ಎಲ್ಲಿದ್ದೆ ಇಲ್ಲಿ ತನಕ ಎಲ್ಲಿಂದ ಬಂದ್ಯವ್ವ ?
ಶಶಾಂಕಣ
ಶಶಿಧರ ಹಾಲಾಡಿ
ಕಳೆದ ಎರಡು ದಶಕಗಳಿಂದ ನಮ್ಮ ರಾಜ್ಯದ ಕರಾವಳಿಯಲ್ಲಿ ನವಿಲುಗಳು ವಾಸಿಸುತ್ತಿವೆ, ಸಂತಾನಾಭಿವೃದ್ಧಿ ಮಾಡುತ್ತಿವೆ. ಹಿಂದೆ ಅಲ್ಲಿ ನವಿಲುಗಳಿರಲಿಲ್ಲ.ನವಿಲುಗಳು ತಮ್ಮ -ಸಲನ್ನು ಹಾನಿಮಾಡುತ್ತಿವೆ ಎಂದು ಕರಾವಳಿಯ ಕೃಷಿಕರು ದೂರುತ್ತಿದ್ದಾರೆ!
ನಮ್ಮೂರಿನಲ್ಲಿ ಹಿಂದೆ ನವಿಲುಗಳಿರಲಿಲ್ಲ! ಸುಮಾರು1990ರ ದಶಕದ ತನಕ, ಮಲೆನಾಡಿನಂತಿರುವ ಆದರೆ ಕರಾವಳಿಯ ಭಾಗವಾದ ನಮ್ಮ ಹಳ್ಳಿಯ ಸುತ್ತಮುತ್ತಲಿನ ಕಾಡುಗಳಲ್ಲಿ, ಗುಡ್ಡಗಳಲ್ಲಿ, ಹುಲ್ಲುಗಾವಲುಗಳಲ್ಲಿ, ಗದ್ದೆಯಂಚಿನಲ್ಲಿ ನವಿಲುಗಳು ಕಾಣಿಸುತ್ತಿರಲಿಲ್ಲ. ಇಷ್ಟು ಖಚಿತವಾಗಿ ಹೇಗೆ ಹೇಳುತ್ತಿದ್ದೇನೆಂದರೆ, ನಾವು ಅಂದು ಶಾಲೆಗೆ ಹೋಗುತ್ತಿದ್ದು ನಡೆದುಕೊಂಡೇ.
ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳಿಗೆ ಹೋಗಲು ನಮಗೆಲ್ಲಾ ಪ್ರತಿದಿನ ಕನಿಷ್ಠ 5 ರಿಂದ 10 ಕಿಮೀ ದೂರದ ನಡಿಗೆ. ಆ ದಾರಿಯು ಹಾಡಿ, ಹಕ್ಕಲು, ಗುಡ್ಡ, ಕಾಡು, ಮಕ್ಕಿಗದ್ದೆ, ಬೈಲು ಗದ್ದೆ, ತೋಡು, ತೋಟಗಳ ನಡುವೆ ಸಾಗುತ್ತಿದ್ದು, ಅಲ್ಲಿದ್ದ ಬಹುಪಾಲು ಹಕ್ಕಿಗಳು, ಸಣ್ಣಪುಟ್ಟ ಜೀವಿಗಳು ನನಗೆ ಪರಿಚಿತ. ನಮ್ಮ ಪ್ರತಿದಿನದ ಶಾಲಾ ದಾರಿಯ ಪಕ್ಕದಲ್ಲಿದ್ದ ಒಂದು ಪುಟ್ಟ ಅಡಿಕೆ ತೋಟದಲ್ಲಿ ಹಾರುವ ಓತಿಗಳನ್ನು ಕಂಡ ದ್ದುಂಡು, ಕಾಡುಕೋಳಿ, ಚಿಟ್‌ಕೋಳಿ, ಹುಂಡುಕೋಳಿಗಳನ್ನು ನೋಡಿದ್ದುಂಟು. ಆದರೆ ಅಲ್ಲಿ ನವಿಲುಗಳಿರಲಿಲ್ಲ.
ನವಿಲು ಸಾಮಾನ್ಯವಾಗಿ ಬಯಲು ಪ್ರದೇಶಗಳಲ್ಲಿ, ಒಣಭೂಮಿಯಲ್ಲಿ, ಮಳೆ ಕಡಿಮೆಯಿರುವ ಪ್ರದೇಶಗಳಲ್ಲಿ ವಾಸಿಸುವ ಹಕ್ಕಿ. ನಮ್ಮ ಹಳ್ಳಿಯು ಕಾಡುಗಳಿಂದ ಸುತ್ತುವರಿದ ಪ್ರದೇಶ, ಅದಕ್ಕೇ ಅಲ್ಲಿ ನವಿಲುಗಳಿಲ್ಲ ಎಂಬ ಭಾವನೆ ನಮ್ಮದು. ನಾವು ಶಾಲೆ ಮಕ್ಕಳು ನವಿಲುಗರಿಗಳನ್ನು ಆಗಾಗ ಅದೆಲ್ಲಿಂದಲೋ ಸಂಪಾದಿಸಿ,ಪುಸ್ತಕದ ನಡುವೆ ಇಟ್ಟು ಅದು ಮರಿ ಹಾಕಿದೆಯೆ ಎಂದು ಪರೀಕ್ಷಿಸಿದ್ದುಂಟು. ಚಿತ್ರಗಳಲ್ಲಿ ನವಿಲನ್ನು ಕಂಡಿ ದ್ದುಂಟು; ಯಕ್ಷಗಾನದಲ್ಲಿ ನವಿಲು ನರ್ತನ, ಶಾಲಾ ಮಕ್ಕಳ ನವಿಲು ನರ್ತನ ನೋಡಿದ್ದುಂಡು, ಬಿಟ್ಟರೆ, ನಿಜ ನವಿಲುನ ನೋಟ ನಮಗೆ ದೊರಕಿರಲಿಲ್ಲ.
ಶಿವರಾಮ ಕಾರಂತರ ‘ಮೊಗ ಪಡೆದ ಮನ’ ಕಾದಂಬರಿಯಲ್ಲಿನ ಪ್ರಧಾನ ಪಾತ್ರವು, ಬಯಲು ಸೀಮೆಯಲ್ಲಿ ನವಿಲಿನ ನರ್ತನ ನೋಡಿ, ತಾನೂ ಅದರಂತೆ ನರ್ತಿಸುವ ಕಥನವನ್ನು ಹೈಸ್ಕೂಲುದಿನಗಳಲ್ಲಿ ಓದಿದ್ದೆ. ನಂತರ, ಕಾಲೇಜು ವಿದ್ಯಾಭ್ಯಾಸಕ್ಕೆ ಹೋದಾಗ, ಕೊಲ್ಲೂರು ಸನಿಹದ ಜಡ್ಕಲ್ ಎಂಬ ಊರಿನ ಹತ್ತಿರದ ಒಬ್ಬ ಸಹಪಾಠಿಯ ಪರಿಚಯವಾಯಿತು. ‘ನಮ್ಮ ಹಳ್ಳಿಯಲ್ಲಿ ನವಿಲುಗಳಿವೆ’ ಎಂದಿದ್ದನಾತ. ‘ನಿಮ್ಮೂರಿಗೆ ಬಂದರೆ ನವಿಲು ತೋರಿಸುತ್ತೀಯಾ?’ ಎಂದು ಕೇಳಿದ್ದೆ. ಆತ ಹೂಂ ಎಂದಿದ್ದ. ಆದರೆ ನಾನು ಹೋಗಲಿಲ್ಲ, ಅದು ಬೇರೆ ವಿಚಾರ. ಇದೇಕೆ ಹೇಳಿದೆ ಎಂದರೆ, 1980ರ ದಶಕದಲ್ಲಿ, ಕರಾವಳಿ ಮತ್ತು ಮಲೆನಾಡಿನ ಪ್ರದೇಶಗಳಲಿ ನವಿಲು ಬಹಳ ಅಪರೂಪದ ಪಕ್ಷಿ. ಆದರೆ, ಈಗ ಎರಡು, ಮೂರು ದಶಕಗಳಿಂದ ನವಿಲುಗಳ ವಾಸಸ್ಥಳ, ವ್ಯಾಪ್ತಿ ಬದಲಾಗಿದೆ.
ನಮ್ಮೂರಿನ ಸರಹದ್ದಿನಲ್ಲಿ, ಸುತ್ತಮುತ್ತಲಿನ ಹಳ್ಳಿಗಳಲ್ಲಿ ಇಂದು ಅಕ್ಷರಶಃ ನೂರಾರು ನವಿಲುಗಳಿವೆ! ಗದ್ದೆಯಂಚಿನ ಪೊದೆಗಳಲ್ಲಿ ಸಂಚರಿಸುತ್ತಾ, ಅಲ್ಲೇ ಮೊಟ್ಟೆಯಿಟ್ಟು ಮರಿಗಳನ್ನು ಬೆಳೆಸಿ, ತನ್ನ ಹಿಂದೆ ನಾಲ್ಕು ಮರಿಗಳನ್ನು ಕರೆದುಕೊಂಡು ಹೋಗುವ ತಾಯಿ ನವಿಲಿನ ದೃಶ್ಯ ಇಂದು ನಮ್ಮೂರಿನಲ್ಲಿ ಸಾಮಾನ್ಯ. ನಮ್ಮ ರಾಜ್ಯದ ಕರಾವಳಿಯುದ್ದಕ್ಕೂ ನವಿಲುಗಳೂ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿವೆ. ನಮ್ಮ ಹಳ್ಳಿ ಮನೆಯ ಎದುರಿನ ಗದ್ದೆಯಲ್ಲಿ ನವಿಲುಗಳ ಓಡಾಟ ಆಗಾಗ ಇದ್ದೇ ಇರುತ್ತದೆ; ಬತ್ತದ ಬೆಳೆ ಬಂದಾಗ, ಕುಯ್ಲಿನ ಸಮಯದಲ್ಲಿ ಅವುಗಳ ಚಟುವಟಿಕೆ ಜಾಸ್ತಿ. ಮುಂಗಾರು ಮೋಡಗಳು ಇರಲಿ ಬಿಡಲಿ, ಗಂಡು ನವಿಲುಗಳು ಆಗಾಗ ತಮ್ಮ ಗರಿಬಿಚ್ಚಿ ಸುಂದರವಾಗಿ ನರ್ತಿಸುವುದು ಸಹ ಸಾಮಾನ್ಯ.
ನಮ್ಮ ಮನೆಯಲ್ಲಿ ಕುಳಿತೇ, ನವಿಲು ನರ್ತನ ನೋಡುವ ಅವಕಾಶವಿದೆ!1980ರ ದಶಕದ ತನಕ ಆ ಪ್ರದೇಶದಲ್ಲಿ ಇಲ್ಲದ ನವಿಲುಗಳು ಇಂದೇಕೆ ಅಲ್ಲಿಮನೆ ಮಾಡಿಕೊಂಡಿವೆ? ನವಿಲಿನ ನರ್ತನ ಚಂದ; ಜತೆಗೆ ಅದು ಷಣ್ಮುಖನ ವಾಹನ. ಆದರೆ, ನಮ್ಮೂರಿನ ಕೃಷಿಕರಿಗೆ ನವಿಲು ಎಂದರೆ ಈಗಾಗಲೇ ಅಲರ್ಜಿಶುರುವಾಗಿದೆ; ಇನ್ನು ಕೆಲವು ವರ್ಷಗಳಲ್ಲಿ, ಗದ್ದೆಗಳಲ್ಲಿ ನವಿಲನ್ನು ಕಂಡರೆ ಅವರಿಗೆ ‘ಚಳಿಜ್ವರ’ ಬರಬಹುದು! ಏಕೆಂದರೆ, ಕಾಡುಹಂದಿ ಮತ್ತು ಮಂಗಗಳ ನಂತರ, ನಮ್ಮೂರಿನ ಕೃಷಿಕರಿಗೆ ಇಂದು ಅತಿ ಹೆಚ್ಚು ಕಾಟ ಕೊಡುವ ‘ವನ್ಯಜೀವಿ’ ಎಂದರೆ ನವಿಲು! ನಗರಗಳಲ್ಲಿರುವವರಿಗೆ, ಪೇಟೆಯ ಮಂದಿಗೆ ಇದನ್ನು ಕೇಳಿ ಅಚ್ಚರಿ ಎನಿಸಬಹುದು.
ಗರಿಬಿಚ್ಚಿ ನರ್ತಿಸುವ ನವಿಲಿನ ನೋಟ ಮಾತ್ರ ಹೆಚ್ಚಿನವರಿಗೆ ಪರಿಚಿತ; ‘ನವಿಲು ಕುಣಿದಾವೆ ನೋಡೆ’ ಎಂಬ ಹಾಡು ಪರಿಚಿತ; ‘ಗರಿಬಿಚ್ಚು ಗರಿಬಿಚ್ಚು ಗರಿಬಿಚ್ಚು ನವಿಲೆ’ ಎಂಬ ಗೀತೆಯ ಗುನುಗು ಪರಿಚಿತ; ಶಾಲಾ ಮಕ್ಕಳು ಬಣ್ಣ ಬಣ್ಣದ ಸಾವಿರ ಕಣ್ಣಿನ ನವಿಲುಗರಿಗಳ ಹೊದಿಕೆಯನ್ನು ಹೊದ್ದು, ಗುಂಪಾಗಿ ನರ್ತಿಸುವ ದೃಶ್ಯ ಪರಿಚಿತ – ಆದರೆ, ಕೃಷಿಕರಿಗೆ ನವಿಲು ಒಂದು ‘ಪೀಡೆ’ ಎಂಬ ವಿಚಾರ ಹೆಚ್ಚಿನವರಿಗೆ ಗೊತ್ತಿಲ್ಲ!
ಬತ್ತದ ಬೆಳೆ ಇನ್ನೇನು ಕೈಗೆ ಬರಬೇಕು ಎನ್ನುವಷ್ಟರಲ್ಲಿ ಹತ್ತೆಂಟು ನವಿಲುಗಳು ಆ ಗದ್ದೆಯ ಕಡೆ ಬಂದವೆಂದರೆ, ಕೃಷಿಕರಿಗೆ ತಲೆನೋವು; ಕೆಲವರಿಗೆ ಅವುಗಳನ್ನು ಓಡಿಸುವದೇ ಕೆಲಸ! ಬೆಳೆದ ಬತ್ತದ ತೆನೆಗಳನ್ನು ಇಡಿಯಾಗಿ ಸ್ವಾಹಾ ಮಾಡುವ ನವಿಲುಗಳು, ಅತ್ತಿತ್ತ ಓಡಾಡಿ, ಬರಬರ ಹಾರಿ, ಇನ್ನೊಂದಿಷ್ಟು ಬತ್ತ ಕೆಳಗೆ ಉದುರವಂತೆ ಮಾಡುತ್ತವೆ. ಇದರಿಂದಾಗಿ ಶೇ.10ರಷ್ಟು ಬತ್ತದಫಸಲುಹಾನಿಯಾಗುತ್ತದೆ ಎಂದು ಒಂದು ಅಂದಾಜು. ಮಂಗಳೂರು ನಗರದಲ್ಲಿ ತಾವು ಬೆಳೆದ ತೊಂಡೆಕಾಯಿಗಳನ್ನು ನವಿಲುಗಳು ತಿಂದು ಹಾಕುತ್ತವೆ ಎಂದು ಸ್ನೇಹಿತರೊಬ್ಬರು ಹೇಳಿದರು.
ಕುಂದಾಪುರ ಸನಿಹದ ಕೆಲವು ಮನೆಗಳ ಅಂಗಳಕ್ಕೆ ಬಂದು, ಕೋಳಿಗಳಿಗೆಂದು ಹಾಕಿದ್ದ ಆಹಾರವನ್ನು ನವಿಲುಗಳೇ ಕಬಳಿಸುತ್ತವಂತೆ! ಹೆಚ್ಚಿನ ಕೃಷಿಕರಿಗೆ ಈಗ ತಮ್ಮ ಗದ್ದೆಗಳ ಹತ್ತಿರ ಸುಳಿದಾಡುವ ನವಿಲುಗಳ ಬಣ್ಣ ನೋಡುವ ಖುಷಿಯಿಲ್ಲ. ಅವು ಮಿಡತೆಗಳನ್ನು, ಕೀಟಗಳನ್ನು ಸಹ ತಿನ್ನುತ್ತವೆ ಎಂದರೂ, ಅವುಗಳಕಾಟವು ಅವರಿಗೆ ರೇಜಿಗೆ ಹುಟ್ಟಿಸಿದೆ. ತೀರ್ಥಹಳ್ಳಿ ಸುತ್ತಲಿನ ಹಲವು ಕೃಷಿಕರು ಈಚಿನ ವರ್ಷಗಳಲ್ಲಿ ಹೆಚ್ಚಳಗೊಂಡ ನವಿಲುಗಳ ಸಂಖ್ಯೆಯನ್ನು ಕಂಡುವಿಸ್ಮಯಗೊಂಡಿದ್ದಾರೆ.
ಇದು ನಮ್ಮ ರಾಜ್ಯದ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳ ವಿದ್ಯಮಾನವಾದರೆ, ಅತ್ತ ಕೇರಳದ ಕರಾವಳಿ ಪ್ರದೇಶಗಳಲ್ಲೂ ನವಿಲುಗಳ ಸಂಖ್ಯೆ ಜಾಸ್ತಿಯಾಗಿದೆ. ಅಲ್ಲಿನ ಕೃಷಿಕರು ಬೆಳೆಯುತ್ತಿರುವ ಫಸಲನ್ನು ನವಿಲುಗಳು ಹಾನಿ ಮಾಡುತ್ತಿರುವ ಕುರಿತು ಅಲ್ಲಿ ವಾದ ವಿವಾದಗಳ ನಡೆದಿವೆ. ಕೃಷಿಕರು ಬೆಳೆದ ಶೇ.೧೦ರಷ್ಟು ಬೆಳೆ ನವಿಲುಗಳಿಂದ ಹಾಳಾಗುತ್ತಿದೆ ಎಂದು ಅಲ್ಲಿ ಅಂದಾಜಿಸಲಾಗಿದೆ. ಅರಣ್ಯ ಇಲಾಖೆಯ ಅನುಮತಿಯನ್ನು ಪಡೆದು, ಅವು ಅತಿ ಹೆಚ್ಚುಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ‘ಕಲ್ಲಿಂಗ್’ ಮಾಡಿ, ರೈತರಿಗೆ ಸಹಾಯ ಮಾಡಬೇಕು ಎಂಬ ಗಂಭೀರ ಚರ್ಚೆ ಕೇರಳದಲ್ಲಿ ನಡೆದಿದೆ.
ನವಿಲಿಗೆ ನಮ್ಮ ದೇಶದಲ್ಲಿರುವ ರಾಷ್ಟ್ರೀಯ ಮಾನ್ಯತೆ, ಸಾಂಸ್ಕೃತಿಕ ಮಹತ್ವಕ್ಕಿಂತ, ಕೃಷಿಕರ ಬೆಳೆ ರಕ್ಷಿಸುವುದು ಹೆಚ್ಚು ಪ್ರಮುಖ ಎಂಬ ಮನೋಭಾವ ಕೇರಳದವರದ್ದು. ಆದರೆ, ನಮ್ಮ ದೇಶದಲ್ಲಿ ನವಿಲಿಗೆ ಹಿಂಸೆ ಮಾಡುವಂತಿಲ್ಲ. ಇಲ್ಲಿನ ಕಾನೂನಿನ ಪ್ರಕಾರ ನವಿಲುಗಳು ವನ್ಯಜೀವಿ ಮತ್ತು ಕಾನೂನಿನರಕ್ಷಣೆಯಲ್ಲಿರುವ ಪಕ್ಷಿ. ಅದನ್ನು ಯಾರೂ ಬೇಟೆಯಾಡುವಂತಿಲ್ಲ; ಅದಕ್ಕೆ ವಿಷ ಉಣಿಸಿದರೆ ಅಪರಾಧವಾಗುತ್ತದೆ. ಜತೆಗೆ, ನವಿಲು ರಾಷ್ಟ್ರೀಯ ಪಕ್ಷಿ ಮತ್ತು ನಮ್ಮ ರಾಜ್ಯದ ಪಕ್ಷಿಯೂ ಹೌದು.
ಕರಾವಳಿಯ ಜಿಲ್ಲೆಗಳಲ್ಲಿ ಈಚಿನ ಎರಡು ಮೂರು ದಶಕಗಳಲ್ಲಿ ಅವುಗಳ ಸಂಖ್ಯೆ ಜಾಸ್ತಿ ಯಾಗಿರುವುದು ಒಂದು ಹೊಸ ಬೆಳವಣಿಗೆ. ನಮ್ಮ ರಾಜ್ಯದ ಉತ್ತರ ಭಾಗದ ಕೆಲವು ಜಿಲ್ಲೆಗಳಲ್ಲಿ ಬಹು ಹಿಂದಿನಿಂದಲೂ ನವಿಲುಗಳು ಹೇರಳವಾಗಿದ್ದವು. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈಗ ಸಾಕಷ್ಟು ಸಂಖ್ಯೆಯಲ್ಲಿ ನವಿಲುಗಳಿವೆ. ಆದರೆ, ಇಲ್ಲೆಲ್ಲಾ ನವಿಲುಗಳಿಂದಾಗ ಕೃಷಿ ಚಟುವಟಿಕೆಗೆ ನಷ್ಟವಾಗುತ್ತಿದೆ ಎಂಬ ಚರ್ಚೆ ನಡೆದಂತಿಲ್ಲ, ನವಿಲುಗಳಿಂದ ತಮಗೆತೊಂದರೆಯಾಗುತ್ತಿದೆ ಎಂಬ ದೂರು ಸಾರ್ವತ್ರಿಕವಾಗಿಲ್ಲ.
ನವಿಲುಗಳ ಇತಿಹಾಸ, ವಾಸಸ್ಥಳ, ಅವು ಹರಡಿದ ರೀತಿ ಇವುಗಳನ್ನು ಹುಡುಕುತ್ತಾ ಹೋದರೆ ಹಲವು ಕುತೂಹಲಕಾರಿ ವಿಷಯಗಳು ಗಮನಕ್ಕೆ ಬರುತ್ತವೆ. ಜಗತ್ತಿನಲ್ಲಿ ಮೂರು ಪ್ರಭೇದದ ನವಿಲುಗಳಿವೆ. ಅವುಗಳ ಪೈಕಿ, ಆಫ್ರಿಕಾದ ಕಾಂಗೋ ನವಿಲು ಮತ್ತು ಇಂಡೋನೀಷಿಯನ್ ನವಿಲು – ಇವೆರಡೂ ಪ್ರಭೇದಗಳು ಅದಾಗಲೇ ಅವನತಿಯ ಹಾದಿ ಹಿಡಿದಿವೆ. ಅಲ್ಲಿನ ಜನರು ನಿರಂತರವಾಗಿ ನವಿಲನ್ನು ಬೇಟೆಯಾಡಿ, ಅವುಗಳ ವಾಸಸ್ಥಳವನ್ನು ನಾಶ ಮಾಡಿದ್ದರಿಂದಾಗಿ, ಆಎರಡೂ ನವಿಲುಗಳ ಸಂಖ್ಯೆ ತೀರಾ ಕಡಿಮೆ ಯಾಗಿದೆ. ಇವೆರಡನ್ನು ಬಿಟ್ಟರೆ, ನಮ್ಮ ದೇಶದ ನವಿಲುಗಳು (ಇಂಡಿಯನ್ಪೀ-ಲ್) ದೇಶದ ಬಹುಭಾಗಗಳಲ್ಲಿ ಮತ್ತು ಶ್ರೀಲಂಕಾದಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಈಚೆಗೆ ನಿರ್ನಾಮವಾಗಿವೆ; ಪಾಕಿಸ್ತಾನದಲ್ಲಿ ಮೊದಲಿನಿಂದಲೂ ಇದ್ದ ನವಿಲುಗಳು ಇಂದು ಕ್ರಮೇಣ ಕಣ್ಮರೆಯಾಗುತ್ತಿವೆ.
ಪುರಾತನ ಕಾಲದಿಂದಲೂ ಸಾಂಸ್ಕೃತಿಕ ಮತ್ತು ಪೂಜ್ಯ ಭಾವನೆಯಿಂದ ನಮ್ಮ ಜನರು ನವಿಲಿಗೆ ನೀಡಿರುವ ರಕ್ಷಣೆಯಿಂದಾಗಿಯೇ, ಅವು ಇಂದು ನಮ್ಮ ದೇಶದಲ್ಲಿಸಾಕಷ್ಟು ಉಳಿದುಕೊಂಡಿರುವೆ ಎಂಬುದು ಸ್ಪಷ್ಟ. ಮತ್ತೊಂದು ವಿಶೇಷವೆಂದರೆ, ಪುರಾತನ ಕಾಲದಿಂದಲೂ ನಮ್ಮ ದೇಶದ ನವಿಲುಗಳು ವಿಶ್ವದಾದ್ಯಂತ ಪರಿಚಿತ. ಐತಿಹಾಸಿಕ ಮಯೂರ ಸಿಂಹಾಸನ ಜಗದ್ವಿಖ್ಯಾತ. ಯುರೋಪ್ ಪ್ರದೇಶದಲ್ಲಿ ನವಿಲು ಸಹಜವಾಗಿ ವಾಸಿಸದೇ ಇದ್ದರೂ, ಗ್ರೀಕ್ ಪೌರಾಣಿಕ ಕಥೆಗಳಲ್ಲಿ, ಯುರೋಪಿನ ಹಲವು ಕಥನಗಳಲ್ಲಿ ನವಿಲಿನ ವಿಚಾರ ಬರುತ್ತದೆ; ಸಿಂಧೂ ಕಣಿವೆಯ ನಾಗರಿಕೆಯ ಚಿತ್ರಗಳಲ್ಲಿ ನವಿಲುಗಳಿವೆ.
ಕೃಷ್ಣನ ಅಲಂಕಾರಕ್ಕೆ ನವಿಲು ಗರಿ! ಷಣ್ಮುಖನ ವಾಹನವಾಗಿ ನವಿಲು. ಇಂದು ಜಗತ್ತಿನ ಹಲವು ದೇಶಗಳಲ್ಲಿ ನಮ್ಮ ದೇಶದ ನವಿಲುಗಳೂ ತಮ್ಮ ಸಂತತಿಯನ್ನು ಮುಂದುವರಿಸಿವೆ ಎಂಬುದು ವಿಸ್ಮಯ ಹುಟ್ಟಿಸುತ್ತದೆ! ನವಿಲಿನ ಬಣ್ಣ ಬಣ್ಣದ ಗರಿಯ ಕುರಿತು, ‘ಕಣ್ಣು’ಗಳ ಕುರಿತು ವಿಜ್ಞಾನಿಗಳು ಸಾಕಷ್ಟು ಜಿಜ್ಞಾಸೆ ನಡೆಸಿದ್ದಾರೆ;ನವಿಲುಗರಿಗಳ ಬಣ್ಣ, ಸ್ವರೂಪದ ಕುರಿತು ಚಾರ್ಲ್ಸ್ ಡಾರ್ವಿನ್ ಸಹ ತಲೆಕೆಡಿಸಿಕೊಂಡಿದ್ದುಂಟು. ಪ್ರಧಾನವಾಗಿ ನಮ್ಮ ದೇಶದಲ್ಲಿ ಕಾಣಿಸುವ ಈ ಸುಂದರ ಹಕ್ಕಿಯು ಇಡೀ ಜಗತ್ತಿನಾದ್ಯಂತ ಸಕಾರಾತ್ಮಕವಾಗಿ ಪರಿಚಿತಗೊಂಡಿರುವುದೇ ವಿಶಿಷ್ಟ ವಿದ್ಯಮಾನ.
ನಮ್ಮ ಹಳ್ಳಿಯಲ್ಲಿ ಹಿಂದೆ ಇಲ್ಲದೇ ಇದ್ದ ನವಿಲುಗಳು ಇಂದೇಕೆ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿವೆ ಎಂದು ಹುಡುಕುತ್ತಾ ಹೋದಾಗ ಕಂಡುಕೊಂಡ ವಿಚಾರಗಳಿವು. ಜತೆಗೆ, ನಮ್ಮೂರಿನ ಕೃಷಿಕರಿಗೆ ಅವು ಪೀಡೆ ನೀಡುವ ಜೀವಿಗಳಾಗಿ ಕಾಣಿಸುತ್ತಿರುವುದು ಸಹ ಗಮನಿಸಬೇಕಾದ ಅಂಶ. ಸಾಕಷ್ಟು ಕಾಡನ್ನು, ಹಸಿರುಪ್ರದೇಶಗಳನ್ನು ಹೊಂದಿರುವ ನಮ್ಮ ರಾಜ್ಯದ ಕರಾವಳಿ ಮತ್ತು ಕೇರಳದಲ್ಲಿ ಈಚಿನ ಒಂದೆರಡು ದಶಕಗಳಲ್ಲಿ ನವಿಲುಗಳೇಕೆ ಹೆಚ್ಚಳಗೊಂಡಿವೆ? ಬಯಲುನಾಡಿನ ಈ ಹಕ್ಕಿಗಳು ಮಲೆನಾಡಿನಲ್ಲೇಕೆ ತಮ್ಮ ವಾಸಸ್ಥಳವನ್ನ ಉ ಹುಡುಕಿಕೊಂಡವು? ನಮ್ಮ ಪರಿಸರದ ಸಮತೋಲನ ವ್ಯವಸ್ಥೆಯಲ್ಲಿ ಇನ್ನಿಲ್ಲದಂತೆ ಮೂಗು ತೂರಿಸುತ್ತಿರುವ ಆಧುನಿಕ ಮನುಷ್ಯನ ಕೈವಾಡವೇ ಇದಕ್ಕೆ ಕಾರಣವೆ? ಜೀವ ವಿಜ್ಞಾನಿಗಳು ಮತ್ತು ಪರಿಸರ ತಜ್ಞರು ಈ ಕುರಿತು ಅಧ್ಯಯನ ನಡೆಸುವ ಅಗತ್ಯವಿದೆ!