ಕಳೆದು ಹೋದ ಮುಗುಳ್ನಗೆ – ಪರಿಹಾಸ ಪುರ
ಅಲೆಮಾರಿಯ ಡೈರಿ
ಸಂತೋಷಕುಮಾರ ಮೆಹೆಂದಳೆ
mehandale100@.
ಅವನಿಗೆ ಅದ್ಯಾಕಾದರೂ ಇದನ್ನೊಂದು ಚೆಂದದ ಮುದ ನೀಡುವ ರಾಜ್ಯ ಮಾಡಬೇಕೆಂದು ಕನಸು ಬಿದ್ದಿತ್ತೋ, ಅದ್ಯಾಕಾದರೂ ಈ ತುದಿಗೆ ಅನಾಹುತಕಾರಿ ಶ್ರಮ ಹಾಕಿ ಅದ್ಭುತ ಎನ್ನುವ ದೇವಸ್ಥಾನಕ್ಕಿಂತ ಚೆಂದದ ಊರು ಕಟ್ಟಿ ರಾಜಧಾನಿ ಮಾಡಬೇಕೆಂಬ ಹುಕಿ ಹುಟ್ಟಿತ್ತೋ ಆ ದೇವರಿಗೂ ಗೊತ್ತಿರಲಿಕ್ಕಿಲ್ಲ.
ಆದರೆ ಬರಲಿ ರುವ ದಿನಗಳಲ್ಲಿ ಈ ರೇಂಜಿಗೆ, ತನ್ನ ಕನಸಿನ ಊರು ಬರಬಾ ದಾಗಿ ಹೋದೀತು ಎನ್ನುವ ಸಣ್ಣ ಸುಳಿವಾದರೂ ಹೇಗಾದರೂ ಸಿಕ್ಕಬೇಕಿತ್ತು ಆ ರಾಜನಿಗೆ ಎಂದು ನನಗೆ ಹಲವು ಬಾರಿ ಎನ್ನಿಸಿದ್ದಿದೆ. ಅದನ್ನು ನೆನೆಸಿಕೊಂಡಾಗಲೆಲ್ಲ, ನೋಡು  ವಾಗಲೆಲ್ಲ ಬರಬೇಕಾದ ‘ವಾಹ್’ ಎನ್ನುವ ಬದಲಿಗೆ ನಗುವನ್ನು ಕಳೆದುಕೊಂಡಿದ್ದೇನೆ. ಅಪರೂಪದ ಅನುಭವ ನೀಡಬೇಕಾದ ಪರಿಹಾಸದ ಬದಲಿಗೆ ಖಿನ್ನತೆಯೇ ಆವರಿಸಿ ದ್ದಿದೆ.
ಆ ನಿಟ್ಟಿನಲ್ಲಿ ಕೇವಲ ನಾಲ್ಕೆ ದು ದಶಕಗಳ ಕಾಲಾವಧಿಗಾಗಿ ರಣಗಾತ್ರದ ಬಂಡೆಗಳನ್ನು ಹೆಡೆಮುರಿ ಕಟ್ಟಿ ಅಗಾಧವಾದ ಶಿಲಾ ಸ್ವರ್ಗದ ಮೇರು ಎನ್ನುವಂತೆ ಪುರವನ್ನು ನಿರ್ಮಿಸುವ ಔಹಿತ್ಯವಾದರೂ ಏನಿತ್ತೋ ನನಗಿವತ್ತಿಗೂ ಅರ್ಥವಾಗಿಲ್ಲ. ಆದರೆ ಈ ಮುಕ್ತಪೀಡನ ಟೇಸ್ಟ್ ನೋಡಿದರೆ ಎಂಥ ಮಹಾರಾಜನಿಗೂ ಒಂದು ಕ್ಷಣ ಉರಿಯಾಗದೆ ಇರಲಿಕ್ಕಿಲ್ಲ. ಕಾರಣ ಅವನು ಕಟ್ಟಿದಂತಹ ಕಲ್ಲಿನ ನಗರಿ ಮತ್ತೊಮ್ಮೆ ಈ ಭೂಮಂಡಲದ ಮೇಲೆ ತಲೆ ಎತ್ತಲಿಲ್ಲ. ಅಸಲಿಗೆ ಅದರ ಒರಿಜಿನಲ್ ಕತೆ ಹೇಳಲೂ ಈಗ ಜನ, ದಾಖಲೆ ಅಥವಾ ಶಾಸನಗಳು ಲಭ್ಯವಿಲ್ಲ.
ಅವನ ಹೆಸರು ಲಲಿತಾದಿತ್ಯ ಮುಕ್ತಪೀಡ. ಮೊಘಲರ ದಾಳಿಗೆ ಸಿಕ್ಕ ಹಲವು ಅವಶೇಷಗಳ ಕತೆಗಳು ಸಾಯಲಿ, ಅದರ ಹೆಸರೂ ಇಲ್ಲ ದಂತೆ ನಾಮಾವಶೇಷವಾದವುಗಳ ಪಟ್ಟಿಗೆ ಸೇರಿರುವ ಈ ಪ್ರದೇಶ, ಶ್ರೀನಗರದ ಎಲ್ಲ ಸೌಂದರ್ಯವನ್ನು ಸೂರೆ ಹೊಡೆವ ಕಣಿವೆಯಪ್ರದೇಶದಲ್ಲಿತ್ತು. ಜನವೆಲ್ಲ ತನ್ನ ಊರಿನಲ್ಲಿ ಯಾವಾಗಲೂ ಹಸನ್ಮುಖರಾಗಿ ಯಾವ ಕೊರತೆ ಇಲ್ಲದಂತೆ ಇರಲಿ ಎಂದು ಆಗಿನ ಕಾಶ್ಮೀರದ ಕಾರ್ಕೋಟ ವಂಶದ ಮೂರನೆಯ ತಲೆ ಮಾರಿನ ರಾಜ ಲಲಿತಾದಿತ್ಯ ಮುಕ್ತಪೀಡ ಸರ್ವ ರೀತಿಯ ಮೂಲಭೂತ ಅವಶ್ಯಕತೆಗಳೊಂದಿಗೆ ಬೇಕು ಬೇಡದ್ದನೆಲ್ಲ ಗುಡ್ಡೆ ಹಾಕಿಯೂ, ಅದ್ಭುತ ಎನ್ನಿಸುವ ಸೌಲಭ್ಯಗಳೊಂದಿಗೆ ನಿರ್ಮಿಸಿ ಜನರನ್ನು ನೆಲೆಗೊಳಿಸಿದ್ದ.
ಅವನೆಣಿಕೆಯಂತೆ ಆ ನೆಲದಲ್ಲಿದ್ದುದಕ್ಕೆ ಜನರ ಮುಖದ ಮೇಲೆ ಯಾವತ್ತೂ ಒಂದು ಮಂದಹಾಸ ಇರುತ್ತಿತ್ತಂತೆ. ಅದು ಖುಷಿಗೆ ಎನ್ನುವು ದಕ್ಕಿಂತಲೂ ರಾಜ ಸಾಕ್ಷಾತ್ ದೇವರೆನ್ನುತ್ತಾರಲ್ಲ, ಹಾಗೆ ತಮ್ಮ ರಾಜ ಇದ್ದಲ್ಲೆ ಸ್ವರ್ಗ ತೋರಿಸಿದ್ದಕ್ಕೆ. ಹಾಗೆ ಖುಷಿಯಾಗಿ ಇರಲಿ ಎಂಬ ಕಾರಣಕ್ಕೆ ಅದಕ್ಕೆ ಪರಿಹಾಸ ಪುರ ಎಂದು ಹೆಸರಿಸಿದ್ದ. ಆದರೆ ಪರಿಸ್ಥಿತಿ ಬದಲಾಗಲು ಹೆಚ್ಚು ಸಮಯ ಬೇಕಿರಲಿಲ್ಲ. ತುಂಬ ಅಪರೂಪದ ಹೆಸರಾಗಿದ್ದ ರಾಜನ ನಾಡು ‘ಪರಿಹಾಸ ಪುರ’ ನೋಡು ನೋಡುತಿದ್ದಂತೆ, ದಾಳಿಗೆ ಸಿಕ್ಕಿತ್ತು.
ಅದರಲ್ಲೂ ತೀರ ಇಸ್ಲಾಂಮಿಗಳ ಪ್ರವೇಶದ ಆ ವಾರದ ಹೆಬ್ಬಾಗಿಲಿನಂತಿದ್ದ ಕಾಶ್ಮೀರದ ನಡುವಿನ ಮೇಲೆ ಹೊಯ್ದಾಡುತ್ತಿದ್ದ ಹೊಕ್ಕುಳಿ ನಂತಹ ಪ್ರದೇಶ ಪರಿಹಾಸಪುರಕ್ಕೆ ಕೈ ಇಡದವನು ರಾಜನಾದನಾದರೂ ಹೇಗೆ..? ಅದಕ್ಕೂ ಮೊದಲೇ ಲೆಕ್ಕದ ಹೊರಗೆ ಅಸಡ್ಡೆಗೂ ಈಡಾಗಿದ್ದು ಬಹಿರಂಗ ದುರಂತ.
ಅದರಲ್ಲೂ ಆಗಿನ ಕಾಲದಲ್ಲೇ೮೪ಸಾವಿರ ತೊಲೆಯ ವಿಷ್ಣುವಿನ ಚಿನ್ನದ ವಿಗ್ರಹವನ್ನು ಬಹಿರಂಗವಾಗಿ ದೇವಸ್ಥಾನದಲ್ಲಿ ನಿಲ್ಲಿಸುವಂತಹ ಸಾಹಸಕ್ಕಿಳಿದಿದ್ದ ಮುಕ್ತಪೀಡ ಲಲಿತಾದಿತ್ಯ ಎಂಬ ರಾಜನಿಗೆ ಹಾಗೊಂದು ಬಿಂದಾಸ್ ರಾಜ್ಯ ಮತ್ತು ಸೌಂದರ್ಯವನ್ನು ಬ್ಲೆಂಡ್ ಮಾಡುವ ಪರಿಕಲ್ಪನೆಯೇ ಅವನ ಭವ್ಯತೆಯನ್ನು ಬಿಂಬಿಸುತ್ತದೆ. ಸುಮಾರು ನೂರು ಕೆ.ಜಿ.ಗಳ ಬೆಳ್ಳಿಯ ಮೂರ್ತಿಗಳು, ಬುದ್ಧನ ಒಂದು ಶುದ್ಧ ತಾಮ್ರದ ಮೂರ್ತಿಗಳ ನಗರ ನಿರ್ಮಾಣದ ಮಾಹಿತಿ ಕಲ್ಹಣನ ಪ್ರಕಾರದೇವ ಲೋಕಕ್ಕೆ ಸಮನಾದ ಸೌಂದರ್ಯ ಭರಿತವಾಗಿತ್ತು. ರಾಜತರಂಗಿಣಿ ಕೃತಿಯ ಮಾಹಿತಿ ಇಲ್ಲದಿದ್ದರೆ ಈ ಪುರದ ಕಲ್ಪನೆಯೇ ಇರುತ್ತಿರಲಿಲ್ಲ.
ಆದರೆ ಮುಂದೊಮ್ಮೆ ಹೀಗಾದಿತೆನ್ನುವ ಕಲ್ಪನೆ ಲಲಿತಾದಿತ್ಯನಿಗೆ ಬರಲು ಸಾಧ್ಯವೇ ಇರಲಿಲ್ಲ ಅವನಿಗೆ. ಕಾರಣ ಆಗಿನ್ನೂ ಈ ಭೂಮಂಡಲದ ಮೇಲೆ ಇಸ್ಲಾಂ ಎನ್ನುವ ಸಂತತಿಗಳೇ ಉದ್ಭವಿಸಿರಲಿಲ್ಲ. ಸುಮಾರು ಕ್ರಿ.ಶ. ೬೯೦ – ೭೫೦ ಮಧ್ಯಮಾವಧಿಯಲ್ಲಿನ ಅರಸು ಮನೆತನದವನು ಈ ಮುಕ್ತ ಪೀಡ. ಆದರೆ ಅಲ್ಲಿಂದ ಅವನ ತರುವಾಯ ಆಳಿದ ಹಲವು ರಾಜ ವಂಶಸ್ಥರು ಈ ಪರಿಹಾಸ ಪುರದ ಜೊತೆಗೆ ಅಕ್ಷರಶಃ ಆಟವಾಡಿಬಿಟ್ಟರು. (ಈಗಿನ ಪಾಸೋರಾ ಅಥವಾ ಪರಾಸೋರ್) ಇದಕ್ಕೆ ಕೊನೆಯ ಮೊಳೆ ಹೊಡೆದವನು ಹದಿನಾಲ್ಕನೆಯ ಶತಮಾನದ ಸುಲ್ತಾನ ಸಿಖಂಧರ್.
ಈ ಮಧ್ಯೆ ಜೇಲಮ್ ನದಿ ಹಾಗು ಇತರ ನೀರಿನ ಪ್ರಮುಖ ಸಂಪನ್ಮೂಲಗಳನ್ನೇ ಈ ಪಟ್ಟಣದ ಸೆರಗಿನಿಂದ ಬೇರೆಡೆಗೆ ತಿರುಗಿಸುವ ನದಿ ತಿರುವು ಯೋಜನೆಗಳಂತಹ ಅನಾಹುತಕಾರಿ ಎಂಜಿನಿಯರಿಂಗ್‌ನ್ನು ಆಗಿನ ಅಭಿಯಂತ ಸೂರ್ಯಾ ಪಂಡಿತ ಆಗಲೇ ನದಿತಿರುವು ಮಾಡಿ ಗಬ್ಬೆಬ್ಬಿಸಿಬಿಟ್ಟಿದ್ದ. ಹಾಗಾಗಿ ಸೌಂದರ್ಯಕ್ಕೆ ಮೂಲವಾದ ನೀರಿನ ಸೆರಗೇ ಕಡಿದು ಹಾಕಿದ ಮೇಲೆ ಒಂದೊಂದೇ ಅವನತಿ ಆರಂಭವಾಗಿತ್ತು.
ನೀರಿನ ಹರಿವು ಮತ್ತು ಬೆಂಬಲ ಕಳೆದುಕೊಂಡ ನಾಡು, ಆಯಾ ರಾಜರ ಕೈಗೆ ಸಿಕ್ಕು ಪಳೆಯುಳಿಕೆಯಾಗುವ ಮೊದಲೇ ಸಾಲು ಸಾಲು ದಾಳಿಗೂ ಸಿಲುಕಿತು. ಮುಗುಳ್ನಗೆಯನ್ನು ಹುಟ್ಟಿಸಿ ಜನರಿಗಾಗಿ ದೇವಲೋಕ ಸೃಷ್ಟಿಸಿದ್ದ ಮುಕ್ತಪೀಡನ ನಾಡು ಕೇವಲ ಅರ್ಧ ಶತಮಾನ ದಲ್ಲಿ ತನ್ನ ವೈಭವ ಕಳೆದುಕೊಳ್ಳಲಾರಂಭಿಸಿತ್ತು. ಕೊನೆಯ ಮೊಳೆಯನ್ನು ಭಾರತದ ಅನೇಕ ಇತಿಹಾಸ ಹಾಳುಗೆಡವಿದ ಮೊಘಲರದಾಳಿಯ ನೇತಾರನಾದ ಸುಲ್ತಾನ್ ಸಿಕಂಧರ್ ಹೊಡೆದುಬಿಟ್ಟ.
ಅಪ್ಪಟ ಕಲ್ಲಿನ ಕಣಿವೆಯಾಗಿ ಬದಲಾಗಿತ್ತು ಪರಿಹಾಸ ಪುರ. ಮುಗುಳ್ನಗೆ ಸಾಯಲಿ ಅತ್ಲಾಗೆ, ಸತ್ತ ನಗರಕ್ಕಾಗಿ ಅಳಲು ಜನರೂ ಉಳಿದಿರಲಿಲ್ಲ. ಕಾರಣ ಮುಕ್ತಪೀಡನ ನಂತರದ ರಾಜರುಗಳು ಪರಿಹಾಸ ಪುರ ಎಂದರೆ ಪ್ರಯೋಗ ಶಾಲೆ ಮಾಡಿಕೊಂಡಿದ್ದು.ಸ್ವತಃ ಮುಕ್ತಪೀಡನ ಮಗನೇ ಮೊದಲಿಗೆ ಅದ್ಯಾಕೋ ಪರಿಹಾಸಪುರ ತೊರೆದುಬಿಟ್ಟ. ಜೀಲಮ್ ನದಿ ತಿರುಗಿಸಿ ಬಿಟ್ಟ. ನಂತರದಲ್ಲಿ ಬಂದ ರಾಜ ಆವಂತಿ ವರ್ಮ ಸಂಪೂರ್ಣ ಈ ನಗರವನ್ನು ಕಡೆಗಣಿಸಲ್ಪಟ್ಟಿದಕ್ಕೆ ಅವನತಿ ಶೀಘ್ರವಾಯಿತು.
ಕಲ್ಹಣನ ರಾಜ ತರಂಗಿಣಿಯಲ್ಲಿ ಸಂಪೂರ್ಣವಾಗಿ ದಾಖಲಿಸಿದ್ದ ಮಾಹಿತಿಯಂತೆ, ನಾಲ್ಕನೆಯ ತಲೆಮಾರಿನ ಶಂಕರ ವರ್ಮ ರಾಜಧಾನಿಯನ್ನು ಶಂಕರಪುರಕ್ಕೆ ಸಂಪೂರ್ಣವಾಗಿ ಬದಲಾಯಿಸಲು ಆರಂಭಿಸದ್ದಷ್ಟೆ ಅಲ್ಲದೆ ಚಿನ್ನದ ಸಮಕ್ಕೆ ಕಲೆ ಮತ್ತು ಕೆತ್ತನೆಯ ಬಲೆಗಳನ್ನು ಹೊಂದಿದ್ದ ಪರಿಹಾಸಪುರದ ಶಿಲಾ ಭಂಡಾರವನ್ನೆ ಕಿತ್ತು ಕಿತ್ತು ಸಾಗಿಸಿಬಿಟ್ಟ. ಅದರ ನಂತರದಲ್ಲೂ ಪಾಳು ಬಿದ್ದ  ನಗರವಾಗಿ ಯಾದರೂ ಸ್ವರ್ಗ ಸಮಾನವಾಗಿ ಕಂಗೊಳಿಸುತ್ತಲೇ ಇದ್ದ ಪರಿಹಾಸ ಪುರವನ್ನು ಹರ್ಷನ ಕಾಲದಲ್ಲೂ ಪೊರೆಯಲ್ಪಟ್ಟಿತಾದರೂ, ಸುಲ್ತಾನಸಿಕಂದರ್ ಬೆಂಕಿ ಇಡಿಸುವುದರ ಮೂಲಕ ಸುಟ್ಟು ಕೆಡುವಿದ.
ಅಲ್ಲಿಂದ ಇಲ್ಲಿಯವರೆಗೆ ಕನ್ಹಿಶಹರ್(ಕಲ್ಲಿನನಗರಿ)ಎಂದೇ ಕರೆಸಿಕೊಂಡ ಭಾಗ್ಯಕ್ಕೆ ಸೀಮಿತವಾಗಿ ಹೋಗಿದೆ. ಕಾಶ್ಮೀರದ ವರಹಾಮೂಲ (ಈಗಿನ ಬರಮುಲ್ಲಾ) ವಿಭಾಗದಲ್ಲಿ ಬರುವ ಪರಿಹಾಸಪುರ ಈಗೆಲ್ಲ ಕೇವಲ ಕತೆಯ ಭಾಗವಾಗಿ ಉಳಿದರೆ, ಕೆಲವೇ ಕೆಲವು ಕೆತ್ತನೆಯ ಶಿಲಾಬಂಡೆ ಮತ್ತು ದಿಬ್ಬದಂತಹ ಪೀಠದ ಹೊರತಾಗಿ ಏನನ್ನೂ ಉಳಿಸಿಲ್ಲ. ಕೆಲವು ಸಹೃದಯರ ಕಾರಣ ಒಂದಷ್ಟು ಅಲ್ಲಿನ ಸುಂದರ ಶಿಲೆಗಳ ಅಳಿದುಳಿದ ಭಾಗ ಶ್ರೀನಗರ ಮ್ಯೂಸಿಯಮ್ ಸೇರಿಕೊಂಡಿವೆ. ಬಾಕಿ ಏನಿದ್ದರೂ ಈಗ ಅದು ಹಾಳುಬಿದ್ದ ಕನ್ಹಿ ಶಹರ್ ಮಾತ್ರ.ತರ್ಸರ್ ಮರ್ಸರ್ ನಂತಹ ಗ್ರೇಟ್ ಲೇಕ್ಸ್ ಟ್ರೆಕ್ ಮಾಡುವಾಗ ಇಲ್ಲಿ ಸಿಕ್ಕುವ ಲಿದ್ದರ್ ವ್ಯಾಟ್ ಬೇಸ್ ಕ್ಯಾಂಪ್ ಮಾಡಿ ಕೊಳ್ಳುವವರ ಕೈಗಡರುವ ಪರಿಹಾಸ ಪುರ ಒಮ್ಮೆ ಪ್ರವೇಶಿಕೆಯಲ್ಲಿ ನಿಂತು ಒಂದು ಕ್ಲಿಕು ಕ್ಲಿಕ್ಕಿಸಲೇ ಎನ್ನುವಾಗ ಯಾಕೋ ನಮ್ಮನ್ನೆ ಪರಿಹಾಸ್ಯ ಮಾಡುವಂತೆ ಕಾಣಿಸುತ್ತದೆ.
ಹೆಚ್ಚಿನ ಚಾರಣಿಗರು ಹೋಗುವ ಪೆಹೆಲ್ಗಾಮ್ ಮಾರ್ಗಕ್ಕಿಂತ ತುಸು ತ್ರಾಸ ಯಕವದರೂ ಈ ಗ್ರೇಟ್ ಲೇಕ್ಸ್ ಟ್ರೆಕ್ ಮಾಡುವವರಿಗೆಲಿದ್ದರ್ ವ್ಯಾಟ್ ಹೇಳಿ ಮಾಡಿಸಿದ ದಾರಿ. ಅದರ ಹೊಸ್ತಿಲಿಗೆ ನಿಮಗೆ ಪರಿಹಾಸ ಪುರ ಅಥವಾ ಕನಿ ಶಹರ್ ಸಿಕ್ಕುತ್ತದೆ. ನನ್ನ ಆಯ್ಕೆ ಮತ್ತು ಸೂಚನೆಯೆಂದರೆ ಶ್ರೀನಗರದಿಂದ ಭಿಜ್‌ಬೇರ್ ಮಾರ್ಗವಾಗಿ ತಲುಪಲು ಸಲಹೆ ಕೊಡುತ್ತೇನೆ. ಕಾರಣ ಈ ನೈಜ ಒಳಮಾರ್ಗದಲ್ಲಿ ಕ್ರಮಿಸುವಾಗ ಸಿಕ್ಕುವ ಕಾಶ್ಮೀರದ ‘ಇನ್ನರ್ ಕಾಶ್ಮೀರ್’ ಮತ್ತು ಸ್ವಚ್ಚ ಭಾರತದ ಅತ್ಯಂತ ಹಸಿರು ಪರಿಸರ, ಮತ್ತು ಇದ್ದಕ್ಕಿದ್ದಂತೆ ಎದುರಾಗುವ ಹಲವು ಸಣ್ಣಪುಟ್ಟ ಶುದ್ಧ ಸರೋವರ ಜಾಲತಾಣ ಇನ್ನೊಂದೆಡೆಯಲ್ಲಿ ಬಹುಶಃ ಸಿಗಲಿಕ್ಕಿಲ್ಲ ಎನ್ನುವುದು ನನ್ನ ಹಲವು ಚಾರಣದ ಅನುಭವದ ಮಾತು.
ಜೊತೆಗೆ ಕೊಂಚ ಏರುಮುಖದ ನಡಿಗೆಯಾದರೂ ಅದ್ಭುತ ಎನ್ನುವ ಅನುಭವ ನಿಮ್ಮದಾಗಲಿದೆ. ಕಾರಣ ಈಗೆಲ್ಲ ಸೆಲಿ ಜಮಾನ. ಈಗಲೂ ಅಲ್ಲೆ ಹತ್ತಿರದಲ್ಲಿ ಇರುವ ಮಾರ್ತಾಂಡ ಸೂರ್ಯ ಮಂದಿರದ್ದೇ ಇನ್ನೊಂದು ಕತೆ. ಸತತ ಆರು ತಿಂಗಳು ಕಾಲ ಬೆಂಕಿಗೆ ಸಿಲುಕಿಯೂ, ಈಗಲೂ ಸಿನೇಮಾ ಶೂಟಿಂಗ್‌ಗಾಗಿ ಬಳಸುವಷ್ಟರ ಮಟ್ಟಿಗೆ ಆಕರ್ಷಕವಾಗಿ ಉಳಿದಿದೆ ಎಂದರೆ ಹೇಗೆ ನಿರ್ಮಿಸಿದ್ದಾರು..? ಅದಕ್ಕೂ ಈಮುಕ್ತಪೀಡನಿಗೂ ಇದ್ದ ಸಂಬಂಧವೇನು ಮತ್ತೊಮ್ಮೆ ಹೇಳುತ್ತೇನೆ. ಆದರೆ ಶ್ರೀನಗರ ಹೋದರೆ ಮುಗುಳ್ನಗಲು ಮರೆಯದಿರಿ.