ಹತಾಶೆಯ ಕಾರ್ಮೋಡದ ನಡುವೆ ಭರವಸೆಯ ಆಶಾಕಿರಣ
ಪ್ರಸ್ತುತ
ವಿಜಯ್‌ ದರ್‌ಡ
ನೆನಪಿಡಿ, ಈ ದೇಶದ ಶೇ.30-40 ಜನರಿಗೆ ಎರಡುಹೊತ್ತಿನ ಕೂಳು ಸಿಗುತ್ತಿಲ್ಲ. ವಾಸಿಸಲು ಮನೆಯಿಲ್ಲದ, ಉಡಲು ಬಟ್ಟೆ ಇಲ್ಲದ ಮಂದಿ ಇದ್ದಾರೆ. ಒಂದೆಡೆ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಿರಿವಂತರ ಸಂಖ್ಯೆಹೆಚ್ಚುತ್ತಿದೆ. ಇನ್ನೊಂದೆಡೆ ಕೊಳೆಗೇರಿಗಳಲ್ಲಿ ವಾಸ ಮಾಡು ವವರದೂ!
ಕಳೆದ ಸಾಲಿನ ಕೊನೆಯ ದಿನದಂದು ರಾತ್ರಿ ದಿಂಬಿಗೆ ತಲೆಕೊಡುವ ಮುನ್ನ ಹೊಸ ವರುಷದ ಬಗ್ಗೆ ಹಲವಾರು ಕನಸುಗಳನ್ನು ನಾನು ಕಂಡಿದ್ದೆ. ಮಧ್ಯ ರಾತ್ರಿ ಗಂಟೆ ಹನ್ನೆರಡಾಗುತ್ತಿದ್ದಂತೆ ನಾನೂ ಹೊಸವರ್ಷ೨೦೨೨ನ್ನು ಸ್ವಾಗತಿಸಿದೆ. ಸಾಂಪ್ರದಾಯಿಕ ರೀತಿಯಲ್ಲಿ ನಾನು ಹೊಸವರ್ಷಾಚರಣೆ ಮಾಡಿದೆ.
ನನ್ನ ಮನೆಯ ಸರ್ವಧರ್ಮ ಸಮಭಾವದ ಪೂಜೆಯನ್ನು ಚಿಕ್ಕದಾಗಿ ನೆರವೇರಿಸಿದೆ. ನನ್ನ ಮತ್ತು ನನ್ನ ಅವಲಂಬಿತ ಕುಟುಂಬದ ಸಂತೋಷಕ್ಕಾಗಿ, ನನ್ನ ಬಂಧುಮಿತ್ರರ ಒಳಿತಿಗಾಗಿ, ಲೋಕಮತ ಕುಟುಂಬದ ಅಭ್ಯುದಯಕ್ಕಾಗಿ ಪ್ರಾರ್ಥಿಸುವುದರ ಜತೆಗೆ ಇಡೀ ದೇಶದ, ವಿಶ್ವದ ಒಳಿತಿಗೆ ಪ್ರಾರ್ಥನೆ ಸಲ್ಲಿಸಿದೆ. ಹೊಸ ವರುಷದ ಹೊಸ ಹರುಷದ ಬೆಳಕು ಎಡೆ ಬೆಳಗಲಿ ಎಂದೂ ಹಾರೈಸಿದೆ. ನಾನು ಬೆಳಗ್ಗೆ ಏಳುವಷ್ಟರಲ್ಲಿ ದುರಂತದ ಸುದ್ದಿ ಯೊಂದನ್ನು ಕೇಳಲಿದ್ದೇ ನೆಂಬ ಕಲ್ಪನೆ ಕೂಡ ನನಗಿರಲಿಲ್ಲ.
ಮಾತಾ ವೈಷ್ಣೋದೇವಿ ಮಂದಿರಕ್ಕೆ ತೀವ್ರ ಚಳಿಯ ನಡುವೆ ಯೂ ಭಕ್ತಗಡಣ ದರುಶನ ಪಡೆದು ಪ್ರಾರ್ಥನೆ ಸಲ್ಲಿಸುವುದಕ್ಕೆ ಸೇರಿತ್ತು. ಆದರೆ ಆಗಬಾರದ ಘಟನೆಯೊಂದು ಆಗಿಯೇ ಬಿಟ್ಟಿತು. ರಾತ್ರಿ ಹೊಸ ವರ್ಷದ ಸಂಭ್ರಮಾಚರಣೆ ಎಡೆ ಮುಗಿಲು ಮುಟ್ಟಿದ್ದ ಸಮಯ ದ ವೈಷ್ಣೋದೇವಿಯಲ್ಲಿ ಜನಸಾಗರದ ನಡುವೆ ನೂಕು ನುಗ್ಗಲು ಹೆಚ್ಚಾಗಿ ಕಾಲ್ತುಳಿತಕ್ಕೆ ೧೨ ಜನ ಜೀವ ತೆತ್ತರು. ಇನ್ನೂ ಅದೆಷ್ಟೋ ಮಂದಿ ಗಾಯಗೊಂಡರು. ಅಷ್ಟೂ ಜನರ ಕನಸುಗಳು ಅ ಭಗ್ನವಾದವು. ಧಾರ್ಮಿಕ ಸ್ಥಳಗಳಲ್ಲಿ ಈ ರೀತಿಯ ಕಾಲ್ತುಳಿತ ಪ್ರಕರಣ ಆಗುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಎಪ್ರಿಲ್ 21 ರಂದು ತಮಿಳುನಾಡಿನ ಕರುಪ್ಪುಸ್ವಾಮಿ ದೇಗುಲದಲ್ಲಿ ಕಾಲ್ತುಳಿತಕ್ಕೆ ಏಳು ಮಂದಿ ಜೀವತೆತ್ತಿದ್ದರು.
2011ರಲ್ಲಿ ಶಬರಿಮಲೆ ದೇವಾಲಯದಲ್ಲಿ 106 ಮಂದಿ ಕಾಲ್ತುಳಿತಕ್ಕೆ ಅಸುನೀಗಿದರೆ, ನೂರಕ್ಕೂ ಹೆಚ್ಚುಮಂದಿ ಗಾಯಾಳುಗಳಾಗಿದ್ದರು. 2008ರ ಆಗಸ್ಟದ 3ರಂದು ಹಿಮಾಚಲಪ್ರದೇಶದ ನೈನಾದೇವಿ ದೇಗುಲದಲ್ಲಿ 145 ಮಂದಿ ಕಾಲ್ತುಳಿತಕ್ಕೆ ಸತ್ತಿದ್ದರು. ಜೋಧಪುರದ ಚಾಮುಂಡಾದೇವಿ ದೇಗುಲ ದಲ್ಲಿ 120 ಮಂದಿ ಕಾಲ್ತುಳಿತಕ್ಕೆ ಸಿಕ್ಕು ಸತ್ತುಹೋಗಿದ್ದರು. ೨೦೦೫ರಲ್ಲಿ ಮಹಾರಾಷ್ಟದ ಸತಾರಾದಲ್ಲಿರುವ ಮಂಧಾರದೇವಿ ದೇಗುಲದಲ್ಲಿ 350 ಜನ ಸತ್ತಿದ್ದರು. ದೇಶದ ಪ್ರತಿ ರಾಜ್ಯದಲ್ಲೂ ಇಂತಹದೇ ಘಟನೆಗಳು ಹಲವಾರು ಬಾರಿ ಆಗಿದೆ.
ಇಲ್ಲಿ ಉದ್ಭವಿಸುವ ಪ್ರಶ್ನೆ, ಈ ಎಲ್ಲ ದುರಂತಗಳಿಗೆ ಯಾರು ಕಾರಣರು? ದುರಂತಗಳು ಏಕಾಏಕಿ ಸಂಭವಿಸುವುದಿಲ್ಲ. ನಮ್ಮ ದೇಶ ನಂಬಿಕೆಯ ಮೇಲೆನಿರ್ಭರವಾಗಿದೆ. ನಮ್ಮ ದೇಶ ಅಧ್ಯಾತ್ಮದ ಬಗ್ಗೆ ಸಾಕಷ್ಟು ಶ್ರದ್ಧೆಯನ್ನು ಹೊಂದಿದೆ. ದೇವರಲ್ಲಿ ಶ್ರದ್ಧಾಭಕ್ತಿಗಳ ಮಹಾಪೂರವೇ ನಮ್ಮಲ್ಲಿದೆ. ನಂಬಿಕೆಗಳ ಜತೆಗೆ ಮೂಢ ನಂಬಿಕೆಗಳೂ ಇವೆ. ದೇಗುಲಗಳ ಆಡಳಿತ ಮಂಡಳಿಯವರಿಗೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸಬಹುದಾದ ಸಾಧ್ಯತೆಗಳ ಅರಿವು ಚೆನ್ನಾಗಿಯೇ ಇರುತ್ತದೆ.
ದೇವರ ದರ್ಶನ ಮತ್ತು ಆರಾಧನೆಗಳಿಗೆ ಜನರಲ್ಲಿರುವ ಭಾವತೀವ್ರತೆಯೂ ಅವರ ಅರಿವಿನಲ್ಲಿರುತ್ತದೆ. ಹಾಗಿರುವಾಗ ಸೂಕ್ಷ್ಮವಾಗಿ ಗಮನಿಸಿದರೆ ಇದು ಆಡಳಿತ ಮಂಡಳಿಯ ಹೊಣೆಗೇಡಿತನವಲ್ಲವೇ? ಪ್ರತಿವರ್ಷವೂ ದೇಗುಲಗಳಲ್ಲಿ ಜನ ಯಾಕೆ ಕಾಲ್ತುಳಿತಕ್ಕೆ ತುತ್ತಾಗುತ್ತಾರೆ? ಅಧಿಕಾರಶಾಹಿಯ ಮುಂಚೂಣಿಯಲ್ಲಿರುವವರೂ  ವೈಷ್ಣೋದೇವಿಯಂತಹ ದೇಗುಲಗಳಿಗೆ ಆಗಾಗ್ಗೆ ಭೇಟಿಕೊಡುತ್ತಾರೆ. ಟಿಕೆಟು ಖರೀದಿಸಿ ದೇಗುಲದ ಬೆಟ್ಟ ಹತ್ತುತ್ತಿರ ಬೇಕಾದರೆ ಅಷ್ಟೊಂದು ಜನಸಂದಣಿ ಒಮ್ಮಿಂದೊಮ್ಮೆಲೆ ಹೇಗೆ ಉಂಟಾಯಿತು? ಯಾರಾದರೊಬ್ಬರು ಜವಾಬ್ದಾರಿ ತೆಗೆದುಕೊಳ್ಳಲೇಬೇಕು. ಜನರುತಮ್ಮದೇ ಆದ ವಿಧದಲ್ಲಿ ವರ್ತಿಸುತ್ತಾರೆ. ಅಸ್ತವ್ಯಸ್ತ ಮನಃ ಸ್ಥಿತಿಯವರು ಹೆಚ್ಚು ಮಂದಿ ಇರುತ್ತಾರೆ.
ಇಂತಹ ಪ್ರದೇಶಗಳಲ್ಲಿ ಆಡಳಿತ ಮತ್ತು ದುರಾಡಳಿತಗಳ ನಡುವೆ ಜನರ ಜೀವ ಹೊಯ್ದಾಡುತ್ತಿರುತ್ತದೆ. ಪ್ರತಿಮುಂಜಾನೆ ನಾವು ವೃತ್ತಪತ್ರಿಕೆಗಳನ್ನು ಕೈಗೆತ್ತಿಕೊಳ್ಳುವಾಗ ಇಂತಹ ದುರಂತದ ಒಂದಿಂದು ಸಂಗತಿ ನಮ್ಮ ಮನವನ್ನು ತಟ್ಟುತ್ತದೆ. ಒಮ್ಮೊಮ್ಮೆ ಲಾಕ್ ಡೌನ್ ಆಗಿದ್ದು ಒಳೀತೇ ಆಯಿತು ಎಂದೆನಿಸುವುದೂ ಇದೆ. ಗಮನಿಸಿ, ಮದುವೆಯೊಂದನ್ನು ಮುಗಿಸಿಕೊಂಡು ವಾಪಸಾಗುವ ಮಂದಿ ರಸ್ತೆ ಅಪಘಾತದಲ್ಲಿ ಮರಣಿಸಿದಾಗ ಆಗುವ ಆಘಾತ ಎಷ್ಟು ಘೋರ. ಅಲ್ಲವೇ? ಇದೆಲ್ಲವೂ ರಾತ್ರೋರಾತ್ರಿ ಬದಲಾಗುವುದು ಸಾಧ್ಯವಿಲ್ಲ ಎಂಬುದು ನನಗೂ ಗೊತ್ತಿದೆ. ವಾಹನ ಚಾಲನಾ ಪರವಾನಗಿಗಳನ್ನುಹೇಗೆ ಕೊಡಲಾಗುತ್ತಿದೆ ಎಂಬುದೂ ನಮಗೆಲ್ಲ ಗೊತ್ತಿದೆ.
ರಸ್ತೆಯ ಬದಿಯಲ್ಲಿ ನಡೆದಾಡುವ ಜನರಿಗೂ ಶಿಸ್ತಿನ ಅರಿವಿಲ್ಲ. ರಸ್ತೆಯಲ್ಲಿ ಹೇಗೆ ನಡೆಯಬೇಕು, ವಾಹನ ಹೇಗೆ ಓಡಿಸಬೇಕು ಎಂಬುದರ ಬಗ್ಗೆ ಶಿಸ್ತಿನ ಶಿಕ್ಷಣ ಇನ್ನೂ ನಮ್ಮ ಜನರಿಗಾಗಿಲ್ಲ. ನಾಗರಿಕಪ್ರeಎಂಬುದು ಕೆಲವರಲ್ಲಿ ಶೂನ್ಯಸ್ಥಿತಿಯಲ್ಲಿರುತ್ತದೆ. ಅನೇಕ ಯುವಕರು ದ್ವಿಚಕ್ರ ವಾಹನಗಳನ್ನು ವೇಗದ ಪರಿವೆಯಿಲ್ಲದೇ ರಸ್ತೆಯಲ್ಲಿ ಬೇಕಾಬಿಟ್ಟಿ ಓಡಿಸುತ್ತಾರೆ, ಅನೇಕರು ಇಂತಹ ತಪ್ಪುಗಳಿಗೆ ಜೀವ ತೆರುತ್ತಾರೆ. ನಮ್ಮ ವ್ಯವಸ್ಥೆ ಇನ್ನಷ್ಟು ಉತ್ತಮ ವಾಗಬೇಕಿದೆ.
ಇನ್ನು ಹೊಸವರ್ಷದ ಮೊದಲ ದಿನ ಬಂದ ಶುಭಸುದ್ದಿಯೆಂದರೆ ಸಾಂಕ್ರಾಮಿಕ ರೋಗದಿಂದ ಪಾಠ ಕಲಿತಿರುವ ಸರಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಮೂಲಭೂತ ಸೌಕರ್ಯ ಒದಗಿಸಲು ಮುಂದಾಗಿದೆ. 150 ಹೊಸ ಮೆಡಿಕಲ್ ಕಾಲೇಜುಗಳ ಸ್ಥಾಪನೆಯ ಸುದ್ದಿಯೂ ಬಂದಿದೆ. ವೈದ್ಯರ ಕೊರತೆ ನೀಗಿಸುವ ನಿಟ್ಟಿನಲ್ಲಿ ಇದೊಂದು ಉತ್ತಮ ಹೆಜ್ಜೆ. ಆದರೆ ಹೆಚ್ಚಿನ ವೈದ್ಯರುಗಳು ಯಾಕೆ ತಮ್ಮ ವೃತ್ತಿಯನ್ನು ವ್ಯಾಪಾರದ ದೃಷ್ಟಿಯಿಂದ ನೋಡುತ್ತಿದ್ದಾರೆ ಎಂಬು ದನ್ನೂ ಇಲ್ಲಿ ಯೋಚಿಸಬೇಕಾಗಿದೆ. ಉತ್ತಮ ಸೇವಾಮನೋಭಾವದ, ಸೂಕ್ಷ್ಮಪ್ರeಯ ವೈದ್ಯರು ಯಾಕೆ ಕಡಿಮೆಯಾಗುತ್ತಿದ್ದಾರೆ ಎಂಬುದರ ಪರಾಮರ್ಶೆ ಮಾಡಿದಾಗ ಮೆಡಿಕಲ್ ಸೀಟುಗಳ ಮಾರಾಟದ ಚಿತ್ರಣ ಕಣ್ಮುಂದೆ ಬರುತ್ತದೆ. ಇದೆಲ್ಲವೂ ತೊಲಗದ ವಿನಃ ವೈದ್ಯಕೀಯ ಕ್ಷೇತ್ರ ಶುದ್ಧವಾಗುವುದು ಸಾಧ್ಯವಿಲ್ಲ.
ವೈದ್ಯರಾಗುವುದಕ್ಕೆ ಕೋಟಿಗಟ್ಟಲೆ ವ್ಯಯಿಸಬೇಕಾದಾಗ, ಉಪಕರಣಗಳ ಖರೀದಿಗೆ ಲಕ್ಷಗಟ್ಟಲೆ ಸುರಿಯಬೇಕಾದಾಗ ವೈದ್ಯರಲ್ಲಿ ಸೇವಾಮನೋಭಾವನಿರೀಕ್ಷಿಸುವುದಾದರೂ ಹೇಗೆ? ಮೆಡಿಕಲ್ ಸೀಟುಗಳು ಮಾರಾಟವಾಗುತ್ತಿರುವುದು ಸರಕಾರಕ್ಕೆ ಗೊತ್ತಿಲ್ಲವೇ? ಎಲ್ಲರಿಗೂ ಗೊತ್ತೇ ಇದೆ. ತರಬೇತು ಪಡೆದ ವೈದ್ಯರ ಸಂಖ್ಯೆಯನ್ನು ತ್ವರಿತವಾಗಿ ಹೆಚ್ಚಿಸಬೇಕಿದೆ. ಬೇರೆ ಬೇರೆ ಕೋರ್ಸುಗಳನ್ನು ಹುಟ್ಟುಹಾಕಿ ಅವುಗಳ ಮೂಲಕ ನುರಿತ ವ್ಯದ್ಯರು ಹೊರ ಹೊಮ್ಮುವಂತೆ ಮಾಡಬೇಕು.
ಇಂದು ತಂತ್ರಜ್ಞಾನದ ಯುಗ. ಅದನ್ನು ದೊಡ್ಡ ಪ್ರಮಾಣದಲ್ಲಿ ಬಳಸಿಕೊಂಡು ಈಗಿರುವ ವ್ಯವಸ್ಥೆಯನ್ನು ತುರ್ತಾಗಿ ಬದಲಿಸಬಹುದು. ಆಗ ಮಾತ್ರ ಆಸ್ಪತ್ರೆಗಳ ಲೂಟಿಕೋರತನದಿಂದ ರೋಗಿಗಳು ಬಚಾವಾಗಬಹುದು. ಸರಕಾರದ ಮಟ್ಟದಲ್ಲಿ ಈಗ ಆಗಬೇಕಿರುವುದು ತ್ವರಿತ ನಿರ್ಧಾರ ತೆಗೆದುಕೊಳ್ಳುವ ಕ್ಷಮತೆ, ಉತ್ತಮ ನೀತಿನಿಯಮಗಳು ಮತ್ತು ಅವುಗಳ ಕ್ರಮಾಗತ ಅನುಷ್ಠಾನ. ನೆನಪಿಡಿ, ಈ ದೇಶದ ಶೇ.30-40 ಜನರಿಗೆ ಇನ್ನೂ ಎರಡುಹೊತ್ತಿನ ಕೂಳು ಸಿಗುತ್ತಿಲ್ಲ. ವಾಸಿಸಲು ಮನೆಯಿಲ್ಲದ ಉಡಲು ಬಟ್ಟೆ ಇಲ್ಲದ ಮಂದಿ ಇನ್ನೂ ಇದ್ದಾರೆ.
ಒಂದು ಕಡೆ ಫೋರ್ಬ್ಸ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಿರಿವಂತರ ಸಂಖ್ಯೆ ದೇಶದಲ್ಲಿ ಹೆಚ್ಚುತ್ತಿದೆ. ಇನ್ನೊಂದು ಕಡೆ ಕೊಳೆಗೇರಿಗಳಲ್ಲಿ ವಾಸಮಾಡುವಕಡುಬಡವರ ಮತ್ತು ಸದಾ ನೋವಿನ ನರಳುವ ಮಧ್ಯಮವರ್ಗದವರ ಸಂಖ್ಯೆ ಹೆಚ್ಚುತ್ತಲೇ ಇದೆ. ಕೋಟ್ಯಂತರ ಜನರು ನರಕಸದೃಶ ಜೀವನವನ್ನುಕಳೆಯಬೇಕಾದ ದುಸ್ಥಿತಿ ಇದೆ. ಅಂಥವರ ಜೀವನದ ಮಟ್ಟ ಸುಧಾರಿಸಬೇಕಿದೆ. ಮದುವೆ ಸಮಾರಂಭಗಳಿಗೆ ೫೦ಕ್ಕಿಂತ ಹೆಚ್ಚು ಜನ ಸೇರಬೇಡಿ, ಶವ ಸಂಸ್ಕಾರಕ್ಕೆ 20ಕ್ಕಿಂತ ಹೆಚ್ಚು ಜನ ಸೇರುವುದು ಬೇಡ, ಮಾಸ್ಕ್ ಧರಿಸಿ, ಅಂತರ ಕಾಪಾಡಿ ಎಂದು ಸರಕಾರ ಒಂದು ಕಡೆ ಹೇಳುತ್ತಿದೆ. ಆದರೆ ಉಳ್ಳವರ, ಶಾಸಕರ ಮನೆ ಮದುವೆಗಳಲ್ಲಿ ಹತ್ತಿಪ್ಪತ್ತು ಸಾವಿರ ಜನ ಸೇರುತ್ತಾರೆ.
ಚುನಾವಣಾ ರ‍್ಯಾಲಿಗಳತ್ತ ಒಮೈಕ್ರಾನ್ ದಾಂಗುಡಿಯಿಡುತ್ತಿದೆ. ಸಹಸ್ರಾರು ಮಂದಿ ತಮ್ಮ ನಾಯಕನ ಭಾಷಣ ಕೇಳಲು ಒಂದೆಡೆ ಸೇರುತ್ತಾರೆ. ಅಂತರವೂ ಇಲ್ಲ, ಮುಖಗವಸು ಮೊದಲೇ ಇಲ್ಲ. ಇಂತಹ ಅಪಸವ್ಯಗಳಿರುವಾಗ ಹೊಸ ವರ್ಷವನ್ನು ನಾನು ಹೇಗೆ ಸ್ವಾಗತಿಸಲಿ? ನಿಮಗಾಗಿ ಇಂದು ಕವನವನ್ನು ಸಾದರಪಡಿಸುತ್ತಿದ್ದೇನೆ. ಅದನ್ನು ಬರೆದಾತ ಮಾನವಕುಲದ ಬಗ್ಗೆ ದೊಡ್ಡ ಭರವಸೆಯ ಆಶಾಕಿರಣವನ್ನು ಮೂಡಿಸಿzನೆ. ನಾವೂ ಅದೇ ಭರವಸೆಯ ಜತೆಗೆ ಮುಂದೆ ಸಾಗೋಣ.
ಹೊಸ ವರುಷದ ಹೊಸ ಮುಂಜಾವು ಆಗಸದಿಅದ ಭೂಮಿಗಿಳಿದಿದೆ ಶಾಂತಿ ಮತ್ತು ಪ್ರೇಮದ ಕಿರಣಗಳು ನೆಲದ ಕಣಕಣದಲ್ಲೂ ಪಸರಿಸಿವೆ ಹಕ್ಕಿಪಕ್ಷಿಗಳ ಕೂಜನದ ಮಾನವತೆಗೆ ಮಾರ್ದವತೆ ತುಂಬಿದೆ ಇನ್ಯಾರದೂ ರಕ್ತ ಹರಿಯದಿರಲಿ ಯಾರ ಕಣ್ಣಲ್ಲೂ ಕಣ್ಣೀರು ಸುರಿಯದಿರಲಿ ಇಬ್ಬನಿಯ ಹನಿಹನಿಗಳು ತೊಟ್ಟಿಕ್ಕಲಿ ಬಡತನ ಹಸಿವೆ ದೂರ ಸರಿಯಲಿ ದ್ವೇಷ ಅಳಿಯಲಿ ಪ್ರೀತಿಯ ತಂಗಾಳಿ ಸುಳಿಯಲಿ ಸಮರಸದ ಸಮಭಾವದ ಮೂಲಕ ಸತ್ಯ ಅಹಿಂಸೆ ಮತ್ತು ಪ್ರೀತಿ ಜಗದಾದ್ಯಂತ ವ್ಯಾಪಿಸಲಿ ಸೂರ್ಯನ ಪ್ರಖರ ಕಿರಣ ಅಂತರಾತ್ಮದ ತಮಸ್ಸನ್ನು ತೊಡೆಯಲಿ ಹೊಸ ಆಲೋಚನೆಯ ನವ ಪ್ರಭಾತದಿಂದಮನೆಮನೆಯಲ್ಲಿ ಸಂತೋಷದ ದೀಪ ಬೆಳಗಲಿ ಇವಷ್ಟೇ ಹಾರೈಕೆಗಳು.