ಯಾಕೋ ಅತಿಯಾಯಿತು ಅನಿಸುತ್ತಿದೆ !
ದಾಸ್ ಕ್ಯಾಪಿಟಲ್‌
ಟಿ.ದೇವಿದಾಸ್
dascapital1205@.
ಹಗಲಿಗಿಲ್ಲದ ಸೋಂಕು ರಾತ್ರಿ ಮಾತ್ರ ಬರುವುದು ಹೇಗೆ? ಶನಿವಾರ, ಭಾನುವಾರ ಮಾತ್ರ ವೈರಸ್ಸು ಓಡಾಡಿ ಉಳಿದ ದಿನ ಮಲಗುತ್ತದೆಯೇ? ಬಸ್ಸು,ರೈಲ್ವೆ ಗಳು ಓಡಾಡಲು ತೊಂದರೆಯಿಲ್ಲ, ಆದರೆ ಜನರಿಗೆ ಕರ್ಫ್ಯೂ. ಹಾಗಾದರೆ ಅವು ಓಡಾಡುವುದು ಯಾರ ಸಲುವಾಗಿ?
ಈ ಕೋವಿಡ್ ಸೋಂಕು ಮತ್ತು ಹರಡುವಿಕೆ, ಅದರ ರೂಪಾಂತರಿ ವೈರಸ್ಸುಗಳ ಸೋಂಕಿನ ಹರಡುವಿಕೆ ಒಮ್ಮೆಲೇ ಹೆಚ್ಚಳವಾಗುವುದು, ಈಗ್ಗೆ ಐದು ತಿಂಗಳ ಹಿಂದೆ ಕಾಣದ ಸೋಂಕಿನ ಹರಡುವಿಕೆಯ ಪ್ರಮಾಣ ಬೆಳಗಾಗುವುದರೊಳಗೆ ಹೆಚ್ಚುವುದು, ಪರಿಷತ್ ಚುನಾವಣೆವರೆಗೆ ಲಾಕ್‌ಡೌನ್ ಮುಂದೂಡಿ, ಈಗ ಮತ್ತೆರಾತ್ರೆ ಕರ್ಫ್ಯೂ, ವೀಕೆಂಡ್ ಕರ್ಫ್ಯೂ, ಸಾಂದರ್ಭಿಕ ನಿಬಂಧಗಳು, ಆಗಾಗ ಲಾಕ್‌ಡೌನ್ ಅಂತ ಸಾರ್ವಜನಿಕ ಬದುಕನ್ನು ನಿಯಂತ್ರಿಸುವುದು, ತೆರಿಗೆಯ ಹಣದಲ್ಲಿ ಉಚಿತವಾಗಿ ರೇಷನ್ ನೀಡುವುದು, ಗ್ಯಾಸ್, ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಯಾಗುವುದು, ಅಗತ್ಯ ವಸ್ತುಗಳ ಬೆಲೆ ಏರಿಕೆ, ಮಾಸ್ಕ್, ಸ್ಯಾನಿಟೈಸರ್, ಕೋವಿಡ್ ಟೆಸ್ಟ್, ಸೀಲ್ ಡೌನ್, ಕ್ವಾರಂಟೈನ್, ಬೂಸ್ಟರ್ ಡೋಸು, ಮತ್ತೀಗ ಪಾಸಿಟಿವ್ ಪ್ರಕರಣಗಳ ಲೆಕ್ಕದಲ್ಲಿ ಏರಿಕೆ, ಒಮೈಕ್ರಾನ್ ವೈರಸ್ಸೆಂಬ ಕೂಗುಮಾರಿ-ಅದು ಇದು ಅಂತ ಹಳಿಗೆ ಮರಳುತ್ತಿರುವ ಜನಸಾಮಾನ್ಯರ ಬದುಕು ಮತ್ತೆ ಹೈರಾಣಾಗುವತ್ತ ಸಾಗುತ್ತಿದೆಯೇನೋನಿಸುತ್ತಿದೆ.
ಕಳೆದ ಎರಡು ವರ್ಷಗಳಿಂದ ಕೇಂದ್ರ ಅಥವಾ ರಾಜ್ಯ ಸರಕಾರಗಳದ್ದಾಗಲೀ ಕರೋನಾ ವಿದ್ಯಮಾನದಲ್ಲಿ ಒಟ್ಟೂ ನಡೆಯೇ ಸಂದೇಹ ಹುಟ್ಟಿಸಿತ್ತು. ಈಗಲೂ ಹುಟ್ಟಿಸುತ್ತಿದೆ. ಈ ಕರೋನಾ ರಾಜಕೀಯದ ಮೆಗಾ ಸೀರಿಯಲ್ಲನ್ನು ಜನ ಗುಮಾನಿಯಿಂದ ನೋಡತೊಡಗಿ ವರ್ಷವೇ ಸಂದುಹೋಗಿದೆ. ಸೋಷಿಯಲ್ ಮೀಡಿಯಾಗಳು ಏನೋನೋ ಸುದ್ದಿಗಳನ್ನು ಇದರ ಬಗ್ಗೆ ನಿರಂತರವಾಗಿ ಪ್ರಚಾರ ಮಾಡಿವೆ. ವದಂತಿಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ನೀಡಿವೆ. ನೀಡುತ್ತಿವೆ. ಯಾವ್ಯಾವುದೋ ಮಾಫಿಯಾ, ಲಾಭಿಗಳ ಬಗ್ಗೆ ಈ ಎರಡು ವರ್ಷಗಳಿಂದ ಮಾತಾಡುತ್ತಿವೆ.
ಬರೆಯುತ್ತಿವೆ. ಇವೆಲ್ಲದರ ಪರಿಣಾಮದಿಂದಾಗಿ ಜನರಲ್ಲೂ ಈ ಒಂದು ವೈರಸ್‌ನ ಭಯ ಮೊದಲಿನಷ್ಟು ಇಲ್ಲವಾಗಿ ಯಾವುದಕ್ಕೂ ಕ್ಯಾರೇ ಮಾಡದೇ ತಮ್ಮ ಗೋಳಿನ ಬದುಕನ್ನು ಸಾಗಿಸುತ್ತಿದ್ದಾರೆ ಮೊದಲಿನಂತೆ! ತಪ್ಪು ಅಂತೀರಾ? ನೋ ವೇ! ನಿತ್ಯ ಸಾಯುವವರಿಗೆ ಅಳುವವರು ಯಾರು ಮಾರಾಯ್ರೆ? ಏನೇ ಆಗಲಿ, ಹೋಗಲಿ. ನಾಕು ದಿನ ಅಬ್ಬರವಿರುತ್ತೆ, ಅಷ್ಟೆ. ಆಮೇಲೆ ಇನ್ನೊಂದು ಏನಾದರೂ ಆಗುತ್ತದೆ. ಅದನ್ನು ಹಿಡ್ಕೊಂಡು ದೊಂಬಿಯೆಬ್ಬಿಸುವುದು. ಅದಕ್ಕೂ ವ್ಯಾಲಿಡಿಟಿನಾಕು ದಿನವಷ್ಟೆ? ತಿಂಗಳ ಹಿಂದೆ ಅಪ್ಪು ತೀರಿಕೊಂಡರು. ಒಂದಿಷ್ಟು ಶೋಕಾಚರಣೆ ನಡೇಯುವ ಹೊತ್ತಿಗೆ ಮೊನ್ನೆ ಮೊನ್ನೆ ದೇಶದ ಮೊದಲ ಮಹಾದಂಡನಾಯಕ ಬಿಪಿನ್ ರಾವತ್ ನಿಧನರಾದರು.
ಈ ಮೋದಿ ಭದ್ರತಾ ಲೋಪದ ಸುದ್ದಿ! ಇದೆಲ್ಲ ನಾಕು ದಿನ ಮಾತ್ರ! ಯಾವಾಗ ಜನತೆಯ ನಿತ್ಯ ಬದುಕಿಗೆ ಸಮಸ್ಯೆಯಾಯಿತೋ ಆಗಲೇ ಜನ ತಿರುಗಿ ನಿಲ್ಲುವುದು. ಈಗ ಒಮೈಕಾನ್ ಪಾಸಿಟಿವ್ ಅಂತ ಕರ್ಫ್ಯೂಅಬ್ಬರ ಎದ್ದಿದ್ದರಿಂದ ಒಂದು ರೀತಿಯಲ್ಲಿ ಅದಕ್ಕೆ ವಿರೋಧ ಹುಟ್ಟಿಕೊಂಡಂತಿದೆ! ತಪ್ಪೇನಿಲ್ಲ ಬಿಡಿ.ಕರೋನಾ ವೈರಸ್ ಸೋಂಕು ಸತ್ಯವಾಗಲೂ ಇದ್ದೇ ಇದೆ. ಸಂಶಯವೇ ಇಲ್ಲ. ವಿಶ್ವದಾದ್ಯಂತ ಸಾವುಗಳು ಸಂಭವಿಸಿದೆ. ಎಲ್ಲವೂ ಸತ್ಯವೆಂದು ನಂಬಲಾಗಿದೆ,   ನಂಬಿಸಲಾಗಿದೆ. ಇಷ್ಟು ಮಾತ್ರವಲ್ಲ, ಈಗ ಒಮೈಕ್ರಾನ್ ಆಗಲೀ, ಮುಂಬರುವ ಇನ್ಯಾವುದೋ ವೈರಸ್‌ನ ಬಗ್ಗೆ ಹೇಳಿದರೂ ಜನ ನಂಬುತ್ತಾರೆ.
ನಂಬುವಂತೆ ಮಾಡಲಾಗುತ್ತದೆ. ಈ ಸಾಂಕ್ರಾಮಿಕ ರೋಗದ ವೈರಸ್‌ನ ಬಗೆಗಿನ ಅಸ್ಪಷ್ಟವಾದ ತಿಳಿವಳಿಕೆಯು ಹುಟ್ಟಿಸಿದ ಭಯದಿಂದಲೇ ನಂಬುವಂಥ ಪರಿಸ್ಥಿತಿಹುಟ್ಟಿಕೊಂಡಿದೆ. ದ.ಆಫ್ರಿಕಾದ ಯಾವುದೋ ಮೂಲೆಯಲ್ಲಿ ಹುಟ್ಟಿದ ವೈರಸ್ ಎರಡು ಬೆಳಗಾಗುವುದರೊಳಗೆ ಬೆಂಗಳೂರಿಗೆ ಬಂದುಮುಟ್ಟುತ್ತದೆ. ವಿಚಿತ್ರ ವಾದರೂ ಸತ್ಯವಲ್ಲವೆ ಇದು? ಆವತ್ತೂ ಹಾಗೇ ಆಗಿದ್ದು ತಾನೆ? ಆಗತಾನೆ ವುಹಾನಲ್ಲಿ ಹುಟ್ಟಿದ ಕೊರೊನಾ ವೈರಸ್ಸು ಗುಲ್ಬರ್ಗಾಕ್ಕೆ ಬಂದು ಸೇರಿ ಒಬ್ಬಾತಸತ್ತುಹೋದ ಸುದ್ದಿ ಪ್ರಕಟವಾಗಿ ಕೊನೆಗೆ ಇಡಿಯ ಭಾರತಕ್ಕೆ (ದೆಹಲಿಯಲ್ಲಿ ಅದಾಗಲೇ ತಬ್ಲಿಗಳ ಮೇಲೆ ಆರೋಪ ಬಂದಾಗಿತ್ತು. ಒಂದಿಷ್ಟು ಅರೆಸ್ಟ್ ಕೂಡ ಆಗಿತ್ತು) ತನ್ನ ಅಟ್ಟಹಾಸವನ್ನು ಮೆರೆದು ಇಡಿಯ ದೇಶವನ್ನೇ ಲಾಕ್‌ಡೌನ್ ಮಾಡಿಸಿಬಿಟ್ಟಿತು. ಜಗತ್ತಿನ ಯಾವುದೇ ಮೂಲೆಯಲ್ಲಿ ಹುಟ್ಟಿದ ವೈರಸ್ಸು ಮೂರೋ ನಾಕೋ ಬೆಳಗಾಗುವುದರೊಳಗೆ ಬೆಂಗಳೂರನ್ನು ತಲುಪುವುದು ವಿಚಿತ್ರವಾದರೂ ಸರಿಹೊತ್ತಿನ ಸತ್ಯ! ಬೆಂಗಳೂರಿನ ಮೇಲೆಯೇ ಅಷ್ಟೊಂದು ಪ್ರೀತಿ ಯಾಕೆ? ಅರ್ಥವಾಗುವುದಿಲ್ಲ!
ವೈರಲಾಜಿಸ್ಟುಗಳು, ವೈದ್ಯಕೀಯ ಸಂಶೋಧಕರು, ವೈದ್ಯರು ಈಗ ಎದ್ದಿರುವ ಓಮೈಕ್ರಾನ್ ಭಯಪಡುವಂಥದ್ದಲ್ಲ ಎಂದು ಹೇಳುತ್ತಾರೆ. ಇದು ಕೋವಿಡ್ ಪೆಂಡಮಿಕ್ಕಿನ ಎಂಡಮಿಕ್ ಅಂತಾರೆ. ಒಮೈಕ್ರಾನ್ ಲಕ್ಷಣಗಳನ್ನು ಹೇಳುತ್ತಾರೆ. ಜನರಲ್ಲಿ ಸೋಂಕಿನ ಬಗ್ಗೆ ಅರಿವು ಮತ್ತು ಎಚ್ಚರ ಮೂಡಿಸುತ್ತಾರೆ. ಇದಕ್ಕೆಸಂಬಂಧಿಸಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪ್ರಚಾರದಲ್ಲಿವೆ. ಇದರಿಂದ ಸಾವು ಸಂಭವಿಸುವ ಪ್ರಮಾಣ ಡೆಲ್ಟಾದಷ್ಟು ಇಲ್ಲವೆಂಬುದು ವೈದ್ಯರ ಅಂಬೋಣ.
ನೂರು ಸೋಂಕಿತರಲ್ಲಿ ಹತ್ತು ಸೋಂಕಿತರು ಆಸ್ಪತ್ರೆಗೆ ಸೇರಬೇಕಾಗಬಹುದು ಎನ್ನುತ್ತಾರೆ. ಅಂಥಾ ಪರಿಯಲ್ಲಿ ಉಸಿರಾಟದಲ್ಲಿ ಏರುಪೇರು, ಜ್ವರ, ಗಂಟಲು ಕೆರೆತ, ಮೈಕೈ ನೋವು ಬರಬಹುದಿತ್ತು. ಯಾವ ವಯಸ್ಸಿನವರನ್ನೂ ಒಮೈಕ್ರಾನ್ ಕಾಡಬಹುದು. ಆದರೆ ಡೆಲ್ಟಾಗಿಂತ ಹೆಚ್ಚು ವೇಗದಲ್ಲಿ ಇದು ಪ್ರಸಾರ ವಾಗುತ್ತದೆ. ಆದ್ದರಿಂದ ಪರಿಣಾಮ ಕಡಿಮೆಯಿರುವ ಈ ವೈರಸ್ಸಿನಿಂದ ಅಂಥ ಅನಾಹುತಗಳು ಏನು ಸಂಭವಿಸದಿದ್ದರೂ ರೆಸ್ಪಿರೇಟರಿ ಸಿಸ್ಟೆಮ್ ತುಂಬಾ ವೀಕ್ ಇರುವವರಲ್ಲಿ ಏನಾದರೂ ಅವಗಢಗಳು ಸಂಭವಿಸಬಹುದು. ಆದ್ದರಿಂದ6-7ದಿನಗಳ ಕಾಲ ಸ್ವಕ್ವಾರೈಂಟೈನ್ ಮಾಡಿಕೊಳ್ಳುವುದು ಎಲ್ಲರಿಗೂ ಒಳ್ಳೆಯದು. ಎಲ್ಲ ದೃಷ್ಟಿಯಿಂದಲೂ ಒಳ್ಳೆಯದು ಅಂತ ತಜ್ಞರು ಹೇಳುವುದು.
ಬೂಸ್ಟರ್ ಡೋಸ್ ಅಗತ್ಯವಿರುವುದು ಈ ಹಿನ್ನೆಲೆಯಲ್ಲೇ ಎಂಬುದು ಅವರ ಅಭಿಪ್ರಾಯ. ಆದರೆ ಇಂಥವು ದೊಡ್ಡ ಸುದ್ದಿಯೇ ಆಗುವುದಿಲ್ಲ. ಭಯಪಡುವಂಥ ಅಗತ್ಯವೇನಿಲ್ಲ, ಜೀವಕ್ಕೆ ಹಾನಿಯಿಲ್ಲ, ಆದರೆ ನಿರ್ಲಕ್ಷ್ಯ ಮಾಡುವಂತಿಲ್ಲ ಅಂತ ಎಷ್ಟೇ ಹೇಳಿದರೂ ಸೋಂಕಿನ ಕುರಿತಾದ ಭಯೋತ್ಪಾದನೆ ನಿರಂತರವಾಗಿ ಸಾಗುತ್ತಲೇ ಇದೆ ಮತ್ತು ಮತ್ತೆ ಮತ್ತೆ ಲಾಕ್‌ಡೌನ್ ಜಾರಿಗೆ ನಾಂದಿಯಾಗುವಂತಿದೆ. ಕಾರಣ ಜನರಲ್ಲಿರುವ ಕ್ಯಾರ್ ಲೆಸ್ ಮನೋಭಾವ, ಉದಾಸೀನತೆ. ನಿರ್ಲಕ್ಷ್ಯ. ಉಢಾಫೆಯ ಮಾತುಗಳು.
ಜನರ ಆಲೋಚನೆ ಹೀಗೆ:ಅಗಸ್ಟ್ ಕೊನೆಯ ವಾರದಿಂದ ಡಿಸೆಂಬರ್ ಆರಂಭದವರೆಗೂ ಯಾವ ಸೋಂಕು, ಪಾಸಿಟಿವ್ ಕೇಸುಗಳ ಭಯವೂ ಇಲ್ಲದೆ ಎಲ್ಲವೂ ಸಾಮಾನ್ಯ ಎಂಬಂತೆ ಜನರು ನಿತ್ಯದ ಬದುಕಿನ ಹಳಿ ಹಿಡಿದರು. ಹಾಗಂತ ಆಯಾ ಕಾಲ, ಸಂದರ್ಭ, ಪ್ರದೇಶ, ಪ್ರಾಕೃತಿಕ, ಭೌಗೋಳಿಕ ಚರ್ಯೆಗೆ ಅನುಗುಣ ವಾಗಿ ಮಳೆ, ಬಿಸಿಲು, ಚಳಿ ಆಗುವುದು ಸಹಜ ಸ್ವಾಭಾವಿಕ ಸತ್ಯ! ಹಾಗೇ ಆಗಿದ್ದಂತೂ ಸತ್ಯ! ಈ ಮಧ್ಯೆ ಎರಡು ಮೂರು ಚಂಡಮಾರುತದ ಹಾವಳಿಯಿಂದ ಮಳೆಅತಿಯೆಂಬಂತೆ ಸುರಿದು ಬೆಳೆದ ಬೆಳೆ ನಾಶವಾಗಿ ಬದುಕನ್ನು ನಾಶಮಾಡಿದ್ದನ್ನು ನಾವು ನೋಡಿದ್ದೇವೆ.
ಈ ಮಧ್ಯೆ ಮಕ್ಕಳಿಂದ ಹಿಡಿದು ಮುದುಕರವರೆಗೆ ವೈರಲ್ ರೂಪದ ಜ್ವರ, ಶೀತ, ಕೆಮ್ಮು ಕಾಡುತ್ತದೆ. ಕಾಡಿತು ಕೂಡ. ಇಂಥ ಅನಾರೋಗ್ಯವು ಯಾವಾಗಲೂ ಇದ್ದೇ ಇರುತ್ತದೆ. ಅದಕ್ಕೆ ವೈದ್ಯರನ್ನು ಕಂಡು ಔಷಧಿಯನ್ನು ತೆಗೆದುಕೊಂಡು ಜನ ಮತ್ತೆ ಆರೋಗ್ಯವಂತರಾಗಿ ತಮ್ಮ ಪಾಡಿಗೆ ತಾವು ಬದುಕನ್ನು ಸಾಗಿಸಿದ್ದಾರೆ, ಸಾಗಿಸುತ್ತಿದ್ದಾರೆ ಕೂಡ. ಈಗ ಇದ್ದಕ್ಕಿದ್ದ ಹಾಗೆ ಮತ್ತೆ ಕರ್ಫ್ಯೂಹೇರಿದ್ದಕ್ಕೆ ಜನ ಒಪ್ಪುತ್ತಿಲ್ಲ.
ಹಾಗಂತ ಇಂಥ ವೈಪರೀತ್ಯಗಳು ಇದೇ ಮೊದಲೇನೂ ಅಲ್ಲವೇ ಅಲ್ಲ. ಇಂಥವು ಯಾವತ್ತೂ ಇದ್ದೇ ಇರುತ್ತವೆ. ಇದರೊಂದಿಗೇ ನಮ್ಮಗಳ ಬದುಕು ಸಾಗಬೇಕು, ಸಾಗುತ್ತದೆ ಕೂಡ. ಈವರೆಗೂ ಸಾಗಿದ್ದೂ ಹೀಗೆಯೇ ಅಲ್ಲವೆ?! ರೋಗನಿರೋಧಕ ಶಕ್ತಿ ಹುಟ್ಟುವುದು ಇಂಥ ವೈಪರೀತ್ಯಗಳನ್ನು ಎದುರಿಸುತ್ತ ಬದುಕುವುದಿದ ರಿಂದ! ಬಿಸಿಲಿಗೆ ಬಿದ್ದಾಗಲೇ ತಾಪದ ಅನುಭವ ಆಗುವುದು, ಗಾಳಿ ಮಳೆ ಚಳಿಗೆ ಮೈಯೊಡ್ಡಿದಾಗಲೇ ಅವುಗಳನ್ನು ತಡೆದುಕೊಳ್ಳುವ ಶಕ್ತಿ ಸಾಮರ್ಥ್ಯ ಹುಟ್ಟು ವುದು. ಬಿಸಿಲಿಗೆ ಬೀಳುವ ಮುಂಚೆಯೇ ನೆರಳನ್ನು ಹುಡುಕಿದರೆ ಬಿಸಿಲಿನ ಅನುಭವ ಆಗುವುದಾದರೂ ಹೇಗೆ? ದೇಹದಲ್ಲಿ ರೋಗವನ್ನು ಎದುರಿಸುವ ಪ್ರತಿಬಂಧಕ ಶಕ್ತಿಯನ್ನು ಬಾಲ್ಯದಲ್ಲೇ ಬೆಳೆಸಬೇಕು.
ಕಷ್ಟವನ್ನು ಎದುರಿಸುವುದನ್ನು ಕಲಿಯಬೇಕು. ಅಂದಾಗಲೇ ಮಾನಸಿಕ ಸ್ಥೈರ್ಯ ಹುಟ್ಟುವುದು. ಪ್ರತಿಯೊಂದಕ್ಕೂ ಔಷಧದ ಮೊರೆ ಹೋದರೆ ಈ ದೇಹಕ್ಕೆ ತಡೆದುಕೊಳ್ಳುವ ಶಕ್ತಿ ಹುಟ್ಟುವುದಾದರೂ ಹೇಗೆ? ತಿಂದ ಆಹಾರ ಶಕ್ತಿಯಾಗಿ ಪರಿವರ್ತನೆ ಆಗುವುದಾದರೂ ಹೇಗೆ? ಈಸಬೇಕು, ಇದ್ದು ಜೈಸಬೇಕು ಅಂತಾರಲ್ಲ, ಹಾಗೆ ಮಕ್ಕಳಿಗೆ ಈಸುವ ಸಾಮರ್ಥ್ಯವನ್ನು ಎದುರಿಸುವ ಸ್ವಸಾಮರ್ಥ್ಯವನ್ನು ಜೈಸುವ ಶಕ್ತಿಯನ್ನು ಬೆಳೆಯುವಂತೆ ಮಾಡಬೇಕು.
ಮೆಡಿಸಿನ್ ಮೊರೆಹೋಗಬೇಕು ಎಂಬುದೇನೋ ಸರಿ, ಆದರೆ ಒಂದು ಹಂತದವೆರೆಗೆ ಸಹಿಸುವ ಶಕ್ತಿ ಬೆಳೆಯುವಂತೆ ಮಕ್ಕಳನ್ನು ಸಿದ್ಧಗೊಳಿಸಬೇಕಿದೆ. ತಾನು ಗಳಿಸಿದ ಸಂಪತ್ತಿನಿಂದಲೇ ತನ್ನ ಮಕ್ಕಳು ಬೆವರು ಸುರಿಸದೇ ಯಾವುದನ್ನೂ ಗಳಿಸದೆ ಜೀವನ ಸಾಗಿಸಬೇಕು, ಅವರಿಗೆ ಯಾವ ಸಮಸ್ಯೆಯೂ ಆಗಬಾರ ದೆಂದು ಯಾವ ಪೋಷಕರೂ ತಮ್ಮ ಮಕ್ಕಳನ್ನು ಮಾನಸಿಕವಾಗಿ ದೈಹಿಕವಾಗಿ ಬೌದ್ಧಿಕವಾಗಿ ವೈಚಾರಿಕವಾಗಿ ನಿರ್ವೀರ್ಯತೆಯಿಂದ ಬೆಳೆಸಬಾರದು ಎಂಬ ಎಚ್ಚರ ಇದ್ದರೆ ಮಕ್ಕಳು ಶುಕ್ರವತ್ತಾಗುತ್ತಾರೆ. ದೇಶದ ಸಂಪತ್ತಾಗುತ್ತಾರೆ.