ಹೆಚ್ಚುತ್ತಿರುವ ರಜೆ: ನೌಕರ ವರ್ಗವನ್ನು ದೂಷಿಸಬೇಡಿ
ಆರ್ಥಿಕ ತಜ್ಞರು, ಉದ್ಯಮಿಗಳು, ಜನಸಾಮಾನ್ಯರು, ಪ್ರeವಂತರು ಸಾಲು ಸಾಲು ರಜೆಗಳಿಂದಾಗುವ ಪ್ರೊಡಕ್ಟಿವಿಟಿ ಬಗೆಗೆ ತಲೆ ಕೆಡಿಸಿಕೊಳ್ಳು ತ್ತಾರೆ. ವ್ಯಾಕುಲತೆ ತೋರಿಸುತ್ತಾರೆ. ಆದರೆ, ತಮ್ಮ ಸ್ವ ರಕ್ಷಣೆಗಾಗಿ, ತಮ್ಮ ಭವಿಷ್ಯಕ್ಕಾಗಿ ಕೇಳಿದವರಿಗೆಲ್ಲ ರಜೆಯ ಸೌಲಭ್ಯ ನೀಡುವ ರಾಜಕಾರಣಿಗಳು( ಸರಕಾರ) ಅದರ ಬಗೆಗೆ ಕಿಂಚಿತ್ ಕೂಡ ತಲೆ ಕೆಡಿಸಿಕೊಳ್ಳುವುದಿಲ್ಲ.
ರಮಾನಂದ ಶರ್ಮಾ
ದೇಶಾದ್ಯಂತ ಬ್ಯಾಂಕುಗಳಿಗೆ ಜನವರಿಯಲ್ಲಿ 16 ದಿನಗಳ ರಜೆ ಎಂದು ಮಾಧ್ಯಮಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಅದು ಸಹಜ. ಇದನ್ನುಗಮನಿಸಿದರೆ, ಜಗವೆಲ್ಲ ಕೆಲಸ ಮಾಡುತ್ತಿರುವಾಗ ಬ್ಯಾಂಕುಗಳು ಮಾತ್ರ ಸ್ತಬ್ಧವಾಗಿವೆ ಎನ್ನುವ ಭಾವನೆ ಮೂಡುತ್ತದೆ. ಆದರೆ, ವಸ್ತುಸ್ಥಿತಿ ಏನೆಂದರೆ ಇತರ ರಾಜ್ಯ ಮತ್ತು ಕೇಂದ್ರ ಸರಕಾರಿ ಕಚೇರಿಗಳಿಗೆ ಇರುವಂತೆ ಮತ್ತು ಇರುವಷ್ಟೇ ಬ್ಯಾಂಕುಗಳಿಗೂ ರಜೆಗಳು ಇರುತ್ತವೆ.
ನೆಗೋಷಿಯಬಲ್ ಇನ್‌ಸ್ಟ್ರುಮೆಂಟ್ ಆಕ್ಟ್ ಅಡಿಯಲ್ಲಿ, ಸಂಬಂಧಪಟ್ಟ ರಾಜ್ಯಗಳು ತಮ್ಮ ರಾಜ್ಯದಲ್ಲಿ ಪ್ರಚಲಿತ ಇರುವ ಧಾರ್ಮಿಕ, ಸಾಮಾಜಿ ಪರಂಪರೆ, ಪದ್ಧತಿಗಳು ಮತ್ತು ಹಬ್ಬ- ಹುಣ್ಣಿಮೆಗಳ ಆಚರಣೆಗೆ ಸ್ಪಂದಿಸಿ ಮತ್ತು ಜನರ ಭಾವನೆ ಮತ್ತು ನಂಬಿಕೆಗಳಿಗೆ ಪೂರಕವಾಗಿ ಸಾರ್ವಜನಿಕ ರಜೆಗಳನ್ನು ನಿಗದಿಪಡಿಸುತ್ತವೆ. ಈ ಪ್ರಕ್ರಿಯೆಯಲ್ಲಿ ನೌಕರರ ಕೈವಾಡ ಇರುವುದಿಲ್ಲ. ಈ ಆಕ್ಟ್ ಅನ್ವಯ ಬ್ಯಾಂಕುಗಳು ಸಂಬಂಧ ಪಟ್ಟ ರಾಜ್ಯಗಳ ನಿರ್ದೇಶನ ಪಾಲಿಸಬೇಕಾಗುತ್ತದೆ. ಈ ರಜೆಗಳು ಸರಕಾರಿ ಕಚೇರಿಗಳಿಗೂ ಮತ್ತು ಬ್ಯಾಂಕುಗಳಿಗೂ ಏಕರೂಪವಾಗಿವೆ.
ವಿಪರ್ಯಾಸವೆಂದರೆ, ಬ್ಯಾಂಕುಗಳ ಸುದೀರ್ಘ ರಜೆಯ ಬಗೆಗೆ ಆಕ್ರೋಶ ವ್ಯಕ್ತ ಮಾಡುವವರು, ಸರಕಾರಿ ಕಚೇರಿಗಳ ಸಾಲು -ಸಾಲು ರಜೆಗಳ ಬಗೆಗೆ ಧ್ವನಿ ಎತ್ತುವುದಿಲ್ಲ. ಇಂದು ಬ್ಯಾಂಕುಗಳಲ್ಲಿ ಶೇ.೫೦ಕ್ಕಿಂತಲೂ ಹೆಚ್ಚು ವ್ಯವಹಾರ ಡಿಜಿಟಲೀಕರಣ ಗೊಂಡಿದ್ದು ಗ್ರಾಹಕರಿಗೆ ಅಂತಹ ಅನನುಕೂಲ ವಾಗುವುದಿಲ್ಲ. ಅದರೆ, ಸರಕಾರಿ ಕಚೇರಿಗಳು ಬಂದಾದರೆ ಒಂದು ಹುಲ್ಲು ಕಡ್ಡಿಯೂ ಅಲುಗಾ ಡುವುದಿಲ್ಲ. ಸಾಲು ಸಾಲು ರಜೆಗಳಿಗಾಗಿ ಕೇವಲ ಬ್ಯಾಂಕುಗಳನ್ನು ಮಾತ್ರ ಏಕೆ ಟಾರ್ಗೆಟ್ ಮಾಡುತ್ತಾರೆ? ವಿಚಿತ್ರವೆಂದರೆ ದೇಶದಲ್ಲಿ ಬ್ಯಾಂಕ್ ಸಿಬ್ಬಂದಿ ಯನ್ನು ನೋಡುವ ದೃಷ್ಟಿಯೇ ಬೇರೆ.
ದೇಶಾದ್ಯಂತ ಬ್ಯಾಂಕುಗಳಿಗೆ ಜನವರಿಯಲ್ಲಿ 16 ದಿನ ರಜೆ ಇದೆಯಾದರೂ, ಇದು ದೇಶದ ಎಲ್ಲ ಭಾಗಗಳಿಗೆ ಅನ್ವಯಿಸುವುದಿಲ್ಲ. ಯಾವುದೇ ಒಂದು ರಾಜ್ಯದಲ್ಲಿ 16 ದಿನ ರಜೆ ಇರುವುದಿಲ್ಲ. ಸಂಭ್ರಮಾಚರಣೆ ಕಾರಣ ಕೆಲವು ಬ್ಯಾಂಕುಗಳು ನಿರ್ದಿಷ್ಟ ರಾಜ್ಯಗಳಲ್ಲಿ ನಿರ್ದಿಷ್ಟ ದಿನಾಂಕದಂದು ಮುಚ್ಚಲ್ಪಡುತ್ತವೆ ಮತ್ತು ದೇಶದ ಇತರ ಭಾಗಗಳಲ್ಲಿ ತೆರೆದಿರುತ್ತವೆ. ಕರ್ನಾಟಕದಲ್ಲಿ ಜನವರಿಯಲ್ಲಿ ನಾಲ್ಕು ರವಿವಾರ, ಎರಡು ಶನಿವಾರ, ಮಕರಸಂಕ್ರಾಂತಿ ಮತ್ತು ಗಣರಾಜ್ಯೋತ್ಸ ದಿನ ಹೀಗೆ ೮ ರಜೆಗಳು ಮಾತ್ರ. ಆದರೆ, ಈ ಮರ್ಮವನ್ನು ತಿಳಿಯದ ಜನತೆ 16 ದಿನಗಳ ರಜೆ ಎಂದೇ ಬೊಬ್ಬೆಹೊಡೆಯುತ್ತಾರೆ.
ವಾರಕ್ಕೆ ಐದು ದಿನ:ಬ್ಯಾಂಕ್ ಅಥವಾ ಸರಕಾರಿ ನೌಕರರು ಅನುಭವಿಸುವ ರಜಾಸೌಲಭ್ಯಗಳು, ಅವರಿಗೆ ಸರಕಾರ ಕೊಡಮಾಡಿದ ಕೊಡುಗೆಯೇ ವಿನಾ ನೌಕರರು ಕೇಳಿ ಪಡೆದದ್ದಲ್ಲ. ಅವರು ತಮ್ಮ ಸಂಬಳ ಹೆಚ್ಚಳಕ್ಕೆ ಒತ್ತಾಯಿಸುತ್ತಾರೆ, ಮುಷ್ಕರ ಹೂಡುತ್ತಾರೆ, ಕಚೇರಿಗಳನ್ನು ಬಂದ್ ಕೂಡ ಮಾಡುತ್ತಾರೆ. ಆದರೆ, ಅವರು ಎಂದೂ ರಜಾ ಸೌಲಭ್ಯ ಹೆಚ್ಚಳಕ್ಕೆ ಹೋರಾಡಿದ ಉದಾಹರಣೆ ಇಲ್ಲ. ಇತ್ತೀಚೆಗೆ ಜಗತ್ತಿನಾದ್ಯಂತ ಮತ್ತು ದೇಶದ ಕೆಲವು ವಲಯಗಳಲ್ಲಿ ೫ ದಿನಗಳ ವಾರ ಜಾರಿಯಾಗುತ್ತಿರುವುದನ್ನು ನೋಡಿ ಅವರುಗಳೂ ಏಕರೂಪತೆ ಕೇಳುತ್ತಿzರೆ ವಿನಾ ಎಂದೂ ಹೆಚ್ಚಿನ ರಜೆಗಾಗಿ ಬೇಡಿಕೆ ಸಲ್ಲಿಸುವುದಿಲ್ಲ.
ವಿದೇಶಗಳಲ್ಲಿ ಐದು ದಿನಗಳ ವಾರದ ಪರಿಕಲ್ಪನೆಯನ್ನು ಕಾರ್ಪೊರೇಟ್ ಆಫೀಸುಗಳು ಮತ್ತು ಕೇಂದ್ರ ಸರಕಾರಿ ಕೆಲವು ಕಚೇರಿಗಳಲ್ಲಿ ಅನಾವರಣಗೊಳಿಸಿದ್ದು, ಅದು ತೀವ್ರವಾಗಿ ಹರಡುತ್ತಿದೆ. ಸದ್ಯದಲ್ಲಿ ಅದು ನಾರ್ಮ್iಗ ಬಹುದು. ಸೌದಿ ಅರೇಬಿಯಾದಲ್ಲಿ ನಾಲ್ಕು ದಿನಗಳ ಕೆಲಸದ ಪದ್ಧತಿ ಬರುತ್ತಿದ್ದು, ಅದನ್ನು ಇಲ್ಲಿಯೂ ಜಾರಿ ಗೊಳಿಸಿದರೆ ಆಶ್ಚರ್ಯಪಡಬೇಕಿಲ್ಲ. ವಿದೇಶವನ್ನು, ವಿದೇಶಿಗರನ್ನು ಅನುಸರಿಸುವುದರಲ್ಲಿ ನಾವು ಮುಂದ ಲ್ಲವೇ? ಸರಕಾರವೇ ರಜೆಗಳನ್ನು ಕೈ ಎತ್ತಿ ನೀಡುವಾಗ ನೌಕರವರ್ಗ ಕೈ ಚಾಚಿ ಸ್ವೀಕರಿಸುವುದರಲ್ಲಿ ತಪ್ಪೇನಿದೆ?
ಈ ದೇಶದಲ್ಲಿ ಸಾಲು ಸಾಲು ರಜೆಗಳು ಜಾತಿ, ಮತ, ಪಂಥ ಮತ್ತು ಭಾಷಾ ಆಧಾರಿತ ರಾಜಕಾರಣದ ಕೂಸುಗಳು. ಪ್ರತಿಯೊಂದು ರಜೆಯ ಹಿಂದೆ ಯಾವುದಾರೂ ಸಾಮಾಜಿಕ, ಧಾರ್ಮಿಕ ಅಥವಾ ರಾಜಕೀಯ ಧುರೀಣರ ಮತ ಬ್ಯಾಂಕ್ ಇರುವುದು ಗುಟ್ಟೇನಲ್ಲ. ಈ ರಜೆಗಳನ್ನು ಟೀಕಿಸುವವರಲ್ಲಿ  ಷ್ಟುಜನರು ತಮ್ಮ, ಜಾತಿ, ಮತ, ಪಂಥಗಳ, ಹಬ್ಬ- ಹುಣ್ಣಿಮೆ ಮತ್ತು ತಮ್ಮ ಗುರುಗಳ ಜಯಂತಿಗೆ ಘೊಷಿಸಿದ ರಜೆಯನ್ನುಬಿಟ್ಟು ಕೊಡಲು ಮುಂದಾಗ ಬಹುದು? ರಜೆಗಳು ಬಂದಾಗ ದುಡಿಯುವ ವರ್ಗವನ್ನು ತರಾಟೆಗೆ ತೆಗೆದು ಕೊಳ್ಳುವವರು, ಈ ಸೌಲಭ್ಯವನ್ನು ನೀಡಿದ ಸರಕಾರದ ಬಗೆಗೆ ಮತ್ತು ಈ ರಜೆಗಳ ಹಿಂದಿನ ಅಗೋಚರ ಶಕ್ತಿಯ ಬಗೆಗೆ ತುಟಿ ಪಿಟಕ್ಕೆನ್ನುವುದಿಲ್ಲ.
ಕೊರೋನಾ -ಕೋವಿಡ್ ಸಮಯದಲ್ಲಿ, ಕಚೇರಿಗಳೆಲ್ಲ ಬಾಗಿಲು ಮುಚ್ಚಿರಲು, ಬ್ಯಾಂಕ್ ಸಿಬ್ಬಂದಿಯಷ್ಟೇ ಜೀವದ ಹಂಗು ತೊರೆದು ಜನತೆಗೆ ಸೇವೆ ಸಲ್ಲಿಸಿದ್ದನ್ನು ಯಾರೂ ಉಲ್ಲೇಖ ಮಾಡುವುದಿಲ್ಲ. ಅವರು ಅಗೊಮ್ಮೆ ಈಗೊಮ್ಮೆ ಅನುಭವಿಸುವ ಸುದೀರ್ಘ  ರಜೆಗಳು ಮಾತ್ರ ಸುದ್ದಿ ಮಾಡುತ್ತವೆ. ಫೆಬ್ರವರಿಯಲ್ಲಿ ಸಾರ್ವಜನಿಕ ರಜೆಗಳೇ ಇಲ್ಲ. ಯಾರಾದರೂ ಅಲವತ್ತುಕೊಂಡಿzರೆಯೇ? ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲೇ ಸಾರ್ವಜನಿಕ ರಜೆಗಳೇ ಇರುವುದಿಲ್ಲ. ಯಾರಾದರೂ ಪ್ರಶ್ನಿಸಿದ್ದಾರೆಯೇ?
ಪ್ರೊಡಕ್ಟಿವಿಟಿಗೆ ಹೊಡೆತ:ದೇಶದಲ್ಲಿ ಪ್ರೊಡಕ್ಟಿವಿಟಿ ಕಡಿಮೆಯಾಗಲು ಸಾರ್ವಜನಿಕ ರಜೆಗಳೇ ಕಾರಣವಾಗಿದ್ದು, ಇವುಗಳನ್ನು ಕಡಿಮೆಮಾಡಬೇಕು ಎನ್ನುವ ಬೇಡಿಕೆ ಆಗೊಮ್ಮೆ ಈಗೊಮ್ಮೆ ಕೇಳಿಬರುತ್ತದೆ. ರಾಷ್ಟೀಯ ಹಬ್ಬಗಳಿಗೆ ನೀಡುವ ರಜೆಗಳನ್ನು ಕೇವಲ ಸ್ವಾತಂತ್ರ್ಯ ಸೀಮಿತಮಾಡಬೇಕು ಮತ್ತುಸಾರ್ವಜನಿಕ ರಜೆಗಳನ್ನು ಮುಖ್ಯಹಬ್ಬಗಳಿಗಷ್ಟೇ ನೀಡಬೇಕು ಎನ್ನುವ ಮಾತೂ ಕೆಲವರಿಂದ ಕೇಳಿಬಂದಿದೆ.
ಹಾಗೆಯೇ ಮಹಾಪುರುಷರ ಜಯಂತಿಗಳಿಗೆ ರಜೆ ನೀಡುವ ಪದ್ಧತಿಯನ್ನು ನಿಲ್ಲಿಸಬೇಕು ಎನ್ನುವ ಆಬಿಪ್ರಾಯಗಳು ಕೇಳಿ ಬಂದಿದ್ದು, ಅದರ ಧ್ವನಿ ತುಂಬಾ ಕ್ಷೀಣವಾಗಿದ್ದು ಸದ್ದು ಮಾಡುವುದಿಲ್ಲ. ಆದರೆ, ಒಮ್ಮೆ ನೀಡಿದ ಸೌಲಭ್ಯವನ್ನು ಹಕ್ಕಾಗಿ ಪರಿಗಣಿಸುವ ಈ ದೇಶದಲ್ಲಿ ಇದು ಸಾಧ್ಯವೇ? ಇದು ಒಂದು ರೀತಿಯಲ್ಲಿ ಒಂದು ಬಸ್ಸು ಅಥವಾ ರೈಲನ್ನು ಒಂದು ಊರಲ್ಲಿ ನಿಲುಗಡೆ ನೀಡಿ ಸ್ವಲ್ಪ ದಿನಗಳ ನಂತರ ಅದನ್ನು ನಿಲ್ಲಿಸುವ ಪ್ರಯತ್ನದಂತೆ ಎನ್ನಬಹುದು. ಈ ದೇಶದಲ್ಲಿ ಒಮ್ಮೆ ಒಂದು ಸೌಲಭ್ಯ ನೀಡಿದರೆ ಅದನ್ನು ವಾಪಸು ಪಡೆಯುವುದು ಅಥವಾ ರದ್ದು ಮಾಡುವುದು ಅಸಾಧ್ಯ.
ಅಕಸ್ಮಾತ್ ಅಂಥ (ದು)ಸಾಹಸಕ್ಕೆ ಕೈ ಹಾಕಿದರೆ ಅದಕ್ಕೆ ತೆರುವ ಬೆಲೆ ಕೂಡ ತುಂಬಾ ದುಬಾರಿಯಾಗಿರುತ್ತದೆ. ರಜೆಯ ವಿಚಾರದಲ್ಲೂ ಅಷ್ಟೇ: ಅದನ್ನು ನೀಡುವ ಮೊದಲು ಆಳವಾಗಿ ಚಿಂತನ ಮಂಥನ ಮಾಡದಿದ್ದರೆ ಅಥವಾ ಅದು ಮಾಡುವ ಪರಿಣಾಮ ಗಮನಕ್ಕೆ ತೆಗೆದುಕೊಳ್ಳದಿದ್ದರೆ ಕಾಣುವ ದೃಶ್ಯಾ ವಳಿಯೇ ಬೇರೆಯಾಗಿರುತ್ತದೆ.
ರಜೆ ಕಡಿತಗೊಳಿಸಲು ಅಥವಾ ರಜಾ ನಿಯಮಾವಳಿಯನ್ನು ರಿವ್ಯೂ ಮಾಡಲು ಶಿ-ರಸು ಮಾಡುವಂತೆ 2019ರಲ್ಲಿ ನೇಮಿಸಿದ ಸಮಿತಿ ತನ್ನ ವರದಿ ನೀಡಿದ ಬಗೆಗೆ ಮಾಹಿತಿ ಇಲ್ಲ. ಸಮಿತಿಯ ಕೆಲಸ ಅಷ್ಟು ಸುಲಭವಲ್ಲ ಎನ್ನುವುದೂ ಅಷ್ಟೇ ಸತ್ಯ.