ಷಹರದ ಕನಿಷ್ಠ ಸಂಬಳದ ಭರವಸೆ ರೈತನಿಗೆಲ್ಲಿ ?
ಮಿಶ್ರಾ ಕೃಷಿ
ಕವಿತಾ ಮಿಶ್ರಾ
@.
ಮಾಡಿದ್ದೇ ಕೆಲಸವನ್ನು ಇಡೀ ತಿಂಗಳು ಮಾಡಿದರೆ ಷಹರದ ಜಾಬ್ ಹೋಲ್ಡರ್‌ಗೆ ತಿಂಗಳ ಕೊನೆಗೆ ಹಣ ಬರುತ್ತೆ. ಊಟಕ್ಕಂತೂ ತೊಂದರೆ ಆಗಲ್ಲ. ತುಸು ಹೆಚ್ಚಿನದನ್ನ ಆ ತಿಂಗಳು ಖರೀದಿ ಮಾಡಿದ್ದಾನೆ ಅಂದ್ರೆ ಅವನಿಗೆ ಆ ತಿಂಗಳು ಚೈನಿ ಮಾಡೋಕೆ ಸ್ವಲ್ಪ ತೊಂದರೆ ಆಗಬಹುದು. ಹೊಸತಾಗಿ ಕೃಷಿ ಮಾಡಬೇಕು ಅಂದ್ರೆ ರೈತನಿಗೆ?
ಆ ಮನೆಯಲ್ಲಿ ಯಾವತ್ತೂ ಹಾಲಿಗೆ ಕೊರತೆಯಾಗಿಲ್ಲ, ಆ ಮನೆಯಲ್ಲಿ ಹಸಿವು ಅನ್ನೋ ಪದ ಇದುವರೆಗೆ ಯಾರ ಬಾಯಲ್ಲೂ ಬಂದಿಲ್ಲ,ಮಕ್ಕಳಿಗೆ ಅದೊಂದನ್ನು ಕೊಡಿಸೋದು ಬಾಕಿ ಇದೆ ಅಂತ ಯಾವತ್ತೂ ಆ ತಾಯಿಗೆ ಅನಿಸಲಿಲ್ಲ. ಆದರೆ ಹೀಗಾಗಬಾರದಿತ್ತು. ಹಸಿರು ಸೀರೆ, ಕೈಯಲ್ಲಿ ಝಲ್ ಝಲ್ ಬಳೆಗಳು, ಕಾಸಿನಗಲ ಕುಂಕುಮ, ಬಾಯಲ್ಲಿ ಎಷ್ಟು ಹೊತ್ತಿಗೂ ದೇವರ ಹಾಡುಗಳು.
ಅವಳಿಗೆ, ಮಧ್ಯಾಹ್ನ ತೋಟದಲ್ಲಿ ದುಡಿಯುವ ಗಂಡನಿಗೆ ಬುತ್ತಿಯನ್ನು ನೀಡಿ ಗೊತ್ತಿತ್ತು, ಆತನ ಸೇವೆ ಮಾಡಿ ಗೊತ್ತಿತ್ತು, ಮಕ್ಕಳ ಲಾಲನೆಯನ್ನು ಮಾಡೋದರ ಕುರಿತು ಚೆನ್ನಾಗಿ ತಿಳಿದಿತ್ತು. ಹೊರತಾಗಿ ಯಾವತ್ತೂ ಬ್ಯಾಂಕ್‌ಗೆ ಹೋಗಿ ಹಣ ತಂದವಳಲ್ಲ, ಪಟ್ಟಣದ ದೊಡ್ಡ ಅಂಗಡಿಗೆ ಹೋಗಿ ಮನೆಗೆ ಅವಶ್ಯವಾಗಿರೋ ಸಾಮಗ್ರಿಗಳನ್ನು ತಂದವಳಲ್ಲ.
ಈಗಲೂ ಇಂಥ ಕುಟುಂಬಗಳು ಸಾಮಾನ್ಯವಾಗಿ ಮಲೆನಾಡಿನ ಭಾಗಗಳಲ್ಲಿ ಕಾಣಸಿಗುತ್ತವೆ. ಮೊಬೈಲ್ ಸಿಗ್ನಲ್ ಇಲ್ಲದ ಪ್ರದೇಶ, ಸುತ್ತ ಎಷ್ಟೇ ಕಿವಿಗೊಟ್ಟು ಕೇಳಿದರೂ ಒಂದು ವಾಹನದ ಸದ್ದಿಲ್ಲ, ಏನೋ ಆಗೋಯ್ತು ಯಾರಾದ್ರೂ ಬಂದು ಸಹಾಯ ಮಾಡಿ ಅಂತ ಕೇಳೋಕೂ ಜನರ ಗತಿಯಿಲ್ಲ. ಗಂಡಸರು ಹೇಗೋ ದೂರದಲ್ಲಿರೋ ಮನೆಗಳಿಗೆ ಹೋಗಿ ಸಂಜೆಯ ಸಮಯಕ್ಕೆ ಎಲೆ ಅಡಕೆ ಸೇರಿಸಿಯೋ, ಬೀಡಿ ಸೇದುತ್ತಲೋ ಪಟ್ಟಾಂಗ ಹೊಡೆದು ಬಂದುಬಿಡಬಹುದು, ಆದರೆ ಈಕೆ? ಈಕೆಗೆ ಹಳ್ಳಿಯ ಹಾಡುಗಳೇ ಎಂಟರ್‌ಟೈನ್ ಮೆಂಟ್, ಹಕ್ಕಿಗಳ ಚಿಲಿಪಿಲಿಯೇ ಎಫ್ಎಂ ರೇಡಿಯೊ, ಕೊಟ್ಟಿಗೆಯಲ್ಲಿ ಹಸುಗಳು ಹಾಲನ್ನು ಕೊಡದೇ ಒದೆಯಲು ಕಾಲನ್ನೆತ್ತಿ ಕುಣಿಯುತ್ತಿದ್ದರೆ ಅದೇ ಡಿಸ್ಕೋ, ಪಾನಕವೇ ಮಾದಕ, ತಂಬುಳಿ, ಪಲ್ಯ, ಮಾವಿನ ಕಾಯಿಯ ಭೂತಗೊಜ್ಜೇ ಫೈವ್ ಸ್ಟಾರ್ ಹೋಟೆಲಿನ ಮೃಷ್ಟಾನ್ನ. ಇವಿಷ್ಟೇ.
ತಾನೊಬ್ಬಳು ಗೃಹಿಣಿ ಎನ್ನುವ ಬಿಮ್ಮು ಬಿಟ್ಟರೆ ಅವಳಿಗೆ ಇನ್ನೇನೂ ಬೇಕಿಲ್ಲ. ಅಷ್ಟೇ ಅವಳ ಸಂಸಾರ, ಅದೇ ಅವಳಿಗೆ ಜೀವನದ ಸಾರ, ಅದೇ ಅವಳ ಜೀವನ, ಅದರಿಂದಲೇ ಪರಿಪೂರ್ಣ ಅಂತ ತಿಳಿದುಕೊಂಡಾಕೆ. ಹೀಗಿದ್ದವಳ ಬಾಳಿನಲ್ಲಿ ಬಿರುಗಾಳಿ ಎದ್ದಿತ್ತು. ಬೆಳಗ್ಗೆ ಎದ್ದು ಗಂಡನ ಮುಖ ನೋಡೋಣ ಅನ್ನುವಾಗಲೇ ಆತನ ಶ್ವಾಸ ನಿಂತಿತ್ತು. ಇನ್ನೂ ಮಕ್ಕಳು ನಿದ್ರೆಯಿಂದ ಎದ್ದಿರಲಿಲ್ಲ. ಆತನ ಪಕ್ಕದಲ್ಲಿ ಇಲಿ ಪಾಷಾಣದ ಪೊಟ್ಟಣ ಬಿದ್ದಿತ್ತು. ಆತ ಮೃತಪಟ್ಟ ಸುದ್ದಿ ತಿಳಿದ ಕೆಲವೇ ಹೊತ್ತಿನಲ್ಲಿ ಮನೆಯೆದುರು ಸಾಲಗಾರರ ದಂಡೇ ನೆರೆಯಲಾ ರಂಭಿಸಿತ್ತು.
ಹೇಗಾಗಿರಬೇಡ ಆಕೆಯ ಪರಿಸ್ಥಿತಿ? ನೀವೇ ಒಮ್ಮೆ ಕಲ್ಪಿಸಿಕೊಳ್ಳಿ. ಇವನೇನೋ ಸಾಲಗಾರರಿಂದ ತಲೆ ತಪ್ಪಿಸಿಕೊಳ್ಳೋ ಉದ್ದೇಶದಿಂದ ತನ್ನ ತಲೆಯನ್ನೇ ಸುಡುವಂತೆ ಮಾಡಿಕೊಂಡಿದ್ದ, ಆದರೆ ಅವನ ಹೆಂಡತಿ ಮಕ್ಕಳು? ಹೌದು… ಆತ ಸಾಲ ಮಾಡಿದ್ದು ತನ್ನ ಹೆಂಡತಿ ಮಕ್ಕಳನ್ನು ಸಂತೋಷದಲ್ಲಿ ಇರಿಸಬೇಕು ಎಂಬ ಕಾರಣಕ್ಕೇ ಆದರೂ ವನದುದ್ದಕ್ಕೂ ಹೆಂಡತಿ ಮಕ್ಕಳು ನೋವನ್ನು ಅನುಭವಿಸುವಂತೆ ಮಾಡಿಬಿಟ್ಟಿದ್ದ. ಹಾಗಾಗಿ ಹಲವು ಬಾರಿ ರೈತರಿಗೆ ಹೇಳೋ ಮಾತಂದ್ರೆ ಹಾಸಿಗೆ ಇದ್ದಷ್ಟೇ ಕಾಲು ಚಾಚಿದ್ರೆ ತುಂಬಾ ಒಳ್ಳೆಯದು.
ಇದೊಂದು ಚಿಕ್ಕ ಕಥೆಯಷ್ಟೆ. ಮಾಡಿದ್ದೇ ಕೆಲಸವನ್ನು ಇಡೀ ತಿಂಗಳು ಮಾಡಿದರೆ ಷಹರದ ಜಾಬ್ ಹೋಲ್ಡರ್‌ಗೆ ತಿಂಗಳ ಕೊನೆಗೆ ಹಣ ಬರುತ್ತೆ. ಊಟಕ್ಕಂತೂ ಯಾವುದೇ ತೊಂದರೆಯೂ ಆಗಲ್ಲ, ಅವನಿಗೆ ಅವಶ್ಯಕವಾಗೋದಕ್ಕಿಂತ ಹೆಚ್ಚಿನದನ್ನ ಆ ತಿಂಗಳು ಖರೀದಿಮಾಡಿದಾನೆ ಅಂದ್ರೆ ಅವನಿಗೆ ಆ ತಿಂಗಳು ಚೈನಿ ಮಾಡೋಕೆ ಸ್ವಲ್ಪ ತೊಂದರೆ ಆಗಬಹುದು. ಆದರೆ ಹೊಸತಾಗಿ ಕೃಷಿ ಮಾಡಬೇಕು ಅಂದ್ರೆ ರೈತ ಬಯಸೋದು ಮಳೆ, ಬೆಳೆ, ಶ್ರಮಕ್ಕೆ ತಕ್ಕ ಲಾಭಾಂಶ, ಕಾರ್ಮಿಕರ ಲಭ್ಯತೆ.
ಇವೆಲ್ಲಾನೂ ಸರಿಯಾಗಿತ್ತು ಅಂದ್ರೆ ಅವನಿಗೆ ಕೃಷಿ ಮಾಡೋಕೆ ಇನ್ನೂ ಹೆಚ್ಚಿನ ಆಸಕ್ತಿ ಜತೆಗೆ ಹುಮ್ಮಸ್ಸು ಪುಟಿದೇಳುತ್ತೆ. ತಾನು ಕೃಷಿ ಯಲ್ಲಿ ಸಾಧನೆಯನ್ನೇ ಮಾಡಿಬಿಡಬಹುದು ಅನ್ನುವ ಮನಸ್ಥಿತಿಯೂ ಅವನದ್ದಾಗಿಬಿಡಬಹುದು. ಇದಕ್ಕಿಂತ ಹೆಚ್ಚಿನದ್ದನ್ನು ರೈತ ಸಾಮಾನ್ಯವಾಗಿ ಬಯಸೋದಿಲ್ಲ. ನಮ್ಮ ಪೂರ್ವಜರು ಮೊದಲೆಲ್ಲ ಸಾಂಪ್ರದಾಯಿಕ ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ನಂತರ ತಳಿಗಳು ಬಂದವು.
ಮೊದಲೆಲ್ಲ ಹಲವು ಬಗೆಯ ತಳಿಗಳನ್ನು ಕೃಷಿ ವಿದ್ಯಾಲಯಗಳಲ್ಲಿಯೇ ಪರಿಚಯ ಮಾಡಿ ಕೊಡುತ್ತಿದ್ದರು, ಆದರೆ ಆ ತಳಿಗಳು ಜನರ ಕೈ ಸೇರಿ ಬಿತ್ತನೆಯಾದರೆ ಆಯಾ ಭಾಗದ ಭೌಗೋಳಿಕ ಪರಿಸರಕ್ಕನುಗುಣವಾಗಿ ಇಳುವರಿಯನ್ನೇ ಹೊಂದುತ್ತಿರಲಿಲ್ಲ. ಹಾಗಾಗಿ ರೈತರು ವಿಶ್ವವಿದ್ಯಾಲಯಗಳಿಂದ ದೂರವೇ ಉಳಿದುಬಿಡುತ್ತಿದ್ದರು. ಕೇವಲ ರೈತರು ಅಂತಲ್ಲ, ಕೃಷಿ ವಿಜ್ಞಾನಿಗಳೂ ರೈತರಿಂದ ದೂರವೇ ಇದ್ದರು. ಈಗಲೂ ನಾವು ಕೆಲವು ಕಡೆ ನೋಡೋದಿದೆ. ಬೋನ್ಸಾಯಿ ಗಿಡಗಳು ಅಂತ ಎಲ್ಲಿಂದಲೋ ತಂದು ಭೂಮಿಯಲ್ಲಿ ನೆಟ್ಟಿರುತ್ತಾರೆ. ಆದರೆ ಆ ಗಿಡಗಳು ಮರವಾಗಿ ಬೆಳೆದುನಿಂತ ಉದಾಹರಣೆ ಗಳೂ ಎಷ್ಟೋ ಇದೆ ಅಲ್ವಾ? ಆದರೆ ಈಗ ಕೃಷಿ ವಿದ್ಯಾಲಯಗಳು ಮೊದಲಿಗಿಂತಲೂ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿವೆ.
ಇದಕ್ಕೆ ಅಪವಾದ ಅನ್ನೋ ಹಾಗೆ ಕೆಲವು ವಿಜ್ಞಾನಿಗಳು ತಾವು ಕಂಡುಕೊಂಡಂತಹ ರೀತಿಯನ್ನು ರೈತರ ಜತೆಗೆ ವಿನಿಮಯ ಮಾಡಿ ಕೊಂಡಿದ್ದೂ ಇದೆ. ನಾನು ಕೃಷಿ ಪ್ರಾರಂಭ ಮಾಡುತ್ತಿದ್ದ ದಿನಗಳಲ್ಲಿ ಆಕಸ್ಮಿಕವಾಗಿ ನನ್ನ ತೋಟಕ್ಕೆ ರಾಯಚೂರಿನ ವಿಶ್ವವಿದ್ಯಾಲಯದಹಿರಿಯ ವಿಜ್ಞಾನಿಗಳಾದ ಪ್ರಮೋದ್ ಕಟ್ಟಿಮನಿ ಮತ್ತು ಎಸ್.ಎನ್ ಉಪ್ಪೇರಿ ಬೇಟಿ ನೀಡಿದ್ದರು. ಆ ಸಮಯದಲ್ಲಿ ಮಾವು, ದಾಳಿಂಬೆ, ಮೊಸಂಬಿಯನ್ನು ಬೆಳೆಯುತ್ತಿದ್ದುದರ ಜತೆಗೆ ಕೋಳಿ ಸಾಕಾಣಿಕೆಯೂ ಇತ್ತು. ಹನಿ ನೀರಾವರಿಯನ್ನು ಅಳವಡಿಸಿಕೊಂಡು ತೋಟ ಗಾರಿಕೆಯನ್ನು ಮಾಡುತ್ತಿದ್ದಾಗ ಡ್ರಿಪ್ ಮೂಲಕ ಜೀವಾಮೃತವನ್ನು ನೀಡುವ ದೇಶೀಯ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದೆ.
ಇದನ್ನು ಗಮನಿಸಿದ ವಿಜ್ಞಾನಿಗಳು, ರಾಯಚೂರು ಕೃಷಿ ವಿದ್ಯಾಲಯ ನೀಡುವ ‘ಶ್ರೇಷ್ಠ ಕೃಷಿಕ’ ಪ್ರಶಸ್ತಿಗೆ ನನ್ನ ಹೆಸರನ್ನು ಶಿಫಾರಸುಮಾಡಿದ್ದರು. ಪ್ರಶಸ್ತಿಗಾಗಿ ಹೋದ ದಿನ ನನಗೆ ಕೆವಿಕೆ (ರಾಯಚೂರು)ಯ ಹಿರಿಯ ವಿಜ್ಞಾನಿ ಶ್ರೀಮತಿ ಮೋನೇಶ್ವರಿ ಕಮ್ಮಾರರ ಪರಿಚಯವಾಗಿತ್ತು. ನಂತರದ ದಿನಗಳಲ್ಲಿ ಸ್ವತಃ ಅವರೇ ನಮ್ಮ ತೋಟಕ್ಕೆ ಬಂದು ಈಗಿರುವ ಕೃಷಿ ಪದ್ಧತಿಗೆ ಒಂದಿಷ್ಟು ಸ್ಮಾರ್ಟ್ ಟಚ್ ನೀಡುವ ಕುರಿತು ತಿಳಿಸಿಕೊಟ್ಟಿದ್ದರು. ಅವರ ಸಲಹೆಯಂತೆ ತೋಟದಲ್ಲಿ ಹಲವಾರು ಬದಲಾವಣೆಗಳನ್ನು ಮಾಡುತ್ತಾ ದೀರ್ಘಕಾಲಿಕ ಬೆಳೆಗಳನ್ನೂ ಬೆಳೆಯಲು ಪ್ರಾರಂಭಿಸಿದ್ದೆ.
ಕಾರಣ ಈ ಹಿಂದೆ ನಮ್ಮ ಭೂಮಿಯಲ್ಲಿ ನೀರಿನ ಸೌಲಭ್ಯ ಅಷ್ಟೊಂದು ಇಲ್ಲದಿರುವುದರ ಬಗ್ಗೆ ಹೇಳಿದ್ದೆ. ದೀರ್ಘಾವಧಿ ಕೃಷಿ ಮಾಡಿದರೆ ಕೃಷಿಯಲ್ಲಿ ಯಶಸ್ವಿಯಾಗುತ್ತೇನೆ ಅನ್ನೋ ನಂಬಿಕೆ ನನ್ನದಾಗಿತ್ತು. ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದಾಗಲೇ ಹಲವು ರಾಜ್ಯಗಳಿಗೆ ನನ್ನ ತೋಟದ ನಿರ್ವಹಣೆಯ ಕುರಿತು ಮಾಹಿತಿ ತಲುಪಿತ್ತು. ಆ ಸಮಯಕ್ಕೆ ತೆಲಂಗಾಣ ಸರಕಾರದ ತಜ್ಞರ ತಂಡವೊಂದು ಅಧ್ಯಯನಕ್ಕಾಗಿ ನಮ್ಮ ತೋಟಕ್ಕೆ ಬಂದಿತ್ತು.
ತೋಟಗಾರಿಕಾ ಇಲಾಖೆಯ ಕಾರ್ಯದರ್ಶಿ ಸಿ.ವೆಂಕಟರಾಮ ರೆಡ್ಡಿ ಅಲ್ಲಿಯ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಮತ್ತು ಹಲವು ದೊಡ್ಡ ತಜ್ಞರ ಗುಂಪು ಅದಾಗಿತ್ತು. ಇವರ ಮುಖ್ಯ ಉದ್ದೇಶ, ನನ್ನ ತೋಟದಲ್ಲಿ ಶ್ರೀಗಂಧವನ್ನು ಹೇಗೆ ಬೆಳೆದಿದ್ದಾರೆ ಅನ್ನುವುದರ ಕುರಿತು ಸಮಗ್ರವಾಗಿ ತಿಳಿದುಕೊಳ್ಳೋದು. ಅವರ ಮುಖ್ಯವಾದ ಪ್ರಶ್ನೆಗಳಿಗೆ ನನ್ನ ಉತ್ತರವಾಗಿದ್ದು, ಯಾವುದೇ ಶ್ರೀಗಂಧದ ಮರಗಳ ಆಶ್ರಯ ಸಸ್ಯಗಳು ಶ್ರೀಗಂಧದ ಗಿಡಕ್ಕಿಂತ ಹೆಚ್ಚು ಎತ್ತರವಾಗಿರ ಬಾರದು ಅನ್ನೋದಾಗಿತ್ತು. ಸಾಮಾನ್ಯವಾಗಿ ಆಂದ್ರ ಮತ್ತು ತೆಲಂಗಾಣದ ಹೆಚ್ಚಿನ ರೈತರು ಶ್ರೀಗಂಧ ಕೃಷಿಯ ಕುರಿತು ಸರಿಯಾದ ಅರಿವಿಲ್ಲದೆ ತೊಂದರೆಯನ್ನು ಅನುಭವಿಸುತ್ತಿದ್ದರು.
೨೦೧೯ರ ಜೂ.೬ರಂದು ತೆಲಂಗಾಣ ಸರಕಾರದ ಮಂತ್ರಿಗಳಾಗಿದ್ದ ನಿರಂಜನ ರೆಡ್ಡಿ, ತೋಟಗಾರಿಕಾ ಇಲಾಖೆಯ ನೇತೃತ್ವದಲ್ಲಿ ಶ್ರೀಗಂಧ ಬೆಳೆಗಾರರ ಬೃಹತ್ ಸಮಾವೇಶವನ್ನು ಏರ್ಪಡಿಸಿ ನನ್ನನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿದ್ದರು. ಕಾರ್ಯಕ್ರಮಕ್ಕೆ ಹೋಗುವ ಮೊದಲು ಅಲ್ಲಿನ ರೈತರ ಸಮಸ್ಯೆಗಳ ಕುರಿತು ಅಲ್ಲಿನ ಅಧಿಕಾರಿಗಳ ಜತೆಗೆ ಮಾತಕತೆ ನಡೆಸಿದ್ದೆ. ನಂತರ ಸಮಾವೇಶದಲ್ಲಿಹಲವು ರೀತಿಯಾಗಿ ಶ್ರೀಗಂಧದ ಬೆಳೆಗಳನ್ನು ಬೆಳೆಯುವ ಬಗ್ಗೆ ಹೇಳುತ್ತ, ಆರಂಭಿಕ ದಿನಗಳಲ್ಲಿ ತೋಟಗಾರಿಕಾ ಬೆಳೆಗಳನ್ನು ಆಶ್ರಯ ವಾಗಿ ಬೆಳೆಸಿ ನಂತರದ ದಿನಗಳಲ್ಲಿ ದೀರ್ಘಾವಧಿಯಾಗಿ ಹೇಗೆ ಮಾರ್ಪಾಡು ಮಾಡುವುದು ಅನ್ನೋದರ ಕುರಿತು ಹೇಳಿ, ಆದಾಯವನ್ನು ಹೆಚ್ಚಿಸಿಕೊಳ್ಳುವ ಪರಿಯನ್ನು ತಿಳಿಸಿಕೊಟ್ಟಿದ್ದೆ.
ಅದೇ ದಿನ ತೆಲಂಗಾಣದ ಸಚಿವರು ರೈತರಿಗೆ ಹಲವಾರು ರಿಯಾಯಿತಿಗಳನ್ನು ಘೋಷಣೆ ಮಾಡಿ, ತೆಲಂಗಾಣದಲ್ಲಿ ಶ್ರೀಗಂಧವನ್ನು ಮುಕ್ತವಾಗಿ ಬೆಳೆಸಲು ಬೇಕಾದ ಸವಲತ್ತುಗಳನ್ನು ಮಾಡಿಕೊಡುವುದಾಗಿ ಘೋಷಣೆ ಮಾಡಿದ್ದರು. ನಾವು ಹೇಳುವ ಮಾತುಗಳು ರೈತರಿಗೆ ಅರ್ಥವಾಗುವಂತಿರಬೇಕು. ಹಾಗಾಗಿ ಸಾಮಾನ್ಯವಾಗಿ ನಾನು ಯಾವ ರಾಜ್ಯಕ್ಕೆ ಹೋಗುತ್ತೇನೋ, ಅಲ್ಲಿಯ ರೈತರ ಜತೆ ಅವರ ಭಾಷೆಯಲ್ಲಿಯೇ ಮಾತನಾಡುತ್ತೇನೆ.
ನ್ಯಾಷನಲ್ ಇನ್ನೋವೇಟಿವ್ ಫಾರ್ಮರ್ ಪ್ರಶಸ್ತಿಗೆ ನನ್ನ ಹೆಸರನ್ನು ದೆಹಲಿಯಲ್ಲಿ ಆಯ್ಕೆ ಮಾಡಲಾಗಿತ್ತು. ಆಗ ಅಲ್ಲಿನ ಮಾಜಿ ನಿರ್ದೇಶಕ ರಾಗಿದ್ದ ಎಸ್.ಎನ್ ಪಾಟೀಲರು ಕಾರ್ಯಕ್ರಮದಲ್ಲಿ ಹೇಗೆ ಮತ್ತು ಏನನ್ನು ಮಾತನಾಡಬೇಕು ಅನ್ನೋದರ ಕುರಿತು ಮಾಹಿತಿ ನೀಡಿದ್ದರು. ಪಾಟೀಲರು ಕರ್ನಾಟಕದವರಾಗಿದ್ದು ಆ ಪ್ರಾಂತದಲ್ಲಿ ಅನೇಕ ರೈತೋಪಯೋಗಿ ಕಾರ್ಯಗಳನ್ನು ಮಾಡಿದ್ದರು ಅನ್ನೋದೊಂದು ಹೆಮ್ಮೆ ಯಾವತ್ತೂ ಇರುತ್ತೆ. ದೆಹಲಿಯ ವಿಶ್ವವಿದ್ಯಾಲಯದಲ್ಲಿ ಪರ್ಯಟನೆ ಮಾಡುತ್ತಿದ್ಧಾಗ ಅನೇಕ ರಾಜ್ಯಗಳಿಂದ ಕೃಷಿಯಲ್ಲಿ ಸಾಧನೆ ಮಾಡಿ ಪ್ರಶಸ್ತಿಯನ್ನು ಪಡೆದುಕೊಂಡವರನ್ನು ಪರಿಚಯ ಮಾಡಿಕೊಟ್ಟಿದ್ದರು.
ದಕ್ಷಿಣ ಭಾರತದಲ್ಲಿ ಹವಾಮಾನ ಬೇರೆಯೇ ಆಗಿರೋದ್ರಿಂದ ಗೋಧಿ, ಕಡಲೆ, ಶೇಂಗಾ ಬೆಳೆಗಳ ಇಳುವರಿಯ ಪ್ರಮಾಣವೇ ಬೇರೆ ಮತ್ತು ಸೀಜನ್ ಕೂಡ. ಅಲ್ಲಿನ ಮಾವು ಫೆಬ್ರವರಿ ತಿಂಗಳಿನಲ್ಲಿ ಹೂ ಬಿಡುತ್ತೆ ಮತ್ತು ಹಣ್ಣುಗಳು ಆಗಸ್ಟ್ ಸೆಪ್ಟೆಂಬರ್ ತಿಂಗಳವರೆಗೂ ಸಿಗುತ್ತೆ.ಬಹುತೇಕವಾಗಿ ಉತ್ತರ ಭಾರತ ಪ್ರದೇಶಗದ ಊಟದಲ್ಲಿ ಬಟಾಣಿ ಆಲೂಗಡ್ಡೆಯೇ ಸಿಂಹಪಾಲನ್ನು ಪಡೆದಿರುತ್ತೆ. ನಾವು ಹೇಗೆ ರೊಟ್ಟಿಮುದ್ದೆಯನ್ನು ಇಷ್ಟ ಪಡುತ್ತೇವೋ ಹಾಗೆ ಅಲ್ಲಿನ ಜನರು ಗೋಧಿಯ ಆಹಾರವನ್ನೇ ಇಷ್ಟ ಪಡುತ್ತಾರೆ.
ನವದೆಹಲಿಯ ಮಾಡರ್ನ್ ಅಗ್ರಿಕಲ್ಚರ್ ರಿಸರ್ಚ್ ಇನ್ಸ್ಟಿಟ್ಯೂಟ್‌ನಲ್ಲಿ ಕಲಿಯುತ್ತಿರುವ ಸ್ನಾತಕೋತ್ತರ ವಿದ್ಯಾರ್ಥಿಗಳು ನನ್ನನ್ನು ಬಂದು ಮಾತನಾಡಿಸಿದ್ದನ್ನು ಇನ್ನೂ ಮರೆತಿಲ್ಲ.