ನೂರು ಕೋಟಿ ಮನಸಿಗೆ ಮೂರು ಕೋಟಿ ದೇವರು ಹೆಚ್ಚೆ ?
ಸುಪ್ತ ಸಾಗರ
ರಾಧಾಕೃಷ್ಣ ಎಸ್. ಭಡ್ತಿ
@.
ನಮಗೆ ದೇವರು ದಕ್ಕಿದ್ದು ‘ನಿರಾಕಾರ ಬ್ರಹ್ಮ’ ಸ್ವರೂಪದಲ್ಲಿ. ಅದಕ್ಕೊಂದು ಮೂರ್ತ ಸ್ವರೂಪವೇ ಇಲ್ಲ. ಹೀಗಿರುವಾಗ ನಮ್ಮ ‘ದೇವರು’ ಒಂದೇ ಆಗಿರಲು ಹೇಗೆ ಸಾಧ್ಯ? ನೂರು ಕೋಟಿಗೂ ಮಿಕ್ಕು ಜನಸಂಖ್ಯೆ ಹೊಂದಿರುವ ದೇಶಕ್ಕೆ ‘ಮುಕ್ಕೋಟಿ’ ದೇವತೆಗಳಿರುವುದು ಅಸಹಜವೂ ಅಲ್ಲ, ಅಚ್ಚರಿಯೂ ಅಲ್ಲ, ಆಕ್ಷೇಪಾರ್ಹವೂ ಅಲ್ಲ.
ಈಗ ಐದಾರು ವರ್ಷಗಳ ಹಿಂದೆ, ಬರಹಗಾರ ಬರಗೂರು ರಾಮಚಂದ್ರಪ್ಪ ‘ಹಿಂದೂ ಧರ್ಮದಲ್ಲಿ ಸಾಕಷ್ಟು ಲೋಪ ದೋಷಗಳಿವೆ. ಅದನ್ನು ಬಹಿರಂಗ ಸ್ವತಃ ವಿವೇಕಾನಂದರೇ ಸಾರಿದ್ದರು’ ಎಂಬರ್ಥದ ಮಾತುಗಳನ್ನಾಡಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ಮಂಡನೆಯಾದ ಮತಾಂತರ ನಿಷೇಧ ವಿಧೇಯಕವನ್ನು ವಿರೋಧಿಸುವ ಭರದಲ್ಲಿ ಪುನಃ ವಿವೇಕಾನಂದರನ್ನು ಕಾಂಗ್ರೆಸಿಗರು, ಬುದ್ಧಿಜೀವಿಗಳೆನಿಸಕೊಂಡವರು ಎಳೆದು ತಂದಿದಾರೆ. ಆದರೆ ವಿವೇಕಾನಂದರು ಹೇಳಿದ್ದು ಯಾವ ಹಿನ್ನೆಲೆಯಲ್ಲಿ? ಇಂಥವೆಲ್ಲ ಸನ್ನಿವೇಷದಲ್ಲಿ ಮತ್ತೆ ಮತ್ತೆ ಡಾ.ಶಿವರಾಮ ಕಾರಂತರೇ ನೆನಪಾಗುತ್ತಾರೆ.
ಬಹುತೇಕರು ಕಾರಂತರನ್ನು ನಾಸ್ತಿಕರು ಎಂದೇ ಭಾವಿಸಿದ್ದರು ಮತ್ತು ಇಂದಿಗೂ ಭಾವಿಸಿಯೇ ಇದ್ದಾರೆ. ‘ದೇವರು’ ಬಗ್ಗೆ ಹೊತ್ತಗೆಯನ್ನೇ ಬರೆದ ಎ. ಎನ್ ಮೂರ್ತಿರಾಯರ ಬಗ್ಗೆಯೂ ಇಂಥದ್ದೇ ತಪ್ಪು ಕಲ್ಪನೆ ಗಳಿವೆ. ಹಾಗೆಂದು ಇಬ್ಬರು ಸಹ ಎಲ್ಲಿಯೂ ತಮ್ಮನ್ನು ತಾವು ‘ನಾಸ್ತಿಕ’ ಎಂದು ಘೋಷಿಸಿಕೊಂಡಿಲ್ಲ. ಅವರ ‘ದೇವರು’ ನಮ್ಮ ದೇವರಿಗಿಂತ ಭಿನ್ನ ಎಂದ ಮಾತ್ರಕ್ಕೆ ಅವರು ನಿರೀಶ್ವರವಾದಿಗಳೆಂಬ ತೀರ್ಮಾನಕ್ಕೆ ಬಂದು ಬಿಡುವುದಾ ದರೂ ಹೇಗೆ? ಪತ್ರಿಕೋದ್ಯಮದಲ್ಲಿ ಕೆಲವೊಮ್ಮೆ ಇಂಥ ಅಚಾತುರ್ಯ ಘಟಿಸುವುದು ಇದೆ.
ವರದಿಗಾರನೊಬ್ಬ ತನ್ನ ಅಭಿಪ್ರಾಯವನ್ನು ಸಾರ್ವತ್ರೀಕರಿಸಿ ಓದುಗರ ಅಥವಾ ಸಮಾಜದ ಅಭಿಪ್ರಾಯ ‘ಹೀಗೆಯೆ’ ಎಂಬಂತೆ ಬರೆದು ಬಿಡುತ್ತಾನೆ. ಅದರಲ್ಲೂ ಚುನಾವಣೆ ಯಂಥ ಸಂದರ್ಭಗಳಲ್ಲಿ ಪೂರ್ವಗ್ರಹಕ್ಕೊಳಗಾಗುವ ಕೆಲ ವರದಿಗಾರರು ತಮ್ಮ ರಾಜಕೀಯ ಒಲವನ್ನೇ ಸಾರ್ವಜನಿಕ ಅಭಿಮತದಂತೆ ಬಿಂಬಿಸಿ ವರದಿಗಳಲ್ಲಿ ತೀರ್ಪು ನೀಡಿಬಿಡುತ್ತಾರೆ. ಇದು ವರದಿಗಾರ ಮಾಡುವ ವಂಚನೆ ಮಾತ್ರವಲ್ಲ ಆತನ ಮಿತಿ.
ಬಹುಶಃ ಇತ್ತೀಚೆಗೆ ವೈಯಕ್ತಿಕವಾಗಿ ಸ್ನೇಹಿತರೂ ಆಗಿರುವ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ಬಿಳಿಗಿರಿರಂಗನ ಬಗ್ಗೆ ಹೇಳಿದ್ದೂ ಸಹ ವ್ಯಕ್ತಿಗತ ಮಿತಿಯಾಗಿಯೇ ಕಂಡರೆ ತಪ್ಪಿಲ್ಲ. ಹಾಗಲ್ಲದಿದ್ದರೆ ‘ಬಿಳಿಗಿರಿ ರಂಗಯ್ಯ ರಾತ್ರಿ ಹೊತ್ತು ಸೋಲಿಗರ ಮನೆಯಲ್ಲಿ ಹೆಣ್ಣಿನ ಜತೆ ಇರುತ್ತಾನೆ. ಬೆಳಗಾಗುವಾಗ ಕಲ್ಲಾಗುತ್ತಾನೆ’ ಎಂದು ಹೇಳಿ ದೇವರನ್ನೂ ವಿವಾದಕ್ಕೆ ಸಿಲುಕಿಸುತ್ತಿರಲಿಲ್ಲ.
ದೇವರನ್ನು ವಿವಾದಕ್ಕೆ ಎಳೆತರುವುದು ಹೊಸತೇನಲ್ಲ. ವಿಚಾರವಾದಿ ಎಂದು ತಮ್ಮನ್ನೇ ತಾವು ಕರೆದುಕೊಳ್ಳುವ ಭಗವಾನ್, ಜ್ಞಾನಪೀಠ ಪುರಸ್ಕೃತ ಅನಂತ ಮೂರ್ತಿ, ಸಂಶೋಧಕ ಎಂ.ಎಂ ಕಲಬುರ್ಗಿ, ಸಾಹಿತಿ ಕುಂವೀ ಹೀಗೆ ಬಹುತೇಕರು ಒಂದಲ್ಲಾ ಒಂದು ಸಂದರ್ಭದಲ್ಲಿ,ಒಂದಲ್ಲಾ ಒಂದು ಕಾಲಕ್ಕೆ ಹಿಂದೂ ದೇವರ ಬಗ್ಗೆ ವ್ಯಂಗ್ಯವಾಡಿದವರೇ. ಇತ್ತೀಚೆಗಂತೂ ದೇವರ ಫೋಟೋ ಹಾಕಿಕೊಳ್ಳದಿರುವುದು, ಹಣೆಗೆ ತಿಲಕವಿಟ್ಟಕೊಳ್ಳದಿರುವುದು, ಬಹಿರಂಗವಾಗಿ ನಮ್ಮ ನಂಬಿಕೆಗಳ, ಆಚರಣೆಗಳ ಬಗೆಗ ಮಾತನಾಡದಿರುವುದು ಇವೆಲ್ಲವೂ‘ಆಧುನಿಕತೆಯ ಪ್ರತೀಕ’ ಎಂಬ ವ್ಯಾಖ್ಯಾನಕ್ಕೊಳಪಡುತ್ತಿದೆ.
ಹಾಗೆಲ್ಲ ಒಮ್ಮೆ ಇದ್ದರೆ ಅದು ಮೌಢ್ಯ. ಜಾತಿ ಐತೆ. ಇಂಥ ಮನೋಭಾವ ಹಿಂದು ಧರ್ಮಕ್ಕೆ ಸೀಮಿತ. ಇನ್ನೂ ಹೇಳಿದರೆ ಹಿಂದುವೊಬ್ಬ ಜೀಸಸ್‌ನ, ಫೋಟೋ ಅಥವಾ ಶಿಲುಬೆ ಇಟ್ಟುಕೊಳ್ಳುವುದು, ಮುಸ್ಲೀಮರ ಚಂದ್ರ ನಕ್ಷತ್ರಗಳನ್ನೋ, ಮೆಕ್ಕಾದ ಚಿತ್ರವನ್ನೋ ಇಟ್ಟು ಕೊಳ್ಳುವುದು ಕ್ರಾಂತಿಕಾರಕ. ಆದರೆ ಬೇರೆ ಧರ್ಮದವರ‍್ಯಾರೇ ಹಿಂದು ದೇವರ (ಇಟ್ಟುಕೊಳ್ಳುವುದೇ ಇಲ್ಲ ಬಿಡಿ) ಫೋಟೋ ಇಟ್ಟು ಕೊಂಡರೆ ಮೌಢ್ಯ. ಆರು ತಿಂಗಳ ಕೆಳಗೊಮ್ಮೆ ನಾಸಾದ ಇಂಟರ್ನಿಯಾಗಿ ಆಯ್ಕೆಯಾದ ಭಾರತೀಯ ಮೂಲದ ಪ್ರತಿಮಾ ರಾಯ್ ಎಂಬಾಕೆ ಅಪ್‌ಲೋಡ್ ಮಾಡಿದ ಫೋಟೋದ ಹಿನ್ನೆಲೆಯಲ್ಲಿ ಹಿಂದೂ ದೇವರು ಗಳಿರುವುದು ಬಾರೀ ವಿವಾದವಾಗಿತ್ತು.
ಹಾಗೆಯೇ ಭಾರತದ ಮಂಗಳಯಾನಕ್ಕೆ ಮೊದಲು ಉಪಗ್ರಹದ ಚಿನ್ನದ ಪ್ರತಿಕೃತಿಯನ್ನು ಇಸ್ರೋ ತಿರುಪತಿಗೆ ಅರ್ಪಿಸಿದ್ದೂ ಭಾರೀ ಟೀಕೆಗೆ ಒಳಗಾಗಿತ್ತು. ಏಕೆ, ವಿಜ್ಞಾನಿಗಳೆನಿಸಿದವರಿಗೆ ಧಾರ್ಮಿಕ ಹಕ್ಕಿಲ್ಲವೇ? ಅಥವಾ ನಂಬಿಕೆಗಳಿರಬಾರದೇ? ನಾಸಾದವರ‍್ಯಾರೂ ಭಾನುವಾರದ ಪ್ರೇಯರ್‌ಗೆ ಹೋಗರೇ? ಈ ಹಿನ್ನೆಲೆಯಲ್ಲಿಯೇ ಕಾರಂತಜ್ಜರು ನೆನಪಾಗಿದ್ದು.
ಒಂದೆಡೆ ಕಾರಂತರು ತಮ್ಮ ದೇವರನ್ನು ವ್ಯಾಖ್ಯಾನಿಸುತ್ತಾ ‘ನಮ್ಮ ಕಲ್ಪನೆ ಯನ್ನು ಮೀರಿದ ದೇವರು ಇಲ್ಲ. ಹಾಗಾಗಿ ಇಂಥ ದೇವರನ್ನು ನಾನು ನಂಬುವುದಿಲ್ಲ’ ಎಂದಿದ್ದಾರೆ. ಇಷ್ಟಕ್ಕೆ ನಮ್ಮ ಸೋಕಾಲ್ಡ್ ಬುದ್ಧಿಜೀವಿಗಳೆಲ್ಲ ‘ಕಾರಂತರು ಸಹ ನಿರೀಶ್ವರವಾದಿಗಳು. ನಮ್ಮ ಅಭಿಪ್ರಾಯವನ್ನೇ ಅವರು ಸಹ ಅನುಮೋದಿಸಿದ್ದಾರೆ. ಹೀಗಾಗಿ ಅವರು ಸಹ ನಾಸ್ತಿಕರು’ ಅಂದುಕೊಂಡುಬಿಟ್ಟರು. ಕೆಲವರು ಕೆಲವೆಡೆಅದನ್ನು ಆಡಿಯೂ ವ್ಯಕ್ತಪಡಿಸಿದರು. ಕಾರಂತರು ಈ ಬಗ್ಗೆ ಏನೊಂದೂ ಪ್ರತಿಕ್ರಿಯಿಸಲಿಲ್ಲ. ಅತ್ಯಂತ ನಿಷ್ಠುರವಾದಿ ಕಾರಂತಜ್ಜ ನಕ್ಕು ಸುಮ್ಮನಾದರು. ಕಾರಂತರ ‘ದೇವರು’ ಮನುಷ್ಯ ಮಿತಿಯನ್ನು ಮೀರಿದಂಥದ್ದು.
ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ‘ಶ್ರೀರಾಮ’ ಎಂಬಾತನನ್ನು ನಾವು ನೋಡಿಲ್ಲ. ಅವನ ಆದರ್ಶವ್ಯಕ್ತಿತ್ವ, ಆಡಳಿತದ ಪರಿ, ಇತ್ಯಾದಿ ಗಳನ್ನು ನಾವು ಓದಿ, ಕೇಳಿ ತಿಳಿದುಕೊಂಡಿದ್ದೇವೆ. ಇಂಥ ಸಂದರ್ಭಗಳಲ್ಲೆಲ್ಲ ಶ್ರೀರಾಮನ ಬಗೆಗೆ ಆತ ಹೀಗಿದ್ದಿರಬಹುದಾ, ಹಾಗಿದ್ದಿರಬಹುದಾ? ಎಂಬ ರೀತಿ ಕಲ್ಪನೆಗಳನ್ನು ಮಾಡಿಕೊಳ್ಳುತ್ತ ಹೋಗಿದ್ದೇವೆ. ಕಲಾವಿದನೊಬ್ಬ ಸಹ ರಾಮನನ್ನು ತನ್ನ ಕಲ್ಪನೆಯ ಮೂಸೆಯಲ್ಲಿ ಮೂಡಿಸಿಕೊಂಡು ‘ರಾಮ’ನ ಸುಂದರ ಆಕೃತಿಯನ್ನು ಚಿತ್ರಿಸುತ್ತಾನೆ.
ಶಿಲ್ಪಿಯೊಬ್ಬ ನಮ್ಮ ನಡುವಿನ ‘ಪುರುಷೋತ್ತಮ’ನನ್ನು ಗಮನದಲ್ಲಿಟ್ಟುಕೊಂಡು ಮೂರ್ತಿ ಯನ್ನು ಕಡೆಯುತ್ತಾನೆ, ಒಟ್ಟಾರೆಯಾಗಿ ಎರಡು ಕೈಕಾಲು ಸೇರಿ ಸುಂದರ ಅಂಗಾಂಗಗಳನ್ನೊಳಗೊಂಡ ವ್ಯಕ್ತಿ ಮಾತ್ರವೇ ರಾಮನಾಗಿ ಮೂಡುತ್ತಾನೆ. ಹಾಗೆಯೇ ಅವತಾರಗಳ ಪ್ರಶ್ನೆಯೂ ಹೀಗೆಯೇ. ವರಾಹ, ನರಸಿಂಹ, ಮತ್ಸ್ಯ ಎಲ್ಲವೂ ನಮ್ಮ ಕಣ್ಣ ಮುಂದೆ ನಾವು ಕಾಣುವ ಪ್ರಾಣಿ ಪಕ್ಷಿಗಳೇ ದೇವರಾಗಿ ನಿಲ್ಲುತ್ತವೆ. ಇದರಿಂದ ಹೊರತಾದ ಕಲ್ಪನೆಗೆ ನಿಲುಕದ ಆಕೃತಿಯೊಂದು ದೇವರಾಗದ ಉದಾಹರಣೆಯೇ ನಮ್ಮ ಪುರಾಣೇತಿಹಾಸದಲ್ಲಿಇಲ್ಲ.
ಇದನ್ನು ಮೀರಿ ನಮಗೆ ದೇವರು ದಕ್ಕಿದ್ದು ‘ನಿರಾಕಾರ ಬ್ರಹ್ಮ’ ಸ್ವರೂಪದಲ್ಲಿ. ಅದಕ್ಕೊಂದು ಮೂರ್ತ ಸ್ವರೂಪವೇ ಇಲ್ಲ ಎಂದು  ಪ್ರತಿ ಪಾದಿಸಿದೆವು. ಹೀಗಿರುವಾಗ ನಮ್ಮ ‘ದೇವರು’ ಒಂದೇ ಆಗಿರಲು ಹೇಗೆ ಸಾಧ್ಯ? ನೂರು ಕೋಟಿಗೂ ಮಿಕ್ಕು ಜನಸಂಖ್ಯೆ ಹೊಂದಿರುವ ದೇಶಕ್ಕೆ ‘ಮುಕ್ಕೋಟಿ’ ದೇವತೆಗಳಿರುವುದು ಅಸಹಜವೂ ಅಲ್ಲ, ಅಚ್ಚರಿಯೂ ಅಲ್ಲ, ಆಕ್ಷೇಪಾರ್ಹವೂ ಅಲ್ಲ. ಏಕೆಂದರೆ ಎಲ್ಲ ಮನಸುಗಳ ಕಲ್ಪನೆ ಒಂದೇ ತೆರನಾಗಿ ಇರಲು ಹೇಗೆ ಸಾಧ್ಯ? ಅಂದ ಮಾತ್ರಕ್ಕೆ ‘ನನ್ನ ದೇವರೇ ಸರಿ, ಅದು ಮಾತ್ರ ಸತ್ಯ’ ಎಂದು ಪ್ರತಿಪಾದಿಸುವುದು ಮೂರ್ಖತನವಾದೀತು.
ವಿವೇಕಾನಂದರ ವಿಚಾರದಲ್ಲೂ ಇದೇ ಸಿದ್ಧಾಂತ ಅನ್ವಯವಾಗುತ್ತದೆ. ರಾಷ್ಟ್ರಸಂತನಾಗಿ ವಿಶ್ವದ ಗಮನ ಸೆಳೆದ ‘ವಿವೇಕರನ್ನು’ ಅವಿವೇಕದ ಮಿತಿಯಲ್ಲಿ ವ್ಯಾಖ್ಯಾನಿಸಲು ಸಾಧ್ಯವೇ ಇಲ್ಲ. ವಿವೇಕರು ಧರ್ಮ ದಲ್ಲಿನ ದೋಷವನ್ನು ಎತ್ತಿಹಿಡಿದಿದ್ದರು ಎನ್ನುವುದು ಎಷ್ಟುಸತ್ಯವೋ, ಅಂಥ ದೋಷಗಳ ನಿವಾರಣೆಗೆ ಇಡೀ ಜೀವಿತ ಮುಡಿಪಾಗಿಟ್ಟಿದ್ದರು ಎಂಬುದೂ ಅಷ್ಟೇ ವಾಸ್ತವ. ಯಾವುದೇ ಲೋಪವನ್ನು ಆಕ್ಷೇಪಿಸುವ ಅಧಿಕಾರ ಬರುವುದು ಅದನ್ನು ಸರಿಪಡಿಸುವ ಪ್ರಾಮಾಣಿಕ ಪ್ರಯತ್ನ ನಮ್ಮಿಂದ ಆಗುತ್ತದೆ ಎಂಬ ಭರವಸೆ ಇದ್ದಾಗ ಮಾತ್ರ.ದೇವರನ್ನು, ವಿಗ್ರಹಾರಾಧನೆಯನ್ನು ವಿವೇಕರು ಅಗತ್ಯ ವಿಲ್ಲ ಎಂದಿದ್ದರೆ, ಅದನ್ನು ಮೀರಿದ ಸಾಧನಾಮಾರ್ಗ ಅವರಿಗೆ ದಕ್ಕಿತ್ತು ಎಂಬುದು ಗ್ರಾಹ್ಯ.
‘ವಿಗ್ರಹವೊಂದು ಸಂಕೇತ. ಅದು ಭಗವಂತನ ನೆನಪು ತಂದುಕೊಡುತ್ತದೆ. ಅದು ನಿಕೃಷ್ಟವಲ್ಲ. ಒಬ್ಬೊಬ್ಬ ಸಾಧಕನಿಗೂ ಒಂದೊಂದುದಾರಿಯುಂಟು. ಅದು ಆಯಾಯ ವ್ಯಕ್ತಿಯ ಸಾಮರ್ಥ್ಯ ಮತ್ತು ಶ್ರದ್ಧೆಯನ್ನು ಅವಲಂಬಿಸಿರುತ್ತದೆ’ ಎಂದು ವಿವೇಕಾನಂದರೇ ಒಂದು ಸಂದರ್ಭದಲ್ಲಿ ವ್ಯಾಖ್ಯಾನಿಸಿದ್ದಾರೆ. ಹೀಗಿರುವಾಗ ವಿವೇಕರು ಎಲ್ಲೋ ಒಂದೆಡೆ ಹೇಳಿದ ಮಾತನ್ನೇ ಆಧರಿಸಿ ಆಯಾ ಸನ್ನಿವೇಶವನ್ನು ಗಣನೆಗೆ ತೆಗೆದುಕೊಳ್ಳದೆ ಅದೇ ಅವರ ಸಿದ್ಧಾಂತವಾಗಿತ್ತು ಎಂದು ಹೇಳುವುದು ಎಷ್ಟು ಸಮಂಜಸ? ಇದೇ ಸಂದರ್ಭದಲ್ಲಿ ಆಚಾರ್ಯ ರಜನೀಶರೂ ನೆನಪಾಗುತ್ತಾರೆ.
ರಜನೀಶರು ಬಹಶಃ ಬರೆಯದ, ಹೇಳದ ವಿಷಯ ವಸ್ತುಗಳು ವಿರಳ. ಪತ್ರಿಕೋದ್ಯಮ ಸಹಿತ ತರ್ಕ, ವ್ಯಾಕರಣ, ಪುರಾಣ, ಸಿದ್ಧಾಂತ, ಜೀವಿತ, ಸಾವು, ಪ್ರಾರ್ಥನೆ, ಆರಾಧನೆ, ವ್ಯಕ್ತಿತ್ವ ಹೀಗೆ ಪ್ರತಿಯೊಂದರ ಬಗ್ಗೆಯೂ ಸಂದೇಹ ನಿವಾರಣೆಯ ಪ್ರವಚನ ಸ್ವರೂಪದಲ್ಲಿಅವರು ತಮ್ಮ ಪ್ರತಿಪಾದನೆಯನ್ನು ಮಾಡಿದ್ದಾರೆ. ಅದಕ್ಕೆ ‘ಲೈಂಗಿಕ’ ವಿಜ್ಞಾನವೂ ಹೊರತಲ್ಲ. ಆದರೆ ಅವರನ್ನು ಬಹುತೇಕರು ಗುರುತಿಸಿದ್ದು ‘ಸೆಕ್ಸ್ ಗುರು’ ಎಂದು. ಏಕೆಂದರೆ ಸೆಕ್ಸ್ ವಿಚಾರಗಳನ್ನು ಮಾತನಾಡುವುದೇ ಈ ಸಮಾಜದಲ್ಲಿ ಅಪರಾಧ ಎನ್ನುವ ಸನ್ನಿವೇಶದಲ್ಲಿ ಅದರ ಬಗ್ಗೆ ಚರ್ಚೆ ನಡೆಸಿದರು.
ಜನಕ್ಕೆ ಅದು ಹಿತವೆನಿಸಿ ಅವರನ್ನು ‘ಸೆಕ್ಸ್ ಗುರು’ವಾಗಿಯಷ್ಟೆ ನೋಡಿದರು. ಅದು ಸಮುದಾಯದ ಮಿತಿಯೇ ಹೊರತು ಆಚಾರ್ಯರಜನೀಶರದ್ದಲ್ಲ. ಹಾಗೆಯೇ ವಿವೇಕರು ಸಹ. ಭಾರತೀಯ ಸಮಾಜದಲ್ಲಿನ ಧರ್ಮದಲ್ಲಿನ ಲೋಪಗಳ ಬಗ್ಗೆ, ಅಲ್ಲಿನ ಸಂಪ್ರದಾಯ, ಆಚರಣೆಗಳ ಬಗ್ಗೆ ‘ಚಕಾರ’ ಕೇಳಿಬಂದಿದ್ದು, ಬರುತ್ತಿರುವುದು ಹೊಸತೇನಲ್ಲ. ಯಾವುದೇ ಸಮಾಜ, ಧರ್ಮ ಪರಿಪೂರ್ಣ ಎಂದು ಹೇಳಲಾಗುವುದೇ ಇಲ್ಲ. ರಾಜಾರಾಂ ಮೋಹನ್ ರಾಯ್ ಅವರು ಎಂದೋ ಹಿಂದೂ ಧರ್ಮದಲ್ಲಿನ ಬಾಲ್ಯವಿವಾಹ, ಸತಿಪದ್ಧತಿ,ವಿಧವಾ ಪದ್ಧತಿಗಳನ್ನು ವಿರೋಽಸಿ ಅದರ ಸುಧಾರಣೆ ಗಾಗಿಯೇ ‘ಆರ್ಯ ಸಮಾಜ’ವನ್ನು ಸ್ಥಾಪಿಸಿದರು.
ಸ್ವಾಮಿ ದಯಾನಂದ ಸರಸ್ವತಿಯವರ ‘ಬ್ರಹ್ಮ ಸಮಾಜ’ ಮಾಡಿದ ಕ್ರಾಂತಿಯೂ ಮಹತ್ವಪೂರ್ಣ ಕೊಡುಗೆಯಾಗಿ ದಾಖಲಾಗಿದೆ. ಯಾವುದೇ ವ್ಯವಸ್ಥೆಯ ಹೊರಗೆ ನಿಂತು ಅದರ ಲೋಪಗಳ ಬಗ್ಗೆ ಇವರಾರು ಮಾತನಾಡಿದವರಲ್ಲ. ವ್ಯವಸ್ಥೆಯ ಲೋಪಗಳನ್ನು ಸರಿಪಡಿಸಲು ಸ್ವತಃ ಅದರೊಳಗೆ ಧುಮುಕಿ ಶ್ರಮಿಸಿದವರು. ಮತ್ತದರಲ್ಲಿ ಬಹುತೇಕ ಯಶಸ್ವಿಯಾದವರು.
ಆದರೆ ಇತ್ತೀಚಿಗೆ ಧರ್ಮ, ವ್ಯವಸ್ಥೆಯನ್ನು ಟೀಕಿಸುವುದೇ ದೊಡ್ಡಸ್ತಿಕೆ ಎಂಬಂತೆ ಆಗಿಬಿಟ್ಟಿದೆ. ಹೀಗೆ ಟೀಕಿಸುವ ಮುನ್ನ ಈ ಸಮಾಜಕ್ಕೆ ನಮ್ಮ ಕೊಡುಗೆ ಏನಿದೆ? ಎಂಬುದನ್ನು ಒಮ್ಮೆ ಕುಳಿತು ಪ್ರಶ್ನಿಸಿಕೊಳ್ಳುವ ಅಗತ್ಯವಿದೆ. ಹಾಗೆಂದು ಲೋಪಗಳ ಬಗ್ಗೆ ಮಾತನಾಡಲೇ ಬಾರದು, ಅಂಧಾನುಕರಣೆಯಲ್ಲೇ ಮುಂದುವರಿಯಬೇಕೆಂದೇನೂ ಪ್ರತಿಪಾದಿಸುತ್ತಿಲ್ಲ. ಮನೆಯ ಲೋಪದ ಬಗ್ಗೆ, ಅಪ್ಪನ ಜತೆಗಿನ ವೈರುಧ್ಯದ ಕುರಿತು ಬೀದಿಯಲ್ಲಿ ನಿಂತು ಮಾತನಾಡುವುದು ನಮ್ಮ ವ್ಯಕ್ತಿತ್ವಕ್ಕೆ ನಾವೇ ಮಾಡಿಕೊಳ್ಳುವ ಅಪಚಾರ.
ಆಧುನಿಕತೆ ಎಂದರೆ ಸ್ವಧರ್ಮದ ಟೀಕೆ, ಇದೇ ‘ಚಿಂತಕ ಲಕ್ಷಣ’ ಎಂಬುವವರ ಬಗ್ಗೆ ನನ್ನ ಮಾತಿಲ್ಲ. ಆದರೆ ವಿರೋಧಕ್ಕಾಗಿಯೇ ಮಾತನಾಡುವುದು, ರಾಜಕೀಯ ಅಥವಾ ಇನ್ನಾವುದೇ ಲಾಭದ ಉದ್ದೇಶಕ್ಕೆ ‘ತಕಿಯಾ’ವನ್ನು (ಸ್ಕಲ್ ಕ್ಯಾಪ್) ಹಾಕಿಕೊಂಡು ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳುವುದು, ಇನ್ಯಾರನ್ನೋ ಮೆಚ್ಚಿ ಸಲೋಸುಗ ಸ್ವಧರ್ಮಾಚರಣೆಯನ್ನು ವಿರೋಧಿಸುವ ಹಾಗೆ ಸೋಗು ಹಾಕಿ ಪಾದರಕ್ಷೆ ಧರಿಸಿಯೇ ದೇವರ ಪಟಕ್ಕೆ ಪುಷ್ಪಾ ಚರಣೆ ಮಾಡುವುದು ಖಂಡಿತಾ ಆತ್ಮವಂಚನೆ ಎನಿಸಿಕೊಳ್ಳುತ್ತದೆ. ಅಷ್ಟಕ್ಕೂ ದೇವರು, ನಂಬಿಕೆ ಎನ್ನುವುದು ‘ಬೆಡ್‌ರೂಂ’ ಗಿಂತಲೂ ಖಾಸಗಿ ಸಂಗತಿ. ಈ ಬಗ್ಗೆ ರಸ್ತೆಯಲ್ಲಿ ನಿಂತು ಟಾಂ ಟಾಂ ಹೊಡೆಯಬೇಕಿಲ್ಲ.
ನಮ್ಮ ನಂಬಿಕೆ, ಸಿದ್ಧಾಂತಗಳು ಬೇರೆಯವರನ್ನು ಘಾಸಿಗೊಳಿಸುತ್ತದೆ ಎಂದಾದರೆ ಅದು ಖಂಡಿತಾ ಸಮಾಜವಾದ ಎನಿಸಿಕೊಳ್ಳಲು ಸಾಧ್ಯವೇ ಇಲ್ಲ. ಇನ್ನು ‘ಪಟ್ಟಭದ್ರ’ ಪದದ ಬಗ್ಗೆ ಹೇಳುವುದಾದರೆ, ಒಮ್ಮೆ ಯಾವುದೇ ವ್ಯಕ್ತಿ ‘ಸಾರ್ವಜನಿಕ ಸ್ವತ್ತು’ ಎಂದಾಗಿ ಬಿಟ್ಟರೆ ಅದರ ಹೇಗೆಂದರೆ ಹಾಗೆ ಬಳಸುವ, ಅವರ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುವ ಹಕ್ಕನ್ನು ಯಾರೂ ಪಡೆದುಕೊಳ್ಳುವುದಿಲ್ಲ. ಯಾರನ್ನು ಕುರಿತು ಮುಖ್ಯಮಂತ್ರಿಯವರು ಈ ಮಾತನ್ನು ಹೇಳಿದರೂ ತಿಳಿದಿಲ್ಲ.
ತಾವು ಯಾರ ಕೈಗೆ ಸಿಲುಕಬೇಕೆಂಬ ಬಗ್ಗೆ ‘ವಿಲ್’ ಮಾಡಿಟ್ಟು ಹೋದದ್ದರ ಬಗ್ಗೆ ನನಗಂತೂ ತಿಳಿದಿಲ್ಲ. ಈ ದೇಶದಲ್ಲಿ ಕೆಲವಷ್ಟು ನಾಯಕರು, ಕೆಲ ಆದರ್ಶ ಪುರುಷರು ಕೆಲವೇ ವರ್ಗ ಸಮುದಾಯದ ಆಸ್ತಿ ಎಂಬಂತೆ ವರ್ತಿಸುವುದು ಸಾಮಾನ್ಯವಾಗಿಬಿಟ್ಟಿದೆ. ಗಾಂಧೀಜಿಯಾವತ್ತೂ ಕಾಂಗ್ರೆಸ್ ಪಿತಾಮಹ ಆಗಿ ಉಳಿಯಲು ಸಾಧ್ಯವಿಲ್ಲ. ಅಂಬೇಡ್ಕರ್ ಕೇವಲ ದಲಿತ ನಾಯಕರಲ್ಲ, ಸಾವರ್ಕರ್ ಆರ್‌ಎಸ್‌ಎಸ್‌ಗೆ ಸೀಮಿತರಲ್ಲ, ತಿಲಕರು ಮರಾಠಿಗರಷ್ಟೇ ಮುಖಂಡರಲ್ಲ. ದಯಾನಂದ ಸರಸ್ವತಿ ಬಂಗಾಳಿಗರ ಆಸ್ತಿಯಾಗಷ್ಟೆ ಉಳಿಯಬೇಕಿಲ್ಲ. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರನ್ನು ಹೊಗಳಿದ ಮಾತ್ರಕ್ಕೆ ಆತ ನೆಹರೂ ನಿರೋಧಿ ಎಂದು ಭಾವಿಸಬೇಕಿಲ್ಲ.
ಹಾಗೆಯೇ ವಿವೇಕಾನಂದರ ಬಗ್ಗೆ ಮಾತನಾಡುವವರೆಲ್ಲ ಹಿಂದುತ್ವವಾದಿ ಅಥವಾ ಪಟ್ಟಭದ್ರರು ಎಂಬ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಒಂದು ವರ್ಗ ವಿವೇಕಾನಂದರ ಆದರ್ಶಗಳ ಬಗ್ಗೆ ಹೆಚ್ಚಿನ ಗೌರವಾದರಗಳನ್ನು ಹೊಂದಿದೆ ಎಂದ ಮಾತ್ರಕ್ಕೆ ಬೇರೆಯವರು ಅದನ್ನುನಿರ್ಲಕ್ಷಿಸಬೇಕಿರಲಿಲ್ಲ. ಹಾಗೊಮ್ಮೆ ನಿರ್ಲಕ್ಷಿಸಿದ್ದರೆ ಅಂಥ ತಪ್ಪನ್ನು ಇನ್ನಾದರು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಹಾಕುವ ಔಚಿತ್ಯಪೂರ್ಣ ನಿರ್ಧಾರ ಆಗಲಿ.
‘ಸ್ವಮತಾಭಿಮಾನ’ ಅನ್ಯಮತದ ದ್ವೇಷವಲ್ಲವೆಂಬ ಅರಿವೇ ನಿಜವಾದ ಜಾತ್ಯತೀತತೆ ಎಂಬ ವಿವೇಕನುಡಿಯನ್ನು ಅರ್ಥ ಮಾಡಿಕೊಳ್ಳ ಬೇಕಿದೆ. ಹೌದು, ನರೇಂದ್ರರು ಮೂರ್ತಿಪೂಜಕರನ್ನು ಟೀಕಿಸಿದ್ದುಂಟು, ಅದ್ವೈತವಾದವನ್ನು ತಿರಸ್ಕರಿಸುತ್ತಿದ್ದುದುಂಟು. ಆತೀಂದ್ರಿಯ ಅನುಭವಗಳ ಬಗೆಗೂ ಸಂಶಯ ವ್ಯಕ್ತಪಡಿಸುತ್ತಿದ್ದುದೂ ಇದೆ. ಆದರೆ ‘ಒಂದು ಗುರಿ ಮುಟ್ಟಲು ಹಲವು ದಾರಿಗಳಿವೆ. ಮತ್ತೊಬ್ಬನ ದಾರಿಸರಿಯಲ್ಲ ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ತನ್ನ ಶಕ್ತಿಗೆ ನಿಲುಕದ ಸಂಗತಿ ಸುಳ್ಳೆಂದು ತೀರ್ಪೀಯುವುದು ತಪ್ಪು’ ಎಂಬ ರಾಮಕೃಷ್ಣ ಪರಮಹಂಸರ ಉಪದೇಶವನ್ನು ಮನನ ಮಾಡಿಕೊಂಡೇ ಮುನ್ನಡೆದಿದ್ದರು.
ವಿವೇಕರ ದೃಷ್ಟಿಯಲ್ಲಿ ಜಾತ್ಯತೀತತೆ ಎಂಬುದು ‘ವಿಶ್ವ ಹಿಂದೂ’ ಪರಿಕಲ್ಪನೆಯಾಗಿತ್ತು. ಹಿಂದು ಎಂಬುದು ಭಾರತೀಯ ಸಂಸ್ಕೃತಿ, ಪರಂಪರೆ ತತ್ವeನಗಳ ಆಧರಿತ ‘ಮಾನವೀಯ ಧರ್ಮ’ ಆಗಿತ್ತು. ‘ನಾನು ಅಮೆರಿಕ, ಇಂಗ್ಲೆಂಡುಗಳಿಗೆ ಹೋಗುವ ಮುನ್ನ ತಾಯ್ನಾಡನ್ನು ಪ್ರೀತಿಸುತ್ತಿದ್ದೆ. ಅಲ್ಲಿಂದ ಹಿಂದಿರುಗಿದ ನಂತರ ಇಲ್ಲಿನ ಧೂಳಿನ ಕಣ ಕಣವೂ ಪವಿತ್ರವಾಗಿ ತೋರುತ್ತಿದೆ.’ ಎಂಬ ವಿವೇಕವಾಣಿಯಹಿಂದೆ ಮಾತೃಭೂಮಿಯ ಪ್ರೇಮವಿದೆ. ಪಾಶ್ಚಾತ್ಯರ ವಿಜ್ಞಾನ, ಭಾರತೀಯರ ತತ್ತ್ವ ಮತ್ತು ಧರ್ಮಗಳನ್ನು ಬೆಸೆಯಲು ಅವರು ಆಗಲೇ ಕನಸಿದ್ದರು. ಅದರ ಅನುಷ್ಠಾನ ಕೇವಲ ರಾಜಕೀಯ ಭಾಷಣಗಳಿಂದ ಆಗದು ಎಂಬುದನ್ನು ನಾವು ಅರಿತರೊಳಿತು.