ಉತ್ತರ ಕರ್ನಾಟಕಕ್ಕಾದ ಲಾಭವೇನು…?
ಮಣಿಕಂಠ ಪಾ ಹಿರೇಮಠ
ಸಂಪೂರ್ಣ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಆಶಯದೊಂದಿಗೆ ಸುವರ್ಣ ವಿಧಾನಸೌಧವನ್ನು ನಿರ್ಮಾಣ ಮಾಡಿದ್ದು.
ಪ್ರತಿ ವರ್ಷ ಅಧಿವೇಶನ ನಡೆಸುವ ತೀರ್ಮಾನ ಕೈಗೊಳ್ಳಲಾಗಿದ್ದೇ ಈ ಭಾಗಕ್ಕೆ ಸಂಬಂಧಪಟ್ಟ ಅನೇಕ ಇಲಾಖೆಗಳನ್ನು ಸ್ಥಳಾಂತರ ಮಾಡಬೇಕು ಎಂಬುದಕ್ಕಾಗಿ. ಆದರೆ ಅವನ್ನೆಲ್ಲ ವರ್ಗಾಯಿಸುವ ಕಾರ್ಯವನ್ನು ಸರಕಾರಗಳು ಮಾಡುತ್ತಿಲ್ಲ. ಸುವರ್ಣ ಸೌಧದಲ್ಲಿ ಅಧಿವೇಶನ ಎಂದಾಗಲೆಲ್ಲ ಉತ್ತರ ಕರ್ನಾಟಕದ ಜನರಲ್ಲಿ ಅನೇಕ ನಿರೀಕ್ಷೆ ಗಳು ಸಹಜವಾಗಿ ಹುಟ್ಟಿಕೊಳ್ಳುತ್ತವೆ.
ನಮ್ಮ ಭಾಗಕ್ಕೆ ಏನಾದರು ಸಿಗಬಹುದು ಎಂಬ ಅನೇಕ ಕನಸುಗಳು ಹುಟ್ಟಿಕೊಳ್ಳುತ್ತವೆ. ಆದರೆ ಇತ್ತೀಚೆಗೆ ನಡೆದ ಚಳಿಗಾಲದ ಅಧಿವೇಶನ ಅದನ್ನೆಲ್ಲ ಮತ್ತೊಮ್ಮೆ ಹುಸಿ ಗೊಳಿಸಿತು. ಉತ್ತರ ಕರ್ನಾಟಕದ ದೊಡ್ಡ ದೊಡ್ಡ ತಲೆಗಳೇ ಉಭಯ ಸದನ ಗಳಲ್ಲಿದ್ದರೂ ಈ ಭಾಗದ ಬಗ್ಗೆ ಗಂಭೀರ ಚರ್ಚೆ ನಡೆಯದೇ ಹೋದದ್ದು ದುರ್ದೈವ. ಇದರ ಬಗ್ಗೆ ಎಲ್ಲ ಜನಪ್ರತಿನಿಽಗಳು ಆತ್ಮಾವಲೋಕನ ಮಾಡಿಕೊಳ್ಳ ಬೇಕಿದೆ. ಕೆಳಮನೆಯಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ವಿಧಾನಸಭೆಯ ಉಪಸಭಾಧ್ಯಕ್ಷ ಆನಂದ ಮಾಮನಿ.
ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಮೇಲ್ಮನೆಯಲ್ಲಿ ವಿರೋಧ ಪಕ್ಷದ ನಾಯಕರಾದ ಎಸ್. ಆರ್.ಪಾಟೀಲ್ ಮತ್ತು ಸಭಾಪತಿಗಳಾದ ಬಸವರಾಜ್ ಹೊರಟ್ಟಿಯವರು ಉತ್ತರ ಕರ್ನಾಟಕ ಭಾಗದವರೇ. ಆದರೂ ಹತ್ತು ದಿನಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಗಂಟೆ ಮಾತ್ರ ಉತ್ತರ ಕರ್ನಾಟಕ ಭಾಗದ ಚರ್ಚೆ ನಡೆದಿದ್ದು ಎಲ್ಲರೂ ತಲೆತಗ್ಗಿಸುವಂತಹ ಘಟನೆ.
ಇನ್ನು ಅಧಿವೇಶನದ ಕೊನೆಯ ದಿನ ಮಾತನಾಡಿದ ಮುದ್ದೇಬಿಹಾಳ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಅನೇಕ ಶಾಸಕರುಗಳು ನಾಚಿಕೊಳ್ಳುವಂತೆ ಮಾತನಾಡಿದರು. ಅವರು ಮಾತನಾಡುವ ಸಂದರ್ಭದಲ್ಲಿ ಸಮಯದ ಕಾರಣ ನೀಡಿ ಅನೇಕ ಬಾರಿ ಅವರನ್ನು ಕೂರಿಸುವ ಕೆಲಸಕ್ಕೆ ಸಭಾಧ್ಯಕ್ಷರು ಸ್ಥಾನದಲ್ಲಿದ್ದವರು ಪ್ರಯತ್ನಪಟ್ಟರು ಯಾವುದಕ್ಕೂ ಹೆದರದೆ ಈ ಭಾಗದ ಅಭಿವೃದ್ದಿಯ ಬಗ್ಗೆ ತಮಗಿ ರುವ ಬದ್ಧತೆ ಎಂತಹದ್ದೆಂಬುದನ್ನು ಇಡಿ ರಾಜ್ಯಕ್ಕೆ ಮನವರಿಕೆ ಮಾಡಿಕೊಟ್ಟರು.
ಪ್ರತಿ ಅಧಿವೇಶನದಲ್ಲಿ ಭಾಗವಹಿಸುವ ಎಲ್ಲ ಸದಸ್ಯರಲ್ಲಿ ಕೆಲವೇ ಕೆಲವಷ್ಟು ಜನ ಮಾತ್ರ ಮಾತನಾಡುವುದಾದರೆ ಉಳಿದವರ ಅವಶ್ಯಕತೆ ಯೇನು..?. ಆಗಿದ್ದು ಆಗಿ ಹೋಗಿದೆ ಇನ್ನುಮುಂದಾದರೂ ಮೊದಲು ನಡೆಯುವ ಬಿಎಸಿ ಸಭೆಯಲ್ಲಿ ಒಂದು ತಿಂಗಳ ಕಾಲ ಅಧಿವೇಶನ ನಡೆಯುವಂತ ತಿರ್ಮಾನಕ್ಕೆ ಬರಲ್ವಿ ಇಂತಹ ಚರ್ಚೆಗೆ ಇಂತಿಷ್ಟೆ ಸಮಯ, ಇಂತಿಂತವರು ಮಾತನಾಡಲಿ ಎಂಬ ಪಟ್ಟಿಯನ್ನು ಮೊದಲೇ ಸಿದ್ಧಪಡಿಸಲಿ.
ಉತ್ತರ ಕರ್ನಾಟಕಕ್ಕೆಂದು ಹತ್ತು ದಿನವನ್ನಾದರು ಮೀಸಲಿಡಲಿ. ಇನ್ನು ಪ್ರತಿ ಅಧಿವೇಶನಗಳಲ್ಲಿಯೂ ಗಂಭೀರ ವಿಷಯ ಚರ್ಚಿಸುವಾಗ ಸದಸ್ಯರ ಅಭಾವ ಕಂಡು ಬರುತ್ತದೆ. ಸದನದ ಹಿರಿಯ ಸದಸ್ಯರಾದ ಬಿ. ಎಸ್. ಯಡಿಯೂರಪ್ಪ ಮತ್ತು ಸಿದ್ದರಾಮಯ್ಯರಂತಹವರೆಬೆಳಗ್ಗೆಯಿಂದ ಸಂಜೆಯವರೆಗೂ ಹಾಜರಿರುವಾಗಿ ಉಳಿದವರಿಗೇನು….? ಇನ್ನು ಮುಂದಾದರು ಇಂತಹ ಆಲಸ್ಯತನಕ್ಕೆ ಅವಕಾಶ ನೀಡದೆ ಸದನದಲ್ಲಿ ಇಡೀ ದಿನ ಭಾಗವಹಿಸುವಂತಾಗಲಿ.