ಪ್ರಶಸ್ತಿಗಳ ಕೊಟ್ಟಿದ್ದು ಇದೇ ನಾಡಿನ ಮಣ್ಣು
ಮಿಶ್ರಾ ಕೃಷಿ
ಕವಿತಾ ಮಿಶ್ರಾ
@.
ಕೃಷಿಯಲ್ಲಿ ಲಾಭ ಇಲ್ಲ ಅಂತ ನಮ್ಮ ಪೂರ್ವಜರು ನಗರಗಳಿಗೂ ವಲಸೆ ಹೋಗಿರಲಿಲ್ಲ. ಅಷ್ಟೇ ಯಾಕೆ? ಇವರಿಗೆ ನಗರದ ವಾತಾವರಣ ಒಗ್ಗುತ್ತಲೂ ಇರಲಿಲ್ಲ.ನಷ್ಟವೆನಿಸಿದರೂ ಸಾವಿರಾರು ವರ್ಷಗಳ ಇತಿಹಾಸದ ಕೃಷಿಯನ್ನೇ ಅವಲಂಬಿಸಿಕೊಂಡು ಬರುತ್ತಿದ್ದರು. ಎಮ್ಮೆ, ಎತ್ತು, ಕುರಿ, ಕೋಳಿ ಇಲ್ಲದ ಮನೆಗಳಿರಲಿಲ್ಲ.
ನಮ್ಮ ಅಣ್ಣ ಪೇಟೆಯಲ್ಲಿದ್ದಾನೆ, ಮಾವ ಬೆಂಗಳೂರಿನಲ್ಲಿದ್ದಾರೆ, ಚಿಕ್ಕಪ್ಪ ಮುಂಬಯಿಯಲ್ಲಿದ್ದಾರೆ ಅಂತ ಅನೇಕರು ಹೇಳಿಕೊಳ್ಳುತ್ತ ಅವರಿರುವಲ್ಲಿಗೆ ಹೋಗಿಕೆಲಕಾಲ ಉಳಿದುಕೊಳ್ಳುತ್ತಾರೆ. ಅವರು ಉಳಿದುಕೊಂಡಿರುವಷ್ಟೂ ದಿನ ಚೆನ್ನಾಗಿ ನೋಡಿಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ.
ಆದರೆ ಷಹರದಲ್ಲಿರುವವರು ಎಷ್ಟು ಹೊತ್ತು ಕೆಲಸ ಮಾಡುತ್ತಾರೆ! ಏನನ್ನು ಮಾಡುತ್ತಾರೆ? ಅನ್ನೋದೇ ನಾದರೂ ನಿಮಗೆ ತಿಳಿದಿರುತ್ತೇನು? ಹೌದು, ಅವರುಯಾವುದೋ ಪ್ರತಿಷ್ಠಿತ ಕಂಪನಿಯಲ್ಲಿಯೇ ಕೆಲಸ ಗಿಟ್ಟಿಸಿಕೊಂಡಿದ್ದಾರೆ ಅಂತ ಅಂದುಕೊಳ್ಳೋಣ. ಆದರೆ ಅವರ ಕೆಲಸವೇನೂ ಸುಲಭವಾಗಿರುವುದಿಲ್ಲ. ಷಹರಗಳಲ್ಲಿ ಯಾವುದೇ ವಸ್ತು ಮುಟ್ಟಿದರೂ ನೂರು, ಸಾವಿರ ಅಂತ ಬಾಯಿ ಬಡಿದುಕೊಳ್ಳುತ್ತಿರುತ್ತೆ. ಹಣ ಅವರ ಬಳಿ ಇರಬಹುದು. ಆದರೆ ಸಮಯ!? ಖಂಡಿತವಾಗಿಯೂ ಇರುವುದಿಲ್ಲ.
ಸಾಧ್ಯವಾದರೆ ಒಮ್ಮೆ ನೀವು ಬೆಂಗಳೂರಿನ ಮೆಟ್ರೋ ನಿಲ್ದಾಣವನ್ನು ನೋಡಲೇಬೇಕು. ಎಲ್ಲರ ಕಾಲುಗಳಿಗೂ ಚಕ್ರಗಳಿವೆಯೇನೋ ಅಂತ ಅನಿಸುವುದರಲ್ಲಿ ನಿಸ್ಸಂಶಯ. ಇನ್ನು ಬೆಂಗಳೂರಿನ ಮೆಜೆಸ್ಟಿಕ್‌ನ ಸ್ಕೈ ವಾಕ್‌ಗಳ ಮೇಲೆ ಒಂದು ಗಂಟೆ ನೀವೇನಾದರೂ ತಿದ್ದೇ ಆದರೆ ಅಲ್ಲಿ ಯಾರೂ ನೇರವಾಗಿ ಮನುಷ್ಯರ ಜತೆ ಮಾತನಾ ಡುವುದಿಲ್ಲ; ಬದಲಾಗಿ ಫೋನ್‌ನಲ್ಲಿಯೇ ವ್ಯವಹಾರ ನಡೆಯುತ್ತಿರುತ್ತದೆ. ಹೆಚ್ಚಿನವರ ಬಾಯಲ್ಲಿ ಸಾಮಾನ್ಯವಾಗಿ ಕೇಳುವ ಸಂಗತಿಯೆಂದರೆ, ಈ ಬಾರಿ ಕೆಲಸ ಬದಲಾವಣೆ ಮಾಡಲೇಬೇಕು, ಇಲ್ಲದಿದ್ದರೆ ಸಂಸಾರ ನಡೆಸು ವುದು ಕಷ್ಟವಾಗಿಬಿಡುತ್ತೆ. ಅವರಿನ್ನೂ ನನಗೆ ಹಣ ನೀಡಲಿಲ್ಲ, ಹೀಗೆ ಹಾಗೆ… ಒಟ್ಟಿನಲ್ಲಿ ಹಣ ಬಿಟ್ಟು ಬೇರೆ ಮಾತಿಲ್ಲ.
ಸಂಜೆಯ ಸಮಯವಾದರೆ ಸ್ನೇಹಿತರನ್ನು ಕುಡಿಯುವುದಕ್ಕೆ ಕರೆಯುವ ಮಧ್ಯ ವಯಸ್ಸಿನ ಯುವಕರು. ಖಂಡಿತವಾಗಿಯೂ ನೀವು ಯಾವುದೇ ರೈತರ ಮನೆಗೆ ಹೋದರೂ ಅಥವಾ ಯಾವುದೇ ಹಳ್ಳಿಗೆ ಹೋದರೂ ನಿಮಗೆ ಈ ಅನುಭವವಾಗುವುದಿಲ್ಲ. ರೈತರ ಬದುಕಿನ ಚೆಂದವನ್ನು ನಾವು ನೋಡ ಬೇಕೆಂದರೆ ಮಲೆನಾಡಿನ ಭಾಗಗಳಿಗೆ ಹೋಗಬೇಕು. ಪೇಟೆಯಲ್ಲಿ ಲಕ್ಷಗಟ್ಟಲೆ ತಿಂಗಳ ಸಂಭಾವನೆ ಇರುವವನಿಗೂ ಇಲ್ಲಿಯೇ ಇದ್ದುಬಿಡೋಣ ಅಂತ ಅನಿಸಿಬಿಡುತ್ತೆ. ಬೆಳಗ್ಗೆ ಎದ್ದು ಕೊಟ್ಟಿಗೆ ಕೆಲಸ ಮಾಡಿ, ಸ್ನಾನ ಸಂಧ್ಯಾವಂದನೆಯನ್ನು ಮುಗಿಸಿ ಚಳಿಯಿದ್ದರೆ ಬಿಸಿಲಿಗೆ ಕೆಲಕಾಲ ಮೈಯೊಡ್ಡಿ ನಂತರ ತೋಟಕ್ಕೆ ಹೋದರೆ ಮನೆಗೆ ಮಧ್ಯಾಹ್ನ ಬಂದು ಊಟ ಮುಗಿಸಿ ಒಂದೆರಡು ತಾಸು ನಿದ್ರೆ ಮಾಡಿ ಎಳುತ್ತಾರೆ.
ಬಳಿಕ ಚಾ/ಕಾಫಿ ಕುಡಿದು ಮತ್ತೊಮ್ಮೆ ತೋಟಕ್ಕೆ ಹೋಗಿಬರುತ್ತಾರೆ. ಸಂಜೆಯಾಗುತ್ತಿದ್ದಂತೆ ಅಕ್ಕಪಕ್ಕದ ಮನೆಗಳಿಗೆ ಹೋಗಿ ಲೋಕಾಭಿರಾಮ ಮಾತನಾಡಿ ಬಂದರೆಂದರೆ ಅವರ ದಿನಚರಿ ಮುಗಿದಂತೆಯೆ. ನೆಂಟರು ಇಷ್ಟರು ಬಂದರೆಂದರೆ ಅವರು ಉಪಚರಿಸುವ ಬಗೆ ಇದೆಯಲ್ಲ. ಆಹಾ… ಅದೊಂದು ಅದ್ಭುತ.ನೀವೂ ಒಮ್ಮೆ ಮಲೆನಾಡಿಗೆ ಭೇಟಿ ನೀಡಿ. ನಾವು ವಿದ್ಯಾರ್ಥಿಗಳಾಗಿದ್ದಾಗ ನಮ್ಮ ಶಿಕ್ಷಕರು ಹೇಳುತ್ತಿದ್ದ ನೆನಪು, ನಮ್ಮದು ಕೃಷಿ ಪ್ರಧಾನ ದೇಶವಾಗಿದ್ದು ಶೇ.70ರಷ್ಟು ಜನ ಕೃಷಿಯನ್ನೇ ಅವಲಂಬಿಸಿಕೊಂಡಿದ್ದಾರೆ ಅಂತ. ಆಗ ಹೊಟ್ಟೆ ತುಂಬಿಸಿಕೊಳ್ಳಲು, ಬದುಕಲು ಅನ್ನ ಬೆಳೆಯುತ್ತಿದ್ದರು. ಆದರೆ ಈಗ ಸನ್ನಿವೇಶ ಬದಲಾಗಿದೆ.
ಹೊಸ ತಾಂತ್ರಿಕತೆಯಿಂದಾಗಿ ಹಣ ಮಾಡೋಕೆ ಅನ್ನವನ್ನು ಬೆಳೆಯುತ್ತಿದ್ದಾನೆ. ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಸ್ವಾತಂತ್ರ್ಯಾ ನಂತರದ ಹಲವು ವರ್ಷಗಳಲ್ಲಿ ಸಾಂಪ್ರದಾಯಿಕ ಕೃಷಿ ಪದ್ಧತಿಗಳು ಹಾಗೂ ದೇಶೀ ಬೀಜಗಳನ್ನು ಬಳಸಲಾಗುತ್ತಿತ್ತು. ಒಮ್ಮೆ ಬೀಜವನ್ನು ಬಿತ್ತನೆ ಮಾಡಿದರೆ ಹಲವು ವರ್ಷಗಳವರೆಗೆ ಅದೇ ಬೀಜವನ್ನೇ ಪುನಃ ಪುನಃ ಬಳಸಲಾಗುತ್ತಿತ್ತು. ಇದರಿಂದಾಗಿ ಕೃಷಿಯಲ್ಲಿ ನಾವು ನಿರೀಕ್ಷಿಸಿದಷ್ಟು ಬದಲಾವಣೆ ಕಾಣಲಾಗುತ್ತಿರಲಿಲ್ಲ. ಕೃಷಿ ವೆಚ್ಚಕ್ಕೆ ಹೋಲಿಸಿದರೆ ಬರುವ ಇಳುವರಿ ಲಾಭ ದಾಯಕವಾಗಿರಲಿಲ್ಲ. ಹಾಗಾಗಿ ಕೃಷಿ ಲಾಭದಾಯಕ ಉದ್ಯೋಗವಾಗಿ ಉಳಿದುಕೊಂಡಿರಲಿಲ್ಲ.
ಇದರ ಜತೆಗೆ ನೀರಾವರಿಯ ಸೌಲಭ್ಯವೂ ಈಗಿನಂತಿರಲಿಲ್ಲ. ಬಹುತೇಕ ಕೃಷಿಯು ಮಳೆಯನ್ನೇ ಆಧಾರ ಮಾಡಿಕೊಂಡಿರುತ್ತಿತ್ತು. ಹಾಗಂತ ಕೃಷಿಯಲ್ಲಿ ಲಾಭ ಇಲ್ಲ ಅಂತ ನಮ್ಮ ಪೂರ್ವಜರು ನಗರಗಳಿಗೂ ವಲಸೆ ಹೋಗಿರಲಿಲ್ಲ. ಅಷ್ಟೇ ಯಾಕೆ? ಇವರಿಗೆ ನಗರದ ವಾತಾವರಣ ಒಗ್ಗುತ್ತಲೂ ಇರಲಿಲ್ಲ. ನಷ್ಟವೆನಿಸಿದರೂ ಸಾವಿರಾರು ವರ್ಷಗಳ ಇತಿ ಹಾಸವಿರುವ ಕೃಷಿಯನ್ನೇ ಅವಲಂಬಿಸಿಕೊಂಡು ಬರುತ್ತಿದ್ದರು. ಆಗ ಪ್ರತಿ ಗ್ರಾಮದಲ್ಲೂ ಎಮ್ಮೆ, ಎತ್ತು, ಕುರಿ, ಕೋಳಿ ಇಲ್ಲದ ಮನೆಗಳಿರಲಿಲ್ಲ. ಅದಕ್ಕಾಗಿಯೇ ಸರ್ವಜ್ಞ, ‘ಒಕ್ಕಲಿಲ್ಲದ ಊರು, ಮಕ್ಕಳಿಲ್ಲದಾ ಮನೆ, ಲೆಕ್ಕವಿಲ್ಲದವನ ಬೇಹಾರ ಈ ಮೂರು ದುಃಖ ಕಾಣಯ್ಯಾ’ ಅಂತ ಹೇಳಿದ್ದ.ನಂತರ ಬದಲಾದ ಸನ್ನಿವೇಶದಲ್ಲಿ, ಸರಕಾರ ಅನೇಕ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದು ಕೃಷಿಗೆ ಒಂದಿಷ್ಟು ಚೈತನ್ಯವನ್ನು ನೀಡುವ ಕಾರ್ಯವನ್ನು ಪ್ರಾರಂಭಿಸಿ ಮುಂದುವರಿದ ಭಾಗವಾಗಿ ಈಗ ಅನೇಕ ಸಂಶೋಧನೆಗಳು, ಆವಿಷ್ಕಾರಗಳು ನಡೆದು ಹಲವು ಅಧಿಕ ಇಳುವರಿಯ ತಳಿಗಳು ಸೃಷ್ಟಿಯಾಗಿವೆ.
ನಮ್ಮ ಕೃಷಿ ವಿಶ್ವವಿದ್ಯಾಲಯಗಳ ನಿರಂತರ ಪರಿಶ್ರಮದಿಂದಾಗಿ ಹಲವು ಜಿಲ್ಲೆಗಳಲ್ಲಿ ಅದ್ಭುತ ಕೃಷಿ ಇಳುವರಿ ದೊರೆಯುವಂತಾಗಿದೆ. ಕೃಷಿ ತಾಂತ್ರಿಕತೆಯಲ್ಲಿಯೂ ಈಗ ಹಿಂದೆ ಬೀಳುತ್ತಿಲ್ಲ. ಈಗಂತೂ ಹಲವು ಕೃಷಿ ಯಂತ್ರೋಪಕರಣಗಳಿಂದಾಗಿ ರೈತನ ಅಧಿಕ ದೈಹಿಕ ಶ್ರಮವೂ ಬೇಕಾಗಿಲ್ಲ. ಉಳುಮೆಯಿಂದ ಹಿಡಿದು ಬೆಳೆ ಒಕ್ಕುವುದರವರೆಗೆ ಕೃಷಿ ಕಾರ್ಮಿಕರ ಕೊರತೆ ನೀಗಿಸಲು ಯಂತ್ರಗಳ ಬಳಕೆಯಿಂದ ಭಾರತದಲ್ಲಿ ಸಾಕಷ್ಟು ಸುಧಾರಣೆಗಳು ಕಾಣುತ್ತಿದೆ.
ಒಮ್ಮೆ ವಿನಯ್ ಮೊಜುಂದಾರ್ ಎಂಬ ವ್ಯಕ್ತಿ ಶ್ರೀಗಂಧ ಬೆಳೆಯುವುದಕ್ಕಾಗಿ ಮಾಹಿತಿ ಕೊಡಿ ಎಂದು ಬಂದಿದ್ದ. ನಂತರ ನನ್ನ ಪರಿಚಿತರಾಗಿದ್ದ ಇಸ್ಕಾನ್ ಟೆಂಪಲ್‌ನ ಗುರೂಜಿಗಳಿಂದ ಮಾತನಾಡಿಸಿ, ಬೆಳಗಾವಿಯಲ್ಲಿದ್ದ ಅವರ ಜಮೀನಿಗೆ ಬರುವಂತೆ ಕೋರಿಕೊಂಡಿದ್ದ. ಸರಿ ಅಂತ ದಿನವೊಂದನ್ನು ಗೊತ್ತು ಮಾಡಿ ಬೆಳಗಾವಿಗೆ ಪ್ರಯಾಣ ಮಾಡಿದ್ದೆ. ಅವರ ಮನೆ ತಲುಪಲು ಸುಮಾರು೨೫ಕಿಲೋಮೀಟರ್ ಇದೆ ಅನ್ನುವಾಗ ಅಲ್ಲೊಂದು ಕಾರು ನಿಂತಿತ್ತು. ಅಲ್ಲಿಂದ ಅವರದ್ದೇ ಟಾಟಾ ಸುಮೋ ಕಾರಿನಲ್ಲಿ ನಮ್ಮನ್ನು ಕರೆದುಕೊಂಡು ಹೋದ ನೆನಪು. ಅತ್ಯಂತ ದುರ್ಗಮವಾಗಿದ್ದ ಬೆಟ್ಟಗುಡ್ಡಗಳಿಂದಾವೃತವಾದ ಕಡಿದಾದ ದಾರಿ ಅದಾಗಿತ್ತು. ಗಿಡಮರಗಳನ್ನು ತರಚಿ ಗಾಡಿ ಮುಂದೆ ಸಾಗುತ್ತಿತ್ತು. ಬರೀ ಕಾಡಾದ ಆ ಪ್ರದೇಶದಲ್ಲಿ ಕೃಷಿ ಭೂಮಿಯೇ ಕಾಣುತ್ತಿಲ್ಲ. ಆತ ಎಲ್ಲಿಗೆ ಕರೆದುಕೊಂಡು ಹೋಗು ತ್ತಿದ್ದಾನೆಂದೇ ತಿಳಿಯುತ್ತಿರಲಿಲ್ಲ.
ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ ಅಂತಲೂ ಕೇಳುವಂತಿರಲಿಲ್ಲ ಆ ಪರಿಸ್ಥಿತಿ. ಸುಮಾರು15ಕಿಲೋಮೀಟರ್ ಸಾಗಿದ ನಂತರ ವಾಹನ ನಿಂತಿತ್ತು. ಅಲ್ಲಿಯೇ ನಮ್ಮನ್ನು ಇಳಿಸಿ, ‘ಕ್ಷಮಿಸಿ ಮೇಡಂ. ಇಲ್ಲಿಂದ ಮುಂದೆ ನಮ್ಮ ವಾಹನ ಹೋಗುವುದಿಲ್ಲ’ವೆಂದು ಹೇಳಿ ಅಲ್ಲೇ ಮುಂದಿದ್ದ ಟ್ಯಾಕ್ಟರ್ ಹತ್ತಿಸಿದ. ‘ಯಾಕಾ ದರೂ ನಾನು ಇಸ್ಕಾನ್ ಸ್ವಾಮೀಜಿಗಳ ಮಾತನ್ನು ಕೇಳಿ ಇಲ್ಲಿ ಬಂದೆನಪ್ಪಾ ದೇವರೇ’ ಅಂತ ಅನಿಸುತ್ತಿದ್ದರೂ ಏನನ್ನೂ ಮಾಡುವ ಪರಿಸ್ಥಿತಿಯಲ್ಲಿರಲಿಲ್ಲ. ಸುಮಾರು೨ಕಿಲೋ ಮೀಟರ್ ಟ್ಯಾಕ್ಟರಿನಲ್ಲಿ ಪ್ರಯಾಣಿಸುತ್ತಿದ್ದಂತೆ ಅತ್ಯಂತ ಸುಂದರವಾದ ಕಾಡಿನಿಂದಾವೃತವಾದ ‘ಚಂದಗಡ’ದ ತುತ್ತತುದಿಯಲ್ಲಿದ್ದೇನೆಂದು ತಿಳಿದಿತ್ತು. ನಿಸರ್ಗದ ಸೊಬಗೇ ಅಂತಹದ್ದು.
ನಮ್ಮ ಕಷ್ಟಗಳನ್ನೂ ಮರೆಸುತೆ. ಆಸೆ ಆಕಾಂಕ್ಷೆಗಳು ಅಂತಹಾ ಪ್ರದೇಶದಲ್ಲಿ ಯಾವುದೂ ನೆನಪಿಗೆ ಬರುವುದಿಲ್ಲ. ಆ ಪ್ರದೇಶದಲ್ಲಿ ನನ್ನನ್ನು ಇಳಿಸಿ, ‘ಮೇಡಂ, ಇಲ್ಲಿ ಶ್ರೀಗಂಧ ಬೆಳೆಯಬೇಕೆಂದಿದ್ದೇನೆ. ಬೆಳೆಸಬಹುದಾ?’ ಎಂದು ಪ್ರಶ್ನಿಸಿದ್ದ. ಆ ದುರ್ಗಮ ರಸ್ತೆಯಲ್ಲಿ ಬರುತ್ತಿರುವಾಗಲೇ ಆತ ನಿಗೆ, ನೈಸರ್ಗಿಕವಾಗಿಯೇ ಬೆಳೆದಿರುವ ಶ್ರೀಗಂಧವನ್ನು ಆತನ ಗಮನಕ್ಕೆ ತಂದಿದ್ದೆ. ಅವನು ಪ್ರಶ್ನಿಸಿದಾಗ ‘ಈ ಪ್ರದೇಶಕ್ಕೆ ಬರಬೇಕೆಂದರೆ ಇಷ್ಟೊಂದು ಶ್ರಮ ಬೇಕಾಗುತ್ತೆ, ಇನ್ನು ಈ ಜಾಗದಲ್ಲಿ ಶ್ರೀಗಂಧ ವನ್ನು ಬೆಳೆಸಬೇಕಾದರೆ ಕೃಷಿ ಕಾರ್ಮಿಕರು ಹೇಗೆ ಬರುತ್ತಾರೆ?’ ಎಂದು ಕೇಳಿದ್ದೆ. ಅದಕ್ಕವನು, ‘ಮೇಡಂ ಈ ಭಾಗಗಳಲ್ಲಿ ನಮ್ಮ ಹೊಲಗಳ ಕೆಲಸಕ್ಕೆ ಪಾರ್ಟ್ ಟೈಂಗೆ ಜನರು ಸಿಗುತ್ತಾರೆ’ ಅಂತ ಹೇಳಿದ. ಆದರೆ ಅಷ್ಟಕ್ಕೇ ನಮ್ಮ ಮಾತು ನಿಲ್ಲಲಿಲ್ಲ.
ಮುಂದಿನ ಮಾತುಗಳನ್ನು ಕೇಳುತ್ತಿದ್ದಂತೆ ನಾನು ದಂಗಾಗಿಹೋಗಿದ್ದೆ. ಅಲ್ಲಿ ಸಿಗುವ ಪಾರ್ಟ್ ಟೈಂ ಕಾರ್ಮಿಕರೆಂದರೆ ಅವರೇನು ಸಾಮಾನ್ಯದವರಾಗಿರಲಿಲ್ಲ. ಅವರೆಲ್ಲರೂ ಬೆಳಗಾವಿ, ಗೋವಾದಲ್ಲಿ ಮೆಡಿಕಲ್ ಎಂಜಿನಿಯರಿಂಗ್, ಮ್ಯಾನೇeಮೆಂಟ್ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳಾಗಿದ್ದರು. ಹಣಕಾಸಿನ ತೊಂದರೆಗಾಗಿ ಊರಿಗೆ ಬಂದಾಗ ಕೃಷಿ ಕೆಲಸಗಳನ್ನು ಮಾಡಿ ಹಣ ಸಂಪಾದನೆ ಮಾಡಿಕೊಳ್ಳುತ್ತಿದ್ದರು. ಅದಾಗಲೇ ಈ ಪ್ರದೇಶ ದಿಂದ ಅನೇಕ ವೈದ್ಯರು, ಎಂಜಿನಿಯರುಗಳು ಹೊರಬಿದ್ದಿದ್ದಾರೆಂದು ತಿಳಿದು ಆಶ್ಚರ್ಯವಾಗಿತ್ತು.
ಓದಿಗಾಗಿ ಕಷ್ಟಪಟ್ಟು ಹಣಸಂಪಾದನೆ ಮಾಡುವವರನ್ನು ಮೊದಲ ಬಾರಿಗೆ ನೋಡಿ ತುಂಬಾ ಸಂತೋಷವಾಗಿತ್ತು. ಓದಿಗಾಗಿ ದುಡುಯುತ್ತಿರುವುದು ವಿಪರ್ಯಾಸ ವೆಂದು ಅನಿಸಿದ್ದೂ ಸುಳ್ಳಲ್ಲ. ಯಾವುದೇ ಫಲಾಪೇಕ್ಷೆಗಳಿಲ್ಲದೆ ಕೆಲಸ ಮಾಡುವ ಅನೇಕ ರಾಷ್ಟ್ರಮಟ್ಟದ ಸಂಘಟನೆಗಳಿವೆ. ಅವುಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವೂ ಒಂದು. ಇದರಲ್ಲಿ ಸಣ್ಣವರಿಂದ ಹಿಡಿದು ಪ್ರತಿಷ್ಠಿತ ಹುದ್ದೆಯಲ್ಲಿರುವಂತಹಾ ಮಹಿಳೆಯರೂ ದೇಶ ಸೇವೆಗೆ ತಮ್ಮ ಇತರ ಕಾರ್ಯಗಳ ಮಧ್ಯೆಯೂ ಕಾರ್ಯನಿರ್ವಹಿಸುತ್ತಾರೆ. ಇಂತಹಾ ಬಲಿಷ್ಠ ಸಂಘಟನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಕಾ ಮೇಡಂ ನನ್ನನ್ನೊಮ್ಮೆ ದೆಹಲಿಗೆ ಬರಲು ಸಕಲ ವ್ಯವಸ್ಥೆಗಳನ್ನೂ ಮಾಡಿದ್ದರು. ರಾಯಚೂರಿನಿಂದ ದೆಹಲಿಗೆ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಬಂದುಹೋಗುವ ವ್ಯವಸ್ಥೆಯನ್ನು ಮಾಡಿದ್ದರೂ ನಾವು ರೈಲ್ವೇ ಸ್ಟೇಶನ್ನಿಗೆ ಹೋಗು ವಷ್ಟರಲ್ಲಿ ಟ್ತೈನ್ ಹೋಗಿ ಎರಡು ನಿಮಿಷಗಳಾಗಿತ್ತು.
ಆಗ, ಅಲ್ಕಾ ಮೇಡಂಗೆ ಕರೆ ಮಾಡಿ ನಡೆದ ವಿಚಾರವನ್ನು ಹೇಳಿ ದಾಗ, ‘ತಪ್ಪಿದರೇನಂತೆ? ಹೈದಾರಾಬಾದಿನ ಮೂಲಕ ವಿಮಾನದಲ್ಲಿ ಬರಬಹುದಲ್ಲ!’ ಅಂತಹೇಳಿ ನಾವು ಹೈದರಾಬಾದಿಗೆ ಸಮೀಪಿಸುವ ಮೊದಲೇ ಎಲ್ಲ ತಯಾರಿಯನ್ನೂ ಮಾಡಿಯಾಗಿತ್ತು. ದೆಹಲಿಗೆ ಪ್ರಯಾಣ ಮಾಡಲು ಮಿಂಚಿನ ವೇಗದಲ್ಲಿ ನಮಗೆ ಆರ್‌ಎಸ್‌ಎಸ್ ಸಕಲ ಸಿದ್ಧತೆಗಳನ್ನೂ ಮಾಡಿತ್ತು. ದೆಹಲಿಯಲ್ಲಿ ಆರ್‌ಎಸ್‌ಎಸ್‌ನ ಬೃಹತ್ ಮಹಿಳಾ ಸಮಾವೇಶ ಅದಾಗಿತ್ತು. ಅಲ್ಲಿ ಬಂದಿದ್ದ ಹಲವು ಗಣ್ಯ ವ್ಯಕ್ತಿಗಳ ಪೈಕಿ ಮೋಹನ್ ಭಾಗವತರು ಒಬ್ಬರಾಗಿದ್ದು ಅವರನ್ನು ಭೇಟಿ ಮಾಡುವ ಅವಕಾಶ ನನಗೆ ಲಭಿಸಿದ್ದು ಸಂತೋಷವಾಗಿತ್ತು. ಅದೇ ಕಾರ್ಯಕ್ರಮದಲ್ಲಿ ನನಗೆ ‘ರಾಷ್ಟ್ರೀಯ ಪ್ರೇರಣಾ ದೀಪ್’ ಪ್ರಶಸ್ತಿ ಪ್ರಧಾನ ಮಾಡಿದ್ದರು. ಅಲ್ಲಿ ಹಲವು ರಾಜ್ಯಗಳ ಮಹಿಳಾ ರಾಜ್ಯಪಾಲರುಗಳನ್ನು ಭೇಟಿ ಮಾಡುವ ಅವಕಾಶ ನನಗೆ ದೊರೆತದ್ದು ಇದೇ ಮಣ್ಣಿನಿಂದಲೇ ಅಂತ ತಿಳಿದು ಇನ್ನೂ ಹೆಮ್ಮೆ ಯೆನಿಸಿತು.
ಒಮ್ಮೆ ಮುಂಬಯಿ ದೂರದರ್ಶನದಿಂದ ಮನವರ್ ಅಲಿಯವರಿಂದ ಕರೆ ಬಂದಿತ್ತು. ‘ಮೇಡಂ, ತಮ್ಮ ಜೀವನದ ಟೆಲಿ ಫಿಲ್ಮ್ ಮಾಡಲು ಮುಂಬಯಿ ದೂರದರ್ಶನ ಆಸಕ್ತಿ ಹೊಂದಿದೆಯೆಂದು ತಿಳಿಸಿ, ಇದಕ್ಕಾಗಿ ನಮ್ಮ ಕಲಾಕಾರರ ತಂಡದೊಂದಿಗೆ ಬರುವುದಾಗಿ ತಿಳಿಸಿದ್ದರು. ಅದರಂತೆ ಆ ತಂಡದ ನಿರ್ದೇಶರು, ತಾಂತ್ರಿಕಾ ತಜ್ಞರು, ಕ್ಯಾಮೆರಾಮನ್, ಕಲಾಕಾರರು ನಿಗದಿತ ಸಮಯಕ್ಕೆ ಬಂದಿದ್ದರು. ನನ್ನನ್ನು ಹೋಲುವ ಹುಡುಗಿಯೊಬ್ಬಳನ್ನು ಮಧ್ಯಪ್ರದೇಶದಿಂದ ಕರೆತಂದಿದ್ದರು. ಆಶ್ಚರ್ಯವೆಂದರೆ ಈ ಹುಡುಗಿಯನ್ನು ನನ್ನನ್ನು ಹೋಲುವ ಸುಮಾರು60ಜನರಲ್ಲಿ ಆಯ್ಕೆ ಮಾಡಲಾಗಿತ್ತು. ಹೆಚ್ಚುವರಿಯಾಗಿ ಸ್ಥಳೀಯ ಕಲಾವಿದರನ್ನೇ ಬಳಸಿಕೊಳ್ಳುವಂತೆ ಹೇಳಿದ್ದರಿಂದ ನಮ್ಮಲ್ಲಿಯೇ ಇರುವ ಕಲಾ ಪ್ರತಿಭೆ ಮಲಕೇಶ್ ಅವರನ್ನು ಪರಿಚಯಿಸಿದ್ದೆ. ಅವರು ಕಲಾವಿದರನ್ನು ಹುಡುಕಿ ಸ್ವತಃ ತಾವೂ ಒಂದು ಪಾತ್ರವನ್ನು ನಿರ್ವಹಿಸಿದ್ದರು.
ಕವಿತಾಳ ಊರಿನ ಸುತ್ತಮುತ್ತಲಿನ ಪ್ರದೇಶಗಳನ್ನು ಶೂಟಿಂಗ್ ಮಾಡಿ, ಶ್ರೀಗಂಧ ಬೆಳೆಯ ಬಗ್ಗೆ ಹೆಚ್ಚಿನ ಗಮನ ನೀಡಿದ್ದರಿಂದ ಟೆಲಿ ಫಿಲ್ಮ್ ಅದ್ಭುತವಾಗಿಮೂಡಿಬಂದಿತ್ತು. ನಂತರ ಈ ಟೆಲಿಫಿಲ್ಮ್ ‘ಚೋಲೋ ಆಸ್ಮಾನ್’ ಎಂಬ ಜನಪ್ರಿಯ ಕಾರ್ಯಕ್ರಮದಲ್ಲಿಯೂ ಮೂಡಿಬಂದಿತ್ತು. ದೇಶದ ಪ್ರತಿಭಾನ್ವಿತ ರೈತರನ್ನುಪರಿಚಯಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿತ್ತು.