ಹೆಮ್ಲಾಕ್‌, ವೃದ್ದಹತ್ಯೆ ಮತ್ತು ದಯಾಮರಣ
ಹಿಂದಿರುಗಿ ನೋಡಿದಾಗ
ಡಾ.ನಾ.ಸೋಮೇಶ್ವರ
ಪ್ರಾಚೀನ ಗ್ರೀಸ್ ನಾಗರಿಕ 60ರ ಆಸುಪಾಸಿಗೆ ಬರುತ್ತಿದ್ದ ಹಾಗೆ, ಅವರನ್ನು ದಂಡಪಿಂಡಗಳು ಎಂದು ಭಾವಿಸುತ್ತಿದ್ದರು. ಮಗ ಬಡಿಗೆಯಿಂದ ಹೊಡೆದು ಅಥವಾ ಬೆಟ್ಟದಿಂದ ಕೆಳಕ್ಕೆ ತಳ್ಳಿ ಕೊಲ್ಲಬೇಕಿತ್ತು. ಧೈರ್ಯವಿಲ್ಲದ ಮಕ್ಕಳು, ಹೆಮ್ಲಾಕ್ ನೀಡಿ ಅವರ ಬದುಕಿಗೆ ಮಂಗಳ ಹಾಡುತ್ತಿದ್ದರು.
ಕೆಲವು ಸಸ್ಯಗಳು ತಮ್ಮ ಆತ್ಮರಕ್ಷಣೆಗಾಗಿ ಹಲವು ವರ್ಗಗಳಿಗೆ ಸೇರಿದ ವಿಷವಸ್ತುಗಳನ್ನು ಸಂಗ್ರಹಿಸಿಟ್ಟು ಕೊಳ್ಳುವುದು ಸಾಮಾನ್ಯ. ಮನುಷ್ಯನು ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿ, ಈ ವಿಷವಸ್ತುಗಳನ್ನೇ ಔಷಧಗಳನ್ನಾಗಿ ಪರಿವರ್ತಿಸಿಕೊಂಡು, ತನ್ನ ಆರೋಗ್ಯವನ್ನು ಕಾಪಾಡಿಕೊಂಡು ಬಂದಿರು ವುದು ವೈದ್ಯಕೀಯ ವಿಜ್ಞಾನದ ಒಂದು ಪ್ರಮುಖಘಟ್ಟ. ಇಂತಹ ವಿಷವಸ್ತುಗಳಲ್ಲಿ ಅತ್ಯಂತ ಉಗ್ರವಾದದ್ದು ಹೆಮ್ಲಾಕ್.
ಹೆಮ್ಲಾಕ್, ಪಾಯ್ಸನ್ ಹೆಮ್ಲಾಕ್, ವೈಲ್ಡ್ ಹೆಮ್ಲಾಕ್ ಎಂದೆಲ್ಲ ಹೆಸರಾಗಿರುವ ಹೆಮ್ಲಾಕಿನ ವೈಜ್ಞಾನಿಕ ನಾಮ ಧೇಯವು ಕೋನಿಯಂ ಮ್ಯಾಕ್ಯುಲೇಟಮ್. ಕೋನಿಯಂ ಎಂದರೆ ಗ್ರೀಕ್ ಭಾಷೆಯಲ್ಲಿ ಸುತ್ತಿಸು, ಪರಿಭ್ರಮಿಸು, ಗಿರಿಗಿರಿ ಸುತ್ತು ಎಂದರ್ಥ. ಈ ಸಸ್ಯವನ್ನು ಅಕಸ್ಮಾತ್ ಸೇವಿಸಿದರೆ, ಮೊದಲು ಕಂಡು ಬರುವ ವಿಷ ಲಕ್ಷಣವೆಂದರೆ ತಲೆ ಸುತ್ತುವುದು. ಇದೊಂದು ದ್ವೆ ವಾರ್ಷಿಕ ಉಗ್ರ ವಿಷವನ್ನುಳ್ಳ ಕ್ಯಾರಟ್ ಗಿಡದ ವಂಶಕ್ಕೆ (ಏಪಿಯೇಸಿ) ಸೇರಿದ ಸಸ್ಯ. ಇದರ ತವರು ಯೂರೋಪ್ ಮತ್ತು ಉತ್ತರ ಆಫ್ರಿಕಾ. ವಾತಾವರಣ ವೈಪರೀತ್ಯವನ್ನು ಎದುರಿಸಿ ಬದುಕಬಲ್ಲ ಈ ಸಸ್ಯವು ಕ್ರಮೇಣ ಆಫ್ರಿಕದ ಇತರ ಭಾಗಗಳು, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ ಮತ್ತು ಆಸ್ಟ್ರೇಲಿಯ ಮುಂತಾದ ಖಂಡಗಳಿಗೆ ಹರಡಿತು.
5-12 ಅಡಿಗಳವರೆಗೆ ಬೆಳೆಯಬಲ್ಲ ಈ ಗಿಡದಲ್ಲಿ ಬಿಳಿಯ ಬಣ್ಣದ ಹೂವುಗಳು ಕಂಡುಬಂದು, ಅವು ಕಾಡು ಕ್ಯಾರಟ್ ಸಸ್ಯವನ್ನು ಹೋಲುತ್ತವೆ. ಹಾಗಾಗಿ ಸಸ್ಯಾಹಾರಿ ಪ್ರಾಣಿಗಳು ಅಪರೂಪಕ್ಕೆ ಭ್ರಮೆಗೊಳಗಾಗಿ ಹೆಮ್ಲಾಕ್ ಸಸ್ಯವನ್ನು ತಿಂದು ಸತ್ತ ಉದಾಹರಣೆ ಗಳು ಸಾಕಷ್ಟಿವೆ. ಹೆಮ್ಲಾಕ್ ಸಸ್ಯ ದಲ್ಲಿರುವ ಪ್ರಧಾನ ವಿಷದ ಹೆಸರು ಕೋನೈನ್. ಇದೊಂದು ಆಲ್ಕಲಾಯ್ಡ್ ಎನ್ನುವ ಗುಂಪಿಗೆ ಸೇರಿದ ರಾಸಾಯನಿಕ. 150-300 ಮಿ.ಗ್ರಾಂನಷ್ಟು ಕೋನೈನ್ ಒಬ್ಬ ವ್ಯಕ್ತಿಯನ್ನು ಸುಲುಭವಾಗಿ ಕೊಲ್ಲುತ್ತದೆ. ಅಂದರೆ ಹೆಮ್ಲಾಕ್ ಗಿಡದ 6-8 ಎಲೆಗಳನ್ನು ತಿಂದರೆ ಸಾಕು, ವ್ಯಕ್ತಿಯು ಸಾಯುವುದುಂಟು. ವಿಷವು ಹೆಮ್ಲಾಕ್ ಸಸ್ಯದ ಬೀಜಗಳಲ್ಲಿ ಹಾಗೂ ಬೇರಿನಲ್ಲಿ ಅಧಿಕ ಪ್ರಮಾಣದಲ್ಲಿ ಇರುವುದುಂಟು. ಹೆಮ್ಲಾಕ್ ಹೂವಿನ ಪರಾಗವು ಸಹ ವಿಷ ಲಕ್ಷಣಗಳನ್ನು ಬೀರಬಲ್ಲವು. ಈ ಸಸ್ಯವು ನಮ್ಮ ಚರ್ಮದ ಸಂಪರ್ಕಕ್ಕೆ ಬಂದರೂ ಸಾಕು, ತನ್ನ ವಿಷ ಪ್ರಭಾವವನ್ನು ತೋರ ಬಲ್ಲುದು. ಈ ಕೋನೈನ್ ದುಷ್ಪರಿಣಾಮವನ್ನು ನಿವಾರಿಸಬಲ್ಲ ಯಾವುದೇ ಪ್ರತಿವಿಷವಿಲ್ಲ.
ಹಾಗಾಗಿ ಈ ಗಿಡದ ಸಂಪರ್ಕಕ್ಕೆ ಬರದೇ ಇರುವಂತೆ ನೋಡಿಕೊಳ್ಳುವುದರಲ್ಲಿ ಬುದ್ಧಿವಂತಿಕೆಯಿದೆ. ಅಸ್ತಮ, ನಾಯಿಕೆಮ್ಮು, ಹೊಟ್ಟೆನೋವು, ಆತಂಕ ಮುಂತಾದ ಸಂದರ್ಭಗಳಲ್ಲಿ ಹೆಮ್ಲಾಕನ್ನು ಬಳಸಬಹುದು ಎಂದು ದಾಖಲೆಯಿದ್ದರೂ ಸಹ, ವೈದ್ಯರು ಹೆಮ್ಲಾಕಿನಿಂದ ದೂರವಿರಲು ಬಯಸುತ್ತಾರೆ.ಏಕೆಂದರೆ ಈ ಅನಾರೋಗ್ಯಗಳನ್ನು ಗುಣಪುಡಿಸಲು ಹೆಚ್ಚು ಪರಿಣಾಮಕಾರಿ ಹಾಗೂ ಸುರಕ್ಷಿತ ಔಷಧಗಳಿವೆ. ಹಾಗಾಗಿ ಮಾನವ ಇತಿಹಾಸದಲ್ಲಿ, ಒಬ್ಬರನ್ನು ಕೊಲ್ಲಲು ಮಾತ್ರ ಹೆಮ್ಲಾಕನ್ನು ಬಳಸುತ್ತಾ ಬಂದಿರುವುದನ್ನು ನೋಡಬಹುದು.
ಸಾಕ್ರಟಿಸ್ (ಕ್ರಿ.ಪೂ.470-399) ಮನುಕುಲವು ಕಂಡಂತಹ ಅತ್ಯಂತ ಪ್ರತಿಭಾಶಾಲಿಗಳಲ್ಲಿ ಒಬ್ಬ. ಪಾಶ್ಚಾತ್ಯ ತತ್ತ್ವಶಾಸದ ಜನಕ ಎಂಬ ಕೀರ್ತಿ ಈತನದು. ಈತನು ಗ್ರೀಸ್ ದೇಶದ ಅಥೆನ್ಸ್‌ನವನು. ಸಾಕ್ರಟಿಸ್ ಅತ್ಯಂತ ಪ್ರಭಾವಿ ಮಾತುಗಾರನಾಗಿದ್ದ. ಈತನ ವಾದವೈಖರಿಗೆ ಅಥೆನ್ಸ್ ಯುವಜನತೆಯು ಮಾರು ಹೋಗುತ್ತಿತ್ತು. ಸದಾ ಆತನ ಸುತ್ತಮುತ್ತಲೂ ಯುವಕರಿರುತ್ತಿದ್ದರು. ಸಾಕ್ರಟಿಸ್ ತನ್ನ ಸಿದ್ಧಾಂತಗಳನ್ನು ಮಂಡಿಸುವ ರೀತಿ ವಿಶಿಷ್ಠವಾಗಿರುತ್ತಿತ್ತು. ಆತ ಒಂದು ಪ್ರಶ್ನೆಯನ್ನು ಮುಂದಿಡುತ್ತಿದ್ದ. ಆ ಪ್ರಶ್ನೆಗೆ ಸರಿಯಾದ ಉತ್ತರವು ಏನಿರಬಹುದೆಂದು ಪ್ರತಿಯೊಬ್ಬರನ್ನೂ ಕೇಳುತ್ತಿದ್ದ.
ಅವರನ್ನು ಆಲೋಚಿಸುವಂತೆ ಮಾಡುತ್ತಿದ್ದ. ನಂತರ ತರ್ಕಬದ್ಧವಾಗಿ ವಿವರಿಸುತ್ತಿದ್ದ. ಅವನು ವಿಷಯವನ್ನು ಮಂಡಿಸುವ ವೈಖರಿಯು ಯುವ ಜನತೆಯಲ್ಲಿ ಪ್ರಿಯವಾಗಿ, ಆತನ ಚರ್ಚೆಗಳಲ್ಲಿ ಪಾಲುಗೊಳ್ಳಲು ಹೆಚ್ಚು ಹೆಚ್ಚು ಜನರು ಸೇರಲಾರಂಭಿಸಿದರು. ಇದನ್ನು ಅಥೆನ್ಸ್ ಸಮಾಜವು ಸಹಿಸಲಿಲ್ಲ. ಸಾಕ್ರಟಿಸ್ ಗ್ರೀಕ್ ದೇವತೆಗಳನ್ನು, ಗ್ರೀಕ್ ಸಂಪ್ರ ದಾಯಗಳನ್ನು ಅವಹೇಳನ ಮಾಡುತ್ತಾನೆ, ಯುವಜನತೆಯ ದಾರಿ ತಪ್ಪಿಸುತ್ತಿದ್ದಾನೆ ಎಂದು ಆರೋ ಪಿಸಿತು. ನಗರದ ಹಿರಿಯರು ವಿಚಾರಣೆಯನ್ನು ನಡೆಸಿದರು. ಸಾಕ್ರಟಿಸ್ ತಪ್ಪಿತಸ್ತ ಎಂದು ತೀರ್ಮಾನಿಸಿದರು. ಅವನಿಗೆ ಗಡಿಪಾರು ಅಥವಾ ಮರಣ ದಂಡನೆಯನ್ನು ವಿಧಿಸಿದರು.
ಸಾಕ್ರಟಿಸ್ ಮರಣದಂಡನೆಯನ್ನೇ ಸ್ವೀಕರಿಸಿದ. ಸಾಕ್ರಟಿಸನನ್ನು ಬಂದೀಖಾನೆಯಲ್ಲಿ ಇಟ್ಟರು. ಸಾಕ್ರಟಿಸನ ಶಿಷ್ಯರು ಅವನು ಬಂದೀಖಾನೆಯಿಂದ ತಪ್ಪಿಸಿಕೊಳ್ಳಲು ಅವಕಾಶವನ್ನು ಮಾಡಿಕೊಟ್ಟರೂ, ಸಾಕ್ರಟಿಸ್ ತಪ್ಪಿಸಿಕೊಂಡು ಹೋಗಲು ಇಷ್ಟ ಪಡಲಿಲ್ಲ. ಸಾಕ್ರಟಿಸ್ ನಗರದ ಗಣ್ಯನಾಗಿದ್ದ ಕಾರಣ, ಪುರ ಪಿತೃಗಳು ಅವನನ್ನು ಗೌರವದಿಂದ ನಡೆಸಿಕೊಂಡರು. ಸಾಕ್ರಟೀಸನಿಗೆ ತನ್ನ ಮರಣದಂಡನೆಯ ಮಾರ್ಗವನ್ನು ಆಯ್ದುಕೊಳ್ಳಲು ಅವನಿಗೇ  ಅವಕಾಶವನ್ನು ಮಾಡಿಕೊಟ್ಟರು. ಸಾಕ್ರಟಿಸ್ ಹೆಮ್ಲಾಕ್ ವಿಷವನ್ನು ಕುಡಿಯುವುದಾಗಿ ಘೋಷಿಸಿದ.
ಹೆಮ್ಲಾಕ್ ವಿಷವನ್ನು ಸೇವಿಸಿದ ಕೂಡಲೇ, ಇಡೀ ಶರೀರವು ನಡುಗಲಾರಂಭಿಸುತ್ತದೆ. ಹೊಟ್ಟೆಯಲ್ಲಿ ಬೆಂಕಿಯೂ ಬಿದ್ದ ಹಾಗೆ ಅಸಾಧ್ಯ ಉರಿಯ ಅನುಭವವಾಗುತ್ತದೆ. ಅಪ್ರಜ್ಞಾಪೂರ್ವಕವಾಗಿ ಜೊಲ್ಲು ಸೋರುತ್ತದೆ. ಪಾಪೆಗಳು ಅರಳುತ್ತವೆ. ಸ್ನಾಯುಗಳಲ್ಲಿ ಅಪಾರ ನೋವು ಕಾಣುತ್ತದೆ. ಸ್ನಾಯು ಗಳ ಶಕ್ತಿಯು ಉಡುಗಿ, ಒಂದೊಂದೇ ಸ್ನಾಯು ನಿಶ್ಚೇತವಾಗಲಾರಂಭಿಸುತ್ತವೆ. ಮಾತು ತೊದಲುತ್ತದೆ. ಸೆಳವು ಬರುತ್ತದೆ. ಉಸಿರಾಟಕ್ಕೆ ಬಂಧಿಸಿದ ಸ್ನಾಯುಗಳು ಜಡವಾದಾಗ, ಆಕ್ಸಿಜನ್ ಕೊರತೆಯಿಂದ ವ್ಯಕ್ತಿಯು ಕೋಮಕ್ಕೆ ಹೋಗುತ್ತಾನೆ.
ಕೋಮದಲ್ಲಿಯೇ ಸಾವು ಸದ್ದಿಲ್ಲದೆ ಬರುತ್ತದೆ. ಹೆಮ್ಲಾಕ್ ಸಾವು, ಸುಖಸಾವಲ್ಲ. ಅತ್ಯಂತ ನೋವಿನ ಹಾಗೂ ದಾರುಣ ಸಾವು. ಇಂತಹ ಸಾವನ್ನು ಸಾಕ್ರಟಿಸ್ ಆಯ್ದುಕೊಂಡ. ಸಾಕ್ರಟಿಸ್ ಹೆಮ್ಲಾಕ್ ಸೇವಿಸಿ ತನ್ನ ಜೀವವನ್ನು ಬಿಡುವ ಕ್ಷಣದಲ್ಲಿ, ಆತನ ಪ್ರಿಯಶಿಷ್ಯನಾದ ಪ್ಲೇಟೋ ಅಲ್ಲಿದ್ದ. ಅವನು ತನ್ನ ಫೀಡೋ ಸಂವಾದದಲ್ಲಿ ಈ ಬಗ್ಗೆ ದಾಖಲಿಸಿ ದ್ದಾನೆ. ಸಾಕ್ರಟಿಸ್ ವಿಷವನ್ನು ಕುಡಿಯುವಾಗ, ಆತನ ಶಿಷ್ಯರೆಲ್ಲ ಅಲ್ಲಿ ನೆರೆದಿದ್ದರು. ಸಾಕ್ರಟಿಸ್ ಮಾತನಾಡುತ್ತಲೇ ಇದ್ದ. ಸಾವು ಆತನ ಪಾದಗಳಲ್ಲಿ ಆರಂಭವಾಗಿತ್ತು. ಪಾದಗಳ ಸ್ನಾಯುಗಳು ಜಡವಾಗಿ ತಣ್ಣಗಾದವು. ಜಡತೆ ಕ್ರಮೇಣ ಶರೀರದ ಮೇಲಿನ ಭಾಗಕ್ಕೆ ವ್ಯಾಪಿಸತೊಡಗಿತು. ಸಾಕ್ರಟಿಸ್ ತನ್ನ ಶಿಷ್ಯನಾದ ಕ್ರೀಟೋವಿಗೆ ಕ್ರೀಟೋ… ನಾವು ಆಸ್ಕ್ಲೆಪಿಯಸ್ ದೈವಕ್ಕೆ ಒಂದು ಕೋಳಿಯನ್ನು ಕೊಡಬೇಕಿದೆ.
ಮರೆಯದೆ ಕೊಟ್ಟುಬಿಡು ಎಂದು ಹೇಳಿದ. ಹೀಗೆ ಮಾತನಾಡುತ್ತಲೇ ಸಾಕ್ರಟಿಸ್ ಜೀವವನ್ನು ಬಿಟ್ಟ. ಈ ವಿವರಣೆ ಹೆಮ್ಲಾಕ್ ವಿಷದ ಯಾವುದೇ ಲಕ್ಷಣಗಳನ್ನು ಹೋಲುವುದಿಲ್ಲ. ಬಹುಶಃ ಹೆಮ್ಲಾಕ್ ವಿಷದ ಜೊತೆಯಲ್ಲಿ ಅಫೀಮನ್ನು ಬೆರೆಸಿಕೊಟ್ಟಿರಬಹುದು. ಹಾಗಾಗಿ ಸಾಕ್ರಟಿಸ್ ನೆಮ್ಮದಿಯಿಂದಸಾಯಲು ಸಾಧ್ಯವಾಯಿತು. ಸಾಕ್ರಟಿಸ್ ಮರಣದ ವರ್ಣಚಿತ್ರವನ್ನು 1787ರಲ್ಲಿ ಜಾಕ್ವೆಸ್ ಲೂಯಿಸ್ ಡೇವಿಡ್ ಬಿಡಿಸಿದ.
ಹೆಮ್ಲಾಕ್ ವಿಷದಿಂದ ಸಾಕ್ರಟೀಸ್ ಮಾತ್ರವಲ್ಲ, ಥೆರಾಮೆನೆಸ್ (ಮರಣ: ಕ್ರಿ.ಪೂ.404), -ಸಿಯನ್ (ಕ್ರಿ.ಪೂ. 402-ಕ್ರಿ.ಪೂ.318) ಮುಂತಾದ ರಾಜಕೀಯ ನಾಯಕರಿಗೆ ಮರಣದಂಡನೆಯನ್ನು ನೀಡಿದ ಉದಾಹರಣೆಗಳು ದೊರೆಯುತ್ತವೆ. ಇದಕ್ಕಿಂತಲೂ ಕುಖ್ಯಾತ ಅಧ್ಯಾಯವಿದೆ. ಪ್ರಾಚೀನ ಗ್ರೀಸ್ ಕಾಲದಲ್ಲಿ ಜನಸಾಮಾನ್ಯರ ಸ್ಥಿತಿಗತಿಯೂ ಅಷ್ಟೇನೂ ಹಿತವಾಗಿರಲಿಲ್ಲ. ಒಬ್ಬ ನಾಗರಿಕನು ೬೦ರ ಆಸುಪಾಸಿಗೆ ಬರುತ್ತಿದ್ದ ಹಾಗೆ, ದುಡಿಯುವ ಚೈತನ್ಯವನ್ನುಕಳೆದುಕೊಳ್ಳುತ್ತಿದ್ದ ಹಾಗೆ, ಅವರನ್ನು ದಂಡಪಿಂಡಗಳು ಎಂದು ಭಾವಿಸುತ್ತಿದ್ದರು. ಮಗನಾದವನು ತನ್ನ ವೃದ್ಧ ತಂದೆ ಅಥವಾ ತಾಯಿಯನ್ನು ಬಡಿಗೆಯಿಂದ ಹೊಡೆದು ಕೊಲ್ಲಬೇಕಿತ್ತು ಇಲ್ಲವೇ ಬೆಟ್ಟದ ಕೋಡುಗಲ್ಲಿನಿಂದ ಕೆಳಕ್ಕೆ ತಳ್ಳಿ ಕೊಲ್ಲಬೇಕಿತ್ತು.
ಇವೆರಡನ್ನು ಮಾಡಲು ಧೈರ್ಯವಿಲ್ಲದ ಮಕ್ಕಳು, ತಮ್ಮ ಹೆತ್ತವರಿಗೆ ತಾವೇ ಹೆಮ್ಲಾಕ್ ನೀಡಿ ಅವರ ಬದುಕಿಗೆ ಮಂಗಳವನ್ನು ಹಾಡುತ್ತಿದ್ದರು. ಒಂದು ಘಟ್ಟದಲ್ಲಿ ಗ್ರೀಸ್ ಆಡಳಿತವೇ ಇದಕ್ಕೆ ವ್ಯವಸ್ಥೆಯನ್ನು ಮಾಡುತ್ತಿದ್ದ ಉದಾಹರಣೆಗಳಿವೆ. ಹಿರಿಯ ನಾಗರಿಕರನ್ನೆಲ್ಲ ಒಂದು ಸಂಜೆ ಔತಣಕ್ಕೆ ಕರೆಯು ತ್ತಿದ್ದರು. ಭರ್ಜರಿ ಔತಣವನ್ನು ನೀಡುತ್ತಿದ್ದರು. ಕೊನೆಯಲ್ಲಿ ಅವರಿಗೆ ಹೆಮ್ಲಾಕ್ ಪ್ರಾಶನ ಮಾಡಿಸುತ್ತಿದ್ದರು. ಹೆತ್ತವರನ್ನೇ ಕೊಲ್ಲಬೇಕಾದ ಮಕ್ಕಳ ಹೊರೆಯನ್ನು ಹೀಗೆ ಆಡಳಿತ ವರ್ಗವೇ ಕಡಿಮೆ ಮಾಡುತ್ತಿತ್ತು.
ಇದು ವೃದ್ಧಹತ್ಯೆ (ಸೆನೆಸೈಡ್ ಅಥವಾ ಜೆರಾಂಟಿಸೈಡ್) ಎಂಬ ಹೆಸರಿನಲ್ಲಿ ಕುಖ್ಯಾತವಾಗಿತ್ತು. ವೃದ್ಧಹತ್ಯೆಯು ಇಂದಿಗೂ ತಲೈಕೂತಲ್ ಎನ್ನುವಹೆಸರಿನಲ್ಲಿ ತಮಿಳುನಾಡಿನಲ್ಲಿ ಅಸ್ತಿತ್ವದಲ್ಲಿದೆ ಎಂದು ೨೦೧೯ರಲ್ಲಿ ಬಿಡುಗಡೆಯಾದ ಕೆ.ಡಿ.ಎಂಜಿರ ಕರುಪ್ಪುದೊರೈ ಮತ್ತು ಬಾರಮ್ ಚಲನಚಿತ್ರಗಳು ಹೇಳುತ್ತವೆ. ಮೊದಲ ಚಿತ್ರದಲ್ಲಿ ಕೋಮಾದಲ್ಲಿರುವ ತಂದೆಯನ್ನು ಕೊಲ್ಲಲು ಮಕ್ಕಳು, ಸೊಸೆಯಂದಿರು ಪ್ರಯತ್ನಿಸುವ ಕಥೆಯಿದ್ದರೆ, ಎರಡನೆಯ ಚಿತ್ರದಲ್ಲಿ ಅಪಘಾತದಲ್ಲಿ ಸೊಂಟಮೂಳೆ ಯನ್ನು ಮುರಿದುಕೊಂಡ ವಿದುರನನ್ನು ಕೊಲ್ಲುವ ಚಿತ್ರವಿದೆ.
ಈ ಎರಡೂ ಮಾನವನ ಇತಿಹಾಸದಲ್ಲಿ ಮನುಷ್ಯನಿಗೆ ಬದುಕುವ ಹಕ್ಕು ಇರುವ ಹಾಗೆ ಸಾಯುವ ಹಕ್ಕೂ ಇರಬೇಕು ಎನ್ನುವ ಮಾತು ಆಗಾಗ್ಗೆ ಕೇಳಿ ಬಂದಿದೆ. ಗುಣಪಡಿಸಲಾಗದ ಕಾಯಿಲೆ, ತೀವ್ರಸ್ವರೂಪದ ನೋವು ಹಾಗೂ ಬದುಕು ಸಾಕಾಗಿದೆ ಎನ್ನುವ ಸ್ಥಿತಿಯಲ್ಲಿ ಇರುವವರಿಗೆ ಸಾಯುವಅವಕಾಶವನ್ನು ಮಾಡಿಕೊಡಬೇಕು ಎನ್ನುವ ಕೂಗು ಆಧುನಿಕ ಜಗತ್ತಿನಲ್ಲಿ ಆಗಾಗ್ಗೆ ಕೇಳಿಬರುತ್ತಿದೆ ದಯಾಮರಣಕ್ಕೆ (ಯುಥನೀಸಿಯ) ಅವಕಾಶವನ್ನು ಮಾಡಿಕೊಡಬೇಕು ಎನ್ನುವ ಚಳವಳಿ ಜಗತ್ತಿನ ಹಲವು ಕಡೆ ನಡೆದಿದೆ. ಇವುಗಳಲ್ಲಿ 1980ರ ಆಸುಪಾಸಿನಲ್ಲಿ ಹೆಮ್ಲಾಕ್ ಸೊಸೈಟಿ ಅಥವಾ ಹೆಮ್ಲಾಕ್ ಸೊಸೈಟಿ ಯು.ಎಸ್.ಎ ಎನ್ನುವ ಸಂಸ್ಥೆಯು ಕ್ಯಾಲಿಫೋರ್ನಿಯದ ಸಾಂಟಾ ಮೋನಿಕದಲ್ಲಿ ಆರಂಭವಾಯಿತು. ಸಾಯುವ ಹಕ್ಕನ್ನು ಪ್ರತಿಪಾದಿಸುವ ಈ ಸಂಸ್ಥೆಯು ವೈದ್ಯ ಉಪಕೃತ ಮರಣವನ್ನು (ಫಿಸಿಶಿಯನ್ ಅಸಿಸ್ಟೆಡ್ ಸೂಯಿಸೈಡ್ : ಪಿಎಸ್‌ಎ) ಸ್ವಾಗತಿಸಿ, ಆ ಬಗ್ಗೆ ಪ್ರಚಾರವನ್ನು ಮಾಡಲಾರಂಬಿಸಿತು.
ಜಗತ್ತಿನ ಬಹುಪಾಲು ದೇಶಗಳು ದಯಾಮರಣವನ್ನು ನಿರಾಕರಿಸಿವೆ. ಆದರೆ ನೆದರ್‌ಲ್ಯಾಂಡ್ ಮಾತ್ರ ದಯಾಮರಣವನ್ನು ಒಪ್ಪಿದೆ. ಸ್ವಿಜ಼ರ್ಲ್ಯಾಂಡ್ದೇಶದಲ್ಲಿ ದಯಾಮರಣವು ಅಸ್ತಿತ್ವದಲ್ಲಿಲ್ಲ. ಆದರೆ ವೈದ್ಯ ಉಪಕೃತ ಮರಣ ಅಸ್ತಿತ್ವದಲ್ಲಿದೆ. ಈಗ ಕೇವಲ ಒಂದು ನಿಮಿಷದಲ್ಲಿ ಯಾವುದೇ ನೋವಿಲ್ಲದೆ ಆತ್ಮಹತ್ಯೆಯನ್ನು ಮಾಡಿಕೊಳ್ಳಲು ನೆರವಾಗುವ ಸಾರ್ಕೊ ಸಾಧನವು ಸಿದ್ಧವಾಗಿದೆ. ಸ್ವಿಸ್ ಸರಕಾರದ ಕಾನೂನು ಇಲಾಖೆಯು ಈ ಯಂತ್ರವನ್ನು ಸಾರ್ವಜನಿಕ ಬಳಕೆಗೆ ಅನುಮತಿ ಕೊಡಬೇಕೆ ಅಥವ ಬೇಡವೆ ಎನ್ನುವ ಬಗ್ಗೆ ಚಿಂತನ-ಮಂಥನಗಳನ್ನು ನಡೆಸುತ್ತಿದೆ.