ಜಾತಿ ಮತಗಳ ಪರಿಧಿ ದಾಟಿದ ವಿಶ್ವಸಂತ ಕುವೆಂಪು
ತನ್ನಿಮಿತ್ತ
ಹರೀಶ್ ಪುತ್ತೂರು
ವಿಶ್ವ ಜೀವನವೊಂದು ಪಾರವಿಲ್ಲದ ಸಿಂಧು, ಮೇಲೆ ತೆರೆನೊರೆ ಎದ್ದು ಭೋರ್ಗರೆಯುತಿರೆ ರೇಗಿ, ಅದರಂತರಾಳದಲಿ ಗುಪ್ತ ಗಾಮಿನಿ ಯಾಗಿ ಹೃದಯಗಳು ನಲಿಯುತಿರೆ ಪ್ರೇಮತೀರ್ಥದಿ ಮಿಂದು..!
ಎಂತಹ ಅರ್ಥ ಪೂರ್ಣ, ಅದ್ಬುತ ಸಾಲುಗಳನ್ನು ಪೋಣಿಸಿದ್ದಾರೆ ರಾಷ್ಟ್ರ ಕವಿ ಕುವೆಂಪು. ಇವರು ಬರೆದ ಇಂಥ ಕೋಟ್ಯಂತರ ಅಕ್ಷರ ಗಳನ್ನು ಮನುಷ್ಯ ಸಂಕಲು ಎಂದಿಗೂ ಮರೆಯಲಾಗದು. ಕನ್ನಡಕ್ಕೆ ಹೊಸ ನುಡಿಗಟ್ಟು ಹಾಗೂ ಹೊಸ ಕಲ್ಪನೆಗಳನ್ನು ನೀಡಿ ಹೊಸಗನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಧೀಮಂತ ಸಾಹಿತಿ ಅವರು. ‘ಮನುಜ ಮತ ವಿಶ್ವಪಥ’ ಸಂದೇಶವನ್ನು ರಾಷ್ಟ್ರಕ್ಕೆ ಸಾರಿದ ಶ್ರೇಷ್ಠವಿಶ್ವಮಾನವ ಎಂದೇ ಖ್ಯಾತಿ ಪಡೆದ ಮಹಾನ್ ಚೇತನ ಕುವೆಂಪು.
ಈ ದಿನವನ್ನು ವಿಶ್ವ ಮಾನವ ದಿನವನ್ನಾಗಿ ರಾಷ್ಟ್ರದಾದ್ಯಂತ ಆಚರಣೆ ಮಾಡುತ್ತೇವೆ. ಬಹುಶಃ ಇದಕ್ಕಿಂತ ಹೆಚ್ಚಿನ ಗೌರವ ಇರಲಿಕ್ಕಿಲ್ಲ ಆ ಸಿದ್ಧಾಂತಕ್ಕೆ. ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ. ಡಿಸೆಂಬರ್ 29, 1904ರಲ್ಲಿ ವೆಂಕಟಪ್ಪ ಹಾಗೂ ಸೀತಮ್ಮ ದಂಪತಿಯ ಪುತ್ರರಾಗಿತಾಐಇಮನೆಯಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೊಡಿಗೆಯಲ್ಲಿ ಜನನ.
ಬಾಲ್ಯದ ದಿನಗಳನ್ನು ತಂದೆಯ ಊರಾದ ಶಿವಮೊಗ್ಗಜಿಲ್ಲೆಯತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಕಳೆದರು. ವರಕವಿ ಬೇಂದ್ರೆಯವ ರಿಂದ ‘ಯುಗದ ಕವಿ ಜಗದ ಕವಿ’ ಎನಿಸಿಕೊಂಡು, ಕನ್ನಡ ನಾಡಿನ ಎರಡನೆಯ ರಾಷ್ಟ್ರಕವಿ ಪಟ್ಟವೇರಿದವರು. ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ನಾಡಿಗೆ ತಂದು ಕೊಟ್ಟವರು. ಕರ್ನಾಟಕ ಸರಕಾರ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದ ಹೆಗ್ಗಳಿಕೆ ಇವರದ್ದು.
ಭೂಲೋಕಕ್ಕೆ ಜನ್ಮ ತಾಳಿದ ಜೀವಿಗಳಲ್ಲಿ ನಾವೆಲ್ಲ ಬುದ್ಧಿವಂತ ಜೀವಿಗಳೇ. ‘ವಿಶ್ವಮಾನವ’ ಅರ್ಥಗ್ರಹಣದ ಮೊದಲು, ನಮ್ಮ ಅಭಿ ಮಾನದ ಪರಿಧಿ ನಾವು ದೊಡ್ದವರಾದಂತೆಲ್ಲ ಹೇಗೆ ವಿಸ್ತಾರವಾಗುತ್ತ ಹೋಗುತ್ತದೆ ಎಂಬುದನ್ನು ಸೋದಾಹರಣವಾಗಿ ಅವಲೋಕಿಸ ಬೇಕು. ಈ ಕೆಲಸ ಕೆಲವರಿಗೆ ವಿಷಯಾಂತರ ಎಂದು ಅನಿಸಿದರೂ, ಅಭಿಮಾನದ ಹರವಿನ ಬೇಲಿಗಳು ಹೇಗಿರುತ್ತವೆ, ಅದರ ಸಾರ್ವತ್ರಿ ಕತೆ ಹೇಗೆ ವಿಶ್ವಮಾನವ ತತ್ವದ ಮೂಲಹೇತುವಾಗುತ್ತದೆ ಎಂದು ಪ್ರತಿಪಾದಿಸುವುದರಲ್ಲಿ ಮನುಷ್ಯ ನಾದವನಿಗೆ ಸ್ವಾತಂತ್ರ್ಯವಿದೆ ಯೋಚನಾ ಶಕ್ತಿ ಇದೆ.
ಭೌಗೋಳಿಕ ಪರಿಧಿಗಳಂತೆಯೇ, ಕುಲ-ಗೋತ್ರ-ಜಾತಿ-ಮತ-ಪಂಗಡ ಗಳ ವಿಷಯವೂ ಇದೇ ವಿಕಸನ ತತ್ವವನ್ನು ಆಧರಿಸಿದೆ. ಎಷ್ಟು ವಿಸ್ತಾರದ, ವೈಶಾಲ್ಯದ ವರ್ತುಲವನ್ನು ನಾವು ನಮ್ಮದೆಂದು ಗುರುತಿಸಿಕೊಳ್ಳುತ್ತೇವೋ ಅದು ನಮ್ಮ ಜಾತಿ, ಮತವೆನಿಸುತ್ತದೆ. ಆ ವರ್ತುಲದಲ್ಲಿ ನಮ್ಮ ನಂಬಿಕೆಗಳು, ಮೌಲ್ಯಗಳು ನಿರ್ಧರಿತವಾಗುತ್ತವೆ. ಆದರೆ ಅಷ್ಟಕ್ಕೇ ಸೀಮಿತಗೊಳಿಸದೆ ‘ನನ್ನದು, ನನ್ನವರು’ ಎಂಬ ಪರಿಧಿಯನ್ನು ಇಡಿಯ ವಿಶ್ವಕ್ಕೇ ವಿಸ್ತರಿಸಿದಾಗ ಸಹಜವಾಗಿಯೇ ‘ನಾನು ಗುರುತಿಸುವ ಒಂದೇ ಜಾತಿಯೆಂದರೆ ಮನುಷ್ಯಜಾತಿ’ ಎಂಬ ಭಾವನೆ ಆವಿರ್ಭವಿಸುತ್ತದೆ.
ಆದರೆ ನನಗೊಬ್ಬನಿಗೇ ಈ ಭಾವ ಉದ್ಭವಿಸಿ ಪ್ರಯೋಜನವೇನು ಬಂತು? ವಿಶ್ವದ ಪ್ರತಿಯಾಬ್ಬನೂ ಇದೇ ಭಾವವನ್ನು ಹೊಂದಿದರೆ, ಅದನ್ನೇ ಅಲ್ಲವೆ ನಮ್ಮ ಪ್ರಾಜ್ಞರು ವಸುಧೈವ ಕುಟುಂಬಕಂ..’ ಎಂದಿದ್ದು. ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಕುವೆಂಪು ಅವರ ಸಾಹಿತ್ಯ ಕೃತಿಗಳು ಪ್ರೇರಣೆಯಾಗಿವೆ. ಅವರು ಕೃತಿಯಲ್ಲಿನ ಮೌಲ್ಯಗಳನ್ನು ಕುರಿತು ಯುವ ಸಮುದಾಯ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಪ್ರತಿಯೊಬ್ಬರು ಶ್ರಮಿಸಬೇಕಿದೆ. ಕುವೆಂಪು ಅವರ ವೈಚಾರಿಕ ನೆಲೆಗಟ್ಟಿನ ಹಿನ್ನಲೆಯ ಬಗ್ಗೆ ಹಿಂದಿಗಿಂತ ಇಂದು ಹೆಚ್ಚಿನ ಅರಿವು ಮೂಡಿಸುವ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಕೇವಲ ಡಿಸೆಂಬರ್29ಮಾತ್ರವಲ್ಲ ಜೀವನಾದ್ಯಂತ ಅವರನ್ನು ಪ್ರತಿ ದಿನವೂ ಸ್ಮರಿಸಿಕೊಳ್ಳುವಂತಿರುತ್ತದೆ.
ಮಲೆನಾಡಿನ ಕುಪ್ಪಳ್ಳಿ ಎಂಬ ಹೊರಜಗತ್ತಿಗೆ ಪರಿಚಯವೇ ಇಲ್ಲದಿದ್ದ ಕುಗ್ರಾಮದಲ್ಲಿ ಹುಟ್ಟಿ, ಮುಂದೆ ರಸ ಋಷಿಯಾಗಿ, ಕಥೆ, ಕಾದಂಬರಿ, ಕವನ, ಮಹಾಕಾವ್ಯ, ನಾಟಕ, ಮಕ್ಕಳ ಕವನ, ವಿಮರ್ಶೆ ಹೀಗೆ ಸಾಹಿತ್ಯ ಕ್ಷೆತ್ರದ ಎಲ್ಲ ವಿಭಾಗಗಳಲ್ಲೂ ಅತ್ಯುತ್ಕೃಷ್ಟ ಸಾಧನೆ ಮಾಡಿ ದವರು ಮತ್ತು ಇಡೀ ವಿಶ್ವವೇ ತೀರ್ಥಹಳ್ಳಿ ತಾಲೂಕಿನ ಸಣ್ಣ ಗ್ರಾಮ ಕುಪ್ಪಳ್ಳಿಯ ಕಡೆ, ಕನ್ನಡ ಸಾಹಿತ್ಯದ ಕಡೆ ತಿರುಗಿ ನೋಡುವಂತೆ ಮಾಡಿದ ಮೇರು ಸಾಹಿತಿ ನಮ್ಮ ಕುವೆಂಪು.
ಕನ್ನಡ ಸಾಹಿತ್ಯ ಮತ್ತು ಭಾರತೀಯ ಸಾಹಿತ್ಯಕ್ಕಷ್ಟೆ ಅಲ್ಲದೆ ವಿಶ್ವ ಸಾಹಿತ್ಯಕ್ಕೆ ವಿಚಾರ ಕ್ರಾಂತಿಯ ಮಹಾಬೆಳಕು ನೀಡಿದ ಮಹಾನ್ ಯುಗ ಪುರುಷ ರಾಷ್ಟ್ರ ಕವಿ ಕುವೆಂಪು ಅವರ ಕೊಡಗೆ ಮಹತ್ತರವಾದದ್ದು.
ಯುವ ಬರಹಗಾರರು