ಜಬಾಬ್ದಾರಿಯುತ ವ್ಯಕ್ತಿಗಳು, ಬ್ರಾಂಡ್’ಗಳು ಎಂದೂ ನಿರಾಸೆ ಮಾಡೊಲ್ಲ !
ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
@.
ಸಹಸ್ರಾರು ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣ ಮಾಡಲು ಖ್ಯಾತ ಮ್ಯಾನೇಜ್‌ಮೆಂಟ್ ಗುರು ರಘುರಾಮನ್, ಗ್ವಾಲಿಯರ್‌ಗೆ ಹೊರಟಿದ್ದರು. ಅದು ಕಾಲೇಜೊಂದರ ಬಹುಮುಖ್ಯ ಕಾರ್ಯಕ್ರಮ. ರಘುರಾಮನ್ ಪ್ರಯಾಣ ಮಾಡುತ್ತಿದ್ದ ಇಂಡಿಗೋ ವಿಮಾನದಲ್ಲಿ, ಪುಣೆ, ಹೈದರಾಬಾದ್ ಮುಂಬಯಿ ಸೇರಿದಂತೆ ಅನೇಕ ಭಾಗಗಳ ಪ್ರಯಾಣಿಕರಿದ್ದರು.
ಮಾರ್ಗ ಮಧ್ಯದಲ್ಲಿ ಅದು ಇಂದೋರ್‌ನಲ್ಲಿ ಇಳಿಯಿತು. ಅಲ್ಲಿ ಒಂದಷ್ಟು ಪ್ರಯಾಣಿಕರು ವಿಮಾನ ಹತ್ತಿದರು. ಅಷ್ಟೊತ್ತಿಗಾಗಲೇ ತಾಪಮಾನದಲ್ಲಿ ವ್ಯತ್ಯಯ ವಾಗಿತ್ತು, ಮೋಡ ಮುಸುಕಿಕೊಂಡಿತ್ತು. ರನ್ ವೇ ಕಾಣಿಸುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ವಿಮಾನದ ಲ್ಯಾಂಡಿಂಗ್ – ಟೇಕಾಫ್ ಕಷ್ಟಕರ. ಅಷ್ಟರಲ್ಲಿ ಮಳೆಯೂಪ್ರಾರಂಭವಾಯಿತು. ಗ್ವಾಲಿಯರ್‌ನಲ್ಲಿ ವಿಮಾನ ಲ್ಯಾಂಡಿಂಗ್ ಮಾಡಲು ಆಗದಷ್ಟು ಪ್ರತಿಕೂಲ ಹವಾಮಾನ ಪರಿಸ್ಥಿತಿ ಇದೆ ಎಂಬ ಸಂಗತಿ ಕ್ಯಾಪ್ಟನ್‌ಗೂ ತಿಳಿದುಬಂತು. ಕೊಂಚಕಾಲ ಕಾಯಬೇಕಾಗುತ್ತದೆ ಎಂದು ವಿಮಾನ ಸಿಬ್ಬಂದಿ ಹೇಳುತ್ತಿದ್ದರೆ ಅನೇಕ ಪ್ರಯಾಣಿಕರು ಬೇರೆ ಬೇರೆ ಜಾಲತಾಣಗಳಲ್ಲಿ ಜಾಲಾಟ ಮಾಡಿ ಇಂದು ಇಡೀ ದಿನ ಹವಾಮಾನ ಹೀಗೆಯೇ ಇರುತ್ತದೆ ಎಂಬ ಮುನ್ಸೂಚನೆಯನ್ನೂ ಕೊಡಲಾರಂಭಿಸಿದರು.
ಸುಮಾರು ಎರಡೂವರೆ ಗಂಟೆ ಕಾದ ನಂತರ ಅಂದಿನ ವಿಮಾನಯಾನ ರzಯಿತು ಮತ್ತು ಪ್ರಯಾಣಿಕರಿಗೆ ಮಾರನೇ ದಿನ ಪ್ರಯಾಣಿಸುವಂತೆ ವಿನಂತಿ ಮಾಡಿಕೊಂಡರು. ತುರ್ತು ಕೆಲಸದ ಮೇಲೆ ಹೋಗಲೇಬೇಕಿದ್ದವರಿಗೆ ಅಡಚಣೆಯಾದರೆ, ಇನ್ನು ಕೆಲವರ ಬಳಿ ಆ ಅಪರಿಚಿತ ಊರಿನಲ್ಲಿ ಎಲ್ಲಿ ಉಳಿದುಕೊಳ್ಳಬೇಕು ಎಂಬ ಬಗ್ಗೆ ಗೊಂದಲವುಂಟಾದವು. ಅಷ್ಟರಲ್ಲಿ ರಘುರಾಮನ್ ಮತ್ತು ಅವರ ಸಹಯಾತ್ರಿ ಇಂದೋರ್‌ನಿಂದ ಗ್ವಾಲಿಯರ್ ರಸ್ತೆ ಮಾರ್ಗವಾಗಿ 500 ಕಿ.ಮೀ ದೂರವನ್ನು ಒಂಬತ್ತು ಗಂಟೆಗಳ ಕಾಲ ಪ್ರಯಾಣಿಸಿ ತಲುಪುವುದೆಂದು ತೀರ್ಮಾನ ತೆಗೆದುಕೊಂಡಾಗಿತ್ತು. ಆ ಮಾರ್ಗ ಮಧ್ಯದಲ್ಲಿ ದುರ್ಗಮ ಬೆಟ್ಟಗುಡ್ಡಗಳ ಪ್ರದೇಶವಿರುವುದು ಕೂಡ ಗೊತ್ತಿತ್ತು. ಗ್ವಾಲಿಯರ್‌ನ ಕಾಲೇಜಿನ ಆಡಳಿತ ಮಂಡಳಿಗೆ ಮೂರು ತಿಂಗಳ ಮೊದಲೇ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗುವುದಾಗಿ ಮಾತು ಕೊಟ್ಟಿದ್ದರು. ಹೀಗಾಗಿ ರಘುರಾಮನ್ ಹೇಗಾದರೂ ಮಾಡಿ ತಲುಪಲೇ ಬೇಕೆಂಬ ತೀರ್ಮಾನಕ್ಕೆ ಬಂದಿದ್ದರು.
ಕೆಲವರು ಕಾರ್ಯಕ್ರಮಗಳಿಗೆ ಒಪ್ಪಿಕೊಳ್ಳುವಾಗಲೇ ವಿಮಾನದ ಟಿಕೆಟ್ ಕೊಡಿಸಿ, ಆಗ ಮಾತ್ರ ತಾವು ನಿಗದಿಯಾದ ವೇಳೆಗೆ ಬರುತ್ತೇವೆ ಎಂಬ ವಾಗ್ದಾನ ಮಾಡಿರುತ್ತಾರೆ. ಆದರೆ ರಘುರಾಮನ್ ಹಾಗೆ ಮಾಡಿರಲಿಲ್ಲ. ಜವಾಬ್ದಾರಿಯುತ ವ್ಯಕ್ತಿ ಮತ್ತು ಬ್ರಾಂಡ್‌ಗಳು ತಮ್ಮ ಅವಲಂಬಿತ ಗ್ರಾಹಕರಿಗೆ ಎಂದೂ ನಿರಾಶೆ ಮಾಡುವುದಿಲ್ಲ. ರಘುರಾಮನ್ ಕಾರ್ಯಕ್ರಮದ ಆಯೋಜಕರನ್ನು ಸಂಪರ್ಕಿಸಿ ಆಗಿರುವ ತೊಂದರೆಯನ್ನು ತಿಳಿಸಿದ್ದರು. ವಿಮಾನ ಯಾನ ಮತ್ತೆ ಆರಂಭ ಆಗಬಹುದು ಎಂಬ ಆಶಾಭಾವ ಕಾಲೇಜ್ ಆಡಳಿತ ಮಂಡಳಿ ಸದಸ್ಯರಲ್ಲಿತ್ತು. ಆದರೆ ಅವರನ್ನು ನಿರಾಶೆಗೆ ಒಳಪಡಿಸುವುದು ರಘುರಾಮನ್‌ಗೆ ಇಷ್ಟವಿರಲಿಲ್ಲ.ರಘುರಾಮನ್ ಅರೆಕ್ಷಣವೂ ವ್ಯರ್ಥಮಾಡದೇ ಟ್ಯಾಕ್ಸಿ ಹಿಡಿದು ಗಂಟೆಗಟ್ಟಲೆ ಪ್ರಯಾಣಿಸಿ ರಾತ್ರಿ ಹನ್ನೆರಡು ಗಂಟೆಯ ವೇಳೆಗೆ ಗ್ವಾಲಿಯರ್‌ನ ಹೋಟೆಲು ತಲುಪಿದರು.
ಮಾರನೇ ದಿನ ಬೆಳಗ್ಗೆ ಕಾರ್ಯಕ್ರಮ ನಡೆಯುವುದಿತ್ತು. ಅವರು ರಸ್ತೆ ಮೂಲಕ ಪ್ರಯಾಣಿಸುವಾಗ ಭಾರೀ ಮಳೆ ಸುರಿಯುತ್ತಲೇ ಇತ್ತು. ಕಣ್ಣ ಮುಂದಿನ ರಸ್ತೆ ಕಾಣಿಸದಷ್ಟು ಮಂಜು ಮುಸುಕಿತ್ತು. ಅಪರಿಚಿತ ಊರಿನಲ್ಲಿ ಇಂತಹ ರಸ್ತೆ ಪ್ರಯಾಣ ಮಾಡುವುದು ಖಂಡಿತವಾಗಿಯೂ ಸುರಕ್ಷಿತವಲ್ಲ ಎಂಬುದು ಅವರಿಗೆ ಗೊತ್ತಿತ್ತು. ಆಗ ಅವರ ನೆನಪಿಗೆ ಬಂದಿದ್ದು2008ರಲ್ಲಿ ಮುಂಬಯಿಯಲ್ಲಿ ನಡೆದ ಉಗ್ರರ ದಾಳಿ. ತಾಜ್ ಹೋಟೆಲಿನಲ್ಲಿದ್ದ ಸಿಬ್ಬಂದಿಯನ್ನು ಬಚಾವು ಮಾಡಲು ತಮ್ಮ ಜೀವದ ಹಂಗು ತೊರೆದು ಆತಂಕವಾದಿಗಳ ವಿರುದ್ಧ ಹೋರಾಡಿದವರು ತಾಜ್ ಹೋಟೆಲಿನ ಸಿಬ್ಬಂದಿ. ಅವರು ತಮ್ಮ ಜೀವ ಉಳಿಸಿಕೊಳ್ಳಲು ಓಡಿ ಹೋಗಬಹುದಾಗಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಹೋಟೆಲಿನಲ್ಲಿದ್ದ ಎಲ್ಲರನ್ನು ರಕ್ಷಿಸುವ ಪಣತೊಟ್ಟರು.
ಅವರು ವಿಶ್ವದ ವಿಶ್ವಾಸಾರ್ಹ ಬ್ರಾಂಡ್ ಎಂದು ಪರಿಗಣಿತವಾದ ಕಂಪನಿಯ ಬಹು ದೊಡ್ಡ ಆಸ್ತಿ. ನೀವು ಜವಾಬ್ದಾರಿಯುತ ವ್ಯಕ್ತಿ ಅಥವಾ ಬ್ರಾಂಡ್ ಅಗಿದ್ದರೆ,ನಿಮ್ಮಲ್ಲಿರುವ ಸರ್ವಶ್ರೇಷ್ಠ ಪ್ರಯತ್ನವನ್ನು ಹಾಕುತ್ತೀರಿ ಮತ್ತು ನಿಮ್ಮನ್ನು ನಂಬಿರುವವರನ್ನು ಎಂದಿಗೂ ನಿರಾಶೆಗೊಳಿಸುವುದಿಲ್ಲ. ಸ್ವತಃ ತೊಂದರೆಗೊಳಗಾದರೂ ಲೆಕ್ಕಿಸದೇ ನಿಮ್ಮನ್ನು ನಂಬಿರುವವರ ರಕ್ಷಣೆಗೆ ನೀವು ನಿಲ್ಲುತ್ತೀರಿ. ತುಸು ಯೋಚಿಸಿ, ಅಂದು ರಘುರಾಮನ್ ಅಷ್ಟೆಲ್ಲ ಕಷ್ಟಪಡಬೇಕಿರಲಿಲ್ಲ. ಐನೂರು ಕಿ.ಮಿ.ದೂರವನ್ನು ರಸ್ತೆ ಮೂಲಕ ಪ್ರಯಾಣಿಸುವ ಕಷ್ಟ ತೆಗೆದುಕೊಳ್ಳಬೇಕಿರಲಿಲ್ಲ. ಆದರೆ ಅವರು ತಮ್ಮ ಮೇಲೆ ಕಾರ್ಯಕ್ರಮ ಸಂಘಟಕರು ಇಟ್ಟ ವಿಶ್ವಾಸಕ್ಕೆ ಲೋಪ ಆಗಬಾರದು ಎಂದು ನಿರ್ಧರಿಸಿದ್ದರು.
ಅದಕ್ಕಾಗಿ ಯಾವ ಕಷ್ಟವಾದರೂ, ಅನನುಕೂಲವಾದರೂ ಸೈ, ಅನುಭವಿಸಲು ಸಿದ್ಧರಾಗಿದ್ದರು. ಕೆಲವು ದಿನಗಳ ಹಿಂದೆ, ಯೋಗಿ ದುರ್ಲಭಜೀ ಅವರು ಹರಿದ್ವಾರಕ್ಕೆ ಹೋಗಿದ್ದರು. ಚಳಿಗಾಲ ಆರಂಭವಾಗಿತ್ತು. ಅವರು ನೆಟ್ ವರ್ಕ್ ಇಲ್ಲದ, ಗುಡ್ಡದ ಮೇಲಿರುವ ಆಶ್ರಮದಲ್ಲಿ ಬರಿಮೈಯಲ್ಲಿ ಇಪ್ಪತ್ತೊಂದು ದಿನ ಧ್ಯಾನಕ್ಕೆ ಕುಳಿತಿದ್ದರು. ನಾನು ಅವರನ್ನು ಸಂಪರ್ಕಿಸಲು ಮೂರ್ನಾಲ್ಕು ಸಲ ಪ್ರಯತ್ನಿಸಿದೆ. ಅವರ ಸಂಪರ್ಕ ಸಾಧ್ಯವಾಗಲಿಲ್ಲ. ಆದರೆ ನನಗೆ ಅವರು ಧ್ಯಾನಕ್ಕೆ ಕುಳಿತಿರುವುದು ಗೊತ್ತಿರಲಿಲ್ಲ. ಇಪ್ಪತ್ನಾಲ್ಕನೇ ದಿನದಂದು ದುರ್ಲಭಜೀ ಕರೆ ಬಂತು.
‘ನಿಮ್ಮ ಮೆಸೇಜ್‌ನಿಂದ ಫೋನ್ ಮಾಡಿದ್ದು ಗೊತ್ತಾಯಿತು. ಏನು ಸಮಾಚಾರ?’ ಎಂದು ಕೇಳಿದರು. ‘ಯೋಗೀಜೀ, ನಿಮ್ಮ ಆರೋಗ್ಯ ವಿಚಾರಿಸಲು ಸುಮ್ಮನೆ ಫೋನ್ ಮಾಡಿದ್ದೆ, ಬೇರೆ ಯಾವ ಉದ್ದೇಶವೂ ಇಲ್ಲ’ ಎಂದೆ. ‘ಅದೇ ಉತ್ತಮ. ಯಾವ ಉದ್ದೇಶವಿಲ್ಲದೇ ಕರೆ ಮಾಡಿದ್ದು ಕೇಳಿ ಇನ್ನೂ ಸಂತೋಷವಾಯಿತು’ ಎಂದು ಹೇಳಿದರು. ಅಂದು ನಾವಿಬ್ಬರೂ ಸುಮಾರು ಅರ್ಧ ಗಂಟೆ ಮಾತಾಡಿದೆವು.
ಅನಂತರ ನನಗೆ ಗೊತ್ತಾಗಿದ್ದೇನೆಂದರೆ, ಅಂದು ಯೋಗಿಜೀ ಆ ದುರ್ಗಮ ಗುಡ್ಡ-ಬೆಟ್ಟದಲ್ಲಿ, ಆ ಕೊರೆಯುವ ಚಳಿಯಲ್ಲಿ, ಸುಮಾರು ಮೂರು ತಾಸು ಕಾಲ್ನಡಿಗೆ ಯಲ್ಲಿ ಕ್ರಮಿಸಿ ನೆಟ್ ವರ್ಕ್ ಇರುವ ಜಾಗಕ್ಕೆ ಬಂದು ಫೋನ್ ಮಾಡಿದ್ದರು. ‘ಭಟ್ಟರು, ನನ್ನನ್ನು ನೆನಪಿಸಿಕೊಂಡು ಐದಾರು ಸಲ ಫೋನ್ ಮಾಡಿದ್ದಾರೆ.ಏನು ವಿಷಯವೋ ಗೊತ್ತಿಲ್ಲ. ಯಾವುದಕ್ಕೂ ಅವರ ಜತೆ ಮಾತಾಡಿ ಬರುತ್ತೇನೆ’ ಎಂದರಂತೆ. ಆಗ ಅವರ ಶಿಷ್ಯರು, ಯೋಗೀಜೀ, ನೀವು ಹೋಗಬೇಡಿ, ನಾವು ಭಟ್ಟರ ಜತೆ ಮಾತಾಡಿ ಬರುತ್ತೇವೆ’ ಎಂದು ಹೇಳಿದರಂತೆ. ಆದರೆ ದುರ್ಲಭಜೀ ಸ್ವತಃ ನನ್ನ ಜತೆಗೇ ಮಾತಾಡಲು ಹೊರಟಿದ್ದರು. ನನಗೆ ಈ ಥರದ ಅನುಭವ ವಾಗುತ್ತಿರುವುದು ಮೊದಲ ಸಲವಲ್ಲ. ನನಗೆ ಯೋಗೀಜೀ ಬಗೆಗಿದ್ದ ಪ್ರೀತಿ ಮತ್ತಷ್ಟು ಹೆಚ್ಚಿತು.
ತಮಗೆ ಎಷ್ಟು ಕಷ್ಟವಾದರೂ ಕೆಲವರು ಬೇರೆಯವರಿಗಾಗಿ ಎಂಥ ಸಂಕಷ್ಟಗಳನ್ನಾದರೂ ಅನುಭವಿಸಲು ಸಿದ್ಧರಿರುತ್ತಾರೆ. ಬೇರೆಯವರಿಗೆ ನಿರಾಸೆ, ಬೇಸರ ಮೂಡಿಸಲು ಅವರು ಸರ್ವಥಾ ಸಿದ್ಧರಿರುವುದಿಲ್ಲ. ಅದಕ್ಕಾಗಿ ಎಂಥ ತ್ಯಾಗಕ್ಕೂ ಸಿದ್ಧರಿರುತ್ತಾರೆ. ಆ ಮೂಲಕ ತಮ್ಮ    ಕಾಪಾಡಿಕೊಳ್ಳುತ್ತಾರೆ. ನಮ್ಮ ವ್ಯಕ್ತಿತ್ವಕ್ಕೆ ಹೊಡೆತ ಬೀಳುತ್ತದೆ ಎನಿಸಿದರೆ, ಯಾವ ಸವಾಲುಗಳನ್ನಾದರೂ ಎದುರಿಸಲು ಸನ್ನದ್ಧರಾಗಿರಬೇಕು, ಕಷ್ಟಗಳನ್ನು ಅನುಭವಿಸಲು ತಯಾರಿರಬೇಕು.
ಸಾಧನೆ ಮತ್ತು ವಿಷಾದ
ಜೆಕೊಸ್ಲೊವಾಕಿಯ ಮೂಲದ ಅಮೆರಿಕದ ಖ್ಯಾತ ಟೆನಿಸ್ ಆಟಗಾರ್ತಿ ಮಾರ್ಟಿನಾ ನವ್ರಟಿಲೋವಾ ನಾವು ಕಾಲೇಜು, ಯುನಿವರ್ಸಿಟಿ ಯಲ್ಲಿ ಓದುವಾಗ ಯಶಸ್ಸಿನ ಉತ್ತುಂಗದಲ್ಲಿದ್ದಳು.
ದೂರದಿಂದ ಥಟ್ಟನೆ ನೋಡಿದರೆ, ಗಂಡಸರ ಹಾಗೆ ಕಾಣುತ್ತಿದ್ದ ( )ಮಾರ್ಟಿನಾ18ಗ್ರಾನ್ ಸ್ಲಾಮ್,31ಪ್ರಮುಖ ಮಹಿಳೆಯರ ಡಬಲ್ ಮತ್ತು 59 ಪ್ರಮುಖ ಸೆಣಸಿನಲ್ಲಿ ಗೆದ್ದವಳು. ಹನ್ನೆರಡು ಬಾರಿ ವಿಂಬಲ್ಡನ್ ಸಿಂಗಲ್ ಫೈನಲ್ ತಲುಪಿದ ಮಾರ್ಟಿನಾ, ಆ ಪೈಕಿ ಒಂಬತ್ತು ಬಾರಿ ಗೆದ್ದಿದ್ದು ಸಾಮಾನ್ಯವಲ್ಲ.ಸುಮಾರು 332 ವಾರಗಳ ಕಾಲ, ಜಗತ್ತಿನ ನಂಬರ್ ಒನ್ ಟೆನಿಸ್ (ಮಹಿಳಾ) ತಾರೆ ಎಂಬ ಪಟ್ಟವನ್ನು ಕಾಯ್ದುಕೊಂಡ ಆಟಗಾರ್ತಿ. ಮಾರ್ಟಿನಾ ಅಜ್ಜಿಯೂ ಟೆನಿಸ್ ಆಟಗಾರ್ತಿಯಾಗಿದ್ದಳು. ಎರಡನೇ ಮಹಾಯುದ್ಧಕ್ಕಿಂತ ಮುಂಚೆ ಆಕೆ, ಜೆಕೊಸ್ಲೊವಾಕಿಯವನ್ನು ಪ್ರತಿನಿಧಿಸಿದ್ದಳು. ಟೆನಿಸ್‌ನ ಎಲ್ಲ ಪ್ರಕಾರಗಳಆಟಗಳಲ್ಲೂ ಪಾರಮ್ಯ ಮೆರೆದ, ಎಲ್ಲ ಕಾಲಕ್ಕೂ ಸಲ್ಲುವ ಮಹಾನ್ ಆಟಗಾರ್ತಿ ಎಂಬ ಅಗ್ಗಳಿಕೆ ಮಾರ್ಟಿನಾದ್ದು. ಸುಮಾರು ಎಂಟು ವರ್ಷಗಳ (2014) ಹಿಂದೆ, ಮಾರ್ಟಿನಾ ತನ್ನ ಬಹುಕಾಲದ ಗೆಳತಿ ಜೂಲಿಯಾ ಲೆಮಿಗೋವಾಳನ್ನು ಮದುವೆ ಆಗಿದ್ದೇನೆ ಎಂದು ಪ್ರಕಟಿಸಿದಾಗ, ಇಡೀ ವಿಶ್ವ ಮೂಕವಿಸ್ಮಿತವಾಗಿತ್ತು.
ಖ್ಯಾತ ರೂಪದರ್ಶಿ ಜೂಲಿಯಾ ಲೆಮಿಗೋವಾ ಮಿಸ್ ರಷ್ಯಾ ಆಗಿದ್ದಳು. ಕೆಲವು ದಿನಗಳ ಹಿಂದೆ, ಪುಸ್ತಕದ ಅಂಗಡಿಯಲ್ಲಿ, ನಾನು ಒಂದು ಪುಸ್ತಕವನ್ನು ಗಮನಿಸಿದೆ. ಅದರ ಹೆಸರು   . ರಕ್ಷಾಪುಟದ ಮೇಲೆ ಅದನ್ನು ಬರೆದವಳು ಮಾರ್ಟಿನಾ ನವ್ರಟಿಲೋವಾ ಎಂದಿತ್ತು. ಪ್ರಾಯಶಃ ಈ ಮಾರ್ಟಿನಾ ನವ್ರಟಿಲೋವಾ ಬೇರೆಯವಳಿರಬೇಕು ಅಂದುಕೊಂಡರೆ, ಅಲ್ಲ ಅವಳೇ. ಆ ಪುಸ್ತಕದಲ್ಲಿದ್ದ ಅವಳ ಪರಿಚಯವನ್ನು ಓದಿದಾಗ, ಮಾರ್ಟಿನಾ ಮೂರು ಕಾದಂಬ ರಿಗಳನ್ನೂಬರೆದಿzಳೆ ಎಂದು ಗೊತ್ತಾಯಿತು.
ಇತ್ತೀಚೆಗೆ ನಾನು ಮಾರ್ಟಿನಾಳ ಟ್ವೀಟ್‌ಗಳನ್ನು ಓದುತ್ತಿದ್ದೆ. ಆಕೆ ಮೂರು ವಾಕ್ಯಗಳ ಕಿರು ಪರಿಚಯ ಬರೆದಿಕೊಂಡಿದ್ದಳು –    .    ,     .      ,      . ಒಂದು ಕಾಲಕ್ಕೆ ಟೆನಿಸ್ ಆಡುತ್ತಿದ್ದೆ, ಈಗ ಬರೀ ಆ ಬಗ್ಗೆ ಮಾತಾಡುತ್ತೇನೆ ಎಂಬ ವಾಕ್ಯವನ್ನು ಓದುವಾಗ ಯಾಕೋ ಸಂಕಟವಾಯಿತು. ಅದೆಂಥ ಮಹಾನ್ ಆಟಗಾರರೇ ಇರಬಹುದು, ಒಂದು ದಿನ ನಿವೃತ್ತರಾಗಲೇಬೇಕು. ಒಂದು ಕಾಲದಲ್ಲಿ ನಾನೂ ಈ ಆಟವನ್ನು ಆಡುತ್ತಿದ್ದೆ ಎಂಬ ಕಟು ಸತ್ಯವನ್ನು ಒಪ್ಪಿಕೊಳ್ಳಬೇಕು, ಈ ಬಗ್ಗೆ ಯೋಚಿಸುತ್ತಿದ್ದಂತೆ ಕವಿಯುವ ವಿಷಾದವನ್ನು ಗೆಲ್ಲಬೇಕು, ಕೊನೆಯಲ್ಲಿ ಈ ತಾಕಲಾಟದಲ್ಲಿ ತಮ್ಮನ್ನು ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ಇದು ಒಂದು ಅನಿವಾರ್ಯ ಮತ್ತು ಅಗತ್ಯ ಕಸರತ್ತು.
ಘಟನೆ ಮತ್ತು ಪರಿಣಾಮ
ಇತ್ತೀಚೆಗೆ ವ್ಯಕ್ತಿತ್ವ ವಿಕಸನ ಗುರು ರಾಬಿನ್ ಶರ್ಮ ಹೇಳಿದ ಮಾತುಗಳನ್ನು ಕೇಳುತ್ತಿದ್ದೆ – ನೀವು ಒಂದು ಗುಲಾಬಿ ಹೂವು ಮತ್ತು ಅದರ ಕಾಂಡವನ್ನು ಗಮನಿಸಿ. ಕೆಲವರು ಅದನ್ನೇ ಗುಲಾಬಿಯ ಗಿಡ ಎಂದೂ ಕರೆಯಬಹುದು. ಅದರಲ್ಲಿ ಮುಳ್ಳು ಇರುವ ಕಾರಣ ಅದು ಮುಳ್ಳುಗಿಡ ಎಂದು ಇನ್ನಿತರರು ಭಾವಿಸಬಹುದು. ಒಂದೇ ವಿಷಯವನ್ನು ಹಲವರು ಹತ್ತಾರು ಬಗೆಯಲ್ಲಿ ಅರ್ಥೈಸಿಕೊಳ್ಳುತ್ತಾರೆ.
ನೀವು ಯಾವುದೇ ವಿಚಾರವನ್ನು ಉನ್ನತ ಚಿಂತನೆಯೊಂದಿಗೆ ಆಲೋಚನೆ ಮಾಡಿದಾಗ ನಿಮ್ಮ ಕಲ್ಪನೆ, ವಿವೇಚನೆ ವಿಸ್ತಾರವಾಗುತ್ತಾ ಹೋಗುತ್ತದೆ. ನಿಮ್ಮ ವಿಚಾರಗಳಲ್ಲಿ ನಿಮ್ಮ ಭಾಗ್ಯವನ್ನೇ ಬದಲಿಸಬಲ್ಲ ಶಕ್ತಿ ಇದೆ ಎಂಬುದು ನಿಮ್ಮ ಅರಿವಿಗೆ ಬಂದಾಗ ವಿಸ್ಮಯಗಳು ಘಟಿಸಲಾರಂಭಿಸುತ್ತವೆ. ನಿಮ್ಮ ಜೀವನದ ಭೂತಕಾಲದಲ್ಲಿ ಘಟಿಸಿದ ಅಥವಾ ಭವಿಷ್ಯದಲ್ಲಿ ಘಟಿಸಬಹುದಾದ ಯಾವುದೇ ಸಂಗತಿಯ ಕಲ್ಪನೆ ಮಾಡಿಕೊಳ್ಳುವುದಕ್ಕೆ ನೀವು ಸ್ವತಂತ್ರರಿದ್ದೀರಿ. ಉದಾ ಹರಣೆಗೆ, ಒಬ್ಬ ನಿಮ್ಮ ಅಪಮಾನಿಸಿದರೆ, ನೀವು ನಿಮ್ಮ ಮನಸ್ಸಿನಲ್ಲಿ ಅದಕ್ಕೆ ಭಿನ್ನವಾದ ಆಲೋಚನೆಗಳನ್ನು ಮಾಡಬಹುದು. ಒಬ್ಬ ಸಾಮಾನ್ಯ ವ್ಯಕ್ತಿಗೆ ಸಿಟ್ಟು ಯಾಕೆ ಬರುತ್ತದೆ ಮತ್ತು ಆತ ಸಿಟ್ಟು ಮಾಡಿಕೊಂಡಾಗ ನನಗೆ ಹೀಗೇಕಾಗುತ್ತದೆ ಎಂದು ಪದೇ ಪದೆ ಪ್ರಶ್ನಿಸಿಕೊಂಡರೆ, ಸಿಟ್ಟಿಗೆ ನೀವು ಪ್ರತಿಕ್ರಿಯಿಸುವ ರೀತಿಬದಲಾಗುತ್ತದೆ.
ನೆನಪಿಡಿ, ಹಾವು ಕಚ್ಚುವುದರಿಂದ ಯಾರೂ ಸಾಯುವುದಿಲ್ಲ. ಕಾರಣ ಎಲ್ಲವೂ ವಿಷಪೂರಿತ ಹಾವುಗಳಲ್ಲ. ವಿಷಪೂರಿತ ಹಾವು ಕಚ್ಚಿದಾಗಲೂ, ಕಚ್ಚಿದವನ ದೇಹಕ್ಕೆ ವಿಷವನ್ನು ಬಿಟ್ಟೇ ಬಿಡುತ್ತದೆ ಎಂದು ಹೇಳಲು ಆಗುವುದಿಲ್ಲ. ಕಚ್ಚಿದ ನಂತರ ವಿಷ ದೇಹದಲ್ಲಿ ಪಸರಿಸುವ ವೇಗಕ್ಕೆ ಅನುಗುಣವಾಗಿ ಅದು ಪ್ರಾಣಾಘಾತಕಪರಿಣಾಮಕ್ಕೆ ಕಾರಣವಾಗುತ್ತದೆ. ಯಾರಾದರೂ ಏರಿದ ದನಿಯಲ್ಲಿ ಮಾತಾಡಿದರೆ ನೀವೂ ದನಿ ಎತ್ತರಿಸಬೇಕೆಂದಿಲ್ಲ. ದನಿಯ ಏರಿಳಿತಕ್ಕಿಂತ ವಿಷಯ ಮತ್ತುವಿಚಾರ ಬಹಳ ಮುಖ್ಯ. ವಿಷಯಕ್ಕಿಂತ ಏರಿದ ದನಿಯೇ ಜಗಳಕ್ಕೆ ಕಾರಣವಾಗಬಹುದು.
ಎದುರಿಗಿದ್ದವ ಏರಿದ ದನಿ ಯಲ್ಲಿ ಮಾತಾಡಿದರೆ, ನೀವು ಮೆಲ್ಲಗೆ ಮಾತಾಡಿ ನೋಡಿ. ಆತ ಸ್ವಾಭಾವಿಕವಾಗಿ ದನಿ ತಗ್ಗಿಸುತ್ತಾನೆ. ಆಗ ಜಗಳವಾಗುವ ಸಂದರ್ಭ ಸ್ವಾಭಾವಿಕವಾಗಿ ನಿಲ್ಲುತ್ತದೆ. ಯಾರೋ ಇನ್ನೊಬ್ಬ ವ್ಯಕ್ತಿಯಲ್ಲಿರುವ ವಿಷವನ್ನು ನೀವು ನಿಮ್ಮ ಮೈಮನಸ್ಸಿನ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ಆವಾಹಿಸಿ ಕೊಳ್ಳಬೇಡಿ. ನಿಮ್ಮ ಮನಸ್ಸಿನೊಳಗೆ ಪ್ರತಿಕ್ಷಣದಲ್ಲಿ ದಾಖಲಾಗುವ ಸಂಗತಿಗಳ ಬಗ್ಗೆ ನಿಯಂತ್ರಣವಿಡಿ. ಆಗ ನಿಮ್ಮ ಪ್ರತಿದಿನವೂ ವಿಭಿನ್ನವಾಗಿರುತ್ತದೆ, ಸುದಿನವಾಗುತ್ತದೆ, ನೀವು ನಗುನಗುತ್ತಾ ಬಾಳುತ್ತೀರಿ. ಸಾಧ್ಯವಾದರೆ ಪ್ರಯತ್ನಿಸಿ.
ದೃಷ್ಟಿಕೋನ ಮತ್ತು ಫಲಿತಾಂಶ ಪ್ರತಿಯೊಂದು ಕೆಲಸ ಶುರುಮಾಡುವಾಗಲೂ ಮನದಲ್ಲಿ ಒಂದು ಖಚಿತ ವಿಚಾರ ಮೂಡುತ್ತದೆ. ನೀವು ಆ ಕೆಲಸವನ್ನುಖುಷಿಯಿಂದ ಮಾಡುತ್ತೀರೋ ಅಥವಾ ಹೊರೆ ಎಂಬಂತೆ ನಿಭಾಯಿಸುತ್ತೀರೋ ಎಂಬುದು ಆಗಲೇ ನಿರ್ಧರಿತವಾಗಿರುತ್ತದೆ. ಕಠಿಣವಾದ ಕೆಲಸ ಅಥವಾ ವಿಚಾರಗಳನ್ನು ಸಕಾರಾತ್ಮಕತೆಯೊಂದಿಗೆ ಜೋಡಿಸುವುದು ನಿಮಗೆ ಸಾಧ್ಯವಾದರೆ ಆಗ ನೀವು ವಿಶೇಷವಾದದ್ದನ್ನು ಸಾಧಿಸುತ್ತೀರಿ. ಎಲ್ಲಾ ಕೆಲವು ಬಾರಿಮನಸ್ಸು ಬದಲಾವಣೆ ಮಾಡಬೇಕಾದ ಅನಿವಾರ್ಯತೆಯೂ ಉಂಟಾಗಬಹುದು.
ಉದಾಹರಣೆಗೆ, ನಾಳೆ ಇಡೀ ದಿನ ನಾವು ಏನೇನು ಮಾಡಬೇಕೆಂದು ಚಿಂತನೆ ಮಾಡುತ್ತಿರುತ್ತೇವೆ. ಕೆಲಸಕ್ಕಾಗಿ ಬೆಳಗ್ಗೆ ಬಹುಬೇಗ ಏಳಬೇಕಾಗಿರುತ್ತದೆ. ವ್ಯವಹಾರ ನಿಮಿತ್ತ ಅನೇಕ ಮೊಬೈಲ್ ಕರೆಗಳನ್ನು ಮಾಡಬೇಕಿರುತ್ತದೆ. ಜತೆಗೆ ಕುಟುಂಬದ ಬಗ್ಗೆಯೂ ಗಮನ ಹರಿಸಬೇಕಿರುತ್ತದೆ. ಇದು ಎಲ್ಲರ ಬದುಕಿನಅವಿಭಾಜ್ಯ ಅಂಗ. ಈ ಎಲ್ಲ ಕೆಲಸಗಳ ಒತ್ತಡವನ್ನು ಖುಷಿ, ಉತ್ಸಾಹಗಳ ರೂಪಕ್ಕೆ ಬದಲಿಸುವುದು ನಿಮ್ಮೊಳಗಿರುವ ತಾಕತ್ತಿನಿಂದ ಮಾತ್ರ ಸಾಧ್ಯ. ಒಂದೇ ಒಂದು ಬದಲಾವಣೆಯಿಂದ ಈ ಎಲ್ಲವನ್ನೂ ಸುಲಭವಾಗಿ ಮಾಡುವುದು ಸಾಧ್ಯವಾಗುತ್ತದೆ. ನನಗೆ ಈ ಕೆಲಸ ಮಾಡ ಕಿದೆ ಎಂಬುದರ ಬದಲು ನನಗೆ ಈ ಕೆಲಸ ಮಾಡಲು ಉತ್ತಮವಾದ ಅವಕಾಶ ಸಿಕ್ಕಿದೆ ಎಂಬ ಮನೋಭಾವ ನಮ್ಮೊಳಗೆ ಸ್ಥಾಪಿತವಾಗಬೇಕು. ಆಗ ಯಾವ ಕೆಲಸವೂ ಹೊರೆ ಎನಿಸುವುದಿಲ್ಲ.
ಹಾಗಾದಾಗ, ಮಾಡಬೇಕಾದ ಕೆಲಸದೆಡೆಗಿನನ ದೃಷ್ಟಿಕೋನವೇ ಬದಲಾಗಿಬಿಡುತ್ತದೆ. ನೀವು ಪ್ರತಿ ಘಟನೆಯನ್ನು ನಿಮ್ಮದೇ ಆದ ವಿಧಾನದಲ್ಲಿ ಸಕಾರಾತ್ಮಕ ವಾಗಿ ಗ್ರಹಿಸಿಕೊಳ್ಳಬೇಕು, ಮಾಡಬೇಕಾದ ಕೆಲಸ, ವ್ಯವಹಾರ ಅಥವಾ ಇನ್ನಾವುದೇ ಕಾರ್ಯವನ್ನೂ ಅದೇ ರೀತಿ ಯಲ್ಲಿ ಒಳ್ಳೆಯ ಮನಸ್ಸಿನಿಂದ ಜೋಡಿಸಿಕೊಳ್ಳ ಬೇಕು. ನಿಮ್ಮ ಪ್ರತಿ ನಿತ್ಯದ ವ್ಯವಹಾರದಲ್ಲಿ ಇದನ್ನು ಅಳವಡಿಸಿಕೊಳ್ಳಬೇಕು. ನೀವು ಮಾಡಬೇಕು ಎಂದು ಕಷ್ಟಪಟ್ಟು ಮಾಡುವ ಕೆಲಸಕ್ಕೂ, ಈ ಕೆಲಸ ನನಗೆ ಮಾಡಲು ಅವಕಾಶ ಸಿಕ್ಕಿದೆ ಎಂದು ಇಷ್ಟಪಟ್ಟು ಮಾಡುವುದಕ್ಕೂ ಇರುವ ವ್ಯತ್ಯಾಸ ಫಲಿತಾಂಶದಲ್ಲಿ ಪ್ರತಿಫಲಿತವಾಗುತ್ತದೆ. ಖ್ಯಾತ ಲೇಖಕ ಜೇಮ್ಸ ಕ್ಲಿಯರ್ ಹೇಳಿದ್ದೂ ಇದನ್ನೇ.
ಪತಿ ಮತ್ತು ಅವಳ ಪ್ರತಿಕ್ರಿಯೆಇತ್ತೀಚೆಗೆ ಖ್ಯಾತ ಉದ್ಯಮಿ ಹರ್ಷ್ ಗೋಯಂಕಾ ಒಂದು ಟ್ವೀಟ್ ಮಾಡಿದ್ದರು. ಅದರಲ್ಲಿ ಅವರು ಒಂದು ಹಾಸ್ಯ ಪ್ರಸಂಗವನ್ನು ಹಂಚಿಕೊಂಡಿದ್ದರು. ನಾನು ನನ್ನ ಹೆಂಡತಿಗೆ ಹೇಳಿದೆ –    ಅಷ್ಟಕ್ಕೇ ಅವಳ ಕೋಪ ನೆತ್ತಿಗೇರಿ ಬಿಟ್ಟಿತು. ಎಲ್ಲಿತ್ತೋ ಕೋಪ… ‘ನೀವೇನು ಬಹಳ ಪಾಸಿಟಿವ್ ವ್ಯಕ್ತಿಯಾ? ನೀವು ಪರಮ ಸ್ವಾರ್ಥಿ, ಮಹಾ ಕಂಜೂಸು, ಸಂವೇದನಾರಹಿತ ವ್ಯಕ್ತಿ, ಕಲ್ಲು ಹೃದಯಿ, ನಿಮ್ಮಂಥ ವ್ಯಕ್ತಿ ಜತೆ ನಾನು ಯಾಕೆ ಸಂಸಾರ ಮಾಡುತ್ತಿದ್ದೆನೋ ಗೊತ್ತಿಲ್ಲ, ನಾನು ಚಪ್ಪಲಿಯಲ್ಲಿ ಹೊಡೆದುಕೊಳ್ಳಬೇಕು, ನಿಮ್ಮ ಜತೆ ಇರುವುದಕ್ಕಿಂತ ಹಾಳು ಬಾವಿ ಹಾರಿ ಸಾಯೋದು ವಾಸಿ. ನಿಮ್ಮಂಥ ವ್ಯಕ್ತಿ ಜತೆ ಜೀವನ ಸಾಗಿಸುತ್ತಿದ್ದೇ ನಲ್ಲ.. ನಾನು ಹಿಂದಿನ ಜನ್ಮದಲ್ಲಿ ಅದ್ಯಾವ ಪಾಪ ಮಾಡಿzನೋ ಗೊತ್ತಿಲ್ಲ… ನನ್ನ ಕರ್ಮ..ಕರ್ಮ’ ಎಂದು ಏರಿದ ಧ್ವನಿಯಲ್ಲಿ ಕಿರುಚಿದಳು.
ನನಗೆ ಮಧ್ಯೆ ಬಾಯಿ ಹಾಕಲು ಅವಕಾಶ ಕೊಡದೇ ಒಂದೇ ಸಮನೆ ಕೋಪ-ತಾಪ ಪ್ರದರ್ಶಿಸಿಬಿಟ್ಟಳು. ಅಷ್ಟಕ್ಕೂ ನಾನು ಹೇಳಬೇಕೆಂದಿದ್ದು ‘ನಿನ್ನ ಕೋವಿಡ್ ಟೆಸ್ಟ್ ರಿಪೋರ್ಟ್ ನೆಗೆಟಿವ್ ಬಂದಿದೆ ’ ಎಂದು. ಅಷ್ಟರೊಳಗೆ ಇಷ್ಟೆಲ್ಲ ಭಾನಗಡಿ ಆಗಿ, ರಂಬಾರುಡಿ ಜರುಗಿ ಹೋಯಿತು.
ಕ್ರಿಕೆಟ್‌ನಲ್ಲಿ ಯಾವುದು ಇಷ್ಟ?ದಿನೇ ದಿನೆ ರುಪಾಯಿ ಮೌಲ್ಯ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ವೀಕ್ಷಕ ವಿವರಣೆಕಾರ ಹರ್ಷ ಭೋಗಲೇ ಮತ್ತು ಕೇಂದ್ರ ಸಚಿವರ ನಡುವಿನ ಒಂದು ಕಾಲ್ಪನಿಕ (!?) ತಮಾಷೆಯ ಸಂಭಾಷಣೆ. ಹರ್ಷ – ನಿಮಗೆ ಇಷ್ಟವಾದ ಆಟ ಅಥವಾ ಕ್ರೀಡೆ ಯಾವುದು? ಸಚಿವ – ಕ್ರಿಕೆಟ್ ಹರ್ಷ – ಹೌದಾ? ಸರಿ, ಕ್ರಿಕೆಟ್ ನಲ್ಲಿ ಯಾವುದು ಇಷ್ಟ? ಅಂದರೆ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ? ಸಚಿವ – ಕೇವಲ ಟಾಸ್ ಮಾತ್ರ ನನಗೆ ಇಷ್ಟ ಇಂಥ ಉತ್ತರ ಬರಬಹುದು ಎಂದು ಹರ್ಷ ಭೋಗಲೇ ನಿರೀಕ್ಷಿಸಿರಲಿಲ್ಲ. ಅವರಿಗೆ ಬಹಳ ಆಶ್ಚರ್ಯವಾಯಿತು.
ಹರ್ಷ – ಟಾಸ್ಸಾ? ಅದು ಏಕೆ ಇಷ್ಟ ಅನ್ನೋದನ್ನ ಹೇಳಬಹುದಾ ? ಸಚಿವ – ಭಾರತದ ರುಪಾಯಿ ಮೇಲಕ್ಕೆ ಹೋಗುವುದು ಟಾಸ್ ಹಾಕುವಾಗ ಮಾತ್ರ!