ಮಹಾನ್ ವಿಜ್ಞಾನಿ ಐಸಾಕ್‌ ನ್ಯೂಟನ್‌ ಕುರಿತ ಅವೈಜ್ಞಾನಿಕ ಸ್ವಾರಸ್ಯಗಳು
ತಿಳಿರು ತೋರಣ
ಶ್ರೀವತ್ಸ ಜೋಶಿ
@.
ನ್ಯೂಟನ್ ಬಗ್ಗೆ ಒಂಥರದ ಪೂರ್ವಗ್ರಹ ಗೌರವಭಾವ ನಮ್ಮ ತಲೆಯಲ್ಲಿರುತ್ತದೆ. ಅದಕ್ಕೆ ಪೂರಕವಾಗಿ, ಇಲ್ಲ ವ್ಯತಿರಿಕ್ತವಾಗಿಯಾದರೂ, ಸ್ವಾರಸ್ಯಕರ ಸಂಗತಿಗಳನ್ನರಿತಾಗ ಸಹಜವಾಗಿಯೇ ‘ಓಹೋ ಹೀಗೂ ಇತ್ತೇ!’ ಎಂಬ ಉದ್ಗಾರ ಬರುತ್ತದೆ. ಅಂಥ ಒಂದಿಷ್ಟು ಉದ್ಗಾರಗಳಿಗೆ ಸಿದ್ಧರಾಗಿ ಮುಂದೆ ಓದಿ.
ಅ ವೈಜ್ಞಾನಿಕ ಎಂಬ ಪದವನ್ನು ಬಳಸಿದ್ದು ವಿಜ್ಞಾನಕ್ಕೆ ಸಂಬಂಧಪಡದ ಎಂಬ ಅರ್ಥದಲ್ಲಿ ಮಾತ್ರ. ಏಕೆಂದರೆ ‘ನ್ಯೂಟನ್ ಅಂದರೇನೇ ವಿಜ್ಞಾನ; ವಿಜ್ಞಾನ ಅಂದರೇನೇ ನ್ಯೂಟನ್’ ಎನ್ನುವಷ್ಟರ ಮಟ್ಟಿಗೆ ಸಂಶೋಧನೆಗಳು, ಅನ್ವೇಷಣೆಗಳು, ಭೌತಶಾಸ್ತ್ರೀಯ ನಿಯಮಗಳೆಲ್ಲ ನ್ಯೂಟನ್ ಹೆಸರಿನಲ್ಲಿವೆ. ಅವೆಲ್ಲದರ ಹೊರತಾಗಿ ನ್ಯೂಟನ್‌ಗೆ ಒಂದು ಸ್ವಂತದ ವ್ಯಕ್ತಿತ್ವ, ವ್ಯಕ್ತಿಗತವಾದೊಂದು ಛಾಪು ಇತ್ತಲ್ಲ, ಅದನ್ನು ಪರಿಚಯಿಸುವ ಸ್ವಾರಸ್ಯಕರ ಸಂಗತಿಗಳಿವು.
ಆ ದೃಷ್ಟಿಯಿಂದಷ್ಟೇ ‘ಅವೈಜ್ಞಾನಿಕ’ ಎಂದದ್ದು. ಅಥವಾ ಹೀಗೂ ಹೇಳಬಹುದು: ಇದು ನ್ಯೂಟನ್‌ನ ವಿeನ ಅಲ್ಲ, ನ್ಯೂಟನ್‌ನ ಚರಿತ್ರೆ. ಚರಿತ್ರೆಯೂ ಆಸಕ್ತಿಕರ ಎನಿಸುವುದು ಅದರಲ್ಲಿ ವಿಚಿತ್ರವೆನಿಸುವ ಘಟನೆಗಳಿದ್ದಾಗ. ಅನಿರೀಕ್ಷಿತ ಅಂಶಗಳು ಧುತ್ತೆಂದು ಎದುರಾದಾಗ. ಅದರಲ್ಲೂ ಜಗತ್ಪ್ರಸಿದ್ಧ ವ್ಯಕ್ತಿಗಳನ್ನು ಕುರಿತಾದರೆ- ‘ಅವರು ನೋಡಲಿಕ್ಕೆ ಹೀಗೆ ಇರಬಹುದು, ಅವರ ಗುಣಸ್ವಭಾವ ಹೀಗೆ ಇರಬಹುದು, ಅವರ ಹಾವ-ಭಾವ ನಡೆ-ನುಡಿ ಹೀಗೆ ಇರಬಹುದು’ ಅಂತೆಲ್ಲ ಇರುವ ನಮ್ಮ ಕಲ್ಪನೆಗಳಿಗಿಂತ ಭಿನ್ನವಾದ ವಿಚಾರಗಳು ತಿಳಿದುಬಂದಾಗ.
ಸರ್ ಐಸಾಕ್ ನ್ಯೂಟನ್ ಸಹ ಇದಕ್ಕೆ ಹೊರತಲ್ಲ. ‘ಈ ಭೂಮಿಯ ಮೇಲೆ ನಡೆದಾಡಿದ ಮಹಾನ್ ವಿಜ್ಞಾನಿ. ಗುರುತ್ವಾಕರ್ಷಣ ಶಕ್ತಿ (ಅದನ್ನು ನ್ಯೂಟನ್ ಪುರಾತನ ಭಾರತೀಯ ಶಾಸ್ತ್ರಗಳಿಂದ ಕದ್ದದ್ದೆಂಬ ಮಾತೂ ಇದೆ, ಇರಲಿ ಅದಿಲ್ಲಿ ಅಪ್ರಸ್ತುತ), ಚಲನೆಯ ನಿಯಮ, ಜಡತ್ವದ ನಿಯಮ ಮುಂತಾಗಿ ಹಲವಾರು ಸಂಶೋಧನೆಗಳು,26ರ ವಯಸ್ಸಿನೊಳಗೇ ಇದನ್ನೆಲ್ಲ ಸಾಧಿಸಿದ ಅಪ್ರತಿಮ ಮೇಧಾವಿ…’ ಎಂದು ನ್ಯೂಟನ್ ಬಗ್ಗೆ ಒಂಥರದ ಪೂರ್ವಗ್ರಹ ಗೌರವಭಾವ ನಮ್ಮ ತಲೆಯಲ್ಲಿರುತ್ತದೆ. ಅದಕ್ಕೆ ಪೂರಕವಾಗಿ, ಇಲ್ಲ ವ್ಯತಿರಿಕ್ತವಾಗಿಯಾದರೂ, ಸ್ವಾರಸ್ಯಕರ ಸಂಗತಿಗಳನ್ನರಿತಾಗ ಸಹಜವಾಗಿಯೇ ‘ಓಹೋ ಹೀಗೂ ಇತ್ತೇ!’ ಎಂಬ ಉದ್ಗಾರ ಬರುತ್ತದೆ.
ಅಂಥ ಒಂದಿಷ್ಟು ಉದ್ಗಾರಗಳಿಗೆ ಸಿದ್ಧರಾಗಿ ಮುಂದೆ ಓದಿ. ಐಸಾಕ್ ನ್ಯೂಟನ್ ಹುಟ್ಟಿದ್ದು ಕ್ರಿಸ್ಮಸ್ ದಿನ, ೧೬೪೨ರ ಡಿಸೆಂಬರ್ ೨೫ರಂದು, ಇಂಗ್ಲೆಂಡ್‌ನ ಗ್ರಾಂಥಮ್ ಎಂಬ ಪಟ್ಟಣದಲ್ಲಿ. ಆಗಷ್ಟೇ ಬಂದಿದ್ದ ಕಾಲಗಣನೆಯ ಹೊಸ ವಿಧಾನದ ಪ್ರಕಾರ ಅದು ೧೬೪೩ನೆಯ ಇಸವಿಯ ಜನವರಿ ೪. ಅಮ್ಮನ ಹೆಸರುಹಾನ್ನಾ ಅಂತಾದರೆ ಅಪ್ಪನ ಹೆಸರು ಐಸಾಕ್ ನ್ಯೂಟನ್ ಅಂತಲೇ ಇದ್ದದ್ದು. ಆತ ಒಬ್ಬ ಅನಕ್ಷರಸ್ಥ, ಬೇಸಾಯ ವೃತ್ತಿ ಮಾಡಿಕೊಂಡಿದ್ದವ. ಮರಿ ನ್ಯೂಟನ್ ಹುಟ್ಟುವುದಕ್ಕೆ ಕೆಲ ತಿಂಗಳ ಮೊದಲು ಅಪ್ಪ ನ್ಯೂಟನ್ ಸ್ವರ್ಗಸ್ಥ. ಅಮ್ಮ ನವಮಾಸಗಳ ಕಾಲ ಹೊತ್ತು ಹೆತ್ತದ್ದಲ್ಲ, ನ್ಯೂಟನ್ ಒಬ್ಬ ಪ್ರಿಮೆಚ್ಯೂರ್ ಬೇಬಿ. ಬದುಕುಳಿದದ್ದೇ ಆಶ್ಚರ್ಯ.
‘ನಾನು ಹುಟ್ಟುವಾಗ ಎಷ್ಟು ಚಿಕ್ಕವನೆಂದರೆ ಚಹ ಮಾಡುವ ಕ್ವಾಟ್‌ರ್ ಪಾಟ್‌ನೊಳಗೆ ಹಿಡಿಸುವಷ್ಟು’ ಎಂದು ನ್ಯೂಟನ್‌ನೇ ಹೇಳುತ್ತಿದ್ದನಂತೆ. ನ್ಯೂಟನ್ ಮೂರು ವರ್ಷದವನಾದಾಗ ಅಮ್ಮ ಶ್ರೀಮಂತ ಪಾದ್ರಿಯೊಬ್ಬನನ್ನು ಮದುವೆಯಾದಳು. ಆ ಪಾದ್ರಿಗೆ ಮಲಮಗನನ್ನು ಸಾಕುವ ಆಸಕ್ತಿಯಿರಲಿಲ್ಲ. ಹಾಗಾಗಿ ನ್ಯೂಟನ್ ಅಜ್ಜಿ-ತಾತನ ಜತೆಗಿರಬೇಕಾಯಿತು. ಹುಟ್ಟುವಾಗಲೇ ತಂದೆ ಇಲ್ಲ, ಆಮೇಲೆ ತಾಯಿಯೂ ಬಿಟ್ಟುಬಿಟ್ಟಳು- ಪರಿಣಾಮವಾಗಿ ನ್ಯೂಟನ್ ಒಬ್ಬ ಅಂತರ್ಮುಖಿ ವಿಲಕ್ಷಣ ಸ್ವಭಾವದವನಾಗಿ, ಯಾರ ಮೇಲೂ ನಂಬಿಕೆಯಿಲ್ಲದವನಾಗಿ ಬೆಳೆದನು. ಮಲತಂದೆ ಮತ್ತು ತಾಯಿಯನ್ನು, ಅವರಿದ್ದ ಮನೆಯನ್ನು, ಸುಟ್ಟುಬಿಡುತ್ತೇನೆಂದು ಕೂಡ ಒಮ್ಮೆ ಆವಾಜ್ ಹಾಕಿದ್ದನಂತೆ.
‘ನಾನು ಮಾಡಿದ ಪಾಪಕೃತ್ಯಗಳು’ ಎಂಬ ಪಟ್ಟಿಯಲ್ಲಿ ನ್ಯೂಟನ್ ಅದನ್ನು ಬರೆದಿದ್ದಾನೆನ್ನಲಾಗಿದೆ. ದೊಡ್ಡವನಾದ ಮೇಲೆ ನ್ಯೂಟನ್ ಸದಾ ತನ್ನ ಸಂಶೋಧನೆ ಗಳಲ್ಲಿ ಮುಳುಗಿರುತ್ತಿದ್ದನು. ಯಾವುದೇ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದಾಗಲೀ, ಸ್ನೇಹಿತರೊಡನೆ ಬೆರೆತುಕೊಳ್ಳುವುದಾಗಲೀ ಇಲ್ಲವೇಇಲ್ಲ. ಮದುವೆಯನ್ನೂ ಮಾಡಿಕೊಳ್ಳಲಿಲ್ಲ. ಹನ್ನೆರಡರ ಪ್ರಾಯದಲ್ಲಿ ನ್ಯೂಟನ್‌ನನ್ನು ಗ್ರಾಂಥಮ್ ಪಟ್ಟಣದಲ್ಲಿ ಒಂದು ಶಾಲೆಗೆ ಸೇರಿಸಲಾಯಿತು. ಅಜ್ಜಿಯ ಮನೆಯಿಂದ ನಡೆದುಕೊಂಡು ಹೋಗಲಿಕ್ಕೆ ತುಂಬ ದೂರ ಆದ್ದರಿಂದ ಶಾಲೆಗೆ ಸಮೀಪದಲ್ಲಿ, ಒಬ್ಬ ಔಷಧ ವ್ಯಾಪಾರಿಯ ಮನೆಯಲ್ಲಿ ನ್ಯೂಟನ್‌ಗೆ ವಸತಿ ವ್ಯವಸ್ಥೆ. ಬಡಕಲು ದೇಹದ ಆತನನ್ನು ಇತರ ಹುಡುಗರು ಛೇಡಿಸುತ್ತಿದ್ದರು.
ಒಮ್ಮೆ ಅದೇನು ರೋಷ ಬಂತೋ, ಬುಲ್ಲಿಯಿಂಗ್ ಮಾಡಿದ ಹುಡುಗನಿಗೆ ನ್ಯೂಟನ್ ಸರಿಯಾದ ಎದುರೇಟು ಕೊಟ್ಟನು. ಆಮೇಲೆ ಛೇಡಿಸುವಿಕೆ ನಿಂತಿತು, ಮಾತ್ರವಲ್ಲ ನ್ಯೂಟನ್ನನೇ ಶಾಲೆಗೆಲ್ಲ ಬಲಶಾಲಿಯೂ ಬುದ್ಧಿವಂತನೂ ಎಂದಾಯ್ತು! ಈ ನಡುವೆ ಅಮ್ಮ ಮತ್ತೊಮ್ಮೆ ವಿಧವೆಯಾದಳು. ನ್ಯೂಟನ್‌ನನ್ನು ಶಾಲೆಯಿಂದ ಬಿಡಿಸಿ ಬೇಸಾಯಕ್ಕೆ ಹಚ್ಚಿದಳು. ಆಗ ನ್ಯೂಟನ್‌ನ ವಯಸ್ಸು ೧೬. ಸ್ವಲ್ಪ ಕಾಲ ಮಣ್ಣು ಉತ್ತಿದ್ದು ಹೊತ್ತಿದ್ದೂ ಆಯ್ತು, ಆದರೆ ಆಸಕ್ತಿಯಿಂದಲ್ಲ. ಅದಕ್ಕೆ ಸರಿಯಾಗಿ ಗ್ರಾಂಥಮ್ ಪಟ್ಟಣದ ಶಾಲೆಯ ಹೆಡ್‌ಮಾಸ್ಟರನು ನ್ಯೂಟನ್‌ನ ಅಮ್ಮನನ್ನು ಹೇಗೋ ಪುಸಲಾಯಿಸಿ ನ್ಯೂಟನ್ ಮತ್ತೆ ವಿದ್ಯಾಭ್ಯಾಸಕ್ಕೆ ತೊಡಗುವಂತೆ ಮಾಡಿ ದನು. ಆ ಶಾಲೆಯಲ್ಲಿ ಶಿಕ್ಷಣ ಮುಗಿಸಿ ಟ್ರಿನಿಟಿ ಕಾಲೇಜಿನಲ್ಲಿ, ಅದಾದ ಮೇಲೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ- ಹೀಗೆ ಅಕಾಡೆಮಿಕ್ ಫೀಲ್ಡಲ್ಲೇ ನ್ಯೂಟನ್ ಮುಂದುವರಿದನು, ಅಗ್ರಿಕಲ್ಚರ್ ಫೀಲ್ಡ್‌ನಲ್ಲಲ್ಲ.
ರೈತನಾಗಿಯೇ ಮುಂದುವರಿದಿದ್ದರೆ ನ್ಯೂಟನ್ ‘ಹೇಳ ಹೆಸರಿಲ್ಲ’ದವನಾಗುತ್ತಿದ್ದನೇನೋ. ಅಂದಹಾಗೆ ಗ್ರಾಂಥಮ್ ಪಟ್ಟಣದಲ್ಲಿ ನ್ಯೂಟನ್ ಕಲಿತ ಶಾಲೆ ಈಗಲೂಬಾಯ್ಸ್ ಸ್ಕೂಲ್ ಆಗಿ ಕಾರ್ಯವೆಸಗುತ್ತಿದೆಯಂತೆ! ೧೬೬೫ರಲ್ಲಿ ಇಂಗ್ಲೆಂಡ್‌ನಲ್ಲಿ ಬ್ಯುಬೋನಿಕ್ ಪ್ಲೇಗ್ ಹರಡಿತು. ಈಗ ನಾವೇನು ಕೋವಿಡ್‌ನಿಂದಾಗಿ ಲಾಕ್‌ಡೌನ್, ವರ್ಕ್ ಫ್ರಂ ಹೋಮ್‌ಗಳನ್ನೆಲ್ಲ ಅನುಭವಿಸುತ್ತಿದ್ದೇವೋ ಹಾಗೆಯೇ ಆಗಲೂ ಎಲ್ಲ ಕಡೆ ಲಾಕ್‌ಡೌನ್. ಕೇಂಬ್ರಿಡ್ಜ್ ವಿಶ್ವವಿದ್ಯಾಲಯವನ್ನೂತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಕ್ವಾರಂಟೈನ್‌ಗಾಗಿ ನ್ಯೂಟನ್ ತನ್ನ ಹಳ್ಳಿಗೆ ಹೋಗಬೇಕಾಯಿತು. ಅಂಥದೊಂದು ದಿನ ಗಾರ್ಡನ್‌ನಲ್ಲಿ ಕುಳಿತುಕೊಂಡಿದ್ದಾಗ ಮರದಿಂದ ಸೇಬು ಕೆಳಗೆ ಬಿದ್ದ ದ್ದನ್ನು ನ್ಯೂಟನ್ ವಿಶೇಷವಾಗಿ ಗಮನಿಸಿದನು.
ಸೇಬು ಅವನ ತಲೆಯ ಮೇಲೇ ಬಿತ್ತು ಅನ್ನೋದೆಲ್ಲ ಕಟ್ಟುಕಥೆ. ದೂರದಲ್ಲೆಲ್ಲೋ ಮರದಿಂದ ಸೇಬು ಕೆಳಗೆ ಬಿದ್ದದ್ದನ್ನು ನ್ಯೂಟನ್ ನೋಡಿದ್ದು ಮಾತ್ರ ಸತ್ಯ, ಮತ್ತು ಅದೇ ಅವನಿಗೆ ಗುರುತ್ವಾಕರ್ಷಣ ಶಕ್ತಿಯ ಬಗ್ಗೆ ಹೊಳಹನ್ನು ನೀಡಿದ್ದೂ ಸತ್ಯ. ಸೇಬು ಬಿದ್ದಾಗ ಜ್ಞಾನೋದಯ ಆಯ್ತೆಂದು ನ್ಯೂಟನ್ ತನ್ನೊಬ್ಬ ಹಿತೈಷಿ ವಿಲಿಯಂ ಸ್ಟುಕೆಲಿ ಎಂಬಾತನಿಗೆ ತಿಳಿಸಿದ್ದನು. ವಿಲಿಯಂ ೧೭೫೨ರಲ್ಲಿ ಪ್ರಕಟಿಸಿದ ಪುಸ್ತಕವೊಂದರಲ್ಲಿ ಅದನ್ನು ಉಲ್ಲೇಖಿಸಿದನು. ಒಂದು ವೇಳೆ ಬ್ಯುಬೋನಿಕ್ ಪ್ಲೇಗ್ ಬಾರದೇ ಇದ್ದಿದ್ದರೆ? ಲಾಕ್‌ಡೌನ್ ಆಗಿರದಿದ್ದರೆ? ವಿಶ್ವವಿದ್ಯಾಲಯ ಮುಚ್ಚಿ ‘ಸ್ಟಡಿ ಫ್ರಂ ಹೋಮ್’ ಮಾಡಬೇಕಾದ ಪರಿಸ್ಥಿತಿ ಇಲ್ಲದಿದ್ದರೆ? ಸೇಬು ಬೀಳುವುದನ್ನುನ್ಯೂಟನ್ ನೋಡಿರದಿದ್ದರೆ? ಅದಕ್ಕೇ ಹೇಳೋದು, ಏನೆಲ್ಲ ಆಗುತ್ತದೆಯೋ ಅದೆಲ್ಲ ಒಳ್ಳೆಯದಕ್ಕೇ ಆಗುವುದು.
ಕೋವಿಡ್ಡೂ ಅಷ್ಟೇ, ಒಮೈಕ್ರಾನೂ ಅಷ್ಟೇ, ಕರ್ನಾಟಕದಲ್ಲಿ ವೀಕೆಂಡ್ ಕರ್ಫ್ಯೂ ಅಷ್ಟೇ. ಅಂದಹಾಗೆ ನ್ಯೂಟನ್ ಕಣ್ಣೆದುರು ಸೇಬು ಬೀಳಿಸಿದ ಮರ ಇಂಗ್ಲೆಂಡ್‌ನ ಆ ಹಳ್ಳಿಯಲ್ಲಿ ಈಗಲೂ ಇದೆಯಂತೆ. ೨೦೧೦ರಲ್ಲಿ ನಾಸಾ ಗಗನಯಾತ್ರಿಯೊಬ್ಬ ಅದರ ಒಂದು ಗೆಲ್ಲನ್ನು ಅಟ್ಲಾಂಟಿಸ್ ಸ್ಪೇಸ್ ಷಟಲ್‌ನಲ್ಲಿ ಇಂಟರ್‌ನ್ಯಾಷನಲ್ ಸ್ಪೇಸ್ ಸ್ಟೇಷನ್‌ಗೆ ಒಯ್ದಿದ್ದನೆಂಬುದು ಗಮನಾರ್ಹ ಸಂಗತಿ. ಪ್ಲೇಗ್ ಮತ್ತು ನ್ಯೂಟನ್‌ಗೆ ಸಂಬಂಧಪಟ್ಟಂತೆ ಇನ್ನೊಂದು ವಿಚಿತ್ರ ಸಂಗತಿಯೂ ಇದೆ. ಅದೇನೆಂದರೆ, ಪ್ಲೇಗ್ ಮಹಾಮಾರಿಯನ್ನು ತಡೆಗಟ್ಟಲಿಕ್ಕೆ ನ್ಯೂಟನ್ ಶಿಫಾರಸು ಮಾಡಿದ ಔಷಧ. ಆ ಮೂಲಕ ತಾನೊಬ್ಬ ಭೌತಶಾಸ್ತ್ರ ವಿಜ್ಞಾನಿಯಷ್ಟೇ ಅಲ್ಲ,ವೈದ್ಯನೂ ಆಗಬಲ್ಲೆ ಎಂದು ತಿಳಿಸಿದ ಪ್ರಸಂಗ. ಅದಕ್ಕೆ ಕಾರಣವೂ ಇತ್ತು. ಈಗ ಹೇಗೆ ಕೋವಿಡ್ ಮಹಾಮಾರಿ ಒಮ್ಮೆ ಇಲ್ಲಿಂದ ತೊಲಗಿದರೆ ಸಾಕು ಎಂದು ನಾವೆಲ್ಲ ಅಂದುಕೊಂಡಿದ್ದೇವೋ ಹಾಗೆಯೇ ಆಗ ಪ್ಲೇಗ್ ಮಹಾಮಾರಿಯಿಂದ ಇಂಗ್ಲೆಂಡ್ ಜನರು ಹತಾಶರಾಗಿದ್ದರು.
ಏನಾದರೂ ಔಷಧ ಕಂಡುಕೊಳ್ಳಲೇಬೇಕೆಂಬ ಛಲ ಪ್ರತಿಯೊಬ್ಬನಿಗೂ ಇತ್ತು. ನ್ಯೂಟನ್ ತಿಳಿಸಿದ ಔಷಧ ಯಾವುದು ಗೊತ್ತೇ? ಕಪ್ಪೆಯ ವಾಂತಿ! ಅದನ್ನು ತಯಾರಿಸುವ ವಿಧಾನ, ನ್ಯೂಟನ್‌ನದೇ ವಿವರಣೆ: ‘ಕಪ್ಪೆಯ ಕಾಲುಗಳನ್ನು ಕಟ್ಟಿ ತಲೆಕೆಳಗು ಮಾಡಿ ಒಂದು ಕುಲುಮೆಯಲ್ಲಿ ನೇತಾಡಿಸಬೇಕು. ಜೀವ ಹೋಗುತ್ತ ದೆನ್ನುವಾಗ ಕಪ್ಪೆಯು ತಾನು ತಿಂದ ಕ್ರಿಮಿಕೀಟಗಳನ್ನೆಲ್ಲ ಉಗುಳುತ್ತದೆ. ಅದನ್ನು ಕೆಳಗೆ ಮೇಣದ ತಟ್ಟೆಯೊಂದರಲ್ಲಿ ಸಂಗ್ರಹಿಸಬೇಕು. ಕೊನೆಗೆ ಕಪ್ಪೆಯೂ ಅದರಲ್ಲೇ ಸತ್ತು ಬೀಳುತ್ತದೆ.
ಮೇಣ, ಕಪ್ಪೆಯ ಉಗುಳು ಮತ್ತು ಕಪ್ಪೆಯ ಶರೀರದ ಭಾಗಗಳು ಎಲ್ಲವನ್ನೂ ಅರೆದು ಲೇಹದ ಚಿಕ್ಕಚಿಕ್ಕ ಬಿಲ್ಲೆಗಳಾಗಿ ಕಟ್ಟಬೇಕು. ಪ್ಲೇಗ್‌ನಿಂದಾಗಿ ಊದಿಕೊಂಡ ಭಾಗಕ್ಕೆ ಇದನ್ನು ಹಚ್ಚುವುದರಿಂದ ಅಲ್ಲಿರುವ ವಿಷ ಕರಗುತ್ತದೆ, ಸೋಂಕು ಸಹ ನಿವಾರಣೆಯಾಗುತ್ತದೆ.’ ಛೇ! ಈ ವಿಜ್ಞಾನಿಗಳೆಲ್ಲ ಪಿಯುಸಿ ಓದುವಾಗಿಂದ ಹಿಡಿದು ಕಪ್ಪೆಗೆ ಅದೆಷ್ಟು ಚಿತ್ರಹಿಂಸೆ ಕೊಡುತ್ತಾರೋ ದೇವರೇ ಬಲ್ಲ.
ನ್ಯೂಟನ್‌ನ ವೈಜ್ಞಾನಿಕ ಥಿಯರಿಗಳಿಗೆ ಜನಮನ್ನಣೆ ಸಿಕ್ಕಿತೆಂದ ಮಾತ್ರಕ್ಕೆ ಆತನ ಈ ವೈದ್ಯಕೀಯ ಥಿಯರಿಗೆ ಕವಡೆ ಕಿಮ್ಮತ್ತೂ ದೊರಕಿರಲಿಕ್ಕಿಲ್ಲ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣದ ಬಳಿಕ ೧೬೬೯ರಲ್ಲಿ ನ್ಯೂಟನ್ ಅಲ್ಲಿಯೇ ಮ್ಯಾಥಮಾಟಿಕ್ಸ್ ಪ್ರೊಫೆಸರನಾದನು. ಆದರೆ ‘ಆಬ್ಸೆಂಟ್ ಮೈಂಡೆಡ್ ಪ್ರೊಫೆಸರ್’ಗೆಅತ್ಯುತ್ತಮ ಉದಾಹರಣೆಯಾಗಿ ಇದ್ದನಂತೆ. ವಿದ್ಯಾರ್ಥಿಗಳ ಬಗ್ಗೆ ಮತ್ತು ಕಲಿಸುವಿಕೆಯ ಬಗ್ಗೆ ಸ್ವಲ್ಪವೂ ಆಸಕ್ತಿಯಿಲ್ಲ. ಆತನ ತರಗತಿ ಗಳೆಂದರೆ ವಿದ್ಯಾರ್ಥಿಗಳಿಗೂ ಆಸಕ್ತಿಯಿಲ್ಲ. ಒಮ್ಮೆಯಂತೂ ನ್ಯೂಟನ್ ಅಕ್ಷರಶಃ ‘ಗೋಡೆಗಳಿಗೆ ಪಾಠ ಮಾಡಿದ್ದೂ’ ಇದೆಯಂತೆ.
೩೦ ವರ್ಷಗಳ ಕಾಲ ಪ್ರೊಫೆಸರನಾಗಿ ದುಡಿದರೂ ನ್ಯೂಟನ್‌ನ ಗಮನವೆಲ್ಲ ಇದ್ದದ್ದು- ಕೆಲವೊಮ್ಮೆ ಊಟ ನಿದ್ದೆ ಸಹ ಮರೆತು- ವಿಜ್ಞಾನ ಸಂಶೋಧನೆಗಳ ಬಗ್ಗೆಯೇ. ಟಿಪಿಕಲ್ ವಿಜ್ಞಾನಿ ಅಂದರೆ ಹಾಗೆಯೇ ತಾನೆ? ಒಂದಾದ ಮೇಲೊಂದರಂತೆ ಸಂಶೋಧನೆಗಳನ್ನೇನೋ ಮಾಡುತ್ತಿದ್ದನು, ಆದರೆ ಅವುಗಳನ್ನುಪ್ರಕಟಿಸುವ ಆಸಕ್ತಿಯೂ ನ್ಯೂಟನ್‌ಗೆ ಇರುತ್ತಿರಲಿಲ್ಲ. ಚಲನೆ ಮತ್ತು ಗುರುತ್ವದ ಬಗೆಗಿನ ಥಿಯರಿ ಬರೆದಿಟ್ಟದ್ದಂತೂ ಎರಡು ದಶಕಗಳ ಕಾಲ ಹಾಗೇ ದೂಳು ತಿನ್ನುತ್ತ ಇತ್ತು. ಆಮೇಲೆ ಖಗೋಳತಜ್ಞ ಎಡ್ಮಂಡ್ ಹ್ಯಾಲಿಯ ಒತ್ತಾಸೆಯಿಂದಾಗಿಯಷ್ಟೇ ಪ್ರಕಟವಾಯಿತು. ೧೬೮೭ರಲ್ಲಿ ಹೊರಬಂದ ಆ ಬೃಹದ್‌ಗ್ರಂಥದ ಹೆಸರು‘ಮ್ಯಾಥಮಾಟಿಕಲ್ ಪ್ರಿನ್ಸಿಪಲ್ಸ್ ಆಫ್ ನ್ಯಾಚುರಲ್ ಫಿಲಾಸಫಿ’ ಎಂದು.
ಪುಟಪುಟದಲ್ಲೂ ಫಾರ್ಮುಲಾಗಳು, ಡಯಗ್ರಾಮ್ ಗಳು, ಗ್ರಾಫ್‌ಗಳು. ಜನಸಾಮಾನ್ಯರಿಗೆ ಬಿಡಿ, ವಿಜ್ಞಾನಿಗಳಿಗೂ ಕಬ್ಬಿಣದ ಕಡಲೆಯೇ. ಆದರೆ ನ್ಯೂಟನ್‌ಗೆ ಸಹಸ್ರಮಾನದ ಗ್ರೇಟೆಸ್ಟ್ ಸೈಂಟಿಸ್ಟ್ ಎಂಬ ಗೌರವ ತಂದದ್ದು ಆ ಸಂಪುಟವೇ. ೧೬೯೬ರಲ್ಲಿ ನ್ಯೂಟನ್‌ನನ್ನು ಲಂಡನ್‌ನ ರಾಯಲ್ ಮಿಂಟ್ ಟಂಕಸಾಲೆಯ ವಾರ್ಡನ್ ಎಂದು ನೇಮಿಸಲಾಯಿತು. ಮೂರು ವರ್ಷಗಳಲ್ಲೇ ಪದೋನ್ನತಿ ಪಡೆದು ನ್ಯೂಟನ್ ‘ಮಾಸ್ಟರ್ ಆಫ್ ದ ಮಿಂಟ್’ ಆದನು. ೧೭೨೭ರಲ್ಲಿ  ನಿಧನದ ವರೆಗೂ ಅದೇ ಹುದ್ದೆಯಲ್ಲಿದ್ದನು. ೨೦೧೬ರಲ್ಲಿ ನರೇಂದ್ರ ಮೋದಿ ಯಾವುದಕ್ಕಾಗಿ ಏನನ್ನು ಮಾಡಿದರೋ ಅದನ್ನೇ ನ್ಯೂಟನ್ ಇಂಗ್ಲೆಂಡ್‌ನಲ್ಲಿ ೧೭೦೦ರ ಸುಮಾರಿಗೆ ಮಾಡಿದ್ದನು: ಕರೆನ್ಸಿ ಅಮಾನ್ಯೀಕರಣ.
ಇಂಗ್ಲೆಂಡ್‌ನಲ್ಲಿ ನಕಲಿ ನಾಣ್ಯಗಳ ಹಾವಳಿ ವಿಪರೀತವಾಗಿತ್ತಂತೆ. ಫೋರ್ಜರಿ ಮಾಡುವವರನ್ನೆಲ್ಲ ಮಟ್ಟಹಾಕುವುದಷ್ಟೇ ಅಲ್ಲ, ಗಲ್ಲುಶಿಕ್ಷೆಗೆ ಕಳುಹಿಸುವಲ್ಲೂ ನ್ಯೂಟನ್ ಯಶಸ್ವಿಯಾದನು. ನ್ಯೂಟನ್ ಬಗೆಗಿನ ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ ೧೬೮೯ರಲ್ಲೊಮ್ಮೆ, ಆಮೇಲೆ ೧೭೦೧ರಲ್ಲೊಮ್ಮೆ, ಎರಡುವರ್ಷಗಳ ಅವಧಿಗೆ ಆತ ಬ್ರಿಟನ್ ಸಂಸತ್ತಿನಲ್ಲಿ ಮೆಂಬರ್ ಆಫ್ ಪಾರ್ಲಿಮೆಂಟ್ ಆಗಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದನು.
ಬಾಲ್ಯದಿಂದಲೂ ಅಂತರ್ಮುಖಿಯಾಗಿಯೇ ಬೆಳೆದಿದ್ದ ನ್ಯೂಟನ್ ಸಂಸತ್ತಿನಲ್ಲಿ ವಾಕ್ಪಟು ಆಗಿದ್ದನೇ? ಇಲ್ಲ. ಇಡೀ ಅಧಿವೇಶನದಲ್ಲಿ ಆತ ಮಾತಾಡಿದ್ದು ಕೇವಲ ಒಂದು ಬಾರಿ ಮಾತ್ರ. ಅದೂ, ‘ತುಂಬ ಚಳಿಯಾಗುತ್ತಿದೆ. ಆ ಕಿಟಿಕಿಯನ್ನು ಸ್ವಲ್ಪ ಮುಚ್ಚುತ್ತೀಯಾ?’ ಎಂದು ಸಹಾಯಕನೊಬ್ಬನಿಗೆ ಹೇಳುವಾಗ ಮಾತ್ರ! ಸಂಸತ್ತಿನಲ್ಲಿ ಮಾತಿನ ವಿಚಾರ ಹಾಗಾದರೆ ನ್ಯೂಟನ್‌ನ ನಗುವಿನ ವಿಚಾರದ್ದೂ ಒಂದು ಪ್ರತೀತಿ ಇದೆ. ಅದೇನೆಂದರೆ, ನ್ಯೂಟನ್‌ನ ಮುಖದಲ್ಲಿ ಮಂದಹಾಸ ಕಾಣಿಸಿಕೊಂಡದ್ದು (ಕನಿಷ್ಠ, ಜನರು ಅದನ್ನು ನೋಡಿದ್ದು) ಎರಡೇ ಎರಡು ಬಾರಿ.
ಒಮ್ಮೆ, ‘ಯೂಕ್ಲಿಡ್ಸ್ ಎಲಿಮೆಂಟ್ಸ್’ ಎಂಬ ಗಣಿತಗ್ರಂಥವನ್ನು ನ್ಯೂಟನ್‌ನಿಂದ ಎರವಲು ಪಡೆಯುತ್ತ ಒಬ್ಬಾತ ಆ ಪುಸ್ತಕದ ಬಗ್ಗೆ ನ್ಯೂಟನ್‌ನ ಅಭಿಪ್ರಾಯ ಕೇಳಿದಾಗ. ಇನ್ನೊಮ್ಮೆ ಸಂದರ್ಶಕ ನೊಬ್ಬ ‘ದೂರದ ನಕ್ಷತ್ರಗಳ ಬಗ್ಗೆ ಮಾತಾಡಿದಷ್ಟು ನೀನು ನಮ್ಮ ಸೂರ್ಯನ ಬಗ್ಗೆ ಮಾತಾಡುವುದಿಲ್ಲ ಏಕೆ?’ ಎಂದು ಪ್ರಶ್ನೆಕೇಳಿದಾಗ. ಭೌತಶಾಸ್ತ್ರ, ಖಗೋಳಶಾಸ್ತ್ರ, ಮತ್ತು ಗಣಿತದ ಹೊರತಾಗಿ ನ್ಯೂಟನ್‌ಗಿದ್ದ ಒಂದು ವಿಚಿತ್ರ ಆಸಕ್ತಿಯೆಂದರೆ ‘ರಸವಿದ್ಯೆ’. ಸೀಸ, ಕಬ್ಬಿಣ ಮೊದಲಾದ ಅಗ್ಗದ ಲೋಹಗಳನ್ನು ಚಿನ್ನವಾಗಿಸುವ ರಹಸ್ಯ ಭೇದಿಸುವ ಪ್ರಯತ್ನ. ನ್ಯೂಟನ್ ಅದನ್ನು ರಹಸ್ಯವಾಗಿಯೇ ಇಟ್ಟಿದ್ದನು. ಅದರ ಸಂಶೋಧನೆಗಳ ಬಗ್ಗೆ ಬರೆದದ್ದೂಗುಪ್ತ ಸಂಕೇತಗಳ ಮೂಲಕ. ಬೈಬಲ್‌ನಲ್ಲಿ ಅದರ ಬಗ್ಗೆ ಏನಾದರೂ ರಹಸ್ಯಸಂದೇಶಗಳು ಸಿಗಬಹುದೇ ಎಂದು ಬೈಬಲ್ ಅನ್ನು ಭೂತಗನ್ನಡಿಯಿಟ್ಟು ವಿಶ್ಲೇಷಣೆ ಮಾಡಿದ್ದೂ ಇದೆ. ಕ್ರಿಸ್ತಶಕ ೨೦೬೦ರಲ್ಲಿ ಪ್ರಳಯವಾಗಿ ಜಗತ್ತು ಮುಳುಗುತ್ತದೆಂದು ನ್ಯೂಟನ್ ನ ಒಂದು ಲೆಕ್ಕಾಚಾರವೂ ಇದೆಯಂತೆ.
ಹಾಗಾದರೆ ಕೋವಿಡ್ ನಿಂದ ಜಗತ್ತು ಮುಳುಗಿತು ಎನ್ನುವವರು, ಬ್ರಹ್ಮಾಂಡ ಬುರುಡೆ ಜ್ಯೋತಿಷಿಗಳು, ಕೂಗುಮಾರಿ ಸುದ್ದಿವಾಹಿನಿಗಳು, ಪ್ರಳಯವಾಗುತ್ತ ದೆಂದು ಕವರ್‌ಸ್ಟೋರಿ ಪ್ರಕಟಿಸುವ ‘ಸಮಗ್ರ ಕುಟುಂಬಕ್ಕೆ ಸಮೃದ್ಧ ಸಾಪ್ತಾಹಿಕ’ಗಳು ಇದನ್ನು ಗಮನಿಸಬೇಕು: ಇನ್ನೂ ಬರೋಬ್ಬರಿ ೩೮ ವರ್ಷಗಳಿವೆ ಪ್ರಳಯವಾಗಲಿಕ್ಕೆ! ನ್ಯೂಟನ್‌ಗೆ ‘ಸ್ವಂತಿ’(ಸೆಲಿ) ಗಳ ಹುಚ್ಚೂ ವಿಪರೀತ ಇತ್ತು ಅಂದರೆ ನೀವು ನಂಬಲೇಬೇಕು. ಏನು, ಸ್ವಂತಿ ಕ್ಲಿಕ್ಕಿಸಲಿಕ್ಕೆ ನಾಲ್ಕು ಶತಮಾನ ಗಳ ಹಿಂದೆ ಮೊಬೈಲ್ ಫೋನ್ ಕ್ಯಾಮೆರಾಗಳಿದ್ದವೇ ಎಂದು ಕೇಳಬೇಡಿ. ನ್ಯೂಟನ್‌ನ ಸ್ವಂತಿ ಅಂದರೆ ವೃತ್ತಿಪರ ಚಿತ್ರಕಾರರ ಕೈಯಿಂದ ತನ್ನ ಭಾವಚಿತ್ರ ಪೇಂಟಿಂಗ್ ಬಿಡಿಸಿಕೊಳ್ಳುವುದು. ಬದುಕಿನ ಕೊನೆಯ ಘಟ್ಟದಲ್ಲಂತೂ ಸುಮಾರು ೧೫-೨೦ ಬೇರೆಬೇರೆ ಸ್ವಂತಿ ಭಾವಚಿತ್ರಗಳನ್ನು ಬೇರೆಬೇರೆ ಚಿತ್ರಕಾರರಿಂದ ಮಾಡಿಸಿಕೊಂಡಿದ್ದನಂತೆ. ಜೀವನದುದ್ದಕ್ಕೂ ಅಂತರ್ಮುಖಿಯಾಗಿದ್ದ, ಪ್ರಚಾರ ಬಯಸದ ವ್ಯಕ್ತಿಯ ಮಟ್ಟಿಗೆ ಇದು ಸ್ವಲ್ಪ ಅಚ್ಚರಿಯ ಸಂಗತಿಯೇ. ನ್ಯೂಟನ್ ಒಮ್ಮೆ ತನ್ನ ಕಣ್ಣಿಗೆ ಸೂಜಿ ಚುಚ್ಚಿಕೊಂಡ ಘಟನೆಯೂ ಇದೆ.
ಅದು ‘ಸೂಚೀರಂಧ್ರ ಬಿಂಬಗ್ರಾಹಿ’ ಕ್ಯಾಮೆರಾ ಹೇಗೆ ಕೆಲಸ ಮಾಡುತ್ತದೆಂದು ತಿಳಿಯಲಿಕ್ಕೆ ಕೈಗೊಂಡ ಪ್ರಯೋಗ ಅಲ್ಲ. ಮನುಷ್ಯನ ದೃಷ್ಟಿಸಾಮರ್ಥ್ಯ, ಬಣ್ಣಗಳನ್ನು ಗುರುತಿಸುವ ಶಕ್ತಿಯ ಬಗ್ಗೆ ಸಂಶೋಧನೆಯಲ್ಲಿ ನ್ಯೂಟನ್ ತನ್ನ ಪ್ರಯೋಗಕ್ಕೆ ತಾನೇ ಗಿನ್ನಿ ಪಿಗ್ ಆಗಲು ಮುಂದಾದದ್ದು. ಬಟ್ಟೆ ಹೊಲಿಯುವ ಉದ್ದದ ಸೂಜಿಯೊಂದನ್ನು ತನ್ನ ಕಣ್ಣು ಮತ್ತು ಹತ್ತಿರದ ಮೂಳೆಯ ನಡುವಿನ ಜಾಗದಲ್ಲಿ ಚುಚ್ಚಿಕೊಂಡು ಪ್ರಯೋಗ ಮಾಡಿದ್ದು. ‘ನನ್ನ ಅಕ್ಷಿಪಟಲದ ಹಿಂಭಾಗಕ್ಕೆ ತಾಗುವಂತೆ ಚುಚ್ಚಿಕೊಂಡೆ. ದೃಷ್ಟಿಸಾಮರ್ಥ್ಯದ ಮೇಲೆ ಏನು ಪರಿಣಾಮ ಆಗುತ್ತದೆಂದು ಕಂಡುಕೊಳ್ಳುವುದು ನನ್ನ ಉದ್ದೇಶವಾಗಿತ್ತು’ ಅಂತ ನ್ಯೂಟನ್ ಬರೆದುಕೊಂಡಿದ್ದನು. ‘ಬಿಳಿ, ಕಪ್ಪು, ಮತ್ತು ಬಣ್ಣಬಣ್ಣಗಳ ವೃತ್ತಗಳು ಕಂಡುಬಂದವು’ ಎಂದು ಫಲಿತಾಂಶದ ಬಗ್ಗೆಯೂ ಬರೆದುಕೊಂಡಿದ್ದನು. ಒಟ್ಟಿನಲ್ಲಿನ್ಯೂಟನ್ ಒಬ್ಬ ವಿಚಿತ್ರ ಮನುಷ್ಯನೇ ಆಗಿದ್ದನು ಎಂಬುದಕ್ಕೆ ಇದೂ ಒಂದು ಪುರಾವೆ.
೧೭೦೫ರಲ್ಲಿ ಬ್ರಿಟಿಷ್ ಕ್ವೀನ್ ಆನ್‌ಳ ಆಡಳಿತದಲ್ಲಿ ನ್ಯೂಟನ್ ನೈಟ್‌ಹುಡ್ ಪದವಿ ಪುರಸ್ಕೃತನಾದನು. ‘ಸರ್ ಐಸಾಕ್ ನ್ಯೂಟನ್’ ಎಂದು ಕರೆಸಿಕೊಂಡನು. ಅಷ್ಟು ಹೊತ್ತಿಗೆಲ್ಲ ಅಮ್ಮನ ನಿಧನಾನಂತರ ಸಿಕ್ಕಿದ ಆಸ್ತಿಯಿಂದಾಗಿ ಆತ ಸಾಕಷ್ಟು ಶ್ರೀಮಂತಿಕೆ ಯನ್ನೂ ಗಳಿಸಿದ್ದನು. ಎರಡು ದೊಡ್ಡ ಸಂಶೋಧನಾಗ್ರಂಥಗಳೂಪ್ರಕಟವಾಗಿದ್ದವು. ೧೭೨೭ರಲ್ಲಿ ೮೪ರ ಏರುಪ್ರಾಯದಲ್ಲಿ ನ್ಯೂಟನ್ ಇಹಲೋಕದ ಯಾತ್ರೆ ಮುಗಿಸಿದನು. ಬ್ರಿಟಿಷ್ ರಾಜಮನೆತನ ದವರ, ಚಾರ್ಲ್ಸ್ ಡಾರ್ವಿನ್, ಚಾರ್ಲ್ಸ್ ಡಿಕನ್ಸ್, ಡೇವಿಡ್ ಲಿವಿಂಗ್‌ಸ್ಟೋನ್‌ನಂತಹ ಪ್ರಮುಖರ ಸಮಾಧಿಗಳಿರುವ ವೆಸ್ಟ್ಮಿನ್ಸ್‌ಟರ್ ಎಬ್ಬೆ ಪ್ರದೇಶದಲ್ಲಿಯೇ ನ್ಯೂಟನ್‌ನ ಸಮಾಧಿಕಟ್ಟಲಾ ಯಿತು. ‘ತಲೆಮೇಲೆ ಸೇಬು ಬಿದ್ದು ಜ್ಞಾನೋದಯವಾದವನು’ ಎಂದು ಮನುಕುಲವೆಲ್ಲ ಆತನ ನೆನಪಿಟ್ಟುಕೊಂಡಿತು.