ಜನಾದೇಶ ಪಡೆದ ಪ್ರಧಾನಿ ಬಗ್ಗೆ ನಿಮಗೇಕೆ ನಾಚಿಕೆ ?
ಅವಲೋಕನ
ಚಂದ್ರಶೇಖರ ಬೇರಿಕೆ
@.
ನ್ಯಾಯಾಲಯಗಳು ಇಷ್ಟೊಂದು ಒತ್ತಡಗಳನ್ನು ಎದುರಿಸುತ್ತಿರುವಾಗ ಹಾಗೂ ಅರ್ಹತೆಯುಳ್ಳ ಮತ್ತು ವಿಚಾರಣಾ ಯೋಗ್ಯ ಪ್ರಕರಣಗಳು ನ್ಯಾಯಾ ಲಯದಲ್ಲಿ ವಿಲೇವಾರಿಗೆ ಕಾಯುತ್ತಿರುವಾಗ ಪೀಟರ್ ಮ್ಯಾಲಿಪರಂಪಿಲ್ ಪ್ರಕರಣಗಳಂಥವು ಯಾರ ಹಿತಾಸಕ್ತಿ ಸಾಧನೆಗಾಗಿ ಮತ್ತು ಒಳಿತಿಗಾಗಿ ದಾಖಲಾಗುತ್ತವೋ?
ಇನ್ನೊಬ್ಬರಿಗೆ ಉಪಕಾರ ಮಾಡದಿದ್ದರೂ ಪರವಾಗಿಲ್ಲ, ಉಪದ್ರವ ಮಾಡಬಾರದು ಎಂಬೊಂದು ಮಾತಿದೆ. ಆದರೆ ಕೆಲ ವ್ಯಕ್ತಿಗಳ ನಡೆಗಳು ಇದಕ್ಕೆ ವ್ಯತಿ ರಿಕ್ತವಾಗಿರುತ್ತವೆ. ಇದು ಪ್ರಚಾರದ ಹುಚ್ಚೋ, ಜನರಲ್ಲಿ ನಕಾರಾತ್ಮಕ ಭಾವ ತುಂಬುವ ಪ್ರಯತ್ನವೋ ಅಥವಾ ರಾಜಕೀಯ ಕಾರಣಗಳೋ ಇರಬಹುದು.
ಒಟ್ಟಾರೆ ಇಂಥವು ಗೊಂದಲ ಸೃಷ್ಟಿಸುವುದಂತೂ ಹೌದು. ಕೋವಿಡ್ ಲಸಿಕೆ ಪ್ರಮಾಣಪತ್ರಗಳಲ್ಲಿ ಪ್ರಧಾನಿ ಮೋದಿ ಭಾವಚಿತ್ರ ಇರುವುದನ್ನು ಆಕ್ಷೇಪಿಸಿ ಕೇರಳ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಮನವಿ ಇದಕ್ಕೊಂದು ತಾಜಾ ನಿದರ್ಶನ. ಪೀಟರ್ ಮ್ಯಾಲಿಪರಂಪಿಲ್ ವಿರುದ್ಧ ಕೇಂದ್ರ ಸರಕಾರದ ಪ್ರಕರಣ ಇಡೀ ದೇಶದ ಗಮನ ಸೆಳೆದಿದೆ. ಅರ್ಜಿದಾರ ಕೇರಳದ ಕೊಟ್ಟಾಯಂ ನಿವಾಸಿ ಪೀಟರ್ ಮ್ಯಾಲಿಪರಂಪಿಲ್ ಅವರು ಕೇರಳ ಹೈಕೋರ್ಟ್‌ನಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಅರ್ಜಿ ಸಲ್ಲಿಸಿ, ಪ್ರಧಾನಿ ಮೋದಿ ಭಾವಚಿತ್ರವಿಲ್ಲದ ಕೋವಿಡ್ ಲಸಿಕೆ ಪ್ರಮಾಣಪತ್ರ ನೀಡುವಂತೆ ಕೋರಿದ್ದರು.
ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ನಾಯಕರ ಭಾವಚಿತ್ರವನ್ನು ಭಾರತದಲ್ಲಿ ಮಾತ್ರ ಕಾಣಬಹುದು. ಬೇರೆ ದೇಶಗಳ ಪ್ರಮಾಣಪತ್ರದಲ್ಲಿ ಲಸಿಕೆಯ ಮಾಹಿತಿ ಮಾತ್ರವೇ ಇರುತ್ತದೆ ಹೊರತು ಅಲ್ಲಿನ ನಾಯಕರ ಭಾವಚಿತ್ರ ಇರುವುದಿಲ್ಲ ಎಂದು ಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿ, ಪುರಾವೆ ಯಾಗಿ ಇಂಡೋನೇಷ್ಯಾ, ಇಸ್ರೇಲ, ಜರ್ಮನಿಯ ಲಸಿಕೆ ಪ್ರಮಾಣಪತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಕೋವಿಡ್ ಲಸಿಕೆ ಪಡೆದುಕೊಂಡವರಿಗೆ ಮೋದಿ ಭಾವಚಿತ್ರದ ಪ್ರಮಾಣಪತ್ರ ನೀಡುವುದರೊಂದಿಗೆ ರಾಷ್ಟ್ರೀಯ ಅಭಿಯಾನವನ್ನು ಅವರ ವೈಯಕ್ತಿಕ ಮಾಧ್ಯಮ ಅಭಿಯಾನ ವನ್ನಾಗಿ ಪರಿ ವರ್ತಿಸಲಾಗಿದೆ ಮತ್ತು ಕೇಂದ್ರ ಇದನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ ಎಂಬ ಅಂಶವನ್ನೂ ಕೋರ್ಟ್ ಗಮನಕ್ಕೆ ತಂದಿದ್ದರು.
ಮೋದಿ ಭಾವಚಿತ್ರವನ್ನೊಳಗೊಂಡ ಕೋವಿಡ್ ಲಸಿಕೆ ಪ್ರಮಾಣ ಪತ್ರಕ್ಕೆ ಈ ಮೊದಲು ಪ್ರತಿ ಪಕ್ಷಗಳೂ ಚಕಾರವೆತ್ತಿದ್ದವು ಎಂಬುದೂ ಉಲ್ಲೇಖನೀಯ.ಅರ್ಜಿ ಸಂಬಂಧ ಕೇರಳ ಹೈಕೋರ್ಟ್ ನೋಟಿಸ್ ಜಾರಿ ಮಾಡಿ ಇದಕ್ಕೆ ಉತ್ತರಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿ ಸಿತ್ತು. ಇದಕ್ಕೆ ಉತ್ತರಿಸಿದ ಕೇಂದ್ರ ಸರಕಾರ, ಕೋವಿಡ್ ವಿರುದ್ಧ ಜನ ಜಾಗೃತಿ ಮೂಡಿಸಲು ಮತ್ತು ಜಾಗೃತಿ ಮೂಡಿಸುವಲ್ಲಿ ಮೋದಿ ಪಾತ್ರ ಪ್ರಮುಖವಾದದ್ದು. ಪ್ರಧಾನಿ ಭಾವಚಿತ್ರ ವಿರುವ ಪ್ರಮಾಣಪತ್ರದಿಂದ ಯಾವುದೇ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗುವುದಿಲ್ಲ ಮತ್ತು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಅರ್ಹವಲ್ಲದ, ಪ್ರಚಾರ ಹಿತಾಸಕ್ತಿಯನ್ನು ಒಳಗೊಂಡಿದೆ ಎಂದಿತ್ತು.
ಡಿಸೆಂಬರ್ ೧೩ರಂದು ಪ್ರಕರಣವನ್ನು ಮತ್ತೆ ವಿಚಾರಣೆಗೆ ಕೈಗೆತ್ತಿಕೊಂಡ ಕೇರಳ ಹೈಕೋರ್ಟ್ ಸದರಿ ಅರ್ಜಿದಾರರನ್ನು ಬಹಳ ಮಾರ್ಮಿಕವಾಗಿ ಪ್ರಶ್ನಿಸಿತ್ತು. ‘ಪ್ರಮಾಣಪತ್ರದಲ್ಲಿ ಪ್ರಧಾನಿ ಭಾವಚಿತ್ರ ಹಾಕಿರುವುದರಿಂದ ನಿಮಗೇನು ತೊಂದರೆ? ನೀವೇಕೆ ಪ್ರಧಾನಿಯವರ ಬಗ್ಗೆ ನಾಚಿಕೆಪಡುತ್ತೀರಿ? ಮೋದಿ ನಮ್ಮ ದೇಶದ ಪ್ರಧಾನಿಯೇ ಹೊರತು ಅಮೆರಿಕದ ಪ್ರಧಾನಿಯಲ್ಲ. ಜನಾದೇಶದಿಂದಲೇ ಮೋದಿ ಯವರು ಅಧಿಕಾರ ಹಿಡಿದಿದ್ದಾರೆಯೇ ಹೊರತು ಅನ್ಯ ಮಾರ್ಗಗಳಿಂದಲ್ಲ. ಹೀಗಾಗಿ ಅವರ ಭಾವಚಿತ್ರವನ್ನು ಲಸಿಕೆ ಪ್ರಮಾಣ ಪತ್ರದಲ್ಲಿ ಹಾಕುವುದರಲ್ಲಿ ತಪ್ಪೇನಿದೆ ಎಂಬುದು ಅರ್ಥ ವಾಗುತ್ತಿಲ್ಲ? ನಮ್ಮ ರಾಜಕೀಯ ದೃಷ್ಟಿಕೋನಗಳು ವಿಭಿನ್ನವಾಗಿರಬಹುದು, ಆದರೆ ಅವರು ಇನ್ನೂ ಈ ದೇಶದ ಪ್ರಧಾನಿ ಎಂಬ ಅಂಶವನ್ನು ಅಲ್ಲ ಗಳೆಯುವಂತಿಲ್ಲ.
ಈಗಾಗಲೇ ಲಸಿಕೆ ಪಡೆದ 100 ಕೋಟಿ ಜನರಿಗೆ ಇದರ ಬಗ್ಗೆ ಯಾವುದೇ ಸಮಸ್ಯೆ ಇದ್ದಂತಿಲ್ಲ. ಹಾಗಾದರೆ ನಿಮಗೇಕೆ? ನೀವು ನ್ಯಾಯಾಂಗದ ಸಮಯ ವನ್ನು ಅನಗತ್ಯ ವ್ಯರ್ಥ ಮಾಡುತ್ತಿದ್ದೀರಿ’ ಎಂದು ಅಭಿಪ್ರಾಯಪಟ್ಟಿತ್ತು. ಬೇರೆ ದೇಶಗಳಲ್ಲಿ ಕೋವಿಡ್ ಲಸಿಕೆ ಪ್ರಮಾಣ ಪತ್ರದಲ್ಲಿ ಆ ದೇಶದನಾಯಕರ ಭಾವಚಿತ್ರವಿರುವುದಿಲ್ಲ ಎಂಬ ಅರ್ಜಿದಾರರ ವಾದಕ್ಕೆ ‘ಆ ದೇಶದವರು ತಮ್ಮ ಪ್ರಧಾನಿಯ ಬಗ್ಗೆ ಹೆಮ್ಮೆ ಪಡುತ್ತಿಲ್ಲ. ನಮ್ಮ ದೇಶದ ಪ್ರಧಾನಿ ಬಗ್ಗೆ ನಮಗೆ ಹೆಮ್ಮೆ ಯಿದೆ’ ಎಂದು ನ್ಯಾಯಾಲಯ ಪ್ರತಿಕ್ರಿಯಿಸಿತ್ತು.
ಅರ್ಜಿ ದಾರರು ದೆಹಲಿಯ ಜವಾಹರಲಾಲ್ ನೆಹರು ಇನ್ಸ್‌ಟಿಟ್ಯೂ ಟ್‌ನ ಅಧೀನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಎಂಬುದನ್ನು ಗಮನಿಸಿದ ನ್ಯಾಯಾಲಯ, ನೀವು ಕೆಲಸ ಮಾಡುತ್ತಿದ್ದ ಸಂಸ್ಥೆಯಿಂದ ನೆಹರು ಹೆಸರನ್ನು ತೆಗೆದು ಹಾಕುವ ನಿಲುವನ್ನು ನೀವೇಕೆ ತೆಗೆದುಕೊಳ್ಳುತ್ತಿಲ್ಲ? ಎಂದುಸಂದರ್ಭೋಚಿತವಾಗಿ ಮರು ಪ್ರಶ್ನೆ ಹಾಕಿತ್ತು. ಪ್ರಕರಣ ಅರ್ಜಿದಾರರ ವಿಚಿತ್ರ ಮಾನಸಿಕತೆ, ವಿತಂಡವಾದ ಮತ್ತು ಇಬ್ಬಗೆತನವನ್ನು ಸೂಚಿಸುತ್ತದೆ. ಅರ್ಜಿದಾರರೇ ಕೆಲಸ ಮಾಡುತ್ತಿದ್ದ ಸರಕಾರಿ ಅಧೀನದ ಶಿಕ್ಷಣ ಸಂಸ್ಥೆಗೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಹೆಸರನ್ನಿಟ್ಟಿರುವ ಬಗ್ಗೆ ಅರ್ಜಿ ದಾರರಿಗೆ ಯಾವುದೇ ತಕರಾರು ಇಲ್ಲ.
ಆದರೆ ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿರುವ ಹಾಲಿ ಪ್ರಧಾನಿ ಮೋದಿ ಭಾವಚಿತ್ರಕ್ಕೆ ಆಕ್ಷೇಪಣೆ ಸಲ್ಲಿಸುತ್ತಾರೆ. ಅರ್ಜಿದಾರರು ನಿಜವಾಗಿಯೂ ಸಾರ್ವಜನಿಕರ ಹಿತಾಸಕ್ತಿಗಾಗಿ ಹೋರಾಡುವವರಾಗಿದ್ದರೆ ಎಲ್ಲ ರಾಜಕೀಯ ಪಕ್ಷಗಳು ಮತ್ತು ಅದರ ನಾಯಕರ ಬಗ್ಗೆ ತಟಸ್ಥ ನಿಲುವು ಹೊಂದಿರಬೇಕಲ್ಲವೇ? ಆದರೆ ಮಾಜಿ ಮತ್ತು ಹಾಲಿ ಪ್ರಧಾನಿಗಳ ವಿಷಯದಲ್ಲಿ ಅರ್ಜಿದಾರರ ಈ ಬಗೆಯ ತಾರತಮ್ಯ ಮತ್ತು ತದ್ವಿರುದ್ಧ ನಿಲುವುಗಳು ಅರ್ಜಿದಾರರ ಸಂಕುಚಿತ ಮನೋಭಾವವನ್ನು ಸೂಚಿಸುತ್ತದೆ. ಹಾಗೆಯೇ ಅರ್ಜಿದಾರರು ಕೇರಳ ಹೈಕೋರ್ಟ್‌ಗೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ರಾಜ ಕೀಯ ಅಥವಾ ಭಿನ್ನ ಸೈದ್ಧಾಂತಿಕ ವಿಚಾರಧಾರೆಗಳ ನೆಲೆಗಟ್ಟಿನ ಹಿನ್ನೆಲೆಯಲ್ಲಿ ಹೂಡಿದ ಪ್ರಕರಣ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಈ ದೇಶದಲ್ಲಿ 100ಕ್ಕೂ ಹೆಚ್ಚು ವಿಶ್ವವಿದ್ಯಾಲಯ ಮತ್ತು ವಿದ್ಯಾಸಂಸ್ಥೆಗಳು, ೨೦ಕ್ಕೂ ಹೆಚ್ಚು ಕೇಂದ್ರದ ಯೋಜನೆಗಳು,೧೦೦ಕ್ಕೂ ಹೆಚ್ಚು ರಾಜ್ಯ ಸರಕಾರಿ ಪ್ರಾಯೋಜಿತ ಯೋಜನೆಗಳಿಗೆ ನೆಹರು ಪರಿವಾರದವರ ಹೆಸರನ್ನಿಡಲಾಗಿದೆ.
30ಕ್ಕೂ ಹೆಚ್ಚು ಕ್ರೀಡಾ ಪಂದ್ಯಾವಳಿ ಮತ್ತು 20 ಪ್ರಸಿದ್ಧ ಕ್ರೀಡಾಂಗಣ ಗಳು, 15ಕ್ಕೂ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು, 40ಕ್ಕೂ ಹೆಚ್ಚು ಆಸ್ಪತ್ರೆ ಮತ್ತು ವೈದ್ಯಕೀಯ ಸಂಸ್ಥೆಗಳು, ವಿದ್ಯುತ್ ಸ್ಥಾವರಗಳು, ಹತ್ತಾರು ವಿಮಾನ ನಿಲ್ದಾಣಗಳು, ಬಂದರುಗಳು, ಮೆಟ್ರೋ ಸ್ಟೇಷನ್‌ಗಳು, 100ಕ್ಕೂ ಹೆಚ್ಚು ರಸ್ತೆಗಳು, ಕಟ್ಟಡಗಳು, ಸ್ಮಾರಕಗಳು, ಟ್ರಸ್ಟ್‌ಗಳು, ಸ್ಥಳಗಳು ಮತ್ತು ಅಧ್ಯಯನ ಪೀಠಗಳಿಗೆ ನೆಹರು ಪರಿವಾರದವರ ಹೆಸರನ್ನಿಡಲಾಗಿದೆ. ಅಲ್ಲದೇ 50ಕ್ಕೂ ಹೆಚ್ಚು ಪ್ರಶಸ್ತಿಗಳು, 25ಕ್ಕೂ ಹೆಚ್ಚು ವಿದ್ಯಾರ್ಥಿ ವೇತನಗಳು ಈ ಪರಿವಾರದ ವ್ಯಕ್ತಿಗಳ ಹೆಸರಿನಲ್ಲಿ ಕೊಡಲಾಗುತ್ತದೆ.
ಒಂದು ಅಂದಾಜಿನ ಪ್ರಕಾರ ಸರಿ ಸುಮಾರು ೫೦೦ಕ್ಕೂ ಹೆಚ್ಚು ಯೋಜನೆಗಳು, ಕಾರ‍್ಯಕ್ರಮಗಳು, ಸ್ಥಳನಾಮಗಳು, ಪ್ರಶಸ್ತಿಗಳು, ಇತ್ಯಾದಿ ಇತ್ಯಾದಿಗಳು ನೆಹರು ಪರಿವಾರದವರ ಹೆಸರಿನಲ್ಲಿ ಊರ್ಜಿತದಲ್ಲಿದೆ. ಇವೆಲ್ಲವೂ ಸಾರ್ವಜನಿಕರ ತೆರಿಗೆ ವ್ಯಾಪ್ತಿಗೆ ಒಳಪಟ್ಟವುಗಳು. ಇವುಗಳ ಬಗ್ಗೆಯೂ ಮೃದು ಧೋರಣೆಯ ಬದಲಾಗಿ ಗಂಭೀರ ಚಿಂತನೆ ನಡೆಯಬೇಕಲ್ಲವೇ? ಸುಮಾರು 140 ಕೋಟಿ ಜನಸಂಖ್ಯಾ ಬಾಹುಳ್ಯದ ಭಾರತದಲ್ಲಿ 100 ಕೋಟಿಗಿಂತಲೂ ಹೆಚ್ಚು ಜನರಿಗೆ ಲಸಿಕೆ ನೀಡಿ ಒಂದು ಐತಿಹಾಸಿಕ ಸಾಧನೆಯನ್ನು ಮಾಡಿದ ಭಾರತದ ಬಗ್ಗೆ ಇತ್ತೀಚೆಗೆ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಮುಕ್ತಕಂಠದಿಂದ ಪ್ರಶಂಸಿಸಿ ಭಾರತ ಇಡೀ ವಿಶ್ವಕ್ಕೆ ಮಾದರಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಎದುರಿಸುವಲ್ಲಿ ಭಾರತ ತೋರಿದ ಬದ್ಧತೆಯು ಜಾಗತಿಕ ಗಮನ ಸೆಳೆದಿದೆ. ಕಡಿಮೆ ಜನಸಂಖ್ಯೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ತೀರಾ ಮುಂದು ವರಿದ ರಾಷ್ಟ್ರಗಳಿಗೂ ಮಾಡಲಾಗದ ಸಾಧನೆ ಮಾಡಿ ಜಾಗತಿಕವಾಗಿ ಭಾರತ ಮಾದರಿ ರಾಷ್ಟ್ರ ಎಂದು ಗುರುತಿಸಿಕೊಂಡಿದೆ. ಭಾರತದಲ್ಲಿ ಕೋವಿಡ್ ಲಸಿಕೆಯ ಅಭಿಯಾನದಲ್ಲಿ ದಿನವೊಂದಕ್ಕೆ 10 ಮಿಲಿಯನ್‌ಗಿಂತಲೂ ಹೆಚ್ಚು ಜನರಿಗೆ ಲಸಿಕೆ ಕೊಟ್ಟಿದ್ದು ಏನು ಕಡಿಮೆ ಸಾಧನೆಯೇ? ಈ ಸಾಧನೆಯ ಹಿಂದಿರುವ ಶಕ್ತಿ ಯಾವುದು? ಭಾರತದ ಈ ಸಾಧನೆಯಲ್ಲಿ ಪ್ರಧಾನಿ ಮೋದಿ ಪಾತ್ರ ಮಹತ್ವದ್ದು. ಜನರಿಗೆ ಲಸಿಕೆ ನೀಡುವಲ್ಲಿ ಅವರು ವಹಿಸಿದ ಕಾಳಜಿ ಅನನ್ಯ.
ಆದರೆ ಭಾರತದ ಸಾಧನೆಯನ್ನು ಮತ್ತು ಅದರ ಹಿಂದಿರುವ ಶಕ್ತಿಯ ಶ್ರಮದ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸುವುದನ್ನು ಬಿಟ್ಟು ಜನರಲ್ಲಿ ನಕಾರಾತ್ಮಕ ಚಿಂತನೆಗಳನ್ನು ಹುಟ್ಟು ಹಾಕುವ ಇಂತಹ ಪ್ರಯತ್ನಕ್ಕೆ ಏನೆನ್ನಬೇಕು? ದೇಹಕ್ಕೆ ಅಂಟಿದ ರೋಗವನ್ನು ಗುಣಪಡಿಸಬಹುದು. ಆದರೆ ರೋಗಗ್ರಸ್ಥ ಮೆದುಳನ್ನು ಗುಣಪಡಿಸುವುದು ಅಸಾಧ್ಯ. ಪೀಟರ್ ಮ್ಯಾಲಿಪರಂಪಿಲ್ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ‘ನೀವು ನ್ಯಾಯಾಂಗದ ಸಮಯ ವ್ಯರ್ಥ ಮಾಡುತ್ತಿದ್ದೀರಿ’ ಎಂದು ಹೇಳಿದ್ದು ಸರಿಯಾಗಿಯೇ ಇದೆ. ಭಾರತದ ನ್ಯಾಯಾಲಯಗಳಲ್ಲಿ ಕೋಟ್ಯಂತರ ಪ್ರಕರಣಗಳು ವಿಚಾರಣೆ ಪ್ರಕ್ರಿಯೆಯಲ್ಲಿ ಕೊಳೆಯುತ್ತಿದೆ. ಪ್ರಕರಣಗಳ ಇತ್ಯರ್ಥಪಡಿಸುವಲ್ಲಿ ನ್ಯಾಯಾಲಯಗಳು ಎದುರಿಸುತ್ತಿರುವ ಒತ್ತಡಗಳಿಂದ ಅದೆಷ್ಟೋ ಪ್ರಕರಣಗಳು, ನಿರಪರಾಧಿಗಳು ಮತ್ತು ನ್ಯಾಯಕ್ಕಾಗಿ ನ್ಯಾಯಾಲಯದ ಕದ ತಟ್ಟಿದ ವರು ಹಲವು ವರ್ಷಗಳಿಂದ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ಸರಿಸುಮಾರು ೭೦ ಸಾವಿರ ಪ್ರಕರಣಗಳು ವಿಲೇವಾರಿಗೆ ಬಾಕಿಯಿದ್ದರೆ, ಸುಮಾರು 44 ಮಿಲಿಯನ್ ಪ್ರಕರಣಗಳು ಭಾರತದ ಹೈಕೋರ್ಟ್ ಮತ್ತು ಇತರೆ ಕೋರ್ಟ್‌ಗಳಲ್ಲಿ ವಿಲೇವಾರಿಗೆ ಬಾಕಿಯಿದೆ. ಅಂತೆಯೇ ಸರಿಸುಮಾರು 1 ಲಕ್ಷಕ್ಕಿಂತಲೂ ಹೆಚ್ಚು ಪ್ರಕರಣಗಳು ಕಳೆದ30 ವರ್ಷಗಳಿಂದ ಭಾರತದ ಕೋರ್ಟ್‌ಗಳಲ್ಲಿ ವಿಚಾರಣೆ ಹಂತದ ಇದೆ. ಕೋರ್ಟ್ ಗಳಲ್ಲಿ ಬಾಕಿಯಿರುವ ರಾಶಿ ಪ್ರಕರಣಗಳ ಪೈಕಿ ಅದೆಷ್ಟೋ ಪ್ರಕರಣಗಳು ಮಹತ್ವವಲ್ಲದ, ವಿಚಾರಣೆಗೆ ಯೋಗ್ಯವಲ್ಲದ ಮತ್ತು ಅನಗತ್ಯ ಕಾಲಹರಣ ಮಾಡಿ ನ್ಯಾಯಾಲಯದ ಅಮೂಲ್ಯ ಸಮಯ ವ್ಯರ್ಥಮಾಡುವಂತಹ ಪ್ರಕರಣಗಳೂ ಇವೆ ಎಂಬುದನ್ನು ಗಮನಿಸಬೇಕು.
ಕೋರ್ಟ್ ಪ್ರಕರಣಗಳ ವಿಲೇವಾರಿ ವಿಳಂಬಕ್ಕೆ ಹಲವಾರು ಕಾರಣಗಳಿರಬಹುದು. ಅದರಲ್ಲಿ ಮುಖ್ಯವಾಗಿ ದಾಖಲಾಗುವ ಪ್ರಕರಣಗಳ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ ಮತ್ತು ಅದಕ್ಕೆ ಅನುಗುಣವಾಗಿ ನ್ಯಾಯಾಲಯಗಳಲ್ಲಿ ನ್ಯಾಯಾಽಶರು ಮತ್ತು ಸಿಬ್ಬಂದಿ ನೇಮಕವಾಗದೇ ಇರುವುದೂ ಆಗಿದೆ.
ನ್ಯಾಯಾಲಯಗಳು ಇಷ್ಟೊಂದು ಒತ್ತಡಗಳನ್ನು ಎದುರಿಸುತ್ತಿರುವಾಗ ಹಾಗೂ ಅರ್ಹತೆಯುಳ್ಳ ಮತ್ತು ವಿಚಾರಣಾ ಯೋಗ್ಯ ಪ್ರಕರಣಗಳು ನ್ಯಾಯಾ ಲಯದಲ್ಲಿ ವಿಲೇವಾರಿಗೆ ಕಾಯುತ್ತಿರುವಾಗ ಪೀಟರ್ ಮ್ಯಾಲಿಪರಂಪಿಲ್ ಪ್ರಕರಣಗಳಂಥವು ಯಾರ ಹಿತಾಸಕ್ತಿ ಸಾಧನೆಗಾಗಿ ಮತ್ತು ಒಳಿತಿಗಾಗಿದಾಖಲಾಗುತ್ತವೋ? ಅರ್ಥವಾಗದು. ಇದರಿಂದ ವಿಲೇವಾರಿಯಾಗಬೇಕಾದ ಯೋಗ್ಯ ಪ್ರಕರಣಗಳ ಇತ್ಯರ್ಥ ವಿಳಂಬವಾಗಿ ಸಾರ್ವಜನಿಕರಿಗೆ ಅನ್ಯಾಯ ಮಾಡಿದಂತಲ್ಲವೇ? ಇಂತಹ ಪ್ರಕರಣಗಳನ್ನು ವಿಚಾರಣೆಯ ಆರಂಭಿಕ ಹಂತದ ವಜಾ ಮಾಡುವಂತಾದರೆ ಮಾತ್ರ ನ್ಯಾಯಕ್ಕಾಗಿ ಕದ ತಟ್ಟಿದ ಅರ್ಹ ಮತ್ತು ವಿಚಾರಣಾ ಯೋಗ್ಯ ಪ್ರಕರಣಗಳು ತ್ವರಿತವಾಗಿ ವಿಲೇವಾರಿಯಾದೀತು. ಏನಂತೀರಿ ?