ಪಠ್ಯ ಪರಿಷ್ಕರಣೆಯಲ್ಲಿ ಅಕಾರಾದಿಗೆ ಒತ್ತು ಕೊಡಿ
ಸಕಾಲಿಕ
ಬೇದ್ರೆ ಮಂಜುನಾಥ
ನೆರೆ ರಾಜ್ಯಗಳ ಪಠ್ಯಪುಸ್ತಕಗಳಲ್ಲಿ ‘ಬಾಯ್ದೆರೆ ಅಂಶ’ಗಳಿಗೆ ಹೆಚ್ಚು ಒತ್ತು ನೀಡಲಾಗಿದ್ದು ಎನ್‌ಸಿಇಆರ್‌ಟಿ ರೂಪಿಸಿರುವ ಭಾಷಾ ಪಠ್ಯಗಳೆಲ್ಲ ಅಕಾರಾದಿ, ಧ್ವನಿ ಮತ್ತು ಸ್ವರ – ವ್ಯಂಜನ – ಬಳ್ಳಿಗಳ, ಕಥೆ, ಕವನ, ಒಡಪು, ಆಟಗಳನ್ನು ಆಧರಿಸಿವೆ. ನಮ್ಮಲ್ಲಿಯೂ ಇದೇ ಮಾದರಿ ಅನುಸರಿಸಿದರೆ ಉತ್ತಮ.
ರಾಷ್ಟ್ರೀಯ ಶಿಕ್ಷಣ ನೀತಿ- 2020 ಅನ್ನು ಜಾರಿಗೆ ತಂದಿರುವ ಮೊದಲ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಪದವಿ ತರಗತಿಗಳಲ್ಲಿನ ಐಚ್ಛಿಕ ವಿಷಯಗಳಲ್ಲಿ ಒಂದನ್ನು ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಹಾಗೆಯೇ ಬರುವ ವರ್ಷದಿಂದ ಪ್ರಾಥಮಿಕ ಹಂತದಿಂದ ಉನ್ನತ ವಿದ್ಯಾಭ್ಯಾಸದ ಹಂತದವರೆಗೆ ಹೊಸ ಶಿಕ್ಷಣ ನೀತಿಯಲ್ಲಿ ಸೂಚಿತವಾಗಿರುವಂತೆ ಪಠ್ಯಪುಸ್ತಕಗಳನ್ನು ಪುನಾರೂಪಿಸಲಾಗುತ್ತಿದ್ದು ಹೊಸ ವಿಷಯಗಳನ್ನು, ಹೊಸ ಬೋಧನಾ ವಿಧಾನಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯು, ಪ್ರತಿಯೊಬ್ಬ ವ್ಯಕ್ತಿಯ ಸೃಜನಶೀಲ ಸಾಮರ್ಥ್ಯದ ಅಭಿವೃದ್ಧಿಗೆ ನಿರ್ದಿಷ್ಟ ಒತ್ತು ನೀಡುತ್ತದೆ. ಅಕ್ಷರ ಜ್ಞಾನ, ಗಣಿತ ಕೌಶಲದ ಜತೆಗೆ ಬುನಾದಿ ಸಾಮರ್ಥ್ಯಗಳು, ವಿಮರ್ಶಾತ್ಮಕ ಚಿಂತನೆ ಹಾಗೂ ಸಮಸ್ಯಾ ಪರಿಹಾರದಂತಹ ಉನ್ನತ ಹಂತದ ಜ್ಞಾನಾತ್ಮಕ ಸಾಮರ್ಥ್ಯಗಳನ್ನು ಶಿಕ್ಷಣ ಒಳಗೊಂಡಿರ ಬೇಕು. ಮಾತ್ರವಲ್ಲದೆ ಸಾಮಾಜಿಕ, ನೈತಿಕ ಮತ್ತು ಭಾವನಾತ್ಮಕ ಸಾಮರ್ಥ್ಯಗಳನ್ನೂ ಸಹ ಅಭಿವೃದ್ಧಿ ಪಡಿಸಬೇಕು ಎಂಬ ತತ್ವವನ್ನು ಈ ನೀತಿಯು ಆಧರಿಸಿದೆ. ಇಂಥ ಆಶಯದ ಹಿನ್ನೆಲೆಯಲ್ಲಿ ಏಕರೂಪದ ಬೋಧನಾ ವಿಧಾನದ ಜತೆಗೆ ಸ್ಥಳೀಯ ಅಗತ್ಯಗಳಿಗೆ ಆದ್ಯತೆ ನೀಡಬೇಕಾದ ಅಗತ್ಯವಿದೆ.
ಶಿಕ್ಷಣವು ಸಾಮಾನ್ಯವಾಗಿ ವರ್ಣಮಾಲೆಗಳು, ಭಾಷೆಗಳು, ಸಂಖ್ಯೆಗಳು, ಎಣಿಕೆ, ಬಣ್ಣಗಳು, ಆಕಾರಗಳು, ಒಳಾಂಗಣ ಮತ್ತು ಹೊರಾಂಗಣ ಆಟಗಳು, ಒಗಟುಗಳು ಮತ್ತು ತಾರ್ಕಿಕ ಚಿಂತನೆ, ಸಮಸ್ಯಾ ಪರಿಹಾರ, ಚಿತ್ರಕಲೆ, ಬಣ್ಣಹಚ್ಚುವುದು ಮತ್ತು ಇತರ ದೃಶ್ಯ ಕಲೆ, ಕರಕುಶಲ ಕಲೆ, ನಾಟಕ ಮತ್ತು ಕೈಗೊಂಬೆ,ಸಂಗೀತ ಮತ್ತು ಚಲನೆಯಂತಹ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.
ನಮ್ಯವಾದ, ಬಹುಮುಖಿ, ಬಹು-ಹಂತದ, ಆಟ-ಆಧಾರಿತ, ಚಟುವಟಿಕೆ-ಆಧಾರಿತ ಮತ್ತು ಅನ್ವೇಷಣಾ-ಆಧಾರಿತ ಕಲಿಕೆ ಸಹ ಇದರಲ್ಲಿ ಸೇರಿದೆ. ಇದಲ್ಲದೇ ಸಾಮಾಜಿಕ ಸಾಮರ್ಥ್ಯಗಳು, ಸೂಕ್ಷ್ಮತೆ, ಉತ್ತಮ ನಡವಳಿಕೆ, ಸೌಜನ್ಯ, ನೈತಿಕತೆ, ವೈಯಕ್ತಿಕ ಮತ್ತು ಸಾರ್ವಜನಿಕ ಸ್ವಚ್ಛತೆ, ತಂಡದಲ್ಲಿ ಕಾರ್ಯ ಮತ್ತು ಸಹಕಾರದಂತಹ ವರ್ತನೆಗಳನ್ನು ಸಹ ಬೆಳೆಸುವುದರ ಕುರಿತು ಗಮನಹರಿಸುತ್ತದೆ. ಇಂಥವೆಲ್ಲ ಅಂಶಗಳನ್ನು ಕಥೆ, ಮಾಹಿತಿ, ಉದಾಹರಣೆ, ಪದ್ಯ, ಸಂಭಾಷಣೆಗಳ ಮೂಲಕ ಸೇರ್ಪಡೆ ಮಾಡಬೇಕಾಗಿದೆ.
ಪಠ್ಯಪುಸ್ತಕ ಹೀಗಿರಲಿ:ಕರ್ನಾಟಕದಲ್ಲಿರುವ 1 ರಿಂದ 10 ನೇ ತರಗತಿಗಳ ಸುಮಾರು 100 ಲಕ್ಷ ಮಕ್ಕಳಿಗೆ ಪಠ್ಯಪುಸ್ತಕಗಳ ತಯಾರಿಕೆ, ಮುದ್ರಣ ಹಾಗೂ ಸರಬರಾಜಿನ ಜವಾಬ್ದಾರಿಯು ಕರ್ನಾಟಕ ಪಠ್ಯಪುಸ್ತಕ ಸಂಘದ್ದು. 12 ಭಾಷೆಗಳಲ್ಲಿ ಹಾಗೂ 7 ಮಾಧ್ಯಮಗಳಲ್ಲಿ ಸುಮಾರು 358 ಶೀರ್ಷಿಕೆಗಳನ್ನುತಯಾರಿಸಿ ಮುದ್ರಿಸಲಾಗುತ್ತಿದೆ.
ಆದರೆ, ಭಾಷಾ ಬೋಧನೆಗೆ ಸಂಬಂಧಿಸಿದಂತೆ ಮುದ್ರಿಸಲಾಗಿರುವ ಪಠ್ಯಪುಸ್ತಕಗಳಲ್ಲಿ ಏಕರೂಪತೆ ಇಲ್ಲ. ಕನ್ನಡ ಭಾಷೆಗೆ ‘ರಗಸದಅ’ ಎಂಬ ಅಕ್ಷರ ಮಾದರಿ ಯನ್ನು ಬಳಸಲಾಗಿದ್ದರೆ ಹಿಂದಿ, ಇಂಗ್ಲಿಷ್, ಉರ್ದು, ತೆಲುಗು, ತಮಿಳು ಮತ್ತು ಮರಾಠಿ ಭಾಷೆಗಳಿಗೆ ಅಕಾರಾದಿಯಾದ ಧ್ವನಿಲಿಪಿ ಮಾದರಿಯನ್ನು ಬಳಸಲಾಗಿದೆ. ಗಣಿತ,ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳ ಬೋಧನೆಗೆ ಎನ್ ಸಿಇಆರ್‌ಟಿ ಬಳಸುತ್ತಿರುವ ರಾಷ್ಟ್ರೀಯ ಪಠ್ಯಪುಸ್ತಕಗಳನ್ನೇ ಮಾದರಿಯಾಗಿರಿಸಿಕೊಳ್ಳ ಲಾಗಿದೆ.
ಕರ್ನಾಟಕದ ಪ್ರಾಥಮಿಕ ಪಠ್ಯಪುಸ್ತಕಗಳಲ್ಲಿ ಹಲವು ಲೋಪದೋಷಗಳಿದ್ದು ನೂರಾರು ವರ್ಷಗಳಿಂದ ಭಾಷಾಶಾಸ್ತ್ರದ ಬುನಾದಿಯಲ್ಲಿ ಬೆಳೆದು ಬಂದ, ಶಬ್ದಮಣಿ ದರ್ಪಣ, ಕವಿರಾಜ ಮಾರ್ಗ ಮೊದಲಾದ ಗ್ರಂಥಗಳಲ್ಲಿಶಾಸೀಯವಾಗಿ ಉಲ್ಲೇಖಿಸಲ್ಪಟ್ಟಿರುವ ಯಶಸ್ವೀ ಮಾದರಿಯನ್ನು ಕೈಬಿಡಲಾಗಿದೆ. ‘ಧ್ವನಿಯು ನಾಭಿ ಯಿಂದ ಆರಂಭವಾಗಿ ಕಹಳೆಯ ಪಾಂಗಿನೊಳು ಬಾಯಿಂದ ಹೊರಬರುತ್ತದೆ’ ಎಂದು ಕೇಶಿರಾಜ ಶಬ್ದಮಣಿ ದರ್ಪಣದಲ್ಲಿ ಹೇಳಿದ್ದಾನೆ. ಒಂದೊಂದು ಅಕ್ಷರವೂ ಮೂಲದಲ್ಲಿ ಧ್ವನಿಯಾಗಿಯೇ ಬಾಯಿಂದ ಹೊರಬರುವ ಮೊದಲು ಗಂಟಲು, ನಾಲಗೆ ಮತ್ತು ಬಾಯಿಯೊಳಗಣ ನಿರ್ದಿಷ್ಟ ಸ್ಥಾನಗಳಲ್ಲಿ ಹುಟ್ಟುತ್ತದೆ. ಇದನ್ನೇ ಧ್ವನಿ ವಿಜ್ಞಾನ (-ನೆಟಿಕ್ಸ್) ತಿಳಿಸಿಕೊಡುತ್ತದೆ. ಇದನ್ನು ಬಿಟ್ಟು ಕೇವಲ ಅಕ್ಷರಕ್ಕೆ ಒತ್ತುಕೊಡುವುದು ಮೂರ್ಖತನವಾಗುತ್ತದೆ.
ಭಾಷಾ ಕಲಿಕೆಯಲ್ಲಿ ಆಲಿಸುವುದು ಮತ್ತು ಮಾತನಾಡುವುದು ಪ್ರಾಥಮಿಕ ಕೌಶಲಗಳೆಂದು ಪರಿಗಣಿತವಾಗಿದ್ದು, ಆನಂತರದಲ್ಲಿ ಓದುವುದು ಮತ್ತು ಬರೆಯುವುದು ಆರಂಭವಾಗುತ್ತದೆ. ಆಲಿಸುವಿಕೆಯ ಕೌಶಲವನ್ನು ಬೆಳೆಸಲು ಮಕ್ಕಳಿಗೆ ರಾಗವಾಗಿ ಹಾಡಲು ಅನುಕೂಲವಾಗುವ ಪದ್ಯಗಳು, ಶಿಶುಗೀತೆಗಳು, ನಾಲಗೆ ತೊಡರು ಗಳು, ಪ್ರಾರ್ಥನಾ ಗೀತೆಗಳು, ಶ್ಲೋಕಗಳು ಹೀಗೆ ಕ್ಲಿಷ್ಟವಾಗಿದ್ದರೂ ಮತ್ತೆ ಮತ್ತೆ ಹೇಳುವ ಮೂಲಕ ಮೆದುಳಿನಲ್ಲಿರುವ ಭಾಷಾಕಲಿಕಾ ಪ್ರಚೋದಿಸ ಲಾಗುತ್ತದೆ. ಕಂಪ್ಯೂಟರ್‌ಗಳಲ್ಲಿ ಹೇಗೆ 0 ಮತ್ತು 1 ಎಂಬ ಬೈನರಿ ತಂತ್ರವನ್ನು ಬಳಸಿ ಯಂತ್ರಭಾಷೆಯನ್ನು ರೂಪಸಿಲಾಗುತ್ತದೆಯೋ ಹಾಗೆಯೇ ಆಲಿಸುವುದು ಮತ್ತು ನೋಡುವುದು ಜತೆಗೆ ಮಾತನಾಡುವುದ ಮತ್ತು ಓದುವುದರ ಮೂಲಕ ಮಲ್ಟಿಮೀಡಿಯಾ ತಂತ್ರವನ್ನು ಬಳಸಿ ಅಮೂರ್ತವನ್ನೂ ಮೂರ್ತವಾಗಿಸಿ ಭಾಷೆಯನ್ನು ಕಲಿಸಲಾಗುತ್ತದೆ.
ಕೊನೆಯಲ್ಲಿ ಬರುವುದೇ ಬರೆಯುವ ಕೌಶಲ. ಆಟದ ಮೂಲಕ ಪಾಠ, ಕಲೆಯ ಮೂಲಕ ಕಲಿಕೆಗೆ ಹೆಚ್ಚಿನ ಒತ್ತುಕೊಡುವ, ಪ್ರಾಥಮಿಕ ಭಾಷಾ ಪಠ್ಯ ರೂಪಿತವಾಗ ಬೇಕಿದೆ. ಕರ್ನಾಟಕದ ಪಕ್ಕದ ರಾಜ್ಯಗಳ ಪ್ರಾಥಮಿಕ ಕನ್ನಡ ಪಠ್ಯಪುಸ್ತಕಗಳಲ್ಲಿ ಈ ಬಾಯ್ದೆರೆ ಅಂಶಗಳಿಗೆ ಹೆಚ್ಚು ಒತ್ತು ನೀಡಲಾಗಿದ್ದು ಎನ್‌ಸಿಇಆರ್‌ಟಿರೂಪಿಸಿರುವ ಭಾಷಾ ಪಠ್ಯಗಳೆಲ್ಲ ಅಕಾರಾದಿ, ಧ್ವನಿ ಮತ್ತು ಸ್ವರ – ವ್ಯಂಜನ – ಬಳ್ಳಿಗಳು ಹಾಗೆಯೇ ಶಿಶುಗೀತೆ, ಕಥೆ, ಕವನ, ಒಡಪು, ಆಟಗಳನ್ನು ಆಧರಿಸಿವೆ. ಕರ್ನಾಟಕದ ಪ್ರಾಥಮಿಕ ತರಗತಿಗಳ ಕನ್ನಡ ಪಠ್ಯಪುಸ್ತಕಗಳಲ್ಲಿಯೂ ಇದೇ ಮಾದರಿ ಅನುಸರಿಸಿದರೆ ಉತ್ತಮ ಫಲಿತಾಂಶ ಬರುತ್ತದೆ. ಈಗ ಇರುವ ‘ರಗಸದಅ’ ಎಂಬ ಅಕ್ಷರಲಿಪಿ ಆಧಾರಿತ ಪದ್ಧತಿಯಿಂದಾಗಿ ಮಕ್ಕಳು 10 ನೇ ತರಗತಿಗೆ ಬಂದರೂ ಸರಿಯಾಗಿ ಪದ, ವಾಕ್ಯ ಬರೆ ಯಲು ಬರದಂತಾಗಿದ್ದಾರೆ. ಸರಕಾರಿ ಶಾಲೆಗಳಲ್ಲಿ ಮಾತ್ರ ಈ ರೀತಿಯ ಕಡ್ಡಾಯ ಕನ್ನಡ ಕಲಿಕೆಯ ವಿಧಾನ ಬಳಕೆಯಲ್ಲಿರುವುದರಿಂದ ಪೋಷಕರು ತಮ್ಮ ಮಕ್ಕಳಿಗೆ ಒಳ್ಳೆಯ ಕನ್ನಡ ಮತ್ತು ಇಂಗ್ಲಿಷ್ ಕಲಿಸುವ ಸಲುವಾಗಿ ಖಾಸಗಿ ಶಾಲೆಗಳತ್ತ ಮುಖಮಾಡುತ್ತಿದ್ದಾರೆ.
ಏನೆಲ್ಲಾ ಬದಲಾಗಿದೆ:ಚಾಕ್ ಅಂಡ್ ಟಾಕ್ ಬದಲು ಈಗ ಬಹುಮಾಧ್ಯಮ ಬೋಧನೆ ತರಗತಿಯನ್ನು ಪ್ರವೇಶಿಸಿದೆ. ನಲಿ-ಕಲಿ ಪದ್ಧತಿ, ಕಪ್ಪುಹಲಗೆಯ ಜಾಗದಲ್ಲಿ ಹಸಿರು, ಬಿಳಿ ಬಣ್ಣದ ಬರಹದ ಸಾಧನಗಳು ಕಾಣಬರುತ್ತಿವೆ. ಬಾಲ (ಬಿಲ್ಡಿಂಗ್ ಆಸ್ ಎ ಲರ್ನಿಂಗ್ ಏಡ್) ಎಂಬ ಪರಿಕಲ್ಪನೆಯಡಿ ತರಗತಿಯ ಕೋಣೆಯೇ ಕಲಿಕಾಸಾಧನವಾಗಿದೆ. ಗೋಡೆಗಳೆಲ್ಲ ಬರೆಯುವ ಹಲಗೆಗಳಾಗಿ ವಾಲ್ ಸ್ಲೇಟ್ ಎನಿಸಿಕೊಂಡಿವೆ.
ಸಮನ್ವಯ ಶಿಕ್ಷಣದ ಅಡಿ ಕಲಿಕಾ ಮೂಲೆ (ಲರ್ನಿಂಗ್ ಕಾರ್ನರ್)ಗಳು ಮೂಡಿಬಂದಿವೆ. ಕಲಿಕಾ ಸಾಧನ-ಸಾಮಗ್ರಿಗಳು (ಟಿ.ಎಲ್.ಎಮ್. – ಟೀಚಿಂಗ್ ಅಂಡ್ ಲರ್ನಿಂಗ್ ಮಟೀರಿಯಲ್ಸ್) ಯಥೇಚ್ಛವಾಗಿ ಲಭ್ಯವಿವೆ. ಅನೇಕ ಶಾಲೆಗಳಲ್ಲಿ ಮಲ್ಟಿಮೀಡಿಯಾ ಪ್ರೊಜೆಕ್ಟರ್‌ಗಳಿದ್ದು ಬಹುಮಾಧ್ಯಮ ಬೋಧನೆ ಸಾಧ್ಯವಾಗಿದೆ. ಹೊಸ ಪೀಳಿಗೆಯ, ಕಂಪ್ಯೂಟರ್ ಸಾಕ್ಷರ ಶಿಕ್ಷಕರು ಲ್ಯಾಪ್ ಟಾಪ್ ಮಲ್ಟಿಮೀಡಿಯಾ ಲ್ಯಾಬ್ ಸೌಲಭ್ಯ ಕಲ್ಪಿಸಿಕೊಂಡಿದ್ದಾರೆ.
ಈ ಶೈಕ್ಷಣಿಕ ಪ್ರಯೋಗಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಿಕೊಳ್ಳಿ ಮೇರಿ ಮಾಂಟೆಸ್ಸರಿಯವರಿಂದ ಆರಂಭಿಸಿ ಇತ್ತೀಚಿನ ಶಿಕ್ಷಣ ಚಿಂತಕರವರೆಗೆ ಸಹಸ್ರಾರುತಜ್ಞರು ಮಕ್ಕಳಿಗೆ ಸಂತಸ ಕಲಿಕೆಯ ವಾತಾವರಣ ಕಲ್ಪಿಸಲು, ಕಲಿಕೆಯನ್ನು ಆಟವನ್ನಾಗಿಸಲು ಪ್ರಯತ್ನಿಸುತ್ತಲೇ ಇದ್ದಾರೆ.
ವಿಶ್ವಕವಿ ರವೀಂದ್ರನಾಥ ಠಾಕೂರ್ ಮತ್ತು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮೂಲ ಶಿಕ್ಷಣ, ಗುಜರಾತಿನ ಗಿಜುಭಾಯಿ ಬಧೇಕ ಅವರು ತಮ್ಮ ದಕ್ಷಿಣಾ ಮೂರ್ತಿ ಬಾಲಮಂದಿರದಲ್ಲಿ ಪ್ರಯೋಗಿಸಿದ ಶೈಕ್ಷಣಿಕ ಯಶೋಗಾಥೆ ‘ದಿವಾಸ್ವಪ್ನ’ (ಹಗಲುಗನಸು – ಅನು: ಡಿ. ಆರ್.ಬಳೂರಗಿ), ಜಪಾನಿನ ತೆತ್ಸುಕೊ ಕೊರೊಯಾನಾಗಿ ಅವರ ‘ತೊತ್ತೋಚಾನ್’ (ಸೊಸಾಕು ಕೊಬಾ ಯಾಶಿಯವರ ತೊಮೊಯೆ-ಗಾಕುಯೆನ್ ನಲ್ಲಿ ನಡೆದ ಶೈಕ್ಷಣಿಕ ಪ್ರಯೋಗಗಳ ಸಾಹಸ ಕಥೆ – ಅನು: ವಿ. ಗಾಯತ್ರಿ), ಅಮೆರಿಕೆಯ ಡೇನಿಯಲ್ ಗ್ರೀನ್‌ಬರ್ಗ್ ಅವರ ಸಡ್‌ಬರಿ ವ್ಯಾಲಿ ಸ್ಕೂಲ್‌ನ ಪ್ರಯೋಗಗಳ ಕಥೆ ‘ಫ್ರೀ ಅಟ್ ಲಾಸ್ಟ್’ (ಕನ್ನಡ ಅನುವಾದ ಗರಿಬಿಚ್ಚಿ ಗಗನದೆಡೆಗೆ – ಅನು: ಎಚ್. ನಿವೇದಿತಾ), ಡೇವಿಡ್ ಹಾಸ್‌ಬ್ರೋ ಅವರ ನೀಲ್ ಬಾಗ್ ಶಾಲೆಯ ಪ್ರಯೋಗಗಳು, ಚಿಂಗಿಜ಼್ ಐತ್ಮತೋವ್ ಅವರ ದುಯಿಶೆನ್, ಸಿಲ್ವಿಯಾ ಆಶ್ ಟನ್ ವಾರ್ನರ್ ಅವರ ಟೀಚರ್, ಜೂಲಿಯಾ ವೆಬರ್ ಗೋರ್ಡನ್ ಅವರ, ಮೈ ಕಂಟ್ರಿ ಸ್ಕೂಲ್ ಡೈರಿ, ಕಾರಂತರ ಬಾಲವನ ದ ಪ್ರಯೋಗಗಳು ಮತ್ತು ಓದುವ ಆಟ, ತುಮಕೂರಿನ ಮಕ್ಕಳ ಮನೆ, ಮೈಸೂರಿನ ಅರಿವು ಶಾಲೆಯಲ್ಲಿನ ಪ್ರಯೋಗಗಳು, ಪುತ್ತೂರಿನ ಡಾ. ಸುಕುಮಾರ ಗೌಡರ ಮಕ್ಕಳ ಮಂಟಪದ ಪ್ರಯೋಗಗಳು, ಮ್ಯೂರಿ ಯಲ್ ವಾಸಿ ಬರೆದ ಶಿಕ್ಷಣದ ಸಾಹಸ ಕಥೆ (ಅನು: ಆರ್.ಎಲ್. ಅನಂತರಾಮಯ್ಯ), ರಷ್ಯಾದ ನೋಸವ್ ಅವರ ಸ್ಕೂಲ್ ಬಾಯ್ಸ್, ಶಾಲಾ ಯುನೆಸ್ಕೊ ಕ್ಲಬ್ ಮೂಲಕ ಕಲಿಸುವ ಅನೌಪಚಾರಿಕ ಶಿಕ್ಷಣದ ಸ್ಕೂಲ್ ಡೈರಿ ಮತ್ತು ಹೊರಾಂಗಣ ಶಿಕ್ಷಣದ ಸಾಹಸ ಕಥೆ ಅಡ್ವೆಂಚರ್, ಜಿ.ಎಸ್. ಜಯದೇವ ಅವರು ನಡೆಸುತ್ತಿರುವ ದೀನಬಂಧು ಶಾಲೆಯಲ್ಲಿನ ಶೈಕ್ಷಣಿಕ ಪ್ರಯೋಗಗಳ ಕೃತಿ ಮಕ್ಕಳ ಬೆಳವಣಿಗೆ ಮತ್ತು ನಾವು, ಕಲೆಯ ಮೂಲಕವೇ ಕಲಿಸಬೇಕು ಎನ್ನುವ ಹರ್ಬರ್ಟ್ ರೀಡ್ ಅವರ ಪ್ರಯೋಗಗಳು, ಜೇನ್ ಸಾಹಿ ಮತ್ತು ರೋಷನ್ ಸಾಹಿಯವರ ಕಲಿಕೆಯಲ್ಲಿ ಕಲೆ, ಮದನಪಲ್ಲಿಯ ಋಷಿವ್ಯಾಲಿ ಯಲ್ಲಿನ ಪ್ರಯೋಗಗಳು… ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಈ ಪ್ರಯೋಗಗಳ ಫಲಿತಾಂಶಗಳು ನೂತನ ಪಠ್ಯಪುಸ್ತಕಗಳ ರೂಪಿಸುವಿಕೆಯಲ್ಲಿ ಪ್ರಮುಖ ಪಾತ್ರವಹಿಸಬೇಕಾಗಿದೆ. ಪ್ರೊಫೆಸರ್ ಕೃಷ್ಣೇಗೌಡರು ಇತ್ತೀಚೆಗೆ ಕನ್ನಡ ರಾಜ್ಯೋತ್ಸವ ಭಾಷಣವೊಂದರಲ್ಲಿ ಮಾತನಾಡುತ್ತ ‘ನಮ್ಮ ಪಠ್ಯಪುಸ್ತಕಗಳು ಕೇವಲ ಬುದ್ಧಿಗೆ ಕಸರತ್ತು ನೀಡುವ ವಿಷಯಗಳತ್ತ ಕೇಂದ್ರೀಕೃತವಾಗಿವೆ.ಮನಸ್ಸು, ಭಾವನೆ, ಅಭಿವ್ಯಕ್ತಿ, ಕಲೆ ಮೊದಲಾದವುಗಳತ್ತ ಪ್ರಾಮುಖ್ಯ ನೀಡಿದ್ದು ಕಂಡುಬರುತ್ತಿಲ್ಲ. ಹೊಸ ಶಿಕ್ಷಣ ನೀತಿಯಲ್ಲಿ ಈ ಕುರಿತು ವಿಸ್ತತ ಚರ್ಚೆ ಯಾಗಿದೆ. ಅದನ್ನು ಅಳವಡಿಸಿಕೊಂಡಲ್ಲಿ ಶಿಕ್ಷಣ ಹೆಚ್ಚು ಅರ್ಥಪೂರ್ಣವಾದೀತು’ ಎಂದರು. ಬಹುಶಃ ಈ ಅಂಶಗಳನ್ನು ಪಠ್ಯಪುಸ್ತಕ ಪರಿಷ್ಕರಿಸುವವರು ಗಮನಿಸು ವರೇ? ಕಾದು ನೋಡೋಣ.