ಅಮೆರಿಕದಲ್ಲಿ ಬಡವರೂ ಇದ್ದಾರೆಯೇ ?
ಶಿಶಿರ ಕಾಲ
ಶಿಶಿರ್‌ ಹೆಗಡೆ
@.
ಲಾಸ್ ವೇಗಸ್‌ನ ಕ್ಯಾಸಿನೋಗಳ ವಾರ್ಷಿಕ ಆದಾಯ ಆರು ಬಿಲಿಯನ್ ಡಾಲರ್. ಇದೇ ಕ್ಯಾಸಿನೋಗಳ ನೆಲದಡಿಯ ಮಳೆ ನೀರು ಮೋರಿಯಲ್ಲಿಸುಮಾರು ಐದಾರುನೂರು ಜನರ ವಾಸ. ಜೋರಾಗಿ ಮಳೆ ಬಂದರೆ ಮಿಡತೆ ನೆಲದೊಳಗಿಂದ ಬಂದಂತೆ ರಸ್ತೆಗಳಲ್ಲಿ ಬಂದು ನಿಲ್ಲುತ್ತಾರೆ.
ಭಾರತಕ್ಕಿರುವಷ್ಟು ಇತಿಹಾಸ ಇನ್ನೊಂದು ದೇಶಕ್ಕಿಲ್ಲ. ಆದಿಮಾನವನ ಸಿಕ್ಕ ಪಳೆಯುಳಿಕೆಗಳನ್ನು, ಮತ್ತಿನ್ನೊಂದಿಷ್ಟು ಆಧಾರವನ್ನು ಇಟ್ಟುಕೊಂಡು ಲೆಕ್ಕ ಹಾಕಿದರೆ ಎರಡೂವರೆ ಲಕ್ಷ ವರ್ಷ. ಆದರೆ ಅಮೆರಿಕ ಹಾಗಲ್ಲ. ಇಲ್ಲಿ ಜನವಸತಿ ಬಹಳ ಹಿಂದಿನಿಂದ ಇದ್ದರೂ ಅದು ನಗಣ್ಯ. ಹದಿನೈದನೇ ಶತಮಾನದಲ್ಲಿ ಯುರೋಪಿ ಯನ್ನರು ಬರುವವರೆಗೆ ಇಲ್ಲಿ ಅಲ್ಲಲ್ಲಿ ಒಂದಿಷ್ಟು ಬುಡಕಟ್ಟು ಮನುಷ್ಯರಿದ್ದರಷ್ಟೆ.
ಹಾಗಾಗಿ ಅಮೆರಿಕ ತೀರಾ ಇತ್ತೀಚೆ ಹುಟ್ಟಿಕೊಂಡ ದೇಶ ಎಂದೇ ಹೇಳಬೇಕು. ಆ ಕಾರಣಕ್ಕಾಗಿಯೇ ಇಲ್ಲಿ ನಮ್ಮಲ್ಲಿನಂತೆ ಐತಿಹಾಸಿಕವೆನ್ನುವ, ಸಾವಿರ ವರ್ಷದ ಲೆಕ್ಕದ ಹಳೆಯದೆನ್ನುವ ಯಾವೊಂದೂ ಇಲ್ಲ. ಆದಾಗಿಯೂ ಹದಿನಾರನೇ ಶತಮಾನದಿಂದೀಚೆ ಇಲ್ಲಿನವರೆಗೂ ಈ ನೆಲವನ್ನು     ಎಂದೇ ಕರೆಯುವುದು. ಅಮೆರಿಕನ್ ಡ್ರೀಮ್ ಎನ್ನುವ ಶಬ್ದವಿದೆ.
ಹದಿನೈದನೇ ಶತಮಾನದಲ್ಲಿ ಇದೊಂದು ಹೊಸ ನೆಲ. ಜಗತ್ತಿನ ಎಲ್ಲ ದೇಶದವರು ವಾಸಿಸುವ ಏಕೈಕ ದೇಶವೆಂದರೆ ಅಮೆರಿಕ. ಅಮೆರಿಕ ಎಂದರೆ ಇದು ವಲಸೆ ಬಂದವರೇ ಈಗಿತ್ತಲಾಗೆ ಆರೆಂಟುನೂರು ವರ್ಷದಲ್ಲಿ ಕಟ್ಟಿ ನಿಲ್ಲಿಸಿದ ದೇಶ. ಅಂದಿಗೂ – ಇಂದಿಗೂ ಅಮೆರಿಕ ಎಂದರೆ ಇಲ್ಲಿಗೆ ವಲಸೆ ಬರುವವರು ಒಂದಿಷ್ಟು ಕನಸನ್ನು ಹೊತ್ತೇ ಬರುವವರು. ವಲಸೆ ಬರುವ ಜನರಲ್ಲಿನ ಯಶಸ್ಸಿನ ದಾಹದಿಂದಲೇ ಹುಟ್ಟಿದ ದೇಶವಾದದ್ದರಿಂದಲೋ ಏನೋ, ಇಂದು ಅಮೆರಿಕ ಜಗತ್ತಿನ ಅತ್ಯಂತ ಬಲಿಷ್ಠ, ಸದೃಢ ದೇಶ. ಅದೇ ಕಾರಣಕ್ಕೆ ದೊಡ್ಡಣ್ಣ ಎಂಬಿತ್ಯಾದಿ ಉಪಮೆ.
ಹೀಗಿರುವ, ಹೀಗೆ ಹುಟ್ಟಿದ, ಬೆಳೆದ, ಬಾಳುತ್ತಿರುವ, ಶ್ರೀಮಂತ ಒಂದು ದೇಶದಲ್ಲಿ, ಅವಕಾಶದ ನೆಲದಲ್ಲಿ ಬಡತನ ಇರಲೇಬಾರದು. ಈ ಬಡತನವೆನ್ನುವುದು ತೀರಾ ಸಾಪೇಕ್ಷ. ಒಂದು ದೇಶದ, ಪ್ರಾಂತ್ಯದ ಕಡು ಬಡವ ಇನ್ನೊಂದು ಕಡೆಯ ಕಡುಬಡವನನ್ನು ಹೋಲಿಸುವುದು ಸರಿಯಲ್ಲ. ಪಾಕಿಸ್ತಾನದಲ್ಲಿನ ಬಡತನ, ಸೊಮಾಲಿಯಾದಲ್ಲಿನ ಬಡತನ, ಭಾರತದಲ್ಲಿನ ಬಡತನ, ಅಮೆರಿಕದಲ್ಲಿನ ಬಡತನ ಇವೆಲ್ಲದರ ಗ್ರಹಿಕೆ ಬೇರೆ ಬೇರೆ, ಆದರೆ ಬಡತನ ಎನ್ನುವ ಶಬ್ದಕ್ಕೆ ವ್ಯಾಖ್ಯಾನ ಮಾತ್ರ ಒಂದೇ.
ಜೀವನಾಶ್ಯಕ ವಸ್ತುಗಳನ್ನು, ಆಹಾರ, ಸೂರು ಇವಿತ್ಯಾದಿ ಪಡೆಯಲು ಅಸಾಧ್ಯವಾದ ಸ್ಥಿತಿ. ಕಾರಣವೇನೇ ಇರಬಹುದು, ಬಡತನ ಎಲ್ಲ ಕಡೆಯೂ ಕ್ರೂರವೇ. ಈಕ್ರೌರ್ಯ ಇನ್ನಷ್ಟು ಢಾಳಾಗುವುದು ಶ್ರೀಮಂತಿಕೆಯ ಮಗ್ಗುಲ ಈ ಬಡತನ ನಿಂತಾಗ. ಅಂತಹ ವ್ಯತಿರಿಕ್ತತೆ ಅಮೆರಿಕದಲ್ಲಿ ಅಲ್ಲಲ್ಲಿ ಸೂಕ್ಷ್ಮವಾಗಿ ಗ್ರಹಿಸಿದಲ್ಲಿ ಗಮನಕ್ಕೆ ಬರುತ್ತದೆ. ಇಂತಹ ಮೊದಲ ಅನುಭವವಾಗಿದ್ದು ಲಾಸ್ ವೇಗಾಸ್‌ನಲ್ಲಿ. ಲಾಸ್ ವೇಗಸ್ ಎಂದರೆ ಅದು ಅಮೆರಿಕದ ಜೂಜಿನ ಚಾವಡಿ. ಅಲ್ಲಿನ ಸುಮಾರು ಏಳು ಕಿಲೋಮೀಟರ್ ರಸ್ತೆಯ ಇಕ್ಕೆಲಗಳಲ್ಲಿ ಹತ್ತಿಪ್ಪತ್ತು ಕ್ಯಾಸಿನೊಗಳು, ಫ್ಯಾಷನ್ ಮಾಲ್‌ಗಳು, ದುಬಾರಿ ಬ್ರಾಂಡಡ್ ಅಂಗಡಿಗಳು, ರಂಗಬಿರಂಗಿ ಝಗಮಗಿಸುವ ಲೈಟುಗಳು. ಭೂಲೋಕದಲ್ಲಿ ಸ್ವರ್ಗದ ತುಂಡೊಂದನ್ನು ತಂದು ಇಟ್ಟಂತೆ.
ಇಲ್ಲಿಗೆ ಪ್ರವಾಸಿಗರು ಜೂಜಾಡಲೆಂದೇ, ಮೋಜಿಗಾಗಿಯೇ ದೇಶ ವಿದೇಶದಿಂದ ಬರುತ್ತಾರೆ. ಇಲ್ಲಿ ಕೈ ಬದಲಾಗುವ, ವ್ಯಯಿಸುವ ದುಡ್ದು ಬಿಲಿಯನ್ ಡಾಲರುಗಳ ಲೆಕ್ಕದಲ್ಲಿ. ಅಮೆರಿಕದ ಅತ್ಯಂತ ದುಬಾರಿ ಹೋಟೆಲ್ ಇರೋದು ಇಲ್ಲಿಯೇ. ಇಲ್ಲಿನ ಕ್ಯಾಸಿನೋಗಳ ವಾರ್ಷಿಕ ಆದಾಯ ಆರು ಬಿಲಿಯನ್ ಡಾಲರ್. ಅದು ಸುಮಾರು44ಸಾವಿರ ಕೋಟಿ ರುಪಾಯಿಗೆ ಸಮ. ಆದಾಯವೇ ಇಷ್ಟಾದರೆ ಇನ್ನು ಇಲ್ಲಿ ವ್ಯಯವಾಗುವ ಹಣವನ್ನು ನೀವೇ ಅಂದಾಜಿಸಿಕೊಳ್ಳಿ. ಇದೇ ಕ್ಯಾಸಿನೋ ಗಳ ನೆಲದಡಿಯಲ್ಲಿ ಮಳೆ ನೀರು ಹರಿಯಲೆಂದು ದೊಡ್ಡ ಅಂಡರ್‌ಗ್ರೌಂಡ್ ಕಾಂಕ್ರೀಟ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಸುಮಾರು ಐದಾರು ನೂರು ಜನರ ವಾಸ. ಅವರೆಲ್ಲ ನಿರ್ಗತಿಕರು – ವಸತಿ ಹೀನರು. ಅವರಿಗೆ ಸ್ವಂತ ಸೂರು ಕೂಡ ಇಲ್ಲದ ಸ್ಥಿತಿ.
ಜೋರಾಗಿ ಮಳೆ ಬಂತೆಂದರೆ ಇವರೆಲ್ಲ ಮಿಡತೆ ನೆಲದೊಳಗಿಂದ ಹೊರಬಂದಂತೆ ವೇಗಸ್‌ನ ರಸ್ತೆಗಳಲ್ಲಿ ಬಂದು ನಿಲ್ಲುತ್ತಾರೆ. ಇಂತಹುದೇ ಕೊನ್ಟ್ರಾಸ್ಟ್ ನ್ಯೂಯಾರ್ಕ್ ನಗರದಲ್ಲೂ ಇದೆ. ಇಲ್ಲಿ ಸುಮಾರು80ಸಾವಿರಕ್ಕೂ ಅಧಿಕ ಸೂರಿಲ್ಲದವರಿದ್ದಾರೆ. ಇವರು ರಾತ್ರಿ ಕೆಳೆಯುವುದು, ಇವರ ವಾಸ ಇಲ್ಲಿನ ಸರಕಾರ ಒದಗಿಸುವ ತಾತ್ಕಾಲಿಕ ಷೆಲ್ಟರ್‌ಗಳಲ್ಲಿ. ಅಲ್ಲಿ ಜಾಗ, ಅವಕಾಶ ಸಿಗದ ಸುಮಾರು ಎರಡೂವರೆ ಸಾವಿರ ಮಂದಿಗೆ ರಸ್ತೆ ಬದಿ, ರೈಲ್ವೆ ಸ್ಟೇಷನ್ನುಗಳಲ್ಲಿ ಹೀಗೆ ಇನ್ನಿತರ ಸಾರ್ವಜನಿಕ ಸ್ಥಳವೇ ಬೆಡ್ ರೂಮ. ಇದು ಸೂರಿಲ್ಲದವರ ಕಥೆಯಾಯಿತು. ಇನ್ನು ಬಡತನ ರೇಖೆಯ ಕೆಳಗಿರುವ ಸುಮಾರು ಇಪ್ಪತ್ತು ಲಕ್ಷ ಮಂದಿ ನ್ಯೂಯಾರ್ಕ್ ನಗರದಲ್ಲಿದ್ದಾರೆ.
ಕರೋನಾ ಬಂದು ಮೊದಲು ಅಪ್ಪಳಿಸಿದ್ದು ಮತ್ತು ಅತಿ ಹೆಚ್ಚು ಕಾಡಿದ್ದು ನ್ಯೂಯಾರ್ಕ್ ನಗರವನ್ನು. ಕರೋನಾ ಕಾರಣದಿಂದ ಇನ್ನಷ್ಟು ನಿರುದ್ಯೋಗದಿಂದಾಗಿ ಈ ಸಂಖ್ಯೆಗೆ ಇನ್ನೊಂದು ನಾಲ್ಕು ಲಕ್ಷ ಮಂದಿ ಸೇರಿಕೊಂಡಿದ್ದಾರೆ. ಸ್ ಏಂಜಲೀಸ್ ಎಂದಾಕ್ಷಣ ನಮ್ಮೆದುರಿಗೆ ಬರುವುದು ಅಲ್ಲಿನ ಹಾಲಿವುಡ್, ಶ್ರೀಮಂತರು, ದುಬಾರಿ ಕಾರುಗಳು. ಆದರೆ ಲಾಸ್ ಏಂಜಲೀಸ್ ಕೌಂಟಿಯ ಶೇ.20 ಜನರು – ಬಡತನದ ರೇಖೆಯ ಕೆಳಗಿರುವವರು. ಅಲ್ಲಿ ಕೂಡ ಸೂರಿಲ್ಲದವರ ಸಂಖ್ಯೆ ಅಮೆರಿಕದ ಮಟ್ಟಿಗೆ ಜಾಸ್ತಿಯೇ ಇದೆ.
ಹಿಂದಿನ ತಿಂಗಳು ಅಲ್ಲಿನ ಕೌಂಟಿಯ ಚುನಾವಣೆಯಲ್ಲಿ ಮತದಾರರ ಆಕ್ರೋಶ ಇದ್ದದ್ದೇ ಈ ಮನೆಯಿಲ್ಲದ, ನಿರ್ಗತಿಕರೆಡೆಗಿನ ಸರಕಾರದ ನಿರ್ಲಕ್ಷದ ಮೇಲೆ. ಎಲ್‌ಎ ಟೈಮ್ನಸ್ನ ವರದಿಯ ಪ್ರಕಾರ ಸುಮಾರು66ಸಾವಿರ ಮಂದಿ ಮನೆಯಿಲ್ಲದವರು ಲಾಸ್ ಏಂಜಲೀಸ್‌ನಲ್ಲಿzರೆ. ಕರೋನಾ ಪರಿಸ್ಥಿತಿಯಿಂದಾಗಿ ಸೂರಿಲ್ಲದ ಸ್ಥಿತಿ ತಲುಪುವವರ ಸಂಖ್ಯೆ ಎಲ್ಲಿಲ್ಲದ ಪ್ರಮಾಣದಲ್ಲಿ ಕಳೆದೆರಡು ವರ್ಷದಲ್ಲಿ ಹೆಚ್ಚಿದೆ. ಇಲ್ಲಿನ ರಸ್ತೆಬದಿಗಳಲ್ಲಿ, ಬೀಚುಗಳಲ್ಲಿ ಮಿನಿ ಸ್ಲಮ್‌ಗಳು ಅಲ್ಲಲ್ಲಿ ಈ ಕಾರಣಕ್ಕೆ ತಲೆಯೆತ್ತುತ್ತಿದೆ. ಅಮೆರಿಕದ ಸೂರಿಲ್ಲದ ಕಾಲುಭಾಗದಷ್ಟು ಮಂದಿ ಇರುವುದು ಇದೇ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ. ಆ ಕಾರಣಕ್ಕಾಗಿಯೇ ಅಲ್ಲಿನ ರಾಜ್ಯ ಸರಕಾರ ಈಗ ಎಚ್ಚೆತ್ತುಕೊಂಡು ಸುಮಾರು ಹನ್ನೆರಡು ಬಿಲಿಯನ್ ಡಾಲರ್ ಹಣವನ್ನು ಇದಕ್ಕಾಗಿ ಈ ವರ್ಷ ತೆಗೆದಿರಿಸಿದೆ.
ಆದರೆ ಈ ಸಮಸ್ಯೆ ಇಂದು ನಿನ್ನೆಯದಲ್ಲ, ಅಷ್ಟು ಸುಲಭಕ್ಕೆ ಪರಿಹಾರವಾಗುವಂಥದ್ದೂ ಅಲ್ಲ. ಲಾಸ್ ಏಂಜಲೀಸ್‌ನಲ್ಲಿ ಮತ್ತು ಅಮೆರಿಕದ ಇತರೆಡೆಗಳಲ್ಲಿ ಕಾರಿನಲ್ಲಿಯೇ ವಾಸಿಸುವ ಒಂದು ವರ್ಗ ಕೂಡ ಇದೆ. ಅವರಿಗೆಲ್ಲ ಕಾರೇ ಮನೆ, ಬೆಡ್ ರೂಮ್ ಎಲ್ಲವೂ. ಅಮೆರಿಕದಲ್ಲಿ ಕಾರು ಹೋಲಿಕೆಯಲ್ಲಿ ದುಬಾರಿಯಲ್ಲ.ಇವರೆಲ್ಲ ತಮ್ಮ ಹಳೆಯ ಕಾರಿನ ಹಿಂದಿನ ಸೀಟನ್ನು ಮಾಡಿಸಿ ಅಲ್ಲಿಯೇ ನಿದ್ರಿಸುತ್ತಾರೆ. ಇಂತಹ ಕಾರು ಜೀವಿಗಳ ಸಹಾಯಕ್ಕೆಂದೇ ಲಾಸ್ ಏಂಜಲೀಸ್‌ನಲ್ಲಿ ಒಂದು ದೊಡ್ಡ ಪಾರ್ಕಿಂಗ್ ಸ್ಥಳ ನಿಗದಿಮಾಡಲಾಗಿದೆ. ಅಲ್ಲಿ ಅವರಿಗೆ ಸ್ನಾನ, ಶೌಚಕ್ಕೆ ವ್ಯವಸ್ಥೆ ಮಾಡಲಾಗಿದೆ. ಆಹಾರ ತಂದು ಕೊಡುವ ಎನ್‌ಜಿಒಗಳಿವೆ.
ಅಮೆರಿಕ ಎನ್ನುವ ಶ್ರೀಮಂತ ರಾಷ್ಟ್ರದಲ್ಲಿನ ಸೂರಿಲ್ಲದ ಸ್ಥಿತಿಗೆ ಹಲವು ಕಾರಣಗಳಿವೆ. ಮಾನಸಿಕ ಸಮಸ್ಯೆಗಳು, ಡ್ರಗ್ಸ್ ಚಟದ ದಾಸ್ಯ, ಆರೋಗ್ಯದ ಸಮಸ್ಯೆ ಹೀಗೆ ಹತ್ತಾರು. ಇವರಲ್ಲಿ ಬಹುತೇಕರು ಹುಟ್ಟುವಾಗ ನಿರ್ಗತಿಕರಾಗಿ ಹುಟ್ಟಿದವರಲ್ಲ. ಆದರೆ ಕ್ರಮೇಣ ಕೆಲವು ಸಾಮಾಜಿಕ, ವೈಯಕ್ತಿಕ ಕಾರಣಕ್ಕೆ ಎಲ್ಲವನ್ನೂ ಕಳೆದು ಕೊಂಡು ಬೀದಿಗೆ ಬಂದವರು. ಇನ್ನು ಲಾಸ್ ಏಂಜಲೀಸ್, ನ್ಯೂಯಾರ್ಕ್ ಮೊದಲಾದ ಮಹಾ ನಗರಗಳಲ್ಲಿ ಸೂರಿಲ್ಲದ ಸ್ಥಿತಿಗೆ ಕಾರಣ ಅಲ್ಲಿನ ಅತ್ಯಂತ ದುಬಾರಿ ಮನೆಯ ಬಾಡಿಗೆ. ಅಲ್ಲಿನ ಮನೆ ಬಾಡಿಗೆ ಸಾಮಾನ್ಯರ ಕೈಗೆಟುಕದಷ್ಟು ಮೇಲಕ್ಕೇರಿ ಅದೆಷ್ಟೋ ವರ್ಷಗಳಾಗಿವೆ. ಚಿಕ್ಕ ಪುಟ್ಟ ಉದ್ಯೋಗ ಮಾಡಿಕೊಂಡವ ರಿಗೆ ಬಾಡಿಗೆ ಮನೆ ಗಗನ ಕುಸುಮ ಆದರೆ ಎರಡ್ಹೊತ್ತು ಊಟಕ್ಕೆ ತೊಂದರೆಯಿಲ್ಲ.
ಅಮೆರಿಕದಲ್ಲಿ ಮನೆಯಿಲ್ಲದವರ ಸಂಖ್ಯೆ ಇಲ್ಲಿನ ಜನಸಂಖ್ಯೆಗೆ, ಜಗತ್ತಿನ ಉಳಿದ ದೇಶಗಳಿಗೆ ಹೋಲಿಸಿದರೆ ತೀರಾ ಕಡಿಮೆ. ಆದರೆ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ ತುಂಬಾನೇ ದೊಡ್ಡದು – ಶೇ.11.4. ಭಾರತದ ಬಡತನ ರೇಖೆಯ ಮಾಪಕವನ್ನು ಮತ್ತು ಅಮೆರಿಕದ ಬಡತನ ರೇಖೆಯ ಮಾಪಕವನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ತಪ್ಪಾಗುತ್ತದೆ. ಅಮೆರಿಕದಲ್ಲಿ ದೇಶದ ಶ್ರೀಮಂತಿಕೆಯಿಂದಾಗಿ ಸಹಜವಾಗಿ ಖರೀದಿಸುವ ತಾಕತ್ತು ಜಾಸ್ತಿ. ಹೀಗಾಗಿ ಅಮೆರಿಕದ ಬಡವ ಇನ್ನೊಂದು ದೇಶದ ಬಡವನಿಗಿಂತ ಹೆಚ್ಚಿನದನ್ನು ಖರೀದಿಸಬಲ್ಲ. ಅಲ್ಲದೆ ಇಲ್ಲಿನ ಸರಕಾರ ಶ್ರೀಮಂತವಾಗಿರುವುದರಿಂದ ಕಡುಬಡವರಿಗೆ ಆಹಾರ ವನ್ನು ಒದಗಿಸಲು ಫುಡ್ ಸ್ಟ್ಯಾಂಪ್ ಎನ್ನುವ ವ್ಯವಸ್ಥೆ ಜಾರಿಯಲ್ಲಿದೆ. ಬದುಕಲು ಬೇಕಾಗುವಷ್ಟು ಆಹಾರವನ್ನು ಸರಕಾರ ಕೊಡುವ ಡೆಬಿಟ್ ಕಾರ್ಡಿನಿಂದ ಅಂಗಡಿ ಗಳಲ್ಲಿ ಖರೀದಿಸಬಹುದು. ಈ ವ್ಯವಸ್ಥೆಯನ್ನು ಅವಲಂಬಿಸಿರುವವರ ಸಂಖ್ಯೆ ಸುಮಾರು ಐದು ಕೋಟಿ (ಅಮೆರಿಕದ ಜನಸಂಖ್ಯೆ 32 ಕೋಟಿ).
ಆದರೆ, ಇದಕ್ಕೂ ಕೆಲವು ನಿಬಂಧನೆಗಳು ಸಹಜವಾಗಿಯೇ ಇದೆ. ಇನ್ನು ಮನೆಯಿಲ್ಲದವರಿಗೆ ತಾತ್ಕಾಲಿಕ ಶೆಲ್ಟರ್ ವ್ಯವಸ್ಥೆ ಯಿದೆಯಾದರು ಅದು ಈಗಿನ ಕೋವಿಡ್ ಸಮಸ್ಯೆಯಿಂದಾಗಿ ನಿಭಾಯಿಸಲಾಗದ ಸ್ಥಿತಿ. ಇಂತಹ ಬಹುತೇಕ ಶೆಲ್ಟರ್ ಗಳು ಇಂದು ಕೋವಿಡ್ ಹರಡುವ ಕೇಂದ್ರವಾಗಿದ್ದು ಅದನ್ನು ಮುಚ್ಚುವಂತೆಯೂ ಇಲ್ಲ, ತೆರೆದಿರಿಸುವಂತೆಯೂ ಇಲ್ಲ. ಅಮೆರಿಕದ ಚಳಿಪ್ರದೇಶಗಳಲ್ಲಿ ಶೀತಕಾಲ ಬಂತೆಂದರೆ ಹೊರಗೆ ಬದುಕಲು ಅಸಾಧ್ಯ. ಈಗ ಚಳಿಗಾಲ – ಮೇಲಿಂದ ಕೋವಿಡ್ – ಒಮೈಕ್ರಾನ್. ಹೀಗಾಗಿ ಸೂರಿಲ್ಲದವರಿಗೆ ಶೆಲ್ಟರ್ ಕಷ್ಟ; ಆದರೆ ಬದುಕು ಅನಿವಾರ್ಯ.
ಅಮೆರಿಕದ ಬಡತನ ಎಡೆಯಂತೆ ಸಾಮಾಜಿಕ ಕಾರಣಗಳಿಂದಲೇ ಆಗಿದ್ದರೂ ಸೂರಿಲ್ಲದ ಸ್ಥಿತಿ ಹೆಚ್ಚಾಗಿ ಸ್ವಯಂಕೃತ ಅಥವಾ ಪರಿಸ್ಥಿತಿಕೃತ. ಶ್ರೀಮಂತ ರಾಷ್ಟ್ರಗಳಲ್ಲ ಅದು ಹೇಗೋ, ಒಂದಿಂದು ಕಾರಣಕ್ಕೆ, ಸಮಾಜದಲ್ಲಿನ ಕೆಲ ಲೋಪಗಳಿಂದಾಗಿ ಇಂತಹ ಸ್ಥಿತಿಗೆ ಜನರು ಜಾರಿ ಬಿಡುತ್ತಾರೆ. ಬಡವರೆಲ್ಲರೂ ಆಲಸಿಗಳು, ಪ್ರಯತ್ನಪಡದವರು ಎಂದು ತಿಳಿಯಬಾರದು. ನಮ್ಮಲ್ಲಿ ಕರ್ಮ ಎನ್ನುವ ಶಬ್ದದ ಬಳಕೆಯಿದೆಯಲ್ಲ. ಬಡತನಕ್ಕೆ ಹತ್ತಾರು ಕಾರಣಗಳಿರುತ್ತವೆ. ಎಲ್ಲ ಬಡತನವೂ ಅಸಮರ್ಥತೆ ಎಂಬಂತೆಯೂ ಇಲ್ಲ. ಸಮಾಜದ ಜರಡಿಯ ತೂತಿನಲ್ಲಿ ಕೆಲವರು ಬಡತನಕ್ಕೆ ಬಿದ್ದುಬಿಡುತ್ತಾರೆ. ಬಡತನ ಎಂದಿಗೂ, ಎಲ್ಲ ಕಡೆಯೂ ಕ್ರೂರವೇ. ಆದರೆ ಒಂದಂತೂ ಸತ್ಯ – ಶ್ರೀಮಂತ ದೇಶದಲ್ಲಿ ಬಡವನಾಗಿರುವುದು ಬಡ ದೇಶದಲ್ಲಿ ಬಡವನಾಗಿರುವುದಕ್ಕಿಂತ ಹೆಚ್ಚಿಗೆ ಕ್ರೂರ ಮತ್ತು ಅಸಹ್ಯ. ಶ್ರೀಮಂತ ಓಣಿಯಲ್ಲಿ ಬಡವ ಎಂದಿಗೂ, ಎಲ್ಲಕಡೆಯಲ್ಲೂ ಎಲೆ ಮರೆಯ ಕಾಯಿಯೇ.
ಸಾಧ್ಯಮಾಡಿಕೊಂಡು ವಿಲ್‌ಸ್ಮಿತ್ ಅಭಿನಯಿಸಿರುವ     ನೀವು ನೋಡಲೇಬೇಕು. ಈ ಚಲನಚಿತ್ರ ನಿಮ್ಮಲ್ಲಿ ಜೀವನ ದೆಡೆಗೆ ಒಂದು ಹಿಡಿ ಪ್ರೀತಿಯನ್ನು ಹುಟ್ಟಿಹಾಕುವುದರ ಜತೆ ಜತೆ ಅಮೆರಿಕದಲ್ಲಿ ಬಡತನವೆಂದರೆ ಏನು, ಹೇಗೆ ಎಂಬಿತ್ಯಾದಿಯ ಬಗ್ಗೆ ಒಂದಿಷ್ಟನ್ನು ಬಿಚ್ಚಿ ಮುಂದಿಡುತ್ತದೆ.