ಮತ್ತೆ ಅತಂತ್ರವಾದ ಉತ್ತರ ಕನ್ನಡ: ಸದನದಲ್ಲಿ ಜಿಲ್ಲೆಯ ಸೊಲ್ಲೇ ಇಲ್ಲ
ಪ್ರಸ್ತುತ
ವಿನುತಾ ಹೆಗಡೆ
ರಾಜ್ಯ ಸರಕಾರ ಬೆಳಗಾವಿಯಲ್ಲಿತ್ತು. ಹದನೈದು ದಿನಗಳ ವಿಧಾನ ಮಂಡಲದ ಚಳಿಗಾಲದ ಅಧಿವೇಶದಲ್ಲಿ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಬಗ್ಗೆ ಸಮಗ್ರ ಚರ್ಚೆಯೇ ಆಗಲಿಲ್ಲ ಎನ್ನುವುದು ಒಂದೆಡೆಯಾದರೆ ಉತ್ತರ ಕನ್ನಡದ ಪ್ರಸ್ತಾಪವೇ ಆಗಲಿಲ್ಲ. ವಿಧಾನಸಭೆಯಲ್ಲಿ ಒಟ್ಟು ಚರ್ಚೆ ನಡೆದ ಸುದೀರ್ಘ 52 ತಾಸುಗಳಲ್ಲಿ ಒಂದು ತಾಸು ಕೂಡ ಉತ್ತರ ಕನ್ನಡದ ಜ್ವಲಂತ ಸಮಸ್ಯೆಗಳ, ಇಲ್ಲಿನ ಜನರ ಪರಿಸ್ಥಿತಿಯ ಬಗ್ಗೆ ಚರ್ಚೆ ಆಗಿಲ್ಲ.
ಉಡುಪಿ ಜಿಲ್ಲೆಯ ಅಡಕೆ ಬೆಳೆಗಾರರ ಸಮಸ್ಯೆ, ಮಳೆ ಹಾನಿ ಪರಿಹಾರ ಇತ್ಯಾದಿ ಬಗ್ಗೆ ಪ್ರಸ್ತಾಪವಾದಾಗ ‘ಇದು ಉತ್ತರಕನ್ನಡದ ಸಮಸ್ಯೆ ಕೂಡ. ಅದರ ಬಗ್ಗೆಯೂ ಗಂಭೀರ ಚರ್ಚೆಯಾಗಲಿ. ಅಂತೆಯೇ ಉತ್ತರಕನ್ನಡ ಜಿಲ್ಲೆಯ ಅರಣ್ಯ ಅತಿಕ್ರಮಣದಾರರ ಬಗ್ಗೆ, ಅಕ್ರಮ ಸಕ್ರಮದ ಬಗ್ಗೆ ಪರಾಮರ್ಶಿಸಿ ಸೂಕ್ತ ಕ್ರಮ ಕೈಗೊಳ್ಳಿ’ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಜಿಲ್ಲಾ ಉಸ್ತುವಾರಿ ಸಚಿವ ಹೆಬ್ಬಾರ್ ಅವರಿಗೆ ಸೂಚಿಸಿದ್ದಷ್ಟೇ ಹೊರತು ಅದ್ಯಾವುದೂ ನಂತರ ಕಾರ್ಯರೂಪಕ್ಕೆ ಬರಲೇ ಇಲ್ಲ.
ಗಮನಿಸಬೇಕಾದ ಗಂಭೀರ ವಿಷಯವೆಂದರೆ ಹತ್ತಾರು ಇಲ್ಲಗಳ ನಡುವೆ ಉತ್ತರ ಕನ್ನಡದ ಅತಂತ್ರ ಸ್ಥಿತಿ ಯಥಾ ಪ್ರಕಾರ ಮುಂದುವರಿದಿದೆ. ಯಾವೊಂದೂ ಪ್ರಸ್ತಾವನೆ ಯಾಗಲೂ ಇಲ್ಲ, ಪರಿಹಾರದ ನಿರೀಕ್ಷೆ ಮೂಡಲೂ ಇಲ್ಲ.
ಪ್ರತಿ ವರ್ಷ ನೆರೆ:ಇತ್ತೀಚಿನ ದಿನಗಳಲ್ಲಿ ಉತ್ತರಕನ್ನಡ ಪ್ರತೀ ಮಳೆಗಾಲದಲ್ಲಿ ನೆರೆಗೀಡಾಗುತ್ತಿದೆ. ಗಂಗಾವಳಿ, ಶರಾವತಿ, ಅಘನಾಶಿನಿ, ಕಾಳಿ, ವರದಾ ಇಷ್ಟೂ ನದಿಗಳು ಮಳೆಗಾಲದಲ್ಲಿ ಉಕ್ಕಿ ಹರಿಯುತ್ತಿವೆ. ನದಿ ಪಾತ್ರದ ಅನೇಕ  ಗದ್ದೆ, ತೋಟ, ಮನೆಗಳಿಗೆ ನೀರುನುಗ್ಗುತ್ತಿದೆ. ತಾತ್ಕಾಲಿಕವಾಗಿ ಗಂಜಿ ಕೇಂದ್ರ, ಸ್ಥಳಾಂತರ ಮಾಡುವುದನ್ನು ಬಿಟ್ಟರೆ ಈವರೆಗೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಕಾರ್ಯ ಆಗ್ಲಿ. ಹೀಗೆ ಮಾಡಲಾಗುತ್ತದೆ.
ಕೈಗಾರಿಕೆಗೆ ಒತ್ತು:ಜಿಲ್ಲೆಯಲ್ಲಿ ಪರಿಸರಕ್ಕೆರ ಪೂರಕ ಕೈಗಾರಿಕೆಗಳಿಗೆ ಸಾಕಷ್ಟು ಅವಕಾಶಗಳಿವೆ. ಅದರೆ, ಅಂಥ ಯಾವೊಂದೂ ತಲೆ ಎತ್ತಿಲ್ಲ. ಕರಾವಳಿ ಭಾಗದ ಸಾವಿರಾರು ಜನ ಗೋವಾದ ಕೈಗಾರಿಕೆಗಳಿಗೆ ಉದ್ಯೋಗಕ್ಕೆಂದು ವಲಸೆ ಹೋಗಿದ್ದಾರೆ, ಇಲ್ಲವೇ ಓಡಾಡು ತ್ತಿದ್ದಾರೆ. ಅಂಥ ಕೈಗಳಿಗೆ ಕೆಲಸ ಕೊಡಲು ಅವಕಾಶಗಳೇ ಇಲ್ಲ. ಪರಿಣಾಮ ಸಾವಿರಾರು ಯುವಕರು ಉದ್ಯೋಗಾವಕಾಶ ಅರಸಿ ಬೇರೆ ಬೇರೆ ನಗರಗಳಿಗೆ ಗುಳೆ ಹೋಗಿದ್ದಾರೆ. ಜಿಲ್ಲೆಯ ಪ್ರತಿಭೆ, ಯವಶಕ್ತಿಯನ್ನು ಜಿಲ್ಲೆಯಲ್ಲೇ ಉಳಿಸಿ, ಬಳಸಲು ಕೈಗಾರಿಕೆಗೆ ಒತ್ತು ನೀಡುವ ಅವಶ್ಯಕತೆ ಇದೆ.
ಕಿಂಡಿ ಅಣೆಕಟ್ಟು :ಪ್ರತೀ ಬಾರಿಯೂ ಸಮುದ್ರಕ್ಕೆ ಉಬ್ಬರ ಬಂದಾಗ ಉಪ್ಪು ನೀರು ನದಿಗಳನ್ನು ಸೇರುತ್ತದೆ. ಪರಿಣಾಮ ಸುಮಾರು 10ರಿಂದ 15 ಕಿಲೋಮೀಟರ್‌ವರೆಗಿನ ಸಿಹಿ ನೀರು ಗಹಡಸಾಗಿ ಕೃಷಿ ಭೂಮಿಯನ್ನು ಕುಲಗೆಡಿಸುತ್ತಿದೆ, ಇದರಿಂದ ಗಣನೀಯ ಕೃಷಿ ಭೂಮಿಯ ಮಣ್ಣು ಫಲವತ್ತತೆ ಕಳೆದುಕೊಂಡಿದೆ. ಹೀಗೆ ಭೂಮಿ ಬಂಜರಾಗುವುದನ್ನು ತಪ್ಪಿಸಲು ಕರಾವಳಿ ಭಾಗದ ಕಾಳಿ, ಶರಾವತಿ,ಗಂಗಾವಳಿ ಸೇರಿದಂತೆ ಅನೇಕ ನದಿಗಳಿಗೆ ಕಿಂಡಿ ಅಣೆಕಟ್ಟಿನ ಅವಶ್ಯಕತೆ ಇದೆ.
ಸಂಪರ್ಕಕ್ಕೆ ಪುಟ್ ಬ್ರಿಜ್:ಜಿಲ್ಲೆಯ ಪಶ್ಛಿಘಟ್ಟ ಪ್ರದೇಶಕ್ಕೊಳಪಟ್ಟಿರುವ ಮಲೆನಾಡು ಹಸುರಿನ ಜಿಲ್ಲೆ. ಮಳೆಗಾಲದಲ್ಲಿನ ಮಳೆಯ ಅಬ್ಬರಕ್ಕೆನೂರಾರು ಊರುಗಳು ಹಳ್ಳ, ಕೊಳ್ಳಗಳ ಉಕ್ಕುವಿಕೆಯಿಂದ ಸಂಪರ್ಕ ಕಳೆದುಕೊಳ್ಳುತ್ತವೆ. ಅದಕ್ಕಾಗಿ ಪುಟ್ ಬ್ರಿಜ್ ನಿರ್ಮಾಣದ ಅವಶ್ಯಕತೆ ಇದೆ. ಸರಕಾರ ಇದಕ್ಕಾಗಿ ವಿಶೇಷ ಯೋಜನೆಗೆ ಮುಂದಾಗ ಬೇಕು. ಅಲ್ಲದೇ ಕುಂಟುತ್ತ ಸಾಗಿರುವ ರೈಲ್ವೆ ಯೋಜನೆಗೆ ವೇಗ ಸಿಗಬೇಕಿದೆ. ಇದಕ್ಕೆ ಅಡ್ಡಿಯಾಗಿರುವ ವನ್ಯ ಜೀವಿ ಮಂಡಳಿಗೆ ಇಲ್ಲಿನ ರೈಲ್ವೇ ಯೋಜನೆಯ ಅಗತ್ಯ, ಪರಿಸರಕ್ಕೆ ಪೂರಕವಾಗಿ ಯೋಜನೆಅನುಷ್ಠಾನಗೊಳಿಸುವ ಉದ್ದೇಶವನ್ನು ಸರಕಾರ ಮನಗಾಣಿಸಬೇಕಿದೆ.
ನಿರಾಶ್ರಿತರು:ಸೀ ಬರ್ಡ್, ಚತುಷ್ಪತ ಹೆದ್ದಾರಿ, ಕಾಳಿ ಯೋಜನೆ ನಿರಾಶ್ರಿತರಿಗೆ ಮೂಲ ಸೌಲಭ್ಯ ಒದಗಿಸುವ ಅನಿವಾರ್ಯ ಇದೆ.ಅವರಿಗೆ ಉದ್ಯೋಗದ ಯಾವ ಭರವಸೆಯೂ ಇಲ್ಲ. ಮನೆಗೊಬ್ಬರಂತೆಯಾದರೂ ಉದ್ಯೋಗ ಅವಕಾಶ ಕಲ್ಪಿಸಬೇಕಿದೆ. ನಿರಾಶ್ರಿತರಿ ಗಾಗಿಯೇ ಯೋಜನೆ ಜಾರಿಗೆ ಮಾಡಲು ಮುಂದಾಗಬೇಕಿದೆ.
ನಿರಾವರಿ ಯೋಜನೆ:ಉತ್ತರಕರ್ನಾಟಕದ ನಿರಾವರಿ ಬಗ್ಗೆ ಮಾತನಾಡುವಾಗ ಉತ್ತರಕನ್ನಡದ ಪ್ರಸ್ತಾಪವೇ ಬರುವುದಿಲ್ಲ. ಜಿಲ್ಲೆಯಲ್ಲಿಒಂದೇ ಒಂದೂ ನೀರಾವರಿ ಯೋಜನೆ ಇಲ್ಲ. ಕರಾವಳಿಯಲ್ಲಿ ಭಾಗದಲ್ಲಿ ಬೇಸಿಗೆಯಲ್ಲಿ ನೀರಿನ ತತ್ವಾರ ಇನ್ನಿಲ್ಲದಂತೆ ಕಾಡುತ್ತಿದೆ. ಪ್ರಮುಖ ನದಿಗಳಿದ್ದರೂ ಕೃಷಿಗೆ ಮಳೆಯೊಂದೇ ಆಧಾರ. ನೀರಾವರಿ ಉದ್ದೇಶಕ್ಕೆಂದೇ ಕಾಳಿ, ಅಘನಾಶಿಸಿ, ಗಂಗಾವಳಿಗಳಲ್ಲಿ ಯಾವುದೇ ನದಿಗೆ ಅಣೆಕಟ್ಟು ಕಟ್ಟುವ ಮೂಲಕ ರೈತರ ಕೃಷಿ ಬದುವಿಗೆ ನೀರು ಹರಿಸುವ ಕಾರ್ಯವಾಗಬೇಕು.
ಅರಣ್ಯ ಅತಿಕ್ರಮಣ:ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣದ ಬಗೆಗೆ 30 ವರ್ಷಗಳಿಂದ ಹೋರಾಟ ನಡೆಯುತ್ತ ಬಂದಿದೆ. ಒಟ್ಟು 85 ಸಾವಿರಕುಟುಂಬ ಪಟ್ಟಾಕ್ಕಾಗಿ ಅರ್ಜಿ ಸಲ್ಲಿಸಿವೆ. ಈ ಪೈಕಿ 1330 ಬುಡಕಟ್ಟು ಜನಾಂಗ, ಎಸ್‌ಟಿ ಸಿದ್ದಿಗಳ ಕುಟುಂಬಕ್ಕೆ ಪಟ್ಟಾ ಸಿಕ್ಕಿದೆ. ಶಿರಸಿ,ಯಲ್ಲಾಪುರ, ಸಿದ್ದಾಪುರ, ಭಟ್ಕಳ, ಅಂಕೋಲಾ, ಹೊನ್ನಾವರ, ಮುಂಡಗೋಡ, ಹಳಿಯಾಳ, ಜೋಯಿಡಾ, ತಾಲೂಕಿನಲ್ಲಿ ಅರಣ್ಯಅತಿಕ್ರಮಣ ದಾರರಿದ್ದು, ಕಾರವಾರ ತಾಲೂಕಿನಲ್ಲಿ ಅತೀ ಕಡಿಮೆ.
ಅರಣ್ಯ ಹಕ್ಕು ಕಾಯಿದೆಯಡಿ ಅಕ್ರಮ ಸಕ್ರಮಕ್ಕೆ ಅವಕಾಶವಿದ್ದು, 76 ವರ್ಷದ ದಾಖಲೆಯ ಅಗತ್ಯ ಸೇರಿದಂತೆ ಕೆಲ ಕ್ಲಿಷ್ಟ, ವ್ಯತಿರಿಕ್ತನಿಯಮಗಳಿಂದ ಬಡ ಅತಿಕ್ರಮಣದಾರಿಗೆ ಅನ್ಯಾಯವಾಗುತ್ತಿದೆ. ಇದರ ತಿದ್ದುಪಡಿಯಾಗಬೇಕಿದೆ. ಇಷ್ಟೆಲ್ಲ ಸಮಸ್ಯೆಗಳ ಹೊತ್ತು ಕುಳಿತಿರುವ ಉತ್ತರಕನ್ನಡಕ್ಕೆ ಅಧಿವೇಶನಗಳಂಥ ವೇದಿಕೆಗಳಲ್ಲಿ ಆದ್ಯತೆ ಬೇಕಿದೆ. ಹಾಗದಲ್ಲಿ ಮಾತ್ರ ಜಿಲ್ಲೆಗೆ ನ್ಯಾಯ ದೊರೆಯುತ್ತದೆ. ಮುಂದಿನ ಅಧಿವೇಶದಲ್ಲಾದರೂ ಜಿಲ್ಲೆಯ ಉಸ್ತುವಾರಿ ಹೊತ್ತ ಸಚಿವರು ಸದನದ ಗಮನ ಸೆಳೆದು ಪರಿಹಾರ ದೊರಕಿಸಬೇಕಿದೆ.