ಚಾನೆಲ್‌ಗಳೆಂಬ ಬವ್ವಾ ಬಿಡುವವರ ಬೊಬ್ಬಾಟ
ಪ್ರಾಣೇಶ್ ಪ್ರಪಂಚ
ಗಂಗಾವತಿ ಪ್ರಾಣೇಶ್
ಈ ಬವ್ವಾ ಬಿಡುವವರ ಬೊಬ್ಬಾಟಗಳಿಗೆ ವಾಟ್ಸಾಪ್‌ನಲ್ಲಿ ಹರಿದಾಡುವ ಈ ಪಿಕ್ಚರ್ ಮೆಸೆಜ್ ಒಳ್ಳೆ ಉದಾಹರಣೆ ‘ನ್ಯೂಸ್ ಚಾನೆಲ್ ನೋಡಿದ್ರೆ ಯಾರೂ ಉಳಿಯಲ್ವೇನೋ ಅನಿಸುತ್ತೆ. ಹೊರಗಡೆ ಹೋಗಿ ನೋಡಿದ್ರೆ ಕೊರೋನಾನೇ ಇಲ್ವೇನೋ ಅನಿಸುತ್ತೆ’ ಎಂದೇ ಬರುತ್ತಿದೆ.
‘ಬವ್ವಾ ಬಿಡುವವರು’. ನಮ್ಮ ಉತ್ತರ ಕರ್ನಾಟಕದ ಕಡೆ ಈ ಶಬ್ದ ಬಹಳ ಚಾಲ್ತಿಯಲ್ಲಿದೆ. ಹಾಗಂದರೆ ಎಲ್ಲದಕ್ಕೂ ಅನುಮಾನಪಡುವರು. ತಾವೂ ಮಾಡದೇ ನಮ್ಮನ್ನೂ ಮಾಡಗೊಡದೇ ತಣ್ಣಗೆ, ಹಾಗೇ ತಣ್ಣನೆ ನೀರು ಕುಡಿದು ತಣ್ಣಗಿರುವಲ್ಲಿ ಮಲಗಿರುವವರು.
ಆ ಕೆಲಸ ಮಾಡಿದರೆ ನಷ್ಟವೇ ಜಾಸ್ತಿ, ಅಪಾಯವೇ ಆಗುತ್ತದೆ ಎಂದು ಮಾಡುವದಕ್ಕೆ ಮುಂಚೆ ಯೇ ನಿರ್ಧರಿಸಿ ಇಲ್ಲದ್ದು ಕಲ್ಪಿಸಿಕೊಂಡು ಹೇಳಿ,ಅದನ್ನು ನಾವೂ ಮಾಡಲೂ ಬಿಡದೇ, ತಮ್ಮಂತೆ ನಮ್ಮನ್ನೂ ತಣ್ಣಗೆ ಕುಳಿತುಕೊಳ್ಳಿ, ತಣ್ಣಗೆ ಸ್ವಲ್ಪ ಮಲಗಿರಿ ಎಂದು ಹೇಳಿ, ಎಷ್ಟೋ ಸುವರ್ಣ ಅವಕಾಶಗಳನ್ನು ತಪ್ಪಿಸಿ ಕೊಂಡು, ಗೋಡೆಗೆ, ನೆಲಕ್ಕೆ ಬಡಿದ ಗೂಟದಂತೆ ಇದ್ದಲ್ಲಿಯೇ ಇದ್ದು ಯಾವ ಬದಲಾವಣೆ, ಬೆಳವಣಿಗೆ ಬಯಸದೆ ಮಗ್ಗಲು ಬದಲಿಸುತ್ತ ಮಲಗಿ, ಮಲಗಿ ಮೆತ್ತಗಾಗಿ, ಹೀಗಾಗುವುದರ ಬಗ್ಗೆ ಸ್ವಲ್ಪವೂ ವಿಷಾದ ಪಡದೇ, ದೇವರು ನಮ್ಮ ಹಣೆಯಲ್ಲಿ ಇಷ್ಟೇ ಬರೆದಿದ್ದಾನೇನೋ ಎಂದು ತಮಗೆ ತಾವೇ ವೇದಾಂತವನ್ನೂ ಹೇಳಿಕೊಂಡು ದೇವರನ್ನೇ ದೋಷಿಯನ್ನಾಗಿ ಮಾಡು ವವರೇ ಈ ಬವ್ವಾ ಬಿಡುವವರು.
ಈ ಬವ್ವಾ ಬಿಡುವವರಲ್ಲಿ ಮನುಷ್ಯರಿಗಿಂತ ಮೊದಲ ಸ್ಥಾನದಲ್ಲಿರುವವರು ನಮ್ಮ ಟಿವಿ ಗಳು, ನ್ಯೂಸ್ ಚಾನೆಲ್‌ಗಳು ಎಂದು ನನಗನಿ ಸುತ್ತದೆ. ಇವರಂಥ ಬವ್ವಾ ಬಿಡುವವರಲ್ಲಿ ಮೊದಲಿಗರು ಮನುಷ್ಯರಲ್ಲಿಲ್ಲ. ಎಂದಿನವೊ ಜನಜಂ ಗುಳಿ ಜಾತ್ರೆಯ ಕ್ಲಿಪ್ಟಿಂಗ್‌ಗಳನ್ನು ಹಾಕಿ ಬೆಳಗಾವಿ ಉದ್ವಿಗ್ನ, ಬೆಂಗಳೂರಿನಿಂದ ಕಾಲುಕಿತ್ತಿರುವ ಕಾರ್ಮಿಕರು, ಅಯ್ಯಯ್ಯೋ ಈ ಸಲ ಕ್ರಿಸ್‌ಮಸ್ ಆಚರಣೆ ಇಲ್ವಂತೆ, ನ್ಯೂ ಇಯ ರ್ ಮನೇಲೆ ಸಾಯೋ ಹಾಗಾಯ್ತು, ಏನಂತಿರಾ? ನಮ್ಮ ಚಾನೆಲ್ ಜತೆ ಮಾತಾಡಿ ಬೇಗ ಈ ನಂಬರ್‌ಗೆ ಫೋನ್ ಮಾಡಿ ಎಂದು ಭಯ ಹುಟ್ಟಿಸಿ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಕಾರ್ಯಕ್ಕೆ ನಿಂತಿರುವ ಇಂಥ ಮಾದ್ಯಮಗಳು, ಜನರು, ಅದೆಷ್ಟು ದಿನ ತಾವೇ ಕಟ್ಟಿಕೊಂಡ ಈ ಬದುಕಿನಲ್ಲಿ ನೆಮ್ಮದಿಯಿಂದ ಬದುಕುತ್ತಾರೋ ಕಾದು ನೋಡಬೇಕು.
ಕಾಲವೇ ಪಾಠ ಕಲಿಸುವುದರ ಸೂಚನೆ ಇದು. ಕೊರೋನಾ ಓಮಿಕ್ರಾನ್‌ಗಳು ಬರುತ್ತವೆಂದು ಆ ವೈರಸ್‌ಗಳು ಮೊದಲು ಈ ಚಾನೆಲ್‌ ಗಳಿಗೆ ಮೆಸೆಜ್ ಕಳಿಸುತ್ತವೆ. ಶುರುವಾಗುತ್ತದೆ ಈ ಬವ್ವಾ ಬಿಡುವವರ ಬೊಬ್ಬಾಟಗಳು. ಅದಕ್ಕೆ ವಾಟ್ಸಾಪ್‌ನಲ್ಲಿ ಹರಿದಾಡುವ ಈ ಮೆಸೆಜ್ ಒಳ್ಳೆ ಉದಾಹರಣೆ ‘ನ್ಯೂಸ್ ಚಾನೆಲ್ ನೋಡಿದ್ರೆ ಯಾರೂ ಉಳಿಯಲ್ವೇನೋ ಅನಿಸುತ್ತೆ. ಹೊರಗಡೆ ಹೋಗಿ ನೋಡಿದ್ರೆ ಕೊರೋನಾನೇ ಇಲ್ವೇನೋ ಅನಿಸುತ್ತೆ’ ಎಂದೇ ಬರುತ್ತಿದೆ.
ಹಿಂದೆಲ್ಲ ಎಂ.ಕೆ ಇಂದಿರಾ, ತ್ರಿವೇಣಿ ಕಾದಂಬರಿಗಳಲ್ಲಿ ಓದುತ್ತಿದ್ದ ಒಂದು ನಾಣ್ಣುಡಿ ನೆನಪಿಗೆ ಬಂದು ಈ ಚಾನೆಲ್ ಗಳಿಗೆ ಅದೇ ಟೈಟಲ್ ಸರಿಯೇನೋ ಎನಿಸುತ್ತದೆ. ಅದೆಂದರೆ, ಅತ್ತು ಹೆದರಿಸಲಾ, ಹೇತು ಹೆದರಿಸಲಾ? ಎಂದು ಕೇಳುತ್ತಿದ್ದರಂತೆ ಯಾರೋ, ಹಾಗಿದೆ ಇವರ ಈ ವರಸೆ. ಇನ್ನೊಬ್ಬರನ್ನು ಅಂಜಿಸಿಕೊಂಡು ಬದುಕೋರು ಬಹಳ ದಿನ ಬದುಕುವುದಿಲ್ಲ. ನಾವು ಚಿಕ್ಕವರಿದ್ದಾಗ ಭೋಗವ್ವ ಎಂಬ ಮಡಿ ಹೆಂಗಸು, ಗಂಡ ತೀರಿಕೊಂಡಾಗ ಕೇವಲ ಒಂದು ವರ್ಷದ ಹಸುಕೂಸು ಆಕೆಯ ಮಡಿಲಲ್ಲಿತ್ತು. ಅವರಿವರ ಮನೆ-ಅಡಿಗಿ-ನೀರು ಮಾಡುತ್ತ ಅವನನ್ನು ಅತೀ ಮುದ್ದಿನಿಂದ ಬೆಳೆಸಿ ಉದ್ದಕ್ಕೆ ಬೆಳೆಸುವುದರ ಜತೆಗೆ ಉದ್ದಟವಾಗಿಯೂ ಬೆಳೆಸಿಬಿಟ್ಟಿದ್ದಳು.
ಅವನ ಹೆಸರು ವಾಜೇಂದ್ರ. ಎಲ್ಲರೂ ಅವನನ್ನು ವಾಜಿ, ವಾಜಿ ಎಂದೇ ಕರೆಯುತ್ತಿದ್ದರು. ವಾಜಿ ಅವಿದ್ಯಾವಂತ ತಾಯಿಯ ಮಾತನ್ನೇ ಕೇಳುತ್ತ ಮೂರ್ಖ ಹಾಗೂ ಪುಕ್ಕಲು ವಾಗಿಯೇ ಬೆಳೆದ, ‘ಚೆಂದ ಕಲಿಸಿಕೊಂಡು ಉಣಬೇಕು, ತಣ್ಣಗೆ ಕಣ್ತುಂಬ ನಿದ್ದಿ ಮಾಡಬೇಕು’ ಎಂಬ ಘೋಷ ವಾಕ್ಯ, ಬೀಜ ವಾಕ್ಯಗಳನ್ನು ಅವನ ತಲೆಯಲ್ಲಿ ತುಂಬಿ ಭೋಗವ್ವ ಆತನನ್ನು ಬೆಳೆಸಿದ್ದಳು. ದಷ್ಟಪುಷ್ಟನಾಗಿದ್ದ ವಾಜಿ, ಭೀಮಬಲಹೊಂದಿದ್ದ ನಿಜ. ಆದರೆ ಕೆಟ್ಟ ಪುಕ್ಕಲ. ಆನೆ ದೇಹದಲ್ಲಿ ಬೆಕ್ಕಿನ ಪುಕ್ಕಲುತನ ಮನೆ ಮಾಡಿತ್ತು. ಅಕ್ಕಿಚೀಲ, ತುಂಬಿದ ಹಂಡೆ, ಹತ್ತುಮಣ ಕಟ್ಟಿಗೆ ಎತ್ತುತ್ತಿದ್ದ ವಾಜಿ, ಕತ್ತಲಾದರೆ ಅಂಜಿ ಸಾಯುತ್ತಿದ್ದ. ಯಾರಾದರೂ ಸಹಜ ಮಾತನಾಡಿಸಿದರೂ ಗಾಬರಿಯಾಗಿ ಅವರನ್ನು ನೋಡುತ್ತ ಬಾಯಿ ಒಣಗಿ ತಡಬಡಾಯಿಸುತ್ತಿದ್ದ.
ಏಳೆಂಟು ವರ್ಷದ ಹುಡುಗರ ಕಿವಿಯಲ್ಲಿ ತನ್ನ ಉತ್ತರ ಹೇಳಿ, ಆ ಹುಡುಗರ ಬಾಯಿಂದ ಪ್ರಶ್ನೆ ಕೇಳಿದವರಿಗೆ ಉತ್ತರ ಹೇಳಿಸುತ್ತಿದ್ದ. ಇಪ್ಪತ್ನಾಲ್ಕು, ಇಪ್ಪತ್ತೈದು ವಯಸ್ಸಿನ ವಾಜಿಗೆ ಗೆಳೆಯರೆಂದರೆ ೮-೧೦ ವಯಸ್ಸಿನ ಹುಡುಗರು. ಒಟ್ಟಿನಲ್ಲಿ ವಾಜಿ ಗಂಡು ಹುಡುಗರ ನಡುವೆಹೆಣ್ಣಿನಂತೆ, ಹೆಣ್ಣು ಮಕ್ಕಳ ನಡುವೆ ಗಂಡಾಗಿ ಬೆಳೆದುಬಿಟ್ಟಿದ್ದ. ಇದಕ್ಕೆ ಕಾರಣ ತಾಯಿ ಭೋಗವ್ವನ ಜ್ಞಾನ ಬೋಧನೆ. ತಾನೂ ಶಾಲೆ ಕಲಿಯದ್ದರಿಂದ, ಮಗನಿಗೂ ಶಾಲೆ ಬೇಡ ಎಂದು ಓದಿಸಲೇ ಇಲ್ಲ. ತನ್ನ ಜತೆಗೇ ಮಂದಿ ಮನೆ ಅಡಿಗಿ, ನೀರಿಗೆ ಅವನನ್ನೂ ತೊಡಗಿಸಿ ಬಿಟ್ಟಳು. ತಾಯಿ ವಾಸಿಸುತ್ತಿದ್ದ ಕುಷ್ಟಗಿ-ಹನುಮಸಾಗರ ಊರುಗಳನ್ನು ಬಿಟ್ಟರೆ ಈ ಭೂಮಿ ಮೇಲೆ ಬೇರೆ ಭೂಪ್ರದೇಶಗಳೇ ಇಲ್ಲ, ಎಲ್ಲಲ್ಲೂ ಬರೀ ನೀರು ಇದೆ.
ಒಣ ಜಾಗವೆಂದರೆ, ಜನರಿರುವ ಜಾಗ ವೆಂದರೆ ಅದು ಕುಷ್ಟಗಿ. ಹನುಮಸಾಗರ ಮಾತ್ರ ಎಂದು ನಂಬಿದ್ದ ಭೋಗವ್ವ ಮಗ ವಾಜಿಯನ್ನು ಹಾಗೆ ಬೆಳೆಸಿದ್ದಳು. ಮಡಿ ಹೆಂಗಸಾದ ಭೋಗವ್ವ ಗಂಡಸರು ಎದುರುಬಂದರೆ ತಲೆ ಸೆರಗು ಸರಿ ಮಾಡಿಕೊಳ್ಳುತ್ತ ಬಾಗಿಲ ಹಿಂದೆ ಸರಿದು ನಿಂತು ‘ಇದ್ದಾನೆ, ಇಲ್ಲ, ಈಗ ಬರ್ತೀನ್ರಿ’ ಎಂಬ ಎರಡೆರಡೆ ಅಕ್ಷರಗಳನ್ನು ಆಡುತ್ತಿದ್ದಳು. ಯಾಕಿಷ್ಟು ಅಂಜತಿ ಭೋಗವ್ವ ಹೊರಗ, ಮಂದ್ಯಾಗ ಬಾ, ಕೂತು ಮಾತಾಡು ಅಂದ್ರೆ ‘ಕಲಿ ಗಾಲತಾಯಿ, ನಮ್ಮವ್ವ ಗಂಡನ್ನ ಕಳಕೊಂಡಾಕಿ, ಚೊಚ್ಚಲ ಗಂಡಸ ಮಗ ಇದ್ದಾನ.ತಗ್ಗಿಬಗ್ಗಿ ನಾ ನಡೆದರೆ ದೇವರು ಅವನಿಗೆ ಒಳ್ಳೆದು ಮಾಡ್ತಾನೆ.
ಕೆಟ್ಟ ಕಲಿಗಾಲ ತಾಯಿ, ನಮ್ಮ ನೆರಳಿಗೆ ನಾವು ಅಂಜಿ ಬಾಳಬೇಕು’ ಎಂದು ಸಂಬಂಧವಿಲ್ಲದೇ ತತ್ವಜ್ಞಾನ ಬೆಳೆಸಿ ಇತ್ತ ಹುಚ್ಚೂ ಅಲ್ಲದ ಬೆಪ್ಪೂ ಅಲ್ಲದ ಮಾತುಗಳನ್ನಾಡುತ್ತಿದ್ದಳು. ತಾಯಿಗೆ ತಕ್ಕ ಮಗನಾಗಿದ್ದ ವಾಜಿಯಂತೂ ನೊಣ, ಇರುವೆ, ಕಾಗಿ, ಗುಬ್ಬಿ, ತಗಣಿಗಳಿಗೆಲ್ಲ ನಮಸ್ಕಾರ ಮಾಡುತ್ತಿದ್ದ. ತಾಯಿ ಹೇಳುವಂತೆ ಬೇಸಿಗೆ ಕಾಲದಲ್ಲಿ ಸೂರ್ಯನಿಗೆ ಎದುರಾಗಿ ನಡೆಯುವಾಗ, ಹಿಂದೆ ತಿರುಗಿ ತನ್ನ ನೆರಳನ್ನೆ ನೋಡಿ ಯಾರೋ ನನ್ನ ಬೆನ್ನು ಹತ್ತಿದ್ದಾರೆ ಅಂತ ಓಡಿ ಓಡಿ ಮನೆ ಸೇರಿ ಬಾಗಿಲು ಹಾಕಿಕೊಂಡು, ಬಾಗಿಲ ಸಂದಿಯಿಂದಹೊರಗೆ ನೋಡಿ, ಯಾರೂ ಇಲ್ಲವೆಂದು ನಿಟ್ಟುಸಿರು ಬಿಟ್ಟು ಮಲಗುತ್ತಿದ್ದ.
ದೊಡ್ಡವನಾಗಿ ಹುಬ್ಬಳ್ಳಿ, ಧಾರವಾಡ ಹೋಗಲಿ, ಇಲ್ಲೇ ಇಲಕಲ್ಲದಾಗಾದರೂ ಕೆಲಸ ಮಾಡಿ ಹೆಚ್ಚು ಗಳಿಕೆ ಮಾಡಿ ಹಣ ಗಳಿಸಿ, ತಾಯಿನ ಚೆಂದ ನೋಡಿಕೋ ಎಂದರೆ ‘ಹುಬ್ಬಳ್ಯಾಗ ಗದ್ದಲ, ಬಿಸಿಲು ಬಹಳ, ಧಾರವಾಡ ದಾಗ ಚಳಿ ಹಾಗೂ ಶ್ಯಾಣೇರು ಬಹಳ, ಇಲಕಲ್‌ದಾಗಗ್ರಾನೈಟ್ ಕಲ್ಲು ಬಹಳ ಅವನ್ನು ನೆಲದಾಗಿನಿಂದ ತಗೀಲಕ್ಕ ಡೈನಾಮೇಟ್ ಸಿಡಿಸ್ತಾರಂತ, ಅವು ನನಗ ಬಡಿದು ನಾ ಸತ್ರ?’ ಎಂದೇ ಕೇಳುತ್ತಿದ್ದ. ಯಾರೋ ಒಮ್ಮೆ ಐದು ಡಬ್ರಾಹ್ಮಣರಿಗೆ ಉಚಿತ ಬದರಿ ಯಾತ್ರೆ ಮಾಡಿಸಲು ಮುಂದೆ ಬಂದು ಭೋಗವ್ವ -ವಾಜಿನ್ನ ಕರೆದು ನಾಳೆ ತಯಾರಾಗ್ರಿ ಎಂದು ಹೇಳಿ ಹೋದರೆ, ತಾಯಿ ಮಗ ಬೆಳತನ ‘ಬದರಿ ಅಂದ್ರ ಅಲ್ಲಿ ಚಳಿಗೆ ಒದರಿ, ಒದರಿ ಸಾಯ್ತಾರಂತ, ಅದಕ್ಕೆ ಒದರಿ ಒದರಿ ಸಾಯಲು ಬದರಿಗೆ ಬರ್ರಿ ಅಂತಾರಂತ, ಬದರಿ ಅನ್ನೋ ಹೆಸರು ಅಲ್ಲಿ ಛಳಿಗೆ ಒದರಿ ಒದರಿ ಸಾಯೋದ್ಕಕ್ಕ ಬಂದದಂತ.
ಬದರಿಗೆ ಹೋದವರು ವಾಪಸ್ ಬಂದೇ ಇಲ್ಲಂತ, ಬದರಿ ಒಳಗೆ ಮಂಜು ಕರಗಿ ಒಮ್ಮಿಂದೊಮ್ಮೆಲೆ ನೀರಾಗಿ ಹರಿದು, ಗುಡಿ ಮುಳುಗಿ ಹೋಗ್ತದಂತ, ಈ ರೀತಿ ನಮ್ಮನ್ನು ಫ್ರೀಯಾಗಿ ಕರೆದುಕೊಂಡು ಹೋಗುವವರು ವಾಪಸ್ ಕರೆತರೋದಿಲ್ಲಂತ, ಬಡವರನ್ನ ಬಲಿ ಕೊಡ್ತಿವಂತ ಬೇಡಿಕೊಂಡು ಬಂದಿರ‍್ತಾರಂತ, ಅಲ್ಲೇ ಬಿಟ್ಟು ಬರ‍್ತಾರಂತ’ ಎಂದೇ ಚರ್ಚಿಸಿ, ತಾವು ತಾವೇ ಅಂಜಿಸಿಕೊಂಡು ಒಳಗಿನಿಂದ ಬಾಗಿಲು ಹಾಕಿಕೊಂಡು ಬದರಿ ಬಸ್ಸು ಹೋಗುವವರೆಗೆ ಹೊರಬರುತ್ತಿರಲಿಲ್ಲ.
‘ಬೆಂಗಳೂರಿಗೆ ಹೋಗೋಣ ಬಾರೋ ವಾಜಿ, ಛೊಲೋ ಕಡೆ ಕೆಲಸ ಕೊಡಿಸ್ತೀನಿ, ಒಳ್ಳೆ ಶಕ್ತಿ, ಮೈಕಟ್ಟು ಇದೆ ನಿಂಗೆ’ ಎಂದು ಬೆಂಗಳೂರಿನಿಂದ ಬಂದ ಯಾರಾದ್ರೂ ಈ ತಾಯಿ ಮಗನ್ನ ಕನಿಕರ ತೋರಿಸಿದರೆ ಮತ್ತೆ ರಾತ್ರಿ ತಾಯಿ ಮಗನ ಗುಪ್ತ ಸಭೆ ಸೇರುತ್ತಿತ್ತು. ತಮ್ಮ ಮನೆ ಸುತ್ತ ಯಾರ ಮನೆಯಿಲ್ಲದಿದ್ದರೂ, ಪಿಸು ಮಾತಲ್ಲಿ ಇವರು ಮಾತನಾಡಿಕೊಳ್ಳುತ್ತಿದ್ದರು. ‘ಬೆಂಗಳೂರಾಗ ಕಂಡಲ್ಲಿ ಮಂದಿನ್ನ ಕೊಲ್ತಾರಂತ, ಟ್ರಂಕು, ಕೈಯ್ಯಾಗಿನ ಬ್ಯಾಗು ನಮ್ಮ ಕಣ್ಣೆದುರೆ ಹಾರಿಸ್ತಾರಂತ, ಯಾವದೋ ಪುಡಿ ಹುಗ್ಗಿ ಅವನ್ನ ಒಯ್ತಾರಂತ, ನಾವುಅವರನ್ನ ನೋಡಿದ್ರೂ, ಕೂಗಲಿಕ್ಕೆ ಬಾಯಿ ಬರಂಗಿಲ್ಲಂತ’ ಎಂದೆಲ್ಲ ಮಾತನಾಡಿಕೊಂಡು ಎರಡು ದಿನ ಹೊರಬರುತ್ತಿರಲಿಲ್ಲವಂತೆ.
ಹೀಗೆ ಯಾರು ಏನೆ ಹೇಳಿದರೂ ತಮಗೆ ತಾವೇ ಬವ್ವಾ ಬಿಟ್ಟುಕೊಂಡು ಇದ್ದಲ್ಲಿಯೇ ಉಳಿದುಬಿಡುತ್ತಿದ್ದ ಈ ತಾಯಿ ಮಗನನ್ನ ಕಂಡರೆ ಊರವರಿಗೆ ಕೋಪ, ಕನಿಕರ, ನಗು ಬರುತ್ತಿತ್ತು. ಅದು ಇಂದಿರಾಗಾಂಧಿ ಕಾಲ. ನೆಹರು, ಇಂದಿರಾ ಗಾಂಧಿ ಎಂದರೆ ಸಾಕ್ಷಾತ್ ದೇವರ ಕಾಲವೇ ಎಂದು ಜನ ಭ್ರಮಿಸಿದ್ದ ಕಾಲ. ಅಂಥ ಸಮಯದಲ್ಲಿ ಊರೊಳಗೆ ಅಡ್ಡಾಡುವ ವಾಜಿ, ರಾತ್ರಿ ತಾಯಿಗೆ ಜನ ಪೇಪರ್ ಓದಿ ಆಡಿಕೊಳ್ಳುತ್ತಿದ್ದ ಮಾತಿಗೆ ತನ್ನದೂ ಸೇರಿಸಿ ಹೇಳುತ್ತಿದ್ದ. ‘ಅವ್ವಾ, ನೆಹರು ಅವರು ರಾತ್ರಿ ಹನ್ನೆರಡರ ಮ್ಯಾಲೆ, ಇಂದಿರಾಗಾಂಧಿ ಪಾಪ..ಮಲಗಿದಾಕಿನ್ನ ಎಬ್ಬಿಸಿ, ಬಡವರ ಮ್ಯಾಲೆ ಕನಿಕರ ಇರಲಿ.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು, ಹೋರಾಡಿದವರು ಬಡವರು, ಅದಕ್ಕೆ ಅವರಿಗೆ ತಿಂಗಳಾ ಪಿಂಚಣಿ ಹಾಗೂ ಸ್ವಾತಂತ್ರ್ಯ ಯೋಧರಿಗೆ ಪಿಂಚಣಿ ಕೊಡು ಅಂತ ಹೇಳ್ಯಾರಂತೆ. ಅದಕ್ಕೆ ಆಕಿ ಹ್ಞೂಂ ಅಂದಾಳಂತ. ನಮ್ಮಪ್ಪಗೂ ಪೆನ್ಷನ್ ಸ್ಯಾಂಕ್ಷನ್ ಮಾಡ್ಯಾರ, ಆತ ಇರಲಾರದ್ದಕ್ಕ ನಿನಗ ಅದು ಬರ‍್ತದಂತ. ಯಾರಿಗೂ ಹೇಳಬ್ಯಾಡ, ಯಾಕಂದ್ರ ನೆಹರು, ಇಂದಿರಾಗಾಂಧಿಗೆ ಇದನ್ನ ಹೇಳೊಮುಂದ ಅಲ್ಲಿ ಯಾರೂ ಇರಲಿಲ್ಲವಂತ, ಹೂಶ್!.’ ಎಂದ. ದೆಹಲಿಯಲ್ಲಿ ಯಾರೂ ಇಲ್ಲದಾಗ ಹೇಳಿದ ಈ ಸುದ್ದಿ ಹನುಮಸಾಗರದ ವಾಜಿ ಕಿವಿಗೆ ಹೇಳಿದ್ದು ಯಾರು? ಎಂಬ ಪ್ರಶ್ನೆ ಇಂದಿಗೂ ರಹಸ್ಯವೇ.
ಹೀಗೆ ಏನೇನೋ ಸುದ್ದಿ ಊಹಾಪೋಹ, ಅಂದಿನ ಅಂಗಡಿ ವ್ಯಾಪಾರ, ಅಂದು ನಡೆದರೆ ಸಾಕು ಎನ್ನುವಂಥ ಈ ಚಾನೆಲ್ ಗಳ ಬವ್ವಾ ಬಿಡುವಿಕೆ ನೋಡಿದರೆ ನಂಗೆ ಭಾಗವ್ವ-ವಾಜಿಯೇ ನೆನಪಾಗುತ್ತಾರೆ.