ಶಿಕ್ಷಕರ ವರ್ಗಾವಣೆ ಸಮಸ್ಯೆಗೆ ತಾರ್ಕಿಕ ಅಂತ್ಯ ಹೇಗೆ ?
ಪ್ರಚಲಿತ
ದಿಲೀಪ್ ಕುಮಾರ ಸಂಪಡ್ಕ
ಪ್ರತಿ ವರ್ಷ ಶಿಕ್ಷಕರು ತಮ್ಮ ಸ್ವತಃಊರಿಗೆ ಹೋಗ ಬಹುದು ಎಂಬ ಹೆಬ್ಬಾಯಕೆಯಿಂದ ವರ್ಗಾವಣೆ ಅರ್ಜಿ ಸಲ್ಲಿಸುತ್ತಾರೆ. ಆದರೆ ಪ್ರತಿ ವರ್ಷವೂ ವರ್ಗಾ ವಣೆಯಲ್ಲಿನ ನ್ಯೂನತೆಗಳಿಂದ ಶಿಕ್ಷಕರು ಹೈರಾಣಗಿ ದ್ದಾರೆ. ಹಲವು ಶಿಕ್ಷಕರು ದೂರ ದೂರದ ಜಿಲ್ಲೆ ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದ ರಿಂದ ಅವರು ಕೌಟಿಂಬಿಕ ಸಮಸ್ಯೆ, ಮಕ್ಕಳ ಪಾಲನೆ, ವಯಸ್ಸಾದ ಪೋಷಕರ ಅರೈಕೆಯಂತಹ ಜವಾಬ್ದಾರಿ ಗಳನ್ನು ನಿರ್ವಹಿಸಲಾಗದೆ ಪರಿತಪಿಸುತ್ತಿದ್ದಾರೆ.
‘ಸಮಾಜಕ್ಕೆ ಶಿಕ್ಷಣ ನೀಡುವವರು ಯಾರು?’ ಎಂಬ ಕಾರ್ಲ್‌ಮಾರ್ಕ್ಸ್‌ನ ಪ್ರಶ್ನೆ ಇಂದಿಗೂ ಪ್ರಸ್ತುತವಾಗಿದೆ. ಶಿಕ್ಷಣವು ಜನರನ್ನು ಸಮಾಜ ಮುಖಿಗಳನ್ನಾಗಿ ಮಾಡುವ ಕ್ರಿಯಾಶೀಲವಾದ ವ್ಯವಸ್ಥೆಯಾಗಿದೆ. ಶಿಕ್ಷಣದಲ್ಲಿ ಈ ಪ್ರಮುಖ ಕೆಲಸವನ್ನು ಮಾಡುವ ರೂವಾರಿಯೇ ಶಿಕ್ಷಕ.
ಬೋಧನಾ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವ ಹೊಣೆಗಾರಿಕೆ ಶಿಕ್ಷಕನ ಮೇಲಿದೆ. ಒಂದು ವೇಳೆ ಈ ಪ್ರಕ್ರಿಯೆ ಸಾಂಗವಾಗಿ ನೆರೆವೇರದಿದ್ದಲ್ಲಿ ಇಡೀ ಶೈಕ್ಷಣಿಕ ಪ್ರಕ್ರಿಯೆ ಪ್ರಯೋಜನವಿಲ್ಲದಂತಾಗುತ್ತದೆ. ಅಂದರೆ ಶಿಕ್ಷಕನಿಗೆ ಮನಸು ಖುಷಿ ಗಿ ಲವಲವಿಕೆಯಿಂದ ಇದ್ದರೆ ಮಾತ್ರ ಬೋಧನೆಯೂ ಉತ್ತಮ ರೀತಿಯಲ್ಲಿ ನಡೆದು ಶಿಕ್ಷಣದ ಮೂಲ ಪರಿಕಲ್ಪನೆ ಈಡೇರುತ್ತದೆ. ಒಮ್ಮೆ ಕರ್ನಾಟಕದ ಸರಕಾರಿ ಶಾಲೆಯ ಶಿಕ್ಷಕರನ್ನು ಅವರ ಮುಖ್ಯ ಬೇಡಿಕೆ ಏನು? ಎಂದು ಕೇಳಿದರೆ ಅವರ ಬೇಡಿಕೆಯ ಪಟ್ಟಿಯಲ್ಲಿ ಮೊದಲ ಸ್ಥಾನವು ಶಿಕ್ಷಕರ ವರ್ಗಾವಣೆಗೆ ಮೀಸಲಿರುತ್ತದೆ.
ಪ್ರತಿ ವರ್ಷ ಶಿಕ್ಷಕರು ತಮ್ಮ ಸ್ವತಃ ಊರಿಗೆ ಹೋಗಬಹುದು ಎಂಬ ಹೆಬ್ಬಾಯಕೆಯಿಂದ ವರ್ಗಾವಣೆ ಅರ್ಜಿ ಸಲ್ಲಿಸುತ್ತಾರೆ. ಆದರೆ ಪ್ರತಿ ವರ್ಷವೂ ವರ್ಗಾವಣೆಯಲ್ಲಿನ ನ್ಯೂನತೆಗಳಿಂದ ಶಿಕ್ಷಕರು ಹೈರಾಣಗಿದ್ದಾರೆ. ಪ್ರತಿ ವರ್ಷ ಶಿಕ್ಷಕರ ವರ್ಗಾವಣೆಯ ನಿಯಮಗಳಲ್ಲಿ ಒಂದಲ್ಲಾ ಒಂದು ನಮಸ್ಯೆಗಳು ಉದ್ಭವಿಸಿ ಹಲವು ಶಿಕ್ಷಕರು ವರ್ಗಾವಣೆಯಿಂದ ವಂಚಿತರಾಗು ತ್ತಿದ್ದಾರೆ. ಹಲವು ಶಿಕ್ಷಕರು ದೂರ ದೂರದ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದ ರಿಂದ ಅವರು ಕೌಟಿಂಬಿಕ ಸಮಸ್ಯೆ, ಮಕ್ಕಳ ಪಾಲನೆ, ವಯಸ್ಸಾದ ಪೋಷಕರ ಅರೈಕೆಯಂತಹ ಜವಾಬ್ದಾರಿಗಳನ್ನು ನಿರ್ವಹಿಸಲಾಗದೆ ಪರಿತಪಿಸುತ್ತಿದ್ದಾರೆ.
ಇತ್ತ ನೆಮ್ಮದಿಯಿಲ್ಲದೆ ತಮ್ಮ ಬೋಧನೆಯ ಕಡೆಯೂ ಸರಿಯಾಗಿ ತೊಡಗಿಸಿಕೊಳ್ಳಲು ಸಾಧ್ಯವಾ ಗುತ್ತಿಲ್ಲ. ಪ್ರತಿ ವರ್ಷ ವರ್ಗಾವಣೆ ಕಾಯಿದೆ ತಿದ್ದುಪಡಿಯಾಗುತ್ತಿರುತ್ತದೆ. ಆದರೆ ವರ್ಗಾವಣೆ ಶಿಕ್ಷಕರ ವರ್ಗಾವಣೆ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣುತ್ತಿಲ್ಲ. ಈ ವರ್ಗಾವಣೆಸಮಸ್ಯೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕಾದರೆ ಮೊದಲು ಈ ಸಮಸ್ಯೆಯ ಮೂಲವನ್ನು ಅಧ್ಯಯನ ಮಾಡಿ ಪರಿಹಾರ ಹುಡುಕಬೇಕು. ಆ ನಿಟ್ಟಿನಲ್ಲಿ ಈ ಪ್ರಯತ್ನ ಮಾಡಬಹುದಾಗಿದೆ.
ರಾಜ್ಯಮಟ್ಟದ ಶಿಕ್ಷಕರ ನೇಮಕ ಈಗ ಪ್ರಾಥಮಿಕ ಶಿಕ್ಷಕರ ನೇಮಕ ಜಿಲ್ಲಾ ಹಂತದಲ್ಲಿ ನಡೆಯುತ್ತಿದೆ ಮತ್ತು ಪ್ರೌಢ ಶಾಲಾ ಸಹಶಿಕ್ಷಕರ ನೇಮಕಾತಿ ವಿಭಾಗಿಯ ಮಟ್ಟದಲ್ಲಿ ನಡೆಯುವುದರಿಂದ, ಶಿಕ್ಷಕರನ್ನು ಸಂಬಂದಿಸಿದ ಜಿಲ್ಲೆ ಮತ್ತು ವಿಭಾಗದಲ್ಲಿಯೇ ನೇಮಕ ಮಾಡಬೇಕಾಗುತ್ತದೆ. ಇಲ್ಲಿ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬೇರೆ ಬೇರೆ ಜಿಲ್ಲೆ ಮತ್ತು ವಿಭಾಗದ ವರನ್ನು ಹೊಂದಿರುವುದರಿಂದ ಅವರು ತನ್ನ ಮೂಲ ಸ್ಥಳವನ್ನು ಬಿಟ್ಟು ನಿಯುಕ್ತಿಗೊಂಡ ಸ್ಥಳದಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ.
ನಂತರ ಅನಿವಾರ್ಯವಾಗಿ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸುವುದು ಸಹಜ ಪ್ರಕ್ರಿಯೆಯಾಗಿರುತ್ತದೆ. ಆದ್ದರಿಂದ, ಶಿಕ್ಷಕರ ನೇಮಕಾತಿ ಪ್ರಕ್ರಿಯನ್ನು ರಾಜ್ಯಮಟ್ಟದಲ್ಲಿಯೇ ಮಾಡಿದಲ್ಲಿ ಶಿಕ್ಷಕರು ನೇಮಕವಾಗುವಾಗಲೇ ತನ್ನ ಮೂಲ ಸ್ಥಳದಲ್ಲಿ ಅಥವಾ ಅಕ್ಕ ಪಕ್ಕದ ಸ್ಥಳವನ್ನುಆಯ್ಕೆ ಮಾಡಿಕೊಳ್ಳುವುದರಿಂದ, ವರ್ಗಾವಣೆ ಬಯಸಿ ಬರುವ ಶಿಕ್ಷಕರ ಸಂಖ್ಯೆಕಡಿಮೆಯಾಗುತ್ತದೆ.
ಪ್ರಸ್ತುತ ವರ್ಗಾವಣೆ ಕೌನ್ಸೆಲಿಂಗ್ ಜಿಲ್ಲಾ ಮಟ್ಟದಲ್ಲಿ ಮತ್ತು ವಿಭಾಗ ಮಟ್ಟದಲ್ಲಿ ನಡೆಯುತ್ತದೆ. ಇಲ್ಲಿ ಒಳ ಘಟಕ ಮತ್ತು ಹೊರಘಟಕ ಮಿತಿಗಳು ಇರುವುದರಿಂದ ವರ್ಗಾವಣೆ ಅವಕಾಶ ಕಡಿಮೆ ಯಿರುತ್ತದೆ. ಪ್ರತಿ ವರ್ಷ ವರ್ಗಾವಣೆ ಬಯಸುವ ಶಿಕ್ಷಕರ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಈ ಸಮಸ್ಯೆ ಯನ್ನು ತಪ್ಪಿಸಲು ರಾಜ್ಯವನ್ನು ಒಂದುಘಟಕ ಎಂದು ಪರಿಗಣಿಸಿ ರಾಜ್ಯ ಮಟ್ಟದ ವರ್ಗಾವಣೆ ಕೌನ್ಸೆಲಿಂಗ್ ನಡೆಸಿದಲ್ಲಿ ಶಿಕ್ಷಕರಿಗೆ ರಾಜ್ಯದ ಎಲ್ಲಾ ಮೂಲೆಯ ಖಾಲಿ ಹುದ್ದೆಗಳನ್ನು ಆಯ್ಕೆ ಮಾಡುವ ಅವಕಾಶ ದೊರೆಯುತ್ತದೆ.
ಶಿಕ್ಷಕರಿಗೆ ಅರ್ಜಿ ಸಲ್ಲಿಸುವಾಗ ಆದ್ಯತೆಯ ಆಧಾರದಲ್ಲಿ ಜಿಲ್ಲೆಗಳನ್ನು ಆಯ್ಕೆ ಮಾಡಲು ಅವಕಾಶ ಮಾಡಬೇಕು. ಇದು ಮುಂದಿನ  ದಿನಗಳಲ್ಲಿ ವರ್ಗಾವಣೆ ಅರ್ಜಿ ಸಲ್ಲಿಸುವ ಶಿಕ್ಷಕರ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ವಿಷಯವಾರು ಶಿಕ್ಷಕರ ನೇಮಕ ಪ್ರಸ್ತುತ ಶಿಕ್ಷಕರ ನೇಮಕವನ್ನು ಮಕ್ಕಳ ಮತ್ತು ಶಿಕ್ಷಕರ ಅನುಪಾತದಲ್ಲಿ ಆಧಾರದಲ್ಲಿ ಮಾಡಲಾಗುತ್ತದೆ. ಇದರಿಂದ ೧ ರಿಂದ ೫ನೇ ತರಗತಿಯವರೆಗಿನ ಪ್ರಾಥಮಿಕ ಶಾಲೆಯಲ್ಲಿ ಎರಡು ಅಥವಾ ಮೂರು ಶಿಕ್ಷಕರ ಆಯ್ಕೆಗೆ ಮಾತ್ರ ಆವಕಾಶ ವಿರುತ್ತದೆ.
ಇದು ವಿನಃಕಾರಣ ಹೆಚ್ಚುವರಿ ಶಿಕ್ಷಕರ ಸಮಸ್ಯೆಯನ್ನು ಸೃಷ್ಠಿಸುತ್ತಿದೆ. ವಾಸ್ತವಾಗಿ ಶಿಕ್ಷಕ ಮಕ್ಕಳ ಅನುಪಾತದಲ್ಲಿ ಶಿಕ್ಷಕರ ನೇಮಕಾತಿ ಮಾಡಿದ್ದಲ್ಲಿ ಗುಣತ್ಮಾಕ ಶಿಕ್ಷಣ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಮೊದಲ ಹಂತದಲ್ಲಿ ಮಕ್ಕಳ ಸಂಖ್ಯೆಯನ್ನು ಪರಿಗಣಿಸದೆ ವಿಷಯವಾರು ಶಿಕ್ಷಕರನ್ನು ಪ್ರಾಥಮಿಕ ಹಂತದಿಂದಲ್ಲೇ ನೇಮಿಸಬೇಕು. ಹಿರಿಯ ಪ್ರಾಥಮಿಕ ವಿಭಾಗವನ್ನು ಕೇಂದ್ರಿಯ ಮಾದರಿಯಲ್ಲಿ ೬ ರಿಂದ ೧೦ನೇ ತರಗತಿ ವಿನ್ಯಾಸದಲ್ಲಿ ರೂಪಿಸಬೇಕು. ಇದರಿಂದ ಪೂರ್ಣ ಪ್ರಮಾಣದ ವಿಷಯವಾರು ಶಿಕ್ಷಕರನ್ನು ನೇಮಕ ಮಾಡಿ ಕೊಳ್ಳಲು ಸಹಾಯವಾಗುತ್ತದೆ.
ಇದು ಶಿಕ್ಷಕರ ಹೆಚ್ಚುವರಿ ಸಮಸ್ಯೆ ಮತ್ತು ವರ್ಗಾವಣೆಗೆ ಹುದ್ದೆಗಳು ಲಭ್ಯವಿಲ್ಲ ಎಂಬ ಸಮಸ್ಯೆಯನ್ನು ತಪ್ಪಿಸಿ ಶಿಕ್ಷಕರಿಗೆ ಹೆಚ್ಚಿನ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಪರಸ್ಪರ ವರ್ಗಾವಣೆ ೨೪೭
ಪರಸ್ಪರ ವರ್ಗಾವಣೆ ಪದ್ಧತಿಯಿಂದ ಹುದ್ದೆಗಳು ಖಾಲಿಯಾಗುತ್ತದೆ ಎನ್ನುವ ಪ್ರಶ್ನೆ ಉದ್ಭವಿಸುವುದಿಲ್ಲ. ಈ ಪದ್ಧತಿಯಿಂದ ಎರಡು ಶಾಲೆಗಳಿಗೆ ಒಂದೇ ವಿಷಯದ ಶಿಕ್ಷಕರು ಲಭ್ಯವಾಗುತ್ತಾರೆ. ಇದು ಯಾವುದೇ ಹೊರೆಯನ್ನು ಉಂಟು ಮಾಡುವುದಿಲ್ಲ. ಆದ್ದರಿಂದ ಪರಸ್ಪರ ವರ್ಗಾವಣೆಗೆ ಯಾವುದೇ ನಿರ್ಬಂಧವನ್ನು ವಿಧಿಸದೇ ವರ್ಷ ಪೂರ್ತಿ ತೆರೆದಿರುವಂತೆ ಮಾಡಬೇಕು. ಇದು ವರ್ಗಾವಣೆ ಬಯಕೆಯನ್ನು ಕಡಿಮೆ ಮಾಡುತ್ತದೆ.
ಇದು ಶಿಕ್ಷಕರಿಗೆ ದೊಡ್ಡ ವರದಾನವಾಗಲಿದೆ. ಸರದಿ ಪ್ರಕಾರ ವರ್ಗಾವಣೆ ಈಗಿನ ನಿಯಮದ ಪ್ರಕಾರ ವರ್ಗಾವಣೆಗೆ ಅರ್ಜಿ ಸಲ್ಲಿಸಿದ ನಂತರ ಅರ್ಹ ಶಿಕ್ಷಕರ ವರ್ಗಾವಣೆ ಜೇಷ್ಠತೆ ಪಟ್ಟಿ ತಯಾರಿಸಿ ವರ್ಗಾವಣೆ ಮಾಡಲಾಗುತ್ತದೆ. ಒಮ್ಮೆ ವರ್ಗಾವಣೆ ಪಡೆದ ಶಿಕ್ಷಕರು ಪುನಃಮೂರು ವರ್ಷಗಳ ನಂತರ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅರ್ಹರಾಗುತ್ತಾರೆ. ಅಲ್ಲದೇ, ವರ್ಗಾವಣೆ ಸಿಗದ ಶಿಕ್ಷಕರು ಪ್ರತಿ ವರ್ಷ ಪುನಃ ಅರ್ಜಿ ಸಲ್ಲಿಸಬೇಕಾಗುತ್ತದೆ. ಎಷ್ಟೋ ಶಿಕ್ಷಕರು ಪ್ರತಿ ವರ್ಷ ಅರ್ಜಿ ಸಲ್ಲಿಸುವುದೇ ನಿತ್ಯಕಾಯಕವಾಗಿಯೇ ಹೊರತು ವರ್ಗಾವಣೆ ಮಾತ್ರ ಸಿಗುತ್ತಿಲ್ಲ. ಆದ್ದ ರಿಂದ, ವರ್ಗಾವಣೆ ಜೇಷ್ಠತೆ ಪಟ್ಟಿಯ ಪ್ರಕಾರ ಒಂದು ವರ್ಷ ವರ್ಗಾವಣೆ ನಡೆದ ನಂತರ ಅದೇ ವರ್ಗಾವಣೆ ಜೇಷ್ಠತೆಯ ಪಟ್ಟಿಯನ್ನು ಮರು ವರ್ಷ ಮುಂದುವರಿಸಬೇಕು.
ಮರು ವರ್ಷ ಹೊಸ ಅರ್ಜಿ ಸಲ್ಲಿಸಿದ ಶಿಕ್ಷಕರ ಹೆಸರನ್ನು ಪಟ್ಟಿಯಲ್ಲಿ ಕೊನೆಗೆ ಸೇರಿಸುತ್ತ ಹೋಗಬೇಕು. ಹೀಗೆ ಸರದಿ ಪ್ರಕಾರ ವರ್ಗಾವಣೆನಡೆಸಿದರೆ, ಎಲ್ಲಾ ಶಿಕ್ಷಕರಿಗೂ ನ್ಯಾಯ ಸಿಗುತ್ತದೆ. ಶೇ. ೨೫ರಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇದ್ದಲ್ಲಿ ಆ ತಾಲೂಕಿನಿಂದ ಶಿಕ್ಷಕರು ವರ್ಗಾವಣೆ ಹೊಂದಲು ಸಾಧ್ಯವಿಲ್ಲ. ಈ ವರ್ಷ ಈ ನಿಯಮದಿಂದ ರಾಜ್ಯದ ೫೩ ತಾಲೂಕುಗಳನ್ನು ವರ್ಗಾವಣೆ ವ್ಯಾಪ್ತಿಯಿಂದ ಹೊರಗಿಟ್ಟ ಪರಿಣಾಮ ಸಾವಿರಾರು ಶಿಕ್ಷಕರು ವರ್ಗಾವಣೆ ಭಾಗ್ಯದಿಂದ ವಂಚಿತರಾಗಿದ್ದಾರೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಚಾರವೆಂದರೆಶಿಕ್ಷಕರ ಹುದ್ದೆಗಳು ಖಾಲಿಯಾಗಲು ಮತ್ತು ಅವು ಗಳನ್ನು ತುಂಬಿಕೊಳ್ಳದಿರಲು ಶಿಕ್ಷಕರು ಕಾರಣವಾಗಿ ರುವುದಿಲ್ಲ.
ಅಲ್ಲದೇ, ಪ್ರತಿ ಶಾಲೆಗಳಲ್ಲಿ ಒಂದು ಶಿಕ್ಷಕರ ಹುದ್ದೆಗಳು ಒಂದು ದಿನವು ಖಾಲಿಯಾಗಿ ಉಳಿಯಲೇಬಾರದು. ಒಂದು ವೇಳೆ ಖಾಲಿಯಾಗಿಉಳಿದರೆ ಆರ್.ಟಿ.ಇ ಕಾಯಿದೆಯ ಮೂಲ ಉದ್ದೇಶಕ್ಕೆ ದಕ್ಕೆ ಯಾಗುತ್ತದೆ. ಒಂದು ಶಿಕ್ಷಕರ ಹುದ್ದೆ ಖಾಲಿಯಾದ ಗಳಿಗೆಯಲ್ಲಿಯೇ ಅತಿಥಿ ಅಥವಾ ಗೌರವ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಇನ್ನೊಂದು ಮುಖ್ಯ ವಿಚಾರವೆಂದರೆ ಬೇರೆ ಇಲಾಖೆಯ ರೀತಿ ಶಾಲೆಗಳಿಗೆ ನೀಯೋಜನೆ ಮಾಡಿ ಶಿಕ್ಷರನ್ನು ನೇಮಕ ಮಾಡಿಕೊಳ್ಳಲು ಸಾಧ್ಯವಿಲ್ಲ.
ಆದರಿಂದ, ಶೇ.೨೫ ಖಾಲಿ ಹುದ್ದೆಗಳ ನೆಪದಲ್ಲಿ ಶಿಕ್ಷಕರಿಗೆ ವರ್ಗಾವಣೆ ಅವಕಾಶ ಕಲ್ಪಿಸದಿರುವುದು ಅವೈಜ್ಞಾನಿಕವಾಗುತ್ತದೆ. ಖಾಲಿ ಹುದ್ದೆಗಳನ್ನು ತುಂಬಿಕೊಳ್ಳಲು ಬದಲಿ ವ್ಯವಸ್ಥೆ ಮಾಡಬೇಕು. ಕೇಂದ್ರಿಯ ವಿದ್ಯಾಲಯಗಳು, ನವೋದಯ ಶಾಲೆಗಳು, ಸೈನಿಕ ಶಾಲೆ ಗಳು, ಟೀಬೆಟಿಯನ್ ಶಾಲೆಗಳಲ್ಲಿ ಟಿ.ಜಿ.ಟಿ ಶಿಕ್ಷಕರು ೬ ರಿಂದ ೧೦ ನೇ ತರಗತಿವರೆಗೆ ಬೋಧಿಸುತ್ತಿರುವುದರಿಂದ, ಸದ್ಯ ಉನ್ನತೀ ಕರಿಸಿದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ೯ ಮತ್ತು ೧೦ ನೇ ತರಗತಿಗಳನ್ನು ಆರಂಭಿಸಿ ಟಿ.ಜಿ.ಟಿ ಶಿಕ್ಷಕರನ್ನು ಪೂರ್ಣಕಾಲಿಕ ಶಿಕ್ಷಕರಾಗಿ ನಿಯೋಜಿಸಬಹುದು.
ಒಂದು ವೇಳೆ ಹಿರಿಯ ಪ್ರಾಥಮಿಕ ಶಾಲೆ ಗಳಲ್ಲಿ ೯ ಮತ್ತು ೧೦ ನೇ ತರಗತಿ ತೆರೆಯಲು ಅಸಾಧ್ಯವಾದಲ್ಲಿ ಟಿ.ಜಿ.ಟಿ ಶಿಕ್ಷಕರನ್ನು ಆರ್.ಟಿ.ಇ ಕಾಯಿದೆಯಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪದವೀಧರ ಮುಖ್ಯ ಶಿಕ್ಷಕರ ಹುದ್ದೆಯನ್ನು ಸೃಷ್ಠಿಸಲು ಅವಕಾಶವಿರುವು ದರಿಂದ ಟಿ.ಜಿ.ಟಿ ಶಿಕ್ಷಕರನ್ನು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪದವೀಧರ ಮುಖ್ಯ ಶಿಕ್ಷಕರಾಗಿ ಹೊಂದಾಣಿಕೆ ಮಾಡಿ ಟಿ.ಜಿ.ಟಿಶಿಕ್ಷಕರ ವರ್ಗಾವಣೆಯ ಸಮಸ್ಯೆಯನ್ನು ಬಗೆಹರಿಸಬಹುದು.
ಈ ಹಿಂದೆ ಸಾಮಾನ್ಯ ಶಿಕ್ಷಕರಾಗಿ ನೇಮಕಗೊಂಡ ಶಿಕ್ಷಕರಿಗೆ ಪ್ರಸ್ತುತ ವರ್ಗಾವಣೆಯಲ್ಲಿ ಹುದ್ದೆಗಳು ಸಿಗುವುದು ಬಹಳ ಕಷ್ಟವಾಗಿದೆ. ಆದ್ದರಿಂದ, ೨೦೦೫ರಲ್ಲಿ ಪ್ರಾಥಮಿಕ ಶಿಕ್ಷಕರ ನೇಮಕಾತಿ ಮಾಡುವಾಗ, ಪಿ.ಯು.ಸಿ/ ಟಿ.ಸಿ.ಎಚ್‌ನಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆ ಯಾಗಿ ಅಧ್ಯಯನ ಮಾಡಿದವರನ್ನುಕನ್ನಡ ಪ್ರಾಥಮಿಕ ಶಾಲಾ ಸಹ ಶಿಕ್ಷಕರಾಗಿ, ಪಿ.ಯು.ಸಿ/ ಟಿ.ಸಿ.ಎಚ್‌ನಲ್ಲಿ ಆಂಗ್ಲ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಅಭ್ಯಾಸ ಮಾಡಿ, ಅದರಲ್ಲಿ ಕನಿಷ್ಠ ಶೇ.೫೦ರಷ್ಟು ಅಂಕಗಳನ್ನು ಪಡೆದಿರುವವರನ್ನು ಆಂಗ್ಲ ಪ್ರಾಥಮಿಕ ಶಾಲಾ ಸಹ ಶಿಕ್ಷಕರಾಗಿ, ಪಿ.ಯು. ಸಿಯಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಐಚ್ಚಿಕ ವಿಷಯವಾಗಿ ಅಭ್ಯಾಸ ಮಾಡಿರುವ ಅಭ್ಯರ್ಥಿಗಳನ್ನು ವಿಜ್ಞಾನ/ಗಣಿತ ಶಿಕ್ಷಕರಾಗಿ  ನೇಮಕ ಮಾಡಲು ಅವಕಾಶವಿತ್ತು.
ಈಗ ವಿಶೇಷ ಪ್ರಕರಣ ಎಂದು ಭಾವಿಸಿ ಸಾಮಾನ್ಯ ಶಿಕ್ಷಕರನ್ನು ಈ ನಿಯಮದ ಆಧಾರದಲ್ಲಿ ವಿಷಯವಾರು ಶಿಕ್ಷಕರಾಗಿ ಪುನರ್ ಪದನಾಮಿಕರಣ ಮಾಡಿದ್ದಲ್ಲಿ ಸಾಮಾನ್ಯ ಶಿಕ್ಷಕರಿಗೂ ವರ್ಗಾವಣೆಯಲ್ಲಿ ವಿಷಯವಾರು ಹುದ್ದೆಗಳನ್ನು ಮತ್ತು ಪರಸ್ಪರ ವರ್ಗಾವಣೆಯನ್ನುಸುಲಭವಾಗಿ ಪಡೆಯಲು ಸಹಾಯವಾಗುತ್ತದೆ. ಇತ್ತೀಚಿಗೆ ಆರಂಭವಾಗಿರುವ ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಪೋಷಕರಿಂದ ಉತ್ತಮಪ್ರೋತ್ಸಾಹ ದೊರೆತಿರುವುದರಿಂದ, ಮುಂದಿನ ದಿನ ಗಳಲ್ಲಿ ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಶಿಕ್ಷಕರ ಅವಶ್ಯಕತೆ ಹೆಚ್ಚಿರುವುದರಿಂದ, ಈಗ ಹೆಚ್ಚುವರಿಯಾಗಿರುವ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಬೋಧಿಸಲು ಆಸಕ್ತಿ ಇರುವ ಶಿಕ್ಷಕರನ್ನು ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ನಿಯೋಜನೆ ಅಥವಾ ಹೊಂದಾಣಿಕೆ ಮಾಡಿ ವರ್ಗಾವಣೆ ಸಮಸ್ಯೆ ತಗ್ಗಿಸಬಹುದು.
ಇದು ಬಹು ನೀರಿಕ್ಷಿತ ಆಂಗ್ಲ ಮಾಧ್ಯಮ ಶಾಲಾ ಯೋಜನೆಯನ್ನು ಬಲಪಡಿಸುತ್ತದೆ. ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ಬಡ್ತಿ ಪ್ರಕ್ರಿಯೆಗಳುಪ್ರತಿ ವರ್ಷ ಸರಾಗವಾಗಿ ನಡೆಯುತ್ತಿಲ್ಲ. ಇದರಿಂದ ಖಾಲಿ ಹುದ್ದೆಗಳ ಲೆಕ್ಕಚಾರಗಳು ನಿಖರವಾಗಿ ದೊರೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪ್ರತಿ ವರ್ಷ ಮೊದಲ ತಿಂಗಳಿನಲ್ಲಿ ಜೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸಿ ಪ್ರತಿ ವರ್ಷ ಮುಂಬಡ್ತಿ ಕೋಟದ ಹುದ್ದೆಗಳನ್ನು ಗುರುತಿಸಿ ಪದೋನ್ನತಿಯನ್ನು ಸರಿಯಾದ ಕ್ರಮದಲ್ಲಿ ಮಾಡಬೇಕು. ಇದರಿಂದ ಮುಂಬಡ್ತಿ ಯಿಂದ ತೆರವಾದ ಹುದ್ದೆಗಳು ವರ್ಗಾವಣೆಯಲ್ಲಿಶಿಕ್ಷಕರಿಗೆ ಆಯ್ಕೆ ಮಾಡಿಕೊಳ್ಳಲು ಲಭ್ಯವಾಗುತ್ತದೆ.
ಪ್ರಸ್ತುತ ಹುದ್ದೆಆಧಾರಿತ ಬಡ್ತಿ ಪದ್ಧತಿಜಾರಿಯಲ್ಲಿರು ವುದರಿಂದ ಇದು ಶಿಕ್ಷಕರಿಗೆ ಇನ್ನೂ ಸಹಕಾರಿಯಾಗಿದೆ. ಪ್ರಸ್ತುತ ವರ್ಗಾವಣೆಯಲ್ಲಿ ಕಡ್ಡಾಯ ವರ್ಗಾವಣೆಯನ್ನು ೧೦-೧೫ ವರ್ಷಗಳಿಂದ ‘ಎ’ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಮಾಡಲಾಗುತ್ತಿದೆ. ಈ ಪದ್ದತಿಯನ್ನು ಪ್ರತಿ ವಲಯಕ್ಕೂ ಅನ್ವಯಿಸಿದ್ದಲ್ಲಿ ಒಂದೇ ಕಡೆ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಇನ್ನೊಂದು ಸ್ಥಳಕ್ಕೆ ವರ್ಗಾವಣೆಗೊಂಡು ಇತರ ವಲಯದ ಶಿಕ್ಷಕರಿಗೆ ವರ್ಗಾವಣೆ ದೊರೆತು ಕೊಂಚ ಬದಲಾವಣೆಯನ್ನು ನಿರೀಕ್ಷಿಸಬಹುದು ಮತ್ತು ಶೈಕ್ಷಣಿಕಚಟುವಟಿಕೆಯಲ್ಲಿ ಸ್ವಲ್ಪ ಬದಲಾವಣೆ ಆಗುತ್ತದೆ.
ಹಾಲಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕರನ್ನು ಹೆಚ್ಚುವರಿಯೆಂದು ಗುರುತಿಸಿ ಅವರಿಗೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ ಮಾಡಲಾಗಿತ್ತು. ಆದರೆ, ಹುದ್ದೆಗಳ ಅಭಾವದಿಂದ ಕೆಲವೇ ಕೆಲವು ಶಿಕ್ಷಕರಿಗೆ ಮಾತ್ರ ವರ್ಗಾವಣೆ ದೊರೆಯಿತು. ಇದಕ್ಕೆ ಮುಖ್ಯ ಕಾರಣ ಕರ್ನಾಟಕದಲ್ಲಿ ಯಾವ ಪ್ರಾಥಮಿಕ ಶಾಲೆಯಲ್ಲಿ ೨೦೦ ಕ್ಕಿಂತ ಹೆಚ್ಚು ವಿದ್ಯಾರ್ಥಿಗಳ ಸಂಖ್ಯೆಇರುತ್ತದೊ ಅಂತ ಶಾಲೆಗೆ ಮಾತ್ರ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಮಂಜೂರು ಮಾಡಲಾಗುತ್ತದೆ.
ಪ್ರಸ್ತುತ ಸನ್ನಿವೇಶದಲ್ಲಿ ಈ ಸಂಖ್ಯೆಯನ್ನು ಹೊಂದಿರುವ ಶಾಲೆಗಳು ಬಹಳ ವಿರಳ. ಆದ್ದರಿಂದಆರ್ .ಟಿ.ಇ ಕಾಯಿದೆಯ ಪ್ರಕಾರ ಅರೆಕಾಲಿಕ ಆರ‍್ಯೋಗ ಮತ್ತು ದೈಹಿಕ ಶಿಕ್ಷಣ ಶಿಕ್ಷಕರನ್ನು ನೀಡಬೇಕೆಂದು ತಿಳಿಸಿದೆ. ಹೀಗಿರುವಾಗ ಇಲ್ಲಿ ವಿದ್ಯಾರ್ಥಿ- ಶಿಕ್ಷಕರಪ್ರಮಾಣಾನುಪಾತಗಳನ್ನು ಪರಿಗಣಿಸದೆ, ಕನಿಷ್ಠ ಪಕ್ಷ ಹಿರಿಯ ಅಥವಾ ಉನ್ನತ್ತಿಕರಿಸಿದ ಶಾಲೆಗಳಿಗೆ ವಾರಕ್ಕೆ ಮೂರು ದಿನದಂತೆ ವಾರದಲ್ಲಿ ಎರಡು ಶಾಲೆಗಳಿಗೆ ನಿಯೋಜಿಸಿದಲ್ಲಿ, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣದ ಪ್ರಯೋಜನ ದೊರೆಯುತ್ತದೆಮತ್ತು ದೈಹಿಕ ಶಿಕ್ಷಣ ಶಿಕ್ಷಕರ ಹೆಚ್ಚುವರಿ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.
ಶಿಕ್ಷಕರು ಮಾನಸಿಕ ನೆಮ್ಮದಿಯಿಂದ ಇದ್ದರೆ ಮಾತ್ರ ತರಗತಿ ಬೋಧನೆ ಹಾಗೂ ಕಲಿಕೆ ಗುಣಮಟ್ಟದಿಂದ ಕೂಡಿರುತ್ತದೆ ಎಂದು ಶೈಕ್ಷಣಿಕ ಮನೋ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಕಳೆದ ೧೦-೧೫ ವರ್ಷಗಳಿಂದ ತಮ್ಮ ಕುಟುಂಬದಿಂದ ದೂರವಿರುವ ಅಂತರ್‌ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರು ವರ್ಗಾವಣೆ ನಿಯಮಗಳ ನ್ಯೂನತೆಯಿಂದ ಮಾನಸಿಕ ಸ್ವಾಸ್ಥ್ಯವನ್ನು ಕಳೆದುಕೊಂಡಿರುತ್ತಾರೆ. ಕುಟುಂಬದವರಿಂದ ದೂರವಿರುವ ಶಿಕ್ಷಕರ ಸಮಸ್ಯೆ ಹೇಳತೀರದು. ಪತಿ-ಪತ್ನಿ ಪ್ರಕರಣಗಳಲ್ಲಿ ಹಲವು ವರ್ಷಗಳಿಂದ ಸಂಸಾರದಿಂದದೂರವಿದ್ದು, ಅಂತಹ ಶಿಕ್ಷಕ/ಶಿಕ್ಷಕಿಯರು ಕೌಟುಂಬಿಕ ಸಮಸ್ಯೆಗಳಿಗೆ ಸಿಲುಕಿದ್ದಾರೆ.
ಇದು ಶೈಕ್ಷಣಿಕ ವ್ಯವಸ್ಥೆಯ ಮೇಲೆ ದುಷ್ಟರಿಣಾಮ ಬೀರುತ್ತಿದೆ. ಎಲ್ಲಾ ಇಲಾಖೆಯಲ್ಲಿರುವಂತೆ ಅವರವರ ಕೋರಿಕೆ ಸ್ಥಳಗಳಿಗೆ ವರ್ಗಾವಣೆಗೊಳ್ಳುವ ಅವಕಾಶವಿರುವಂತೆ ಶಿಕ್ಷಣ ಇಲಾಖೆಯಲ್ಲಿಯೂ ಸಹ ಅಂತಹ ಅವಕಾಶ ನೀಡಿ, ವೈಜ್ಞಾನಿಕ ರೀತಿಯಲ್ಲಿ ವರ್ಗಾವಣೆ ನೀತಿ ರೂಪಿಸಲು ಇಲಾಖೆ ಮತ್ತು ಸರಕಾರ ಮುಂದಾಗಬೇಕು.