ಕಣ್ಣುಪೊರೆಯ ಶಸ್ತ್ರಚಿಕಿತ್ಸೆ ನಡೆದು ಬಂದ ದಾರಿ
ಹಿಂದಿರುಗಿ ನೋಡಿದಾಗ
ಡಾ.ನಾ.ಸೋಮೇಶ್ವರ
1753ರಲ್ಲಿ ಲಂಡನ್‌ನ ಸ್ಯಾಮ್ಯುಯಲ್ ಶಾರ್ಪ್ (1709-1778) ಎಂಬ ವೈದ್ಯನು ಮಸೂರವನ್ನು ಅದರ ಕವಚಸಮೇತ ಹೊರತೆಗೆಯುವ ತಂತ್ರವನ್ನು ರೂಪಿಸಿದ. ಇದು ಕವಚಸಹಿತ ಕಣ್ಣುಪೊರೆಯ ಶಸಚಿಕಿತ್ಸೆ ಎಂದು ಹೆಸರಾಯಿತು.
ಹಿರಿಯ ನಾಗರಿಕರಲ್ಲಿ ಕಂಡುಬರುವ ಅಂಧತ್ವಕ್ಕೆ ಪ್ರಮುಖ ಕಾರಣ ಕಣ್ಣಿನಪೊರೆ (ಕ್ಯಾಟರಾಕ್ಟ್). ಕಣ್ಣಿನಪೊರೆ ಎನ್ನುವ ಶಬ್ದವು ತಪ್ಪುಪರಿಕಲ್ಪನೆಯನ್ನು ಕೊಡುತ್ತದೆ. ಪೊರೆ ಎಂದ ಕೂಡಲೇ, ಅದು ಈರುಳ್ಳಿ ಸಿಪ್ಪೆಯ ಹಾಗಿರಬಹುದು ಎನ್ನುವ ಭಾವನೆ ಬರುತ್ತದೆ.
ವಾಸ್ತವದಲ್ಲಿ ಅಂತಹ ಪೊರೆಯೇನೂ ಕಣ್ಣಿನಲ್ಲಿ ಬೆಳೆಯುವುದಿಲ್ಲ. ಕಣ್ಣಿನ ರಚನೆಯನ್ನು ಗಮನಿಸಿ. ಬೆಳಕು ಮೊದಲು ಕಣ್ಣಿನ ಪಾರಪಟಲದ ಮೂಲಕ ಪ್ರವೇಶಿಸುತ್ತದೆ. ಈ ಬೆಳಕನ್ನು ಮಸೂರವು ಅಕ್ಷಿಪಟಲದ ಮೇಲೆ ಕೇಂದ್ರೀಕರಿಸುತ್ತದೆ. ಬೆಳಕು ಮಸೂರದ ಹಿಂಭಾಗದಲ್ಲಿ ಗಾಜುದ್ರವದ (ವಿಟ್ರಿಯಸ್ ಹ್ಯೂಮರ್) ಮೂಲಕ ಅಕ್ಷಿಪಟಲವನ್ನು ತಲುಪಬೇಕಾಗುತ್ತದೆ. ಈ ಮಸೂರವು ನೂರಕ್ಕೆ ನೂರರಷ್ಟು ಪಾರ ದರ್ಶಕವಾಗಿದ್ದರೆ ಮಾತ್ರ ಬೆಳಕು ಅಕ್ಷಿಪಟಲವನ್ನು ತಲುಪುತ್ತದೆ. ಇದು ಅಪಾರದರ್ಶಕವಾದರೆ, ಅದರ ಮೂಲಕ ಬೆಳಕು ಒಳ ಹಾಯ ಲಾರದು. ಆಗ ಅಂಧತ್ವವು ಉಂಟಾಗುತ್ತದೆ.
ಅಪಾರದರ್ಶಕವಾಗಿರುವ ಮಸೂರವನ್ನು ತೆಗೆದುಹಾಕಿದರೆ, ಬೆಳಕು ಸುಲಭವಾಗಿ ಕಣ್ಣಿನೊಳಗೆ ಹಾಯುತ್ತದೆ. ವ್ಯಕ್ತಿಗೆ ದೃಷ್ಟಿ ಸಾಮರ್ಥ್ಯವು ಮರಳಿ ಬರುತ್ತದೆ. ಹಾಗಾಗಿ ನಮ್ಮ ಪ್ರಾಚೀನ ಜಗತ್ತಿನ ವೈದ್ಯರು ಕಣ್ಣುಪೊರೆಯ ಶಸ್ತ್ರಚಿಕಿತ್ಸೆಯನ್ನು ಮಾಡಲು ಕಲಿತರು. ಇದೊಂದು ರೋಚಕ ಪಯಣವಾಗಿದೆ. ಕಣ್ಣುಪೊರೆಯ ಶಸಚಿಕಿತ್ಸೆಯನ್ನು ಮಾಡುತ್ತಿದ್ದ ಬಗ್ಗೆ ಮೊದಲ ದಾಖಲೆಯು ಬ್ಯಾಬಿಲೋನಿಯನ್ ಸಂಸ್ಕತಿಯಲ್ಲಿ ದೊರೆಯುತ್ತದೆ. ಕ್ರಿ.ಪೂ.೨೨೫೦ರಲ್ಲಿ ಬ್ಯಾಬಿಲೋನಿನ ಅರಸನಾಗಿದ್ದ ಹಮುರಬಿ ಕಣ್ಣೊಪೊರೆಯ ಶಸ್ತ್ರಚಿಕಿತ್ಸೆಗೆ ಶುಲ್ಕವನ್ನು ನಿಗದಿಪಡಿಸಿ ಕಾನೂನನ್ನು ತಂದ.
ರೋಗಿಯೂ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ಮಾಡಿದ ವೈದ್ಯರಿಗೆ ೧೦ ಶೆಕೆಲ್ (ಬೆಳ್ಳಿನಾಣ್ಯ) ನೀಡಬೇಕಾಗಿತ್ತು. ಈಜಿಪ್ಟ್ ದೇಶವನ್ನು ಐದನೆಯ ವಂಶವು ಕ್ರಿ.ಪೂ.2457-2467ವರೆಗೂ ಆಳಿತು. ಈ ಅವಧಿಗೆ ಸೇರಿದಕಾ-ಆಪರ್ಎಂಬ ಹೆಸರಿನ ಹಿರಿಯ ನಾಗರಿಕನಮರದ ಬೊಂಬೆಯೊಂದು ದೊರೆತಿದೆ. ಈ ಬೊಂಬೆಯ ಒಂದು ಕಣ್ಣಿನಲ್ಲಿ, ಕಣ್ಣಿನ ಪೊರೆಯಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಕ್ರಿ.ಶ.2700ರ ಕಾಲದ ಖಾಸೆಕೆಮ್ವಿ ಅರಸನ ಸಮಾಧಿಯಲ್ಲಿ ಕಣ್ಣುಪೊರೆಯ ಶಸ್ತ್ರಚಿಕಿತ್ಸೆಯಲ್ಲಿ ಬಳಸುತ್ತಿದ್ದ ಸೂಜಿಗಳು ದೊರೆತಿದ್ದು, ಅವು ಇಂದು ಲಿವರ್ ಪೂಲ್, ಇಂಗ್ಲೆಂಡಿನ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿದೆ.
ಮುಮ್ಮಡಿ ಟುಟ್ಮಸ್ (ಕ್ರಿ.ಪೂ.1479-1425) ಕಟ್ಟಿಸಿದ ಕೋಮ್ ಓಮ್ಬೊ ದೇವಾಲಯದ ಗೋಡೆಯ ಮೇಲೆ ಕಣ್ಣಿನ ಶಸ್ತ್ರಚಿಕಿತ್ಸೆಗೆಸಂಬಂಽಸಿದ ಉಪಕರಣಗಳ ಚಿತ್ರವಿದೆ. ಪ್ರಾಚೀನ ಬ್ಯಾಬಿಲೋನಿಯ ಹಾಗೂ ಈಜಿಪ್ಷಿಯನ್ ಸಂಸ್ಕ ತಿಯ ವೈದ್ಯರು ಹಿಂದೂಡುವಿಕೆ (ಕೌಚಿಂಗ್) ಎಂಬ ತಂತ್ರವನ್ನು ಬಳಸಿ ಅಪಾರದರ್ಶಕ ಮಸೂರವನ್ನು ನಿವಾರಿಸುತ್ತಿದ್ದರು. ಕಣ್ಣುಗುಡ್ಡೆಯ ಬಿಳಿ ಮತ್ತು ಕಪ್ಪು ಭಾಗವು ಕೂಡುವ ಅಂಚಿನಲ್ಲಿ ಅತ್ಯಂತ ಹರಿತವಾದ ಒಂದು ಸೂಜಿಯನ್ನು ತೂರಿಸುತ್ತಿದ್ದರು. ಆ ಸೂಜಿಯಿಂದ ಅಪಾರದರ್ಶಕ ಮಸೂರವನ್ನು ಕಣ್ಣಿನಿಂದ ಪ್ರತ್ಯೇಕಿಸಿ ಹಿಂದಕ್ಕೆ, ಕೆಳಮುಖವಾಗಿ ದೂಡುತ್ತಿದ್ದರು.
ಈ ವಿಧಾನವು ಕೌಚಿಂಗ್ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಫ್ರೆಂಚ್ ಭಾಷೆಯಲ್ಲಿ ಕೌಚರ್ ಎಂದರೆ ಹಾಸಿಗೆಯ ಮೇಲೆ ಮಲಗಿಸು ಎಂದರ್ಥ. ಇಲ್ಲಿ ಶಸವೈದ್ಯರು ಮಸೂರವನ್ನು ಪ್ರತ್ಯೇಕಿಸಿ, ಅದನ್ನು ಹಿಂದಕ್ಕೆ ಕೆಳಮುಖವಾಗಿ ದೂಡಿದಾಗ, ಅದು ಹಿಂಬದಿಯಲ್ಲಿರುವ ಗಾಜುರಸದ ಮೇಲೆ ಮಲಗುತ್ತಿತ್ತು ಈಗ ಕಣ್ಣಿನ ಒಳಗೆ ಬರುವ ಬೆಳಕು, ನೇರವಾಗಿ ಅಕ್ಷಿಪಟಲವನ್ನು ಮುಟ್ಟಲು ಸಾಧ್ಯವಾಗುತ್ತಿತ್ತು.ಕಣ್ಣು ಕಾಣುತ್ತಿತ್ತು. ಬೆಳಕನ್ನು ನಿಖರವಾಗಿ ಕೇಂದ್ರೀಕರಿಸುವ ಮಸೂರವು ಇಲ್ಲದ ಕಾರಣ, ದೃಷ್ಟಿಯ ಗುಣಮಟ್ಟವು ಅಷ್ಟು ಚೆನ್ನಾಗಿ ಇರುತ್ತಿರಲಿಲ್ಲ. ಜೊತೆಗೆ ಸಾಕಷ್ಟು ಶಸ್ತ್ರಚಿಕಿತ್ಸಾ ತೊಡಕುಗಳು ಸಾಕಷ್ಟಿದ್ದವು.
ಕೆಲವು ಸಲ ಈ ತೊಡಕುಗಳು ಶಾಶ್ವತ ಅಂಧತ್ವವು ಉಂಟಾಗುತ್ತಿತ್ತು. ಈ ಕೌಚಿಂಗ್ ವಿಧಾನವು ಇಂದಿಗೂ ಅಸ್ತಿತ್ವದಲ್ಲಿದೆ. ಪಶ್ಚಿಮಆಫ್ರಿಕಾದ ಕೆಲವು ಜನರು ಇಂದಿಗೂ ನಾಟಿವೈದ್ಯರ ಬಳಿ ಕೌಚಿಂಗ್ ಮೂಲಕವೇ ತಮ್ಮ ಕಣ್ಣುಪೊರೆಯನ್ನು ನಿವಾರಿಸಿಕೊಳ್ಳುತ್ತಿರುವುದು ವಿಚಿತ್ರವಾದರೂ ಸತ್ಯ. ಕ್ರಿ.ಪೂ.600ರ ಆಸುಪಾಸಿನಲ್ಲಿ ವಾಸವಾಗಿದ್ದ ಮಹರ್ಷಿ ಸುಶ್ರುತರು ಕಣ್ಣುಪೊರೆಯನ್ನು ನಿವಾರಿಸಲುಪರಿಣಾಮಕಾರಿಯಾದ ಶಸ್ತ್ರಚಿಕಿತ್ಸಾ ತಂತ್ರವನ್ನು ರೂಪಿಸಿದರು. ಇದರ ವಿವರವು ಸುಶ್ರುತಸಂಹಿತೆಯ ಉತ್ತರತಂತ್ರದ 17ನೆಯ ಅಧ್ಯಾಯದ 55-69ವರೆಗಿನ ಶ್ಲೋಕಗಳಲ್ಲಿ ದೊರೆಯುತ್ತದೆ.
ಸುಶ್ರುತ ಮಹರ್ಷಿಗಳು ಕಣ್ಣುಪೊರೆಯ ಅಪಾರದರ್ಶಕ ಬಿಳಿಯ ಮಸೂರವನ್ನು ಶ್ಲೇಷ್ಮ/ಕ-ಎಂದು ಕರೆದಿರುವರು. ಶಸ್ತ್ರಚಿಕಿತ್ಸೆಯಅಗತ್ಯವಿರುವ ಹಾಗೂ ಅಗತ್ಯವಿಲ್ಲದವರ ಲಕ್ಷಣಗಳನ್ನು ವಿವರಿಸಿರುವರು. ಶಸಚಿಕಿತ್ಸೆಯನ್ನು ಯಾವ ಋತುವಿನಲ್ಲಿ ಮಾಡಬೇಕು, ಯಾವ ಪೂರ್ವ ಸಿದ್ಧತೆಗಳನ್ನು ನಡೆಸಬೇಕು ಎನ್ನುವುದನ್ನು ವಿವರಿಸಿರುವರು. ಮೊದಲು ರೋಗಿಯನ್ನು ಕೂರಿಸಬೇಕು. ಅವನ ಕೈಗಳನ್ನು ಹಿಂದಕ್ಕೆ ಬಲವಾಗಿ ಬಿಗಿದು ಕಟ್ಟಬೇಕು. ಶಸ್ತ್ರಚಿಕಿತ್ಸೆಯನ್ನು ನಡೆಸುವಾಗ ರೋಗಿಯು ತನ್ನ ಎರಡೂ ಕಣ್ಣುಗಳಿಂದ ತನ್ನ ಮೂಗಿನತುದಿಯನ್ನು ನೋಡುತ್ತಿರಬೇಕು. ವೈದ್ಯನು ರೋಗಿಯ ಎಡಗಣ್ಣಿನ ಶಸ್ತ್ರಚಿಕಿತ್ಸೆಯನ್ನು ತನ್ನ ಬಲಗೈಯಿಂದಲೂ, ಬಲಗಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಎಡಗೈಯಿಂದ ಮಾಡಬೇಕು ಎಂದಿರುವರು. ಎಡಗಣ್ಣಿನ ಎರಡೂ ರೆಪ್ಪೆಗಳನ್ನು, ವೈದ್ಯನು ತನ್ನ ಎಡಗೈ ತೋರು ಹಾಗೂ ಮಧ್ಯದ ಬೆರಳಿನಿಂದ ಬೇರ್ಪಡಿಸಿ, ಬಲಗೈಯಿಂದ ಯವ-ವಕ ಎನ್ನುವ ತಾಮ್ರದಿಂದ ಮಾಡಿದ ಉಪಕರಣವನ್ನು, ಕಣ್ಣಂಚಿನ ಮೂಲಕ ಮಸೂರದ ಪೊರೆಯತ್ತ ಚುಚ್ಚಬೇಕು.
ಪೊರೆಯನ್ನು ಹದವಾಗಿ ಚುಚ್ಚಿದಾಗ ಟಪ್ ಎಂಬ ಶಬ್ದವು ಹೊರಡುತ್ತದೆ. ಒಂದು ಹನಿ ನೀರು ಹೊರಬರುತ್ತದೆ. ಆಗ ತಾಯಿಯ ಎದೆಹಾಲಿ ನಿಂದ ಕಣ್ಣನ್ನು ತೊಳೆಯಬೇಕು. ನಂತರ ರೋಗಿಯು ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡ ಕಣ್ಣಿನ ವಿರುದ್ಧ ಮೂಗಿನ ಹೊರಳೆಯ ಮೂಲಕ ಬಲವಾಗಿ ಉಸಿರನ್ನು ಹೊರದೂಡಬೇಕು. (ವಲ್ಸಾಲ್ವ ಮೆನೂವರ್) ಆಗ ಮಸೂರದ ಒಳಗೆ ಅಳೆದುಳಿದಿರಬಹುದಾದ ಮಸೂರದ ಬಿಳಿಯ ಭಾಗವೆಲ್ಲ ಹೊರಬರುತ್ತದೆ. ಮಸೂರವು ಸಂಪೂರ್ಣ ಪಾರದರ್ಶಕವಾಗಿ ಕಾಣುತ್ತದೆ.
ಆಗ ಯವ-ವಕ ಉಪಕರಣವನ್ನು ನಿಧಾನವಾಗಿ ಹೊರತೆಗೆಯಬೇಕು. ಕಣ್ಣಿಗೆ ಶುದ್ಧ ತುಪ್ಪದ ಪಟ್ಟಿಯನ್ನು ಕಟ್ಟಬೇಕು. ಹತ್ತು ದಿನಗಳ ಕಾಲ ಧೂಳು, ಹೊಗೆ ಮುಕ್ತವಾದ ಕತ್ತಲು ಕೋಣೆಯಲ್ಲಿ ಬೆನ್ನ ಮೇಲೆಯೇ ಮಲಗಿರಬೇಕಾಗುತ್ತದೆ. ಈ ಅವಧಿಯಲ್ಲಿ ಕೆಮ್ಮುವುದು, ಸೀನುವುದು, ಆಕಳಿಸುವುದು, ತೇಗುವುದು, ಎಂಜಲು ಉಗುಳುವುದು ಇತ್ಯಾದಿಗಳನ್ನು ಮಾಡಬಾರದು. ಪ್ರತಿ ನಾಲ್ಕು ದಿನಗಳಿಗೊಮ್ಮೆ ಕಣ್ಣಿಗೆ ಹಾಕಿದ ಪಟ್ಟಿಯನ್ನು ತೆಗೆದು, ಕಣ್ಣನ್ನು ಔಷಧಗಳಿಂದ ಸಂಸ್ಕರಿಸಿ, ಮತ್ತೆ ಹೊಸಪಟ್ಟಿಯನ್ನು ಕಟ್ಟಬೇಕಾಗುತ್ತದೆ. ಹತ್ತು ದಿನಗಳ ನಂತರ ದೃಷ್ಟಿಯು ನಿಚ್ಚಳವಾಗಿರುತ್ತದೆ.
ಕೌಚಿಂಗ್ ವಿಧಾನದಲ್ಲಿ ಇಡೀ ಮಸೂರವನ್ನು ಹಿಂದಕ್ಕೆ ತಳ್ಳಿಬಿಡುವರು. ಆದರೆ ಸುಶ್ರುತ ಮಹರ್ಷಿಗಳ ವಿಧಾನದಲ್ಲಿ ಮಸೂರದ ಹೊರ ಕವಚವು ಸ್ವಸ್ಥಾನದಲ್ಲಿರುತ್ತದೆ. ಹಾಗಾಗಿ ಇದನ್ನು ಕವಚ ರಹಿತ ಕಣ್ಣುಪೊರೆಯ ಶಸ್ತ್ರಚಿಕಿತ್ಸೆ (ಎಕ್ಸ್‌ಟ್ರಾ ಕ್ಯಾಪ್ಸ್ಯುಲಾರ್ ಕ್ಯಾಟರಾಕ್ಟ್ ಎಕ್ಸ್‌ಟ್ರಾಕ್ಷನ್) ಎನ್ನಬಹುದು. ಮಸೂರದ ಒಳಗಿರುವ ಅಪಾರದರ್ಶಕ ಬಿಳಿಯ ಭಾಗವು ಮಾತ್ರ ಹೊರಗೆ ಬಂದು, ಕವಚವು ಕಣ್ಣಿನಲ್ಲೇ ಉಳಿಯುವ ಕಾರಣ ಗಾಜುದ್ರವವು ಹೊರ ಸೋರುವುದಿಲ್ಲ. ಹಾಗಾಗಿ ತೊಡಕುಗಳು ಕಡಿಮೆ. ಸುಶ್ರುತ ಮಹರ್ಷಿಗಳ ಈ ವಿಧಾನವು ದೇಶ ವಿದೇಶಗಳಿಗೆ ಹಬ್ಬಿತು. ಕ್ರಿ.ಶ.29ರಲ್ಲಿ ಔಲಸ್ ಕಾರ್ನೀಲಿಯಸ್ ಸೆಲ್ಸಸ್ ಎಂಬ ವ್ಯಕ್ತಿಯು ಲ್ಯಾಟಿನ್ ಭಾಷೆಯಲ್ಲಿ ಬರೆದ ಡಿ ಮೆಡಿಸಿನೆ ಎನ್ನುವ ಕೃತಿಯನ್ನು ಬರೆದ.
ಅದರಲ್ಲಿ ಸುಶ್ರುತ ಮಹರ್ಷಿಗಳ ಶಸಚಿಕಿತ್ಸಾ ವಿವರಣೆಯನ್ನು ಬರೆದು ಯೂರೋಪ್ ಖಂಡಕ್ಕೆ ಪರಿಚಯಿಸಿದ. ಇದು ನಂತರ ಅರಬ್ ಮತ್ತು ಚೀನಾಕ್ಕೆ ವ್ಯಾಪಿಸಿತು. ಆದರೆ ಜಗತ್ತಿನಾದ್ಯಂತ ವೈದ್ಯರು ಸುಶ್ರುತರ ಸುಧಾರಿತ ಶಸಚಿಕಿತ್ಸೆಯ ಬದಲು ಹಳೆಯ ಕೌಚಿಂಗ್ ವಿಧಾನವನ್ನೇ ಹೆಚ್ಚು ಬಳಸುತ್ತಿದ್ದರು. ಏಕೆಂದರೆ ಕೌಚಿಂಗ್ ವಿಧಾನವು ಅತ್ಯಂತ ಸರಳ ಹಾಗೂ ಸುಲುಭವಾಗಿತ್ತು. ಕೊನೆಗೆ ಫ್ರೆಂಚ್ ನೇತ್ರವೈದ್ಯ ಜಾಕ್ವೆಸ್ ಡೆವೀಲ್ (1696-1762) ಏಪ್ರಿಲ್ 8, 1747ರಲ್ಲಿ ಸುಶ್ರುತ ಮಹರ್ಷಿಗಳ ತಂತ್ರವನ್ನು ಮತ್ತೆ ಆವಿಷ್ಕರಿಸಿಹೊಸದಾಗಿ ಪರಿಚಯ ಮಾಡಿದ.
1753ರಲ್ಲಿ ಲಂಡನ್‌ನ ಸ್ಯಾಮ್ಯುಯಲ್ ಶಾರ್ಪ್ (1709-1778) ಎಂಬ ವೈದ್ಯನು ಮಸೂರವನ್ನು ಅದರ ಕವಚಸಮೇತ ಹೊರತೆಗೆಯುವ ತಂತ್ರವನ್ನು ರೂಪಿಸಿದ. ಇದು ಕವಚಸಹಿತ ಕಣ್ಣುಪೊರೆಯ ಶಸ್ತ್ರಚಿಕಿತ್ಸೆ (ಇಂಟ್ರಾಕ್ಯಾಪ್ಸ್ಯುಲಾರ್ ಕ್ಯಾಟರಾಕ್ಟ್ ಎಕ್ಸ್‌ಟ್ರಾಕ್ಷನ್) ಎಂದು ಹೆಸರಾಯಿತು. ಸರ್ ನಿಕೋಲಸ್ ಹೆರಾಲ್ಡ್ ಲಾಯ್ಡ್ ರಿಡ್ಲೆ (1906-2001) ಇಂಗ್ಲಿಷ್ ನೇತ್ರವೈದ್ಯ. ವಿಶ್ವದ ಎರಡನೆಯ ಮಹಾಯುದ್ಧದಲ್ಲಿ ಒಂದು ಪ್ಲಾಸ್ಟಿಕ್ ಚೂರು ಸೈನಿಕನ ಒಡಲಿನಲ್ಲಿ ಹಲವು ವರ್ಷಗಳ ಕಾಲ ಉಳಿದರೂ ಯಾವುದೇ ತೊಂದರೆಯನ್ನು ಕೊಡಲಿಲ್ಲ ಎನ್ನುವುದನ್ನು ಗಮನಿಸಿದ. ಹಾಗಾಗಿ ರಿಡ್ಲೆ ಪಾಲಿಮೀಥೈಲ್ ಮೆಥಾಅಕ್ರಿಲೇಟ್ ಎಂಬ ರಾಸಾಯನಿಕ ವಸ್ತುವನ್ನು ಬಳಸಿಕೃತಕ ಮಸೂರಗಳನ್ನು ರೂಪಿಸಿದ.
ನೈಜ ಮಸೂರವನ್ನು  ತೆಗೆದ ಮೇಲೆ ಅದರ ಸ್ಥಳದಲ್ಲಿ ಕೃತಕ ಮಸೂರವನ್ನು ಇಟ್ಟ. ದೃಷ್ಟಿಯ ಗುಣಮಟ್ಟವು ಸುಧಾರಿಸಿದರೂ ತೊಡಕುಗಳು ಸಾಕಷ್ಟಿದ್ದವು. ಕೊನೆಗೆಕೈ-ಯಿಜ಼ೌ ಎನ್ನುವವನು ಸಿಲಿಕಾನ್ ನಿಂದ ಮಾಡಿದ, ಮಡಚಲು ಬರುವಂತಹ ನಮ್ಯತೆಯಮಸೂರವನ್ನು ಅಳವಡಿಸಿದ. ಇದರ ಗುಣಮಟ್ಟವು ಉತ್ತಮವಾಗಿತ್ತು. ನಂತರದ ದಿನಗಳಲ್ಲಿ ಫಿಶ್‌ಮನ್ ಎಂಬಾತ ಕಣ್ಣುಪೊರೆಯ ಶಸ್ತ್ರಚಿಕಿತ್ಸೆಯಲ್ಲಿ ಬಳಸಬಹುದಾದ ಸ್ಥಳೀಯ ಅರಿವಳಿಕೆಯನ್ನು ರೂಪಿಸಿದ.
ಚಾರ್ಲ್ಸ್ ಕೆಲ್ಮನ್ ಎಂಬಾತ ಮಸೂರವನ್ನು ಸ್ಥಳದಲ್ಲಿಯೇ ನುಣ್ಣಗೆ ಅರೆದು ಅದನ್ನು ಸುಲುಭವಾಗಿ ಹೊರಗೆ ಬಸಿಯುವ-ಕೋ-ಇಮಲ್ಸಿಫಿಕೇಶನ್ ತಂತ್ರವನ್ನು ಜಾರಿಗೆ ತಂದ. ಈಗ ಕಣ್ಣಿನಲ್ಲಿ ಕೇವಲ 3 ಎಂ.ಎಂ. ಛೇದನವನ್ನು ಮಾಡಿ, ಅದರ ಮೂಲಕ ಮಸೂರವನ್ನು ತೆಗೆದು, ಕೃತಕ ಮಸೂರವನ್ನು ಅಳವಡಿಸುವುದು ಸುಲುಭವಾಯಿತು. 2010ರಲ್ಲಿ ಫೆಮ್ಟೋಸೆಕಂಡ್ ಲೇಸರ್ಅಸಿಸ್ಟೆಡ್ ಕ್ಯಾಟರಾಕ್ಟ್ ಸರ್ಜರಿ ಅಸ್ತಿತ್ವಕ್ಕೆ ಬಂದಿತು. ಹೀಗೆ ಕಣ್ಣೊಪೊರೆಯ ಶಸ್ತ್ರಚಿಕಿತ್ಸೆಯು ರೋಚಕ ಘಟ್ಟಗಳಲ್ಲಿ ಬೆಳೆದು ಬಂದಿತು.