ಭದ್ರಕೋಟೆಯನ್ನೇ ಕಳೆದುಕೊಳ್ಳುತ್ತಿರುವ ಜೆಡಿಎಸ್‌
ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
ಹಳೇ ಮೈಸೂರು ಭಾಗಕ್ಕೆ ಸೀಮಿತಗೊಳಿಸುವ ಯೋಜನೆಯಿದ್ದರೂ, ಪಕ್ಷದ ಸ್ಥಿತಿ ಬದಲಾಗಿರುತ್ತಿತ್ತು. ಆದರೆ ಕೇವಲ ತಮ್ಮ ಕುಟುಂಬಸದಸ್ಯರಿಗೆ ಸ್ಥಾನಮಾನ ಗಳು ನೀಡುವುದರಲ್ಲಿ ಕಾರ್ಯಕರ್ತರನ್ನು ನಿರಂತರವಾಗಿ ಕಡೆಗಣಿಸಿದ್ದರಿಂದಲೇ, ಸಂಘಟನೆಗೆ ಹೊಡೆತ ಬಿದ್ದಿದೆ.
ಪ್ರಾದೇಶಿಕತೆಯ ಅಸ್ಮಿತೆಯ ಹೆಸರಲ್ಲಿಯೇ ಟಾರ್ಗೆಟ್ 150 ಅನ್ನು ಸಾಧಿಸುವ ಪ್ರಯತ್ನದಲ್ಲಿರುವ ಜೆಡಿಎಸ್ ಪರಿಸ್ಥಿತಿ, ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುವ ಬದಲು, ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಇತ್ತೀಚಿನ ಫಲಿತಾಂಶಗಳು ಎದ್ದು ಕಾಣುತ್ತವೆ.
ಹೌದು, ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರಿ ನಡೆಸಿದ ಕುಮಾರಸ್ವಾಮಿ ಅವರು, ಕೇವಲ ಒಂದು ಪುರಸಭೆಯಲ್ಲಿ ಗೆಲವು ಸಾಧಿಸಿದ ಮಾತ್ರಕ್ಕೆ ‘ಬಿಡದಿ ಪುರಸಭೆ ಚುನಾವಣೆ ನನ್ನ ಶಕ್ತಿ ಹೆಚ್ಚಿಸಿದೆ’ ಎನ್ನುವ ಟ್ವೀಟ್ ಮಾಡುತ್ತಾರೆ. ಇನ್ನೊಂದೆಡೆ ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರುತ್ತೇವೆ ಎನ್ನುವ ಮಾತನ್ನು ಹೇಳುತ್ತಾರೆ. ಆದರೆ ಸ್ಪಷ್ಟಬಹುಮತ ಹೋಗಲಿ, ‘ಕಿಂಗ್ ಮೇಕರ್’ ಆಗುವ ಸ್ಥಿತಿಯಲ್ಲಿಯೂ ಸದ್ಯಕ್ಕಿಲ್ಲ ಎನ್ನುವ ಅನುಮಾನಗಳು ರಾಜಕೀಯ ವಲಯದಲ್ಲಿ ಶುರುವಾಗಿದೆ.
ಆದರೆ ಜೆಡಿಎಸ್‌ನ ಇಂದಿನ ಸ್ಥಿತಿಗೂ ಮೊದಲು, ಜನತಾ ದಳ ಪಕ್ಷದ ಪರಿಸ್ಥಿತಿ ಹೀಗಿರಲಿಲ್ಲ. ರಾಜ್ಯಕಂಡ ಅದ್ಭುತ ರಾಜಕೀಯ ನಾಯಕ ರನ್ನು ಕರ್ನಾಟಕಕ್ಕೆ ಮಾತ್ರವಲ್ಲದೇ ದೇಶಕ್ಕೆ ನೀಡಿರುವ ಹಿರಿಮೆ ಈ ಪಕ್ಷಕ್ಕಿತ್ತು. ಈಗಲೂ ವಿಧಾನಸಭೆಯ ಅತ್ಯುತ್ತಮ ಸಂಸದೀಯ ಪಟುಗಳನ್ನು ತಗೆದುಕೊಂಡರೆ ಬಹುತೇಕರು ಜನತಾದಳದ ಮೂಲದವರೇ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಮತ್ತು ಸಂಸದೀಯ ಮಾಧುಸ್ವಾಮಿ, ಹಿರಿಯ ಸಚಿವರಾದ ಗೋವಿಂದ ಕಾರಜೋಳ ಮಾತ್ರವಲ್ಲದೇ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ, ಆರ್.ವಿ ದೇಶಪಾಂಡೆ, ರಮೇಶ್‌ಕುಮಾರ್ ಸೇರಿದಂತೆ ಅನೇಕರ ಮೂಲಕ ಜನತಾಪರಿವಾರ. ಪಕ್ಷ ಇಬ್ಭಾಗವಾಗಿ ಜಾತತೀತ ಜನತಾದಳವಾದ ಬಳಿಕವೂ, ಹಲವು ನಾಯಕರನ್ನು ಹುಟ್ಟಿ ಹಾಕಿರುವ ಕೀರ್ತಿ ಜೆಡಿಎಸ್‌ಗಿದೆ. ಅಂತಹ ಘಟಾನುಘಟಿ ನಾಯಕರಿದ್ದ ಪಕ್ಷಕ್ಕೆ ಇಂದು ನಾಯಕತ್ವದ ಸಮಸ್ಯೆ ಎದುರಾಗಿದೆ.
ನಾಣಯ್ಯ ಅವರು ಹಲವು ಬಾರಿ, ‘ದೇವೇಗೌಡರು, ರಾಮಕೃಷ್ಣ ಹೆಗಡೆ ಅವರು ಬೇರೆಯಾಗದಿದ್ದರೆ, ರಾಜ್ಯ ರಾಜಕೀಯದ ಪರಿಸ್ಥಿತಿ ಭಿನ್ನವಾಗಿರುತ್ತಿತ್ತು’ ಹೇಳಿದ್ದಾರೆ. ಇದು ಸತ್ಯವೂ ಸಹ. ಆದರೆ ದೇವೇಗೌಡರ ಸಾರಥ್ಯದಲ್ಲಿ ಜೆಡಿಎಸ್ ಕಟ್ಟಿದ ಬಳಿಕವೂ, ಆರಂಭದಲ್ಲಿ ಇದೇ ಅಭಿಪ್ರಾಯ ಅನೇಕರಲ್ಲಿ ಇತ್ತು. ಆದರೆ ಅದಾದ ಬಳಿಕ ದೇವೇಗೌಡರು ಪಕ್ಷದ ವ್ಯಾಪ್ತಿ ರಾಜ್ಯದ ಬದಲಿಗೆ ಹಳೇ ಮೈಸೂರು ಭಾಗಅಥವಾ ಅವರ ಕುಟುಂಬ ಸದಸ್ಯರಿಗೆ ಸೀಮಿತಗೊಳಿಸಿ ‘ಕಿಂಗ್ ಮೇಕರ್’ ಆಗುವ ಲೆಕ್ಕಾಚಾರವನ್ನು ಹಾಕಿಕೊಂಡಿದ್ದರು.
ಕೇವಲ ಹಳೇ ಮೈಸೂರು ಭಾಗಕ್ಕೆ ಮಾತ್ರ ಸೀಮಿತಗೊಳಿಸಿ ಯೋಜನೆ ಮಾಡಿಕೊಂಡಿದ್ದರೂ, ಪಕ್ಷದ ಸ್ಥಿತಿ ಬದಲಾಗಿರುತ್ತಿತ್ತು. ಆದರೆ ಅದನ್ನು ಮಾಡದೇ, ತಮ್ಮ ಕುಟುಂಬ ಸದಸ್ಯರಿಗೆ ಸ್ಥಾನಮಾನಗಳು ನೀಡುವುದಷ್ಟೇ ಅಲ್ಲದೇ, ಪ್ರಾಮಾಣಿಕ ಕಾರ್ಯಕರ್ತರನ್ನು ನಿರಂತರವಾಗಿ ಕಡೆಗಣಿಸಿದ್ದರಿಂದಲೇ, ಪಕ್ಷದ ಸಂಘಟನೆ ಯಲ್ಲಿ ಭಾರಿ ಸಮಸ್ಯೆ ಉಂಟಾಗಿರುವುದು. ಪಕ್ಷದ ಈ ರೀತಿಯ ನಿಲುವಿನಿಂದಾಗಿ ಕೇವಲ ನಾಯಕರನ್ನು ಕಳೆದುಕೊಳ್ಳುವುದು ಮಾತ್ರವಲ್ಲದೇ, ಪಕ್ಷದ ಕಾರ್ಯ ಕರ್ತರು ವಿಮುಖರಾಗುತ್ತಾ ಸಾಗಿದರು. ಇದರಿಂದ ಚುನಾವಣೆಯಿಂದ ಚುನಾವಣೆಗೆ ಪಕ್ಷದ ಸಾಧನೆ ಕ್ಷೀಣಿಸುತ್ತಾ ಸಾಗಿದೆ ಹೊರತು, ಮೇಲ್ಮುಖವಾಗಿಲ್ಲ. ವಿಧಾನಸಭೆ, ಲೋಕಸಭೆ ಮಾತ್ರವಲ್ಲದೇ, ಜೆಡಿಎಸ್‌ನ ಜೀವಾಳವಾಗಿರುವ ಪಂಚಾಯಿತಿ ಚುನಾವಣೆಯ ಕೆಟ್ಟ ಸಾಧನೆ ನಾಯಕರಿಗೆ ನುಂಗಲಾರದ ತುತ್ತಾಗಿದೆ.
೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಮೂರು ಕ್ಷೇತ್ರಗಳನ್ನು ಕಳೆದುಕೊಂಡ ಜೆಡಿಎಸ್, ೨೦೧೯ರ ಲೋಕಸಭಾ ಚುನಾವಣೆ ಯಲ್ಲಿಯೂ ಭಾರಿ ಮುಖಭಂಗ ಅನುಭವಿಸಬೇಕಾಯಿತು. ಸ್ವತಃ ದೇವೇಗೌಡರು ಹಾಗೂ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಚುನಾವಣೆ ಯಲ್ಲಿ ಸೋಲನುಭವಿಸಬೇಕಾಯಿತು. ಬಳಿಕ ನಡೆದ ಸಾಲು ಸಾಲು ಉಪಚುನಾವಣೆಯಲ್ಲಿ, ಜೆಡಿಎಸ್ ಮುಖಭಂಗ ಅನುಭವಿಸಿದೆ ಹೊರತು, ಧನಾತ್ಮಕ ಫಲಿತಾಂಶ ಬಂದಿಲ್ಲ.
ಇದೇ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಇನ್ನಷ್ಟು ಸೀಟುಗಳನ್ನು ಕಳೆದುಕೊಂಡರೂ ಅಚ್ಚರಿಯಿಲ್ಲ.  ಜೆಡಿಎಸ್ ನಾಯಕರನ್ನು ಕಾಡುತ್ತಿರುವ ನಿಜವಾದ ಆತಂಕ, ಚುನಾವಣೆಯಲ್ಲಿ ಸೋತಿರುವುದಾಗಲಿ, ಕ್ಷೇತ್ರಗಳನ್ನು ಕಳೆದು ಕೊಂಡಿರುವುದು ಅಲ್ಲವೇ ಅಲ್ಲ. ಬದಲಿಗೆ ಒಕ್ಕಲಿಗರ ಪ್ರಾಬಲ್ಯವಿರುವ, ಜೆಡಿಎಸ್ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಮಂಡ್ಯ, ಹಾಸನ, ರಾಮನಗರ ಹಾಗೂ ಮೈಸೂರು ಗ್ರಾಮಾಂತರ ಭಾಗದಲ್ಲಿನ ನಿರಂತರ ಸೋಲು. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ವೀಕ್ ಆಗುತ್ತಿರುವುದಕ್ಕೆ ಕಳೆದ ವಾರದ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಯೂ ಸಾಕ್ಷಿ. ಐದು ನಗರ ಸಭೆ, 19 ಪುರಸಭೆ, 34 ಪಟ್ಟಣ ಪಂಚಾಯಿತಿಗೆ ನಡೆದ ಚುಣಾವಣೆಯಲ್ಲಿ ಹಳೇ ಮೈಸೂರು ಭಾಗದ ಸ್ಥಳೀಯ ಸಂಸ್ಥೆಗಳಿಗೂ ಚುನಾವಣೆ ನಡೆದಿತ್ತು.
ಆದರೆ ಈ ಚುನಾವಣೆಯಲ್ಲಿ ಜೆಡಿಎಸ್ ಸ್ಪಷ್ಟ ಬಹುಮತ ದೊಂದಿಗೆ ಅಧಿಕಾರಕ್ಕೆ ಬಂದಿದ್ದು, ಬಿಡದಿಯ ಪುರಸಭೆಯಲ್ಲಿ ಮಾತ್ರ. ಕುಮಾರಸ್ವಾಮಿ ಅವರು ‘ಬಿಡದಿಯ ಫಲಿತಾಂಶ ನನ್ನ ಶಕ್ತಿ ಹೆಚ್ಚಿಸಿದೆ’ ಎಂದು ಟ್ವೀಟ್ ಮಾಡಿದ್ದರು. ನಗರ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಯನ್ನು ಸೇರಿಸಿದರೆ ಒಟ್ಟು ೫೮ಕ್ಕೆ ಚುನಾವಣೆ ನಡೆದಿದೆ. ಆದರೆ ಇದರಲ್ಲಿ ಜೆಡಿಎಸ್ ಗಳಿಸಿರುವುದು ಕೇವಲ ಬಿಡದಿ ಮಾತ್ರ. ಇನ್ನು ಪಕ್ಷೇತರ ಅಥವಾ ಇತರರು ಆರು ಸ್ಥಳೀಯ ಸಂಸ್ಥೆಯ ಚುಕ್ಕಾಣಿಯನ್ನು ಹಿಡಿದಿದ್ದರೆ, 9 ಸ್ಥಳೀಯ ಸಂಸ್ಥೆಗಳು ಅಂತಂತ್ರ ಸ್ಥಿತಿ ತಲುಪಿವೆ. ಹಾಗೇ ನೋಡಿದರೆ ೧೧೮೫ ವಾರ್ಡ್‌ಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಗೆದಿದ್ದು ೪೭ರಲ್ಲಿ ಮಾತ್ರ. ಇನ್ನು ವೋಟ್‌ಶೇರ್ ನೋಡುವುದಾದರೆ, ಬಿಜೆಪಿ ೩೬.೬೨ರಷ್ಟು ಮತ ಪಡೆದರೆ, ಕಾಂಗ್ರೆಸ್‌ನವರು ೪೨.೧೯ರಷ್ಟು ಮತಗಳಿಸಿ ದ್ದಾರೆ.
ಇನ್ನು ಪಕ್ಷೇತರರು ಹಾಗೂ ಇನ್ನಿತರೆ ಪಕ್ಷದವರು ೧೭ ರಷ್ಟು ಮತಗಳಿಸಿದ್ದರೆ, ಜೆಡಿಎಸ್ ಮಾತ್ರ ೩.೯೬ರಷ್ಟು ಮತ ಗಳಿಕೆ ಮಾಡಿರುವುದು ತಳಮಟ್ಟದಲ್ಲಿ ಜೆಡಿಎಸ್‌ನ ಸಂಘಟನೆಯ ಸ್ಪಷ್ಟ ಚಿತ್ರಣ ಸಿಗಲಿದೆ. ಹೀಗೆ ನಿರಂತರವಾಗಿ ಸಂಘಟನೆ ಕ್ಷೀಣಿಸುತ್ತಿರು ವುದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ‘ಕಿಂಗ್ ಮೇಕರ್’ ಆಗುವ ಜೆಡಿಎಸ್ ಆಸೆಯೂ ಪ್ರಾಯೋಗಿಕವಾಗಿ ಈಡೇರುವುದಿಲ್ಲ ಎನ್ನುವುದು ಸ್ಪಷ್ಟ.
ದೇವೇಗೌಡರ ಕುಟುಂಬದಲ್ಲಿಯೇ ಐವರು ಶಾಸಕರು, ಬ್ಬರು ಸಂಸದರು, ಒಬ್ಬ ವಿಧಾನಪರಿಷತ್ ಸದಸ್ಯ. ಇನ್ನುಳಿದಂತೆ ಸ್ಥಳೀಯ ಮಟ್ಟದಲ್ಲಿ ಲೆಕ್ಕಹಾಕಲು ಆಗದಷ್ಟು ಕುಟುಂಬ ರಾಜಕಾರಣ. ಈ ರೀತಿಯ ನಡೆಯಿಂದಲೇ, ಪಕ್ಷದ ವರ್ಚಸ್ಸು ಕ್ಷೀಣಿಸಿ, ಇಂದಿನ ಸ್ಥಿತಿಗೆ ಕಾರಣವಾಗಿದೆ. ಜಾತ್ಯತೀತ ಜನತಾದಳದ ಮತ್ತೊಂದು ಬಹುದೊಡ್ಡ ಸಮಸ್ಯೆ ಎಂದರೆ ನಾಯಕತ್ವ. ಹೌದು, ಈ ಹಂತದಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಪಕ್ಷದ ಪರಮೋಚ್ಛ ನಾಯಕ ರಾಗಿದ್ದಾರೆ. ಅವರ ನಂತರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿದ್ದಾರೆ. ಈ ಇಬ್ಬರನ್ನು ಬಿಟ್ಟರೆ, ಇಡೀ ರಾಜ್ಯವನ್ನು ಸುತ್ತಾಡಿ ಸಂಘಟನೆ ಮಾಡುವ ಮತ್ತೊಬ್ಬ ನಾಯಕನ್ಯಾರು ಎನ್ನುವ ಪ್ರಶ್ನೆಗೆ ಜೆಡಿಎಸ್ ಬಳಿಯೇ ಉತ್ತರವಿಲ್ಲ.
ಎಚ್.ಡಿ. ರೇವಣ್ಣ ಹಾಸನ ಬಿಟ್ಟು ಹೊರಬ ರುವುದಿಲ್ಲ, ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಅವರಿಗೆ ಜನರನ್ನು ತಲುಪುವ ಛರಿಸ್ಮಾವಿಲ್ಲ. ಇನ್ನು ಕುಮಾರ ಸ್ವಾಮಿ ಅವರ ಆಪ್ತವಲದಲ್ಲಿರುವ ಬಂಡೆಪ್ಪ ಕಾಶೆಂಪುರ, ಬೋಜೆಗೌಡ ಅವರೆಲ್ಲ ತಮ್ಮ ಕ್ಷೇತ್ರಗಳನ್ನು ಉಳಿಸಿಕೊಂಡರೆ ಸಾಕು ಎನ್ನುವ ಹಂತದಲ್ಲಿದ್ದಾರೆ.
-ರೂಕ್ ಸೇರಿದಂತೆ ಕೆಲವರು ನೇರವಾಗಿ ಚುನಾವಣಾ ರಾಜಕೀಯ ಮಾಡಿಗೊತ್ತಿಲ್ಲ. ಜಿ.ಟಿ.ದೇವೇಗೌಡ ಸೇರಿದಂತೆ ಕೆಲ ಶಾಸಕರಿಗೆ ಜೆಡಿಎಸ್ ಅನ್ನು ಕಟ್ಟಿಬೆಳೆಸುವ ಆಸಕ್ತಿಯಿಲ್ಲ. ಇನ್ನು ಎರಡನೇ ಹಂತದ ನಾಯಕತ್ವ ನೋಡುವುದಾದರೆ, ಪ್ರಜ್ವಲ್ ರೇವಣ್ಣ ಅವರಿಗೆ ಹಳೇ ಮೈಸೂರು ಭಾಗದಲ್ಲಿ ಉತ್ತಮ ಹಿಡಿತವಿದೆಯಾದರೂ, ಒಳ ರಾಜಕೀಯದಿಂದ ಪೂರ್ಣ ಪ್ರಮಾಣದಲ್ಲಿ ಸಂಘಟನೆಯಲ್ಲಿ ತೊಡಗಿಸಿ ಕೊಳ್ಳಲು ಆಗುತ್ತಿಲ್ಲ. ನಿಖಿಲ್ ಕುಮಾರಸ್ವಾಮಿ ಅವರನ್ನು ಮತದಾರರು ಒಬ್ಬ ನಾಯಕ ನಟ, ದೊಡ್ಡಗೌಡರ ಮೊಮ್ಮಗ, ಕುಮಾರಸ್ವಾಮಿ ಅವರ ಮಗನಾಗಿ ಸ್ವೀಕರಿಸಿದ್ದಾರೆ ಹೊರತು, ನಾಯಕನಾಗಿ ನೋಡಿಲ್ಲ.
ಈಗಷ್ಟೇ ಪರಿಷತ್ ಚುನಾವಣೆಯಲ್ಲಿ ಗೆದ್ದಿರುವ ಸೂರಜ್ ಬಗ್ಗೆ ಪಕ್ಷದಲ್ಲಿಯೇ ಅನೇಕರಿಗೆ ತಿಳಿದಿಲ್ಲ. ಹೀಗಿರುವಾಗ, ಸಂಘಟನೆಗೆ ಬೇಕಿರುವ ನಾಯಕತ್ವದ ಜವಾಬ್ದಾರಿಯ ನೊಗವನ್ನು ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಬಳಿಕ ಯಾರೂ ಹೋರಲಿದ್ದಾರೆ ಎನ್ನುವ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿದಿದೆ. ಹಾಗೇ ನೋಡಿದರೆ, ಕರ್ನಾಟಕದ ಮಟ್ಟಿಗೆ ಸದ್ಯಕ್ಕೆ ಒಂದು ಪ್ರಾದೇಶಿಕ ಪಕ್ಷದ ಅನಿವಾರ್ಯತೆಯಿದೆ. ಎರಡು ರಾಷ್ಟ್ರೀಯ ಪಕ್ಷಗಳಿಗೆ ‘ಬದಲಿ’ ವ್ಯವಸ್ಥೆಯನ್ನು ಮತದಾರರು ಸಹ ಎದುರು ನೋಡುತ್ತಿರುವುದು ಸ್ಪಷ್ಟ. ಆದರೆ ಪ್ರಾದೇಶಿಕ ಅಸ್ಮಿತೆ ಎಂದು ಹೇಳಿಕೊಳ್ಳುತ್ತಿರುವ ಜೆಡಿಎಸ್ ನೈಜವಾಗಿ ಆ ರೀತಿಯಾಗಿ ನಡೆದುಕೊಳ್ಳುತ್ತಿಲ್ಲ. ಇದರಿಂದಾಗಿಯೇ ಜನರು ಜೆಡಿಎಸ್ ಅನ್ನು ಒಪ್ಪಿಕೊಳ್ಳದೇ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.
ಸೀಮಿತ ಪ್ರದೇಶ, ಸೀಮಿತ ಕುಟಂಬವನ್ನು ಮೀರಿ ಪಕ್ಷ ಸಂಘಟನೆಗೆ ಯೋಚಿಸದಿದ್ದರೆ ಮುಂದಿನ ಚುನಾವಣೆ ವೇಳೆಗೆ ಜೆಡಿಎಸ್ ಇನ್ನಷ್ಟು ಕ್ಷೇತ್ರಗಳ ಮೇಲಿನ ಹಿಡಿತವನ್ನು ಕಳೆದುಕೊಂಡರೂ ಅನುಮಾನವಿಲ್ಲ.