ಅದನ್ನು ಸಂಪಾದಕನಾದವನು ಎಲ್ಲರಿಗಿಂತ ಮೊದಲು ಓದಿರಬೇಕು !
ನೂರೆಂಟು ವಿಶ್ವ
ವಿಶ್ವೇಶ್ವರ ಭಟ್
ಸಂಪಾದಕ ಮಾಡಬೇಕಾದ ಕೆಲಸವೇ ಇದು. ಆತ ಸುದ್ದಿಯೊಳಗೆ ಹೂತು ಹೋಗಬಾ ರದು. ಇಂದಿನ ಸುದ್ದಿ ನಾಳೆಗೆ ರದ್ದಿ. ಆದರೆ ಓದುಗ ರನ್ನು ಹೊಸ ಎಚ್ಚರದೆಡೆಗೆ, ಹೊಸ ಬೆಳಕಿನೆಡೆಗೆ ಕರೆದುಕೊಂಡು ಹೋಗುವುದು ಆತನ ನೈತಿಕ ಜವಾಬ್ದಾರಿ. ಆಗಲೇ ಪತ್ರಿಕೆ ತನ್ನ ಸೀಮಿತ ಅರ್ಥವನ್ನು ದಾಟಿ, ಸಮಷ್ಟಿ ಪ್ರeಯ ಬದುವಿನಲ್ಲಿ ದಾರಿ ತೋರಿಸುತ್ತ ಹೋಗುತ್ತದೆ.
‘ಜಗತ್ತಿನ ಯಾವುದೇ ಮೂಲೆಯಲ್ಲಿ ಉತ್ತಮವಾದ ಪುಸ್ತಕ ಬಿಡುಗಡೆಯಾದರೂ, ಅದು ಸಾಧ್ಯವಾದಷ್ಟು ಶೀಘ್ರ ನಿಮ್ಮ ಟೇಬಲ್ ಮೇಲಿರ ಬೇಕು. ಅದನ್ನು ನೀವು ಎಲ್ಲರಿಗಿಂತ ಮೊದಲು ಓದಿರಬೇಕು ಮತ್ತು ಸಾಧ್ಯವಾದರೆ ಅದರ ಬಗ್ಗೆ ನೀವು ಪತ್ರಿಕೆಯಲ್ಲಿ ಬರೆದಿರಬೇಕು.’ ಈ ಮಾತನ್ನು ಹೇಳಿದವರು ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯ ಸಂಪಾದಕ ರಾಗಿದ್ದ ಶಾಮಲಾಲ.
ಅವರ ಈ ಮಾತು ಐವತ್ತು ವರ್ಷಗಳ ಹಿಂದಿನ ಅನೇಕ ಸಂಪಾದಕರಿಗೆ ವೇದವಾಕ್ಯ ವಾಗಿತ್ತು. ಅವರ ನಂತರ ಆ ಪತ್ರಿಕೆಗೆ ಸಂಪಾದಕರಾದ ಗಿರಿಲಾಲ್ ಜೈನ ಕೂಡ ಹಾಗೇ ಇದ್ದರು. ಶಾಮಲಾಲ್ ಅವರು fictionಮತ್ತು -fictionಎರಡೂ ಪ್ರಕಾರಗಳ ಕೃತಿಗಳನ್ನು ಓದುತ್ತಿದ್ದರು. ಭಾರತದಲ್ಲಿ ಯಾರೇ ಪುಸ್ತಕ ಬರೆದರೂ ಶಾಮಲಾಲ್ ಅವರಿಗೆ ಪುಸ್ತಕಗಳನ್ನು ಕಳಿಸಿಕೊಡುತ್ತಿದ್ದರು. ಅವರೂ  ವಾರ ಕ್ಕೊಮ್ಮೆ ಮುಂಬೈನ ಸ್ಟ್ರಾಂಡ್ ಪುಸ್ತಕ ಮಳಿಗೆಗೆ ಹೋಗಿ ಹೊಸ ಕೃತಿಗಳನ್ನು ಖರೀದಿಸಿ, ಅವನ್ನು ಓದಿ ಪತ್ರಿಕೆಗಳಲ್ಲಿ ಬರೆಯುತ್ತಿದ್ದರು.
ಶಾಮಲಾಲ್ ಪುಸ್ತಕ ಓದುತ್ತಿದ್ದರೆ, ಸಹೋದ್ಯೋಗಿಗಳು ಅವರನ್ನು ಕಾಣಲು ರೂಮಿಗೆ ಹೋಗುತ್ತಿರಲಿಲ್ಲ. ಸಂಪಾದಕೀಯ ಪುಟ ಮತ್ತು ಭಾನುವಾರದ ಪುರವಣಿ, ಅದರಲ್ಲೂ ಮುಖ್ಯವಾಗಿ ಸಾಹಿತ್ಯ ವಿಮರ್ಶೆ ಪುಟದ ಬಗ್ಗೆ ಅವರಿಗೆ ವಿಶೇಷ ಆಸ್ಥೆಯಿತ್ತು. ಮುಖಪುಟ ಮತ್ತು ದೈನಂದಿನ ಸುದ್ದಿ ಬಗ್ಗೆ ಅವರು ಅಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಇಂದಿಗೂ ಅವರ ಅಂಕಣಗಳು, ಸಂಪಾದಕರೊಬ್ಬರು ಬರೆದಅತ್ಯುತ್ತಮ ಸಾಹಿತ್ಯಕ ಒಳನೋಟಗಳಿರುವ ಬರಹಗಳೆಂದೇ ಮಾನ್ಯತೆ ಪಡೆದಿವೆ. ಆ ದಿನಗಳಲ್ಲಿ ಪುಸ್ತಕ ಓದುವ ಅಭ್ಯಾಸವಿಲ್ಲದ ಮತ್ತು ಪುಸ್ತಕ ಬರೆಯದವರನ್ನು ಸಂಪಾದಕ ಹುದ್ದೆಗೆ ಪರಿಗಣಿಸುತ್ತಿರಲಿಲ್ಲ.
ಅಮೆರಿಕ, ಬ್ರಿಟನ್ ಸೇರಿ ದಂತೆ, ಜಗತ್ತಿನ ಮುಂಚೂಣಿ ಲೇಖಕರು, ಸಾಹಿತಿಗಳು ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಳೊಂದಿಗೆ ಅವ ರಿಗೆ ಸಂಪರ್ಕವಿತ್ತು. ಮಹಾರಾಷ್ಟ್ರದ ಮುಖ್ಯಮಂತ್ರಿ ಅವರನ್ನು ಕಾಣಲು ಬಂದರೂ, ಶಾಮಲಾಲ್ ಪುಳಕಗೊಳ್ಳುತ್ತಿರ ಲಿಲ್ಲ, ಆದರೆ ಕವಿ, ಸಾಹಿತಿ ಬಂದರೆ ತಾಸುಗಟ್ಟಲೆ ಹರಟೆ ಹೊಡೆಯುತ್ತಿದ್ದರು ಎಂದು ಅಂಕಣಕಾರ ಜಗ್ ಸುರೈಯಾ ಬರೆದಿದ್ದುನೆನಪಾಗುತ್ತದೆ. ಅವರನ್ನು ಓದುಗರನ್ನಷ್ಟೇ ಅಲ್ಲ, ಸಾಹಿತಿಗಳನ್ನು ಸಹ ಮುನ್ನಡೆಸಿದ ಸಂಪಾದಕ ಎಂದು ಕರೆಯುವುದುಂಟು.
ಶಾಮಲಾಲ್ ನಂತರ ಕೆಲಕಾಲ ಆ ಪತ್ರಿಕೆಯ ಸಂಪಾದಕರಾದ ಡಾಮ್ ಮೊರೇಸ್ ಸ್ವತಃ ಕವಿಯಾಗಿದ್ದರು. ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ದಿಗ್ಗಜ ಸಂಪಾದಕರ ಬ್ಬರು ಎಂದು ಕರೆಯಿಸಿಕೊಂಡಿದ್ದ ಫ್ರಾಂಕ್ ಮೊರೇಸ್ ಅವರ ಮಗನಾದ ಡಾಮ್ ಮೊರೇಸ್ ಅವರನ್ನು ಭಾರತೀಯ ಇಂಗ್ಲಿಷ್ ಸಾಹಿತ್ಯದ ದಿಕ್ಕು ಬದಲಿಸಿದವರು ಮತ್ತು ದೇಶಿಯ ಇಂಗ್ಲಿಷ್ ಸಾಹಿತಿಗಳನ್ನು ಓದುಗರ ಸನಿಹಕ್ಕೆ ಕರೆತಂದವರುಎಂದು ಹೇಳುವುದುಂಟು. ಸ್ವತಃ ಡಾಮ್ ಮೊರೇಸ್ ಇಂಗ್ಲೀಷಿನಲ್ಲಿ ಮೂವತ್ತು ಪುಸ್ತಕಗಳನ್ನು ಬರೆದಿದ್ದರು.
ಅವರನ್ನು ಕಾಣಲು ಹೆಚ್ಚಾಗಿ ಸಾಹಿತಿಗಳು ಮತ್ತು ಪ್ರಕಾಶಕರು ಬರುತ್ತಿದ್ದರು. ಅವರೊಂದಿಗೆ ಖುಷಿಯಿಂದ ಮಾತಾಡಿ ಕಳಿಸುತ್ತಿದ್ದರು. ಉಳಿದವರ ಜತೆ ಕೇವಲ ವ್ಯಾವಹಾರಿಕ ಮಾತು. ಮುಂಬೈಯಲ್ಲಿ ಹಲವು ಸಾಹಿತ್ಯಕ ಕಾರ್ಯಕ್ರಮ ಸಂಘಟಿಸಲು ಡಾಮ್ ನೆರವಾಗು ತ್ತಿದ್ದರು. ಶಾಮಲಾಲ್ ಮೇಲೆ ಹೇಳಿದ ಮಾತನ್ನು ಅಕ್ಷರಶಃ ಪಾಲಿಸಿದವರು ಖುಷವಂತ ಸಿಂಗ್. ಜಗತ್ತಿನ ಯಾವ ಭಾಗದಲ್ಲಿಯೇ ಪುಸ್ತಕ ಬಿಡುಗಡೆಯಾದರೂ ಅವರ ಟೇಬಲ್ ಮೇಲಿರುತ್ತಿತ್ತು.
ಅವು ಅಮೆಜಾನ್, ಫ್ಲಿಪ್ ಕಾರ್ಟ್ ಆನ್ ಲೈನ್ ಸೇವೆ ಇಲ್ಲದ ದಿನಗಳು. ದೇಶಿಯ ಲೇಖಕರು ಅವರಿಗೆ ಗೌರವ ಪ್ರತಿ ಕಳಿಸುವುದನ್ನು ಮರೆಯುತ್ತಿರಲಿಲ್ಲ. ದಿಲ್ಲಿಯ ಖಾನ್ ಮಾರ್ಕೆಟ್‌ನ ಪುಸ್ತಕದ ಅಂಗಡಿಗಳಲ್ಲಿ ಅವರು ವಾರಕ್ಕೊಮ್ಮೆಯಾದರೂ ತಪ್ಪದೇ ಕಾಣಿಸಿಕೊಳ್ಳು ತ್ತಿದ್ದರು. ಹೊಸ ಕೃತಿಗಳ ಬಗ್ಗೆ ಪುಸ್ತಕದ ಅಂಗಡಿಯವರಿಗೂ ಗೊತ್ತಾಗದ ವಿಷಯಗಳು ಖುಷವಂತ್ ಸಿಂಗ್‌ಗೆ ಗೊತ್ತಾಗುತ್ತಿದ್ದವು.  ಅದರಲ್ಲೂ ಅವರು ಹೊಸ ಲೇಖಕರನ್ನು ಪ್ರೋತ್ಸಾಹಿ ಸುತ್ತಿದ್ದ ರೀತಿ ಅನನ್ಯವಾಗಿತ್ತು. ಅವರು ಸಂಪಾದಕರಾಗಿದ್ದ ‘ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’, ‘ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆಗಳನ್ನು ಹೊಸ ಹೊಸ ಲೇಖಕರಿಗೆ ತೆರೆದಿಟ್ಟ ಹೆಗ್ಗಳಿಕೆ ಅವರದು. ನಂತರ ಅವರ ಅಂಕಣಗಳಲ್ಲಂತೂ ಹೊಸ ಪುಸ್ತಕ ಮತ್ತು ಲೇಖಕರ ಬಗ್ಗೆ ಒಂದಾದರೂ ಪ್ರಸ್ತಾಪವಿರುತ್ತಿತ್ತು.
ಅಷ್ಟರಮಟ್ಟಿಗೆ ಖುಷವಂತ್ ಸಿಂಗ್ ಪುಸ್ತಕ ಪ್ರೇಮಿಯಾಗಿದ್ದರು. ಅವರ ಸಂಪರ್ಕ ಮತ್ತು ಪ್ರಭಾವಕ್ಕೆ ಬಂದ ನೂರಾರು ಜನ ಇಂದು ಇಂಗ್ಲಿಷ್‌ನಲ್ಲಿ ಬರೆಯುತ್ತಿರುವುದನ್ನು ಕಾಣಬಹುದು. ಶಾಮಲಾಲ್ ಮಾತನ್ನು ಸಮರ್ಥಿಸಿದ ಕನ್ನಡ ಸಂಪಾದಕರಲ್ಲಿ ಅಗ್ರಗಣ್ಯರೆಂದರೆ ವೈಎನ್ಕೆ ಮತ್ತು ಲಂಕೇಶ್. ಪುಸ್ತಕ ಮಾರುಕಟ್ಟೆಗೆ ಬಿಡುಗಡೆಯಾಗುವುದಕ್ಕಿಂತ ಒಂದು ತಿಂಗಳ ಮೊದಲೇ ವೈಎನ್ಕೆ ಅವರಿಗೆ ಹೇಗೋ ಗೊತ್ತಾಗುತ್ತಿತ್ತು. ಆಗಲೇ ಆ ಪುಸ್ತಕದ ಪ್ರಮುಖ ಅಂಶಗಳು ಅವರಿಗೆ ಹೇಗೋ ತಿಳಿಯುತ್ತಿತ್ತು. ಭೈರಪ್ಪನವರು ಹೊಸ ಕಾದಂಬರಿ ಬರೆಯುತ್ತಿದ್ದಾರಂತೆ, ಲಂಕೇಶ್ ಆತ್ಮಕಥೆ ಬರೆದು ಮುಗಿಸಿದ್ದಾರಂತೆ, ಡಿ.ಆರ್.ನಾಗರಾಜ್ ಹೊಸ ಕೃತಿ ಮುದ್ರಣಕ್ಕೆ ಹೋಗಿದೆಯಂತೆ, ಸುಮತೀಂದ್ರ ನಾಡಿಗ್ ಹೊಸ ಪುಸ್ತಕದ ಒಂದು ಅಧ್ಯಾಯವನ್ನು ಇಂದು ಓದಿ ಹೇಳಿದರು, ರಾಮಚಂದ್ರ ಶರ್ಮ ಅವರ ಕವನ ಸಂಕಲನಕ್ಕೆ ಮುನ್ನುಡಿ ಬರೆಯುವಂತೆ ಅನಂತಮೂರ್ತಿಯವರಿಗೆ ಹೇಳಿದ್ದಾರಂತೆ, ಗಿರೀಶ್ ಕಾರ್ನಾಡರ ಹೊಸ ನಾಟಕ ಭಿನ್ನವಾಗಿದೆ ಯಂತೆ, ಕುರ್ತ ಕೋಟಿ ಡಿಫೆರೆಂಟ್ ಆಗಿ ಬರೆದಿದ್ದಾರಂತೆ ಎಂದು ಅವರು ಮೊದಲೇ ಚಪ್ಪರಿಸುತ್ತಿದ್ದರು. ಯಾವಾಗ ಅದನ್ನು ಎತ್ತಿ ಓದುತ್ತೇನೋ ಎಂಬಂತೆ ಚಡಪಡಿಸುತ್ತಿದ್ದರು.
ಪುಸ್ತಕ ಸಿಕ್ಕಿದ ಒಂದೆರಡು ದಿನಗಳೊಳಗೆ ಅದನ್ನು ಓದದಿದ್ದರೆ ಅವರಿಗೆ ಸಮಾಧಾನವಾಗುತ್ತಿರಲಿಲ್ಲ. ವೈಎನ್ಕೆ ಏನು ಹೇಳುತ್ತಾರೆ ಎಂದುಆ ಲೇಖಕರೂ ಕಾದು ಕುಳಿತಿರುತ್ತಿದ್ದರು. ಜಗತ್ತಿನಲ್ಲಿ ಎಲ್ಲಿಯೇ ಹೊಸ ಪುಸ್ತಕ ಬಂದರೂ ಅವು ವೈಎನ್ಕೆ ಆಂಟೆನಾಕ್ಕೆ ಸಿಕ್ಕಿ ಬೀಳುತ್ತಿದ್ದವು. ಅದನ್ನು ಅವರು ಶ್ರಾದ್ಧದ ಕಾಗೆಯಂತೆ, ತಮ್ಮ ನೂರಾರು ಸ್ನೇಹಿತರಿಗೆ, ಸಾಹಿತ್ಯಾಸಕ್ತರಿಗೆ ತಿಳಿಸುತ್ತಿದ್ದರು. ಲಂಕೇಶ್ ಕೂಡ ಈ ಕೆಲಸ ವನ್ನು ಸಂಪಾದಕರಾಗಿ ಅಷ್ಟೇ ನಿಷ್ಠೆ ಮತ್ತು ಪ್ರೀತಿಯಿಂದ ಮಾಡುತ್ತಿದ್ದರು. ಅವರ ಟೇಬಲ್ ಕೂಡ ಹೊಸ ಪುಸ್ತಕಗಳಿಂದ, ಭತ್ತದ ಪೈರಿನ ಮೆದೆಗಳಿಂದ ತುಂಬಿದ ನಾಟಿಕಣ ದಂತೆ ಗೋಚರಿಸುತ್ತಿತ್ತು.
ಲಂಕೇಶ್ ಅವನ್ನೆಲ್ಲ ಓದಿ, ಆ ಬಗ್ಗೆ ಬರೆಯುತ್ತಿದ್ದರು. ಲಂಕೇಶ್ ಏನು ಬರೆಯುತ್ತಾರೆಂದು ಸಾಹಿತ್ಯಕ ವಲಯ ಉಸಿರು ಬಿಗಿ ಹಿಡಿದು ಕಾಯುತ್ತಿತ್ತು. ಆ ವರ್ಷದಲ್ಲಿ ತಾವು ಓದಿದ ಪುಸ್ತಕಗಳನ್ನು ಆಧರಿಸಿ, ಪುಸ್ತಕ ವಿಮರ್ಶೆಯನ್ನೂ ’ಲಂಕೇಶ್ ಪತ್ರಿಕೆ’ ಕವರ್ ಪೇಜ್ಸ್ಟೋರಿ ಯನ್ನಾಗಿ ಮಾಡಿದ್ದರು. ಇಡೀ ಕನ್ನಡ ಸಾಹಿತ್ಯ ವಲಯದ ಮೇಲೆ ಲಂಕೇಶ್ ಅವರು ಬಾಹ್ಯಾಕಾಶ ನೌಕೆಯಂತೆ ಹಾರಾಡು ತ್ತಿದ್ದಂತೆ ಭಾಸವಾಗುತ್ತಿತ್ತು. ಸಾಹಿತಿಗಳ ಸಣ್ಣತನ, ಹುಳುಕು, ಮನೆವಾರ್ತೆ, ಕಂಜೂಸುತನ, ಸಾಹಿತ್ಯೇತರ ಚಟುವಟಿಕೆ, ಉಪದ್ವ್ಯಾಪಿ ತನಗಳೆಲ್ಲ ಅವರಿಗೆ ಹೇಗೋ ಬೇಗ ಗೊತ್ತಾಗಿ ಬಿಡುತ್ತಿದ್ದವು.
ಹೀಗಾಗಿ ಟ್ಯಾಬ್ಲಾಯಿಡ್‌ನ ಘಾಟು ವಾಸನೆಯ ಮಧ್ಯದಲ್ಲಿಯೂ ಆ ಪತ್ರಿಕೆಯಲ್ಲಿ ಸಾಹಿತ್ಯದ ಮಣ್ಣಿನ ವಾಸನೆ ಆಘ್ರಾಣಿಸುವುದು ಸಾಧ್ಯ ವಿತ್ತು. ತಾವು ಓದಿದ ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳ ಬಗ್ಗೆ ಅವರು ಬರೆಯುತ್ತಿದ್ದರು. ಆ ಪುಸ್ತಕಗಳನ್ನು ಯಾಕೆ ಓದಬೇಕು, ಆ ಲೇಖಕ ರನ್ನು ಅರ್ಥ ಮಾಡಿಕೊಳ್ಳುವುದು ಹೇಗೆ ಎನ್ನುವುದನ್ನೆಲ್ಲ ಅವರು ವಿವರಿಸುತ್ತಿದ್ದರು. ಲಂಕೇಶ ಅವರನ್ನು ಹಿಂಬಾಲಿಸುತ್ತ, ಸಾಹಿತ್ಯ ಪ್ರವೇಶ ಮಾಡಿದವರು ಅವೆಷ್ಟೋ.
ಒಬ್ಬ ಸಂಪಾದಕ ಪುಸ್ತಕ ಪ್ರಿಯನಾದರೆ, ತನ್ನ ಓದುಗರಿಗೂ ಆ ಹುಚ್ಚನ್ನು ಹತ್ತಿಸಬಲ್ಲ ಮತ್ತು ತನಗರಿವಿಲ್ಲದೇ ಅಕ್ಷರ ಕ್ರಾಂತಿಗೆ ಕಾರಣ ‘ನಾಗಬಲ್ಲ, ಹೊಸ ಸಂಸ್ಕೃತಿ ಅರಳಲು ಪ್ರೇರಕನಾಗಬಲ್ಲ ಎಂಬುದನ್ನು ಲಂಕೇಶ್ ತೋರಿಸಿಕೊಟ್ಟರು. ಸಂಪಾದಕ ಮಾಡಬೇಕಾದಕೆಲಸವೇ ಇದು. ಆತ ಸುದ್ದಿಯೊಳಗೆ ಹೂತು ಹೋಗಬಾರದು. ಇಂದಿನ ಸುದ್ದಿ ನಾಳೆಗೆ ರದ್ದಿ. ಆದರೆ ಓದುಗರನ್ನು ಹೊಸ ಎಚ್ಚರದೆಡೆಗೆ, ಹೊಸ ಬೆಳಕಿನೆಡೆಗೆ ಕರೆದುಕೊಂಡು ಹೋಗುವುದು ಆತನ ನೈತಿಕ ಜವಾಬ್ದಾರಿ. ಆಗಲೇ ಪತ್ರಿಕೆ ತನ್ನ ಸೀಮಿತ ಅರ್ಥವನ್ನು ದಾಟಿ, ಸಮಷ್ಟಿ ಪ್ರಜ್ಞೆಯ ಬದುವಿನಲ್ಲಿ ದಾರಿ ತೋರಿಸುತ್ತ ಹೋಗುತ್ತದೆ. ಈ ಕಾರಣ ದಿಂದ ಸಂಪಾದಕನಾದವನು ಓದುಗನಿಗಿಂತ ಮುಂಚೆ ಪುಸ್ತಕ ಗಳನ್ನು ಅರಸಿ ಹೋಗಬೇಕು. ಹೊಸ ಪುಸ್ತಕಗಳನ್ನು ಪರಿಚಯಿಸುವುದು, ಹೊಸ ಲೇಖಕರನ್ನು ಅರ್ಥ ಮಾಡಿಸುವುದು, ಅವರ ವಿಚಾರಗಳನ್ನು ಹತ್ತಿರವಾಗಿಸುವುದು ತನ್ನ ಹೊಣೆಗಾರಿಕೆ ಎಂದು ಭಾವಿಸಬೇಕು.
ಮೈಸೂರಿನ ಹಿರಿಯ ಪತ್ರಕರ್ತ ಮತ್ತು ‘ಮೈಸೂರು ಮಿತ್ರ’ ಸಂಪಾದಕ ಕೆ.ಬಿ.ಗಣಪತಿ ಬಗ್ಗೆ ನನಗೆ ಅಭಿಮಾನ. ಅವರು ಬರೆಯುವ ಮತ್ತು ಓದುವ ಸಂಪಾದಕರಬ್ಬರು. ಬಿಡುಗಡೆಯಾದ ಪುಸ್ತಕ ಅವರ ಟೇಬಲ್ ಮೇಲೇರಿರುತ್ತದೆ ಎಂಬುದು ಅವರ ಬರಹದಿಂದ ವೇದ್ಯವಾಗುತ್ತದೆ. ಯಾವುದೇ ಹೊಸ ಪುಸ್ತಕ ಬಂದರೂ ಅವರು ಆಸ್ಥೆಯಿಂದ ಓದಿ ತಮ್ಮ ಅಂಕಣದಲ್ಲಿ ಬರೆದಿರುತ್ತಾರೆ. ನಾನು ಅವರ ಅಂಕಣಗಳನ್ನು ತಪ್ಪಿಸಿಕೊಳ್ಳುವುದಿಲ್ಲ. ಬೆಂಗಳೂರಿನ ಸಂಪಾದಕರು ಓದದಿರುವುದನ್ನೂ ಗಣಪತಿ ಓದಿ ಆ ಕುರಿತು ಬರೆದಿರುತ್ತಾರೆ.‘ಸಂಪಾದಕರುಗಳ ಸಂಪಾದಕ’ ಎಂದು ಕರೆಯಿಸಿಕೊಂಡ, ಲಂಡನ್‌ನ ‘ಸಂಡೇ ಟೈಮ್ಸ’ ಪತ್ರಿಕೆಯ ಸಂಪಾದಕರಾಗಿದ್ದ ಹೆರಾಲ್ಡ್ ಇವಾನ್ಸ್, ಆ ದಿನಗಳ ಪುಸ್ತಕಕ್ಕಾಗಿ, ಸಾಹಿತ್ಯಕಾಗಿ ಮೀಸಲಾದ ಪುರವಣಿಯನ್ನು ಆರಂಭಿಸಿದ್ದಾರೆ.
  :      ಎಂಬ ಕೃತಿಯಲ್ಲಿ ಅವರು ಬರೆಯುತ್ತಾರೆ – ‘ಸಂಪಾದಕನಾದವನುಚೆನ್ನಾಗಿ ಓದಿಕೊಂಡಿರಬೇಕು. ಅದರ ಜತೆಯಲ್ಲಿ ತನ್ನ ಓದುಗರನ್ನು ಓದಿಸಬೇಕು. ತನ್ನ ಓದನ್ನು ಅನುಸರಿಸಲು ಅವನ ಬರಹ ಮತ್ತು ಅಧ್ಯಯನ ಸಹಕಾರಿ ಯಾಗಬೇಕು. ತನ್ನ ಓದುಗರನ್ನು ಬೆಳೆಸದ ಸಂಪಾದಕ, ಹೆಂಡತಿಯ ಜತೆಗೆ ಹೊಂದಾಣಿಕೆಯಿಲ್ಲದ ಗಂಡನಿದ್ದಂತೆ. ತನ್ನ ಜತೆ ಓದುಗರನ್ನು ಕರೆದುಕೊಂಡು ಹೋಗುವವ ಉತ್ತಮ ಸಂಪಾದಕ. ನಾನು ಅಂಥ ಸಂಪಾದಕನಾಗಲು ಇನ್ನೂ ಹೆಣಗುತ್ತಿದ್ದೇನೆ. ಈ ರೀತಿ ಮನಸ್ಥಿತಿಯಲ್ಲಿ, ನಾವು ಓದುಗರನ್ನು ಎಷ್ಟು ಓದಿಸುತ್ತೇವೋ ಗೊತ್ತಿಲ್ಲ, ಆದರೆ ನಾವಂತೂ ಓದಲಾರಂಭಿಸುತ್ತೇವೆ. ಅದರಪ್ರಯೋಜನ ಬೇಡವೆಂದರೂ ಪತ್ರಿಕೆಗೆ ಮತ್ತು ಓದುಗರಿಗೆ ಆಗುತ್ತದೆ.’
ನನಗಿಷ್ಟದ ಹೆರಾಲ್ಡ ಇವಾನ್ಸ್ ಮಾತುಗಳನ್ನು ನಾನು ಅಕ್ಷರಶಃ ಪಾಲಿಸಲು ಪ್ರಯತ್ನಿಸುತ್ತಿದ್ದೇನೆ. ಓದುಗರೊಬ್ಬರು ಸಂಪಾದಕನಿಗೆ ಈ ಪುಸ್ತಕ ಓದಿದ್ದೀರಾ ಎಂದು ಕೇಳಿದರೆ, ಉತ್ತರ ಸಕಾರಾತ್ಮಕವಾಗಿ ಇರಬೇಕಂತೆ. ಒಂದು ವೇಳೆ ಇಲ್ಲ ಎಂದಾದರೆ, ಅಷ್ಟರಮಟ್ಟಿಗೆ ಓದುಗನಿಗಿಂತ ಸಂಪಾದಕ ಹಿಂದಿದ್ದಾನೆ ಎಂದು ಭಾವಿಸಬೇಕಂತೆ. ಇದು ಸಂಪಾದಕನ ಸೋಲು ಎಂದು ತಿಳಿಯಬೇಕಂತೆ. ಹೀಗೆ ಹೇಳಿದವರೂ ಇವಾನ್ಸ. ಈ ಮಾತು ನನಗೆ ಆದರ್ಶ. ಅವರು ಮೂರು ತಿಂಗಳಿಗೊಮ್ಮೆ ಆ ಅವಧಿಯಲ್ಲಿ ಬಿಡುಗಡೆಯಾದ ಮಹತ್ವದಪುಸ್ತಕಗಳ ಲೇಖಕರನ್ನು ಊಟಕ್ಕೆ ಕರೆದು ಅವರೊಂದಿಗೆ ಹರಟೆ ಹೊಡೆಯುತ್ತಿದ್ದರು. ಈ ವಿಶ್ವದ ಜ್ಞಾನಗಳೆಲ್ಲ ಒಂದೆಡೆ ಶೇಖರವಾಗಿದ್ದರೆ ಅದು ಪುಸ್ತಕಗಳಲ್ಲಿ ಎಂದು ಬಲವಾಗಿ ನಂಬಿದ್ದರು.
ಹೀಗಾಗಿ ಅವರು ಪುಸ್ತಕಗಳಿಗಾಗಿ ನಲವತ್ತು-ಐವತ್ತು ಪುಟಗಳ ಪುರವಣಿ ಆರಂಭಿಸಿದಾಗ, ಆ ಪ್ರಯತ್ನಕ್ಕೆ ವಿಶ್ವದಾದ್ಯಂತ ಪ್ರಶಂಸೆ ವ್ಯಕ್ತವಾಯಿತು. ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ಈ ಪ್ರಯೋಗವನ್ನು ತನ್ನದೇ ಎಂಬಂತೆ ನಂತರ ಬಾಚಿಕೊಂಡು ಅದಕ್ಕೆ ವಿಶ್ವರೂಪ ನೀಡಿತು.     ಎಂದು ಪುಸ್ತಕಗಳ ರಕ್ಷಾಪುಟದ ಮೇಲೆ ಬರೆದುಕೊಳ್ಳುವುದು ಶ್ರೇಷ್ಠತೆಯ ಪ್ರತೀಕ ವಾಗುವ ಮಟ್ಟಿಗೆ ಪುಸ್ತಕ ಸಂಸ್ಕೃತಿಯನ್ನು ಪತ್ರಿಕೆಯಲ್ಲಿ ಅಳವಡಿಸಿಕೊಂಡಿತು. ಇಂದು ‘ನ್ಯೂಯಾರ್ಕ್ ಟೈಮ್ಸ್’ ಮತ್ತು ‘ನ್ಯೂಯಾರ್ಕ್’ ಮ್ಯಾಗಜಿನ್ ವಾರ ವಾರ ಪ್ರಕಟಿಸುವ ಪ್ರಮುಖ ಹತ್ತು ಪುಸ್ತಕಗಳ ಪಟ್ಟಿಗೆ ವಿಶ್ವ ಮಾನ್ಯತೆ ದೊರಕಿದೆ.
ಆ ಪಟ್ಟಿಯಲ್ಲಿ ಜಾಗ ಪಡೆಯುವ ಕೃತಿಗಳ ಲೇಖಕರು ವಿಶ್ವದ ಗಮನ ಸೆಳೆಯುತ್ತಾರೆ. ಅವು ಜಗತ್ತಿನೆಡೆ ಭಾರಿ ಸಂಖ್ಯೆಯಲ್ಲಿ ಮಾರಾಟ ವಾಗುತ್ತವೆ. ಹೀಗೆ ತನ್ನ ಓದುಗರನ್ನು ಪುಸ್ತಕ ಓದಲು ಹಚ್ಚುವುದು ಸಂಪಾದಕನ ಜವಾಬ್ದಾರಿ. ಅದಕ್ಕೆ ಆತ ಮೊದಲು ಎಲ್ಲರಿಗಿಂತ ಮುನ್ನ ಪುಸ್ತಕ ತೆರೆದು ಓದಲು ಕುಳಿತುಕೊಳ್ಳಬೇಕು, ತಾನು ಮೊದಲ ಓದುಗನಾಗಬೇಕು. ‘               .      .       ’  ಎಂಬ ಮಾತು ಸಂಪಾದಕರಿಗೇ ಹೇಳಿದ್ದು ಎಂದು ನಾನಾದರೂ ಭಾವಿಸುತ್ತೇನೆ.