ಜಿಹಾದ್‌ನ ಮುನ್ಸೂಚನೆಯಂತೆ ಕಾಣುತ್ತದೆ. ಇಂದಿನ ಬ್ರಾಹ್ಮಣ ಹುಡುಗಿಯರಂತೆ ಅಲಮೇಲು ಅಷ್ಟು ಮುಂದುವರೆದಿರಲಿಲ್ಲ.
ದ್ವಿತೀಯ ಪ್ರಣಯವೂ ಫಲಿಸುವುದಿಲ್ಲ. ಧೈರ್ಯವಂತ ರಾಮಾಚಾರಿ ಮಾರ್ಗರೆಟ್‌ನೊಂದಿಗೆ ಪ್ರಾಣ ಕಳೆದುಕೊಳ್ಳುತ್ತಾನೆ. ಇದು ಘನಘೋರ. ಅತ್ತ ಅಂತರ್ಮ ತೀಯ ವಿವಾಹ ಬೇಡವೆಂದು ಮಧ್ಯಸ್ಥಿಕೆ ವಹಿಸಿದ ಚಾಮಯ್ಯ ಮೇಷ್ಟ್ರ ಜೀವನವೂ, ಸಮಬಲ ಸಾಧಿಸುವ ಈಕ್ವಲೈಜರ್ ಗೋಲ್ ಹೊಡೆವಂತೆ, ಅಂತ್ಯವಾ ಗುತ್ತದೆ. ಪರೀಕ್ಷೆಯಲ್ಲಿ ಪಾಸಾಗಲು ಕಾಪಿ ಮಾಡಿದ ರಾಮಾಚಾರಿಗೆ ಇತಿಹಾಸದ ಅರಿವಿತ್ತೇ? ಅವನು ಚೀಟಿ ಅಂಟಿಸಿಕೊಂಡು ಪರೀಕ್ಷೆ ಬರೆಯಲು ಹೋದದ್ದು ಯಾವ ವಿಷಯಕ್ಕೆ ಸಂಬಂಧಿಸಿದ್ದು? ಇತಿಹಾಸದ ಪರೀಕ್ಷೆಯಂತೂ ಇರಲಾರದು. ದುರ್ಗಕ್ಕೆ ಬಂದ ಶಾಲಾಮಕ್ಕಳಿಗೆ ವೀರ ವನಿತೆ ಒನಕೆ ಓಬವ್ವನ ಹಿರಿಮೆಯನ್ನು ಹಾಡಿ ಹೊಗಳುವ ರಾಮಾಚಾರಿಗೆ ಇತಿಹಾಸದ ಜ್ಞಾನ ಇರಲಿಲ್ಲವೆಂದರೆ ನಂಬುವುದು ಕಷ್ಟ. ಇದ್ದರೂ, ಅದು ದುರ್ಗದ ಇತಿಹಾಸಕ್ಕೆ ಸೀಮಿತವಾಗಿದ್ದಿರ ಬಹುದು. ಅವನಿಗೆ ವಿಸ್ತಾರವಾದ ಓದಿದ್ದೂ, ಕಿರಿಸ್ತಾನರ ಕರಾಳ ಇತಿಹಾಸದ ಅರಿವಿದ್ದೂ, ಮಾರ್ಗರೇಟನ್ನು ಪ್ರೀತಿಸಿದನೇ? .   .
ಕೆಲವು ಪ್ರೇಮಗಳು ದುರಂತದಲ್ಲಿ ಅಂತ್ಯವಾದರೂ ಚರಿತ್ರಾರ್ಹವಾಗುತ್ತದೆ. (ದುರಂತವೇ ಅವುಗಳನ್ನು ಇತಿಹಾಸದ ಪುಟಗಳಿಗೆ ಸೇರಿಸಿಬಿಡುತ್ತವೆ.) ಆದರೆ ಪ್ರೇಮಾಂಕುರಕ್ಕೆ ಚರಿತ್ರೆಯ ಅರಿವು-ಗೊಡವೆಗಳು ಬೇಕಿಲ್ಲ. ಪ್ರೇಮದ ಕುರುಡೇ ಹಾಗೆ. ಇತಿಹಾಸದ ಕುರುಡಾದರೋ ಇಚ್ಛಾ ಪೂರ್ವಕ. ಜನರನ್ನು ಕುರುಡಾಗಿಸುವುದು ದಶಕಗಳ ರಾಜಕೀಯ ಇಚ್ಛೆಯೂ ಹೌದು. ಇತಿಹಾಸದ ಒಂದಷ್ಟು ಪುಟಗಳನ್ನು ಹಾರಿಸೋಣ. ಇತಿಹಾಸವನ್ನೇ ಹಾರಿಸುವವರಿದ್ದಾರೆ. ಇನ್ನು ಐವತ್ತು ವರ್ಷ – ಫಾರ್ವರ್ಡ್ ಮಾಡುವುದು ಅಕ್ಷಮ್ಯವೇನಲ್ಲ. ಅದೇ ದುರಂತಮಯ ಪ್ರಣಯಚಿತ್ರಕ್ಕೆ ಸಾಕ್ಷಿಯಾದ ದುರ್ಗದಲ್ಲಿ ಇತ್ತೀಚೆಗಷ್ಟೆ ಮಿಷನರಿಗಳು ಹೈದರಾಲಿಯ ಸೈನಿಕರಂತೆ ನುಸುಳಿ ೨೦,೦೦೦ಕ್ಕೂ ಹೆಚ್ಚು ಹಿಂದೂಗಳನ್ನು ಮತಾಂತರಿಸಿದ್ದಾರೆ.
ಆ ಬಗ್ಗೆ, ನೇರ ಅನುಭವವಿರುವ ಸ್ಥಳೀಯ ಶಾಸಕರು ನೀಡಿದ ದೂರಿನ ಮೇಲೆ ಜಿಽಕಾರಿಗಳು ತಹಸೀಲ್ದಾರರಿಗೆ ವಿಚಾರಣೆ ನಡೆಸಲು ನಿರ್ದೇಶಿಸಿದ್ದರು. ತಿಪ್ಪೆ ಸಾರಿಸುವು ದೇನೆಂಬುದಕ್ಕೆ ತಹಸೀಲ್ದಾರರ ವರದಿ ಉದಾಹರಣೆಯಾಗಬಲ್ಲದು. ಸ್ವಇಚ್ಚೆಯಿಂದ ಮತಾಂತರವಾಗಿದ್ದಾರೆ ಎಂದು ಷರಾ ಬರೆದಿದ್ದಾರೆ. ಅನಾರೋಗ್ಯದಿಂದ ನರಳುತ್ತಿದ್ದ ಆ ೨೦೦೦೦+ ಮಂದಿ ಗುಣವಾಗಲೆಂದು ಮತಾಂತರವಾದದ್ದಂತೆ! ಆ 20000+ ಜನಕ್ಕೆ ಸಾಮೂಹಿಕವಾಗಿ ಬಡಿದ ರೋಗವಾದರೂ ಯಾವುದು? ಜಿಯೊಂದರ ಸೀಮಿತ ವಿಸ್ತೀರ್ಣದ ಪ್ರದೇಶದಲ್ಲಿ ಅಷ್ಟು ಜನ ಕಾಯಿಲೆ ಬಿದ್ದದ್ದು ಆತಂಕಕ್ಕೆ ಕಾರಣವಲ್ಲವೇ? ಜಿಡಳಿತ ಮಣ್ಣು ತಿನ್ನುತ್ತಿತ್ತಾ? ಒಂದು ವೇಳೆ ಅಷ್ಟೂ ಜನಕ್ಕೆ ಕೋವಿಡ್ ತಗುಲಿದ್ದರೆ ಆಶ್ಚರ್ಯವಾಗುತ್ತಿರಲಿಲ್ಲ, ಅದುವೇ ಮಹಾಬೇನೆಯ ರೀತಿ.
ಮತಾಂತರವಾದದ್ದರಿಂದ ಗುಣವಾದರೆಂದರೆ ಅದು ನಂಬಲ ಸಾಧ್ಯವಾದ ಪವಾಡ. ಅಷ್ಟು ಮಂದಿಗೆ ಎರಚಿದ ಮಂಕು ಬೂದಿಯನ್ನೇ ಬಳಸಿ ವಿಶ್ವಾದ್ಯಂತ ಕೋವಿಡ್ ಪೀಡಿತರನ್ನು ಗುಣಪಡಿಸಬಹುದಾಗಿತ್ತು. ಪವಾಡವನ್ನು ಪ್ರಶ್ನಿಸಿ ತನಿಖೆ ನಡೆಸಬೇಕಾದ ಧರ್ಮನಿರಪೇಕ್ಷ ವಿಚಾರವಾದಿಗಳಿಗೆ ಕಿರಿಸ್ತಾನರ ಬಗ್ಗೆ ಒಲವು,ಹಿಂದೂಧರ್ಮದ ಬಗ್ಗೆ ತಿರಸ್ಕಾರ. ಹಿಂದೂಗಳ ಹಿಂದೂ ವಿರೋಧಿ ಮನಸ್ಥಿತಿಯೇ ದೇಶದ ಆತಂಕಕ್ಕೆ ಕಾರಣ. ಇದು ಕಾಂಗ್ರೆಸ್‌ನ ಕೊಡುಗೆ. ದೇಶದ ಸಮಗ್ರ ವಾತಾವರಣವೇ ಹಿಂದೂಗಳನ್ನು ಹತ್ತಿಕ್ಕಲು ಹೂಡಿದ ಸಂಚಿನಿಂದ ನಿರ್ಮಿತವಾಗಿದೆ.
ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನು ಬಂದೇ ಬಿಟ್ಟಿತೆಂದು ಸಂಭ್ರಮಪಡುವುದು ಸದ್ಯಕ್ಕೆ ಬೇಡ. ಕಾನೂನು ತರುವುದು ಒಂದು ಪ್ರಮುಖ ಹೆಜ್ಜೆಯಷ್ಟೆ. ಬಿಜೆಪಿಯನ್ನೂ ಸೇರಿದಂತೆ ನಮ್ಮ ಪಕ್ಷಗಳಾವುವೂ ಹಿಂದೂಗಳ ಹಿತರಕ್ಷಣೆ ಮಾಡಿಲ್ಲ. ಮೊನ್ನೆ ಅಮೆರಿಕದ ಸ್ನೇಹಿತ ರೊಬ್ಬರು ಹೇಳಿದ್ದನ್ನು ಉಲ್ಲೇಖಿಸುತ್ತೇನೆ, ಹಿಂದೂಗಳಿಗೆ ಹೇಗೆ ಭಾರತೀಯ ಜನತಾ ಪಕ್ಷ ಅನಿವಾರ್ಯವೋ, ಆ ಪಕ್ಷಕ್ಕೂ ಹಿಂದೂಗಳು ಅಷ್ಟೇ ಅನಿವಾರ್ಯ. ಅದನ್ನು ಪಕ್ಷವಿನ್ನೂ ಅರ್ಥ ಮಾಡಿಕೊಂಡಿಲ್ಲ.ಬೆರಳೆಣಿಕೆಯಷ್ಟು ಕೆಲವರನ್ನು ಬಿಟ್ಟರೆ, ನಮ್ಮ ಎಲ್ಲ ಪಕ್ಷಗಳ ಬಹುತೇಕ ನಾಯಕರುಗಳ ಡಿಎನ್‌ಎನಲ್ಲಿ ವ್ಯತ್ಯಾಸವೇನೂ ಇಲ್ಲ. ಎಲ್ಲರೂ ಭ್ರಷ್ಟರೇ, ಎಲ್ಲರೂ ಸ್ವಾರ್ಥಿಗಳೇ. ಆ ಲೆಕ್ಕಕ್ಕೆ ಎಲ್ಲರೂ ದೂರದೃಷ್ಠಿ ಇಲ್ಲದ ಕುರುಡರೇ.
ಹಾಗಾಗಿ, ಸಂತ್ರಸ್ತ ಹಿಂದೂಗಳು ಯಾರ ಹೆಗಲನ್ನೂ ಅವಲಂಬಿಸುವಂತಿಲ್ಲ. ನರಮೇಧಕ್ಕೊಳಗಾದ ತಮ್ಮವರ ಶಾಸ್ತಿ ತಮಗೂ ಆದೀತೆಂದು ಉಟ್ಟಬಟ್ಟೆಯಲ್ಲಿ ಊರು ಬಿಟ್ಟುಬಂದ ಕಾಶ್ಮೀರಿ ಪಂಡಿತರನ್ನು ಮಾಧ್ಯಮವೂ ಸೇರಿದಂತೆ ಪ್ರಜಾಸತ್ತೆಯ ಎಲ್ಲ ಅಂಗಗಳೂ ಕಡೆಗಣಿಸಿದ್ದು ಹಿಂದೂಗಳಾರೂ ಮರೆಯಬಾರದು.ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ, ಮಾಧ್ಯಮಗಳೆಲ್ಲವೂ ಕರ್ತವ್ಯಭ್ರಷ್ಟರಾದದ್ದು ಪರೋಕ್ಷವಾಗಿ ಜಿಹಾದಿಗಳಿಗೆ ನೀಡಿದ ಬೆಂಬಲ. ಕಾನೂನುರೀತ್ಯಾ ರಕ್ಷಣೆ ಒದಗಿಸಲು ಅಶಕ್ತವಾದ ಆಡಳಿತ ಜಿಹಾದಿಗಳಿಗೆ ಹೇಳಿ ಹಿಂದೂಗಳಿಗೆ ಹೊಡೆಸಿದಂತೇ ಸರಿ. ಹಾಂ, ಇದೊಂದು ವಿಷಯ ಹೇಳುವುದಿತ್ತು. ಚಿತ್ರ ನಿರ್ಮಾಣದಲ್ಲೂ ಕೈಹಾಕಿದ್ದ ಪಿ ಲಂಕೇಶ್ ಒಮ್ಮೆ ಷೂಟಿಂಗ್‌ನಲ್ಲಿ ತೊಡಗಿzಗ ಅವರ ಡ್ರೈವರ್ ಎಲ್ಲಾ ಹೋದವನು ಹಿಂತಿರುಗಿದ್ದು ತಡವಾಯಿತಂತೆ.
ಅದಕ್ಕೆ ಕ್ರುದ್ಧರಾದ ಲಂಕೇಶ್ ಅಲ್ಲಿದ್ದ ಯಾರಿಗೋ ಹೇಳಿ ಡ್ರೈವರ್‌ಗೆ ಹೊಡೆಸಿದರಂತೆ. ಕೋಪದಲ್ಲಿ ತಾವೇ ಹೊಡೆದಿದ್ದರೆ ಅದೊಂದು ರೀತಿ, ಆದರೆ ಅವರು ಹೊಡೆಸಿದ್ದು ಸರಿಕಾಣಲಿಲ್ಲ ಎಂದು ಆ ಪ್ರಸಂಗದ ಪ್ರತ್ಯಕ್ಷದರ್ಶಿ ಪತ್ರಕರ್ತರೊಬ್ಬರು ನನಗೆ ಹೇಳಿದ್ದರು. ರಾಮಾಚಾರಿಗೆ ಹೇಳಿ ಜಮೀಲ್ ಪಾತ್ರಧಾರಿ ಅಂಬರೀಶ್‌ಗೆ ಹೊಡೆಸಿದಂತೆ. ಮೇರಿಯಮ್ಮ ನಾಯ್ಡು ಅಂಕಲ್ ಪಾತ್ರ ಧಾರಿ ಶಕ್ತಿಪ್ರಸಾದ್‌ಗೆ ಹೇಳಿ ರಾಮಾಚಾರಿಗೆ ಹೊಡೆಸುತ್ತೇ ನೆಂದು ಬೆದರಿಕೆ ಒಡ್ಡುವಂತೆ. ಮತಾಂತರ ನಿಷೇಧ ಮಸೂದೆಯನ್ನು ವಿರೋಧಿಸುವ ಸಿದ್ಧರಾಮಯ್ಯ, ಡಿಕೆ ಶಿವಕುಮಾರ್, ವಗೈರೆಗಳು ಹಿಂದೂಗಳನ್ನು ಸದೆಬಡಿಯಲಿಕ್ಕೆ ಸೋನಿಯಮ್ಮ ನಿಂದ ನೇಮಕವಾದವರಂತೆ ಕಾಣುತ್ತಾರೆ.
ಹಿಂದೂಗಳನ್ನು ಮತಾಂತರಕೂಪಕ್ಕೆ ದೂಕಲು ಸದಾ ಸಿದ್ಧರಿರುವ ಸಿದ್ದರಾಮಯ್ಯನವರಿಗೆ ನೆನಪಿರಲಿ- ಕಂಡವರ ಮಕ್ಕಳನ್ನು ಬಾವಿಗೆ ದೂಡುತ್ತಿದ್ದ ಅಸಮಂಜವನ್ನೂ ಮುಂದೊಂದು ದಿನ ಅವರನ್ನು ಬದುಕಿಸುವ ಸಾಮರ್ಥ್ಯವಿದ್ದವನು. ಸಿದ್ದರಾಮಯ್ಯರಿಗೆ ಅಂತಹ ಯಾವುದೇ ವಿದ್ಯೆ ಸಿದ್ಧಿಸಿಲ್ಲ. (ಮೊನ್ನೆ ಮಾತನಾಡಿರುವುದು ನೋಡಿದರೆ ವಿದ್ಯೆ ಸಿದ್ಧಿಸಿವುದರ ಬಗ್ಗೆಯೇ ಗುಮಾನಿಯಿದೆ.) ಸಿದ್ದರಾಮಯ್ಯನವರೇ, ನಿಮ್ಮಂಥ ದೃಷ್ಠಿಮಾಂದ್ಯರು ಮಾಡುವ ತಪ್ಪಿಗೆ ದೇಶಈಗಾಗಲೇ ಬೆಲೆ ತೆತ್ತಿದೆ. ವಿಶಾಲವಾಗಿದ್ದ ಭರತ ಖಂಡ ಎಲ್ಲ ದಿಕ್ಕುಗಳಿಂದಲೂ ತುಂಡಾಗಿದೆ ಅಥವಾ ಆಗುವ ಆತಂಕವಿದೆ.
ಇದಕ್ಕೆ ಕಾರಣ ನಿಮ್ಮ ಪಕ್ಷದ ಸಮಯ ಸಾಧಕತನ, ಶಿಕ್ಷಾರ್ಹ ಅಸಡ್ಡೆ. ನಿಮ್ಮ ಪಕ್ಷಮಿತ್ರ ಡಿಕೆ ಶಿವಕುಮಾರರಿಗಂತೂ ಇಡೀ ದೇಶವೇ ಬಿಕರಿಗಿರುವ ಬೃಹತ್ ಜಮೀನಿನಂತೆ ಕಂಡರೂ ಆಶ್ಚರ್ಯವೇನಿಲ್ಲ. ಕಾಂಗ್ರೆಸ್ ಎಂಬ ಹಿರಿಯಕ್ಕನಿಂದ ಶುರುವಾದ ಈ ಚಾಳಿ ಬಿಜೆಪಿ, ಜನತಾ ದಳಕ್ಕೂ ಹಬ್ಬಿದೆ. ದೇಶ/ರಾಜ್ಯ ನಿಮ್ಯಾರ ಪಿತ್ರಾರ್ಜಿತ ಆಸ್ತಿಯೂ ಅಲ್ಲ. ನ್ನೆ (ಭಾನುವಾರ) ನಿಧನರಾದ ನೊಬೆಲ್ ಪುರಸ್ಕೃತ ಆರ್ಚ್ ಬಿಷಪ್ ಡೆಸ್ಮಾಂಡ್ ಟೂಟು ಹೇಳಿದ್ದು ಹೀಗೆ ‘ಮಿಷನರಿಗಳು ಆಫ್ರಿಕಾಗೆ ಬಂದಾಗ ಅವರ ಬಳಿ ಬೈಬಲ್ ಇತ್ತು, ನಮ್ಮ ಬಳಿ ಭೂಮಿ ಇತ್ತು. ನಮ್ಮ ಕೈಗೆ ಬೈಬಲ್ ಕೊಟ್ಟು ಪ್ರಾರ್ಥನೆ ಮಾಡೋಣ ಎಂದರು. ಕಣ್ಮುಚ್ಚಿ ತೆಗೆದಾಗ ಅವರಬಳಿ ಭೂಮಿ ಇತ್ತು, ನಮ್ಮ ಕೈಯಲ್ಲಿ ಬೈಬಲ್ ಉಳಿಯಿತು.’
ಇದು ಆಫ್ರಿಕಾದ ಕತೆಯಷ್ಟೇ ಅಲ್ಲ. ಮೂಲವಾಸಿಗಳನ್ನು ನೀವು ಗೌರವಿಸುವರೇ ಆದಲ್ಲಿ, ಮೂಲ ನಿವಾಸಿಯೊಬ್ಬನನ್ನು ಉದ್ಧರಿಸಿ ಅಮೆರಿಕಾಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಹೇಳಿರುವುದನ್ನು ಕೇಳಿ, ‘ಅವರು ಬೈಬಲ್ ಮತ್ತು ಮತದೊಂದಿಗೆ ಬಂದರು, ನಮ್ಮ ಭೂಮಿ ಕಸಿದುಕೊಂಡರು, ನಮ್ಮ ಆತ್ಮಬಲವನ್ನು ಸದೆಬಡಿದರು. ನಂತರ ಅವರು ಹೇಳಿದ್ದು ’ನಮ್ಮನ್ನು ಉದ್ಧಾರ ಮಾಡಿದ್ದಕ್ಕಾಗಿ ನಾವು ಅವರಿಗೆ ಕೃತಜ್ಞರಾಗಿರಬೇಕೆಂದು.’ ಇವರಾರೂ ಕೋಮುವಾದಿಗಳಲ್ಲ, ಉದಾತ್ತ ಧ್ಯೇಯವಿರಿಸಿಕೊಂಡಿದ್ದವರು. ಅದೇ ಟೂಟು ನುಡಿದಿದ್ದಾರೆ: ನನ್ನ ಹಾಗೂ ನಿಮ್ಮ ಮಾನವೀಯತೆಗೆ ಥಳುಕು ಹಾಕಿಕೊಂಡಿದೆ.
ಏಕೆಂದರೆ, ನಾವಿಬ್ಬರೂ ಒಟ್ಟಿಗಷ್ಟೆ ಮಾನವರಾಗಿರಬವು. ನಿಮ್ಮ ಸ್ವಾರ್ಥ ರಾಜಕಾರಣಕ್ಕೆ ಉದಾರವಾದದ ಮುಖವಾಡ ತೊಡಿಸಿದ್ದು ಸಾಕು. ದೇಶಾಭಿಮಾನಿ ಗಳ ಮುಖಕ್ಕೆ ಕೋಮುವಾದಿಗಳೆಂಬ ಕಪ್ಪು ಬಣ್ಣ ಬಳಿದದ್ದೂ ಸಾಕು. ದೇಶದೆಡೆ ಜನ ಜಾಗೃತರಾಗುವ ಕಾಲ ಬಂದಿದೆ. ಹಿಂದೂಗಳ ಸಹಿಷ್ಣುತೆಯನ್ನು ಮತ್ತಷ್ಟು ಪರೀಕ್ಷೆಗೆ ದೂಡಬೇಡಿ. ಅನ್ಯರು ಮಾನವತೆಯನ್ನು ಕಳೆದುಕೊಂಡದ್ದಕ್ಕೆ ಹಿಂದೂಗಳು ಬೆಲೆ ತೆತ್ತಾಗಿದೆ. ಉದಾರವಾದದ ಫಲವನ್ನು ಯೂರೋಪ್ ಉಣ್ಣುತ್ತಿದೆ. ನಮ್ಮದು ಅವರದ್ದಕ್ಕಿಂತಲೂ ಪುರಾತನವಾದ ನಾಗರಿಕತೆ.
ನಾಗರಿಕತೆಯ ಎಯನ್ನು ಭೇದಿಸುತ್ತಿದ್ದೀರಿ. ಪ್ರಜಾಸತ್ತಾತ್ಮಕ ಗುಣಗಳನ್ನು ಮೈಗೂಡಿಸಿಕೊಂಡಿರುವ ಬಹುಸಂಖ್ಯಾತರು ಹಿಂದೂ ರಾಷ್ಟ್ರಕ್ಕೆ ಬೇಡಿಕೆ ಇಡುವುದಕ್ಕೆ ನೀವೇ ಪೀಠಿಕೆ ಒದಗಿಸುತ್ತಿದ್ದೀರಿ. ಅದೇ ನಿಮ್ಮ ಹಿಡನ್ ಅಜೆಂಡಾ ಆಗಿದ್ದರೆ ಒಳ್ಳೆಯದೇ. ಏಕೆಂದರೆ, ಹಿಂದೂರಾಷ್ಟ್ರದಲ್ಲಿ ಎಲ್ಲರೂ ಸುರಕ್ಷಿತ. ಸುಭಿಕ್ಷೆ ಮರುಕಳಿಸಿದರೂ ಆಶ್ಚರ್ಯವಿಲ್ಲ.
ದಾಖಲಿಸಬೇಕಾದ ಎರಡು ಮುಖ್ಯ ಅಂಶಗಳು:೧. ಇಂದೇನಾದರೂ ನಾಗರ ಹಾವು ಚಿತ್ರ ಬಿಡುಗಡೆಯಾಗಿದ್ದರೆ, ಸಿದ್ದರಾಮಯ್ಯನವರು ಟಿಪ್ಪುವಿನ ಅಪ್ಪ ಹೈದರ್ ಆಲಿ ಸೈನಿಕರನ್ನು ಒಬವ್ವ ಸದೆಬಡಿಯುವ ಕಾರಣಕ್ಕೆ ಅದನ್ನು ಬಹಿಷ್ಕರಿಸಬೇಕೆಂದು ಒತ್ತಾಯಿಸುತ್ತಿದ್ದರು; ಆ ದೃಶ್ಯ ಒಂದು ಕೋಮಿನ ಮನಸ್ಸನ್ನು ನೋಯಿಸುತ್ತದೆಂದು ಎಚ್‌ಡಿಕೆ ವಿರೋಧಿಸುತ್ತಿದ್ದರು.
೨. ನಾಗರಹಾವಿನ ರಾಮಾಚಾರಿಯನ್ನು ಅಂದು ಇಷ್ಟಪಟ್ಟಿದ್ದೆ. ಇಂದು ಆ ಚಿತ್ರದ ನಿಜವಾದ ನಾಯಕನಾಗಿ ನನ್ನ ಕಣ್ಣಿಗೆ ಕಾಣುವುದು ರಾಮಾಚಾರಿಯ ಅಪ್ಪ. ಅನ್ಯ ಮತಕ್ಕಿಂತ ಮಠದ ತೀರ್ಥ ಮುಖ್ಯವೆಂದ ಮಧ್ವಾಚಾರ್ಯ. ಜೀವನದಲ್ಲಿ ಅಂಥ ನಿಯತ್ತಿನ ಹಿಂದೂಗಳಿರುವುದರಿಂದಲೇ ಭಾರತದ ಅಖಂಡತೆ ಇಷ್ಟಾದರೂ ಉಳಿದುಕೊಂಡಿದೆ.