ಹಿಂದೂಸ್ತಾನ್‌ ಕಿ ಅಂತಿಮ್‌ ದುಕಾನ್‌
ಅಲೆಮಾರಿಯ ಡೈರಿ
ಸಂತೋಷಕುಮಾರ ಮೆಹೆಂದಳೆ
mehandale100@.
ಅಸ್ಸಾಂನಂತೆ ಇಲ್ಲಿ ಮೋಸವಿಲ್ಲ. ಒರಿಜಿನಲ್ ಚಹಾ ಸೊಪ್ಪನ್ನೆ ಕೊಟ್ಟು ಕಳಿಸಿರುತ್ತಾರೆ. ಮೊದಲ ದಿನವೇ ಅರ್ಧ ಪ್ಯಾಕೆಟ್ಟಿನ ಅರ್ಧ ಮುಗಿದು ಹೋಗುತ್ತದೆ. ಅಯ್ಯೋ ಇನ್ನಷ್ಟು ತರಬೇಕಿತ್ತು ಎನ್ನುವ ಹೊತ್ತಿಗಾಗಲೇ ಅನಾಮತ್ತು ಎರಡು ಸಾವಿರ ಕಿ.ಮೀ ದೂರ ಹಿಂದಕ್ಕೆ ಬಂದಾಗಿರುತ್ತದೆ.
ಎದುರಿಗೆ ದೇವಲೋಕ ಬದರಿ. ಕಾಲ್ಕೆಳಗೆ ದೇವಗಂಗೆ ಸರಸ್ವತಿ, ಅಲಕಾನಂದೆ ಮತ್ತು ಸಾಕ್ಷಾತ್ ಗಂಗೆ ಯನ್ನು ಬೆನ್ನಟ್ಟಿ, ಆಕೆಯನ್ನು ಕೆಳಗೆ ತರಲು ದಾರಿಹುಡುಕಿ ಮೇಲೇರಿ ಹೋದ ಮೂಲ ಋಷಿವರ್ಯರಾದ ಸತೋಪನ ಪಥದ ಏರು ದಾರಿ. ಪಕ್ಕದ ಕಣಿವೆಗೆ ಇಣುಕಿದರೆ ಘಮ ಘಮ ಮಸಾಲೆ ಸ್ಮೆಲ್ಲು. ತಲೆ ಎತ್ತಿದರೆಪ್ರತಿಯೊಬ್ಬರ ಮುಖದಲ್ಲೂ ‘ಮತ್ತೊಮ್ಮೆ ಬನ್ನಿ’ ಎನ್ನುವ ಆತ್ಮೀಯ ಭಾವ.
ಹಾಗೆ ಊರು ದಾಟಿ ಓಡುತ್ತ ಹೊರಟರೆ ಎರಡೇ ತಾಸಿನಲ್ಲಿ ಭಾರತದ ಆಚೆಗೆ ಕಾಲಿಟ್ಟು ಚೀನಿಯರ ಜುಟ್ಟು ಸವರುವ ಅವಕಾಶವೂ ಇರುತ್ತಿತ್ತು ಸರಹದ್ದಿನ ಗಲಾಟೆಗಳಿರದಿದ್ದರೆ. ಅದಕ್ಕೂ ಮೊದಲೇ ಕೊಂಚ ಎಡಕ್ಕೆ ಕದಲಿದರೆ ಟಿಬೆಟ್ಟಲ್ಲಿರುತ್ತೀರಿ. ಅದರಾಚೆಗೆ ಇಷ್ಟೇ ಇಷ್ಟು ದೂರದಲ್ಲಿ ವಾಸವಿದ್ದ ವ್ಯಾಸ ಮಹರ್ಷಿಗಳ ಗುಹೆ ಇದೆ; ಕೇವಲ ಐದೇ ಐದು ಸಾವಿರ ವರ್ಷಗಳ ಹಿಂದಿನದೆನ್ನುವ ದಾಖಲೆ ಸಹಿತ. ಅ ದೂರದಲ್ಲಿ ಉಸಿರು ಬಿಡುತ್ತ ಸಾಗಬೇಕಾದ ವಸುಧಾರಾ ಜಲಪಾತ ವಿದೆ.
ಬದರಿಯ ಬೆನ್ನಿಗೆ ನೀಲಕಂಠ ಪರ್ವತ ಅನಾಮತ್ತು ಆಧಾರವಾಗಿ ನಿಂತಂತಿದೆ. ಇನ್ನಿಷ್ಟನ್ನೂ ಮೇಲೆ ಬಿಟ್ಟು ಕೆಳಗಿಳಿದರೆ ಜೋಶಿಮಠವಿದೆ. ಇವೆಲ್ಲವೂ ಕಾಲೂರಿ ನಡೆಯುವ ದಾರಿ. ಕಳೆದ ಯುಗದಲ್ಲಿ ಪಾಂಡವರು ಸ್ವರ್ಗಾರೋಹಣ ಮಾಡಿದ ಎಂಬ ಐತಿಹ್ಯದ ಪ್ರಸ್ಥಾನವೂ ಇಲ್ಲಿಂದಲೇ ಸಾಗಿದ್ದು. ಅದರ ಮೇಲೆ ನೀವೂ ನಡೆಯುತ್ತಿರುತ್ತೀರಿ. ಇವೆಲ್ಲದಕ್ಕೂ ಕಳಸ ಇಟ್ಟಂತೆ ತಾಸಿಗೊಮ್ಮೆ ಘಳಿಗೆಗೊಮ್ಮೆ ಮುದಗೊಳಿಸುವ ನನ್ನ ಪ್ರೀತಿಯ ಚಹಾ ಇಲ್ಲಿನ ಸರಹದ್ದು ಕೊನೆಯಾಗುವ ತುದಿಯಲ್ಲಿದೆ. ಅದರಾಚೆಗೆ ಬಟಾಬಯಲು. ಇದು ಕೊನೆಯ ಅಂಗಡಿ. ಇದೇ ಕೊನೆಯ ಹಳ್ಳಿ ಎನ್ನುತ್ತಿದ್ದಂತೆ ನಾವು ನಿಂತುಬಿಡುತ್ತೇವೆ. ಸದ್ಯ ಇದನ್ನೇ ಭಾರತದ ಕೊಟ್ಟ ಕೊನೆಯ ಅಂಗಡಿ ಎಂದು ಸರಹದ್ದು ಗುರುತಿಸಲಾಗಿದೆ. ಹಾಗಾಗಿ ಈ ಹೆಗ್ಗಳಿಕೆ.
ಭಾರತದ ಉತ್ತರಾಖಂಡದ ಚಮೋಲಿ ಜಿಲ್ಲೆಯ ಮೂರು ಸಾವಿರ ಮೀ. ಎತ್ತರದಲ್ಲಿರುವ ‘ಮಾನಾ’ ಎಂಬ ಹಳ್ಳಿ ಚಾರಣಿ ಗರು ಮತ್ತು ಪ್ರವಾಸಿಗರನ್ನೂ ಒಟ್ಟಾಗಿಯೇ ಕೈ ಬೀಸುತ್ತದೆ. ಕಾರಣ ಕೊನೆ ಎಂಬ ತುದಿಗಿರುವ ಚಹಾದ ಅಂಗಡಿಗಳು. ಆಸುಪಾಸಿನಲ್ಲೇ ನಾಲ್ಕಾರು ಟೀ ಶಾಪ್ಗಳಿವೆ. ಈ ‘ಅಂತಿಮ ದುಕಾನ್’ ನಲ್ಲಿ ಮಾಡಿ ಪೂರೈಸಲಾಗದಷ್ಟು ಸಂದಣಿ ಕೆಲವೊಮ್ಮೆ. ಅಲ್ಲಿ ನಿಂತು ಮೂಗು ಕಳಚಿ ಬೀಳುವ ಕೊರೆವ ಚಳಿಗಾಳಿಯಲ್ಲಿ ಚಹಾ ಹೀರುವ ಸೊಗಡೇ ಬೇರೆ. ಕಾರಣ ಬರೀ ಚಹಾ ಅಲ್ಲ ಅದು. ಮಸಾಲೆ ಚಹಾ.
ಸರಹದ್ದಿನ ಪ್ರದೇಶದಲ್ಲಿ ಈ ‘ಅಂತಿಮ’ ಮತ್ತು ‘ಆರಂಭ’ ಎನ್ನುವ ಶಬ್ದಗಳಿಗೆ ವಿಚಿತ್ರ ಸೆಳಕುಗಳಿವೆ. ಅರಿವಿಲ್ಲದೆ ನಿಮ್ಮನ್ನು ಎಳೆದುಕೊಳ್ಳುವ ಗುಣವಿದೆ. ಕಾರಣ ಇವೆರಡರ ಪ್ರತಿ ಮುಂದಿನ ಹಂತವೂ ಮನುಷ್ಯನ ಮೂಲವನ್ನೆ ಕೆಣಕುವ ಅನಾಹುತಕಾರಿ, ಅದಮ್ಯ ಭಾವಗಳ ಸಂಗಮ. ಹಾಗಾಗಿ ಇದು ಭಾರತದ ಕೊನೆಯ ಹಳ್ಳಿ, ಇದು ಕೊನೆಯ ಅಂಗಡಿ ಎನ್ನುತ್ತಿದ್ದಂತೆ ಮನಸ್ಸು ಎದ್ದು ಕೂತುಬಿಡುತ್ತದೆ. ಅದರಾಚೆಗೆ ಏನು ಹಾಗಿದ್ದರೆ ಎಂಬ ಕೊನೆಯಿರದ ಪ್ರಶ್ನೆಯೊಂದಿಗೆ, ಬದರಿ ಯಿಂದ ತೀರ ದೂರವೇನೂ ಇರದ ಉತ್ತರಾಖಂಡ ರಾಜ್ಯದ ಚಿಮೋಲಿ ಜಿಲ್ಲೆಯ, ವಿಶಾಲ ಭೂಮಂಡಲದಲ್ಲಿ ಸೂಜಿ ಮೊನೆಯಷ್ಟು ಜಾಗ ಗುರುತಿಸಿಕೊಳ್ಳಲು ಲಾಯಕ್ಕಿಲ್ಲದ ಕಡಿಮೆ ವಿಸ್ತೀರ್ಣದ ಈ ಹಳ್ಳಿಯ ಹೆಸರು ‘ಮಾನಾ’.
ಕೊನೆಯ ಹಳ್ಳಿಗಿಂತಲೂ ಹೆಚ್ಚಿಗೆ ಪ್ರಸಿದ್ಧಿಗೆ ಬಂದಿರುವುದು ಕೊನೆಯ ಚಹಾದ ಅಂಗಡಿಯಿಂದಾಗಿ. ಬದರಿ ಮತ್ತು ಕೇದಾರದಂತಹ ವರ್ಷವಿಡಿ ಚಳಿ ಹುಟ್ಟಿಸುವ ಪ್ರದೇಶದಲ್ಲಿ ಚಹಾಕ್ಕಿರುವ ಕಿಮ್ಮತ್ತೇ ಬೇರೆ. ಕಾಫಿ ಏನಿದ್ದರೂ ನಂತರದ ಸರದಿಯಲ್ಲಿ ಬರುವ ಅಮಾಯಕ ಪೇಯ. ಅದರ ಸ್ಥಾನ ಆ ಎತ್ತರದಲ್ಲಿ ಇಲ್ಲ ಎನ್ನುವುದು ಕಾಫಿ ಪ್ರಿಯರ ಜಗಳಕ್ಕೆ ಕಾರಣ ವಾದೀತು, ಅದತ್ತ ಇರಲಿ. ಯಾಕೆಂದರೆ ಹೀಗೆ ಕೊನೆಯ ಕಾಫಿ ಅಂಗಡಿ, ಕೊನೆಯ ಕಾಫಿ ತೋಟ ಎಂದೆಲ್ಲ ಇಲ್ಲ. ಏನಿದ್ದರೂ ಅದೆಲ್ಲ ಚಹಾಕ್ಕೆ ದಕ್ಕಬೇಕಾದ ಕಿರೀಟ.
ಈ ಹಳ್ಳಿಯ ಹೆಗಲಿಗೆ ಆತುಕೊಂಡು ಸವರುತ್ತ ಎಲ್ಲಿ ಬೇಕದ್ದರೂ ಮೊಬೈಲ್ ಕ್ಲಿಕ್ಕಿಸಿ ಎನ್ನುವ ಅವಿಸ್ಮರಣೀಯ ಭೂ ವಲಯದಲ್ಲಿ ಕಾಲಾಡಿಸುತ್ತಿದ್ದರೆ ಸಣ್ಣ ಗುಂಪುಗಳ ಮಧ್ಯೆ ಇರುವ ಕೊಟ್ಟ ಕೊನೆಯ ಈ ಅಂಗಡಿ ‘ಹಿಂದೂಸ್ತಾನ್ ಕಿ ಅಂತಿಮ ದುಕಾನ್’ ಬೋರ್ಡು ನಿಮ್ಮನ್ನು ಗಕ್ಕನೆ ನಿಲ್ಲಿಸುತ್ತದೆ. ಎರಡು ಕಾರಣಕ್ಕೆ, ಮೊದಲು ಈ ಅಂತಿಮ ಎನ್ನುವ ಪದ. ಎರಡನೆಯದ್ದು, ಆ ಹೊತ್ತಿಗೆ ದೇವರು ಹೇಳಿದರೂ ಬಿಡದೆ ಮನಸ್ಸು ಬಯಸುವ ಚಹಾದ ಘಮಕ್ಕೆ. ಅದರಲ್ಲೂ ಹಾಗೆಗುಡ್ಡದ ಅಂಚಿಗೆ ಕಣಿವೆ ಆರಂಭದಲ್ಲಿರುವ ಟೀ ಅಂಗಡಿಯ ಹಲಗೆ ಬೆಂಚಿನ ಮೇಲೆ ಕೂತು ಕುಡಿದ ಸಂಭ್ರಮ ನೀವು ಸುಲಭಕ್ಕೆ ಮರೆಯಲಾರಿರಿ.
ಒಮ್ಮೆ ಅಂಗಡಿಯಿಂದ ಹೊರಡುವ ಹೊತ್ತಿಗೆ ಆ ರುಚಿಗೆ ಅದರ ಘಮಕ್ಕೆ ಫಿದಾ ಆಗುವ ಚಾರಣಿಗ, ಈಗ ಅದರ ಸೊಪ್ಪು ಹೊತ್ತೊಯ್ಯುವ ಲೆಕ್ಕಕ್ಕೆ ಬಿದ್ದಿರುತ್ತಾನೆ. ಹೋಗುವಾಗ ದಾರಿ ಬದಿಯಲ್ಲಿ ಕೂತು ಟೀ ಸೊಪ್ಪು ಮಾರುವವರು ಕಾಣದಿದ್ದ ನಮಗೆ, ಈಗ ಅದೆಲ್ಲ ಸುಲಭಕ್ಕೆ ಕಾಣತೊಡಗುತ್ತದೆ. ಅಲ್ಲಲ್ಲಿ ಹುಡುಕಿ, ಯಾರದ್ದು ಬೆಸ್ಟು, ಯಾರದ್ದು ಹೆಚ್ಚಿಗೆ ಕುರುಕುರು ಎನ್ನುವಷ್ಟು ಒಣಗಿದೆ, ಯಾರ ಪ್ಯಾಕಿಂಗ್ ಚೆನ್ನಾಗಿದೆ, ಎಲ್ಲಿ ಹೆಚ್ಚು ಘಮ್ ಎನ್ನುತ್ತಿದೆ ಇತ್ಯಾದಿ ಮುಟ್ಟಿಮುಟ್ಟಿ ನೋಡಿ,‘ಒಹೋ ಇವರು ಹತ್ತಾರು ಪ್ಯಾಕೇಟ್ ಖರೀದಿಸಿಯಾರು’ ಎಂಬ ಅವರ ಕಣ್ಣಲ್ಲಿಯ ಅಮಾಯಕ ಭಾವ ಗಮನಿಸಿಯೂ, ಒಂದೇ ಪ್ಯಾಕೇಟು ಖರೀದಿಸಿ ಅದರ ಅರ್ಧರ್ಧ ಹಂಚಿಕೊಳ್ಳುವ ನಮ್ಮ ಬುದ್ಧಿಯನ್ನು ಹೊರಗೆ ತೋರ್ಪಡಿಸದೇ, ಅವರ ಹಚ್ಚನೆಯ ನಗೆಯ ಹಿಂದಿನ ಭಾವಕ್ಕೆ ಈಡಾಗದೆ ಅದನ್ನು ಬ್ಯಾಕ್‌ಪ್ಯಾಕ್‌ಗೆ ಏರಿಸುವಾಗಲೂ, ಇಷ್ಟಾಗಿಯೂ ಇದು ಅದೇ ಚಹಾ ಪುಡಿನಾ ಎಂದು ಮತ್ತೊಮ್ಮೆ ಕೇಳಿ ಕನ್ ಫರ್ಮ್ ಮಾಡಿಕೊಳ್ಳುತ್ತ ಕೆಳಿಗಿಳಿಯುವ ಹೊತ್ತಿಗೆ ಸಂಜೆ.
ಇದರ ಹೊರತಾಗಿ ಈಶಾನ್ಯ ರಾಜ್ಯಗಳಲ್ಲಿ ಅದರಲ್ಲೂ ಅಸ್ಸಾಂನಲ್ಲಿ ಚಹಾ ಕುಡಿಯಲು ನಿಂತರೆ ಅರ್ಧ ಲೀಟರಾದರೂ ಬೇಕೆನ್ನುವಷ್ಟು ಅದ್ಭುತವಾಗಿ ರಸ್ತೆ ಬದಿಯ ತೋಟದಿಂದ ಸಂಸ್ಕರಿಸಿ ಟೀ ಮಾಡಿಕೊಡುತ್ತಿರುತ್ತಾರೆ. ಅದನ್ನು ನಂಬಿ ನಾವೂ ಅಲ್ಲಿ ಟೀ ಪೌಡರ್ ಕೊಂಡುಹೊರಡುತ್ತೇವಲ್ಲ, ಮನೆಗೆ ಬಂದು ಬೆಳಗ್ಗೆ ಎಷ್ಟೊತ್ತಾದರೂ ಟೀಯ ಘಮವೇ ಬರದಿದ್ದಾಗಲೇ ನಮಗೆ-ಸೆಬಿದ್ದ ಅರಿವಾಗೋದು. ಕಾರಣ ಸೊಪ್ಪು ಸದೆಯ ಪುಡಿಯಲ್ಲಿ ಅಸ್ಸಾಂ ಸಾಯಲಿ, ಇ ಇರುವಅಂಗಡಿಯ ಟೀಗಿಂತಲೂ ಕಳಪೆಯಾಗಿರುತ್ತದೆ.
ಹಾಗಾಗಿ ಒಂದೇ ಪ್ಯಾಕೆಟ್ಟು. ‘ಅದರ ಅರ್ಧರ್ಧ ಹೋದರೆ ಇಬ್ಬರಿಗೂ ಸಣ್ಣ ಲುಕ್ಸಾನಷ್ಟೇ’ ಎಂಬೆಲ್ಲ ಇಂಡಿಯನ್ ಮೆಂಟಾಲಿಟಿಯ ಕ್ಯಾಲ್ಕುಲೇಶನ್ ತಲೆ ಕೆಳಗಾಗುವುದು ನಿಜಕ್ಕೂ ಮನೆಗೆ ಬಂದ ಮೇಲೆ. ಐ ಬೆಟ್… ನೀವು ಹಳಹಳಿಸುತ್ತೀರಿ. ಕಾರಣ ಅಸ್ಸಾಂನಂತೆ ಇಲ್ಲಿ ಮೋಸವಿಲ್ಲ. ಒರಿಜಿನಲ್ ಚಹಾ ಸೊಪ್ಪನ್ನೆ ಕೊಟ್ಟು ಕಳಿಸಿರುತ್ತಾರೆ. ಮೊದಲ ದಿನವೇ ಅರ್ಧ ಪ್ಯಾಕೆಟ್ಟಿನ ಅರ್ಧ ಮುಗಿದುಹೋಗುತ್ತದೆ. ಅಯ್ಯೋ ಇನ್ನಷ್ಟು ತರಬೇಕಿತ್ತು ಎನ್ನುವ ಹೊತ್ತಿಗಾಗಲೇ ಅನಾಮತ್ತುಎರಡು ಸಾವಿರ ಕಿ.ಮೀ ದೂರ ಹಿಂದಕ್ಕೆ ಬಂದಾಗಿರುತ್ತದೆ. ಇಷ್ಟಾಗಿಯೂ ಮಾನಾದಲ್ಲಿ ಜನರಿದ್ದಾರಾ..? ಇಲ್ಲ.
ಶಾಲೆ, ಅಂಗಡಿ ಎಂಥದ್ದೂ ಇಲ್ಲ. ಮನೆ ಮಾರುಗಳೂ ಲೆಕ್ಕದಲ್ಲಿ ಹಿಡಿಯಷ್ಟಿವೆ. ಆದರೂ ಜನ ಜಾಪತ್ರೆ ಸೇರುತ್ತಾರೆ. ಬೆಳಗ್ಗೆ ಬಿಸಿಲೇರುವ ಹೊತ್ತಿಗೆ ಅಲ್ಲಲ್ಲಿ ಉಣ್ಣೆ ಶಾಲು, ಕೈ ಕುಸುರಿ ಮತ್ತು ಎಲ್ಲಿ ನೋಡಿದಲ್ಲಿ ಚಹಾದ ಸೊಪ್ಪು ಮಾರುವ ಹೆಂಗಸರ ಸಣ್ಣ ಬೀದಿ ಬದಿ ಟೆಂಟುಗಳು ತಲೆ ಎತ್ತಿರುತ್ತವೆ. ನಮ್ಮ ನಿಮ್ಮಂಥ ಅಲೆಮಾರಿಗಳು ಒಹ್.. ಇದು ‘ಅಂತಿಮ ದುಕಾನ್’ ಎಂದು ಹೋಗುತ್ತೇವಲ್ಲ; ನಾವೇ ಗ್ರಾಹಕರು. ನಮ್ಮ ವಿಪರೀತ ಚೌಕಾಸಿಯ ವ್ಯವಹಾರದ ನಾಲ್ಕು ಕಾಸುದುಡಿಯುತ್ತಾರೆ. ಸಂಜೆಯ ಮೂರಾಗುವ ಮೊದಲೇ ಎದ್ದು ಚಟ್ಟಾಯಿ ಕಟ್ಟಲು ತೊಡಗುತ್ತಾರೆ. ಇಲ್ಲಿ ನಾಲ್ಕೂ ಮುಕ್ಕಾಲು ಐದಕ್ಕೆಲ್ಲ ಕತ್ತಲಿನ ಛಾಯೆ ಕವಿಯುತ್ತದೆ. ಆರಕ್ಕೆಲ್ಲ ಮಾನಾ ಮುಳುಗಿ ಹೋಗಿರುತ್ತದೆ.
ಇದ್ದ ಬದ್ದ ಅಲೆಮಾರಿಗಳು ಕೆಳಗಿಳಿದು ಚಹಾದ ಘಮದಲ್ಲಿ ಬದರಿಯತ್ತಲೋ ಅಲಕನಂದೆಯ ದಂಡೆಗೆ ಎಸೆದು, ಎಳೆದು ಕಟ್ಟಿರುವ ಟೆಂಟಿನಲ್ಲಿ ಕಾಲು ಹೂಡಿಮೊಬೈಲ್‌ನಲ್ಲಿ ಪೋಸ್ಟ್ ಹಾಕಲು ಬಿಜಿಯಾಗಿರುತ್ತಾರೆ. ಅಲ್ಲಿಗೆ ಮಾನಾ ಮನಸ್ಸಿನಲ್ಲಿ ಮರಿ ಮಾಡುತ್ತಿರುತ್ತದೆ. ಮೊನ್ನೆ ಮೊನ್ನೆ ಮಗಳು, ನಾನೂ ಒಮ್ಮೆ ಕೇದಾರ್ಹೋಗಬೇಕು ಎನ್ನುವಾಗ, ತತ್‌ಕ್ಷಣ ‘ಹಾಗಾದ್ರೆ ಹಂಗೆ ಬದರಿಯ ಮಗ್ಗುಲಿಗೂ ಮತ್ತೊಮ್ಮೆ ಹೋಗಿ ಬರೋಣ’ ಎಂದೆ. ‘ಅನಿದೆ’ ಎನ್ನುವ ಮೊದಲೇ ‘ಅ ಹಿಂದೂಸ್ತಾನ ಕಿ ಅಂತಿಮ ದುಕಾನ್ ಇರೋದು’ ಎನ್ನುತ್ತಾ, ಡಬ್ಬ ನೋಡಿದೆ.
ಹತ್ತಾರು ವರ್ಷ ಹಿಂದೆ ತಂದಿದ್ದ ಘಮದ ಸುಳಿವೂ ಇರಲಿಲ್ಲ. ಈ ಬಾರಿ ಹೋದಾಗ ಮರೆಯದೆ ಹತ್ತಾರು ಪ್ಯಾಕೆಟ್ಟು ತರಲೇಬೇಕು. ಕಾರಣ ಮತ್ತೊಮ್ಮೆ ಹೋಗಲಿಕ್ಕಿಲ್ಲ ಆಮೇಲೆ. ಅಂದ ಹಾಗೆ ಇ ವ್ಯಾಸ ಮಹರ್ಷಿ ಇದ್ದರಂತೆ. ಕೇವಲ ಐದೂವರೆ ಸಾವಿರ ವರ್ಷದ ಹಿಂದೆ. ಅದರ ಬಗ್ಗೆ ಮತ್ತೊಮ್ಮೆ ಬರೆದೇನು.