ಬೆನ್‌ ಮ್ಯಾಕಿಂಟೈರ್‌, ಒಳ್ಳೆಯ ವಿಡಂಬನೆ ಹಾಗೂ 2021ಕ್ಕೆ ಗುಡ್ ಬೈ
ಪ್ರಚಲಿತ
ಎಂ.ಜೆ.ಅಕ್ಬರ್‌
1952ರಲ್ಲಿ ಬಂದ ಜೇಮ್ಸ್ ಬಾಂಡ್, ಜನರಿಗೆ ಬದುಕಿನ ಕಟು ವಾಸ್ತವಗಳ ಸ್ವಾತಂತ್ರ್ಯವಾಗಿ ಕಂಡಿದ್ದ. ಈಗ 21ನೇ ಶತಮಾನಕ್ಕೂ ಅಷ್ಟೇ ಬಿಡುಬೀಸಾಗಿ ನಡೆದು ಬಂದಿದ್ದಾನೆ. ಇಯಾನ್ ಫ್ಲೆಮಿಂಗ್ ಯುರೋಪನ್ನು ಕೇಂದ್ರವಾಗಿಟ್ಟುಕೊಂಡ ಇತಿಹಾಸದ ಅತ್ಯಂತ ಕ್ರೂರ ಯುದ್ಧದಲ್ಲಿ ಸೆಣಸಿದ್ದಾನೆ. 2ನೇ ಮಹಾ ಯುದ್ಧದ ನರಮೇಧದ ಸಂದರ್ಭಕ್ಕೆ ಹೋಲಿಸಿದರೆ ಜೇಮ್ಸ್ ಬಾಂಡ್ ಆಟಿಕೆಯ ಸೈನಿಕನಷ್ಟೆ. 1990ರ ದಶಕದಲ್ಲಿ ಬೇರೊಂದು ಗ್ರಹದ ಜೀವಿ. ಒಟ್ಟಾರೆ ಆತ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲು ಹುಟ್ಟಿದವ.
2021ರಲ್ಲಿ ನಾನು ಓದಿದ ಅದ್ಭುತ ಪುಸ್ತಕ ‘ಎ ಸ್ಪೈ ಅಮಂಗ್ ಫ್ರೆಂಡ್ಸ್: ಕಿಮ್ ಫಿಲ್ಬಿ ಅಂಡ್ ದಿ ಗ್ರೇಟ್ ಬಿಟ್ರೇಯಲ್’. ನನ್ನ ಆಯ್ಕೆಯ ‘ವರ್ಷದ ಪುಸ್ತಕ’ ಇದು. ಲೇಖಕ ಬೆನ್ ಮ್ಯಾಕಿಂಟೈರ್. ಪ್ರಕಟವಾಗಿದ್ದು೨೦೧೪ರಲ್ಲೇ ಆದರೂ ನಾನು ಓದಿದ್ದು ಈಗ. ಈಗಿನ ಕೋವಿಡ್ ಬೇನೆ, ಆರ್ಥಿಕ ಗೊಂದಲಗಳು, ಸಾಮಾಜಿಕ ಹಿಂಜರಿಕೆ ಹಾಗೂ ಸುದೀರ್ಘ ಅಸಹಾಯಕತೆ, ಅನಾ ಸಕ್ತಿ ಕಾಲದಲ್ಲಿ ಅಗತ್ಯವಾಗಿ ಬೇಕಿದ್ದ ಮುಲಾಮಿನಂತೆ ನನಗೆ ಈ ಪುಸ್ತಕ ಒದಗಿಬಂತು.
ಇದು ಕಿಮ್ ಫಿಲ್ಬಿ ಬಗ್ಗೆ ಬಂದ ಮೊದಲ ಪುಸ್ತಕವೇನೂ ಅಲ್ಲ. ಬಹುಶಃ ಆತನ ಬಗ್ಗೆ ಕೊನೆಪುಸ್ತಕ ಆಗಿರಬಹುದು. ಏಕೆಂದರೆ ಈ ಐತಿಹಾಸಿಕ ಬ್ರಿಟಿಷ್ ಡಬಲ್ ಏಜೆಂಟ್ ಬಗ್ಗೆ ಕಂಡುಹಿಡಿಯುವುದಕ್ಕೆ ಇನ್ನೇನೂ ಉಳಿದಿಲ್ಲ. ಈ ಪುಸ್ತಕ ಯಾಕೆ ಚೆನ್ನಾಗಿದೆ ಅಂದರೆ ಇದು ಫಿಲ್ಬಿ ಬಗ್ಗೆ ಹೊಸತೇನನ್ನೋ ಹೇಳುತ್ತದೆ ಎಂಬ ಕಾರಣಕ್ಕಲ್ಲ, ಬದಲಿಗೆ ವ್ಯವಸ್ಥೆಯೊಂದು ತನ್ನವನ್ನು ಹುಸಿ ನಂಬಿಕೆಯೊಂದಿಗೆ ಹೇಗೆನಿರಂತರರಕ್ಷಣೆ ಮಾಡಿತು ಎಂಬುದನ್ನು ಬಹಳ ಮಜ ಕೂರಾಗಿ ಹೇಳುತ್ತದೆ ಎಂಬ ಕಾರಣಕ್ಕೆ ಇಷ್ಟವಾಯಿತು. ಮ್ಯಾಕಿಂಟೈರ್ ಇದನ್ನು ಗೆಳೆಯರ ಜೀವನ ಚರಿತ್ರೆಯ ನ್ನಾಗಿಸುವ ಮೂಲಕ ‘ನಾನಿದನ್ನು ಎಲ್ಲೋ ಕೇಳಿ ದ್ದೇನಲ್ಲ’ ಎಂಬ ಗೊಂದಲಕ್ಕೆ ಓದುಗರು ಬೀಳುವುದನ್ನು ತಪ್ಪಿಸಿದ್ದಾರೆ.
ಬ್ರಿಟಿಷರಿಗೆ ರಾಜಮನೆತನದ ಬಗ್ಗೆ ಬಹಳ ನಿಷ್ಠೆ. ಆದರೆ, ಪ್ರಭಾವಿಗಳು ತಾವೇ ಆಟಗಾರ ಮತ್ತು ಅಂಪೈರ್ ಇಬ್ಬರೂ ಆಗಿ ಡಬಲ್ ಕ್ರಾಸ್ ಮಾಡುವುದನ್ನು ನೋಡಿ ‘ಅಯ್ಯೋ ನಮಗೆ ಮೋಸವಾಯಿತು’ ಎಂದು ಅವರು ಆಗಾಗ ಲೊಚಗುಟ್ಟುವುದುಂಟು. ಮೋಸದಾಟ ಹಾಗೂ ಅವುಗಳ ಸೈಡ್ಎಫೆಕ್ಟ್ಬಗ್ಗೆ ಬರೆದ ಪ್ರಸಿದ್ಧ ಇತಿಹಾಸಕಾರ ಜಾನ್ ಲಿ ಕೇರ್, ‘ಖಾಸಗಿಯಾಗಿ ಶಿಕ್ಷಣ ಪಡೆದ ಈ ಬ್ರಿಟಿಷ್ ವ್ಯಕ್ತಿ ಭೂಯ ಮೇಲಿನ ಅತಿದೊಡ್ಡ ಕಪಟಿಯಾಗಿದ್ದ… ಇವನಷ್ಟು ನಿಮ್ಮನ್ನು ಆಕರ್ಷಿಸುವವರು, ಭಾವನೆಗಳನ್ನು ಬಚ್ಚಿಟ್ಟುಕೊಳ್ಳುವವರು, ಹೆಜ್ಜೆ ಗುರುತುಗಳನ್ನು ನಾಜೂಕಾಗಿ ಅಳಿಸಿಹಾಕುವವರು ಅಥವಾ ತಾನೊಬ್ಬ ಶತಮೂರ್ಖ ಎಂದು ನಿಮ್ಮೆದುರು ಒಪ್ಪಿಕೊಳ್ಳಲು ಕಷ್ಟ ಪಡುವವರು ಇನ್ನೊಬ್ಬ ಸಿಗಲಾರರು…’ ಎಂದು ಬರೆದಿದ್ದರಲ್ಲಿ ಹೆಚ್ಚೇನೂ ಅತಿಶಯೋಕ್ತಿಯಿಲ್ಲ.
ಶತಮೂರ್ಖ ಎಂಬುದಕ್ಕೆ ಅವನ ಬಳಿ ತುಂಬಾ ಪ್ರಾಮಾಣಿಕವಾದ ವಿವರಣೆಯೂ ಇತ್ತು. ಕಿಮ್ ಫಿಲ್ಬಿ ತನ್ನ ಮೋಸದಾಟಗಳನ್ನು ಬಹಳ ಚೆನ್ನಾಗಿ ಸಮರ್ಥಿಸಿ ಕೊಳ್ಳುತ್ತಿದ್ದ. ರಾಷ್ಟ್ರೀಯತೆಗಿಂತ ಕಮ್ಯುನಿಸ್ಟ್ ಮಾದರಿಯ ಅಂತಾರಾಷ್ಟ್ರೀಯತೆ ಎಂಬುದು ಇನ್ನೂ ದೊಡ್ಡ ಮೌಲ್ಯ ಎಂಬುದು ಅವನ ವಾದವಾಗಿತ್ತು. ಅವನು ಜಗತ್ತನ್ನು ರಕ್ಷಿಸುತ್ತಿದ್ದ. ಸೋವಿಯತ್ ಒಕ್ಕೂಟ ಪತನಗೊಂಡಿದ್ದು ಅವನ ತಪ್ಪಲ್ಲ. ಕಮ್ಯುನಿಸ್ಟ್ ನಾಯಕರ ಕಸ್ಟಡಿಯಲ್ಲೇ ಅವರ ಸಿದ್ಧಾಂತ ನಾಶಹೊಂದಿತ್ತು.
ಕಿಮ್ ಎಂಬುದು ನಿಕ್‌ನೇಮ್. ಅವನ ತಂದೆ ಹಿಲರಿ ಸೇಂಟ್ ಜಾನ್ ಬ್ರಿಡ್ಜರ್ ಫಿಲ್ಬಿ ಭಾರತೀಯ ನಾಗರಿಕ ಸೇವೆಯಲ್ಲಿ ವೃತ್ತಿಜೀವನ ಆರಂಭಿಸಿದ್ದ. ಕಿಮ್ ಹುಟ್ಟಿದ್ದುಇಲ್ಲೇ. ಅವನ ನಿಜವಾದ ಹೆಸರು ಹರೋಲ್ಡ್ ಏಡ್ರಿಯನ್ ರಸೆಲ್. ಆದರೆ, ರುಡ್ಯಾರ್ಡ್ ಕಿಪ್ಲಿಂಗ್‌ನ ಕಾಲ್ಪನಿಕ ಹೀರೋ ಕಿಮ್‌ನ ಹೆಸರಿನಿಂದ ಹಿಲರಿ ತನ್ನಮಗನನ್ನು ಕರೆಯುತ್ತಿದ್ದ. ಕಿಮ್‌ನ ಸಾಹಸಗಳು ಶಾಲೆಯಲ್ಲಿದ್ದಾಗಲೇ ಶುರುವಾಗಿದ್ದವು. ೧೪ ವರ್ಷವಾದಾಗ ಅವನನ್ನು ಇಂಗ್ಲೆಂಡ್‌ನ ಡೋರ್ಸೆಟ್‌ನಲ್ಲಿರುವ ಡರ್ನ್ ಫೋರ್ಡ್ಶಾಲೆಗೆ ಸೇರಿಸಿದರು. ಅಲ್ಲಿಂದ ಕಿಮ್ ಏಟನ್ ಕಾಲೇಜಿಗೆ ಹೋದ. ಅಲ್ಲಿ ಲೆಕ್ಚರರ್ ಒಬ್ಬರು ‘ತುಂಬಾ ಸುಂದರವಾಗಿರುವ ಕೈಬರಹದಿಂದಾಗಿ ಇವನಿಗೆ = ಸ್ಪೆಲ್ಲಿಂಗ್ ಗೊತ್ತಿಲ್ಲ ಎಂಬುದು ಎಲ್ಲರಿಗೂ ಗೊತ್ತಾಗೋ ದು ಬಿಟ್ಟು ಇನ್ನಾವ ಪ್ರಯೋಜನವೂ ಇಲ್ಲ’ ಎಂದು ರಿಪೋರ್ಟ್ ಕಾರ್ಡ್‌ನಲ್ಲಿ ಬರೆದಿದ್ದರು.
ಆದರೆ ಸ್ಪೆಲ್ಲಿಂಗ್ ಕಲಿಯುವುದಕ್ಕೆ ಯಾರು ಏಟನ್‌ಗೆ ಹೋಗುತ್ತಾರೆ? ಅತಿ ಹುಚ್ಚುತನ, ಅದರ ಕತೆಗೆ ನೌಕರಿಯಿಂದ ಬರುವ ಐಷಾರಾಮ ಇವೆಲ್ಲ ಶ್ರೀಮಂತರಿಗೆ ಅನಾಯಾಸವಾಗಿ ಬರುವ ಸೌಕರ್ಯಗಳು. ಆ ಕಾಲ ದಲ್ಲಿ ಗೂಢಚರ ಹಾಗೂ ಅವನ ಸ್ನೇಹಿತರ ಸಾಮಾನ್ಯ ಊಟ ವೆಂದರೆ ಎರಡು ಅಥವಾ ಮೂರು ಪಿಮ್ಸ್ (ಇಂಗ್ಲಿಷರ ದುಬಾರಿ ಜಿನ್), ನಂತರ ಸಣ್ಣದೊಂದು ಕಪ್‌ನಲ್ಲಿ ಗಿಡಮೂಲಿಕೆಯ ಆಲ್ಕೋಹಾಲ್, ಸ್ಮೋಕ್ಡ್ ಸಾಲ್ಮನ್, ಶ್ರೀಂಪ್‌ಗಳು, ಡೋವರ್ ಸೋಲ್ ಮೀನು, ಮೊಲದ ಮಾಂಸ, ರೇರ್‌ಬಿಟ್, ವೈನ್ ಹಾಗೂ ಪೋರ್ಟ್.
ನಂತರ ಅವರೆಲ್ಲ ಸರ್ವಾಧಿಕಾರಿಗಳಿಂದ ಪ್ರಜಾಪ್ರಭುತ್ವ ರಕ್ಷಿಸಲು ಅನಾಮಧೇಯ ಕಚೇರಿಗೆ ನಡೆಯುತ್ತಿದ್ದರು. ಕಿಮ್‌ನ ಆಜೀವ ಸ್ನೇಹಿತ ನಿಕೋಲಸ್ ಎಲಿಯಟ್. ಅವನೂಎಂಐ೬(ಬ್ರಿಟನ್ನಿನ ಗುಪ್ತಚರ ದಳ)ನಲ್ಲಿ ಉನ್ನತ ಅಧಿಕಾರಿಯಾಗಿದ್ದ. ಅವನ ಅಂಕಲ್ ಎಡ್ಗರ್ ಬ್ರಿಟಿಷ್ ಇಂಡಿಯಾ ಸೇನೆಯಲ್ಲಿ ಅಧಿಕಾರಿಯಾಗಿದ್ದ. ಆತ ಮೂರು ತಿಂಗಳು ಪ್ರತಿದಿನ ತನ್ನಷ್ಟೇ ಉದ್ದದ ಸಿಗಾರ್ ಸೇದುತ್ತೇನೆಂದು ಬೆಟ್ ಕಟ್ಟಿ, ಎರಡೇ ತಿಂಗಳಿಗೆ ಸತ್ತುಹೋಗಿದ್ದ. ಅದು ಇತಿಹಾಸಕ್ಕಿಂತ ಹೆಚ್ಚು ಸಾಹಿತ್ಯಕ್ಕೆ ಆದ ನಷ್ಟ.
ರಾಜತಾಂತ್ರಿಕ ಅಧಿಕಾರಿಗಳು ಮೂರನೇ ಪೋರ್ಟ್‌ಗಿಂತ ಮೊದಲು ಸಿಗಾರ್ ಸೇದುವಂತಿಲ್ಲ ಎಂಬ ನಿಯಮವನ್ನು ಎಡ್ಗರ್ ಎಲಿಯಟ್ ಪಾಲಿಸಿದ್ದರೆ ಸಮಸ್ಯೆ ಯಾಗುತ್ತಿರಲಿಲ್ಲ. ಆ ಕಾಲದಲ್ಲಿ ನಾಗರಿಕ ಸೇವೆಗಳಲ್ಲಿ ಶ್ರೇಣಿ ವ್ಯವಸ್ಥೆಯನ್ನು ಬಹಳ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಅಪವಾದಗಳು ಅಪರೂಪವಾಗಿದ್ದವು. ‘ಎಂಐ೬’ನಲ್ಲಿ ಆಕ್ಸ್ಫರ್ಡ್, ಕೇಂಬ್ರಿಜ್‌ನಲ್ಲಿ ಓದಿಕೊಂಡು ಬಂದ ಶ್ರೀಮಂತ ವರ್ಗದವರೇ ತುಂಬಿ ರುತ್ತಿದ್ದರು. ವೈಟ್ಸ್‌ನಂತಹ ಕ್ಲಬ್‌ಗಳಲ್ಲಿ ಅವರಿಗೆ ಸದಸ್ಯತ್ವ ಇರುತ್ತಿತ್ತು. ದೇಸೀ ಗುಪ್ತಚರ ದಳ ‘ಎಂಐ೫’ನಲ್ಲಿಮಧ್ಯಮ ವರ್ಗದವರಿರುತ್ತಿದ್ದರು. ಅವರು ರೋಟರಿ ಕ್ಲಬ್‌ಗಳಲ್ಲಿ ಸದಸ್ಯರಾಗಿರುತ್ತಿದ್ದರು. ಇನ್ನುಳಿದವರೆಲ್ಲಉಪ್ಪಿಗೆ ಗತಿಯಿಲ್ಲದವರಾಗಿರುತ್ತಿದ್ದರು.
ಎಂಐ೬ಮುಖ್ಯಸ್ಥ ಮೇಜರ್ ಜನರಲ್ ಸರ್ ಸ್ಟೆವಾರ್ಟ್ ಮೆಂಜೀಸ್ ತನಗೆ ಬೇಕಾದ್ದನ್ನೆಲ್ಲ ಏನಕೇನ ಪ್ರಕಾರದಲ್ಲಿ ಪಡೆದೇ ತೀರುವ, ರಾಜಮನೆತನದಸಂಬಂಽಕನಾಗಿದ್ದ (ಅವನ ತಾಯಿ ಕ್ವೀನ್ ಮೇರಿಯ ನಂತರ ರಾಣಿಯಾಗುವ ಸಾಲಿನಲ್ಲಿದ್ದಳು), ಸದಾ ಅಸ್ಕಾಟ್ ಧರಿಸುತ್ತಿದ್ದ, ಯದ್ವಾತದ್ವಾ ಕುಡಿಯುತ್ತಿದ್ದ,ತೀಕ್ಷ್ಣ ಮೀಸೆ ಹೊತ್ತಿದ್ದ ಹಾಗೂ ತಾನು ೭ನೇ ಎಡ್ವರ್ಡ್ ನ ಅನೈತಿಕ ಸಂತಾನ ಎಂಬ ವದಂತಿಯನ್ನು ಯಾವತ್ತೂ ಅಲ್ಲಗಳೆಯದ ಉನ್ನತ ವರ್ಗದ ವ್ಯಕ್ತಿಯಾಗಿದ್ದ.ಇವನೂ ಏಟನ್‌ನಲ್ಲಿ ಓದಿದವನೇ. ಅತಿ ಎನ್ನುವಷ್ಟು ನಯವಂತ ಹಾಗೂ ಅಪ್ಪಟ ನಿರ್ದಯಿ. ರಾಜಮನೆ ತನದ ಮಗ. ಇವನ ಕಣ್ಗಾವಲಿನಲ್ಲೇ ಫಿಲ್ಬಿ ಕೆಲಸ.ಮೆಂಜೀಸ್ ೧೯೫೨ರಲ್ಲಿ ನಿವೃತ್ತಿಯಾದ.
ಒಂದು ದಶಕದ ಮೇಲೆ ಬ್ರಿಟಿಷರಿಗೆ ಕಿಮ್ ಫಿಲ್ಬಿ, ಸೋವಿಯತ್ ನ ಗೂಢಚರ ಎಂಬುದು ಗೊತ್ತಾಯಿತು! ಆ ಸಮಯ ಕಿಮ್ ಬೈರೂತ್‌ನಲ್ಲಿ ಪತ್ರಕರ್ತನ ವೇಷದಲ್ಲಿ ನೆಲೆಸಿದ್ದ. ಅವನನ್ನು ಹಿಡಿಯಲು ಬ್ರಿಟಿಷರು ಎಲಿಯಟ್‌ನನ್ನು ಕಳಿಸಿದರು.೧೯೬೩ರಲ್ಲಿ ನಡೆದ ಈ ಘಟನೆ ಸೋವಿಯತ್ ಯೂನಿಯನ್‌ನ ತನಿಖಾ ಸಂಸ್ಥೆ ಕೆಜಿಬಿಯ ದೊಡ್ಡ ದೊಡ್ಡ ವ್ಯಕ್ತಿಗಳು ಹೇಗೆ ಕೆಲಸ ಮಾಡುತ್ತಿದ್ದರು ಎನ್ನುವುದಕ್ಕಿಂತ ಹೆಚ್ಚಾಗಿ ಬ್ರಿಟನ್ನಿನ ಮೇಲ್ವರ್ಗದವರ ಸಾಂಸ್ಥಿಕ ಬೆನ್ನು ಕೆರೆಯುವಿಕೆಯ ಸೂಕ್ಷ್ಮ ಕಲೆಗಾರಿಕೆ ಹೇಗಿರುತ್ತದೆ ಎಂಬುದನ್ನು ಚೆನ್ನಾಗಿ ಹೇಳುತ್ತದೆ. ಕಿಮ್ ಫಿಲ್ಬಿ ಬೈರೂತ್‌ನಿಂದ ಮಾಸ್ಕೋಗೆ ಪಲಾಯನ ಮಾಡುವವರೆಗೂ ಅವನನ್ನು ಬಂಧಿಸುವುದನ್ನು ಎಲಿಯಟ್ ವಿಳಂಬ ಮಾಡುತ್ತಲೇ ಹೋದ. ನಂತರ ಫಿಲ್ಬಿ ಮಾಸ್ಕೋದಲ್ಲಿ ಕೆಜಿಬಿ ಆಶ್ರಯದಲ್ಲಿ೧೯೯೮ರಲ್ಲಿ ಮರಣ ಹೊಂದುವವರೆಗೂ ಹಾಯಾಗಿದ್ದ.
ಕಿಮ್ ಫಿಲ್ಬಿ ತಂದೆಯ ಬದುಕು ಇನ್ನೂ ಮಜವಾಗಿತ್ತು.೬೦೦ಪೌಂಡ್ ತೆರಿಗೆರಹಿತ ಸಂಬಳದ ಆಕರ್ಷಕ ಭಾರತೀಯ ನಾಗರಿಕ ಸೇವೆಯ ನೌಕರಿ ಅವನಿಗೆಬೇಸರ ತರಿಸಿತ್ತು. ಹೀಗಾಗಿ ರಾಜೀನಾಮೆ ನೀಡಿ ಸೌದಿ ಅರೇಬಿಯಾದ ರಾಜ ಇಬನ್ ಸೌದ್‌ಗೆ ಸಲಹೆಗಾರ ನಾಗಿದ್ದ. ಯಾವಾಗಲೂ ಪ್ರಭಾವಿಗಳ ವಲಯದಲ್ಲೇಸುತ್ತುತ್ತಿದ್ದ. ಅವನ ಹೆಂಡತಿ ಐಲೀನ್ಫರ್ಸ್. ಅವಳ ಆಪ್ತ ಗೆಳತಿ, ಶ್ರೀಮಂತ ಉದ್ಯಮಿಯ ಮಗಳು ಫ್ಲೋರಾಸೋಲೋಮನ್. ಆಕೆ ರಷ್ಯಾದ ಪ್ರಧಾನಿಯಾಗಿ ಲೆನಿ ನ್‌ನಿಂದ ಅಧಿಕಾರ ಕಳೆದುಕೊಂಡ ಅಲೆಕ್ಸಾಂಡರ್ ಕೆರೇನ್ಸ್‌ಕಿಯ ಜತೆ ಮೋಜು ಮಾಡುತ್ತಿದ್ದಳು. ಐಲೀನ್ ಳನ್ನು ತೊರೆದು ಹಿಲರಿ ಸೇಂಟ್ ಜಾನ್ ಸೌದಿ ಅರೇಬಿಯಾಕ್ಕೆ ಹೋದ. ಅಲ್ಲಿ ಇಸ್ಲಾಮ್‌ಗೆ ಮತಾಂತರಗೊಂಡು, ರಾಜನಿಂದ ತನಗೆ ಉಡುಗೊರೆಯಾಗಿ ದೊರೆತ ಬಲೂಚಿಸ್ತಾನದ ಹುಡುಗಿಯನ್ನು ಮದುವೆ ಯಾದ. ಅಪ್ಪ-ಮಗ ಕೊನೆಯ ಬಾರಿ ಭೇಟಿಯಾಗಿದ್ದು೧೯೬೦ರಲ್ಲಿ.
ಅಂದು ಹಿಲರಿಯ೬೫ನೇ ಹುಟ್ಟುಹಬ್ಬ. ಮಗನನ್ನು ನೋಡಲು ಬೈರೂತ್‌ಗೆ ಹೋಗಿದ್ದ. ಆಗ ನಿಕೋಲಸ್ ಎಲಿಯಟ್, ಪಶ್ಚಿಮ ಏಷ್ಯಾದ ಗೂಢಚರ ರಾಜಧಾನಿ ಯೆಂದೇ ಖ್ಯಾತಿ ಪಡೆದಿದ್ದ ಆಕರ್ಷಕ ನಗರದಲ್ಲಿಎಂಐ ೬ಕೇಂದ್ರದ ಮುಖ್ಯಸ್ಥನಾಗಿದ್ದ. ಅಂದು ನಿಕೋಲಸ್ ಎಲಿಯಟ್ ಆಯೋಜಿಸಿದ್ದ ಹುಟ್ಟುಹಬ್ಬದ ಔತಣದಲ್ಲಿ ವೈನ್‌ನ ಸಣ್ಣ ಹೊಳೆಯೇ ಹರಿದಿತ್ತು. ಸೀನಿಯರ್ ಫಿಲ್ಬಿ ‘ಚಹಾ ಸಮಯಕ್ಕೆ ಸರಿಯಾಗಿ ಅಲ್ಲಿಂದ ಹೋಗಿ, ಸಣ್ಣದೊಂದು ನಿದ್ದೆ ಮಾಡಿ, ನೈಟ್ ಕ್ಲಬ್‌ನಲ್ಲಿ ದೂತಾ ವಾಸದ ಅಧಿಕಾರಿಯೊಬ್ಬನ ಹೆಂಡತಿಯನ್ನು ಚುಡಾಯಿಸಿ, ಹೃದಯಾಘಾತದಿಂದ ಸತ್ತುಹೋದ.’
ಸೇಂಟ್ ಜಾನ್ ಫಿಲ್ಬಿಯ ಕೊನೆಯ ಮಾತು- ‘ದೇವರೇ, ನನಗೆ ಬೋರಾಗಿದೆ…’ ಕಿಮ್ ಫಿಲ್ಬಿ ತನ್ನ ತಂದೆಯ ಅಂತ್ಯ ಸಂಸ್ಕಾರವನ್ನು ಇಸ್ಲಾಂ ಸಂಪ್ರದಾಯದಂತೆ ನೆರವೇರಿಸಿದ. ಅದು ಮೇಲ್ವರ್ಗದ ಬ್ರಿಟಿಷ್ ವ್ಯಕ್ತಿಯೊಬ್ಬ ನಿಗೆ ಯೋಗ್ಯವಾದ ನಿರ್ಗಮನವಾಗಿತ್ತು.***ಸಾಯಲು ಯೋಗ್ಯವಾಗಿದ್ದ ಕಳೆದ ವರ್ಷ ಈಗಷ್ಟೇ ಸತ್ತಿತಷ್ಟೇ.೨೦೨೧ರಲ್ಲಿ ಕಾಲ್ಪನಿಕ ಗೂಢಚರರು ಸಾಕಷ್ಟು ದುಡ್ಡು ಮಾಡಿದರು. ಇಯಾನ್ ಫ್ಲೆಮಿಂಗ್ ತನ್ನಮೊದಲ ಜೇಮ್ಸ್ ಬಾಂಡ್ ಪುಸ್ತಕ ಕ್ಯಾಸಿನೋ ರಾಯೇಲ್ ಬರೆದ ಏಳು ದಶಕಗಳ ನಂತರ, ಜೇಮ್ಸ್ ಬಾಂಡ್ ಓದುವುದು ತನಗೆ ಇಷ್ಟ ಎಂದು ಅಮೆರಿಕದಅಧ್ಯಕ್ಷ ಜಾನ್ ಕೆನಡಿ ಹೇಳಿದ ಆರು ದಶಕಗಳ ನಂತರವೂ ಬಾಂಡ್ ಮಾರುಕಟ್ಟೆ ವಿಸ್ತರಿಸುತ್ತಲೇ ಇದೆ.
ಡೇನಿಯಲ್ ಕ್ರೇಗ್ ಸಿನಿಮಾ ಥಿಯೇಟರ್‌ಗಳ ಬಾಕ್ಸ್ ಆಫೀಸ್ ತುಂಬಿಸುತ್ತಿದ್ದರೆ, ಮುಖ್ಯವಾಹಿನಿಯ ಟೀವಿ ಚಾನೆಲ್‌ಗಳು ಮೊಟ್ಟಮೊದಲ ಹಾಗೂ ಅತ್ಯುತ್ತಮಸ್ಕ್ರೀನ್ ಬಾಂಡ್ ಶಾನ್ ಕ್ಯಾನರಿಯನ್ನು ಈಗ ಮತ್ತೆ ತೋರಿಸುತ್ತಿವೆ.೧೯೬೦ರ ದಶಕ ಮರುಕಳಿಸಿದೆ. ಇಷ್ಟು ದೀರ್ಘಕಾಲ ಹೇಗೆ ಒಂದು ಪಾತ್ರ ಪ್ರಸ್ತುತ ವಾಗುಳಿಯುತ್ತದೆ ಎಂದು ಅಧ್ಯಯನ ಮಾಡುವ ಕೆಲಸವನ್ನು ಅರೆಬರೆ ತಜ್ಞರಿಗೆ ಬಿಡೋಣ. ಇಲ್ಲೊಂದು ಸರಳ ಸಂಗತಿ ಮರೆಯಬಾರದು. ಬಹುಶಃ ಈ ಪಾದರಸದಂತಹ ಪಾತ್ರದ ಬಗ್ಗೆ೧೯೯೬ರಷ್ಟು ಹಿಂದೆ ಮಾಯಾ ಟುರೋವ್‌ಸ್ಕಾಯಾ ರಷ್ಯನ್ ಪತ್ರಿಕೆ ‘ನೋವಿ ಮಿರ್ ’ನಲ್ಲಿ ಬರೆದಿರುವಷ್ಟು ಚೆನ್ನಾಗಿ ಇನ್ನಾರೂ ಬರೆದಿಲ್ಲ.
ಆ ಬರಹ ಬ್ರಿಟಿಷ್ ನಿಯತಕಾಲಿಕೆ ‘ಸ್ಪೆಕ್ಟೇಟರ್’ನ ೨೦೨೧ರ ಕ್ರಿಸ್‌ಮಸ್ ಸಂಚಿಕೆಯಲ್ಲಿ ಸಿಕ್ಕಿತು. ‘ಇಯಾನ್ ಫ್ಲೆಮಿಂಗ್‌ನ ಕಾದಂಬರಿಗಳಲ್ಲಿ ನಿರಾಸಕ್ತ ವಾಸ್ತವವಾದ ವೊಂದು ಬೆರೆತಿರುತ್ತದೆ. ಅದು ಸ್ವಚ್ಛಂದವಾಗಿರುತ್ತದೆ. ರೋಚಕತೆಯ ಎಲ್ಲ ಅಂಗಗಳನ್ನೂ ಮುಟ್ಟುವಂತೆ ರೂಪುಗೊಂಡಿರುತ್ತದೆ. ರಾಜಕೀಯ ಆಟಗಳು ಮತ್ತು ಥ್ರಿಲ್ಲರ್, ವೈಜ್ಞಾನಿಕ ಕಾಲ್ಪನಿಕತೆ ಹಾಗೂ ಜಾಹೀರಾತಿನ ಬ್ರೌಶರ್, ಯಾವುದೋ ಫ್ಯಾಷನ್ ಮ್ಯಾಗಜೀನ್ ಮತ್ತು ಬೆತ್ತಲೆ ಸಿನಿಮಾ… ಹೀಗೆ ಅದರಲ್ಲಿ ಏನೇನೋ ಸಿಗುತ್ತದೆ.
ಇದು ಈ ಮಾದರಿಯ ಬರಹ ಆಧುನಿಕ ರೂಪದಲ್ಲೂ ಜನಪ್ರಿಯತೆ ಗಳಿಸಿಕೊಂಡಿದ್ದರ ಗುಟ್ಟು. ಆದರೂ, ತೆರೆಯ ಮೇಲಲ್ಲದೆ ನಿಜವಾದ ಜಗತ್ತಿಗೇನಾದರೂ ಬಾಂಡ್ ಇಳಿದರೆ ಇಲ್ಲಿರುವ ಗೂಢಚರರ ಮುಂದೆ ಸೋತುಹೋಗುತ್ತಾನೆ. ಅವನು ಏನೂ ಅಲ್ಲ. ಅವನನ್ನೊಂದು ಭ್ರಮೆಯನ್ನಾಗಿ ಮಾಡಿದ್ದು ಸಿನಿಮಾಇಂಡಸ್ಟ್ರಿ’ ಎಂದು ಮಾಯಾ ಬರೆಯುತ್ತಾರೆ. ಎಲ್ಲ ಆಳುವ ವರ್ಗದವರೂ ಜನರ ಹೆಸರಿನಲ್ಲಿ ಜನರನ್ನು ಕೊಲ್ಲುತ್ತಾರೆ. ಆದರೆ ಅದನ್ನು ಕೊಂಚ ಸೆನ್ಸಾರ್ಮಾಡಿರುತ್ತಾರೆ ಎಂಬುದನ್ನೂ ಮಾಯಾ ಟುರೋವ್ ಸ್ಕಾಯಾ ಬಹುಶಃ ಗಮನಿಸಿರುತ್ತಾರೆ. ನಮ್ಮಲ್ಲೂ ಬಹುತೇಕರಿಗೆ ಈಗ ಮೆಕ್ಯಾನಿಕಲ್ ಬದುಕಿನ ವ್ಯಾಪಾರಗಳಿಂದ ಒಂದು ಅನಾಸಕ್ತ ಬ್ರೇಕ್ ಬೇಕು. ಈ ಪರ್ಯಾಯ ಬದುಕು ಬಹಳ ಪ್ರಯೋಜನಕ್ಕೆ ಬರುತ್ತದೆ. ಹೀರೋಗಳು ಬರೀ ನಾವು ನಂಬುವ ಕೆಲಸಗಳನ್ನಷ್ಟೇ ಮಾಡಿದ್ದರೆ ಹೀರೋಗಳಾಗುತ್ತಿರಲಿಲ್ಲ.***೨೦೨೧ರ ಕೊನೆಯ ವಾರದಲ್ಲಿ ಬೆಳಗಿನಿಂದ ರಾತ್ರಿಯವರೆಗೆ ಹುಚ್ಚಿಗೆ ಬಿದ್ದವನಂತೆ ಕ್ರಿಕೆಟ್ ನೋಡುವವನಿದ್ದೆ. ದಕ್ಷಿಣ ಭೂಗೋಳದ ದೇಶಗಳಾದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದ ನಟ್ಟನಡುವೆ ಇರುವ ಭಾರತದ ಆಟವನ್ನು ಟೀವಿಯಲ್ಲಿ ಹಬ್ಬದಂತೆ ಸವಿಯಲು ಅದು ಹೇಳಿಮಾಡಿಸಿದ ಸಮಯವಾಗಿತ್ತು. ರಿಮೋಟ್‌ನಲ್ಲಿ ಒಂದು ಬಟನ್ ಒತ್ತಿದರೆ ಸೀದಾ ನೀವು ನಿದ್ದೆಯಿಂದ ಮೆಲ್ಬರ್ನ್‌ಗೆ ಹೋಗಿ ಅಲ್ಲಿ ನಡೆಯುತ್ತಿದ್ದ ಮೂರನೇ ಆಶಸ್ ಟೆಸ್ಟ್‌ಗೂ, ಊಟದ ನಂತರಜೋಹಾನ್ಸ್‌ಬರ್ಗ್‌ನಲ್ಲಿ ಸಮುದ್ರ ಮಟ್ಟದಿಂದ೪೫೦೦ಅಡಿ ಎತ್ತರದಲ್ಲಿರುವ ಸೆಂಚೂರಿಯನ್ ಸ್ಟೇಡಿಯಂನ ಭಾರತ-ದಕ್ಷಿಣ ಆಫ್ರಿಕಾ ಪಂದ್ಯಕ್ಕೂ ಹೋಗಬಹುದಿತ್ತು.
ಕ್ರಿಕೆಟ್ ಪ್ರೇಮಿಗೆ ಇಲ್ಲಿ ನಿರಾಸೆಗೇನಾದರೂ ಜಾಗವಿದೆಯೇ? ಬಹಳ ಇತ್ತು. ದಕ್ಷಿಣ ಆಫ್ರಿಕಾದಲ್ಲಿ ಎರಡನೇ ದಿನವನ್ನು ಮಳೆ ತೊಳೆದುಹಾಕಿತು, ಅದೇ ಸಮಯ ದಲ್ಲಿ ಇಂಗ್ಲೆಂಡನ್ನು ಆಸ್ಟ್ರೇಲಿಯಾ ತೊಳೆದುಹಾಕಿತು. ಕೊನೆಗೆ ಆಶಸ್‌ನಲ್ಲಿ ನೋಡಲು ಉಳಿದಿದ್ದು ಟೆಸ್ಟ್ ಕ್ರಿಕೆಟ್‌ನ ಅತ್ಯಂತ ಕೆಳದರ್ಜೆಯ, ಬೇಜವಾಬ್ದಾರಿಯ ‘ಹೈಲೈಟ್ಸ್.’ ಈ ಕಿಕ್ಕಿರದ, ಹೆಪ್ಪುಗಟ್ಟಿದ ಹಾಗೂ ಮಲಬದ್ಧತೆಯಾದಂತಿರುವ ಅರ್ಧ ತಾಸಿನ ಗುಳಿಗೆಗಳು – ಇಲ್ಲಿಗೆ ನನ್ನ ಉಪಮೆಗಳು ಖಾಲಿಯಾದವು – ನಿಜಕ್ಕೂ ಕ್ರಿಕೆಟ್‌ನ ಅಣಕವಿದ್ದಂತೆ.
ಇವು ಕ್ರಿಕೆಟ್‌ನ ಪಾವಿತ್ರ್ಯವನ್ನೇ ಹಾಳುಮಾಡುತ್ತವೆ. ಟೆಸ್ಟ್ ಕ್ರಿಕೆಟ್‌ಗೊಂದು ಸೌಂದರ್ಯವಿದೆ ಕಣ್ರೀ. ಅದರಲ್ಲಿ ಕಾಣುವ ಆಟಗಾರರ ಧೈರ್ಯ, ಅವರ ತಾಕತ್ತು, ಆತ್ಮಶ್ವಾಸ ಮುಂತಾದವುಗಳನ್ನು ೫ ದಿನಗಳ ಕಾಲ ನೋಡಿಯೇ ಸವಿಯಬೇಕು. ಆದರೆ, ಸಮತೋಲನ ಕಳೆದುಕೊಂಡ ಜಗತ್ತಿನ ಬ್ಯಾಲೆನ್ಸ್ ಶೀಟನ್ನು ಮೀಡಿಯಾ ದೊರೆಗಳು ಓದುವ ರೀತಿಯೂ ಸರಿಯಾಗಿಯೇ ಇದೆಯೆನ್ನಿ. ಜಹೀಗಾಗಿ ಈ ಉದ್ದ ಆಟವನ್ನು ಕತ್ತರಿಸಿ ಕತ್ತರಿಸಿ ಹಾಕಿದ್ದಾರೆ. ಮೊದಲೆಲ್ಲ ಐದು ದಿನಗಳ ಟೆಸ್ಟ್ ಆರು ದಿನ ನಡೆಯುತ್ತಿತ್ತು. ಈಗ ವಿಚಿತ್ರ ಅನ್ನಿಸಬಹುದು, ಟೆಸ್ಟ್‌ನ ನಡುವೆ ಮಧ್ಯದಲ್ಲೊಂದು ದಿನ ಬ್ರೇಕ್ ತೆಗೆದು ಕೊಳ್ಳುತ್ತಿದ್ದರು.
ಅರವತ್ತು ಹಾಗೂ ಎಪ್ಪತ್ತರ ದಶಕದ ಆಟಗಾರರು ಆ ದಿನ ವಿಶ್ರಾಂತಿಗೆ ಬಳಸಿ ಒಂದಷ್ಟು ನಿದ್ದೆ ಮಾಡುವುದೋ ಅಥವಾ ಮ್ಯಾಚ್‌ನ ಬಗ್ಗೆ ಅಧ್ಯಯನ ಮಾಡುವುದೋ ಬಿಟ್ಟು ಹೊರಗೆ ಹೋಗಿ ಮಜಾ ಮಾಡುತ್ತಿದ್ದರು. ಕೋಲ್ಕತಾದ ಈಡನ್ ಗಾಡರ್ನ್ಸ್‌ನಲ್ಲಿ ಟೆಸ್ಟ್ ಮ್ಯಾಚ್  ಇದ್ದರೆ ಮಧ್ಯಾಹ್ನದ ಊಟಕ್ಕೆ ಕೋಲ್ಕತಾ ಕ್ರಿಕೆಟ್ ಅಂಡ್ ಫುಟ್‌ಬಾಲ್ ಕ್ಲಬ್‌ನಲ್ಲಿ ಒಂದಷ್ಟು ಪಿಂಕ್ ಜಿನ್ ಬಾಟಲಿಗಳು ಓಪನ್ನಾಗು ತ್ತಿದ್ದವು. ಪಾರ್ಟಿ ಯನ್ನೂ ಮಾಡಿ ಆಟ ಆಡಿ, ಅವೆರಡಕ್ಕೂ ನ್ಯಾಯ ಒದಗಿಸುತ್ತಿದ್ದ ಆಟಗಾರರ ಪಟ್ಟಿಯಲ್ಲಿ ಸರ್ ಯನ್ ರಿಚರ್ಡ್ಸ್ ಹಾಗೂ ಲಾರ್ಡ್ ಬಾತಮ್ ಅವರೇ ಕೊನೆ ಯೇನೋ. ಈಗ ಹಾಗೆಲ್ಲ ವರ್ತಿಸುವುದು ಅಪಚಾರ.ಈಗ ಟೆಸ್ಟ್ ಮ್ಯಾಚ್ ಸಾಮಾನ್ಯವಾಗಿ ಯಾವುದಾದ ರೊಂದು ನಿರ್ಧಾರದಲ್ಲಿ ಮುಗಿಯುತ್ತದೆ; ಡ್ರಾ ಎಂಬುದು ಟೀವಿಗೆ ಬಹಳ ಬೋರಿಂಗ್.
ಗೆಲ್ಲಬೇಕು ಅಥವಾ ಸೋಲಬೇಕು. ಅಂಪೈರ್ ಈಗ ಕೇವಲ ಮನುಷ್ಯನಲ್ಲ. ಅದೃಷ್ಟ ಈಗ ಸಣ್ಣದೊಂದು ತಪ್ಪು ನಿರ್ಧಾರದಿಂದ ಒಲಿಯುವುದಿಲ್ಲ. ಅಲ್ಲಿ ಎಲೆಕ್ಟ್ರಾನಿಕ್ ಗಿಡುಗ ಗಳು ಕಣ್ಣು ಬಿಟ್ಟು ಕುಳಿತಿರುತ್ತವೆ. ಏನೇ ತಪ್ಪಾದರೂ ಅವು ಚಕ್ಕನೆ ಮಧ್ಯೆ ಬರುತ್ತವೆ. ಅದೃಷ್ಟವೆಂಬುದು ಮೂಲೆಗುಂಪಾಗಿದೆ. ಫೀಲ್ಡರ್ ಈಗಲೂ ಸುಲಭದ ಕ್ಯಾಚ್ ಬಿಡಬಹುದು ಅಥವಾ ಅಸಾಧ್ಯವಾದ ಕ್ಯಾಚೊಂದನ್ನು ಹಿಡಿಯಬಹುದು, ಆದರೆ ಅದೃಷ್ಟ ಮಾತ್ರ ಯಾರ ಕೈಯನ್ನೂ ಹಿಡಿಯುವುದಿಲ್ಲ. ಹೀಗಾಗಿ ನಾವೀಗ ಒಳ್ಳೆಯ ಸುದ್ದಿಯೊಂದಿಗೆ ಮುಗಿಸೋಣ. ಹೀಗೆ ವೃತ್ತಿಪರವಾಗಿ ನಡೆದುಕೊಳ್ಳುವುದರಿಂದ ಸಿಗುವ ಫಲ ಅದ್ಭುತವಾಗಿಯೇ ಇರುತ್ತದೆ. ಆಟಗಾರರು ತೆಳ್ಳಗಾಗಿದ್ದಾರೆ, ಅವರ ಚೆಕ್‌ಗಳು ದಪ್ಪಗಾಗಿವೆ. ಆಶಸ್‌ನಲ್ಲಿ ಇಂಗ್ಲೆಂಡನ್ನು ಅನಾಹುತದೆಡೆಗೆ ಕರೆದುಕೊಂಡು ಹೋದ ಕೋಚ್‌ಗೂ ೫ ಲಕ್ಷ ಪೌಂಡ್ಸ್ ಸ್ಟರ್ಲಿಂಗ್ ಸಿಗುತ್ತದೆ. ೨೦೨೧ರಲ್ಲಿ ಸೋಲೇ ಸಾಕಷ್ಟು ಯಶಸ್ವಿಯಾಗಿತ್ತು.
(ಲೇಖಕರು ಹಿರಿಯ ಪತ್ರಕರ್ತರು, ರಾಜ್ಯಸಭೆ ಸದಸ್ಯರು )