ಸಾವಯವ ಬೆಲ್ಲದ ಜಾಡು ಹಿಡಿದು
ಶಶಾಂಕಣ
ಶಶಿಧರ ಹಾಲಾಡಿ
.@.
ಆಗ ತಾನೆ ತಯಾರಿಸಿದ ಕಬ್ಬಿನ ರಸವನ್ನು ಕುದಿಸಿ, ಯಾವುದೇ ರಾಸಾಯನಿಕ ಬಳಸದೇ, ಪರಿಶುದ್ಧ ಬೆಲ್ಲದ ಪುಡಿಯನ್ನು ತಯಾರಿಸುವ ಪ್ರಕ್ರಿಯೆಯು, ನೋಡಲು ಬೆರಗು ಹುಟ್ಟಿಸುತ್ತದೆ – ಅದೂ ಬೆಂಗಳೂರಿನಂತಹ ಮಹಾನಗರದಲ್ಲಿ!
ಮೊನ್ನೆ ಮೊನ್ನೆ ಬೆಂಗಳೂರಿನಲ್ಲಿ ಒಂದು ಪುಟ್ಟ ವಿಸ್ಮಯ ನೋಡುವ ಅವಕಾಶ. ರಸ್ತೆ ಪಕ್ಕದಲ್ಲಿ ‘ಸಾವಯವ ಬೆಲ್ಲ ತಯಾರಿಯಾಗುತ್ತಿದೆ.ಸಾರ್ವಜನಿಕರು ಬೆಲ್ಲ ತಯಾರಿಯನ್ನು ನೋಡಬಹುದು’ ಎಂಬ ಪುಟ್ಟ ಫಲಕ ಹಾಕಿದ್ದರು. ಈಗಿನ ದಿನಗಳಲ್ಲಿ ಸಾವಯವ ಬೆಲ್ಲವೇ ಒಂದುಬೆರಗು, ಅದು ಇಂತಹ ಬೃಹತ್ ನಗರದಲ್ಲಿ ನಡೆಯುತ್ತಿದೆ ಎಂಬುದು ಇನ್ನೊಂದು ಬೆರಗು, ಅದನ್ನು ನೋಡಲು ಸಾರ್ವಜನಿಕರು ಬರಬಹುದು ಎಂಬ ಆಹ್ವಾನವು ಮತ್ತೊಂದು ಬೆರಗು.
ಕೆಂಗೇರಿಯ ರಾಧೇಶ್ಯಾಮ್ ಸತ್ಸಂಗ್ ಸಾವನ್ ದರ್ಬಾರ್ ಆಶ್ರಮದಲ್ಲಿ ನಡೆಯುತ್ತಿರುವ ಈ ಉತ್ತಮ ಕೆಲಸವನ್ನು ನೋಡುವ ಅವಕಾಶವನ್ನು ಬಿಡಬಾರದೆಂದು, ಆಶ್ರಮದ ಗೇಟಿನೊಳಗೆ ಹೋದೆ. ಸ್ವಯಂಸೇವಕರೊಬ್ಬರು ನಮಸ್ಕರಿಸಿ ‘ಬೆಲ್ಲ ಮಾಡುವುದನ್ನು ನೋಡುವ ಅಭಿಲಾಷೆಯೆ? ಖಂಡಿತಾ ಬನ್ನಿ. ಈ ರೀತಿ ಬೆಲ್ಲ ಮಾಡುವುದನ್ನು ನೋಡಲು ನೀವು ಬರುವುದೇ ನಮಗೆ ಖುಷಿ’ ಎಂದು ಸ್ವಾಗತಿಸಿದರು.
ಮುಖ್ಯ ದ್ವಾರದಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿ ‘ಆಲೆಮನೆ’ ಇದೆ. ಹಾಗೆ ನೋಡಿದರೆ ಅದು ಕೇವಲ ಆಲೆಮನೆ ಮಾತ್ರವಲ್ಲ, ಅಲ್ಲಿ ಕೋಲ್ಡ್ ಪ್ರೆಸ್ಡ್ ತೆಂಗಿನ ಎಣ್ಣೆ ಮಾಡುವ ಯಂತ್ರವಿದೆ, ಸಾವಯವ ಅರಶಿನಪುಡಿ ತಯಾರಿ ಸುವ ಹಲ್ಲರ್ ಇದೆ. ಮಳೆ ನೀರನ್ನು ಸಂಗ್ರಹಿಸಿ, ಕುಡಿಯಲು ಒದಗಿಸುವ ಬೃಹತ್ ಟ್ಯಾಂಕರ್ ಇದೆ. ಇದೊಂದು ಕಾರ್ಯ ಶಾಲೆ. ಚೊಕ್ಕ ಮಾಡಿದ ಕಬ್ಬನ್ನು ಅದಾಗಲೇ ಅಲ್ಲಿ ರಾಶಿ ಹಾಕಿದ್ದರು. ಆಶ್ರಮದ ವಿಶಾಲ ಆವರಣದಲ್ಲಿ ವಿವಿಧ ರೀತಿಯ ಕೃಷಿ ಚಟುವಟಿಕೆ ನಡೆದಿದ್ದು, ಅಲ್ಲೇ ಕಬ್ಬು ಬೆಳೆಯುತ್ತಾರೆ.
ಮುಂಬಯಿ ಮತ್ತು ಇತರ ಪ್ರದೇಶಗಳಿಂದ ಬಂದಿದ್ದ ಸ್ವಯಂಸೇವಕರು ಕಬ್ಬನ್ನು ಯಂತ್ರಕ್ಕೆ ಹಾಕುತ್ತಿದ್ದರು. ಅಲ್ಲಿ ಕಬ್ಬು ನುರಿದು, ಕೆಳಗಿದ್ದ ಕೊಪ್ಪರಿಗೆಗೆ ಕಬ್ಬಿನ ಹಾಲು ಬೀಳುತ್ತದೆ. ಕಬ್ಬಿನ ಸಿಪ್ಪೆಯಿಂದಲೇ ಉರಿಯುವ ಒಲೆಯ ಬೆಂಕಿಯಲ್ಲಿ, ಕಬ್ಬಿನ ಹಾಲು ಬಿಸಿಯಾಗುತ್ತದೆ. ಆ ಕೊಪ್ಪರಿಗೆಯಿಂದ ಕೆಳಗಿನ ಇನ್ನೊಂದು ಕೊಪ್ಪರಿಗೆಗೆ ಬಿಸಿಯಾದ ಕಬ್ಬಿನ ರಸ ವರ್ಗಾವಣೆಗೊಳ್ಳುತ್ತದೆ. ನಾನು ಭೇಟಿಕೊಟ್ಟಾಗ ಬೆಳಗಿನ ಹತ್ತು ಗಂಟೆಯ ಸಮಯ. ಕೊಪ್ಪರಿಗೆಯಲ್ಲಿ ಕೊತ ಕೊತ ಕುದಿಯುತ್ತಿದ್ದ ಕಬ್ಬನ ಹಾಲು, ಬೆಲ್ಲವಾಗಿ ಪರಿವರ್ತನೆಗೊಳ್ಳುವ ಸಮಯ. ಕಬ್ಬಿನ ರಸ ಕುದಿಯುವಾಗ ಅದರಲ್ಲಿದ್ದ ಕಲ್ಮಶ ಬೇರೆ ಯಾಗಲು, ಜಜ್ಜಿದ ಬೆಂಡೆಕಾಯಿಯನ್ನು ಬೆರೆಸುವ ಪದ್ಧತಿ ಇಲ್ಲಿದೆಯಂತೆ.
ಕಬ್ಬಿನ ರಸ ಕುದ್ದು ಕುದ್ದು ಇನ್ನೇನು ಬೆಲ್ಲ ಗಟ್ಟಿಗೊಳ್ಳುವ ಸಮಯ – ಒಂದಿಬ್ಬರು ಹಳ್ಳಿ ಜನರು ದೊಡ್ಡ ಸೌಟಿನಿಂದ ಬೆಲ್ಲದ ಹದ ಪರೀಕ್ಷಿಸು ತ್ತಿದ್ದರು. ‘ಹಾಂ, ಇನ್ನೇನು ಟ್ರೇಗೆ ಹಾಕಬಹುದು’ ಎಂದ ಕೂಡಲೇ ನಾಲ್ಕು ಜನರು, ಕಬ್ಬಿಣದ ಸೌಟಿನಿಂದ ಬಿಸಿ ಬೆಲ್ಲವನ್ನು ಪಕ್ಕದ ಟ್ರೇಗೆ ಹಾಕಿದರು. ತಕ್ಷಣ ಇನ್ನೂ ನಾಲ್ವರು ಟ್ರೇಯಲ್ಲಿದ್ದ ಬಿಸಿ ಬೆಲ್ಲವನ್ನು ಲಗುಬಗೆಯಿಂದ ಮಗುಚತೊಡಗಿದರು. ಬೇಗ ಬೇಗನೆ ಮಗುಚಿದಷ್ಟೂ ಉತ್ತಮ ಬೆಲ್ಲದ ಪುಡಿ ತಯಾರಾಗುತ್ತದೆ ಎಂದು ನನ್ನನ್ನು ಕರೆತಂದಿದ್ದ ಸ್ವಯಂಸೇವಕರು ಹೇಳಿದರು.
ನಾಲ್ಕಾರು ನಿಮಿಷಗಳಲ್ಲಿ ಪುಡಿ ಬೆಲ್ಲ ತಯಾರಾಯಿತು. ಅದನ್ನು ಇಬ್ಬರು ಮಹಿಳೆಯರು ಜರಡಿ ಹಿಡಿದು, ಸಮಾನ ಗಾತ್ರದ ಕಣಗಳ ಬೆಲ್ಲದ ಪುಡಿಯನ್ನು ಪ್ರತ್ಯೇಕಿಸಿದರು. ಆ ಪುಡಿಯನ್ನು ಒಂದು ಕಿಲೋ ಪ್ಯಾಕೆಟ್ ಮಾಡಲು ಒಳಗೆ ಸಾಗಿಸಲಾಯಿತು. ಸಾವಯವ ಬೆಲ್ಲ ನೋಡಲು ಬಂದ ನನಗೆ ಒಂದು ಲೋಟ ಕಬ್ಬಿನರಸವನ್ನು ಕುಡಿಯಲು ನೀಡಿದರು.
ಬೆಂಗಳೂರಿನಂತಹ ಮಹಾನಗರದಲ್ಲಿ ಸಾವಯವ ಬೆಲ್ಲ ತಯಾರಿಕೆಯನ್ನು ಕಂಡು ನಿಜಕ್ಕೂ ಬೆರಗಾದೆ. ಜತೆಗೆ ಪುಟ್ಟ ಅಚ್ಚರಿ ಮತ್ತು ಸಂತೋಷ ಸಹ. ಸಂತೋಷವೇಕೆಂದರೆ, ನಮ್ಮ ಸುತ್ತಲೂ ಲಾಭಬಡುಕ ವ್ಯಾಪಾರಿ ಸಂಸ್ಥೆಗಳು, ಬಹು ರಾಷ್ಟ್ರೀಯ ಸಂಸ್ಥೆಗಳು ಕೃತಕ ಮತ್ತು ಕಲಬೆರಕೆ ಬೆಲ್ಲವನ್ನು ಗ್ರಾಹಕರಿಗೆ ತಿನ್ನಿಸುತ್ತಿರುವಾಗ, ಇಲ್ಲೊಂದು ಆಶ್ರಮವು ಸಾವಯವ ಬೆಲ್ಲವನ್ನು, ಯಾವುದೇ ಬಣ್ಣ ಬೆರೆಸದೇ ತಯಾರಿಸಿ, ಜನರಿಗೆ ಮಾರುತ್ತಿದೆ ಯಲ್ಲೇ ಅದಕ್ಕೇ ಸಂತಸ. ದೈತ್ಯ ನೆಟ್ ವರ್ಕ್ ಇರುವ ಮಾರಾಟ ಸಂಸ್ಥೆಗಳು ಬೆಲ್ಲ ಮತ್ತು ಸಾವಯವ ಬೆಲ್ಲ ಎಂದು ಎರಡು ವಿಧದ ಬೆಲ್ಲವನ್ನು ಧೈರ್ಯವಾಗಿ ಮಾರುತ್ತಿದ್ದಾರೆ, ಅವರ ಉತ್ಪನ್ನಗಳ ಪಟ್ಟಿಯಲ್ಲಿ ಸಾವಯವ ಬೆಲ್ಲಕ್ಕೆ ದುಪ್ಪಟ್ಟು ಬೆಲೆ!
ಅಂದರೆ ಅವರು ಮಾರುತ್ತಿರುವ ಸಾಮಾನ್ಯ ಬೆಲ್ಲ ಎಂಬುದು ಕಲಬೆರಕೆ ಎಂದು ಸೂಕ್ಷ್ಮವಾಗಿ ಹೇಳಿದಂತೆಯೇ ಅಲ್ಲವೇ? ಸಾವನ್ ದರ್ಬಾರ್ ಆಶ್ರಮದ ಮುಂಭಾಗದಲ್ಲಿ ಒಂದೊಂದೇ ಕಿಲೋ ತೂಕದ ಸಾವಯವ ಬೆಲ್ಲದ ಪುಡಿ ಪ್ಯಾಕೆಟ್ ಮಾರುತ್ತಿದ್ದರು. ಅವರು ಮನಸ್ಸು ಮಾಡಿದ್ದರೆ, ಯಾವುದಾದರೂ ಸಗಟು ವ್ಯಾಪಾರಿ ಸಂಸ್ಥೆಗೆ ಅಷ್ಟೂ ಬೆಲ್ಲವನ್ನು ಮಾರಿ, ಕೈತೊಳೆದುಕೊಳ್ಳಬಹುದಿತ್ತು. ಜನಸಾಮಾನ್ಯರಿಗೆ ಉತ್ತಮ ಬೆಲ್ಲ ಸಿಗಲಿ ಎಂಬ ಇರಾದೆಯಿಂದಲೇ, ಬೆಲ್ಲದ ಪ್ಯಾಕೆಟ್‌ಗಳನ್ನು ಮಾರುತ್ತಿರುವ ಈ ವಿದ್ಯಮಾನವು, ೨೧ನೆಯ ಶತಮಾನದ ಅಚ್ಚರಿಗಳಲ್ಲಿ ಒಂದು ಎಂದೇ ಅನಿಸಿತು.
ಬೆಂಗಳೂರು ನಗರದಲ್ಲಿ ಸಾವಯವ ಬೆಲ್ಲ ತಯಾರಿಯನ್ನು ಕಂಡು, ನೆನಪಾಗಿದ್ದು ಮೂರು ವಿಧದ ಬೆಲ್ಲ ತಯಾರಿಕೆ. ಮೊದಲನೆಯ ದೆಂದರೆ, ೨೦ನೆಯ ಶತಮಾನದಲ್ಲಿ ನಮ್ಮ ಹಳ್ಳಿಯಲ್ಲಿ ತಯಾರಿಸುತ್ತಿದ್ದ ಸಾವಯವ ಬೆಲ್ಲ. ಆಗಿನ ಹಳ್ಳಿಗಳಲ್ಲಿ ಎಲ್ಲವೂ ಸಾವಯವ ತಾನೆ! ರೈತರು ಸ್ವಲ್ಪ ಸ್ವಲ್ಪವೇ ಕಬ್ಬು ಬೆಳೆದು, ಕೋಣಗಳನ್ನು ಓಡಿಸಿ ಕಬ್ಬನ್ನು ಅರೆಸಿ, ಕಬ್ಬಿನ ಹಾಲು ತಯಾರಿಸಿ, ಕೊಪ್ಪರಿಗೆಯಲ್ಲಿ ಕುದಿಸಿ, ಮುದ್ದೆ ಬೆಲ್ಲ ತಯಾರಿ ಸುವ ಪುರಾತನ ಪದ್ಧತಿ ನಮ್ಮೂರಿ ನಲ್ಲಿತ್ತು. ಆ ರೀತಿ ಕೋಣಗಳ ಸಹಾಯದಿಂದ ಕಬ್ಬಿನ ರಸತೆಗೆದು ಬೆಲ್ಲ ತಯಾರಿಸುವ ‘ಆಲೆಮನೆ’ ಈಗ ಬಹುತೇಕ ಕಣ್ಮರೆಯಾಗಿದೆ. ಅಂದು ಆಲೆಮನೆ ಹೂಡುವುದೆಂದರೆ ಒಂದು ರೀತಿಯ ಗೌರವ.
ಜತೆಗೆ ಹಳ್ಳಿಗರಲ್ಲಿ ಪರಸ್ಪರ ಬಾಂಧವ್ಯ ಬೆಳೆಸಿಕೊಳ್ಳುವ, ಗಟ್ಟಿಪಡಿಸುವ ಸಂದರ್ಭವೂ ಅದಾಗಿತ್ತು. ಊರಿನವರಿಗೆಲ್ಲವೂ ‘ಕಬ್ಬಿನ ಹಾಲು’ನೀಡುವ ಔದಾರ್ಯ. ೧೯೭೦ರ ದಶಕದಲ್ಲಿ ರಿಪ್ಪನ್‌ಪೇಟೆಯ ಒಂದು ಆಲೆಮನೆಯವರು, ಬಸ್ ಪ್ರಯಾಣಿಕರೆಲ್ಲರಿಗೂ ಕಬ್ಬಿನ ಹಾಲನ್ನುಉಚಿತವಾಗಿ ಹಂಚುತ್ತಿದ್ದರು! ಅಂದು ನಮ್ಮ ಹಳ್ಳಿಗಳಲ್ಲಿ ತಯಾರಿಸುತ್ತಿದ್ದ ಬೆಲ್ಲ ಶುದ್ಧ ಸಾವಯವ – ಕಲ್ಮಶ ತಿಳಿಯಾಗಲು ಒಂದುಕೊಪ್ಪರಿಗೆ ಕಬ್ಬಿನ ಹಾಲಿಗೆ ಒಂದೆರಡು ಮುಷ್ಟಿ ಸುಣ್ಣವನ್ನು ಹಾಕುತ್ತಿದ್ದುದು ಬಿಟ್ಟರೆ.
ಬೆಲ್ಲ ತಯಾರಿಕೆಯ ಎರಡನೆಯ ಉದಾಹರಣೆಯನ್ನು ನಾನು ನೋಡಿದ್ದು ಶ್ರೀರಂಗಪಟ್ಟಣದ ಹತ್ತಿರ. ಸುಮಾರು ಹತ್ತು ವರ್ಷಗಳ ಹಿಂದೆ, ಮೈಸೂರಿಗೆ ಹೊರಟಾಗ, ಕರಿಘಟ್ಟದ ಬಳಿ ರಸ್ತೆ ಬದಿಯಲ್ಲೇ ಸಾಲು ಸಾಲಾಗಿ ಬೆಲ್ಲ ತಯಾರಿಸುವ ಘಟಕಗಳನ್ನು ಕಂಡು, ಕುತೂಹಲದಿಂದ ಬೆಲ್ಲ ತಯಾರಿ ನೋಡಲು ಹೋದೆವು. ಕಬ್ಬು ಅರೆದು, ಕೊಪ್ಪರಿಗೆಗೆ ಸುರಿದು ಬೆಲ್ಲ ತಯಾರಿ ನಡೆದಿತ್ತು. ಅಚ್ಚು ಬೆಲ್ಲವನ್ನು ತಯಾರಿಸಿ, ಆರಲು ಬಿಟ್ಟಿದ್ದರು. ನಾಲ್ಕಾರು ಮಂದಿ ಕೆಲಸಗಾರರಿದ್ದರು. ‘ಇದೇನು ಬಣ್ಣದ ಪ್ಯಾಕೆಟ್?’ ಎಂದು ಅಲ್ಲೇ ಇದ್ದ ಕೆಂಪು ಬಣ್ಣದಪೊಟ್ಟಣವನ್ನು ತೋರಿಸಿ ಕೇಳಿದೆ. ‘ಇದು ಬೆಲ್ಲಕ್ಕೆ ಬಣ್ಣ ಬರಲು ಹಾಕುವಂತದ್ದು’ ಎಂದ ಅಲ್ಲಿದ್ದ ಕೆಲಸಗಾರ.
ಅದೊಂದು ಕೃತಕ ರಾಸಾಯನಿಕ ಬಣ್ಣ, ಅದನ್ನು ಜನರು ಸೇವಿಸಿದರೆ ಆರೋಗ್ಯ ಏನಾದೀತು ಎಂಬ ಪರಿಕಲ್ಪನೆ ಆತನಿಗೆ ಇರಲಿಲ್ಲ.ಅಚ್ಚು ಬೆಲ್ಲವನ್ನು ತಯಾರಿಸಿ, ರಟ್ಟಿನ ಡಬ್ಬಗಳಿಗೆ ಹಾಕಿ, ಒಂದು ಕೊಠಡಿಯಲ್ಲಿ ಜೋಡಿಸಿದ್ದರು. ಅದೇ ಕೊಠಡಿಯ ಇನ್ನೊಂದು ಮೂಲೆ ಯಲ್ಲಿ ಸಕ್ಕರೆಯ ಮೂಟೆಗಳಿದ್ದವು. ‘ಇದೇಕೆ ಸಕ್ಕರೆ?’ ಎಂದು ಕೇಳಿದೆ. ‘ಬೆಲ್ಲ ಸಿಹಿಯಾಗಲು ಸಕ್ಕರೆ ಬೆರೆಸುತ್ತೇವೆ’ ಎಂದನಾ ಭೂಪ! ಬೆಲ್ಲ ತಯಾರಿಸುವಾಗ ಸಕ್ಕರೆ ಬೆರೆಸುತ್ತಾರೆ ಎಂಬ ವಿಚಾರ ಮೊದಲ ಬಾರಿ ಗೊತ್ತಾದಾಗ, ಕಣ್ಣಾರೆ ಕಂಡಾಗ ಸಣ್ಣದೊಂದು ಆಘಾತ! ಅಂದು ಬೆಲ್ಲದ ಬೆಲೆ ಸುಮಾರು ರೂ.೪೦/- ಇದ್ದರೆ ಸಕ್ಕರೆ ಬೆಲೆ ರೂ.೨೫/- ಇತ್ತು. ಈ ದರ ವ್ಯತ್ಯಾಸದ ಲಾಭ ಪಡೆಯಲು ಸಕ್ಕರೆಯನ್ನು ಬೆಲ್ಲಕ್ಕೆ ಬೆರೆಸುತ್ತಿದ್ದಾರೆಯೆ ಎಂಬ ಜಿಜ್ಞಾಸೆ.
ಲಾಭದ ಆಸೆಗೆ, ತಿನ್ನುವ ವಸ್ತುವಿನಲ್ಲಿ ಈ ರೀತಿಯ ಕಲಬೆರೆಕೆಯೆ ಎಂಬ ಕಳವಳ. ಮೂರನೆಯ ಬಾರಿ ಬೆಲ್ಲದ ತಯಾರಿಕೆಯನ್ನು ಕಂಡು ಸಂಪೂರ್ಣ ಆಘಾತಕ್ಕೆ ಒಳಗಾಗಿದ್ದು ಹೊಸಪೇಟೆಯ ಹತ್ತಿರ. ಎರಡು ವರ್ಷಗಳ ಹಿಂದೆ ಹಂಪೆಯನ್ನು ನೋಡಲು ಹೋಗಿದ್ದ ನಾವು, ಬೆಲ್ಲ ತಯಾರಿಯ ಪ್ರಕ್ರಿಯೆಯನ್ನು ಮಕ್ಕಳಿಗೆ ತೋರಿಸಲು, ಮುಖ್ಯರಸ್ತೆಯ ಪಕ್ಕದಲ್ಲೇ ಇದ್ದ ‘ಬೆಲ್ಲದ ಕಾರ್ಖಾನೆ’ಗೆ ಹೋದೆವು. ಹೊರ ಭಾಗ ದಲ್ಲಿ ಒಂದಷ್ಟು ಕಬ್ಬಿನ ಸಿಪ್ಪೆಯ ರಾಶಿ ಹರಡಿತ್ತು. ಆದರೆ, ನಾವು ಹೋಗಿದ್ದಾಗ ಕಬ್ಬನ್ನು ಸಾಕಷ್ಟು ಪ್ರಮಾಣದಲ್ಲಿ ಅರೆಯುತ್ತಿದ್ದ ಸೂಚನೆಅಲ್ಲಿ ಸಿಗಲಿಲ್ಲ. ಬೆಲ್ಲ ತಯಾರಿಸಲು ಮೂವರು ವ್ಯಕ್ತಿಗಳು ತೊಡಗಿಕೊಂಡಿದ್ದರು.
ಮಾತನಾಡಿಸಿದಾಗ, ಕನ್ನಡ ಗೊತ್ತಿಲ್ಲದ ಉತ್ತರ ಭಾರತೀಯರವರಂತೆ ವರ್ತಿಸಿದರು. ನಮ್ಮ ಕಣ್ಣೆದುರೇ ಒಬ್ಬ ಕೆಲಸಗಾರನು, ಸಕ್ಕರೆಯ ಒಂದು ಚೀಲವನ್ನು ಓಪನ್ ಮಾಡಿ, ಪೂರ್ತಿ ಸಕ್ಕರೆಯನ್ನು ಒಂದು ಕೊಪ್ಪರಿಗೆಗೆ ಸುರಿದ. ಆ ಕೊಪ್ಪರಿಗೆ ತುಂಬಾ ಕೆಂಪು ಬಣ್ಣದ ದ್ರವ ಇತ್ತು. ಅಕ್ಕ ಪಕ್ಕದಲ್ಲಿ ಕೃತಕ ಬಣ್ಣಗಳ ಪ್ಯಾಕೆಟ್‌ಗಳು ಹರಡಿದ್ದವು. ಅಲ್ಲಿನ ಪರಿಸ್ಥಿತಿಯನ್ನು ಕಂಡಾಗ, ಆ ಬೆಲ್ಲ ತಯಾರಿಕೆಗೆ ಮೂಲ ದ್ರವ್ಯವೆಂದರೆ ಕಳಪೆ ಗುಣಮಟ್ಟದ ಸಕ್ಕರೆ ಎಂದನಿಸಿತು. ಆಗ ಬೆಲ್ಲದ ಬೆಲೆಯು ಸಕ್ಕರೆಗಿಂತ ಎರಡು ಪಟ್ಟು ಇತ್ತು!
ಬೆಲ್ಲ ತಯಾರಿಯ ವಿಧಾನವನ್ನು ಮಕ್ಕಳಿಗೆ ತೋರಿಸಲೆಂದು ಹೋಗಿದ್ದ ನಾವು ಪೆಚ್ಚಾಗಿದ್ದಂತೂ ನಿಜ. ನಂತರ ಹೊಸಪೇಟೆಯ ಒಬ್ಬರು ಪರಿಚಿತರು ಹೇಳಿದರು ‘ಅದು ಸಕ್ಕರೆಬೆಲ್ಲ ಸಾರ್!’ ಇದೆಂತಹ ಘೋರ ವಿಚಾರ! ಕನ್ನಡದ ಆಡುಮಾತಿನ ನಿಘಂಟಿಗೆ ‘ಸಕ್ಕರೆಬೆಲ್ಲ’ ಎಂದಒಂದು ಹೊಸ ಪದ ಸೇರ್ಪಡೆಯಾಗಿದೆಯೆ? ಕಡಿಮೆ ಬೆಲೆಯ ಸಕ್ಕರೆಯನ್ನು, ಕಳಪೆ ಗುಣ ಮಟ್ಟದ ಸಕ್ಕರೆಯನ್ನು ಬೆರೆಸಿ, ಬೆಲ್ಲ ತಯಾರಿಸುವ ವ್ಯಾಪಕ ದಂಧ ನಮ್ಮ ನಾಡಿನಲ್ಲಿ ಬಹಿರಂಗವಾಗಿವಾಗಿ ನಡೆಯುತ್ತಿದೆಯೆ? ಸಕ್ಕರೆ ತಯಾರಿಸುವಾಗ ಬೆರೆಸುವ ರಾಸಾಯನಿಕದಿಂದಾಗಿ ಆರೋಗ್ಯ ಕೆಡಬಹುದು, ಆದ್ದರಿಂದ ಬೆಲ್ಲ ಒಳ್ಳೆಯದು ಎಂದು ತಿಳಿದು, ಅದನ್ನು ಆಹಾರದಲ್ಲಿ ಬಳಸುತ್ತಿರುವವರ ಅಮಾಯಕತನವನ್ನೇ ಬಳಸಿಕೊಂಡು ಇಂತಹದೊಂದು ಮೋಸ ನಮ್ಮ ರಾಜ್ಯದಲ್ಲಿ ನಡೆಯುತ್ತಿದೆ!
ಸಂಕ್ರಾಂತಿ ಹಬ್ಬಕ್ಕೆ ಎಳ್ಳಿನ ಜತೆ ಬೆರೆಸಲು ಅಚ್ಚಿನ ಬೆಲ್ಲ ಖರೀದಿಸಿದರೆ, ಅದರಲ್ಲಿ ಇರುವುದು ಬಹು ಪಾಲು ಸಕ್ಕರೆಯೆ? ಸಕ್ಕರೆ ಬೆರೆಸಿದ ಬೆಲ್ಲದ ತಯಾರಿಯನ್ನು ಎರಡು ಬಾರಿ ನೋಡಿದ ನಂತರ, ಇಂತಹ ಪ್ರಶ್ನೆಗಳು ಮನದಲ್ಲಿ ಮೂಡಿದವು. ಈ ವಿಚಾರವನ್ನು ಮೈಸೂರು, ಮಂಡ್ಯ, ಭದ್ರಾವತಿ ಮೊದಲಾದ ಕಡೆಯ ರೈತರ ಬಳಿ ಪ್ರಸ್ತಾಪಿಸಿದಾಗ, ಅದರಲ್ಲಿ ರಹಸ್ಯವೇನೂ ಇಲ್ಲ, ಈಚಿನ ಒಂದೆರಡು ದಶಕಗಳಲ್ಲಿ ಬೆಲ್ಲ ತಯಾರಿಸುವಾಗ ಕಡಿಮೆ ಬೆಲೆಯ ಸಕ್ಕರೆ ಬೆರೆಸುವುದು ಸಾಮಾನ್ಯ ಎನಿಸಿದೆ ಎಂದು ನೀರಸವಾಗಿ ಪ್ರತಿಕ್ರಿಯಿಸಿದರು.
ರೈತರ ಇಂತಹ ಪ್ರತಿಕ್ರಿಯೆನ್ನು ಕೇಳಿ, ‘ತಪ್ಪನ್ನು ತಪ್ಪು ಎಂದು ಹೇಳುವುದು ಸಹ ಅಗತ್ಯವಿಲ್ಲ’ ಎಂಬ ಸ್ಥಿತಿಯಲ್ಲಿ ನಾವಿದ್ದೇವೆಯೇಎಂದನಿಸಿದ್ದು ಮಾತ್ರ ಸುಳ್ಳಲ್ಲ. ಸಾವಯವ ಬೆಲ್ಲ ಎಂದಾಕ್ಷಣ, ಅದನ್ನೇ ನಾವು ತಿನ್ನಬೇಕು ಎಂದು ಒತ್ತಾಯಿಸಿದಾಕ್ಷಣ ಕೆಲವು ಪ್ರಶ್ನಿಸ ಬಹುದು. ‘ಅಷ್ಟೇ ತಾನೆ, ಸಕ್ಕರೆಯೂ ತಿನ್ನುವ ವಸ್ತು. ಅದನ್ನು ಬೆರೆಸಿದ ಬೆಲ್ಲ ಅಂತಹ ಕಲಬೆರಕೆ ಎನ್ನಲಾಗದು’ ಎಂದು ವಾದಿಸಬಹುದು. ಆದರೆ, ಸಕ್ಕರೆಯು ಆರೋಗ್ಯಕ್ಕೆ ಹಾನಿಕರ ಎಂಬುದು ವೈದ್ಯಕೀಯವಾಗಿ ಋಜುವಾತಾಗಿದೆ.
ನಮ್ಮ ದೇಶದಲ್ಲಿ ಸಕ್ಕರೆ ಕಾರ್ಖಾನೆಗಳನ್ನು ವ್ಯಾಪಕವಾಗಿ ಸ್ಥಾಪಿಸಲು ಆರಂಭಿಸಿದಾಗ, ಮಹಾತ್ಮಾ ಗಾಂಧಿಯವರು ಅದನ್ನು ವಿರೋಧಿಸಿದ್ದರು. ‘ಸಕ್ಕರೆ ಸೇವಿಸಿದರೆ ಹೃದಯಾಘಾತ ಬೇಗನೆ ಆಗಬಹುದು’ ಎಂಬ ಕಾರಣಕ್ಕಾಗಿಯೇ ಅವರು ಅದನ್ನು ವಿರೋಧಿಸಿದ್ದರು. ಆದರೆ, ಆ ವಿಚಾರವು ಇಂದು ಪೂರ್ಣವಾಗಿ ಮರೆಗೆ ಸರಿದಿದೆ. ಕ್ರಮೇಣ ಸಕ್ಕರೆ ಉದ್ಯಮ ಬೆಳೆಯಿತು, ಸಕ್ಕರೆ ಲಾಬಿಯು ನಮ್ಮ ದೇಶದ ಕೆಲವುಭಾಗಗಳಲ್ಲಿ ಪ್ರಬಲವಾಗಿದೆ. ಅದೇನೇ ಇದ್ದರೂ, ಬೆಲ್ಲ ತಯಾರಿಸುವಾಗ ಅದಕ್ಕೆ ಸಕ್ಕರೆ ಬೆರೆಸುವುದು ನ್ಯಾಯಸಮ್ಮತವಲ್ಲ. ಅಲ್ಲವೆ?