ಬದಲಾಗಲಿ ವಾಟಾಳರ ಹೋರಾಟ, ಚಿಂತನೆ
ಹಂಪಿ ಎಕ್ಸ್’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
1336hampiexpress1509@.
ತುಂಬಿದ ಮನೆಯಲ್ಲಿ ಹಿರಿಯರೊಬ್ಬರು ಇರುತ್ತಾರೆ. ಒಂದುಕಾಲಕ್ಕೆ ಕುಟುಂಬದ ಏಳ್ಗೆಗಾಗಿ ಸಾಕಷ್ಟು ಶ್ರಮಿಸಿದವರವರು. ಆದರೆ ಬದಲಾದ ಕಾಲಕ್ಕೆ ಅವರ ಆಲೋಚನೆಗಳು- ಚಿಂತನೆಗಳು ಹೊಂದುವುದಿಲ್ಲ. ಇಂದಿನ ತಲೆಮಾರಿಗೆ ಸೂಕ್ತವಾಗುವುದೇ ಇಲ್ಲ. ಆದರೂ ಹಿರಿಯರೆಂಬ ಒಂದೇ ಕಾರಣಕ್ಕೆ ಎಲ್ಲರೂ ಗೌರವಿಸುತ್ತಾರೆ. ಅವರ ನಿರ್ಧಾರ, ಆದೇಶಗಳನ್ನು ಮೇಲ್ನೋಟಕ್ಕೆ ಒಪ್ಪಿಕೊಂಡಂತೆ ತೋರಿಸಿದರೂ ಅಸಲಿಗೆ ಹಾಗೆ ನಡೆಯುವುದೇ ಇಲ್ಲ.
‘ಅಯ್ಯೋ ಈ ಅಜ್ಜ ಸುಮ್ಮನೇ ಇರಲ್ಲ. ಎಲ್ಲದಕ್ಕೂ ಮುಂದೆ ಬರ‍್ತಾನೆ, ನಂದೇ ನಡೀಬೇಕು ಅಂತಾನೆ. ನಮ್ಮ ಮಾತನ್ನೂ ಕೇಳ ಬೇಕಲ್ವ, ಈವಯ್ಯ ಹೇಳ್ದಂಗೇ ಕೇಳಕ್ಕಾಗುತ್ತ’ ಎಂಬ ಧೋರಣೆಯಲ್ಲಿ ತಮ್ಮ ಕೆಲಸ ಮಾಡಿ ಕೊಂಡೇ ಹೋಗುತ್ತಾರೆ. ಥೇಟು ಹೀಗೇ ಆಗಿದೆ ನಮ್ಮ ವಾಟಾಳ ನಾಗರಾಜರ ಸ್ಥಿತಿ. ಒಂದು ಕಾಲದಲ್ಲಿ ಕನ್ನಡ ಹೋರಾಟದಲ್ಲಿ ಬೆಂಕಿ ಯಂತಿದ್ದ ವಾಟಾಳ್ ಅವರು ಇಂದು ಬದಲಾಗದ ಹೋರಾಟ ಶೈಲಿ, ಚಿಂತನೆಯಿಂದಾಗಿ ನಾಡು ಅವರನ್ನು ಕಾಣುವ ರೀತಿಯೇ ಬದಲಾಗಿ ಬಿಟ್ಟಿದೆ.
ಕನ್ನಡಪರ ಹೋರಾಟವೆಂದರೆ ಇಂದಿಗೂ ಅಗ್ರ ಗಣ್ಯ ಹೆಸರು ನಮ್ಮ ವಾಟಾಳನಾಗರಾಜ್ ಅವರದ್ದು. ಆದರೆ ಯಾವುದೋ ಲೆಕ್ಕಾಚಾರ ದಲ್ಲಿ ಅವರನ್ನು ಕಡೆಗಣಿ ಸುತ್ತಲೇ ಬರಲಾ ಗುತ್ತಿದೆ. ಇದಕ್ಕೇ ಅವರದೇ ಸ್ವಯಂಕೃತ ನಡವಳಿಕೆ ಗಳೂ ಕಾರಣವೆಂದರೆ ತಪ್ಪಾಗದು.ದಶಕಗಳ ಹಿಂದೆ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇಂಥದ್ದೇ ಕನ್ನಡ ಪರ ಹೋರಾಟದ ಪೂರ್ವ ಸಮಾಲೋಚನೆಗೆ ಅನೇಕ ಹಿರಿಯ ಸಾಹಿತಿಗಳು ಸೇರಿದ್ದರು.
ಸಭೆಗೆ ವಾಟಾಳ್ ಅವರನ್ನೂ ಆಹ್ವಾನಿಸಲಾಗಿತ್ತು. ಹೋರಾಟದ ರೂಪುರೇಷಗಳ ಬಗ್ಗೆ ಮಾತು ಆರಂಭವಾಗುತ್ತಿದ್ದಂತೆ ಎದ್ದು ನಿಂತ ವಾಟಾಳರು ತಮ್ಮದೇ ಶೈಲಿಯಲ್ಲಿ ಅಬ್ಬರಿಸಿ ‘ಕನ್ನಡಕ್ಕಾಗಿ ಎಂಥ ಹೋರಾಟಕ್ಕೂ ಸಿದ್ಧ’ ಎಂಬಂತೆ ಉದ್ವೇಗಕ್ಕೆ ಒಳಗಾಗಿದ್ದರು. ಇವರನ್ನು ಕಂಡು ರೋಸಿಹೋದ, ಎಂದೂ ಅಸಹನೆಯಿಂದ ವರ್ತಿಸದ ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿಗಳು ‘ಎಲ್ಲದಕ್ಕೂ ಬೀದಿಗೇ ಬಂದು ದಕ್ಕಿಸಿಕೊಳ್ಳಬೇಕೆಂಬ ಮನಸ್ಥಿತಿ ನಿಮಗೇಕೆ? ಕನ್ನಡಿ ಗರಿಗೆ ಅಂಥ ಸ್ಥಿತಿ ಬೇಕಿಲ್ಲ.
ನೀವು ಎಲ್ಲದಕ್ಕೂ ಹೀಗೆ ಬೀದಿಗಿಳಿದಂತೆ ವರ್ತಿಸುವುದು ಉಚಿತವಲ್ಲ. ಸಾವಧಾನದಿಂದ ವರ್ತಿಸಿ, ಕುಳಿತುಕೊಂಡು ತಾರ್ಕಿಕವಾಗಿ ಚರ್ಚಿಸೋಣ’ ಎಂದು ತಿಳಿಹೇಳಿದ್ದರು. ವಾಟಳರದ್ದು ಅಂಥ ಶೈಲಿಯೇ ಅಲ್ಲ. ಅವರದ್ದೇನಿದ್ದರೂ ಆರ್ಭಟ ಆವೇಶದ ಹೋರಾಟ. ಹೀಗಾಗಿಒಂದು ಕಾಲದಲ್ಲಿ ವಾಟಾಳ್ ನಾಗರಾಜರ ಹೆಸರು ಎತ್ತಿದರೆ ಕನ್ನಡಿಗರಿಗೆ ರೋಮಾಂಚನವಾಗುತಿತ್ತು. ಪರಭಾಷಿಗರಿಗೆ ನಡುಕ ಹುಟ್ಟುತ್ತಿತ್ತು.
ಗೋಕಾಕ್ ಚಳವಳಿಯಲ್ಲಿ ವರನಟ ರಾಜ್‌ಕುಮಾರ್ ಜತೆಯಾಗಿದ್ದೇ ಆಗಿದ್ದು; ಅಲ್ಲಿಂದ ಕನ್ನಡದ ಪಾಂಚಜನ್ಯವೆಂಬುದು ಏನಿತ್ತು ಅದು ನೇರ ಅಣ್ಣಾವ್ರ ಸುಪರ್ದಿಗೆ ಸೇರಿತು. ಕನ್ನಡಪರ ಹೋರಾಟಕ್ಕೆ ರಾಜ್ ಅವರ ಹೆಸರು ಎಷ್ಟು ಬಲವಾಗಿತ್ತೆಂದರೆ ದೂರದರ್ಶನದಲ್ಲಿ ವೋಟ್‌ಬ್ಯಾಂಕ್ ಉರ್ದುವಾರ್ತೆ(1994) ಪ್ರಸಾರವಾಗಿ ದಿನೇ ದಿನೇ ಕನ್ನಡಿಗರ ಸಹನೆ ಸ್ವಾಭಿಮಾನ ಹೊತ್ತಿ ಉರಿದು ಯಾರೂ ಅದನ್ನು ತಡೆಯಲಾಗದಾಗಿತ್ತು.
ಅಂಥ ಪರಿಸ್ಥಿತಿಯಲ್ಲಿ ಕಾಲಿಟ್ಟ ರಾಜ್ ಪ್ರಭಾವದಿಂದ ಕನ್ನಡಿಗರಿಗೆ ಉರ್ದುವಾರ್ತೆ ಕೂಡಲೇ ಸ್ಥಗಿತಗೊಂಡಿತು. ಈಗೇನಾದರು ಡಾ. ರಾಜ್ ಅವರಿಂದ ಇಂಥ ಹೋರಾಟವಾಗಿದಿದ್ದರೆ ಅವರನ್ನು ‘ದೊಡ್ಡ ಕೋಮುವಾದಿ ಎಂದೆಲ್ಲ ಜರಿದು ಅಲ್ಲೋಲ ಕಲ್ಲೋಲ ಮಾಡುತ್ತಿದ್ದರು.‘ನಾವೇನಾದರು ಅಧಿಕಾರಕ್ಕೆ ಬಂದರೆ ಮತ್ತೆ ಉರ್ದು ವಾರ್ತೆ ತರುತ್ತೇವೆ’ ಎಂದು ಪ್ರಮಾಣ ಮಾಡುತ್ತಿದ್ದರು. ಅಂದು ಉರ್ದು ವಾರ್ತೆ ವಿರುದ್ಧ ನಡೆದದ್ದು ಕನ್ನಡಿಗರ ನಿಸ್ಪಕ್ಷ. ಪರಿಶುದ್ಧ ಜಾತ್ಯತೀತ ಹೋರಾಟವಾಗಿತ್ತು. ಆಗಿನ್ನೂ ಬಿಜೆಪಿ ಮೇಲೆದ್ದಿರಲಿಲ್ಲ. ಮಹಾದುರಂತ ವೆಂದರೆ ಇಂದು ಕನ್ನಡಪರ ಹೋರಾಟದ ಮಾನದಂಡವೇ ಬದಲಾಗಿಹೋಗಿದೆ.
ಈಗ ಕನ್ನಡವೇ ಬೇರೆ, ಸಂಸ್ಕೃತಿಯೇ ಬೇರೆ ಆಗಿದೆ. ಅಪಾಯಕಾರಿಯೆಂದರೆ ಕರ್ನಾಟಕವೇ ಬೇರೆ, ದೇಶವೇ ಬೇರೆ ಎಂದು ವಾದಿಸುವ ಅವಿವೇಕ ಹೆಚ್ಚಾಗಿಹೋಗಿದೆ. ಹೀಗಾಗಿ ಇಂದು ದೇಶಾ ಭಿಮಾನವೆಂದರೆ ಕೋಮುವಾದಿ ಎನ್ನಲಾಗುತ್ತದೆ. ‘ಜೈ ಕನ್ನಡತಾಯಿ ಭುವನೇ ಶ್ವರಿ’ ಎಂದರೆ ಅನ್ಯಧರ್ಮದ ‘ಹುಟ್ಟು ಕನ್ನಡಿಗರಿಗೆ’ ನೋವಾಗು ತ್ತದೆಂದು ನಿರ್ಧರಿಸಿ ಕನ್ನಡಕ್ಕೂ ‘ಡೋಂಗಿ ಜಾತ್ಯತೀತ’ ವೆಂಬ ಹಸಿರು ಚಾದರ ಹೊದಿಸಿ ಶಿಲುಬೆ ನೇತುಹಾಕಲಾಗಿದೆ.
ಕನ್ನಡಕ್ಕೆ ಅಂಟಿರುವ ಇಂಥ ಡೋಂಗಿತನ ಯಾವ ಪರಮಾವಧಿ ತಲುಪಿದೆಯೆಂದರೆ ಕನ್ನಡ ಸಾರಸ್ವತಲೋಕದಲ್ಲಿರುವ ಸಾಹಿತಿಗಳಲ್ಲೇ ಭಾಷೆ ಮತ್ತು ಸಂಸ್ಕೃತಿ ಎಂಬುದು ವಿಂಗಡಣೆಯಾಗಿ ಹೋಗಿದೆ. ಜಾತ್ಯತೀತ ಸಾಹಿತಿಗಳು, ಜಾತ್ಯತೀತ ರೈತರು, ಜಾತ್ಯತೀತ ಸ್ವಾಮೀಜಿಗಳು, ಜಾತ್ಯತೀತ ನಟರು ಹೀಗೆ ಎಲ್ಲ ಕ್ಷೇತ್ರಗಳಲ್ಲೂ ದೇಹ ಸಂಸ್ಕೃತಿಯಡಿ ಕನ್ನಡದ ಆತ್ಮ ದೂರವಾಗಿ ಕನ್ನಡಕ್ಕಿರುವ ನೈಜ ಪಾರಂಪರಿಕತೆ ಕಳೆದು ಕೊಳ್ಳುತ್ತಿದೆ.
ಕನ್ನಡತಾಯಿ ಭುವೇಶ್ವರಿದೇವಿ ಎಂಬುದು ಮರೆಯಾಗಿ ದೇವರು, ಜಾತಿ, ಧರ್ಮ ವೆಂಬ ಮಟ್ಟಕ್ಕೆ ಕನ್ನಡ ಮತ್ತು ಸಂಸ್ಕೃತಿ ಮಡಿಮೈಲಿ ಗೆಯಲ್ಲಿ ಸಿಲುಕಿದೆ. ಇದೆಲ್ಲದರ ಅಡ್ಡಪರಿಣಾಮ ಇಂದು ಕನ್ನಡದ ಮೇಲೆ ಬೇರೆ ಭಾಷೆಗಳು ಮಾಡುತ್ತಿರುವ ಸವಾರಿಯನ್ನು ವಿರೋಧಿಸುವ ಅಥವಾ ಪ್ರಶ್ನಿಸುವ ಮನಃಸ್ಥಿತಿ ಯಾರಿಗೂ ಇಲ್ಲದಂತಾಗಿದೆ. ಅಲ್ಪಸಂಖ್ಯಾತ ನಾಯಕನೊಬ್ಬ ಅಪ್ಪಟ ಕನ್ನಡಿಗ ಮಣ್ಣಿನಮಗ ರಾಜ ಕಾರಣಿಗೆ ಬಾಯಿಗೆ ಬಂದಂತೆ ಬಯ್ಯುತ್ತಿದ್ದರೂ ಸಹಿಸಿಕೊಂಡು ಹೋಗುವಷ್ಟು ‘ಸೋಂಬೇರಿಗಳಾಗಿದ್ದಾರೆ’ ಅವರ ಹಿಂಬಾಲಕರು.
ಅಸಂಬದ್ಧ ಹೋರಾಟಕ್ಕೆಲ್ಲ ಸಿಕ್ಕಸಿಕ್ಕವರೆಲ್ಲ ಹಳದಿಕೆಂಪು ವಸ್ತ್ರ ಹೆಗಲಿಗೆ ಹಾಕಿಕೊಂಡು ನಾಡಿನ ಸಂಸ್ಕೃತಿಕ ವಿರೋಧಿ ವಿಚಾರಗಳಿಗೂ ಕೈ ಜೋಡಿಸುತ್ತಿರುವುದು ದುರ್ದೈವ. ಪುನಃ ವಾಟಾಳ್‌ನಾಗರಾಜರ ವಿಚಾರಕ್ಕೆ ಬರುವುದಾದರೆ ಒಂದು ಕಾಲದಲ್ಲಿ ಪೊಲೀಸರಿಂದ ಬೂಟಿನ ಏಟುತಿಂದು ಕನ್ನಡಕಗಿ ಹೋರಾಡಿದ್ದಾರೆಂಬ ಸ್ವಾಭಿಮಾನದಿಂದ ವಿಜೃಂಭಿಸುತ್ತಿದ್ದ ವಾಟಾಳರ ಹೋರಾಟ ಕನ್ನಡಿಗರಲ್ಲಿ ಸಂಚಲನ ಮೂಡಿಸುತಿತ್ತು. ಕನ್ನಡ ಹೋರಾಟ ವೆಂದರೆ ಅದಕ್ಕೆ ವಾಟಾಳ ನಾಗರಾಜರದ್ದೇ ಶಂಖ ನಾದವಾಗಿತ್ತು.
ಯಾವಾಗ ರಾಜಣ್ಣ ನವರು ನಾಡು-ನುಡಿ- ಜಲ ವಿಚಾರದ ಹೋರಾಟಕ್ಕೆ ನಾಡಿನ ಸಾಂಸ್ಕೃತಿಕ ರಾಯಭಾರಿಯಾಗಿ ಕನ್ನಡದ ಅಸ್ಮಿತೆ ಯಾಗಿ ಐರಾವತವನ್ನೇರಿದರೋ ಆಗ ವಾಟಾಳರೂ ಸೇರಿದಂತೆ ಹೋರಾಟಗಾರರು, ಸಾಹಿತಿಗಳು, ರಾಜಕಾರಣಿಗಳೆಲ್ಲರೂಮಸುಕಾದರು. ನಂತರ ಜಾಣಗೆರೆ ವೆಂಕಟರಾಮಯ್ಯ ಕನ್ನಡಪರ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯನ್ನು (1999) ಹುಟ್ಟು ಹಾಕಿದರು. ಒಂದೆಡೆ ರಕ್ಷಣಾ ವೇದಿಕೆ, ಒಂದೆಡೆ ಡಾ.ರಾಜ್ ಅಭಿಮಾನಿಗಳ ಸಂಘದ ಸಾರಾ ಗೋವಿಂದು ಮಂಚೂಣಿ, ಇತ್ತ ವಾಟಾಳರು ತಮ್ಮದೇ ವಿಶಿಷ್ಟ ಶೈಲಿಯನ್ನು ಬೆಳೆಸಿಕೊಂಡು ಹೋರಾಟಕ್ಕಿಳಿಯುತ್ತಿದ್ದರು.
ಕನ್ನಡವನ್ನು ದಾಟಿ ಸರಕಾರದ ಅನೇಕ ನೀತಿಗಳ ವಿರುದ್ಧ ವಿಡಂಬನಾತ್ಮಕ ಡ್ರಾಮಾ ಶೈಲಿಯ ಪ್ರತಿಭಟನೆಗಳನ್ನು ಮಾಡಿಕೊಂಡು ಬಂದರು. ಕನ್ನಡದ ಸಾಂಸ್ಕೃತಿಕತೆಯನ್ನು ಬೆಳಗಿಸಬೇಕಾದ ವಾಟಾಳರು ಪ್ರೇಮಿಗಳ ದಿನಾಚರಣೆಯನ್ನೂ ಬೆಂಬಲಿಸಿ ಬೀದಿಗಿಳಿದರೋ ಆಗಲೇ ಅವರ ಹೋರಾಟ ದಾರಿ ತಪ್ಪುತ್ತಿರುವುದನ್ನು ನಿರೂಪಿಸಿತು. ಹೀಗಾಗಿ ಇವರ ಎಲ್ಲ ಹೋರಾಟಗಳನ್ನು ಜನ ಮತ್ತು ಸರಕಾರ ಗಂಭೀರವಾಗಿ ಪರಿಗಣಿಸದೇ ಹೋದರು. ಸ್ವತಃ ವಾಟಾಳರೇ ಇದನ್ನು ಆತ್ಮಾವಲೋಕನ ಮಾಡಿಕೊಳ್ಳಲೇ ಇಲ್ಲ. ಹೀಗಾಗಿ ಅವರ ಪ್ರತಿಯೊಂದು ಹೋರಟವೂ ಅಪಹಾಸ್ಯಕ್ಕೆ, ದೂಷಣೆಗೆ, ಅಪವಾದಗಳಿಗೆ ಅಪಖ್ಯಾತಿಗೆ ಒಳಗಾಗುತ್ತ ಬಂತು. ಬರ ಬರುತ್ತ ಹೇಗಾಗಿದ್ದಾ ರೆಂದರೆ ಪೊಲೀಸರಿಗೇ ವಾಟಾಳರ ಹೋರಾಟವೆಂದರೆ ಒಂದುರೀತಿಯ ಮನರಂಜನೆಯಾಗಿ ಹೋಗಿದೆ.
ತಮ್ಮ ಮಕ್ಕಳನ್ನು ಎತ್ತಿಕೊಂಡು ಹೋದಷ್ಟು ಸುಲಭವಾಗಿ ವಾಟಾಳರನ್ನು ಎತ್ತಿಕೊಂಡು ಹೋಗಿಬಿಡುತ್ತಾರೆ. ಇದರಿಂದ ಅಮ್ಮನಿಗಿಂತ ಪೊಲೀಸರೇ ವಾಟಾಳರನ್ನು ಹೆಚ್ಚು ಎತ್ತಾಡಿದ್ದಾರೆಂಬ ಮಾತು ಹುಟ್ಟಿಕೊಂಡಿದೆ.2005ರಲ್ಲಿ ರಾಜಣ್ಣ ಮರೆಯಾದ ನಂತರ ವಾದರೂಕನ್ನಡಪರ ಹೋರಾಟದ ಅಗ್ರಸ್ಥಾನ ವನ್ನು ಅಲಂಕರಿಸಿ ಉಳಿದೆಲ್ಲ ಸಂಘಟನೆಗಳನ್ನು ತನ್ನೊಂದಿಗೆ ಸೇರಿಸಿಕೊಂಡು ಅದಕ್ಕೆ ಮೇಟಿಯಾಗ ಬಹುದಾದ ಅವಕಾಶವನ್ನೂ ಹಿರಿಯರಾಗಿದ್ದ ವಾಟಾಳರು ಬಳಸಿಕೊಳ್ಳಲಿಲ್ಲ. ನಂತರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅನೇಕ ಬಣಗಳಾಗಿ ಹೋಗಿ ಕನ್ನಡಪರ ಹೋರಾಟವು ದಿಕ್ಕಾಪಾಲಾಯಿತು.
ಇದರೊಂದಿಗೆ ಮುತ್ತಪ್ಪ ರೈ ಅವರ ಜಯ ಕರ್ನಾಟಕ ಸಂಘಟನೆ ಸ್ಥಾಪನೆಗೊಂಡು ಉಳಿದೆಲ್ಲ ವೇದಿಕೆಗಳಿಗೆ ಪೈಪೋಟಿಗಿಳಿದು ಸಾಮಾ ಜಿಕ ಕಾರ್ಯಗಳನ್ನು ಮಾಡಲಾರಂಭಿಸಿತು. ಹೀಗಾಗಿ ಕನ್ನಡಪರ ಸಂಘಟನೆ ದ್ವೀಪಗಳಂತಾದವು. ಅಲ್ಲದೇ, ವಾಟಾಳರೊಂದಿಗೆಸಂಘಟನೆಗಳೂ ಅಂತರ ಕಾಪಾಡಿಕೊಂಡು ಬರುವಂತಾಯ್ತು. ‘ಹೇ, ಅವರ ಮಾತೇನು ಕೇಳುವುದು, ನಮ್ಮದೇ ಸಂಘಟನೆ ಇದೆ. ನಾವು ನಮ್ಮದೇ ಹೋರಾಟ ಮಾಡೋಣ’ ಎಂಬ ಬಿಗುಮಾನ ಎಲ್ಲರಲ್ಲೂ ಸ್ಥಾಪಿತವಾಗಿ ವಾಟಾಳರ ಹೋರಾಟ ವಿದೂಷಕ ಚಹರೆ ಪಡೆದು ಯಾರೂ ಅವರನ್ನು ಗಂಭೀರವಾಗಿ ಕಾಣದಂಥ ಸ್ಥಿತಿ ಇಂದು ನಿರ್ಮಾಣವಾಗಿದೆ. ಇದ್ದವರಲ್ಲಿ ಸಾರಾ ಗೋವಿಂದು ಒಬ್ಬರು ಅವರ ಜತೆ ಉಳಿದಿದ್ದಾರೆ.
ಇಬ್ಬರೂ ತಮಗೆ ಸಿಕ್ಕಿರುವ ಹಿರಿತನದ ಹಮ್ಮಿನಲ್ಲಿ ಕರ್ನಾಟಕ ಬಂದ್‌ನಂಥ ನಿರ್ಣಯವನ್ನು ಏಕಾಏಕಿ ತೆಗೆದುಕೊಂಡು ಉಳಿದ ವರು ಇದನ್ನು ಒಪ್ಪಿಕೊಂಡು ನಡೆಯಬೇಕೆಂಬ ಪರೋಕ್ಷ ಅಹಮಿಕೆ ತೋರಿದ್ದು ಸಹಜವಾಗಿ ಅಸಹನೆಗೆ ಕಾರಣವಾಯಿತು. ನಾಡಿಗೆ ಈಗ ಬೇಕಿರುವುದು ಕನ್ನಡ ಪರಂಪರೆ- ಧಾರ್ಮಿಕತೆ- ಸಾಂಸ್ಕೃತಿಕ ಅಗಾಧತೆಯನ್ನು ಸಾರುವ, ಜಾಗೃತಿ ಮೂಡಿಸುವ ಸಮಗ್ರ ಕನ್ನಡಿ ಗರ ಒಕ್ಕೂಟದ ವೇದಿಕೆ.
ಜಾಣಗೆರೆ ವೆಂಕಟ ರಾಮಯ್ಯನವರ ನಂತರ ರಕ್ಷಣಾ ವೇದಿಕೆಯನ್ನು ಮುನ್ನಡೆಸಿದ ಟಿ.ಎ.ನಾರಾಯಣಗೌಡರು, ಸಾಮಾಜಿಕ ಹೋರಾಟ ಗಾರರೂ ಆಗಿರುವ ಶಿವರಾಮೇ ಗೌಡರು, ಬೆಳಗಾವಿಯ ಮೇಯರ್ ಮೋರೆ ಮುಖಕ್ಕೆ ಮಸಿಬಳಿದು ಮೊಟ್ಟಮೊದಲ ಬಾರಿಗೆ ದಿಟ್ಟತನ ತೋರಿದ್ದ ಪ್ರವೀಣ್‌ಶೆಟ್ಟಿ ಸೇರಿ ಉಳಿದೆಲ್ಲ ಸಂಘಟನೆಗಳು ಒಗ್ಗೂಡಿ ಯಾವ ರಾಜಕಾರಣಿಗಳ ಮುಲಾಜಿಗೂ ಒಳಗಾಗದೆ, ಯಾವ ಪುಢಾರಿಗಳಿಗೂ ಹೊಂದಿಕೊಳ್ಳದೆ, ಯಾವ ಜಾತಿಧರ್ಮದ ಪರವಾಗಿಯೂ ನಿಲ್ಲದೆ, ಕನ್ನಡ ನಾಡಿನ ನೈಜ ಅಸ್ಮಿತೆಯನ್ನು,ಸಾಂಸ್ಕೃತಿಕ, ದೈವೀಕ ಪರಂಪರೆಯನ್ನು ರಕ್ಷಿಸುವ ಕೈಂಕರ್ಯಕ್ಕೆ ಕೈಜೋಡಿಸಬೇಕಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಇವರೆಲ್ಲರ ಅಗ್ರಗಣ್ಯ ನಾಯಕನಾಗಿ ಕನ್ನಡಪರ ದಿಕ್ಕನ್ನು ಸರಿಯಾದ ದಿಕ್ಕಿನತ್ತ ಕೊಂಡೊಯ್ಯುವ ಹಿರಿತನವನ್ನು ವಾಟಾಳರು ತೋರಬೇಕಿದೆ. ಮೊನ್ನೆ ನೋಡಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ‘ವಾಟಾಳ ನಾಗರಾಜ್ ಅವರು ನನ್ನ ಮನವಿ ಯನ್ನು ಮನ್ನಿಸಿ ಬಂದ್ ವಾಪಸ್ಸು ಪಡೆಯಲು ಒಪ್ಪಿದ್ದಾರೆ’ ಎಂದಿದ್ದಾರೆ.
ವಾಟಾಳರ ಹೆಸರಿಗೆ ಅಷ್ಟೊಂದು ಗಾಂಭೀರ್ಯ ಇದೆ. ಇದನ್ನು ಅರ್ಥ ಮಾಡಿಕೊಳ್ಳಬೇಕಾದ್ದು ಸ್ವತಃ ವಾಟಾಳನಾಗರಾಜರೇ!