ಊಹಾಪೋಹಗಳ ಓಟದಲ್ಲಿ ಓಮೈಕ್ರಾನ್
ಡಾ.ಕರವೀರಪ್ರಭು ಕ್ಯಾಲಕೊಂಡ
ಸುದ್ದಿ ವರ್ಣರಂಜಿತವಾದಾಗ, ಉತ್ಪ್ರೇಕ್ಷೆಯಿಂದ ಕೂಡಿದಾಗ ಮೌಲ್ಯ ಕಳೆದುಕೊಳ್ಳುತ್ತದೆ. ಜನರಿಗೆ ಮಾಹಿತಿಯಾಗಿ ತಲುಪಬೇಕಾದ ಸಂಗತಿ, ಆತಂಕ ಹುಟ್ಟಿಸುವ ಬ್ರೆಕಿಂಗ್ ನ್ಯೂಸ್ ಆಗುತ್ತದೆ. ಇಂಥ ಪದ ಪ್ರಯೋಗದ ಎದೆ ಬಡಿತ ಹೆಚ್ಚಿಸುವ ಉದ್ದೇಶವಿದೆ.
   ,     -  (   ,)) ಒಂದು ತಿಂಗಳ ಹಿಂದೆ ಇದೇ ದಿನಗಳಲ್ಲಿ ಕರೊನಾ ಸುದ್ದಿಯೂ ಇರಲಿಲ್ಲ. ಸದ್ದು ಇರಲಿಲ್ಲ. ಮಾಧ್ಯಮಗಳಲ್ಲಿ ‘ಬ್ರೆಕಿಂಗ್ ನ್ಯೂಸ್ ’ಗಳೂ ಇರಲಿಲ್ಲ. ಕಳೆದ ಎರಡು ವರ್ಷಗಳಿಂದ ನಾವು ಕೊರೊನಾ ಸಾಂಕ್ರಾಮಿಕದ ಜತೆಗೆ ಜೀವಿಸುತ್ತಿದ್ದೇವೆ. ಕಣ್ಣಿಗೆ ಕಾಣದ ಒಂದು ವೈರಸ್ ಸಾಕಷ್ಟು ಸಾವು ನೋವುಗಳಿಗೆ ಕಾರಣವಾಗಿದೆ.
ಅದಕ್ಕಿಂತಲೂ ಮುಖ್ಯವಾಗಿ ಕೊರೊನಾ ಭೀತಿಯಲ್ಲಿ ದೇಶಾದ್ಯಂತ ಹೇರಲಾದ ಲಾಕ್ ಡೌನ್ ಜನರ ಬದುಕಿನ ಬುತ್ತಿಯ ಮೇಲಿನ ಅಘೋಷಿತ ನಿರ್ಬಂಧ ಇಂದಿಗೂ, ಬಡ ಮತ್ತು ಮದ್ಯಮ ವರ್ಗದವರನ್ನು ಸಂಕಷ್ಟದ ಕೂಪದಿಂದ ಹೊರಬರಲಾಗದೇ ವಿಲಿ ವಿಲಿ ಒದ್ದಾಡುವಂತೆ ಮಾಡಿದೆ. ಕೊರೊನಾ ಎರಡನೆಯ ಅಲೆಯ ಬಳಿಕವೂ ಜನರು ಆರ್ಥಿಕವಾಗಿ ಇನ್ನೂ ಚೇತರಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇವೆಲ್ಲದರ ಮಧ್ಯೆ ಇದೀಗ ಕೊರೊನಾ ರೂಪಾಂತರಿ ಒಮೈಕ್ರಾನ್ ಪತ್ತೆಯೊಂದಿಗೆ ಜನಮನದಲ್ಲಿ ಮತ್ತೆ ಭೀತಿ ಹುಟ್ಟಿಸುವ ಪ್ರಯತ್ನವೂ ಎಗ್ಗಿಲ್ಲದೇ ಸಾಗಿದೆ. ಕೊರೊನಾ ಮೂರನೇ ಅಲೆಗೆ ಒಮೈಕ್ರಾನ್ ರೂಪಾಂತರಿಯೇ ಕಾರಣವಾಗಲಿದೆ ಎಂಬ ಮಾತು ಬಹುತೇಕ ನಿಜವಾಗುತ್ತಿದೆ!
ಒಮೈಕ್ರಾನ್ ಇತಿ ಮಿತಿ:ಒಮೈಕ್ರಾನ್ ರೂಪಾಂತರಿಗಿಂತಲೂ ಹೆಚ್ಚು ಹಬ್ಬುತ್ತಿರುವುದು ಅದರ ಬಗೆಗೆ ನಾನಾ ರೀತಿಯ ಅಂಜಿಕೆ, ಅಳಕು, ಆತಂಕಗಳು. ಒಮೈಕ್ರಾನ್ ತಳಿ ಹೆಚ್ಚು ಸಾಂಕ್ರಾಮಿಕ ಇರಬಹುದು. ಆದರೆ ಮನುಷ್ಯನ ದೇಹದಲ್ಲಿರುವ ಇನ್ನೂ ಹಲವು ರೋಗನಿರೋಧಕ ಶಕ್ತಿಗಳ ಕೋಟೆಯನ್ನು ಅದರಿಂದ ಭೇದಿಸ ಲಾಗದು. ಹೀಗಾಗಿ ಈ ಹಿಂದಿನ ಕೊರೊನಾ ರೂಪಾಂತರಿಗಳಂತೆ ಗಂಭೀರ ಕಾಯಿಲೆ ಹಾಗೂ ಸಾವು ನೋವುಗಳನ್ನು ಅದು ಸೃಷ್ಟಿಸುವುದಿಲ್ಲ ಎಂದು ಹಲವು ತಜ್ಞರು ಶುಭ ಸುದ್ಧಿ ನೀಡಿದ್ದಾರೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್, ಅಮೆರಿಕದ ನ್ಯೂಯಾರ್ಕ್, ಇಸ್ರೇಲ್ ವಿಶ್ವವಿದ್ಯಾಲಯವೂ ಸೇರಿದಂತೆ ಹಲವು ಉನ್ನತ ಸಂಸ್ಥೆಗಳ ತಜ್ಞರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಇದಕ್ಕೆ ಪೂರಕ, ಪೋಷಕ, ಪರಿಪೂರಕವೆಂಬಂತೆ ದಕ್ಷಿಣ ಆಫ್ರಿಕಾದಲ್ಲಿ ಬಹುತೇಕ ಒಮೈಕ್ರಾನ್ ಸೋಂಕಿತರು, ಈ ಹಿಂದಿನ ಅಲೆಗಳಲ್ಲಿ ಕಂಡು ಬಂದಂತೆ ಆಕ್ಸಿಜನ್ ಮೇಲೆ ಅವಲಂಬಿತವಾಗಿಲ್ಲ. ಸಾಮಾನ್ಯ ಚಿಕಿತ್ಸೆಯಿಂದಲೇ ಚೇತರಿಸಿಕೊಳ್ಳುತ್ತಿದ್ದಾರೆ. ಸೋಂಕಿನ ಮೊದಲ ಹಂತದಲ್ಲಿ ಲಸಿಕೆಯ ರಕ್ಷಣಾ ಕವಚವನ್ನು ಕೆಲಮಟ್ಟಿಗೆ ಭೇದಿಸಿ, ಒಮೈಕ್ರಾನ್ ರೂಪಾಂತರಿ ದೇಹದೊಳಗೆ ಪ್ರವೇಶಿಸುತ್ತದೆ. ಇದಾದ ನಂತರ ಎರಡನೇ ರಕ್ಷಣಾ ಕವಚವಾದ ‘ಟಿ- ಸೆಲ್ ’ ಅನ್ನು ಭೇದಿಸಲು ಯತ್ನಿಸುತ್ತದೆ. ಆದರೆ, ಇದರಲ್ಲಿ ಯಶಸ್ವಿಯಾಗುವುದಿಲ್ಲ. ಲಸಿಕೆಯ ಕವಚ ಭೇದಿಸಿ ಒಮೈಕ್ರಾನ್ ಮುನ್ನುಗ್ಗಿದರೂ ‘ಟಿ- ಸೆಲ್‌ಗಳು’ ಸೋಂಕಿನಿಂದ ಬಂಽತ ಕೋಶಗಳಲ್ಲಿಯ ವೈರಸ್‌ಗಳನ್ನು ಕೊಲ್ಲುವ ಸಾಮರ್ಥ್ಯ ಹೊಂದಿವೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ.
ಹೋದೆಯಾ ಪಿಶಾಚಿ ಎಂದರೆ… ಅತ್ಯಂತ ವೇಗವಾಗಿ ಹರಡುವ ಕರೋನಾದ ಈ ರೂಪಾಂತರಿಯ ಅಬ್ಬರ ಹಾಗೂ ಕೋವಿಡ್ ಮೂರನೇ ಅಲೆಯ ಆತಂಕದ ನಡುವೆಯೇ ರಾಜ್ಯದ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಲ್ಲಿ ಸೋಂಕು ಹಬ್ಬುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಕರೋನಾ ಇಳಿಮುಖವಾಯಿತು ಎಂಬ ಕಾರಣಕ್ಕೆ ರಾಜ್ಯದ ಶಾಲಾ- ಕಾಲೇಜುಗಳಲ್ಲಿ ಭೌತಿಕ ತರಗತಿಗಳನ್ನು ಆರಂಭಿಸಲಾಗಿದೆಯಾದರೂ, ಪೂರ್ಣ ಪ್ರಮಾಣದಲ್ಲಿ ಎಲ್ಲಶೈಕ್ಷಣಿಕ ಸಂಸ್ಥೆಗಳಲ್ಲೂ ಭೌತಿಕ ತರಗತಿಗಳು ನಡೆಯುತ್ತಿಲ್ಲ.
ಆದಾಗ್ಯೂ, ರಾಜ್ಯದಲ್ಲಿ ಕಳೆದ 10-15 ದಿನಗಳಲ್ಲಿ 800 ಕ್ಕೂ ಹೆಚ್ಚು ಮಕ್ಕಳಿಗೆ ಸೋಂಕು ತಗಲಿದೆ ಎಂಬ ವರದಿಗಳು ಕಳವಳಕಾರಿ. ಸಕಲ ಮುನ್ನೆಚ್ಚರಿಕೆಯ ಕ್ರಮಗಳನ್ನು ತಗೆದುಕೊಂಡ ಹೊರತಾಗಿಯೂ ಸೋಂಕು ಪಸರಿಸುತ್ತಿದೆ. ಇದು ನಿಲ್ಲುತ್ತಲೇ ಇಲ್ಲ ಹೀಗಾಗಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆದರು ವಂತಾಗಿದೆ. ಒಮೈಕ್ರಾನ್ ಪ್ರಕರಣಗಳು ದೇಶದಲ್ಲಿ ಅತ್ಯಂತ ವೇಗವಾಗಿ ಹೆಚ್ಚುತ್ತಿದೆ. ಸೋಂಕಿತರ ಸಂಖ್ಯೆಯೂ ಕಡಿಮೆ ಕಾಲಾವಧಿಯಲ್ಲಿ ದ್ವಿಗುಣ ಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಮಕ್ಕಳು ಕೋವಿಡ್ ಸೋಂಕಿತರಾಗುತ್ತಿರುವುದು ನಿಜಕ್ಕೂ ಯೋಚಿಸಬೇಕಾದ ಸಂಗತಿ. ಇದೀಗ ಮಕ್ಕಳೂ ಲಸಿಕಾಕರಣಕ್ಕೆ ಒಳಗಾಗು ತ್ತಿದ್ದಾರೆಂಬುದು ಸ್ವಲ್ಪ ಸಮಾಧಾನ.
ಸುದ್ದಿ ವರ್ಣರಂಜಿತವಾದಾಗ, ಉತ್ಪ್ರೇಕ್ಷೆಯಿಂದ ಕೂಡಿದಾಗ ಅಥವಾ ತಿರುಚಿದಾಗ ಅದು ತನ್ನ ಮೌಲ್ಯ ಕಳೆದುಕೊಳ್ಳುತ್ತದೆ. ಜನರಿಗೆ ಮಾಹಿತಿಯಾಗಿ ತಲುಪ ಬೇಕಾದ ಸಂಗತಿ, ಆತಂಕವನ್ನು ಹುಟ್ಟಿಸುವ ಬ್ರೆಕಿಂಗ್ ನ್ಯೂಸ್ ಆಗುತ್ತದೆ. ಬ್ರೆಕಿಂಗ್ ನ್ಯೂಸ್ ಎನ್ನುವ ಪದ ಪ್ರಯೋಗದ ನೋಡುಗನ, ಕೇಳುಗನ ಎದೆ ಬಡಿತ ಹೆಚ್ಚಿಸುವ ಉದ್ದೇಶವಿದೆ. ಕರೋನಾ ವಿಚಾರದಲ್ಲಿ ಹಾಗಾಗದಿರುವುದು ಒಳಿತು.
ಒಮೈಕ್ರಾನ್ ಗುರುತಿನ ಹೆಜ್ಜೆಗಳು :? ಒಮೈಕ್ರಾನ್ (ಬಿ.೧.೧.೫೨೯ )ಇತ್ತೀಚಿನ ಕೊರೊನಾ ಹೊಸ ತಳಿ. ಕರೋನಾ ಸೋಂಕಿತ ವ್ಯಕ್ತಿಯಿಂದ ನವೆಂಬರ್ 9ರಂದು ಸಂಗ್ರಹಿಸಿದ ಸ್ಯಾಂಪಲ್‌ನಿಂದ ಬೆಳಕಿಗೆ ಬಂತು
? ೨೬ ನವೆಂಬರ್ ೨೦೨೧ರಂದು ವಿಶ್ವ ಆರೋಗ್ಯ ಸಂಸ್ಥೆ ಅದಕ್ಕೆ ಬಿ.೧.೧.೫೨೯ ಎಂದು ನಾಮಕರಣ ಮಾಡಿ ಒಮೈಕ್ರಾನ್ ಎಂದು ಕರೆಯಿತು.
? ಡೆಲ್ಟಾ ವೈರಸ್ ಹಾಗೆ ಒಮೈಕ್ರಾನ್ ಪ್ರಭೇದವು ಎರಡು ಸಂತತಿಗಳಾಗಿ ವಿಭಜನೆಯಾಗಿದ್ದು ಆಅ.೧ (ಮೂಲ ಸಂತತಿ) ಇನ್ನೊಂದು ಆಅ.೨ (೨೪ ಸಲ ರೂಪಾಂತರಗೊಂಡ ಹೊಸ ತಳಿ)
? ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಇದು ಡೆಲ್ಟಾಗಿಂತ ೭೦ ಪಟ್ಟು ತ್ವರಿತವಾಗಿ ಹರಡುತ್ತದೆ. ಇದು ‘ವಿಶ್ವ ವ್ಯಪಿ’ಯಾಗಿದ್ದು ಪ್ರಪಂಚದ ೧೧೦ ರಾಷ್ಟ್ರಗಳಲ್ಲಿಪತ್ತೆಯಾಗಿರುವುದು ವರದಿಯಾಗಿದೆ. ಹಾಗೆಂದು ಉಳಿದ ರಾಷ್ಟ್ರಗಳು ಇದರಿಂದ ಮುಕ್ತವಾಗಿವೆ ಎಂದಲ್ಲ. ಅಲ್ಲಿ ಈ ರೋಗ ವರದಿ ಆಗಿಲ್ಲ ಅಷ್ಟೇ ಎಂದು ಡಾ.ಎಂಥೋನಿ ಪೌಸಿ ಹೇಳಿದ್ದಾರೆ.
?ಭಾರತದಲ್ಲಿ ಈಗಾಗಲೇ ಪ್ರಕರಣ ಸಾವಿರದ ಗಡಿ ದಾಟಿದ್ದು ದೆಹಲಿಯಲ್ಲಿ ಅತಿ ಹೆಚ್ಚು. ಗುಜರಾಥ್‌ನಲ್ಲಿ ಒಮೈಕ್ರಾನ್ ಸೋಂಕಿತನೊಬ್ಬ ಮೃತಪಟ್ಟಿದ್ದಾನೆ.? ಹೆಚ್ಚಿನ ಪ್ರಕರಣಗಳಲ್ಲಿ ಪ್ರವಾಸ ಸಂಬಂಽತ ಇತಿಹಾಸ ಇರುತ್ತದೆ. ಈ ಇತಿಹಾಸ ಹೊಂದಿರದ ಎಷ್ಟೋ ಪ್ರಕರಣಗಳೂ ವರದಿಯಾಗಿವೆ.
? ಬ್ರಿಟನ್ ನಲ್ಲಿ ಒಮಿಕ್ರಾನ್ ಗೆ ಮೊದಲ ಬಲಿ ಆಗಿರುವುದು ವರದಿಯಾಗಿದೆ. ಅಮೆರಿಕದಲ್ಲೂ ಒಮಿಕ್ರಾನ್ ನಿಂದ ಮೊದಲ ಸಾವು ಸಂಭವಿಸಿದೆ. ಆದರೆ, ಆ ವ್ಯಕ್ತಿ ಲಸಿಕೆ ಪಡೆದಿರಲಿಲ್ಲ ಮತ್ತು ಈ ಹಿಂದೆ ಕೋವಿಡ-೧೯ ಸೋಂಕಿನಿಂದ ಬಳಲಿದ್ದ.
ಒಮಿಕ್ರಾನ್ ಪರಿಣಾಮಗಳು:ಕೊರೊನಾ ಪ್ರಾರಂಭದಿಂದಲೂ ಅನೇಕ ಬಾರಿ ರೂಪಾಂತರ () ಹೊಂದುತ್ತಲೇ ಇದೆ. ಪ್ರತಿ ಬಾರಿಯೂ ಶಕ್ತಿ,ಸಾಮರ್ಥ್ಯಗಳನ್ನು ಬದಲಿಸಿಕೊಳ್ಳುತ್ತ ಕಿರಿ ಕಿರಿ ಕೊಡುತ್ತಲೇ ಇದೆ.
? ತ್ವರಿತವಾಗಿ ಹರಡುವ ಶಕ್ತಿ, ಸಾಮರ್ಥ್ಯ ಹೊಂದಿದೆ.
? ಜನರಿಗೆ ಸೌಮ್ಯ ಅಥವಾ ತೀವ್ರತರ ಸೋಂಕಿನ ಬಳುವಳಿ ನೀಡುತ್ತದೆ.
? ವೈರಸ್ ಪತ್ತೆ ಹಚ್ಚುವ ಪರೀಕ್ಷೆಗಳಿಂದ ನುಣಿಚಿಕೊಳ್ಳುವ ಸಾಮರ್ಥ್ಯ ಪಡೆದಿವೆ.
? ನೈಸರ್ಗಿಕ ಅಥವಾ ಲಸಿಕಾ ರಕ್ಷಾ ಕವಚವನ್ನು ಭೇದಿಸುವ ಶಕ್ತಿ ಹೊಂದಿವೆ.
? ಚಿಕಿತ್ಸಕ ರಸಾಯನಿಕಗಳಿಗೆ ಕಡಿಮೆ ಪ್ರಮಾಣದಲ್ಲಿ ಸ್ಪಂದಿಸುತ್ತದೆ.
ಡಬ್ಲುಎಚ್‌ಒ ಎಚ್ಚರಿಕೆ :ಈಗಾಗಲೇ 109 ದೇಶಗಳಿಗೆ ಹರಡಿರುವ ಒಮೈಕ್ರಾನ್ ವೈರಸ್, ಕಡಿಮೆ ಅವಽಯಲ್ಲಿ ವೇಗವಾಗಿ ವ್ಯಾಪಿಸುತ್ತಿದೆ. ಇದರಿಂದಾಗಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುವ ಸಾಧ್ಯತೆ ಇದೆ. ಹೀಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಹೆಚ್ಚು ಜನಸಂಖ್ಯೆ ಹೊಂದಿರುವ ಹಾಗೂ ರೋಗನಿರೋಧಕ ಶಕ್ತಿ ಹೊಂದಿರುವ ದೇಶಗಳಲ್ಲೂ ಒಮೈಕ್ರಾನ್ ಸೋಂಕು ವೇಗವಾಗಿ ಹರಡುತ್ತಿದೆ. ಆದರೆ, ಇದು ಯಾವ ಪರಿಣಾಮ ಬೀರಲಿದೆ ಎನ್ನುವುದು ಇನ್ನೂ ಅಸ್ಪಷ್ಟವಾಗಿದೆ ಎಂದು ತಿಳಿಸಿದೆ.
ಮುಗಿಸುವ ಮುನ್ನ :ಸರಕಾರ ಒಂದೆಡೆ ಕೋವಿಡ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಹೇಳುತ್ತದೆ. ಇನ್ನೊಂದೆಡೆ ರಾಜಕೀಯ ರ‍್ಯಾಲಿಗಳನ್ನು ಮಾಡಿ, ನಿಯಮಗಳನ್ನು ಗಾಳಿಗೆ ತೂರುತ್ತದೆ. ಸರಕಾರಗಳು ತಳೆಯುವ ಎಡಬಿಡಂಗಿ ನೀತಿಗಳ ದುಷ್ಪರಿಣಾಮವನ್ನು ಜನಸಾಮಾನ್ಯರು ಅನುಭವಿಸಬೇಕಾಗಿಬಂದಿರುವುದು ದಾರುಣ ಸಂಗತಿ. ಕೊರೊನಾ ಎರಡನೆಯ ಅಲೆಯ ಕಹಿ ನೆನಪುಗಳು ಮಾಸುವ ಮುನ್ನ ಒಮೈಕ್ರಾನ್ ಒಕ್ಕರಿಸಿದೆ. ಮೊದಲು ಮಾಡಿದ ತಪ್ಪುಗಳ ಪುನರಾವರ್ತನೆಯಾಗುವುದು ಬೇಡ.
ಸರಕಾರ ಸಾಂಕ್ರಾಮಿಕದ ಮೇಲೆ ಹದ್ದಿನ ಕಣ್ಣಿಟ್ಟರೆ ಸಾಲದು. ಸಾರ್ವಜನಿಕರೂ ಸಾಂಕ್ರಾಮಿಕದ ಅಪಾಯ ಕುರಿತು ಅಸಡ್ಡೆ ತೋರದೇ, ಪೂರ್ಣ ಎಚ್ಚರವಹಿಸಬೇಕು. ಸರಕಾರ- ಸಮುದಾಯ ಒಂದಾದಾಗ ಮಾತ್ರ ಕೊರೊನಾ ಸೋಲೋಪ್ಪೀತು !