ಪಾದಯಾತ್ರೆ ರಾಜಕೀಯ ಗೊತ್ತಾಗಲ್ಲ, ಆದರೆ ಪರಿಸರ ?
ಸುಪ್ತ ಸಾಗರ
ರಾಧಾಕೃಷ್ಣ ಎಸ್‌. ಭಡ್ತಿ
@.
ಕಾವೇರಿ, ಮಲೆಮಹದೇಶ್ವರ ಬೆಟ್ಟಗಳು ಮತ್ತು ಬಿಳಿಗಿರಿರಂಗನ ಬೆಟ್ಟದ ನಡುವಿನ ಅರಣ್ಯದ ಸೌಂದರ್ಯವೆಂದರೆ ಅದು ಅಸಾದೃಶ್ಯ. ಯಾರಿಂದಲೂ ಇಂಥ ಪುರಾತನ ಭೂದೃಶ್ಯದ ಪುನರ್ ನಿರ್ಮಾಣ ವಾಗಲೀ, ಇಲ್ಲಿನ ಹುಲಿ, ಆನೆ, ಚಿರತೆ, ಕರಡಿ ಸೇರಿದಂತೆ ಜೀವಿಗಳ ಪುನರ್ವಸತಿಯಾಗಲೀ ಸಾಧ್ಯವೇ ಇಲ್ಲ. ವಿಶಾಲ ವ್ಯಾಪ್ತಿಯಲ್ಲಿ ಸ್ವಚ್ಛಂದವಾಗಿದ್ದ ವನ್ಯಜೀವಿಗಳಿಗೆ ಈವರೆಗೆ ಭಯವಿರಲಿಲ್ಲ.
ಇವತ್ತು ನಿನ್ನೆಯದಲ್ಲವೇ ಅಲ್ಲ ಈ ಯೋಜನೆ. ನಾವು-ನೀವು, ಪಾದಯಾತ್ರೆಗೆ ಹಠತೊಟ್ಟಿರುವ ಡಿ. ಕೆ. ಶಿವಕುಮಾರ್ ಬಿಡಿ, ಅವರಪ್ಪ, ಅಜ್ಜನೂ ಹುಟ್ಟಿರಲಿಲ್ಲ. ಅದಕ್ಕಿಂತ ಮೊದಲೇ ರೂಪುಗೊಂಡದ್ದು ಮೇಕೆದಾಟು ಯೋಜನೆ. ಹಾಗೆ ನೋಡಿದರೆ, ಕಾವೇರಿ ನದಿಗೆ ಅಡ್ಡಲಾಗಿ ಈಗಿರುವ ಶಿವನ ಸಮುದ್ರ ಯೋಜನೆ ಯಾಗಲೀ, ರಾಜ್ಯದ ಬೃಹತ್ ಲಿಂಗನಮಕ್ಕಿ ಯೋಜನೆಯಾಗಲೀ, ಅವೆಲ್ಲ ಏಕೆ? ಏಷ್ಯಾದಲ್ಲೇ ಯಾವುದೇ ನೀರಾವರಿ ಯೋಜನೆಗಳು ಹುಟ್ಟಿಕೊಳ್ಳುವ ಮೊದಲೇಅಂದರೆ ೧೮೪೮ರಲ್ಲೇ ಇಂಥದ್ದೊಂದು ಪರಿಕಲ್ಪನೆ ಮೇಕೆದಾಟು ಬಗ್ಗೆ ಹುಟ್ಟಿಕೊಂಡಿತ್ತು.
ಆದರೆ, ಅದು ಶುದ್ಧ ದೇಸಿ ಕಲ್ಪನೆಯ ಒಡ್ಡು. ಅದ್ಯಾಕೆ ಆಗಲಿಲ್ಲವೋ ಗೊತ್ತಿಲ್ಲ. ಅಂತೂ ನೂರು ವರ್ಷಗಳ ಬಳಿಕ ಭಾರತ ಸ್ವತಂತ್ರವಾದ ಹೊಸ್ತಿಲಲ್ಲಿ ೧೯೪೮ರಲ್ಲಿ ಮತ್ತೆ ಯೋಜನೆಯ ಸ್ವರೂಪ ಪಡಕೊಂಡಿತ್ತು. ರಾಜ್ಯಗಳ ಪುನರ್‌ವಿಂಗಡಣೆ (೧೯೫೬)ಸಂದರ್ಭದಲ್ಲಿ ಮತ್ತೆ ಈ ಬಗೆಗಿನ ಚರ್ಚೆ ಮುನ್ನೆಲೆಗೆ ಬಂತಾದರೂ ಅದು ಅಷ್ಟೊಂದು ಮಹತ್ವ ಪಡೆದಿಲ್ಲ. ನಂತರದ ದಿನಗಳಲ್ಲಿ ಕಾವೇರಿ ‘ಕದನ ಸ್ವರೂಪ’ ಪಡೆದು ಕರ್ನಾಟಕ-ತಮಿಳುನಾಡು ಕಿತ್ತಾಟ ಶುರುವಾದದ್ದು ಇತಿಹಾಸ. ಅದ್ಯಾಕೋ ೧೯೬೦ರ ಬಳಿಕ ಈ ಬಗ್ಗೆ ಸುದ್ದಿಯನ್ನೇ ತೆಗೆದಿರಲಿಲ್ಲ ಆಡಳಿತಕ್ಕೆ ಬಂದ ಯಾರೊಬ್ಬರೂ!
ಆದರೆ ಕಾವೇರಿ ಐತೀರ್ಪು ಹೊರಬಿದ್ದ ಬಳಿಕ ೯೦ರ ದಶಕದಿಂದೀಚೆಗೆ ಮೇಲಿಂದ ಮೇಲೆ ಮೇಕೆದಾಟು ಹರಿದಾಡು ತ್ತಿದೆ ರಾಜಕಾರಣಿಗಳ ಬಾಯಲ್ಲಿ. ಹೀಗಾಗಿ ತಮ್ಮ ಅವಧಿಯಲ್ಲಿ ಎಂದು ಬೆನ್ನು ತಟ್ಟಿಕೊಳ್ಳುತ್ತಿರುವ ಈಗಿನ ಕಾಂಗ್ರೆಸ್ ನಾಯಕರಾಗಲೀ, ಜೆಡಿಎಸ್ ಮುಖಂಡರಾಗಲೀ ‘ಮೇಕೆದಾಟು ಯೋಜನೆ’ ಹುಟ್ಟಿದಾಗ ಹುಟ್ಟಿಯೇ ಇರಲಿಲ್ಲ. ಅದೆಲ್ಲ ಇರಲಿ. ಈಗಿನದ್ದೇನು? ಮೇಕೆದಾಟು ಪರಿಸರದಲ್ಲಿ ಅಣೆಕಟ್ಟು ಕಟ್ಟಿ ಕಾವೇರಿಯಲ್ಲಿ ಮಳೆಗಾಲದಲ್ಲಿ ಹರಿದು ಹೋಗಿ ಸಮುದ್ರ ಸೇರುತ್ತಿರುವ ಸರಿಸುಮಾರು ೬೫-೬೬ ಟಿಎಂಸಿ ಹೆಚ್ಚುವರಿ ನೀರನ್ನು ಹಿಡಿದಿಟ್ಟಕೊಂಡು ಅದರಿಂದ ಬೆಂಗಳೂರಿನ ರಕ್ಕಸ ದಾಹಕ್ಕೆ ಒಂದಿಷ್ಟು ನೀರು ಬಿಡಿಬೇಕು,ಅಲ್ಲದೆ ಟರ್ಬೈನ್ ಅಳವಡಿಸಿ ಭಾರೀ ಪ್ರಮಾಣದಲ್ಲಿ ಕರೆಂಟು ಉತ್ಪಾದಿಸಬೇಕು; ಜತೆಗೆ ಬೇಸಿಗೆಯಲ್ಲಿ ನಮಗೂ ನೀರು ಸಿಗುತ್ತದೆ.
ಕಾವೇರಿ ನದಿನೀರು ಹಂಚಿಕೆಯನ್ವಯ ತಮಿಳುನಾಡಿಗೂ ನೀರುಬಿಡಲಾಗುತ್ತದೆ ಎಂಬುದು ರಾಜ್ಯ ಸರಕಾರ ರೂಪಿಸಿರುವ ಯೋಜನೆ. ಹುಚ್ಚುಕೋಡಿಯಂತೆ ಬೆಳೆಯುತ್ತಿರುವ ಬೆಂಗಳೂರೆಂಬ ಬೆಂಗಳೂರಿಗೆ ನೀರು ಕುಡಿಸಿ ಮುಗಿಯೋದೇನಾದ್ರೂ ಉಂಟಾ? ಮೇಕೆದಾಟೊಂದೇ ಅಲ್ಲ. ಇಡೀ ಕಾವೇರಿಯನ್ನೇ ಬೆಂಗಳೂರು ನಗರಕ್ಕೆ ಹರಿಸಿದರೂ, ಮತ್ತೂ ಇಂಗದ ದಾಹ ಬೆಂಗಳೂರಿನದ್ದು. ಏಕೆಂದರೆ ಇಲ್ಲಿರುವ ಯಾರೊಬ್ಬರಿಗೂ ನೀರಿನ ಕಾಳಜಿ ಇಲ್ಲ. ಮಳೆ ನೀರಿನ ಮೌಲ್ಯ ಗೊತ್ತಿಲ್ಲ.ಮೇಕೆದಾಟು, ಕಾವೇರಿ ಅಂತಲೇ ಅಲ್ಲ ಇನ್ನಾವುದೇ ಯೋಜನೆಗಳಿರಲಿ, ವಿವಾದಗಳಿರಲಿ ಮಹಾನಗರದ ಶೇ.೬೮ರಷ್ಟು ಜನರಿಗೂ ಅದಕ್ಕೂ ಸಂಬಂಧವೇ ಇಲ್ಲ. ‘ನಾವು ತೆರಿಗೆ ಕಟ್ಟುತ್ತಿದೇವೆ; ಸರಕಾರ ನಮಗೆ ನೀರುಕೊಡಬೇಕು. ಎಲ್ಲಿಂದಾದರೂ ತರಲಿ’ ಎಂಬುದಷ್ಟೇ ಧೋರಣೆ.
ಏಕೆಂದರೆ ಅವರಾರೂ ಬೆಂಗಳೂರಿನವರಲ್ಲವೇ ಅಲ್ಲ. ಇಂತಿಪ್ಪ ಮನೋಭಾವ ತಣಿಸಲೆಂದೇ ೧,೩೫೦ ಮಿಲಿಯನ್ ಲೀಟರ್ ಕಾವೇರಿ ನೀರು ಪ್ರತಿದಿನ ನೂರು ಕಿ.ಮೀ.ಗೂ ಹೆಚ್ಚು ದೂರದಿಂದ ಹರಿದು ಬಂದು ಮನೆಮನೆಗೆ ಸೇರುತ್ತಿದೆ. ಇನ್ನು ಹದಿನೈದು ವರ್ಷಗಳಲ್ಲಿ ಇದಕ್ಕಿಂತ ದುಪ್ಪಟ್ಟು (೨೨೮೫ ಮಿಲಿಯನ್ ಲೀಟರ್) ನೀರು ಬೇಕಾಗುತ್ತದಂತೆ. ಈ ನಡುವೆ ತಮಿಳುನಾಡಿಗೆ ಅದರ ಪಾಲಿನ ೧೭೭ ಟಿಎಂಸಿ ನೀರನ್ನು ಕೊಡಲೇ ಬೇಕಲ್ಲಾ?! ಇದಕ್ಕಾಗಿ ದೂರಾಲೋಚನೆಯಿಂದಈಗ ಮೇಕೆದಾಟು ಯೋಜನೆಗೆ ಮುಂದಾಗಿದ್ದು ಎಂಬುದು ಸರಕಾರದ ಸಮರ್ಥನೆ.
ಮೇಕೆದಾಟು ಪರಿಸರದಲ್ಲಿ ಮುಗ್ಗೂರು ಅರಣ್ಯವಲಯ ಶ್ರೀಮಂತ ಸಸ್ಯ-ಜೀವ ವೈವಿಧ್ಯವಿರುವ ಪ್ರದೇಶ. ಪಕ್ಕದಲ್ಲೇ ಇರುವುದು ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ವಲಯ. ಅವರೆಡರ ನಡುವೆ, ಸಂಗಮ ಹಾಗೂ ಮೇಕೆದಾಟು ಮಧ್ಯದಲ್ಲಿ ಒಂಟಿಗುಂಡು ಅಂತೊಂದು ಜಾಗ ಇದೆ. ಅಲ್ಲೇ ಕಾವೇರಿಯನ್ನು ಮತ್ತೊಮ್ಮೆ ಅಡ್ಡಗಟ್ಟಿ ನಿಲ್ಲಿಸಿ ನೀರು ಸಂಗ್ರಹಿಸಲಾಗುತ್ತದೆ ಅಂತ ಯೋಜನೆ ಹೇಳುತ್ತದೆ. ಯೋಜಿತ ಅಣೆಕಟ್ಟೆಯಿಂದ ಎರಡು ಕಿ.ಮೀ ದೂರದಲ್ಲಿ ಜಲವಿದ್ಯುತ್ ಕೇಂದ್ರ. ಮೊದಲೇ ಹೇಳಿದಂತೆ ಒಂದೂವರೆ ಶತಮಾನದ ಹಿಂದಿನಿಂದ, ತೀರಾ ಇತ್ತಿಚಿನವರೆಗೂ ಹಲವು ಬಾರಿ ಇದೇ ಜಾಗದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳಲು ಸಣ್ಣ ಸಣ್ಣ ಒಡ್ಡುಗಳನ್ನು, ಸಿಮೆಂಟ್ ಕಟ್ಟೆಗಳನ್ನು ಕಟ್ಟುತ್ತಲೇ ಬರಲಾಗಿತ್ತು.
ಅದ್ಯಾವುದೂ ಇಲ್ಲ ಈಗ. ಬೃಹತ್ ಮಟ್ಟದಲ್ಲಿ ಯೋಜಿತ ಪ್ರಯತ್ನ ಆಗುತ್ತಿರುವುದು ಇದೇ ಮೊದಲು. ಕುಡಿಯುವ ನೀರು, ನೀರಾವರಿ ಹಾಗೂ ವಿದ್ಯುತ್ಉತ್ಪಾದನೆಗೆಂದು ಯೋಜಿಸಲಾಗಿರುವ ಯೋಜನೆಯ ವೆಚ್ಚ ೫,೯೧೨ ಕೋಟಿ ರುಪಾಯಿಗಳು. ೪೪೧.೨ ಮೀಟರ್ ಎತ್ತರದ ಅಣೆಕಟ್ಟೆ ತಲೆ ಎತ್ತುತ್ತದೆ. ಇದರಲ್ಲಿ ೪೪೦ ಮೀ.ನಲ್ಲಿ ೬೪ ಟಿಎಂಸಿ ನೀರು ನಿಲ್ಲುತ್ತದೆ. ೪೦೦ ಮೆಗಾವ್ಯಾಟ್ ವಿದ್ಯುತ್ ಜನರೇಟ್ ಮಾಡಿಕೊಳ್ಳುವ ಗುರಿ ಇದೆ. ಇಷ್ಟೆಲ್ಲ ಆಗುವ ಹೊತ್ತಿಗೆ ಸುತ್ತಮುತ್ತಲಿನ ಸುಮಾರು ೪,೯೯೬ ಹೆಕ್ಟೆರ್ ಮುಳುಗಿಹೋಗಬಹುದು. ಇದರಲ್ಲಿ ಶೇ.೯೦ರಷ್ಟು ಅರಣ್ಯ.
ಉಳಿದದ್ದು ಕಂದಾಯ ಭೂಮಿ. ಸುತ್ತಮುತ್ತಲಿನ ಆರೇಳು ಕಿ.ಮೀ. ಪ್ರದೇಶದ ಹಳ್ಳಿಗಳಾದ ಬೊಮ್ಮಸಂದ್ರ, ಗಾಳೆಬೋರೆ, ಮಡಿವಾಳ, ಕೊಗ್ಗೆದೊಡ್ಡಿ (ಮಾವಳ್ಳಿ),ನೆಲ್ಲೂರು ದೊಡ್ಡಿ, ಸಂಪತಗೆರೆ ದೊಡ್ಡಿಯ ಜನ, ‘ತೊಂದರೆ ಇಲ್ಲ ಬಿಡಿ. ಜನಕ್ಕೆ ಒಳ್ಳೇದಾಗೋದಾದರೆ ನಾವು ಇಲ್ಲಿಂದ ಬೇರೆಲ್ಲಿಗಾದರೂ ಹೋಗ್ತೇವೆ’ ಅಂತ ಈಗಾಗಲೇ ಹೇಳಿದ್ದಾರೆ ಅಂತಾರೆ ಅಽಕಾರಿಗಳು. ಶಿವಾಂಕರೇಶ್ವರ ಸ್ವಾಮಿ ದೇವಸ್ಥಾನ, ಎಲೆ ಮಾರಮ್ಮ, ಬಸವೇಶ್ವರ , ಸಿದ್ದಪ್ಪಾಜಿ ದೇವಾಲಯ, ಮರಿಯಮ, ಸಂಗಮೇಶ್ವರ ಸೇರಿ ಐದಾರು ಧಾರ್ಮಿಕ ಸ್ಥಳಗಳಿವೆ. ಮನುಷ್ಯರೇ ಇಲ್ಲ ಅಂದ ಮೇಲೆ ದೇವರಿದ್ದು ಏನು ಮಾಡುವುದು? ಅವನಿಗೆಲ್ಲಿಯ ಬೆಲೆ? ದೇವರುಗಳೂಜನರ ಹಿಂದೆಯೇ ಹೋಗಬಹುದು, ಅದೇನೂ ದೊಡ್ಡ ವಿಚಾರವಲ್ಲ.
ಆದರೆ. ಈ ಕಾಡಿದೆಯಲ್ಲ, ಅದರೊಳಗೆ ಸಾವಿರಾರು ನಮೂನೆ ಜೀವಿಗಳಿವೆ. ವನ್ಯ ಸಂಕುಲವಿದೆ. ಆನೆಗಳಿವೆ. ಜಿಂಕೆಗಳಿವೆ. ಇವೆಲ್ಲ ಇದ್ದ ಮೇಲೆ ಹುಲಿ, ಚಿರತೆ ಬಂದು ಹೋಗುಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಇಷ್ಟೆಲ್ಲ ವಿವಾದ ಇದ್ದರೂ ತಮಿಳುನಾಡಿಂದ ಇಲ್ಲಿಗೆ, ಇಲ್ಲಿಂದ ತಮಿಳುನಾಡಿಗೆ ಆನೆಗಳು ಓಡಾಡುತ್ತಲೇ ಇರುತ್ತವೆ. ಅವು ತಮಿಳು ಆನೆಗಳೋ, ಕನ್ನಡದ ಆನೆಗಳೋ ಗೊತ್ತಿಲ್ಲ; ಯಾರೂ ಮಾತಾಡಿಸಿ ನೋಡಿದಂತಿಲ್ಲ. ಆನೆಗಳಿಗೆ ಮೇಕೆದಾಟು ಬಹುದೊಡ್ಡ ಕಾರಿಡಾರ್; ಹೆದ್ದಾರಿ. ಯೋಜನೆಯಿಂದ ಮುಳುಗಡೆಯಾದರೆ; ಇವೆಲ್ಲ ಎಲ್ಲಿಗೆ ಹೋಗುತ್ತವೋ? ಬಹುಶಃ ಯೋಜನೆಗೆ ಮುನ್ನ ಅವುಗಳ ಬಳಿ ಯಾರೂ ಕೇಳಿದಂತೆಯೇ ಇಲ್ಲ.
ಇಲ್ಲಿ ಎರಡು ಪ್ರಶ್ನೆ, ಈ ಯೋಜನೆಗೆ ಖರ್ಚಮಾಡುವ ಕಾಲ ಭಾಗ ದುಡ್ಡಿನಲ್ಲಿ ಬೆಂಗಳೂರಿನಲ್ಲಿ ಬೀಳೋ ಮಳೆ ನೀರು ಹಿಡಕೊಳ್ಳಲು ಆಗೋದಿಲ್ಲವೇ? ಇನ್ನೊಂದು ಅತ್ಯಂತ ಪ್ರಾಚೀನ ಪರಂಪರೆಯ ಅಭಯಾರಣ್ಯದ ಮೌಲ್ಯ, ನಿಮ್ಮ ನೀರಾವರಿ ಯೋಜನೆಯ ಯೋಜನಾ ವೆಚ್ಚಕ್ಕಿಂತ ಎಷ್ಟುಪಟ್ಟು ಹೆಚ್ಚು ಎಂಬುದು ಗೊತ್ತೇ? ಯೋಜನೆಯಿಂದ ಕಾವೇರಿ ಅಭಯಾರಣ್ಯದ ಸುತ್ತಲಿನ ೫೩ ಚದರ ಕಿಲೋಮೀಟರ್‌ಗಳ ಕಾಡು ಮುಳುಗುತ್ತದೆ ಎಂಬುದು ಸದ್ಯದ ಅಂದಾಜು.
ಸಂಗ್ರಹಿಸಬಹುದಾದ ನೀರು, ಉತ್ಪಾದಿಸಬಹುದಾದ ವಿದ್ಯುತ್, ಆಗಬಹುದಾದ ಹಣದ ವೆಚ್ಚ, ಮುಳುಗಬಹುದಾದ ಜಮೀನು, ಅವರಿಗೆ ಕೊಡಬೇಕಾಗಿ ಬರಬಹುದಾದ ಪರಿಹಾರ ಎಲ್ಲ ಲೆಕ್ಕಾಚಾರ ಮಾಡುವಾಗ, ಆಡಿಟಿಂಗ್ ತೆಗೆಯುವಾಗ ಈ ನೈಸರ್ಗಿಕ ಸಂಪನ್ಮೂಲಗಳು ನಾಶವಾಗುವುದುರಿಂದ ಆಗುವ ನಷ್ಟ, ಪ್ರಾಣಿಗಳ ಪುನರ್ವಸತಿ, ಸ್ಥಳಾಂತರಕ್ಕೆ ಬೇರೆ ಕಾಡಿನ ಜಾಗ ಇವನ್ನೆಲ್ಲ ಯೋಜಿಸಿದ್ದೀರಿ ತಾನೆ? ಹಾಗಲ್ಲದಿದ್ದರೆ ಈ ಅಭಿವೃದ್ಧಿ ಲಾಭದಾಯಕ ಅಂತ ಹೇಗೆತೀರ್ಮಾನಿಸಿಬಿಟ್ಟಿರಿ? ಈಗಿರುವವರು ಎಂತಲೇ ಅಲ್ಲ, ಈವರೆಗಿನ ಎಲ್ಲ ಅಣೆಕಟ್ಟುಗಳಂಥ ಅಭಿವೃದ್ಧಿ(?)ಗೆ ಯೋಜಿಸಿದವರ ಪಾಡೂ ಇದೇ!
ಕಾವೇರಿ, ಮಲೆಮಹದೇಶ್ವರ ಬೆಟ್ಟಗಳು ಮತ್ತು ಬಿಳಿಗಿರಿರಂಗನ ಬೆಟ್ಟದ ನಡುವಿನ ಅರಣ್ಯದ ಸೌಂದರ್ಯವೆಂದರೆ ಅದು ಅಸಾದೃಶ್ಯ. ಬಹುಶಃ ಯಾರಿಂದಲೂ ಇಂಥ ದ್ದೊಂದು ಪುರಾತನ ಭೂದೃಶ್ಯದ ಪುನರ್ ನಿರ್ಮಾಣ ವಾಗಲೀ, ಇಲ್ಲಿನ ಹುಲಿ, ಆನೆ, ಚಿರತೆ, ಕರಡಿ ಸೇರಿದಂತೆ ಜೀವಿಗಳ ಪುನರ್ವಸತಿಯಾಗಲೀ ಸಾಧ್ಯವೇ ಇಲ್ಲ. ವಿಶಾಲ ವ್ಯಾಪ್ತಿಯಲ್ಲಿ ಸ್ವಚ್ಛಂದವಾಗಿ ಸಂಚರಿಸುವ ವನ್ಯಜೀವಿಗಳಿಗೆ ಈವರೆಗೆ (ವೀರಪ್ಪನ್ ಇದ್ದಾಗಲೂ) ಯಾರಿಂದಲೂ ಭಯವಿರಲಿಲ್ಲ. ಮುಳುಗಡೆಯಾಗಲಿರುವ ಪ್ರದೇಶ ಮೊದಲ ಎರಡು ಭಾಗ ಪೂರ್ವ ಘಟ್ಟಗಳ ಪರ್ವತ ಶ್ರೇಣಿಗೂ, ಕೊನೆಯ ಒಂದು ಭಾಗ ಪೂರ್ವ ಮತ್ತು ಪಶ್ಚಿಮ ಎರಡೂ ಸಂಧಿಸುವ ಘಾಟ್‌ಗೂ ಸೇರುತ್ತದೆ. ಇಂಥ ಅಪರೂಪದ ನಿತ್ಯ ಹರಿದ್ವರ್ಣ ಸಸ್ಯಗಳ, ಅನನ್ಯ ಜೀವವೈವಿಧ್ಯದ ತಾಣ, ಅಪೂರ್ವ ಭೂದೃಶ್ಯದ ಪುನರ್ ನಿರ್ಮಾಣ ಬೇರಿನ್ನೆಲ್ಲಿ ಸಾಧ್ಯವಾದೀತು? ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಉತ್ತರಕ್ಕೆ ಕಾವೇರಿ ಅಭಯಾರಣ್ಯ ಮತ್ತು ತಮಿಳುನಾಡಿನ ಕಾಡುಗಳು- ಹೀಗೆ ೧೯೭೨ ರ ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಸಂರಕ್ಷಿತ ಒಟ್ಟು ಮೂರು ಸಂರಕ್ಷಿತ ಪ್ರದೇಶಗಳು ಮೇಕೆದಾಟು ಸುತ್ತಲಿನ ೨ಸಾವಿರ ಚದರ ಕಿ.ಮೀನಲ್ಲಿ ಬರುತ್ತವೆ.
ದೇಶದಲ್ಲೇ ಅಪರೂಪವಾಗಿರುವ, ಒಂದಕ್ಕೊಂದು ಬೆಸೆದುಕೊಂಡಿರುವ ಮೂರು ವಿಭಿನ್ನ ಅರಣ್ಯಪ್ರದೇಶಗಳಿವು. ಉತ್ತರಕನ್ನಡ ಜಿಲ್ಲೆಯ ಪಶ್ಚಿಮಘಟ್ಟ ಪ್ರದೇಶಗಳಷ್ಟೇ ಪ್ರಾಚೀನತೆ ಇದಕ್ಕಿದೆ ಎನ್ನುತ್ತಾರೆ ತಜ್ಞರು. ಮೈಸೂರು ಕರ್ನಾಟಕ ಭಾಗದ ಅದರಲ್ಲೂ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ತಾಪಮಾನ ರಕ್ಷಣೆಯಲ್ಲಿ ಈ ಕಾಡಿನ ಪಾತ್ರ ಪ್ರಮುಖವಾದದ್ದು. ಇಂಗಾಲದ ಪರಿಣಾಮ ( ಕಾರ್ಬನ್ ಸೀಕ್ವೆಸ್ಟ್ರೇಷನ್)ದಲ್ಲೂ ಈ ಕಾಡು ಮುಖ್ಯ. ನಿಮಗೆ ಗೊತ್ತೇ? ಏಷ್ಯಾದಲ್ಲೇ ಅತ್ಯಪರೂಪದ ಮಶೀರ್ ಮೀನುಗಳು, ಮೊಸಳೆಗಳು, ನೀರುನಾಯಿಗಳು ಮತ್ತು ಇತರ ಅನೇಕ ಜಾತಿ ಜಲಚರಗಳಿಗೆ ಆಶ್ರಯ ತಾಣ ಈ ಭಾಗದ ಕಾವೇರಿ. ನದಿಯ ಹರಿವಿನ ಕೊರೆತಗಳಿಂದಾಗಿ ಟಾದ ಬಂಡೆಗಳ ನಡುವಿನ ಕಮರಿಯಲ್ಲಿ ಸೃಷ್ಟಿಯಾಗಿರುವ ಮೇಕೆದಾಟು, ಕಾವೇರಿ ಹಾಗೂ ಅರ್ಕಾವತಿಯರಸಂಗಮದ ಬಳಿಕದ ಮಹತ್ವದ ತಾಣ. ಹೊಗೇನಕಲ್ ಜಲ ಪಾತ ಮತ್ತು ಮುತ್ತತ್ತಿಯನ್ನು ಜೋಡಿಸುವುದೂ ಇದೇ ತಾಣ. ಹೀಗಾಗಿ ಭೌಗೋಳಿಕವಾಗಿಯೂ ಪ್ರಾಮುಖ್ಯ ಪಡಕೊಳ್ಳುತ್ತದೆ.
ಇನ್ನು ೯೦೦ ಚದರ ಕಿ.ಮೀಟರ್‌ನ ವಿಭಿನ್ನ ಎತ್ತರದಲ್ಲಿ ಹರವಿಕೊಂಡಿರುವ ಮಲೆ ಮಹದೇಶ್ವರ ಬೆಟ್ಟದ ವಿಶಿಷ್ಟ ಪರಿಸರ ವ್ಯವಸ್ಥೆಯ ಬಗ್ಗೆ ಹೇಳುಬೇಕಾಗಿಯೇ ಇಲ್ಲ. ಇದರ ಪೀಕ್ ಅಥವಾ ಅತಿ ಎತ್ತರದ ತಾಣ ಪೊನ್ನಾಚಿ – ಸಮುದ್ರ ಮಟ್ಟದಿಂದ ೧೫೧೪ ಮೀಟರ್ ಮೇಲಿದೆ. ಒಂದೆಡೆ ನಿತ್ಯಹರಿದ್ವರ್ಣ ದಟ್ಟ ಕಾಡುಗಳು, ಇನ್ನೊಂದೆಡೆ ಕುರುಚಲು ಪೊದೆಗಳಿಂದಾವೃತ್ತ ಶೋಲಾ ಕಾಡು, ನಡುವೆ ಅರೆ ನಿತ್ಯಹರಿದ್ವರ್ಣ ಮತ್ತು ಪತನಶೀಲ ತೇವಾಂಶವುಳ್ಳ ಅರಣ್ಯಭಾಗ… ಎಲ್ಲವೂ ಕೂಡಿ ಪರಿಸರದ ಸಂಗಮವೂ ಇಲ್ಲಿಯೇ ಏರ್ಪಟ್ಟಿದೆ. ನಟ್ಟ ನಡುವೆ ಉಡುತೊರೆ ಹಳ್ಳ, ಗುಂಡಾಲ, ಸಂತೆಕನ್ ಹಳ್ಳಗಳಂಥ ಹತ್ತಾರು ತೊರೆಗಳುಹುಟ್ಟಿ ಹರಿಯುತ್ತವೆ.
ಇದರ ಹೊರತಾಗಿ ಸಣ್ಣ, ಪುಟ್ಟ ಹೊಳೆಗಳು, ಜಲಪಾತಗಳಿಗೆ ಲೆಕ್ಕವಿಲ್ಲ. ಪ್ರಮುಖ ಎರಡು ತೊರೆಗಳು ಕಾವೇರಿ ಮತ್ತು ಪಾಲಾರ್ ಅನ್ನು ಸಂಧಿಸುತ್ತವೆ.ಎಂಥದ್ದೇ ವಿಕೋಪದಲ್ಲೂ ಕಾವೇರಿ ಜಲಾನಯದ ಈ ಪರಿಸರದ ತಾಪಮಾನ ೪೦ ಡಿಗ್ರಿ ಸೆಲ್ಸಿಯಸ್ ಮೀರುವುದಿಲ್ಲ. ಆದರೆ, ಅಣೆಕಟ್ಟೆಯಾದ ಮೇಲೆ ಸುತ್ತಲಿನ ಪ್ರದೇಶದ ತಾಪಮಾನದಲ್ಲಿ ಸಹಜ ಏರಿಕೆ ನಿರೀಕ್ಷಿತ. ಹಾಗಾದರೆ ಈಗಾಗಲೇ ಮತ್ತೆ ಬೆಂದಕಾಳೂರಾಗಿರುವ ರಾಜಧಾನಿಯ ಕಥೆ ಏನು? ಇತ್ತ ಬಿಳಿಗಿರಿ ರಂಗನಬೆಟ್ಟ ೫೭೪ ಚದರ ಕಿ.ಮೀ ವಿಸ್ತೀರ್ಣದಲ್ಲಿ ಮೇಕೆದಾಟು ಪರಿಸರದ ಹೆಗಲಿನಲ್ಲೇ ಮೈಚೆಲ್ಲಿದೆ.
ಇದು ಘೋಷಿತ ಹುಲಿ ಸಂರಕ್ಷಿತ ಪ್ರದೇಶ. ಸಮುದ್ರ ಮಟ್ಟದಿಂದ ೬೦೦-೧೯೫೦ ಮೀಟರ್‌ಗಳ ಎತ್ತರದಲ್ಲಿರುವ ಈ ಅರಣ್ಯ, ಪೂರ್ವ ಮತ್ತು ಪಶ್ಚಿಮ ಘಟ್ಟಗಳ ನಡುವಿನ ಪ್ರಮುಖ ಪರಿಸರ ಸೇತುವೆ. ವಾತಾವರಣದ ದೃಷ್ಟಿಯಿಂದ ನಿರ್ಣಾಯಕ ಕೂಡ. ಐತಿಹಾಸಿಕ, ಪುರಾಣ ಪ್ರಸಿದ್ಧ ರಂಗನಾಥನ ದೇವಾಲಯದಿಂದಲೇಹೆಸರಾದ ಈ ಬೆಟ್ಟಕ್ಕೆ ಸಂಸ್ಕೃತದಲ್ಲಿ ‘ಶ್ವೇತಾದ್ರಿ’ ಎಂಬ ಹೆಸರು. ಸದಾ ಸುರಿಯುವ ಮಂಜಿನ ನಡುವೆ ಶ್ರೇಷ್ಠ ಗ್ರಾನೈಟ್‌ಗಳಿಂದಾವೃತ ಬೆಟ್ಟ ಅಚ್ಚ ಬಿಳಿಯಲ್ಲೇಕಂಗೊಳಿಸುತ್ತದೆ. ಈ ಕಾಡಿನ ಪ್ರಾಮುಖ್ಯದ ಕುರಿತು ಆರ್. ಸಿ. ಮೋರಿಸ್ ಬಹು ಹಿಂದೆಯೇ ಬರೆದಿದ್ದಾರೆ.
ಇವೆಲ್ಲದರಿಂದ ಹೊರತಾಗಿ ತಣ್ಣಗೆ ಮಲಗಿರುವ ಕಾವೇರಿ ಅಭಯಾರಣ್ಯ ಇರುವುದು ೧೦೦೦ ಚದರ ಕಿಲೋಮೀಟರ್ ಪ್ರದೇಶದಲ್ಲಿ. ಕನ್ನಡ ನಾಡಿನ ಜೀವನಾಡಿ, ಜೀವನದಿ ಕಾವೇರಿಗೆ ಹಲವು ವೈಶಿಷ್ಟ್ಯವನ್ನು ಕೊಟ್ಟಿರುವ ಈ ಅಭಯಾರಣ್ಯದಗುಂಟವೇ ಕರ್ನಾಟಕ ಮತ್ತು ತಮಿಳುನಾಡಿನ ಅಂತಾರಾಜ್ಯ ಗಡಿ ನಿರ್ಣಯ ವಾದದ್ದು. ಈ ಕಾಡಿನಲ್ಲಿ ಕಾವೇರಿ ಸರಿಸುಮಾರು ೭೦ ಕಿಲೋಮೀಟರ್ ಉದ್ದಕ್ಕೆ ಹರಿಯುತ್ತಾಳೆ.
ಇಷ್ಟೆಲ್ಲವನ್ನೂ ಬಲಿಗೊಟ್ಟು, ಇವಕ್ಕೆಲ್ಲ ಹಾನಿ ಮಾಡಿ, ನಾವು ಮಳೆಗಾಲದಲ್ಲಿ ವ್ಯರ್ಥವಾಗಿ (ಸಮುದ್ರ ಸೇರುವುದು ವ್ಯರ್ಥವೇ?)ಸಮುದ್ರ ಸೇರುವ ಹೆಚ್ಚುವರಿ ನೀರನ್ನು ನಿಲ್ಲಿಸಿ ಬೆಂಗಳೂರಿಗೆ ನೀರೊದಗಿಸುತ್ತೇವೆ ಎನ್ನುತ್ತಿದ್ದೇವೆ. ಅಸಲಿಗೆ ಯೋಜನೆಯ ಕಾರ್ಯಸಾಧ್ಯತೆಯೇ ಪ್ರಶ್ನಾರ್ಹ. ಸಮುದ್ರಕ್ಕೆ ವ್ಯರ್ಥವಾಗಿ ಸೇರುವ ಹರಿವನ್ನು ಟ್ಯಾಪ್ ಮಾಡುತ್ತೇವೆಂಬುದೇ ಅವೈಜ್ಞಾನಿಕವಲ್ಲವೇ? ನದಿ ತತ್ವದಲ್ಲಿ ಹೆಚ್ಚುವರಿ ಅಥವಾ ಕೊರತೆ ಎಂಬುದೆಲ್ಲಿಂದ ಬಂತು? ಬೇಸಿಗೆಯಲ್ಲಿ ಸೊರಗುವುದು, ಮಳೆಗಾಲದಲ್ಲಿ ಮೈದುಂಬುವುದು, ಹರಿಯುತ್ತಲೇ ಇರುವುದು ನದಿಯ ಗುಣ. ಅಣೆ, ಒಡ್ಡುಗಳಿಂದ ನೀರನ್ನು ನಿಲ್ಲಿಸಿಬಿಟ್ಟರೆ ಅದು ನದಿ ಹೇಗಾದೀತು? ಮಿತಿಮೀರಿದ ನಗರೀಕರಣ, ಕೈಗಾರಿಕೆಗಳ ಅಬ್ಬರ, ಜನಸಂಖ್ಯೆಯ ದಟ್ಟಣೆಗಳಿಂದ ತಲೆದೋರುವ ನೀರಿನ ಸಮಸ್ಯೆಗಳಿಗೆ ಇಂಥ ಯೋಜನೆಗಳು ಎಂದಿಗೂ ಶಾಶ್ವತ ಪರಿಹಾರವಾಗದು.
ಹಾಗೊಮ್ಮೆ ಆಗುವುದಿದ್ದರೆ ಐದು ಜಲಮೂಲಗಳು ಬೆಂಗಳೂರಿಗಾಗಿ ಬತ್ತಿ ಹೋಗಬೇಕಿರಲಿಲ್ಲ. ಕೇವಲ ೫ ವರ್ಷಗಳ ಹಿಂದೆ ಇದ್ದ ನೀರಿನ ಬೇಡಿಕೆಗೂ ಈಗಿನದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇನ್ನೈದು ವರ್ಷಗಳಲ್ಲಿ ಇದು ದುಪ್ಪಟ್ಟಾಗುತ್ತದೆ. ಭವಿಷ್ಯದಲ್ಲಿ ಬದಲಾವಣೆ ಅನಿವಾರ್ಯ. ಅವೆಲ್ಲಕ್ಕೂ ಮತ್ತೆ ಮತ್ತೆ ಅಣೆಕಟ್ಟು ಕಟ್ಟುವುದು ಶಾಶ್ವತ ಪರಿಹಾರವೆನಿಸದು. ಒಂದೂಕಾಲು ಕೋಟಿ ಮೀರಿದ ಬೆಂಗಳೂರಿಗರ ಜನಸಂಖ್ಯೆ ೨೦೩೫ರ ಕೊನೆಯಲ್ಲಿ ೧೮ ದಶಲಕ್ಷ ಮೀರಲಿದೆ ಎಂಬ ಅಂದಾಜಿದೆ. ಕಾವೇರಿಯುದ್ದಕ್ಕೂ (ಉಪನದಿಗಳೂ ಸೇರಿ)ಈಗಾಗಲೇ ಹಲವು ಅಣೆಕಟ್ಟುಗಳು, ನೂರಾರು ಒಡ್ಡುಗಳನ್ನು ಒಡ್ಡಿಯಾಗಿದೆ.
ಇಷ್ಟಾದರೂ ನೀರು ಸಾಲುತ್ತಿಲ್ಲ ಎಂದ ಮೇಲೆ ಈಗಿನ ಜನಸಂಖ್ಯೆ ಬೆಳವಣಿಗೆ ದೃಷ್ಟಿಯಿಂದ ರೂಪಿಸಿರುವ ಮೇಕೆದಾಟು ಯೋಜನೆಗೇನು ಅರ್ಥ? ಎಲ್ಲವೂ ನಮ್ಮ ಕಾಲಡಿಯಲ್ಲೇ ಇರಬೇಕು ಎಂಬ ಹುಚ್ಚು ಹತ್ತಿಸಿಕೊಂಡು ಪರಿಸರವನ್ನೂ ಪಳಗಿಸುವ ಭ್ರಮೆಯಲ್ಲ ಓಡುತ್ತಿದ್ದೇವೆ. ಅದರ ಪರಿಣಾಮ ಹತ್ತುವರ್ಷಗಳ ಹಿಂದೆ ಕೇದಾರದಲ್ಲಾದ ಪ್ರಳಯ ಪ್ರವಾಹ ಸೇರಿದಂತೆ ಹಲವು ನಿದರ್ಶನಗಳು ನಮ್ಮ ಮುಂದಿವೆ. ನಾವು ನಡೆದು ಬಂದ ಹಾದಿಯನ್ನು, ನಡೆದ (ತಪ್ಪು) ಹೆಜ್ಜೆ ಗುರುತು ಗಳನ್ನು ಹಿಂತಿರುಗಿ ನೋಡಲಾರದಷ್ಟು ಅಹಂಕಾರದಲ್ಲಿ ಮುನ್ನುಗ್ಗುತ್ತಿದ್ದೇವೆ.
ಖ್ಯಾತ ಪರಿಸರ ಬರಹಗಾರರಾದ ಯಜ್ರೊಹೈಲಾ ಮತ್ತು ರಿಚರ್ಡ್ ಲೇಪಿನ್ಸ್ ತಮ್ಮ ‘ಹ್ಯೂಮನಿಟಿ ಅಂಡ್ ನೇಚರ್’ ಎಂಬ ಪುಸ್ತಕದಲ್ಲಿ ೧೫ನೇ ಶತಮಾನದಊಳಿಗ ಮಾನ್ಯ ಪದ್ಧತಿ ಹಾಗೂ ೧೭ನೇ ಶತಮಾನದ ಬಂಡವಾಳ ಶಾಹಿ ಯುಗ ಎರಡರಿಂದಲೂ ಪರಿಸರದ ದುರ್ಬಳಕೆ ಆರಂಭವಾಯಿತು ಎನ್ನುತ್ತಾರೆ. ಇಂದಿನ ನಮ್ಮ ನಾಯಕರ ನಡೆಯಲ್ಲಿ (?) ಇವೆರಡೂ ಯುಗದ ಮನೋಭಾವ ಪ್ರತಿ-ಲಿಸುತ್ತದೆ. ಪಾಶ್ಚಿಮಾತ್ಯ ಅಭಿವೃದ್ಧಿ ಚಿಂತನೆಯ ಫಲವಿದು. ಜೀವ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ಅದನ್ನೇ ಹೇಳಿದ್ದು- ‘ಯೂರೋಪಿಯನ್ನರು ಯಾವ ನೆಲವನ್ನೇ ಮೆಟ್ಟಲಿ, ಸಾವು ಆ ನೆಲವನ್ನು, ಆ ನೆಲದ ಪರಿಸರವನ್ನು ಮತ್ತು ಅಲ್ಲಿನ ಮೂಲನಿವಾಸಿಗಳನ್ನು ಬೆನ್ನಟ್ಟುತ್ತದೆ’.
ಎಷ್ಟು ಸತ್ಯವಲ್ಲವೇ? ಇತಿಹಾಸ ತಜ್ಞ ಎಲಿಂಗ್‌ಟನ್ ಇನ್ನೂ ಮಾರ್ಮಿಕವಾಗಿ ಇದನ್ನು ಪ್ರತಿಪಾದಿಸಿದ್ದಾನೆ. ಮನುಕುಲ ಐದು ಶತಮಾನ (ಸಾಮ್ರಾಜ್ಯಶಾಹಿ, ವಸಹಾತುಶಾಹಿ, ಕೈಗಾರಿಕಾಶಾಹಿ, ಬಂಡವಾಳಶಾಹಿ, ಜನಾಂಗಶಾಹಿ)ಗಳನ್ನುದಾಟಿದ ನಂತರ ವಿನಾಶಕ್ಕೆ ಅಣಿಯಾಗುತ್ತದೆ. ಆಗ ಒಂದೊಮ್ಮೆ ಉಳಿದುಕೊಳ್ಳಬೇಕಿದ್ದರೆ ಪರಿಸರಶಾಹಿ ರೂಪುಗೊಳ್ಳಲೇಬೇಕು. ಬಹುಶಃ ಜನಾಂಗಶಾಹಿ ಯುಗದ ಮಧ್ಯದಲ್ಲಿರುವ ನಾವು ಈಗಿಂದೀಗಲೇ ಉಳಿವಿನ ಬಗ್ಗೆ ಯೋಚಿಸಬೇಕಾದ ತುರ್ತು ಇದೆ. ಅದಕ್ಕಾಗಿ ಪರಿಸರ ಶಾಹಿ ಯುಗಕ್ಕೆ ನಾಂದಿ ಹಾಡಬೇಕಿದೆ. ಏಕೆಂದರೆ ಭಾಋತ ಸೇರಿದಂತೆ ಬಹುತೇಕ ದೇಶಗಳು ಆಡಳಿತದಲ್ಲೂ ಪಾಶ್ಚಾತ್ಯರ ಪ್ರಭಾವಕ್ಕೊಳಗಾಗಿ ಆರ್ಥಿಕ ಪ್ರೇರಿತ ಅಭಿವೃದ್ಧಿಯನ್ನು ಪ್ರತಿಪಾದಿಸುತ್ತಿದ್ದೇವೆ. ಹೀಗಾಗಿ ಭೋಗಕ್ಕೇ ಆದ್ಯತೆ. ಅದಕ್ಕೆ ಪರಿಸರವೂ ಹೊರತಲ್ಲ. ಅದನ್ನೂ ವ್ಯಾಪಾರದ ದೃಷ್ಟಿಯಿಂದಲೇ ನೋಡಿ ಸರಕಾಗಿಸುತ್ತಿದ್ದೇವೆ.
ಹೀಗಾಗಿ ನಮಗೆ ಹರಿಯುವ ನೀರು ವ್ಯರ್ಥ ಅನಿಸುತ್ತದೆ. ಭೋರ್ಗರೆವ ಜಲಪಾತ ಶಕ್ತಿಯ ವ್ಯಯವೆನಿಸುತ್ತದೆ. ಆರ್ಥಿಕ ತಪ್ಪು ಪರಿಕಲ್ಪನೆಗಳೇ ಮೇಕೆದಾಟುವಿನಂಥ ಹುಸಿ ಅಭಿವೃದ್ಧಿ ಯೋಜನೆಗಳಿಗೆ ಪ್ರೇರಣೆಯಾಗಿ ಪ್ರಕೃತಿಯ ಮೇಲೆ ಪೈಶಾಚಿಕ ದಾಳಿಗೆ ಮುಂದಾಗಿಸುತ್ತಿದೆ. ಇಂದು ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆಗೂ ಇದಕ್ಕೂ ಏನೂ ಸಂಬಂಧವಿಲ್ಲ. ಅದು ಶುದ್ಧ ರಾಜಕೀಯ ವಿಷಯ. ನನಗೆ-ನಿಮಗೆ ರಾಜಕೀಯ ಗೊತ್ತಾಗೋದೂ ಇಲ್ಲ ಬಿಡಿ!