ಡಾ.ಕಬ್ಬಿನಾಲೆಯವರ ಕಬ್ಬಿನಷ್ಟೇ ಸಿಹಿ ಕೃತಿಗಳು
ಪ್ರಾಣೇಶ್ ಪ್ರಪಂಚ
ಗಂಗಾವತಿ ಪ್ರಾಣೇಶ್
ನಾನು ಇಷ್ಟಪಡುವ ಲೇಖಕರಲ್ಲಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜರೂ ಒಬ್ಬರು. ಒಮ್ಮೆ ಬಾ ವರ್ಷಗಳ ಹಿಂದೆ ಅವರ ಅಷ್ಟಾವಧಾನ ಕಾರ್ಯಕ್ರಮ ಕೇಳಿ ನಾನು ಅವರ ಪ್ರತಿಭಾ ಸಂಪನ್ನತೆಗೆ ಮಾರುಹೋಗಿದ್ದೇನೆ. ಅನೇಕ ಕಾರ್ಯಕ್ರಮಗಳಲ್ಲಿ ನಾನು ಅವರು ಒಂದೇ ವೇದಿಕೆ ಹಂಚಿಕೊಂಡಿದ್ದೇವೆ.
ಅವರ ಓದಿನ ಹರವು, ಭಾಷಾಜ್ಞಾನಗಳ ಜತೆ ಜತೆಗೇ ಸ್ನೇಹ ಪರರೂ, ನಿರ್ಗರ್ವಿಗಳೂ ಆಗಿರುವುದು ನನಗೆ ಅವರಲ್ಲಿ ಗೌರವ ಹೆಚ್ಚಿಸುವಂತೆ ಮಾಡಿದೆ. ನನ್ನ ಓದಿನ ಹುಚ್ಚಿಗೆ ಅವರು ತಮ್ಮ ಅನೇಕ ಪುಸ್ತಕಗಳನ್ನು ಕಳುಹಿಸಿಕೊಟ್ಟಿದ್ದಾರೆ. ಒಂದೊಂದು ಪುಸ್ತಕವೂ ಅಮೂಲ್ಯ, ಸಂಗ್ರಹಯೋಗ್ಯ, ಓದಿ ಪಕ್ಕಕ್ಕೆ ಇಡುವಂಥವು ಗಳಲ್ಲ. ಮತ್ತೆ ಮತ್ತೆ ಓದುವಂತೆ, ಪುಸ್ತಕ ಕೈಗೆತ್ತಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿವೆ. ನನಗೊಂದು ಹವ್ಯಾಸವಿದೆ. ಓದಿದ ಪುಸ್ತಕದ ಮೆಚ್ಚಿನ ಸಾಲುಗಳನ್ನು ಚಿಕ್ಕದಾಗಿ ಮಾರ್ಕ್ ಮಾಡಿ, ಆ ಲೇಖನವಿರುವ ಪುಟಸಂಖ್ಯೆಯನ್ನು ಪುಸ್ತಕದ ಕೊನೆಯ ಖಾಲಿ ಪೇಪರ್ ಮೇಲೆ ಬರೆದಿರುತ್ತೇನೆ. ಜತೆಗೆ ಆ ಸಂಖ್ಯೆಯ ಮುಂದೆ ಬೆಸ್ಟ್, ಸೂಪರ್, ಟಾಪ್, ನೋಟೆಬಲ್ ಅಂತೆಲ್ಲ ಚಿಕ್ಕ ದಾಗಿ ಬರೆದಿದ್ದು, ಮತ್ತೆ ಆ ಪುಸ್ತಕ ಓದುವಾಗ ಹಿಂದಿನ ಪುಟದ ಸಂಖ್ಯೆಗಳ ಮೆಚ್ಚಿನ ಸಾಲು ಗಳನ್ನೂ, ಆ ವಾಕ್ಯ ವನ್ನೂ ಮತ್ತೊಮ್ಮೆ ಓದಿ ಭಾಷಣದಲ್ಲೋ, ಲೇಖನದಲ್ಲೋ, ಯಾರಿಗಾದರೂ ಹೇಳಲೋ ಬಳಸುವುದು ನನ್ನ ಮೂವತ್ತೈದು, ನಲವತ್ತು ವರ್ಷಗಳ ಅಭ್ಯಾಸ ಬಲ.
‘ಪ್ರಾಣೇಶ, ಎಷ್ಟು ನೆನಪಿಟ್ಟುಕೊಂಡು ಹೇಳ್ತಿರಲ್ರಿ’ ಅಂತ ಯಾರಾದರೂ ಉದ್ಗರಿಸಿದಾಗ ನನ್ನ ಗುಟ್ಟು ಇದೇ ಎಂದು ನಾನು ನಗುತ್ತಿರುತ್ತೇನೆ. ನನಗೂ ಅರವತ್ತು ಮುಗಿದು, ಅರವತ್ತೊಂದಕ್ಕೆ ಬಿತ್ತು. ಅರಳು ಮರಳು ಶುರುವಾಗಿದೆ. ಇದರ ಕುರುಹಾಗಿ ಮೊನ್ನೆ ರಾಜ್ಯೋತ್ಸವ ಪ್ರಶಸ್ತಿಯೂ ಬಂತಲ್ಲ, ಇತ್ತೀಚಿನ ವರ್ಷಗಳಿಂದ ರಾಜ್ಯೋತ್ಸವ ಪ್ರಶಸ್ತಿ ಬಂತೆಂದರೆ ಅರಳು ಮರಳು ಶುರುವಾಯ್ತೆಂದೇ ಲೆಕ್ಕವಾಗಿಬಿಟ್ಟಿದೆ ಅಥವಾ ಅರಳು ಮರುಳಾದವರಿಗೇ ಕೊಡುತ್ತಿದ್ದಾರೋ ಎಂದೇ ಎನಿಸುತ್ತಿದೆ ಯೇನೋ ಯುವ ಪ್ರತಿಭೆಗಳಿಗೆ ಪಾಪ.. ಅಲ್ಲವೇ? ಇರಲಿ, ಡಾ. ಕಬ್ಬಿನಾಲೆ ವಸಂತ ಭಾರಧ್ವಾಜರ ಬಗ್ಗೆ ಬರುತ್ತೇನೆ. ಅವರು ಪ್ರೀತಿಯಿಂದ ಹಸ್ತಾಕ್ಷರ ಹಾಕಿ ಕಳಿಸಿದ ಪುಸ್ತಕಗಳಲ್ಲಿ ‘ತಾವರೆಯ ತೇರು’, ‘ಕನಕ ತರಂಗಿಣಿ’, ‘ಕುವೆಂಪು ಮತ್ತು ಅಧ್ಯಾತ್ಮ’, ‘ಕನಕ ವಧೂಟಿ’, ‘ಶಬ್ದ ಶಾರದೆಯ ಸೆರಗು’, ‘ಕಪ್ಪು ನೀರಿನ ಹೊಳೆ’ ಇತ್ಯಾದಿ.
ಒಂದೊಂದು ಪುಸ್ತಕವೂ ಕನ್ನಡ ಸಾಹಿತ್ಯ ಪ್ರಪಂಚದ ರತ್ನಪುಷ್ಪಗಳು. ಇಂಥ ಮಹನೀಯರುಗಳ ಓದು, ಜ್ಞಾನದ ಹರಹು, ಕಂಡಿರುವ ಸಾಹಿತ್ಯದ ಆಳಗಳನ್ನು, ಬಿ.ಕಾಂ ಪದವಿ ಪಡೆದು, ಬೀಚಿಯವರನ್ನು ಓದಿ, ಹಾಸ್ಯ ಸಾಹಿತ್ಯದ ನಗೆ ಮಾತುಗಳನ್ನು ಮಾತ್ರ ಹೇಳುವ ನನ್ನಂಥವನು ಊಹಿಸಲಿಕ್ಕೂ ಆಗದ ಮಾತು. ಎಂದರೋ ಮಹಾನುಭಾವಲು, ಅಂದರಿಕೆ ವಂದನಾಲು ಎಂದು ವಿನೀತನಾಗಿರಬೇಕೆನಿಸುತ್ತದೆ. ಈ ಲೇಖನದಲ್ಲಿ ನಾನು ಕಬ್ಬಿನಾಲೆಯವರ ‘ತಾವರೆಯತೇರು’  ಕೃತಿಯಲ್ಲಿನ ಲೇಖನವಾದ ವೀರಪ್ಪ ಮೋಯ್ಲಿ ಯವರ ‘ಸಿರಿಮುಡಿ ಪರಿಕ್ರಮಣ’ದಲ್ಲಿನ ಒಂದು ಮಹಿಳೆ ಅಥವಾ ಹೆಂಡತಿಯರು ಹೇಗಿರಬೇಕೆಂಬ ಸತ್ಯಭಾಮೆಯ ಪ್ರಶ್ನೆಗೆ ದ್ರೌಪದಿ ಉತ್ತರಿಸುವ ಉತ್ತರಗಳು ಸುಖ ಸಂಸಾರದ ಸೂತ್ರಗಳು ಇಲ್ಲಿ ಒಂದೇ ಕಡೆ ದೊರೆಯುತ್ತವೆ.
ಹಿನ್ನೆಲೆ ಹೀಗಿದೆ, ಶ್ರೀಕೃಷ್ಣನ ಮಡದಿಯಾಗಿದ್ದ ಸತ್ಯಭಾಮೆಗೆ ದ್ರೌಪದಿಯ ಸಾಮರಸ್ಯದ ಸಂಸಾರವನ್ನು ಕಂಡು ಅಚ್ಚರಿಯೆನಿಸುತ್ತದೆ. ಐವರು ಗಂಡಂದಿರೂ ವಿಭಿನ್ನ ಅಭಿರುಚಿಯುಳ್ಳವರಾದರೂ ಈ ಪಾಂಚಾಲಿ ಅವರನ್ನು ಸುಸೂತ್ರವಾಗಿ ಸಂಭಾಳಿಸುತ್ತಿದ್ದಾಳೆ. ಈ ಗಂಡಂದಿರನ್ನು ನಿಯಂತ್ರಿಸುವದಕ್ಕೆ ಯಾವದಾದರೂ ಗಿಡಮೂಲಿಕೆ ಅಥವಾ ಯಂತ್ರಮೂಲಿಕೆ ಇರಬಹುದೇ ಎಂದು ಸತ್ಯಭಾಮೆಗೆ ಸಂದೇಹವಾಗುತ್ತದೆ. ಗಂಡನನ್ನು ಸೆಳೆಯುವ ತಂತ್ರೋಪಾಯಗಳನ್ನು ತನಗೂಹೇಳಿಕೊಡೆಂದು ಸತ್ಯಭಾಮೆ ದ್ರೌಪದಿಯನ್ನು ಪೀಡಿಸುತ್ತಾಳೆ. ಆಗ ದ್ರೌಪದಿ ಅವಳಿಗೆ ಈ ಪಾತಿವ್ರತ್ಯದ ಪಾಶ ಹೇಳುತ್ತಾಳೆ. ಅದು ಹೀಗಿದೆ.
‘ದುರಭಿಮಾನವ ತೊರೆದು ನಿಜ ಸಮರ್ಪಣೆಯಿಂದ ಸ್ತ್ರೀ ಸಹಜ ಪ್ರೇಮಮಂ ಅಂತರಂಗದಿ ತೋರಿ ತಾಳದೇ ಪ್ರತಿಫಲಾಪೇಕ್ಷೆಯಂ ಮನದಲ್ಲಿ ಮತ್ಸರಾಸೂಯೆ ಗಳ ಬಿಟ್ಟು ಸಮಚಿತ್ತದಿಂ ಮುಂಜಾನೆಯೊಳಗೆದ್ದು ಪತಿಗೆ ಶುಭ ಸೂಚಿಸುತ ಸೋಮಾರಿತನ ಕಟಕಿ ಕೊಂಕುನುಡಿ ನೀಗುತ್ತಾ ಬಹುದೂರ ಪಯಣದಿಂ ಬಸವಳಿದು ಬಂದಾಗ ಅರ್ತಿಯಿಂ ಸ್ವಾಗತಿಸಿ ಕುಳ್ಳಿರಿಸಿ ನಸುನಗುತ ಆಹಾರ ತೃಷೆಗಳಂ ಪರಿ ಪರಿ ವಿಚಾರಿಸುತ ಮನದೊಳಗಿನಾತಂಕ ಮೋಡಗಳ ಸರಿಸುತ್ತ ಬಯಸದ ವಿಚಾರಮಂ ಬೆಳೆಸದೆ ನಿರೀಕ್ಷಿಸುತ ಅನಗತ್ಯ ತರ್ಕಮಂ ಮಾಡದೇ ತಿಳಿಯುತ್ತ ಸರ್ವರಂ ಸಮಭಾವದೊಳು ಸದಾ ಕಾಣುತ್ತಾ ಪರರ ಗುಣ ಚರ್ಚೆಯೊಳು ಕಾಲಮಂ ಕಳೆಯದೇ ಅವರವರಪೇಕ್ಷೆಯನ್ನರಿತು ಸರಿದೂಗಿಸೆ ದುರದೃಷ್ಟ ದೂಷಿಸದೇ ಪರಧನವನಾಶಿಸದೆ ಪರನಾಗಿ ಸಂಗತಿಯ ಪತಿಗಳೊಳು ಚರ್ಚಿಸದೆ ಅನುದಿನ ಹಸನ್ಮುಖದಿ ಪತಿಗಳಂ ರಂಜಿಸುತೆ ಸುಖದುಃಖಗಳ ಸಮದಿ ಹಂಚಿಕೊಳುತಾ ಮತ್ತೆ ಪತಿಯೊಳಗೆ ಸ್ಥೈರ್ಯಮಂ ತುಂಬುವದೇ ಸತಿ ಧರ್ಮ’ಎಂತಹ ನಿರೂಪಣೆ!
ಹಾಗೆಯೇ ಇದೇ ಕೃತಿಯ ಮತ್ತೊಂದು ಅಧ್ಯಾಯ ಶ್ರೀಕೃಷ್ಣ ಮತ್ತು ರಾಧೆ ಎಂಬ ಲೇಖನದಲ್ಲಿ ಕೃಷ್ಣನ ಬಗ್ಗೆ ಬರೆದ ಸಾಲುಗಳು ಯಾವತ್ತೂ ಮನನ ಮಾಡು ವಂಥವು. ಗೋಪಿಕೆಯರ ವಸಾಪಹರಣ ನಡೆಸಿದಾಗ, ಶ್ರೀಕೃಷ್ಣನಿಗೆ ಕೇವಲ ಹನ್ನೊಂದರ ವಯಸ್ಸು, ಹಾಗಿರುವಾಗ ಅಶ್ಲೀಲತೆಯ ಸೋಂಕು ಹೇಗೆ ಸಾಧ್ಯ? ರಾಧೆ ಕೃಷ್ಣನಿಗಿಂತ ವಯಸ್ಸಿನಲಿ ದೊಡ್ಡವಳಂತೆ, ಮುದ್ದಾಗಿದ್ದ ಕೃಷ್ಣನನ್ನು ಸ್ತ್ರೀಯರು ಸಹಜವಾಗಿ ಮುದ್ದಿಸಿದರು. ಈ ಸುಂದರ ಸನ್ನಿವೇಶವೇ ಕಾವ್ಯವಾಗಿ, ಕಲ್ಪನೆ ಗರಿಗೆದರಿ ಕಾಲಾಂತರದಲ್ಲಿ ಅಪಾರ್ಥಕ್ಕೆ ಕಾರಣವಾಗಿರಬೇಕು. ಇವುಗಳೆಲ್ಲ ಕಾವ್ಯದ ರೂಪಕಗಳೇ ಆಗಿವೆ. ಬೈಬಲ್ಲಿನಲ್ಲಿಯೂ ಇಂಥ ಕಥೆಯೊಂದು ಬರುತ್ತದೆ.
ದೇವರನ್ನು ಯಾವಾಗ ಕಾಣಬಹುದೆಂದು ಭಕ್ತನೊಬ್ಬ ಏಸುಕ್ತಿಸ್ತನನ್ನು ಕೇಳಿದಾಗ, ಕ್ರಿಸ್ತ ‘ನಿನ್ನ ಬಟ್ಟೆ ಬರೆಗಳನ್ನು ಕಳಚಿ ದೇವರೆದುರಿಗೆ ನಾಚಿಕೆಬಿಟ್ಟು ನಿಂತಾಗ’ ಎಂದು ಉತ್ತರಿಸುತ್ತಾನೆ. ಇಲ್ಲಿ ಬಟ್ಟೆಬರೆಗಳೆಂದರೆ ಉಪಾಧಿಗಳೆಂದು ಅರ್ಥ. ಹಾಗೆಯೇ ಕೃಷ್ಣಲೀಲೆಯಲ್ಲೂ ಗೋಪಿ ಯರ ಸೀರೆಗಳೆಂದರೆ ಭವಬಂಧನಗಳೆಂದೇ ಅರ್ಥ. ಈಶ್ವರ ಸಾಕ್ಷಾತ್ಕಾರದ ಹಾದಿಯಲ್ಲಿ ನಮ್ಮ ಆಶಾಪಾಶಗಳು ಭಗವ ದರ್ಪಣ ಆಗಬೇಕೆಂಬುದೇ ಇದರ ಮತಿತಾರ್ಥ. ಪ್ರಾಯಶಃ ಶ್ರೀಕೃಷ್ಣ ಲೀಲೆಯ ಮುಖ್ಯ ಘಟನೆಗಳಾದ ಗೋವರ್ಧನೋ ದ್ಧರಣ, ಕಾಳಿಂಗ ಮರ್ದನ, ಯಮುನಾವೇಗ ಸಂಹಾರ, ಪೂತನಾಜೀವಿತಾಪಹಾರ ಇತ್ಯಾದಿಯೆಲ್ಲ ಕಾವ್ಯ ಪ್ರತಿಮೆಗಳೇ.ಕೃಷ್ಣನೆಂಬ ಕಲ್ಪನೆಯ ಸಾಂಕೇತಿಕ ನದಿ ಯೊಂದು ವೇದೋ ಪನಿಷತ್ತುಗಳ ಗಿರಿಶಿಖರದಿಂದ ಧು ಮುಕಿ, ಜನಮನದ ಬಯಲಲ್ಲಿ ಇಳಿದು ನಿಂತಿದೆ. ಅನೇಕ ಉಪನದಿಗಳು ಅದಕ್ಕೆ ಸೇರಿ ಅದೊಂದು ಮಹಾನದಿಯಾಗಿ ಸಿಂಧು ಸದೃಶವಾಗಿದೆ.
ಆ ಕೃಷ್ಣನೆಂಬ ಮಹಾನದಿಗೆ ರಾಧೆ ಬಲುದೊಡ್ಡ ಉಪನದಿ ಎಂಬುದಂತೂ ಸತ್ಯ. ಕೊನೆಯ ಈ ನಾಲ್ಕು ಸಾಲುಗಳು ನಮ್ಮ ಭಕ್ತಿ, ನಂಬಿಕೆಗಳನ್ನು ಅಲ್ಲಾಡಿಸಿದ ಮೇಲಿನ ಸಾಲುಗಳಿಗೆ ಮತ್ತೆ ಊರುಗೋಲು ಕೊಟ್ಟು ನಿಲ್ಲಿಸಿ ಕೃತಾರ್ಥರನ್ನಾಗಿ ಮಾಡಿ ನಿಲ್ಲಿಸುತ್ತವೆ ಎನಿಸುವುದರ ಜತೆಗೆ ಹೀಗೂ ಯೋಚಿಸಬೇಕು. ಜತೆಗೆ ಅದನ್ನೇ ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ಏಕೆಂದರೆ ಡಿವಿಜಿ ಯವರು ತಮ್ಮ ಕಗ್ಗದಲ್ಲಿ ‘ನಂಬುಗೆ ಮಾತ್ರದಿಂ ಇಂಬು ಗೊಳ್ಳುವುದು ಜೀವ’ ಎಂದಿಲ್ಲವೇ, ಆನಾಲ್ಕು ಸಾಲು ಕೆಳಗಿವೆ. ನಮ್ಮನ್ನು ಮತ್ತೆ ಹಿಡಿದೆತ್ತಲು ಎನಿಸುತ್ತದೆ, ಅದೆಂದರೆ:‘ಕೃಷ್ಣನೆಂದರೆ ನಮ್ಮ ಬೊಗಸೆಯ ತುಂಬಿರುವ ಸಾಗರ ಜಲ ಎಲ್ಲ ಶಬ್ದಗಳರ್ಥ ಮೀರಿದ ಅತ್ಯತಿಷ್ಠ ದಶಾಂಗುಲ’ಹೀಗೆ ಡಾ.ಕಬ್ಬಿನಾಲೆ ವಸಂತ ಭಾರದ್ವಾಜರ ಪುಸ್ತಕಗಳ ಅಧ್ಯಯನವು ಓದಿಸಿಕೊಂಡು ಹೋಗುವುದರ ಜತೆಗೆ ನಮ್ಮನ್ನು ಅವರ ಪುಸ್ತಕಗಳನ್ನು ಹುಡುಕಿಕೊಂಡು ಓಡಿಸಿಕೊಂಡೂ ಹೋಗುವಂತೆ ಬರೆಯುತ್ತಾರೆ.