ಅಭ್ಯಾಸ ಬಲದಿಂದಾಗುವ ಆಭಾಸಗಳೂ, ಎಡವಟ್ಟುಗಳೂ
ತಿಳಿರು ತೋರಣ
ಶ್ರೀವತ್ಸ ಜೋಶಿ
@.
ಲೋಕದಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಅಭ್ಯಾಸ ಬಲ ಪ್ರದರ್ಶಿಸುವವರೇ. ಇನ್ನೊಬ್ಬರ ಅಭ್ಯಾಸ ಬಲದ ಬಲಿಪಶುಗಳೇ,ಫಲಾನುಭವಿಗಳೇ. ‘ಓಲ್ಡ್ ಹ್ಯಾಬಿಟ್ಸ್ ಡೈ ಹಾರ್ಡ್’ ಅಂತ ಇಂಗ್ಲಿಷ್‌ನಲ್ಲೊಂದು ನುಡಿಗಟ್ಟೇ ಇದೆಯಲ್ಲ.
ಅಭ್ಯಾಸ ಬಲದಿಂದಾಗಿ ಇನ್ನೊಂದೆರಡು ವಾರಗಳವರೆಗಾದರೂ ಇದು ಮುಂದುವರಿಯುತ್ತದೆ: ಇಸವಿ ಬದಲಾಗಿರುವುದು ತತ್‌ಕ್ಷಣಕ್ಕೆ ನೆನಪಿಗೆ ಬರದೆ, ದಿನಾಂಕ ನಮೂದಿಸುವಲ್ಲೆಲ್ಲ ಇಸವಿಯನ್ನು2021ಅಂತಲೇ ಬರೆಯುತ್ತೇವೆ. ಎಲ್ಲೋ ಖಾಸಗಿಯಾಗಿ ನಮ್ಮ ಪಾಡಿಗೆನಾವು ಆ ರೀತಿ ತಪ್ಪು ಇಸವಿ ಬರೆದುಕೊಂಡರೆ ಅಂಥ ದೊಡ್ಡ ಪ್ರಮಾದವೇನಲ್ಲ; ಆಕಾಶ ವೇನೂ ಕಳಚಿ ತಲೆ ಮೇಲೆ ಬೀಳುವುದಿಲ್ಲ. ಆದರೆ ಇನ್ನೊಬ್ಬರಿಗೆ ಚೆಕ್ ಬರೆದು ಕೊಡು ವಾಗಲೋ, ಮತ್ತ್ಯಾವುದೋ ಇಂಪಾರ್ಟೆಂಟ್ ಕಾಗದಪತ್ರದಲ್ಲೋ ಇಸವಿ ತಪ್ಪಾದರೆ ಸ್ವಲ್ಪ ತೊಂದರೆಯೇ ಆದೀತು.
ಮರೆಗುಳಿತನ ಅಂತನಿಸಿಕೊಳ್ಳಬೇಕಾಗಲೂಬಹುದು. ಆಫ್‌ಕೋರ್ಸ್, ಈಗ ಆನ್‌ಲೈನ್ ಡಿಜಿಟಲ್ ಲೇವಾದೇವಿಯ ಯುಗದಲ್ಲಿ ಚೆಕ್ ಬರೆಯುವುದೆಲ್ಲ ಹಳೇ ಫ್ಯಾಷನ್ ಆಗಿಬಿಟ್ಟಿದೆ. ಆದರೆ ನಾನು ಗಮನಿಸಿದಂತೆ ಈ ತಪ್ಪು ಇಸವಿ ಬರೆಯುವ ‘ಅಭ್ಯಾಸ ಬಲ’ ಕೈ ಬರಹ ಕ್ಕಷ್ಟೇ ಸೀಮಿತವಲ್ಲ, ಕಂಪ್ಯೂಟರ್‌ನಲ್ಲಿ ಏನಾದರೂ ಡಾಕ್ಯುಮೆಂಟ್ ಮಾಡುವಾಗಲೂ ವಕ್ಕರಿಸುತ್ತದೆ.
ವಿಪರ್ಯಾಸವೆಂದರೆ, ಮುಂದಿನ ವರ್ಷದ ಈ ದಿನಗಳಲ್ಲಿ ಮತ್ತೆ ಇದೇ ಗೋಳು. ‘2023ಇನ್ನೂ ತಲೆಗೆ ಹತ್ತಿರುವುದಿಲ್ಲ;2022ಇನ್ನೂ ತಲೆಯಿಂದ ಇಳಿದು ಹೋಗಿರುವುದಿಲ್ಲ’ ಎಂಬಂಥ ಪರಿಸ್ಥಿತಿ. ಕೆಲ ದಿನಗಳಾದ ಮೇಲೆ ತನ್ನಷ್ಟಕ್ಕೆ ತಾನೇ ತಿಳಿಯಾಗುತ್ತದೆ. ಹೊಸ ಕ್ಯಾಲೆಂಡರ್ ವರ್ಷದ ಆರಂಭದಲ್ಲಿ ಹಳೆಯ ಇಸವಿಯೇ ನಮ್ಮ ತಲೆಯೊಳಗಿರುವುದು ಒಂದು ಚಿಕ್ಕ ಉದಾಹರಣೆ ಅಷ್ಟೇ. ಉಳಿದಂತೆ ಯೂ ನಮ್ಮ ಜೀವನದಲ್ಲಿ ಈ ರೀತಿಯ ‘ಅಭ್ಯಾಸ ಬಲ’ಗಳು ಗಾಢವಾಗಿ ಬೇರೂರಿಕೊಂಡಿರುವುದಕ್ಕೆ, ಹಾಸು ಹೊಕ್ಕಾಗಿರುವುದಕ್ಕೆ ಲೆಕ್ಕವೇ ಇಲ್ಲ. ಅವನ್ನೆಲ್ಲ ಮೆಲುಕು ಹಾಕಿದರೆ ಅದೊಂದು ಇರುಸುಮುರುಸಿನ ಆಭಾಸಗಳ, ಅಪಾಯರಹಿತ ಎಡವಟ್ಟುಗಳ, ಮುಜುಗರದ ಸನ್ನಿವೇಶಗಳ, ಮೋಜಿನ ಪ್ರಸಂಗಗಳ ಹಿತಕರ ರಮ್ಯ ಲೋಕ.
ಅಲ್ಲದೇ ಅದು ಯಾರೋ ಒಬ್ಬಿಬ್ಬರಿಗಷ್ಟೇ ಆಗುವುದಲ್ಲ. ಲೋಕದಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಅಭ್ಯಾಸ ಬಲ ಪ್ರದರ್ಶಿಸು  ವವರೇ. ಇನ್ನೊಬ್ಬರ ಅಭ್ಯಾಸ ಬಲದ ಬಲಿಪಶುಗಳೇ, ಫಲಾನುಭವಿಗಳೇ. ‘ಓಲ್ಡ್ ಹ್ಯಾಬಿಟ್ಸ್ ಡೈ ಹಾರ್ಡ್’ ಅಂತ ಇಂಗ್ಲಿಷ್‌ನಲ್ಲೊಂದುನುಡಿಗಟ್ಟೇ ಇದೆಯಲ್ಲ! ಹಿಂದೊಮ್ಮೆ ‘ವಿಜಯ ಕರ್ನಾಟಕ’ ಪತ್ರಿಕೆಯ ‘ಪರಾಗಸ್ಪರ್ಶ’ ಅಂಕಣದಲ್ಲಿ ಇದರ ಬಗ್ಗೆ ಬರೆದಿದ್ದೆ. ಪ್ರತಿಕ್ರಿಯೆ ಯಾಗಿ ಅನೇಕ ಓದುಗಮಿತ್ರರು ತಮ್ಮತಮ್ಮ ಅಭ್ಯಾಸ ಬಲ ಪ್ರದರ್ಶನ ನಿದರ್ಶನಗಳನ್ನು ಸ್ವಾರಸ್ಯಕರವಾಗಿ  ಹಂಚಿಕೊಂಡಿದ್ದರು. ಇಂದಿನ ಅಂಕಣದಲ್ಲೂ ನಾನು ಕೆಲವು ಪ್ರಸಂಗಗಳನ್ನು ಉಲ್ಲೇಖಿಸುತ್ತೇನೆ.
ಇವೆಲ್ಲ ನನ್ನ ಸ್ವಂತ ಅನುಭವದವು ಅಂತೇನಲ್ಲ, ಅಲ್ಲಿ ಇಲ್ಲಿ ಓದಿ ಕೇಳಿದಂಥವೂ ಇವೆ. ಅಭ್ಯಾಸ ಬಲದ ಒಳ್ಳೆಯ ಉದಾಹರಣೆಗಳಂತೂ ಹೌದು. ನಿಮ್ಮ ಭಂಡಾರದಲ್ಲಿ ಈ ರೀತಿಯವು ಇದ್ದರೆ ಧಾರಾಳವಾಗಿ ಹಂಚಿಕೊಳ್ಳಿ. ಅಮೆರಿಕದಲ್ಲಿ ವಾಹನ ಚಲಾಯಿಸುವುದು ರಸ್ತೆಯ ಬಲಗಡೆಯಲ್ಲಿ. ಕಾರಿನ ಸ್ಟೀರಿಂಗ್ ಇರುವುದು ಎಡಗಡೆಯಲ್ಲಿ. ಇದು ಭಾರತದಲ್ಲಿರುವುದಕ್ಕೆ ತದ್ವಿರುದ್ಧ ತಾನೆ? ವರ್ಷಗಟ್ಟಲೆ ಅಮೆರಿಕದಲ್ಲಿ ನೆಲೆಸಿದವರಿಗೆ ಇಲ್ಲಿಯ ಕ್ರಮವೇ ಅಭ್ಯಾಸವಾಗಿ ಬಿಟ್ಟಿರುತ್ತದೆ.
ಭಾರತಕ್ಕೆ ಹೋದಾಗ ನಾವೇನಾದರೂ ಡ್ರೈವಿಂಗ್ ಮಾಡಿದರೆ ಅಭ್ಯಾಸ ಬಲ ಕೈಕೊಟ್ಟೀತು ಅಷ್ಟೇ ಅಲ್ಲ, ಅಪಘಾತವೇ ಆದೀತು! ಆದ್ದರಿಂದಲೇ ಸಾಮಾನ್ಯವಾಗಿ ಅನಿವಾಸಿಗಳು ಭಾರತಕ್ಕೆ ಭೇಟಿಯಿತ್ತಾಗ ಡ್ರೈವಿಂಗ್‌ನ ಉಸಾಬರಿಗೆ ಹೋಗುವುದಿಲ್ಲ. ಹಾಗಂತ ಅಭ್ಯಾಸ ಬಲ ಬೇರೆ ಸಂದರ್ಭಗಳಲ್ಲೂ ಕಾಣಿಸಿಕೊಳ್ಳಬಹುದು. ಬೆಂಗಳೂರಿನಲ್ಲಿ ಸ್ನೇಹಿತರಾರೋ ನಮ್ಮನ್ನು ಕಾರಿನಲ್ಲಿ ಕರೆದುಕೊಂಡು ಹೋಗಲು ಬರುತ್ತಾರೆನ್ನಿ.
‘ಮುಂದುಗಡೆ ಪ್ಯಾಸೆಂಜರ್ ಸೀಟ್‌ನಲ್ಲಿ ಕುಳಿತುಕೊಳ್ಳುತ್ತೇನೆ’ ಎಂದುಕೊಂಡು ಇಲ್ಲಿನ ಅಭ್ಯಾಸ ಬಲದಂತೆ ನಾವು ಅವರ ಕಾರನ್ನು ಮುಂದಿನ ಬಲಗಡೆ ಬಾಗಿಲಿನ ಮೂಲಕ ಪ್ರವೇಶಿಸಲು ಹೊರಡುತ್ತೇವೆ! ಇಂಥ ಅನುಭವ ನನಗೂ ಎಷ್ಟೋ ಸರ್ತಿ ಆದದ್ದಿದೆ. ಹಾಗೆಯೇ ಮನೆಯೊಳಗೆ ಸ್ವಿಚ್ಚುಗಳ ಆನ್-ಆಫ್ ಪೊಸಿಷನ್ ಸಹ ಭಾರತಕ್ಕೂ ಅಮೆರಿಕಕ್ಕೂ ಒಂದಕ್ಕೊಂದು ಉಲ್ಟಾ. ಭಾರತ ಭೇಟಿಯ ವೇಳೆ ಊರಿನಲ್ಲಿ ಅಥವಾ ಬಂಧುಮಿತ್ರರ ಮನೆಗಳಲ್ಲಿ, ಅಭ್ಯಾಸ ಬಲದಿಂದಾಗಿ ಸ್ವಿಚ್ ಆನ್ -ಆಫ್ ಆಭಾಸಕ್ಕೂ ನಾವು ಒಳಗಾಗುತ್ತೇವೆ.
ಇವೆಲ್ಲ ಚಿಕ್ಕಪುಟ್ಟ ಸಂಗತಿಗಳು. ಆದರೂ ‘ಇವನು ಅಮೆರಿಕಕ್ಕೆ ಹೋಗಿ ಎಲ್ಲ ಚೇಂಜ್ ಆಗಿದ್ದಾನೆ. ತಾಯಿನಾಡನ್ನು ಮರೆತವನಂತೆನಟಿಸುತ್ತಿದ್ದಾನೆ’ ಎಂದು ಆಡಿಕೊಳ್ಳುವವರಿಗೆ ಇಂಬು. ಅಭ್ಯಾಸ ಬಲಕ್ಕೆ ಬಲಿಯಾಗಿ ನಮಗೇ ತಾಗುವುದು ಆ ಕೂರಂಬು. ಡ್ರೈವಿಂಗ್ ಎಂದಾಗ ನೆನಪಾಯ್ತು, ಸ್ನೇಹಿತರೊಬ್ಬರು ತನ್ನ ಅಭ್ಯಾಸ ಬಲದ ಬಗ್ಗೆ ಹೇಳುತ್ತಿದ್ದರು: ಬೈಕ್ ಓಡಿಸುವಾಗ ಸೈಡ್ ಮಿರರ್ ನೋಡುವ ಅಭ್ಯಾಸ ಬಲದಿಂದಾಗಿ ಅವರು ಕೆಲವೊಮ್ಮೆ ವಾಕ್ ಮಾಡುವಾಗಲೂ (ಇಲ್ಲದ) ಸೈಡ್ ಮಿರರ್ ಅಡ್ಜಸ್ಟ್ ಮಾಡಿಕೊಳ್ಳಲಿಕ್ಕೆ ಕೈಹೋಗು ವುದಿದೆಯಂತೆ!
ಹಿಂದಿನಿಂದ ಯಾರಾದರೂ ಬರುತ್ತಿದ್ದಾರೆಯೇ ಎಂದು ನೋಡಲಿಕ್ಕೆ (ಇಲ್ಲದ) ಸೈಡ್ ಮಿರರ್ ಮೇಲೆ ದೃಷ್ಟಿ ಬೀರುವುದಿದೆಯಂತೆ! ಅದಕ್ಕಿಂತಲೂ ಮಜಾ ಅಂದರೆ ವಾಕಿಂಗ್ ವೇಳೆಯೂ ಬಲಕ್ಕೆ ಹೊರಳುವುದಿದ್ದರೆ ಬಲಗೈಯಿಂದ ಹ್ಯಾಂಡ್ ಸಿಗ್ನಲ್ ಕೊಡೋಣ ಎಂದುಕೊಳ್ಳುತ್ತಾರಂತೆ! ಸ್ವಲ್ಪ ಉತ್ಪ್ರೇಕ್ಷೆಯೇ ಇರಬಹುದು, ಆದರೆ ಅಭ್ಯಾಸ ಬಲ ನಮ್ಮಿಂದ ಇಂಥದನ್ನೆಲ್ಲ ಮಾಡಿಸುತ್ತದೆ ಎನ್ನುವು ದಂತೂ ನಿಜ.
ಹಳೇ ಕಾಲದಲ್ಲಿ ಲ್ಯಾಂಡ್‌ಲೈನ್ ಫೋನ್‌ನಲ್ಲಿ ಮಾತಾಡುವಾಗ ಕರೆಯನ್ನು ಮುಗಿಸುವ ಮುನ್ನ ‘ಇಡ್ಲಾ?’ ಅಥವಾ ‘ಇಡ್ತೇನೆ’ ಎಂದು ಹೇಳುತ್ತಿದ್ದೆವು. ಆಗ ಅದಕ್ಕೆ ‘ಫೋನ್ ರಿಸೀವರ್ ಅನ್ನು ಕ್ರೇಡಲ್ ಮಾಡಿಡ್ಲಾ?’ ಎಂದು ಅರ್ಥವಿದ್ದದ್ದು. ಅದೇ ಅಭ್ಯಾಸ ಬಲ ಈಗ ಮೊಬೈಲ್ ಫೋನ್ ಸಂಭಾಷಣೆ ಮುಗಿಸುವಾಗಲೂ ಇಡ್ಲಾ?/ಇಡ್ತೇನೆ ಎಂದು ಹೇಳುವಂತೆ ಮಾಡುವುದಿಲ್ಲವೇ? ಈಗ ‘ಮೊಬೈಲ್ ಫೋನ್ ಅನ್ನು ವಾಪಸ್ ಜೇಬಿನಲ್ಲಿಡಲೇ?’ ಎಂದು ಅರ್ಥೈಸಿಕೊಳ್ಳಬೇಕಷ್ಟೇ.
ಜೇಬಿನಲ್ಲಿ ಮೊಬೈಲ್‌ಫೋನ್ ಅಲ್ಲ, ಜುಬ್ಬಾದ ಗುಂಡಿ (ಬಟನ್) ಇಟ್ಟುಕೊಂಡ, ಅದನ್ನು ಪೆಪ್ಪರ್‌ಮಿಂಟ್‌ನಂತೆ ಬಾಯಿಯಲ್ಲಿ ಚೀಪಿದ ಪ್ರಸಂಗವೊಂದಿದೆ. ಅಭ್ಯಾಸ ಬಲದ ಪರಾಕಾಷ್ಠೆಯದು. ಇದನ್ನು ನಾನು ಓದಿದ್ದು ಸನ್ಮಿತ್ರ ಹಾಸ್ಯ ಸಾಹಿತಿ ಬೇಲೂರು ರಾಮಮೂರ್ತಿ ಯವರ ಲೇಖನವೊಂದರಲ್ಲಿ.
ಕಪೋಲಕಲ್ಪಿತ ಹಾಸ್ಯವಲ್ಲ, ನಿಜ ಘಟನೆಯೇ ಅಂತೆ, ಹೀಗಿದೆ: ಮಾಸ್ಟರ್ ಹಿರಣ್ಣಯ್ಯ ತಮ್ಮ ಭಾಷಣಕ್ಕೆ ತಾವೇ ಒಂದು ಶಿಸ್ತುಪಾಲಿಸಿಕೊಂಡು ಬಂದವರು. ‘ನಿಮಗೆ ಕೊಟ್ಟ ಸಮಯ ಮುಗಿಯಿತು’ ಅಂತಲೋ ‘ಮಾತು ಸಾಕು’ ಅಂತಲೋ ಹೇಳುವುದಾಗಲೀ, ಮೆಲ್ಲನೆ ಚೀಟಿ ತೆಗೆದುಕೊಂಡು ಹೋಗಿ ಸೂಚಿಸುವುದಾಗಲೀ ಹಿರಣ್ಣಯ್ಯನವರಿಗೆ ಸ್ವಲ್ಪವೂ ಇಷ್ಟ ಆಗುತ್ತಿರಲಿಲ್ಲ.
ಆದರೂ ಸಮಯಪಾಲನೆಗೆ ಅವರು ಮಾಡಿಕೊಂಡಿದ್ದ ಉಪಾಯ ಎಂದರೆ ಸಮಾರಂಭಕ್ಕೆ ಹೊರಟಾಗ ಶಾಂತಮ್ಮನವರು(ಹಿರಣ್ಣಯ್ಯರ ಪತ್ನಿ) ಗಂಡನ ಜುಬ್ಬಾದ ಜೇಬಿನಲ್ಲಿ ಪೋಲೋ ಅಥವಾ ಪಾಪ್ಪಿನ್ಸ್‌ನಂಥದು ಯಾವ್ದಾದ್ರೂ ಒಂದು ಪೆಪ್ಪರ್ ಮಿಂಟ್ ಇಟ್ಟು ಕಳುಹಿಸುತ್ತಿದ್ದರು. ಹಿರಣ್ಣಯ್ಯ ಭಾಷಣ ಪ್ರಾರಂಭಿಸುವ ಮೊದಲು ಪೆಪ್ಪರ್‌ಮಿಂಟ್ ಬಾಯಿಯಲ್ಲಿ ಹಾಕಿಕೊಂಡು ಭಾಷಣ ಶುರು ಮಾಡುವರು. ಬಾಯಿಯಲ್ಲಿ ಪೆಪ್ಪರ್ ಮಿಂಟ್ ತಾನಾಗಿ ಕರಗುವ ತನಕ ಮಾತು ಮುಂದುವರಿಯುವುದು.
ಇದು ಸುಮಾರು ಅರ್ಧ ಗಂಟೆ ಆಗಬಹುದು. ಈ ಶಿಸ್ತು ನಡೆದಿತ್ತು. ಒಂದು ಸಮಾರಂಭದಲ್ಲಿ ಹಿರಣ್ಣಯ್ಯ ಅರ್ಧಗಂಟೆ ಮಾತಾಡಿದರು, ಮುಕ್ಕಾಲು ಗಂಟೆ ಮಾತಾಡಿದರು, ಒಂದು ಗಂಟೆ ಮಾತಾಡಿದರು… ಊಹುಂ, ಪೆಪ್ಪರ್‌ಮಿಂಟ್ ಕರಗಲೇ ಇಲ್ಲ! ಕೊನೆಗೂ ಸಾಕಪ್ಪಾ ಎಂದುಕೊಂಡು ಅವರಾಗಿಯೇ ಭಾಷಣ ಮುಗಿಸಿದರು. ಇದ್ಯಾಕೆ ಇವತ್ತು ಪೆಪ್ಪರ್ ಮಿಂಟ್ ಕರಗಲಿಲ್ಲ ಅಂತ ಬಾಯಿಗೆ ಕೈ ಹಾಕಿ ಅದುವರೆಗೂ ಚೀಪಿದ ವಸ್ತುವನ್ನು ತೆಗೆದು ನೋಡಿದರೆ ಕಂಡದ್ದೇನು!? ಅದು ಪೆಪ್ಪರ್‌ಮಿಂಟ್ ಅಲ್ಲವೇ ಅಲ್ಲ ಜುಬ್ಬಾದ ಗುಂಡಿ! ಅಂದುಶಾಂತಮ್ಮ ಪೆಪ್ಪರ್‌ಮಿಂಟ್ ಇಡಲು ಮರೆತಿದ್ದರು.
ಅದಕ್ಕೆ ಸರಿಯಾಗಿ ಇನ್ನೇನು ಬಿದ್ದು ಹೋಗೋದರಲ್ಲಿದ್ದ ಜುಬ್ಬಾ ಗುಂಡಿಯನ್ನು ಹಿರಣ್ಣಯ್ಯ ತನ್ನ ಜೇಬಿನಲ್ಲಿ ಹಾಕಿಕೊಂಡಿದ್ದರು. ಎಂದಿನ ಅಭ್ಯಾಸದಂತೆ ಭಾಷಣಕ್ಕೆ ಎದ್ದುನಿಲ್ಲುವ ಮೊದಲು ಜುಬ್ಬಾದ ಜೇಬಿನಲ್ಲಿದ್ದ ಗುಂಡಿಯನ್ನೇ ಬಾಯಿಯಲ್ಲಿ ಹಾಕಿಕೊಂಡರು. ಮಾತಾಡೋಕೆ ಶುರು ಮಾಡಿದರು. ಅವರ ಟಿಪಿಕಲ್ ಶೈಲಿಯಲ್ಲಿ ನಿರರ್ಗಳ ಮಾತಾಡಿದರು. ಪೆಪ್ಪರ್‌ಮಿಂಟ್ ಅಲ್ಲದ ಗುಂಡಿ ಕರಗಲೇ ಇಲ್ಲ! ಜುಬ್ಬಾ ಬಟನ್‌ಗೆ ಉಗುಳಿನ ಸ್ನಾನದ ಕಥೆ ಅದಾದರೆ ಕ್ರಿಕೆಟ್ ಚೆಂಡಿಗೆ ಉಗುಳಿನ ಲೇಪನ ಸಹ ಅಭ್ಯಾಸ ಬಲದ್ದೇ ಕಿತಾಪತಿ.
ಮ್ಯಾಚ್ ನಡೆಯುವಾಗ ಬೌಲರ್‌ಗಳಷ್ಟೇ ಅಲ್ಲ, ಫೀಲ್ಡಿಂಗ್ ಮಾಡುವವರೂ ತಮ್ಮ ಕೈಗೆ ಚೆಂಡು ಸಿಕ್ಕಿದರೆ ಸಾಕು ಅರೆಕ್ಷಣದಲ್ಲೇಅದಕ್ಕೊಂದಿಷ್ಟು ಉಗುಳು ಹಚ್ಚಿ ಹೊಳಪು ನೀಡಲು ಯತ್ನಿಸುತ್ತಾರೆ. ಕೋವಿಡ್ ಕಾರಣದಿಂದಾಗಿ ಈಗ ಪಂದ್ಯಗಳ ವೇಳೆ ಚೆಂಡಿಗೆ ಉಗುಳು ಸವರುವುದನ್ನು ನಿಷೇಧಿಸಲಾಗಿದೆ. ಒಮ್ಮೆಯಾದರೆ ಆರಂಭದಲ್ಲಿ ಅಂಪೈರ್ ಎಚ್ಚರಿಸುತ್ತಾರೆ. ಆಟಗಾರ ಮತ್ತೆ ಅದೇ ತಪ್ಪು ಮಾಡಿದರೆ ಪೆನಾಲ್ಟಿ ಎಂದು ಎದುರಾಳಿ ತಂಡಕ್ಕೆ ಐದು ರನ್ ಕೊಡುಗೆ ನೀಡಲಾಗುತ್ತದೆ.
ಅಷ್ಟೂ ಕಟ್ಟುನಿಟ್ಟು. ಆದರೇನು ಮಾಡುವುದು, ಅಭ್ಯಾಸ ಬಲ! ಕಳೆದವರ್ಷ ಐಪಿಎಲ್ ಪಂದ್ಯಾವಳಿಯಲ್ಲಿ ರಾಜಸ್ಥಾನ್ ರಾಯಲ್ಸ್‌ನ ರಾಬಿನ್ ಉತ್ತಪ್ಪ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಆಡುವಾಗ ತನಗರಿವಿಲ್ಲದಂತೆ (ಅಭ್ಯಾಸ ಬಲದಿಂದ) ಚೆಂಡಿಗೆ ಉಗುಳು ಹಚ್ಚಿ ಮ್ಯಾಚ್ ರೆಫರಿಯ ಕೆಂಗಣ್ಣಿಗೆ ಗುರಿಯಾಗಿದ್ದರು. ಇನ್ನೊಂದು ಪಂದ್ಯದಲ್ಲಿ ವಿರಾಟ್ ಕೋಹ್ಲಿ ಅಭ್ಯಾಸ ಬಲದಿಂದಾಗಿ ಚೆಂಡಿಗೆ ಉಗುಳು ಸವರಲು ಹೊರಟು ತತ್‌ಕ್ಷಣ ಜ್ಞಾನೋದಯವಾಗಿ ಕೈಹಿಂದೆ ಸರಿಸಿದ್ದರು. ಆ ವೀಡಿಯೊ ವೈರಲ್ ಆಗಿತ್ತು.
‘ಕೆಲವೊಮ್ಮೆ ಅಭ್ಯಾಸಗಳು ನಮ್ಮನ್ನು ವಶವಾಗಿಸುತ್ತವೆ’ ಎಂದು ಸಚಿನ್ ತೆಂಡುಲ್ಕರ್ ತಮಾಷೆಯಾಗಿ ಟ್ವೀಟ್ ಮಾಡಿದ್ದರು. ಈವರ್ಷ ಭಾರತ-ಇಂಗ್ಲೆಂಡ್ ತಂಡಗಳ ಏಕದಿನ ಕ್ರಿಕೆಟ್ ಸರಣಿಯ ಹಣಾಹಣಿಯೊಂದರಲ್ಲಿ ಇಂಗ್ಲೆಂಡ್ ತಂಡದ ಸ್ಟಾರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಸಹ ಅದೇ ಅಭ್ಯಾಸ ಬಲ ತೋರಿದರು. ಆತನ ಉಗುಳಾಯಣ ಗಮನಿಸಿದ ಅಂಪೈರ್ ವೀರೇಂದ್ರ ಶರ್ಮಾ ಸ್ಟೋಕ್ಸ್‌ಗೆ ಕೂಡಲೇ ವಾರ್ನಿಂಗ್ ಕೊಟ್ಟರು. ಸ್ಟೋಕ್ಸ್ ಬಳಿ ಉಗುಳಿನ ಸ್ಟೋಕ್ ಧಾರಾಳವಾಗಿದ್ದು ಇನ್ನೊಮ್ಮೆ ಚೆಂಡಿಗೆ ಹಚ್ಚುತ್ತಿದ್ದರೆ ಭಾರತ ತಂಡಕ್ಕೆ ಐದು ರನ್ ಲಾಭವಾಗುತ್ತಿತ್ತು!
ಯಾರಿಗೆ ಗೊತ್ತು, ಆಟಗಾರನ ಅಭ್ಯಾಸ ಬಲವೊಂದು ಪಂದ್ಯದ/ ಸರಣಿಯ ಫಲಿತಾಂಶವನ್ನೂ ಅಡಿಮೇಲು ಮಾಡಬಹುದಿತ್ತು!ಕ್ರೀಡಾಂಗಣದಲ್ಲಿ ಅಲ್ಲ ಸ್ವಯಂವರದಲ್ಲಿ ಜೀವನದಾಟದ ಫಲಿತಾಂಶವೇ ಬದಲಾದದ್ದು ದ್ರೌಪದಿಯ ವಿಚಾರದಲ್ಲಿ. ಅದೂ ಕುಂತಿಯ ಅಭ್ಯಾಸ ಬಲದಿಂದಾಗಿ! ಮತ್ಸ್ಯಯಂತ್ರವನ್ನು ಭೇದಿಸಿ ದ್ರೌಪದಿಯ ಕೈಹಿಡಿಯುವವನಾಗಿ ಆಯ್ಕೆಯಾದವನು ಅರ್ಜುನನೊಬ್ಬನೇ. ಆದರೆ ದ್ರೌಪದಿಯು ಪಂಚಪಾಂಡವರಿಗೂ ಧರ್ಮಪತ್ನಿ ಅಂತನಿಸಿಕೊಳ್ಳಬೇಕಾಯಿತು. ಕುಂತಿಯ ಅಭ್ಯಾಸ ಬಲದಿಂದಾದ ಎಡವಟ್ಟಿನಿಂದಾಗಿ! ಭಿಕ್ಷೆ ಬೇಡಿ ಬದುಕಿಕೊಂಡಿದ್ದ ಪಾಂಡವರು ಆವತ್ತು ಭಿಕ್ಷಾಟನೆಯಿಂದ ಮರಳುವಾಗ ಜತೆಯಲ್ಲಿ ದ್ರೌಪದಿಯನ್ನು ಕರೆದುಕೊಂಡು ಬಂದಿದ್ದರು.
ಗುಡಿಸಲಿನ ಹೊರಗಿನಿಂದಲೇ ‘ಅಮ್ಮಾ ನೋಡು ಇವತ್ತಿನ ನಮ್ಮ ಭಿಕ್ಷೆಯನ್ನು!’ ಎಂದರು. ಕುಂತಿ ಒಳಗೆ ಅಡುಗೆಮನೆಯಲ್ಲೋ ಮತ್ತ್ಯಾವುದೋ ಕೆಲಸ ಮಾಡುತ್ತಿದ್ದವಳು ಅಲ್ಲಿಂದಲೇ ತನ್ನ ಎಂದಿನ ಅಭ್ಯಾಸದಂತೆ ‘ಆಯ್ತಪ್ಪಾ ಎಲ್ಲರೂ ಹಂಚಿಕೊಳ್ಳಿ’ ಎಂದುಬಿಟ್ಟಳು.ಆಮೇಲಿನದು ನಮಗೆಲ್ಲ ಗೊತ್ತೇ ಇರುವ ಕಥೆ. ಪುಣ್ಯಕ್ಕೆ ‘ಎಲ್ಲರೂ ಸಮನಾಗಿ ಹಂಚಿಕೊಂಡು ತಿನ್ನಿ!’ ಎನ್ನಲಿಲ್ಲ ಕುಂತಿ.
ದ್ರೌಪದಿ ಬಚಾವಾದಳು. ತಿನ್ನುವ ವಿಷಯದಲ್ಲಿ ಅಭ್ಯಾಸ ಬಲದ ಪ್ರಭಾವ ತಿಳಿಯಬೇಕಿದ್ದರೆ ರಾಮಾಯಣದಲ್ಲಿ ನಡೆಯಿತೆನ್ನಲಾದ ಈತಮಾಷೆ ಪ್ರಸಂಗ ಸಕ್ಕತ್ತಾಗಿದೆ. ಇದು ವಾಲ್ಮೀಕಿ ಬರೆದದ್ದಲ್ಲ, ಆಮೇಲೆ ಯಾರೋ ಸೇರಿಸಿದ್ದು. ಲಂಕೆಯಿಂದ ಮರಳಿದ ಮೇಲೆ ಶ್ರೀರಾಮಚಂದ್ರನ ಪಟ್ಟಾಭಿಷೇಕದ ತರುವಾಯ ಒಮ್ಮೆ ಜನಕ ಮಹಾರಾಜನು ರಾಮನ ಪರಿವಾರದವರನ್ನೆಲ್ಲ ಮಿಥಿಲೆಗೆ ಆಹ್ವಾನಿಸಿ ದನು.
ಒಂದು ಔತಣಕೂಟ ಏರ್ಪಡಿಸಿದನು. ರಾಮನ ಪರಿವಾರವೆಂದ ಮೇಲೆ ಅದರಲ್ಲಿ ವಾನರಸೇನೆಯೂ ಸೇರಿಕೊಂಡಿತ್ತು. ರಾಮ ಅವರಿಗೆಲ್ಲ ‘ನೋಡ್ರಪ್ಪಾ ಅದು ಗೌರವಾನ್ವಿತರ, ಮರ್ಯಾದಸ್ಥರ ಸಭೆ. ಅಲ್ಲಿ ಕುಚೋದ್ಯ ಮಾಡಲಿಕ್ಕೆ ಹೋಗಬೇಡಿ. ಬಿಹೇವ್ ಪ್ರಾಪರ್ಲಿ. ಓಕೆ?’ ಎಂದು ಮೊದಲೇ ಸಾಕಷ್ಟು ತರಬೇತು ಗೊಳಿಸಿದ್ದನು. ಸರಿ, ಮಿಥಿಲೆಯಲ್ಲಿ ಔತಣ ಕೂಟ ಶುರುವಾಯಿತು. ನೆಲದ ಮೇಲೆ ಸಾಲಾಗಿ ಬಾಳೆಎಲೆ ಹಾಕಿ ಎಲ್ಲರಿಗೂ ಪಂಕ್ತಿಭೋಜನ. ವಾನರರೆಲ್ಲ ಶಿಸ್ತಿನಿಂದಲೇ ಇದ್ದರು. ಪಂಚಭಕ್ಷ್ಯಗಳನ್ನೆಲ್ಲ ಸವಿದರು. ಇನ್ನೇನು ಊಟದ ಕೊನೆ.
ಮಜ್ಜಿಗೆ ಯನ್ನಕ್ಕೆ ನೆಂಚಿಕೊಳ್ಳಲಿಕ್ಕೆಂದು ಉಪ್ಪಿನಕಾಯಿ ಬಡಿಸಲಾಯ್ತು. ಅದು, ಮಿಥಿಲೆಗೆ ನಮ್ಮ ಮಲೆನಾಡಿನಿಂದ ಆಮದಾದಅಪ್ಪೆಮಿಡಿಗಳ ರುಚಿರುಚಿಯಾದ ಉಪ್ಪಿನಕಾಯಿ. ಒಬ್ಬ ವಾನರನು ಮಾವಿನಮಿಡಿಯನ್ನು ಕೈಯಲ್ಲಿ ಹಿಡಿದುಕೊಂಡು ಹಿಚುಕಿದಾಗ ಅದರೊಳಗಿದ್ದ ಸಣ್ಣ ಬೀಜ ಛಂಗನೆ ಜಿಗಿಯಿತು! ಅದನ್ನು ನೋಡಿದವನೇ ‘ಎಲಾ ಇವ್ನ! ಅಷ್ಟೆತ್ತರಕ್ಕೆ ಜಿಗಿಯುವುದಕ್ಕೆ ನನ್ನಿಂದ ಆಗೋದಿಲ್ಲ ಅಂದ್ಕೊಂಡಿಯಾ?’ ಎನ್ನುತ್ತ ಆ ವಾನರನೂ ಊಟಕ್ಕೆ ಕುಳಿತಲ್ಲಿಂದಲೇ ಒಮ್ಮೆ ಮೇಲಕ್ಕೆ ಜಿಗಿದ.
ಯಃಕಶ್ಚಿತ್ ಮಾವಿನಮಿಡಿಯ ಚಿಕ್ಕ ಬೀಜವು ಅವನನ್ನು ಕೆಣಕುವುದರಲ್ಲಿ ಯಶಸ್ವಿಯಾಗಿತ್ತು. ಅವನನ್ನು ನೋಡಿದ ಇತರ ವಾನರರೂಮೇಲಕ್ಕೆ ಜಿಗಿಯತೊಡಗಿದರು. ಉಳಿದವರೆಲ್ಲ ಔತಣಕೂಟವನ್ನು ಅರ್ಧಕ್ಕೇ ಬಿಟ್ಟು ಇದೇನಿದು ಗಲಾಟೆ ಎಂದು ಗಾಬರಿಯಾದರು.ವಾನರರ ಅಭ್ಯಾಸ ಬಲದಿಂದಾಗಿ ಜನಕ ಮಹಾರಾಜನ ಡೈನಿಂಗ್ ಹಾಲ್ ಹೇಗೆ ‘ಮೆಸ್’ ಆಗಿದ್ದಿರಬಹುದೆಂಬ ದೃಶ್ಯವನ್ನು ನೀವೇಊಹಿಸಿ.
ವಾನರರಿಗೇ ಅಭ್ಯಾಸ ಬಲ ಇತ್ತೆಂದ ಮೇಲೆ, ವಾನರರಿಂದ ವಿಕಸಿತರಾದ ನರರಿಗೆ ಅದು ಇಲ್ಲದಿರುತ್ತದೆಯೇ? ರಷ್ಯನ್ ವಿಜ್ಞಾನಿ ಪಾವ್ಲೊವ್‌ನ ನಾಯಿ ಹೇಗೆ ಗಂಟೆ ಸದ್ದಿನೊಡನೆ ತಿಂಡಿಯೂ ಸಿಗುತ್ತದೆ ಎಂದು ಅಭ್ಯಾಸ ಬಲ ಬೆಳೆಸಿಕೊಂಡಿತ್ತೋ ಅಂಥವೇ ಇನ್‌ಸ್ಟಿಂಕ್ಟ್‌ಗಳನ್ನು ನಾವು ಮನುಷ್ಯರೂ ಬೆಳೆಸಿಕೊಂಡಿರುತ್ತೇವೆ. ಬೆಳಗ್ಗೆ ಎದ್ದು ‘ನಿತ್ಯವಿಧಿ’ ಆಗಬೇಕಿದ್ದರೆ ಕೈಯಲ್ಲೊಂದು ಪತ್ರಿಕೆಯೋ ಪುಸ್ತಕವೋ ಇರಲೇಬೇಕು ಎಂಬಂಥ ಅಭ್ಯಾಸಗಳನ್ನೂ ಬೆಳೆಸಿಕೊಂಡಿರುತ್ತೇವೆ.
ಈಗೀಗಂತೂ ಊಟ-ತಿಂಡಿಯ ವೇಳೆಯಲ್ಲೂ ಎಡಗೈಯಲ್ಲಿ ಸ್ಮಾರ್ಟ್‌ಫೋನ್ ಇರಲೇಬೇಕು. ತಟ್ಟೆಯಲ್ಲಿ ಏನು ಬಡಿಸಿದ್ದಾರೆನ್ನುವುದರಪರಿವೆಯಿಲ್ಲ. ಮಾಸ್ಟರ್ ಹಿರಣ್ಣಯ್ಯ ಹೇಗೆ ಜುಬ್ಬಾದ ಜೇಬಿನಿಂದ ತೆಗೆದು ಕಣ್ಣಿಂದ ನೋಡದೆಯೇ ಗುಂಡಿಯನ್ನು ಪೆಪ್ಪರ್‌ಮಿಂಟ್  ಅಂದ್ಕೊಂಡು ಬಾಯಿಗೆ ಹಾಕ್ಕೊಂಡು ಚೀಪತೊಡಗಿದರೋ ಅಂಥದೇ ಕ್ರಿಯೆಗಳನ್ನು ನಾವೆಲ್ಲ ಅಭ್ಯಾಸ ಬಲದ ಪ್ರಭಾವದಿಂದ ಆಗಾಗ ಮಾಡುತ್ತಲೇ ಇರುತ್ತೇವೆ. ಮನೆಯಲ್ಲಿ ಸ್ಥಿರ-ಚರ ವಸ್ತು-ವ್ಯಕ್ತಿಗಳನ್ನು ಕಳೆದುಕೊಂಡಾಗಲೂ ಅಭ್ಯಾಸ ಬಲ ನಮ್ಮ ಅನುಭವಕ್ಕೆ ಬರುತ್ತದೆ.
ಗೋಡೆ ಗಡಿಯಾರ ಕೆಟ್ಟು ಹೋಗಿ ಅಥವಾ ಕೆಳಗೆ ಬಿದ್ದು ಒಡೆದುಹೋಗಿ ಗೋಡೆ ಖಾಲಿಯಾದರೂ ಗಂಟೆ ಎಷ್ಟಾಯ್ತೆಂದು ನೋಡಲಿಕ್ಕೆ ನಮ್ಮ ದೃಷ್ಟಿ ಅಲ್ಲಿಗೇ ಹೋಗುತ್ತದೆ. ಮನೆಯಲ್ಲಿದ್ದ ನಾಯಿಯೋ ಬೆಕ್ಕೋ ಅಥವಾ ಕುಟುಂಬ ಸದಸ್ಯರ ಪೈಕಿ ಯಾರೊಬ್ಬರೋ ಇಲ್ಲವಾದರೆ (ನಿಧನರಾದರೇ ಅಂತೇನಲ್ಲ, ದೂರದ ಊರಿಗೆ ಹೋದರೂ) ಕೆಲ ದಿನಗಳವರೆಗೆ ಕ್ಷಣಕ್ಷಣಕ್ಕೂ ಅವರ ಇರುವನ್ನು ನಮ್ಮ ಮನಸ್ಸು ಪರಿಗಣಿಸಿರುತ್ತದೆ. ಕಾರಣ ಅದೇ, ಅಭ್ಯಾಸ ಬಲ.
ನೀವು ಇದನ್ನೂ ಗಮನಿಸಿರಬಹುದು: ಹೊಸ ವರ್ಷದ ಅಥವಾ ಹಬ್ಬಹರಿದಿನಗಳ ಶುಭಾಶಯ ಯಾರಾದರೂ ತಿಳಿಸಿದರೆ ‘ಸೇಮ್ ಟು ಯೂ’ ಎಂದು ಹೇಳುತ್ತೇವೆ ಅಥವಾ ಬರೆಯುತ್ತೇವೆ. ಅದೇ ಅಭ್ಯಾಸ ಬಲದಿಂದಲೇ ‘ಹ್ಯಾಪಿ ಬರ್ತ್ ಡೇ’ ಅಥವಾ ‘ಹ್ಯಾಪಿ ಜರ್ನಿ’ ಮುಂತಾದ ಹಾರೈಕೆಗಳಿಗೂ ನಮ್ಮ ಬಾಯಿಯಿಂದ ‘ಸೇಮ್ ಟು ಯೂ’ ಬರುತ್ತದೆ. ಹಾಗೆ ನೋಡಿದರೆ ಒಂದು ಮಟ್ಟಕ್ಕೆ ಅಭ್ಯಾಸ ಬಲವೂ ನಮ್ಮ ಬದುಕೆಂಬ ಜಟಕಾಬಂಡಿಯ ಸಾಹೇಬ ಆಗಿದೆಯೇನೋ ಅನಿಸುವುದಿದೆ.
ಮದುವೆಗೋ ಮಸಣಕೋ… ಹೇಗಂತೀರಾ? ‘ಅಭ್ಯಾಸ ಬಲದಿಂದ ಲಗ್ನ ಮಂಟಪದಲ್ಲಿ ಸಾಹಿತಿ ವರ ಹಾಕಿದ ಕೂಡಲೇ ತೆಗೆದು ಕೆಳಗಿಟ್ಟ ಮದುವೆ ಹಾರ!’ – ಡುಂಡಿರಾಜ್ ಬರೆದಿದ್ದೆಂದು ನೆನಪು. ಮೇಲೆ ಹೇಳಿದಂತೆ ಸಂದೇಶಗಳಿಗೆಲ್ಲ ‘ಸೇಮ್ ಟು ಯೂ’ ಎನ್ನುವ ನಮ್ಮೆಲ್ಲರಅಭ್ಯಾಸ ಬಲದಿಂದಾಗಿ ಮುಂದೊಂದು ದಿನ ‘ರಿಪ್’(ಆರ್‌ಐಪಿ) ಗೂ ಸೇಮ್ ಟು ಯೂ ಎಂಬ ಉತ್ತರ ಕೊಡುವಂತಾದರೆ ಅಚ್ಚರಿ ಪಡಬೇಕಿಲ್ಲ! ೨೦೨೨ನೆಯ ಇಸವಿ ಎಲ್ಲರಿಗೂ ಒಳಿತನ್ನೇ ಮಾಡಲೆಂದು ಹಾರೈಸೋಣ.