ಎಲ್ಲಿಯೂ ನಿಲ್ಲದಿರು; ಕೊನೆಯೆನೆಂದು ಮುಟ್ಟದಿರು !
ಯಶೋ ಬೆಳಗು
ಯಶೋಮತಿ ಬೆಳಗೆರೆ
@.
ನಮ್ಮ ನಮ್ಮ ಸ್ಥಾನಗಳನ್ನು ಕರಾರುವಾಕ್ಕಾಗಿ ಸ್ಥಾಪಿಸಿ ಹೋಗುವುದಷ್ಟೇ ನಮ್ಮ ಕೆಲಸ. ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದು ನಮ್ಮಂತೆಯೇ ಮತ್ತೊಂದು ಸೃಷ್ಟಿ ಸಾಧ್ಯವಾದರೂ ಅದು ನಮ್ಮ ಪ್ರತಿರೂಪವಾಗಬಹುದೇ ಹೊರತು ನಾವಾಗಲು ಸಾಧ್ಯವಿಲ್ಲ. ಹೀಗಾಗಿ ನಾವು ಬೇರೆ ಯಾರಂತೆಯೋ ಆಗಲು ಅನುಕರಿಸದೆ ನಾವು ನಾವಾಗಿರೋಣ.
ಮತ್ತೊಂದು ಹೊಸ ಮುನ್ನೂರ ಅರವತ್ತೈದು ದಿನಗಳು, ಎಂಟು ಸಾವಿರದ ಏಳುನೂರಾ ಅರವತ್ತು ಗಂಟೆಗಳು, ಐದು ಲಕ್ಷ ಇಪ್ಪತ್ತೈದು ಸಾವಿರದ ಆರುನೂರು ನಿಮಿಷಗಳು, ಮೂವತ್ತೊಂದು ಲಕ್ಷದ ಐನೂರ ಮೂವತ್ತಾರು ಸಾವಿರ ಸೆಕೆಂಡುಗಳೊಂದಿಗೆ ಎರಡು ಸಾವಿರದ ಇಪ್ಪತ್ತೆರಡನೇ ವರುಷಕ್ಕೆ ಕಾಲಿಟ್ಟು ಆಗಲೇ ಮೂರು ದಿನಗಳು ಕಳೆದು ಹೋಗಿವೆ.
ಒಂದು ಚಕಟ್ಟಿನಲ್ಲಿರುವ ಹನ್ನೆರಡು ಅಂಕಿಗಳನ್ನು ಎರಡು ಮುಳ್ಳಿನ ನಾಲಿಗೆಗಳು ಎರಡೆರಡು ಬಾರಿ ಸುತ್ತು ಹೊಡೆಯುತ್ತಾ, ಸೂರ್ಯನ ಹುಟ್ಟು, ಮುಳುಗಾಟಗಳೊಂದಿಗೆ ಹಗಲು ರಾತ್ರಿಗಳ ಹೊರಳಾಟಗಳ ನಡುವೆ ದಿನ ಹೀಗೆ ಜಾರಿಹೋಗುತ್ತಿದೆ ಯಾರ ಹಿಡಿತಕ್ಕೂ ಸಿಗದೆ. ಇಲ್ಲಿ ಎಲ್ಲವೂ ಮಿಂಚಿನ ಓಟಗಳೇ! ಯಾರ ಗಮನಕ್ಕೂ ಬರದೇ ಹೋದರೂ ನಿಲುವೆಂಬುದನ್ನೇ ಅರಿಯದೆ ನಭೋಮಂಡಲದಲ್ಲಿ ತನ್ನ ಪಥದಲ್ಲಿ ಅವಿರತವಾಗಿ ನಿರಂತರ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕುತ್ತಿರುವ ಈ ಪೃಥ್ವಿಗೆ ಹಳತು ಹೊಸತೆಂಬ ಭೇದ-ಭಾವವೂ ಇಲ್ಲ.
ಆಯಾಸವೂ ಇಲ್ಲ. ಒಂದು ಚೂರೂ ಆಚೀಚೆಯಾಗದಂತೆ, ಹಜ್ಜೆ ತಪ್ಪದಂತೆ, ಕಣ್ಣು ಮಿಟುಕಿಸುವಷ್ಟು ಹೊತ್ತೂ ನಿಲ್ಲದಂತೆ ನಿರಂತರವಾಗಿ ಸುತ್ತುತ್ತಲೇ ಇರುವ ಈ ಭೂಮಿಯ ಗರ್ಭದೊಳಗೆ ಅದೆಷ್ಟು ಜೀವಗಳು ಉಸಿರಾಡುತ್ತಿವೆ. ಮೆರೆಯುತ್ತಿವೆ, ಸೆಣೆಸಾಡುತ್ತಿವೆ, ಅಳಿಯುತ್ತ, ಉಳಿಯುತ್ತ, ಬೆಳೆಯುತ್ತಿವೆ. ಇದೆಲ್ಲದರ ನಡುವೆ ದೇವ- ದಾನವ-ಮಾನವರೆಲ್ಲರೂ ಅಮರತ್ವಕ್ಕಾಗಿ ಹೋರಾಡುತ್ತಲೇ ಇದ್ದಾರೆ.
ಭ್ರೂಣಾವಸ್ಥೆ, ಶೈಶಾವಸ್ಥೆ, ಬಾಲ್ಯಾವಸ್ಥೆ, ಯೌವನಾವಸ್ಥೆಗಳೆಲ್ಲ ಅವಸ್ಥೆಗಳನ್ನು ದಾಟಿದ ನಂತರ ಎದುರಾಗುವ ವೃದ್ಧಾಪ್ಯವನ್ನು ಒಪ್ಪಿಕೊಳ್ಳಲು ಯಾರೂ ಸಿದ್ಧರಿರುವುದಿಲ್ಲ. ಅದೂ ಸಹ ಸಹಜವಾದ ಒಂದು ಸ್ಥಿತಿ ಅನ್ನುವುದನ್ನು ಅರಿಯಲಾರದೆ ಅಮರತ್ವಕ್ಕಾಗಿ ಹೋರಾಡುತ್ತಾರೆ. ತಾರುಣ್ಯದ ಸ್ಥಿತಿಗಾಗಿ ಮಗನ ತಾರುಣ್ಯವನ್ನೇ ಎರವಲು ಪಡೆದ ಯಯಾತಿಯ ಮನಸ್ಥಿತಿ ನಮ್ಮೆಲ್ಲರಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಇದ್ದೇ ಇರುತ್ತದೆ. ಕಾಲ ದೊಂದಿಗೆ ಮಾಗುತ್ತ ಜೀವನದ ಸಂಜೆಯ ಪಯಣವನ್ನು ಯಾವುದೇ ಗೊಣಗಾಟಗಳಿಲ್ಲದಂತೆ ಕಳೆಯುವ ತಯಾರಿಯನ್ನು ನಾವ್ಯಾರೂ ಮಾಡಿಕೊಳ್ಳು ವುದೇ ಇಲ್ಲ. ನಮ್ಮ ಕಣ್ಣೆದುರಿನಲ್ಲೇ ಹುಟ್ಟಿದ ಚಿಗುರುಗಳೆಲ್ಲ ಉದುರಿ ಹೋಗುವುದನ್ನು ನೋಡುತ್ತ ಉಳಿದು ಹೋಗಿ ಅಮರತ್ವದೊಂದಿಗೆ ಯಾವ ಸಂತೋಷವನ್ನು ಅನುಭವಿಸಲು ಸಾಧ್ಯ? ಕಾಲನ ಜತೆಗೆ ಜೀವನದ ಏರುಪೇರುಗಳೂ ಉರುಳುತ್ತಲೇ ಇರುತ್ತವೆ.
ಬದಲಾವಣೆಯೆಂಬುದು ಜಗದ ನಿಯಮವಾದರೂ ರಾತ್ರಿ ಮುಗಿದ ಮೇಲೆ ಮತ್ತದೇ ಹಗಲು! ಜನ್ಮಜನ್ಮಾಂತರದ ನಂಬಿಕೆಯಿಲ್ಲವಾದರೂ ಅಂಥದ್ದೇ ನಾದರೂ ಅವಕಾಶ ಸಿಕ್ಕರೆ ವೈವಿಧ್ಯಮಯವಾದ ಈ ಸೃಷ್ಟಿ ಸಂಕುಲದ ಪ್ರತಿಯೊಂದು ಜೀವಿಯಾಗಿ ಮತ್ತೆ ಮತ್ತೆ ಹುಟ್ಟಿ ಬರಲು ಬಯಸುತ್ತೇನೆ. ಯಾರಿಗೆ ಬೇಕು ಈ ಅಮರತ್ವ… ಈಗಂತೂ ಎಲ್ಲೆಡೆ ಹಿಮಾವೃತವಾಗಿ ಎಲೆಗಳು ಉದುರುವ ಮಾಗಿಯ ಕಾಲ. ಮಾಗಿಯ ಕಾಲದಲ್ಲಿ ಕಂಡ ಕನಸುಗಳು ನನಸಾ ಗುವುದಿಲ್ಲ ಅನ್ನುವ ಹೇಳಿಕೆಯಿದೆ. ಆದರೆ ಕನಸುಗಳು ನಮ್ಮನ್ನು ಹೇಳಿಕೇಳಿ ಬರುತ್ತವೆಯೇ? ನಿಜ ಜೀವನದಲ್ಲಿ ನಡೆಯಲಾರದ, ಅನುಭವಿಸಲಾಗದ ಘಟನೆ ಗಳೆಲ್ಲ ಕನಸಾಗಿ ಅಪ್ಪಿಕೊಳ್ಳುತ್ತವೆ.
ಕನಸುಗಳು ನಾನಾ ಸಂದೇಶವನ್ನು ಹೊತ್ತು ತರುತ್ತವೆ ಎಂದು ಹೇಳುವ ಸಾಕಷ್ಟು ತಾರ್ಕಿಕ ವಿವರಣೆಗಳೂ ದೊರೆಯುತ್ತವೆ. ಅಧ್ಯಾತ್ಮದ ಪಥದಲ್ಲಿರು ವವರಿಗೆ ಸಾಕಷ್ಟು ಸಂದೇಶಗಳು ಈ ಕನಸಿನ ಮೂಲಕವೇ ಹರಿದುಬರುತ್ತದೆ ಎಂಬುದನ್ನು ಸಾಕಷ್ಟು ಪುಸ್ತಕಗಳಲ್ಲಿ ಓದಿ ತಿಳಿದಿದ್ದೇವೆ. ಆದರೆ ಒಂದೇ ರೀತಿಯ ಕನಸುಗಳು ಪದೇಪದೆ ಬರುತ್ತಿದ್ದರೆ ಅದಕ್ಕೆ ಯಾವುದೋ ನಿರ್ದಿಷ್ಟವಾದ ಕಾರಣವಿರುತ್ತದೆ. ಆಕಾಶದಿಂದ ಅಗಾಧವಾದ ಬೆಟ್ಟಗಳಂಥ ಭಾರದ ವಸ್ತುಗಳು ಬೀಳುತ್ತ ಬೀಳುತ್ತ ಮೋಡಗಳಾಗಿ ಬದಲಾಗಿ ಕೊನೆಗೆ ಕೂದಲೆಳೆಯಷ್ಟು ಹಗುರವಾಗಿ ನನ್ನ ಮೇಲೆ ಬೀಳುವ ಕನಸು ಬಾಲ್ಯದಿಂದಲೂ ಬೆನ್ನುಬಿಡದೆ ಹಿಂಬಾಲಿಸುತ್ತಲೇ ಇದೆ.
ಇತ್ತೀಚೆಗೆ ಹೊಳೆದ ಅದರರ್ಥ:ಎಂಥ ಕಗ್ಗಂಟಿನಂಥ ಸಮಸ್ಯೆಗಳಿಂದ ತುಂಬಿದ ಕಷ್ಟಗಳು ಎದುರಾದರೂ ಅದು ಕ್ರಮೇಣ ಯಾವುದೇ ತೊಂದರೆ ಯಿಲ್ಲದಂತೆ ಬಗೆಹರಿದು ಹೋಗುತ್ತವೆ ಅನ್ನುವುದು ನಾನು ಕಂಡುಕೊಂಡ ಭಾವಾರ್ಥ. ಕನಸೆಂಬುದು ಮನಸಿನ ಮೂಸೆಯೊಳಗೆ ನಿರಂತರ ಕುದಿಯುತ್ತಾ ಕಲ್ಪನೆಗಳಿಗೆ ಎರಕ ಹೊಯ್ದಾಗಲೇ ಅದ್ಭುತ ಶಿಲ್ಪಗಳ ಸೃಷ್ಟಿಯಾಗುವುದು ಅಲ್ಲವೆ? ನಿರಂತರ ಹರಿಯುವ ನದಿಗೆ ಕೆಳಗಿಳಿಯುವ ಆಳದ ಹಂಗಿಲ್ಲ. ನಿಂತಲ್ಲೇ ಕದಲುವ ಸಮುದ್ರದ ಆಳವನ್ನು ಅರಿತ ವರಿಲ್ಲ!
ಎಷ್ಟೇ ಉರಿದರೂ ಸೂರ್ಯನ ಬಣ್ಣ ಬದಲಾಗಿಲ್ಲ. ತಿರುಗುವ ಭೂಮಿ ನಿಂತಿಲ್ಲ. ನಾವು ಮಾಡಿಟ್ಟ ಹಣ ಆಸ್ತಿ ನಮ್ಮ ನಂತರ ನಮ್ಮ ವಾರಸುದಾರರ ಪಾಲಾಗುತ್ತದೆ. ಈ ಜಗತ್ತಿನಲ್ಲಿ ನಾವು ನೆನಪಿನಲ್ಲುಳಿಯುವುದು ಕೇವಲ ನಮ್ಮ ಕೆಲಸ ಕಾರ್ಯಗಳ ಮೂಲಕ, ವಿಚಾರ, ಚಿಂತನೆಗಳ ಮೂಲಕ ಮಾತ್ರ. ಇಂದಿಗೂ ರಾಷ್ಟ್ರಕವಿ ಕುವೆಂಪು ಅವರಾಗಲಿ, ವರಕವಿ ಬೇಂದ್ರೆಯವರಾಗಲಿ ಹೆಸರು ಕೇಳಿದ ಕೂಡಲೆ ನೆನಪಾಗುವುದು ಅವರ ಬರಹ, ಕವಿತೆಹಾಗೂ ಕೃತಿಗಳ ಮೂಲಕವೇ ಹೊರತು ಅವರು ಸಂಪಾದಿಸಿದ ಹಣ-ಆಸ್ತಿಯಿಂದಲ್ಲ.
ಅನುಭವಿಸಿದ ಕ್ಷಣಗಳ ಅನುಭವ ಕೇವಲ ನಮ್ಮದೇ ಹೊರತು ಅದು ಸಾರ್ವತ್ರಿಕ ವಾದುದಲ್ಲ! ಅದರಿಂದ ಸೃಷ್ಟಿಯಾದ ಕಲೆ, ಸಾಹಿತ್ಯ, ಸಂಗೀತಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುತ್ತವೆ. ಸಾಧನೆಯೆಂಬುದು ಪ್ರತಿಯೊಂದು ಜೀವಿಯಲ್ಲಿ ಯೂ ತನ್ನದೇಯಾದ ಮಟ್ಟದಲ್ಲಿರುತ್ತದೆ. ಮೊಟ್ಟಮೊದಲ ಬಾರಿಗೆ ಏಕಾಂಗಿಯಾಗಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ತನ್ನ ಪೊಟರೆಯಿಂದ ಇಣುಕಿ ನೋಡಿದಾಗ ಅಗಾಧವಾದ ಶರಧಿಯನ್ನು ಕಂಡು ಭಯಗೊಂಡ ಸೀಗಲ್ ಹಕ್ಕಿಮರಿಗೆ ಕ್ರಮೇಣ ಆ ಭಯವನ್ನು ಮೀರಿ ಹಾರುವಂತೆ ತನ್ನ ರೆಕ್ಕೆಗಳೊಳಗೆ ತಂದುಕೊಂಡ ಸಾಮರ್ಥ್ಯವೇ ದೊಡ್ಡ ಸಾಧನೆ!ಹುಲಿಮರಿಗೆ ಮೊದಲ ಬಾರಿಗೆ ಸ್ವತಂತ್ರವಾಗಿ ಹಿಡಿದ ಬೇಟೆಯೇ ಅತಿದೊಡ್ಡ ಸಾಧನೆ! ಸಾಧನೆಯನ್ನು ಅಳೆಯಲು ಯಾವುದೇ ನಿರ್ದಿಷ್ಟ ಅಳತೆ ಗೋಲಿಲ್ಲ.
ಹೀಗಾಗಿ ನಮ್ಮೆಲ್ಲರ ಗಮ್ಯ ಅನ್ಯರಿಗೆ ಮಾರಕವಾಗದಂತೆ ನಮ್ಮ ನಮ್ಮ ಸಾಧನೆಗಳನ್ನು ಸಾಧಿಸಿಕೊಳ್ಳುವತ್ತ ಸಾಗುವಂತಿರಲಿ. ಜೀವನವೆಂಬುದು ಕಳೆದುಕೊಳ್ಳುತ್ತಾ, ಕೂಡಿಕೊಳ್ಳುತ್ತಾ ಸಾಗುವುದು. ಹಾಗಾದರೆ ಕಳೆದುಕೊಂಡವರ ಸ್ಥಾನವನ್ನು ಯಾರಾದರೂ ತುಂಬಲು ಸಾಧ್ಯವೇ? ಪ್ರತಿಯೊಬ್ಬರಿಗೂಅವರದೇ ಆದಂಥ ಸ್ಥಾನಗಳಿರುತ್ತವೆ. ತುಂಬಲು ಅದೇನು ಬಿಟ್ಟು ಹೋದ ಸ್ಥಳಗಳೇ? ಅದು ನಿರಂತರ ಮುಂದುವರಿಕೆ.
ನಮ್ಮ ನಮ್ಮ ಸ್ಥಾನಗಳನ್ನು ಕರಾರುವಾಕ್ಕಾಗಿ ಸ್ಥಾಪಿಸಿ ಹೋಗುವುದಷ್ಟೇ ನಮ್ಮ ಕೆಲಸ. ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದು ನಮ್ಮಂತೆಯೇ ಮತ್ತೊಂದು ಸೃಷ್ಟಿ ಸಾಧ್ಯವಾದರೂ ಅದು ನಮ್ಮ ಪ್ರತಿರೂಪವಾಗಬಹುದೇ ಹೊರತು ನಾವಾಗಲು ಸಾಧ್ಯವಿಲ್ಲ. ಹೀಗಾಗಿ ನಾವು ಬೇರೆ ಯಾರಂತೆಯೋ ಆಗಲು ಅನುಕರಿಸದೆ ನಾವು ನಾವಾಗಿರೋಣ.
ಕನ್ನಡದ ಕಥೆಗಾರ, ನಟ, ನಿರ್ದೇಶಕ ಹಾಗೂ ನಾಟಕ ಕಾರರಾದ ಎಸ್. ಎನ್. ಸೇತುರಾಂ ಅವರು ಟಿ.ಎನ್. ಸೀತಾರಾಮ್ ರವರ ದೂರದರ್ಶನದ ಮಾಯಾಮೃಗ ಧಾರಾವಾಹಿಯಿಂದ ಕನ್ನಡ ಜನತೆಗೆ ಚಿರಪರಿಚಿತ ರಾದವರು. ತಮ್ಮ ವಿದ್ಯಾಭ್ಯಾಸದ ಬಳಿಕ ಭಾರತೀಯ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ನಂತರ ಆದಾಯ ತೆರಿಗೆ ಇಲಾಖೆಯಲ್ಲಿ ಇನ್‌ಸ್ಪೆಕ್ಟರ್ ಆಗಿ, ಆನಂತರ ಡೆಪ್ಯುಟಿ ಕಮಿಷನರಾಗಿ ಸ್ವಯಂ ನಿವೃತ್ತಿ ಪಡೆದು ಸದ್ಯ ಆದಾಯತೆರಿಗೆ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಎಸ್. ಎನ್. ಸೇತುರಾಮ್ ಅವರು ಅವರ ಗುಂಡಿನ ಸಿಡಿತ ದಂತಹ ಚುಟುಕಾಗಿ, ಖಡಕ್ಕಾಗಿ ಸಾಕಷ್ಟು ಅರ್ಥಗರ್ಭಿತವಾಗಿ ಹೇಳುವ ಸಂಭಾಷಣೆಯಿಂದ ತಮ್ಮದೇ ಆದ ವಿಭಿನ್ನ ಸ್ಥಾನವನ್ನು ಸೃಷ್ಟಿಸಿಕೊಂಡವರು.
ಅವರಿಗೆ ಹೊಳೆಯುವಂತಹ ಪದಪುಂಜಗಳು ನಮಗ್ಯಾಕೆ ಹೊಳೆಯುವುದಿಲ್ಲ ಎಂದು ಸಾಕಷ್ಟು ಬಾರಿ ಯೋಚಿಸಿ, ಪ್ರಯತ್ನಿಸಿ ಸೋತು ಈಗ ಅಭಿಮಾನದಿಂದ ಅವರ ಮಾತುಗಳನ್ನಷ್ಟೆ ಕೇಳುತ್ತ ಮೆಲುಕು ಹಾಕುತ್ತಿರುತ್ತೇನೆ. ಇತ್ತೀಚೆಗೆ ಬನ್ನಂಜೆ ಗೋವಿಂದಾಚಾರ್ಯರ ಆರಾಧನೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತ ನಾವೆಲ್ಲರೂ ಬಾಲಂಗೋಚಿಗಳೇ! ಆದರೆ ಯಾರ ಬಾಲಂಗೋಚಿಗಳು ಅನ್ನುವುದು ಮುಖ್ಯ! ಎಂದ ಅವರ ಮಾತು ಸಾಕಷ್ಟು ಅರ್ಥವನ್ನು ಧ್ವನಿಸಿತು.
ನಿಜ. ನಾವೆಲ್ಲ ಯಾರದ್ದೋ ಒಬ್ಬರ ಪ್ರಭಾವಕ್ಕೆ ಸಿಲುಕಿ ಅವರನ್ನು ಅನುಕರಿಸುತ್ತ ನಕಲು ಮಾಡಲು ಹೋಗಿ ಕೊನೆಗೆ ನಾವೇ ಅವರಂತಾಡುವ ಭ್ರಮೆಯಲ್ಲಿ ನಮ್ಮನ್ನು ನಾವು ಕಳೆದುಕೊಂಡುಬಿಡುತ್ತೇವೆ. ಅದಾಗದಂತೆ ಎಚ್ಚರ ವಹಿಸುವಷ್ಟೇ ಅಗತ್ಯ ಆಯ್ಕೆ! ಬಹಳಷ್ಟು ಸಲ ಆಯ್ಕೆಗೆ ಅವಕಾಶವಿಲ್ಲದೆ ಎದುರಿಗಿರುವುದನ್ನು ಒಪ್ಪಿಕೊಂಡು ಅದನ್ನೇ ಸತ್ಯವೆಂದು ನಂಬಿಕೊಳ್ಳುವ ಪ್ರಸಂಗಗಳಿಗೆ ಅತ್ಯುತ್ತಮ ಉದಾಹರಣೆಯೆಂದರೆ ಪಠ್ಯಪುಸ್ತಕಗಳು!
ಆಯ್ಕೆಯ ತಜ್ಞರ ಸಮಿತಿಯಲ್ಲಿರುವ ಸದಸ್ಯರು ಸಾಕಷ್ಟು ಜಾಗ್ರತೆಯಿಂದ ಆಯ್ಕೆ ಮಾಡಿದರೂ ಅದರಲ್ಲಿ ಸಾಕಷ್ಟು ದೋಷಗಳು ಹಾಗೇ ಉಳಿದು ಹೋಗುವುದು. ವಿಧಿಯಿಲ್ಲದೆ ಅದನ್ನೇ ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧಿಸುವುದು. ಅದನ್ನು ವಿವೇಚಿಸುವ ಸಾಮರ್ಥ್ಯವಿಲ್ಲದ ಎಳೆಯ ಮನಸುಗಳು ಅದನ್ನೇ ಸತ್ಯವೆಂದು ನಂಬಿಕೊಂಡು ಕಲಿಯುತ್ತಾ ಹೋಗುವುದು. ಅದನ್ನೇ ಮುಂದಿನ ಪೀಳಿಗೆಗೆ ದಾಟಿಸುವುದು ಹೀಗೆ ಸತ್ಯದ ವಿಷಯವು ಮರೆಯಾಗಿ ಹೋಗಿ ಮುದ್ರಿತ ವಿಷಯಗಳೇ ಸತ್ಯಗಳಾಗಿ ಉಳಿದುಹೋಗಿ ಇತಿಹಾಸ ಸೃಷ್ಟಿಯಾಗಿಬಿಡುವುದು ವಿಪರ್ಯಾಸವೇ ಸರಿ.
ಮಕ್ಕಳಿಗೆ ತಮಗೆ ಬೇಕಾದ ವಿಷಯವನ್ನು ಆರಿಸಿ ಕೊಳ್ಳುವ ಸ್ವಾತಂತ್ರ್ಯವನ್ನು ಕೊಡದೆ ಬಲವಂತವಾಗಿ ನಮ್ಮ ಇಚ್ಛೆಯಂತೆ ಅವರನ್ನು ತಿದ್ದುತ್ತಾ, ತೀಡುತ್ತಾ ಬೆಳೆಸುತ್ತ ಅವರ ಸ್ವತಂತ್ರ ಆಲೋಚನೆಗಳತ್ತ ಗಮನವನ್ನೇ ಕೊಡದೆ ಎಲ್ಲದಕ್ಕೂ ಅವಲಂಬಿತರಾಗುವಂತೆ ಮಾಡಿ ಅವರನ್ನು ಕೇವಲ ಆಜ್ಞಾಪಾಲಕರನ್ನಾಗಿ ಬೆಳೆಸುವಲ್ಲಿ ನಮ್ಮ ಕೊಡುಗೆ ಅಪಾರ. ಮನಸ್ಥಿತಿಗಳನ್ನು ಬದಲಾಯಿಸಲು ಹಣೆಬರಹ ಬರೆದ ಬ್ರಹ್ಮನಿಂದಲೂ ಸಾಧ್ಯವಿಲ್ಲ. ಎಳೆಯ ವಯಸ್ಸಿನಲ್ಲಿ ಓದುತ್ತ ಅಳವಡಿಸಿಕೊಂಡ ಆದರ್ಶಗಳೆಲ್ಲ ಮುಂದೆ ಅದೆಲ್ಲ ಕೇವಲ ಪುಸ್ತಕದ ಬದನೆಕಾಯಿ ಅನ್ನಿಸಿಕೊಂಡು ಬದುಕೇಬೇರೆ ಆದರ್ಶವೇ ಬೇರೆ! ಎಂಬ ಅರಿವಾಗಿ, ನುಡಿದಂತೆ ನಡೆಯುವವರು ಅಪರೂಪವಾಗಿ, ಅದನ್ನೆಲ್ಲ ಕಲಿಯುತ್ತಾ ಇಷ್ಟೆಲ್ಲ ವರ್ಷ ವ್ಯಯವಾಗಿ ಹೋಯ್ತಲ್ಲ ಅನ್ನುವ ಪೇಚಾಟಕ್ಕೆ ಸಿಲುಕಿ ಎಲ್ಲರ, ಎಲ್ಲದರ ವಿರುದ್ಧ ತಿರಸ್ಕಾರ ಬೆಳೆದು ಮನದಲ್ಲಿ ನಿರಂತರ ಮಂಥನ ನಡೆದು ಕೊನೆಗೆ ನಮ್ಮದೇ ಆಲೋಚನೆ, ಧ್ಯೇಯಗಳನ್ನು ಅಳವಡಿಸಿಕೊಳ್ಳುತ್ತ ಬದುಕು ಕಟ್ಟಿಕೊಳ್ಳುವುದೇ ಹೊಸ ಬೆಳಗು.
ಹೊಸತೆಂಬುದು ಸದಾ ಸಂಭ್ರಮದ ಊಟೆ. ಹೊಸ ಸಂಭ್ರಮದೊಂದಿಗೆ ಅಡಿಯಿಟ್ಟಿರುವ ೨೦೨೨ ಎಂಬ ಅತಿಥಿ ನಮ್ಮೆಲ್ಲರಲಿ ಹೊಸ ಭರವಸೆ, ಹೊಸ ಉತ್ಸಾಹ, ಹೊಸ ಕನಸು, ಹೊಸ ಚೈತನ್ಯದೊಂದಿಗೆ ಹೊಸ ದಿಕ್ಕಿನಲಿ ಹೊಸ ಬೆಳಕು ತುಂಬುವಂತಾಗಲಿ.