ಡಿಕೆಶಿ ನೆತ್ತಿ ಮೇಲೆ ಜೆಡಿಎಸ್ ಪಿಕಾಸಿ ?
ಮೂರ್ತಿ ಪೂಜೆ
ಆರ್‌.ಟಿ.ವಿಠ್ಠಲಮೂರ್ತಿ
ನಗರ ಮತ್ತು ಹಳ್ಳಿಗಾಡಿನ ಮತದಾರರು ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಕಡೆ ವಾಲುತ್ತಿದ್ದಾರೆ. ಆಡಳಿತಾರೂಢ ಬಿಜೆಪಿಯ ಶಕ್ತಿಕುಸಿಯು ತ್ತಿದೆ. ಸಕಾಲಕ್ಕೆ ಇದನ್ನು ಗ್ರಹಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಕೆದಾಟು ಪಾದಯಾತ್ರೆ ಕೈಗೊಂಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಸದ್ಯದಲ್ಲೇ ಇಡಿ, ಐಟಿಗಳು ಮುಗಿ ಬೀಳಲಿವೆಯೇ? ಹಾಗೆಂಬುದೊಂದು ಕುತೂಹಲ ರಾಜಕೀಯ ಲಯಗಳಲ್ಲಿ ಕಾಣಿಸಿಕೊಂಡಿದೆ. ಈ ಕುತೂಹಲದ ಬೆನ್ನಲ್ಲಿ ಕಾಣುತ್ತಿರುವವರು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಂಬುದು ವಿಶೇಷ.
ಇತ್ತೀಚೆಗೆ ಸುದ್ದಿಗಾರರ ಜತೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ತಮ್ಮ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಸಂಚು ರೂಪಿಸುತ್ತಿವೆ ಎಂದು ಆರೋಪಿಸಿದರಲ್ಲ? ಅವರು ಈ ರೀತಿ ಆರೋಪಿಸಿದ ನಂತರ ಎಲ್ಲರ ಸಂಶಯ ಹೋಗಿ ಬಿಂದಿಯಂತೆ ಕೂರುತ್ತಿರುವುದು ಜೆಡಿಎಸ್ ನಾಯಕರ ಹಣೆಯ ಮೇಲೆ. ಅಂದ ಹಾಗೆ ಇತ್ತೀಚಿನ ರಾಜಕೀಯ ಬೆಳವಣಿಗೆಯಿಂದ ಜೆಡಿಎಸ್ ಕಂಗಾಲಾಗಿರುವುದು ಸುಳ್ಳೇನಲ್ಲ.
ಇತ್ತೀಚೆಗೆ ನಡೆದ ಮೂರು ಮಾದರಿಯ ಚುನಾವಣೆಗಳಲ್ಲಿ ಆ ಪಕ್ಷ ದೊಡ್ಡ ಮಟ್ಟದಲ್ಲಿ ನೆಲ ಕಚ್ಚಿದೆ. ಹಾನಗಲ್ ಹಾಗೂ ಸಿಂಧಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಯಲ್ಲಿ ತಮ್ಮ ಬದ್ದ ವೈರಿ ಕಾಂಗ್ರೆಸ್ ಪಕ್ಷವನ್ನು ಮಕಾಡೆ ಮಲಗಿಸಲು ರಣತಂತ್ರ ರೂಪಿಸಿದ ಜೆಡಿಎಸ್ ನಾಯಕರು, ಕೈ ಪಾಳೆಯದ ಜತೆಗಿರುವ ಮುಸ್ಲಿಮ್ ಮತ ಬ್ಯಾಂಕ್‌ನ್ನು ಛಿದ್ರ ಮಾಡಬೇಕು ಎಂದು ನಿರ್ಧರಿಸಿದರು. ಈ ಎರಡೂ ಕ್ಷೇತ್ರಗಳಿಂದ ಜೆಡಿಎಸ್ ಅಭ್ಯರ್ಥಿಗಳಾಗಿ ಮುಸ್ಲಿಮ್ ಸಮುದಾಯದವರು ಸ್ಪರ್ಧಿಸಿದ್ದು ಇದೇ ಕಾರಣ ಕ್ಕಾಗಿ.
ಆದರೆ ಜೆಡಿಎಸ್‌ನ ಸೆಕ್ಯೂಲರ್ ನೀತಿಯ ಬಗ್ಗೆ ಮುಸ್ಲಿ ಮ್ ಮತದಾರರಿಗೆ ಯಾವ ಮಟ್ಟದ ಭ್ರಮ ನಿರಸನವಾಗಿದೆ ಎಂದರೆ, ತಪ್ಪಿಯೂ ಅವರು ಆ ಪಕ್ಷದ ಜತೆ ನಿಲ್ಲಲಿಲ್ಲ. ಸದ್ಯದ ಸ್ಥಿತಿಯಲ್ಲಿ ತಮ್ಮ ಹಿತ ಕಾಯಲು ಕಾಂಗ್ರೆಸ್ ಪಕ್ಷ ದಿಂದ ಮಾತ್ರ ಸಾಧ್ಯ ಎಂಬ ತೀರ್ಮಾನಕ್ಕೆ ಬಂದಿರುವ ಮುಸ್ಲಿಮರು ಈ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಅನ್ನು ಪರಿಗಣನೆಗೇ ತೆಗೆದುಕೊಳ್ಳಲಿಲ್ಲ. ಯಾವಾಗ ಮುಸ್ಲಿಮರು ತಮ್ಮ ಪಕ್ಷವನ್ನು ನಂಬಲು ತಯಾರಿಲ್ಲ ಎಂಬುದು ಸಾಬೀತಾಯಿತೋ? ಇದಾದ ನಂತರ ಮಾಜಿ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಅವರು ಇತ್ತೀಚೆಗೆ ವಿಧಾನ ಪರಿಷತ್ತಿಗೆ ಚುನಾವಣೆಗಳು ಘೋಷಣೆಯಾದಾಗ ಬಿಜೆಪಿಯ ಜತೆ ಮೈತ್ರಿ ಮಾಡಿಕೊಳ್ಳಲು ಮುಂದಾದರು.
ಈ ಸಂಬಂಧ ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಧ್ಯೆ ಹಲವು ಸುತ್ತಿನ ಮಾತುಕತೆಗಳು ನಡೆದು ಜೆಡಿಎಸ್ ಸ್ಪರ್ಧಿಸಿದ ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲ ನೀಡಬೇಕು. ಉಳಿದ ಕಡೆ ಬಿಜೆಪಿ ಅಭ್ಯರ್ಥಿ ಗಳಿಗೆ ಜೆಡಿಎಸ್ ಬೆಂಬಲ ನೀಡಬೇಕು ಎಂದು ತೀರ್ಮಾನಿಸಲಾಯಿತು. ಆದರೆ ಈ ಮೈತ್ರಿಯನ್ನು ಬಹಿರಂಗವಾಗಿ ಹೇಳಿದರೆ ಕಿರಿಕಿರಿಯಾಗಬಹುದು ಎಂಬ ಕಾರಣಕ್ಕಾಗಿ ಸ್ಥಳೀಯ ನಾಯಕರೇ ಮೈತ್ರಿಯ ವಿಷಯದಲ್ಲಿ ತೀರ್ಮಾನಿಸಲಿ ಎಂದು ಪ್ರಕಟಿಸಲಾಯಿತು.
ಇದಕ್ಕಿದ್ದ ಮತ್ತೊಂದು ಕಾರಣವೆಂದರೆ, ಹಲವು ಕಡೆ ಜೆಡಿಎಸ್ ವರಿಷ್ಠರ ಮಾತನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ನೀಡಲು ಜೆಡಿಎಸ್‌ನ ಸ್ಥಳೀಯ ನಾಯಕರು ತೀರ್ಮಾನಿಸಿದ್ದರು. ಇಂತಹ ಹೊಂದಾಣಿಕೆಯಿಂದ ಜೆಡಿಎಸ್ ಮತ್ತು ಬಿಜೆಪಿಗೆ ಪರಸ್ಪರ ಸ್ವಲ್ಪ ಮಟ್ಟಿನ ಅನುಕೂಲವಾಗಿದ್ದು, ನಿಜವಾದರೂ ಬಹಿರಂಗವಾಗಿ ಈ ಮೈತ್ರಿಕೂಟ ದೊಡ್ಡ ಮಟ್ಟದ ಹೊಡೆತ ತಿಂದಿದ್ದು ನಿಜ.ಯಾಕೆಂದರೆ ಇಂತಹ ಮೈತ್ರಿಯ ನಡುವೆಯೂ ಬಿಜೆಪಿ ಹನ್ನೊಂದು ಸ್ಥಾನಗಳಲ್ಲಿ ಗೆಲುವು ಗಳಿಸಿದರೆ, ಜೆಡಿಎಸ್ ಕೇವಲ ಎರಡಕ್ಕೇ ತೃಪ್ತವಾಗಬೇಕಾಯಿತು. ಆದರೂ ಜೆಡಿಎಸ್‌ನ ಈ ಎರಡು ಸ್ಥಾನಗಳ ಪೈಕಿ ಒಂದು ಸ್ಥಾನ ಬಿಜೆಪಿ ಯೊಂದಿಗಿನ ಒಳಮೈತ್ರಿಯಿಂದಲೇ ಸಾಧಿತವಾಗಿದ್ದು.
ಅಂದ ಹಾಗೆ ಈ ಚುನಾವಣೆಯಿಂದ ಸಾಬೀತಾದ ಸತ್ಯವೆಂದರೆ ಬಿಜೆಪಿ ಹಾಗೂ ಜೆಡಿಎಸ್ ಪರಸ್ಪರ ಕೈಗೂಡಿಸಿದರೂ ಬೆಳೆಯುತ್ತಿರುವ ಕಾಂಗ್ರೆಸ್ ಶಕ್ತಿಯನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂಬುದು. ಕೆಲವೇ ದಿನಗಳ ಹಿಂದೆ ಐವತ್ತೆಂಟು ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾ ವಣೆಯ ಫಲಿತಾಂಶ ಇದನ್ನೇ ಸಾಬೀತುಪಡಿಸಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದರೆ, ಆಡಳಿತಾರೂಢ ಬಿಜೆಪಿ ಎರಡನೇ ಸ್ಥಾನಕ್ಕೆ ಕುಸಿಯಿತು. ಉಳಿದಂತೆ ಪಕ್ಷೇತರರು ಮೂರನೇ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದರೆ, ಜೆಡಿಎಸ್ ನಾಲ್ಕನೇ ಸ್ಥಾನಕ್ಕೆ ಕುಸಿಯಿತು.
ಅರ್ಥಾತ್, ನಗರ ಮತ್ತು ಹಳ್ಳಿಗಾಡಿನ ಮತದಾರರು ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಕಡೆ ವಾಲುತ್ತಿದ್ದಾರೆ. ಮತ್ತು ಆಡಳಿತಾರೂಢ ಬಿಜೆಪಿಯ ಶಕ್ತಿ ಕುಸಿಯುತ್ತಿದೆ. ಜೆಡಿಎಸ್ ಶಕ್ತಿಯಂತೂ ಮಟ್ಟಸವಾಗಿ ಹೋಗಿದೆ. ಅಲ್ಲಿಗೆ ಜೆಡಿಎಸ್ ಪಕ್ಷಕ್ಕೆ ಮುಸ್ಲಿಮ್ ಮತ ಬ್ಯಾಂಕ್ ಮಾತ್ರವಲ್ಲ, ಒಕ್ಕಲಿಗ ಮತ ಬ್ಯಾಂಕ್ ಕೂಡಾ ಉಲ್ಟಾ ಹೊಡೆಯುತ್ತಿದೆ. ಸಕಾಲಕ್ಕೆ ಇದನ್ನು ಗ್ರಹಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಮೇಕೆದಾಟು ಯೋಜನೆಯ ವಿಷಯವನ್ನು ಕೈಗೆತ್ತಿಕೊಂಡು ಪಾದಯಾತ್ರೆ ಮಾಡುವ ತೀರ್ಮಾನ ಪ್ರಕಟಿಸಿದರು.
ಅವರ ಈ ತೀರ್ಮಾನ ಕಾವೇರಿ ನದಿ ಪಾತ್ರದ ಜಿಲ್ಲೆಗಳಲ್ಲಿ ಒಂದು ಮಟ್ಟದ ಸಂಚಲನ ಮೂಡಿಸಿರುವುದು ನಿಜ. ಯಾರೇನೇ ಹೇಳಿದರೂ ಮೇಕೆದಾಟು ಯೋಜನೆಗೆ ಕಾರ್ಯಗತವಾಗುವುದಕ್ಕೆ ಇರುವ ದೊಡ್ಡ ಅಡ್ಡಿಯೆಂದರೆ ಕೇಂದ್ರ ಸರಕಾರ. ಈ ಹಿಂದೆ ಕಾಂಗ್ರೆಸ್ ಸರಕಾರ ವಿದ್ದ ಕಾಲದಲ್ಲಿ ಸಮಗ್ರ ಯೋಜನಾ ವರದಿ ಸಲ್ಲಿಕೆಯಾದರೂ ಕೇಂದ್ರ ಸರಕಾರ ಅದನ್ನು ಜಾರಿ ಮಾಡುವ ವಿಷಯದಲ್ಲಿ ಕರ್ನಾಟಕದ ಪರವಾಗಿ ನಿಲ್ಲಲಿಲ್ಲ. ಬದಲಿಗೆ ಈ ಯೋಜನೆಯನ್ನು ತಮಿಳುನಾಡು ವಿರೋಧಿಸಿದ ಕಾರಣಕ್ಕಾಗಿಯೇ: ನೀವು ನೆರೆ ರಾಜ್ಯದೊಂದಿಗೆ ಮಾತುಕತೆ ನಡೆಸಿ ಅವರ ಸಹಕಾರ ಪಡೆಯಿರಿ ಎಂದು ಕರ್ನಾಟಕಕ್ಕೆ ಸೂಚನೆ ನೀಡಿತು.
ಜಲವಿವಾದಗಳು ಎದುರಾದಾಗ ಮಧ್ಯೆ ಪ್ರವೇಶಿಸಿ, ಅದಕ್ಕೊಂದು ದಾರಿ ಕಾಣಿಸುವುದು ಕೇಂದ್ರ ಸರಕಾರದ ಜವಾಬ್ದಾರಿ. ಆದರೆ ಮೇಕೆ ದಾಟು ಯೋಜನೆಯ ವಿಷಯದಲ್ಲಿ ಕೇಂದ್ರ ಸರಕಾರ ಉತ್ಸುಕತೆಯನ್ನೇ ತಾಳಲಿಲ್ಲ. ತಮಿಳುನಾಡಿನ ಮನ ಒಲಿಸಿ ಈ ಯೋಜನೆ ಯನ್ನು ಜಾರಿಗೆ ತರಲು ಕರ್ನಾಟಕಕ್ಕೆ ಯಾವತ್ತೂ ಸಾಧ್ಯವಿಲ್ಲ. ಯಾಕೆಂದರೆ ಕಾವೇರಿ ನದಿ ಪಾತ್ರದ ಯಾವ ಯೋಜನೆಗಳಿಗೂ ತಮಿಳು ನಾಡು ಸಹಕಾರ ನೀಡುವುದಿಲ್ಲ. ಇಂತಹ ಸಂದರ್ಭದಲ್ಲಿ ಕೇಂದ್ರ ಸರಕಾರ ಗಟ್ಟಿ ನಿಲುವು ತಳೆದು ಕರ್ನಾಟಕದ ಪರ ನಿಲ್ಲಬೇಕಿತ್ತು. ಆದರೆ ರಾಜಕೀಯ ಕಾರಣಗಳಿಗಾಗಿ ಅದು ಈ ಕೆಲಸ ಮಾಡುತ್ತಿಲ್ಲ.
ಹೀಗಾಗಿ ರಾಜ್ಯದ ಬಿಜೆಪಿ ಸರಕಾರವೂ ಅಸಹಾಯಕವಾಗಿ ಕುಳಿತಿದೆ. ಇದನ್ನೇ ಎನ್‌ಕ್ಯಾಶ್ ಮಾಡಿಕೊಳ್ಳಲು ಡಿಕೆಶಿ ಅವರು ಮೇಕೆದಾಟು ಪಾದಯಾತ್ರೆಗೆ ಕೈ ಹಾಕಿದ್ದು. ಆದರೆ ಮೇಕೆದಾಟು ಪಾದಯಾತ್ರೆಗೆ ಅವರು ನಿರ್ಧರಿಸಿದ್ದೇ ತಡ, ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಇದರ ವಿರುದ್ಧ ವ್ಯಂಗ್ಯವಾಡತೊಡಗಿದರು. ಅಂದ ಹಾಗೆ ಕಾವೇರಿ ವಿಷಯದಲ್ಲಿ ದೇವೇಗೌಡರು ಮಾಡಿದ ಬಹುತೇಕ ಹೋರಾಟ ಗಳ ಹಿಂದಿದ್ದುದು ರಾಜಕೀಯ ಲಾಭದ ಉದ್ದೇಶವೇ ಹೊರತು ಇನ್ನೇನಲ್ಲ. ಆದರೆ ತಾವು ಮಾಡಿದರೆ ಅದು ಕಾವೇರಿ ನದಿ ಪಾತ್ರದ ಜನರಹಿತಾಸಕ್ತಿಗಾಗಿ ಮಾಡುವ ಹೋರಾಟ, ಡಿಕೆಶಿ ಮಾಡಿದರೆ ರಾಜಕೀಯ ಲಾಭದ ಹೋರಾಟ ಎಂಬ ಧಾಟಿಯಲ್ಲಿ ಗೌಡರು ಮತ್ತು ಕುಮಾರ ಸ್ವಾಮಿ ಮಾಡುತ್ತಿರುವ ಟೀಕೆ ವಿಚಿತ್ರವಾಗಿದೆ.
ಅರ್ಥಾತ್, ಡಿಕೆಶಿಯ ಮೇಕೆದಾಟು ಪಾದಯಾತ್ರೆಯ ವಿಷಯ ಮೊದಲೇ ಕಂಗಾಲಾಗಿರುವ ಜೆಡಿಎಸ್ ಪಕ್ಷಕ್ಕೆ ಮತ್ತಷ್ಟು ಹೊಡೆತ ನೀಡಿರು ವುದು ನಿಜ. ಮತ್ತು ಇದೇ ಕಾರಣಕ್ಕಾಗಿ ಅವರು ಡಿಕೆಶಿ ವಿರುದ್ಧ ಮುಗಿಬಿದ್ದಿರುವುದೂ ನಿಜ. ಗಮನಿಸಬೇಕಾದ ಸಂಗತಿ ಎಂದರೆ ಒಕ್ಕಲಿಗ ಮತ ಬ್ಯಾಂಕ್ ನಲ್ಲಿ ಡಿಕೆಶಿ ಮುಂದಿನ ಮುಖ್ಯಮಂತ್ರಿ ಎಂಬ ಭಾವನೆ ಬೆಳೆಯುತ್ತಿದೆ. ಇಂತಹ ಭಾವನೆ ಬಂದಾಗಲೆಲ್ಲ ಹಿಂದೆ ವಿವಿಧ ಪಕ್ಷಗಳು ಇದರ ಲಾಭ ಪಡೆದ ಉದಾಹರಣೆಗಳಿವೆ. ತುಂಬ ದೂರ ಹೋಗುವುದೇನೂ ಬೇಡ.
1989 ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಜನತಾ ಪರಿವಾರ ಒಡೆದು ಹೋಗಿತ್ತಲ್ಲ? ಆ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್‌ಗೆ ಲಿಂಗಾಯತ ಸಮುದಾಯದ ವೀರೇಂದ್ರ ಪಾಟೀಲ್ ಅಧ್ಯಕ್ಷರಾದರೂ, ತಮ್ಮ ಹಿತಾಸಕ್ತಿ ರಕ್ಷಿಸಲು ಎಸ್.ಎಂ. ಕೃಷ್ಣ ಇದ್ದಾರೆ ಎಂಬ ಭಾವನೆ ಒಕ್ಕಲಿಗ ಮತ ಬ್ಯಾಂಕ್‌ನಲ್ಲಿತ್ತು. ಇದೇ ಕಾರಣಕ್ಕಾಗಿ ಆ ಸಲದ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗ ಮತ ಬ್ಯಾಂಕ್ ಕಾಂಗ್ರೆಸ್ ಪರ ನಿಂತುಕೊಂಡಿತ್ತು.
ಮುಂದೆ ಎಸ್.ಎಂ. ಕೃಷ್ಣ ಅವರಿಗೆ ಅವಕಾಶ ತಪ್ಪಿದ ಬೆಳವಣಿಗೆಯಿಂದ ಕ್ರುದ್ಧವಾದ ಸಮುದಾಯಕ್ಕೆ ಆಶಾಭಾವನೆ ಮೂಡಿಸಿದ್ದು ಇದೇ ದೇವೇಗೌಡರು. ಅಷ್ಟೊತ್ತಿಗಾಗಲೇ ಜನತಾದಳ ಒಂದಾಗಿತ್ತು. ಹೆಗಡೆ- ದೇವೇಗೌಡರು ಪರಸ್ಪರ ಕೈ ಜೋಡಿಸಿದ ಪರಿಣಾಮವಾಗಿಅವತ್ತು ಒಕ್ಕಲಿಗ ಮತಬ್ಯಾಂಕ್‌ನಲ್ಲಿ ತಮ್ಮವರೊಬ್ಬರು ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಭಾವನೆ ದಟ್ಟವಾಗಿತ್ತು. ಪರಿಣಾಮ 1994 ರ ವಿಧಾನಸಭಾ ಚುನಾವಣೆಯಲ್ಲಿ ಜನತಾದಳ ಗೆದ್ದು ಅಧಿಕಾರ ಹಿಡಿಯಿತು. ಒಕ್ಕಲಿಗ ಮತ ಬ್ಯಾಂಕ್‌ನ ನಿರೀಕ್ಷೆಯಂತೆ ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿಯಾದರು.
ಆದರೆ ಯಥಾ ಪ್ರಕಾರ 1999 ರ ವಿಧಾನಸಭಾ ಚುನಾವಣೆಗೂ ಮುನ್ನ ಜನತಾದಳ ಒಡೆದು ಎರಡು ಹೋಳಾಯಿತು. ಈ ಪೈಕಿ ಒಂದು ಬಣ ಸಂಯುಕ್ತ ಜನತಾದಳದ ವೇಷದಲ್ಲಿ ಬಿಜೆಪಿಯ ಜತೆ ಕೈ ಜೋಡಿಸಿದರೆ, ಮತ್ತೊಂದು ಗುಂಪು ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಆಗಿ ನೆಲೆಯಾಯಿತು. ಆದರೆ ಈ ಬೆಳವಣಿಗೆಯಿಂದ ಒಕ್ಕಲಿಗ ಮತಬ್ಯಾಂಕ್ ಅಲುಗಾಡಿತು. ಇನ್ನು ಯಾವ ಕಾರಣಕ್ಕೂ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ ಎಂಬ ಅದರ ನಿಲುವನ್ನು ಗಮನಿಸಿಯೇ ದಿಲ್ಲಿಯ ಕಾಂಗ್ರೆಸ್ ವರಿಷ್ಠರು ಒಕ್ಕಲಿಗ ಸಮುದಾಯದಎಸ್.ಎಂ.ಕೃಷ್ಣ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕ ತಂದು ಕೂರಿಸಿದರು.
ಪರಿಣಾಮ ಒಕ್ಕಲಿಗ ಮತ ಬ್ಯಾಂಕ್ ದೊಡ್ಡ ಮಟ್ಟದಲ್ಲಿ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಪಕ್ಷದ ಬೆನ್ನ ಹಿಂದೆ ನಿಂತಿತು. ಮತ್ತು ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ನೋಡಿ ಸಂಭ್ರಮಿಸಿತು. ಇದಾದ ನಂತರ ಒಕ್ಕಲಿಗ ಮತ ಬ್ಯಾಂಕ್ ದೊಡ್ಡ ಮಟ್ಟದಲ್ಲಿ ನಿಂತಿದ್ದು ಜೆಡಿಎಸ್ ಜತೆ. ಇವತ್ತಿಗೂ ಜೆಡಿಎಸ್ ಪಕ್ಷದ ಅಸ್ತಿತ್ವ ಉಳಿದುಕೊಂಡಿದ್ದರೆ ಅದಕ್ಕೆ ಒಕ್ಕಲಿಗ ಮತ ಬ್ಯಾಂಕ್‌ನ ಮೇಜರ್ ಷೇರು ಅದಕ್ಕೆ ದಕ್ಕುತ್ತಿದ್ದುದೇ ಕಾರಣ. ಆದರೆ ಕಾಲಕ್ರಮೇಣ ಈ ಮತಬ್ಯಾಂಕ್ ನಲ್ಲಿ ಒಂದು ಬಗೆಯ ಭ್ರಮ ನಿರಸನ ಆವರಿಸತೊಡಗಿದೆ.
ಯಾಕೆಂದರೆ, ಜೆಡಿಎಸ್ ಪಕ್ಷಕ್ಕಾಗಿ ಯಾರೆಷ್ಟೇ ಕೆಲಸ ಮಾಡಲಿ, ಅದು ದೇವೇಗೌಡರ ಕುಟುಂಬದವರಿಗೆ ಲಾಭವೇ ಹೊರತು ಬೇರೆಯವ ರಿಗಲ್ಲ ಎಂಬ ಭಾವನೆ ನೆಲೆಸಿದೆ. ಇದೇ ಕಾರಣಕ್ಕಾಗಿ ಜೆಡಿಎಸ್‌ನಲ್ಲಿರುವ ಬಹುತೇಕ ಶಾಸಕರು ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ. ಅದು ಜಿ.ಟಿ.ದೇವೇಗೌಡರಿರಬಹುದು, ಗುಬ್ಬಿ ಶ್ರೀನಿವಾಸ್ ಇರಬಹುದು, ಇನ್ಯಾರೇ ಇರಬಹುದು. ಒಟ್ಟನಲ್ಲಿ ಜೆಡಿಎಸ್ ನ ಬಹುತೇಕ ಶಾಸಕರು ಬೇರೆ ಕಡೆ ಮುಖ ಮಾಡಿ ಬಹುಕಾಲವೇ ಆಗಿ ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಆ ಪಕ್ಷಕ್ಕೆ ಬಿಜೆಪಿಯ ಜತೆಗಿನ ಹೊಂದಾಣಿಕೆ ತೀರಾ ಅನಿವಾರ್ಯ ಎಂಬುದು ಸುಳ್ಳೇನಲ್ಲ.ಹೀಗೆ ಜೆಡಿಎಸ್ ಅಸಹಾಯಕವಾಗಿರುವ ಕಾಲದಲ್ಲೇ ಬಿಜೆಪಿಯ ಶಕ್ತಿಯೂ ಉಡುಗಿದೆ.
ಆ ಪಕ್ಷದಲ್ಲೀಗ ಮಾಸ್ಟರ್ ಬ್ಲಾಸ್ಟರ್ ಯಡಿಯೂರಪ್ಪ ತೆರೆಯ ಹಿಂದೆ ಸರಿಯುತ್ತಿದ್ದಾರೆ. ಅವರನ್ನು ಪಕ್ಷ ನಿರ್ಲಕ್ಷಿಸಿಲ್ಲ ಎಂಬಂತಹ ಮಾತುಗಳನ್ನು ಯಾರೇ ಆಡಿದರೂ, ಅದರ ಹಿಂದೆ ನಿಂತಿದ್ದ ಪ್ರಬಲ ಲಿಂಗಾಯತ ಸಮುದಾಯ ದೊಡ್ಡ ಮಟ್ಟದ ವಲಸೆಗೆ ಸಜ್ಜಾಗಿದೆಎಂಬುದಕ್ಕೆ ನಿದರ್ಶನಗಳಿವೆ.