ಆನ್‌ಲೈನ್‌ ತರಗತಿಗಳ ಹಿಂದಿನ ಆಫ್’ಲೈನ್‌ ಕಥೆಗಳು
ಮಣ್ಣೆಮೋಹನ್
ಕಳೆದ ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿದ್ದ 2 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಕೊರೋನಾ ಸೋಂಕು ತಗುಲಿರುವುದು, ಶಾಲೆಗಳಿಂದ ಮಕ್ಕಳಿಗೆ ಕೊರೊನಾ ಸೋಂಕು ಹರಡುತ್ತದೆ ಎಂಬ ಸರಕಾರದ ಅಭಿಪ್ರಾಯಕ್ಕೆ ವ್ಯತಿರಿಕ್ತ. ಶಿಕ್ಷಣ ಸಚಿವರು ಯಾವುದೇ ಕಾರಣಕ್ಕೂ ಶಾಲೆಗಳನ್ನು ಮುಚ್ಚುವುದಿಲ್ಲ ಎಂಬ ಹೇಳಿದ ದಿನವೇ ಅದಕ್ಕೆ ವ್ಯತಿರಿಕ್ತವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ.
ಕರೋನಾ ಕಾಲಘಟ್ಟದುದ್ದಕ್ಕೂ ಸರಕಾರ ಶಾಲೆಗಳ ವಿಷಯದಲ್ಲಿ ತಪ್ಪು ನಿರ್ಧಾರಗಳ ಸರಣಿಯನ್ನೇ ಮಾಡುತ್ತ ಬಂದಿದೆ. ಈಗ ಮತ್ತೆ ಒಂದರಿಂದ 9 ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳಿಗೆ ಆದೇಶಿಸಿ ರುವುದು ಅದರಲ್ಲಿ ಇನ್ನೊಂದು ಭಾಗವಷ್ಟೆ.
ನಗರಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದವರು ಲಾಕ್ ಡೌನ್ ಹಿನ್ನೆಲೆಯಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳಿ ವಾಸಿಸತೊಡಗಿದ್ದರು. ಲಾಖ್‌ಡೌನ್ ತೆರವಾಗುತ್ತಿದ್ದಂತೆ ಒಮದೋಂದೇ ಕೈಗಾರಿಕೆಗಳು, ಕಚೇರಿಗಳು ಇದೀಗ ತಾನೇ ಒಂದೊಂದಾಗಿ ಕಣ್ಣು ಬಿಡತೊಡಗಿವೆ. ಕಟ್ಟಡ ನಿರ್ಮಾಣ ಕಾಮಗಾರಿಗಳು ನಿಧಾನಕ್ಕೆ ಆರಂಭಗೊಳ್ಳುತ್ತಿವೆ. ಹೀಗಾಗಿ ಕೆಲಸಗಳಿಲ್ಲದೇ ನಗರ ತೊರೆದು ಊರಿಗೆ ಮರಳಿದ್ದವರು ಮತ್ತೆ ನಗರಗಳತ್ತ  ಮುಖ ಮಾಡುತ್ತಿದ್ದಾರೆ. ಇವರೆಲ್ಲ ನಗರಗಳಿಗೆ ಬಂದು ತಮ್ಮ ಜೀವನ ಕಟ್ಟಿಕೊಳ್ಳುವುದು ಹೊಟ್ಟೆಪಾಡಿಗಾಗಿ ಎಂಬುದು ಎಷ್ಟು ಸತ್ಯವೋ, ಅಷ್ಟೆ ಸತ್ಯ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕೆಂಬುದು ಕೂಡ.
ಏತನ್ಮಧ್ಯೆ, ಶಾಲೆಗಳು ಜೂನ್‌ನಿಂದ ಆನ್‌ಲೈನ್‌ನಲ್ಲಿ ಆರಂಭಗೊಂಡರೂ, ಆರಂಭದಲ್ಲಿ ಹೆಚ್ಚಿನ ಮಕ್ಕಳು ಶಾಲೆಗಳಿಂದ ಹೊರಗುಳಿದಿದ್ದರು. ಜೂನ್ ತಿಂಗಳ ಶಾಲಾ ದಾಖಲಾತಿ ಪುಸ್ತಕಗಳನ್ನು ಗಮನಿಸಿದಾಗ ಪ್ರತಿವರ್ಷಕ್ಕಿಂತ ಶೇ.೧೦ ರಿಂದ ೨೦ ಮಕ್ಕಳು ಮಾತ್ರ ದಾಖಲಾಗಿರುವುದು ತಿಳಿಯುತ್ತದೆ. ಕ್ರಮೇಣ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ತಿಂಗಳಿನವರೆಗೂ ದಾಖಲಾತಿ ಆಗಿತ್ತಿದ್ದುದು ಕುಟುಂಬಗಳ ಮರುವಲಸೆಯ ಪ್ರತೀಕ. ಬೆಂಗಳೂರಿನಂಥ ನಗರಗಳಲ್ಲಿ ಬದುಕಲು ಗಂಡ-ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವುದು ಅನಿವಾರ್ಯ. ಅಂತೂ ಶಾಲೆಗಳು ಆಫ್ ಲೈನ್‌ನಲ್ಲಿ ಆರಂಭಗೊಂಡ ಖುಷಿಯಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ, ದಂಪತಿ ಕೆಲಸಗಳಿಗೆ ಹೋಗುತ್ತ ತಮ್ಮ ಜೀವನ ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿದ್ದರು.
ಇಂತಹ ಸಮಯದಲ್ಲಿ ಪುನಃ ಆನ್‌ಲೈನ್ ತರಗತಿಗಳನ್ನು ಘೋಷಿಸಿ ಸರಕಾರ ಗಾಯದ ಮೇಲೆ ಬರೆ ಎಳೆದಿದೆ. ಈಗ ಆನ್ ಲೈನ್ ತರಗತಿಗಾಗಿ ಮನೆಗಳಲ್ಲಿ ಮಕ್ಕಳನ್ನು ಒಂಟಿಯಾಗಿ ಬಿಟ್ಟು ಹೋಗಲು ಸಾಧ್ಯವೇ? ಎಂಬುದು ಪ್ರಶ್ನೆ. ಪೋಷಕರ ಸಹಾಯವಿಲ್ಲದೆ 1-5 ನೇ ತರಗತಿಯಲ್ಲಿ ಓದುತ್ತಿರುವ ಮಗುವೊಂದು ತನ್ನಷ್ಟಕ್ಕೆ ಫೋನನ್ನು ಆನ್ ಮಾಡಿಕೊಂಡು ತರಗತಿಗೆ ಲಾಗಿನ್ ಆಗಲು ಸಾಧ್ಯವೇ? ಅಕ್ಕ- ಪಕ್ಕದವರಿಗೆ ಹೇಳಿ ಹೋಗೋಣವೆಂದರೆ ಬಹುತೇಕ ಮನೆಗಳಲ್ಲಿ ದಂಪತಿ ಕೆಲಸಕ್ಕೆ ಹೋಗುತ್ತಿದ್ದಾರೆ.
ಒಮ್ಮೆ ಹಾಗಿಲ್ಲದಿದ್ದರೂ ಎಷ್ಟು ದಿನ ನೆರೆಹೊರೆಯವರು ಸಹಕರಿಸಿಯಾರು? ಹೀಗಾಗಿ ಅನಿವಾರ್ಯವಾಗಿ ದಂಪತಿಯರಲ್ಲಿ ಯಾರಾದರೊಬ್ಬರು ಕೆಲಸ ಬಿಡಬೇಕಿದೆ. ಆದರೆ, ಒಬ್ಬರ ದುಡಿಮೆ ಸಾಕೇ? ಅಷ್ಟು ಸಾಲದೆಂಬಂತೆ ಕೆಲ ಸಂಸ್ಥೆಗಳು ಕರೋನಾ ಸಂಕಷ್ಟದಿಂದ ಸಂಬಳ ಕಡಿತಗೊಳಿಸಿದೆ. ಹೀಗಾಗಿ ಪೋಷಕರ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಇನ್ನು ಸೀಮಗಲ್ ಪೇರೆಂಟ್ ಆಗಿರುವವರ ಕಥೆಯೇನು? ಕೆಲಸ ಬಿಟ್ಟು ಅವರು ಮನೆಯಲ್ಲಿ ಕೂರಲು ಸಾಧ್ಯವೇ? ತಾವು ಕೆಲಸ ಮಾಡುತ್ತಿರುವ ಸ್ಥಳಗಳಿಗೆ ಮಕ್ಕಳನ್ನು ಕರೆದೊಯ್ಯಲು ಅನೇಕ ಕಡೆ ನಿರ್ಬಂಧವಿದೆ.
ಹೆಚ್ಚುತ್ತಿರುವ ಕೊರೋನಾ ಕಾಲಘಟ್ಟದಲ್ಲಂತೂ ಯಾರೂ ಇತರರ ಮಕ್ಕಳನ್ನು ತಮ್ಮ ಬಳಿ ಇಟ್ಟುಕೊಳ್ಳಲು ಇಷ್ಟಪಡುವುದಿಲ್ಲ. ಒಂದು ಕಾಲದಲ್ಲಿ ದುಡಿಯುವಮಹಿಳೆಯರ ಅನುಕೂಲಕ್ಕಾಗಿ ಗಾರ್ಮೆಂಟ್ಸಗಳಲ್ಲಿ ಮಕ್ಕಳನ್ನು ನೋಡಿಕೊಳ್ಳುವ ವ್ಯವಸ್ಥೆ ಇತ್ತು. ಕೊರೋನಾ ಸಂದರ್ಭದಲ್ಲಿ ಯಾವ ಕಾರ್ಖಾನೆಯವರು ಇಂತಹ ರಿಸ್ಕ್ ಗಳನ್ನು ತೆಗೆದುಕೊಳ್ಳಲು ಸಿದ್ಧರಿಲ್ಲ. ಇದು ಒಂದು ರೀತಿಯ ಸಮಸ್ಯೆಯಾದರೆ, ತುಸು ಬೆಳೆಯುತ್ತಿರುವ ಹೆಣ್ಣುಮಕ್ಕಳನ್ನು ಒಂಟಿಯಾಗಿ ಬಿಟ್ಟು ಹೋಗುವುದು ಹೇಗೆ? ಅವರ ಸುರಕ್ಷತೆಯ ಪ್ರಶ್ನೆ ಬೃಹದಾಕಾರವಾಗಿ ಎದುರಾಗಿದೆ. ಯಾವ್ಯಾವುದೋ ನೆಪದಲ್ಲಿ ವಂಚಿಸಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ದಿನನಿತ್ಯ ವರದಿಯಾಗುತ್ತಿದೆ.
ಹೀಗಿರುವಾಗ ಯಾರು ಧೈರ್ಯ ಮಾಡಿಯಾರು? ಒಂದೊಮ್ಮೆ ಅನಾಹುತಗಳಿಗೆ ಎಡೆಯಾದರೆ ಇದರ ಜವಾಬ್ದಾರಿಯನ್ನು ಸರಕಾರ ಹೊರಲು ಸಿದ್ಧವಿದೆಯೇ? ಬರೀ ಇಷ್ಟೇ ಆಗಿರದೇ ಇದರ ಇನ್ನೊಂದು ಕರಾಳ ಮುಖವೂ ನಮಗೆಲ್ಲ ಗೊತ್ತಿರಬೇಕಾಗುತ್ತದೆ. ಮಕ್ಕಳ ಕಳ್ಳಸಾಗಾಣಿಕೆಯ ಬಹುದೊಡ್ಡ ಜಾಲಗಳು ಆಗಾಗ ತಲೆಎತ್ತಿತ್ತವೆ. ಅದರಲ್ಲೂ ಹೆಣ್ಣುಮಕ್ಕಳ ಕಳ್ಳಸಾಗಣೆ ನಮ್ಮ ದೇಶದಲ್ಲಿ ವ್ಯಾಪಕವಾಗಿದೆ. ಈ ಹಿನ್ನೆಲೆಯಲ್ಲಿ ಒಬ್ಬಂಟಿಯಾಗಿರುವ ಮಕ್ಕಳು ಗುರಿಯಾದರೆ ಗತಿಯೇನು?ಮತ್ತೂ ಒಂದು ಸಮಸ್ಯೆ ಇಲ್ಲಿದೆ.
ಒಂಟಿ ಮಕ್ಕಳನ್ನು ಮನೆಯಲ್ಲಿ ಕೂಡಿ ಹಾಕಿ ಹೋದರೆ ಮಕ್ಕಳ ಮಾನಸಿಕ ಅಸ್ವಸ್ಥತೆಗೆ ಕಾರಣವಾಗುವುದಿಲ್ಲವೆ? ಇದು ಮಕ್ಕಳ ಹಕ್ಕುಗಳ ಉಲ್ಲಂಘನೆಯಲ್ಲವೆ? ಇತರ ಸಹಪಾಠಿಗಳೊಂದಿಗೆ ನಗುನಗುತ್ತ ಲವಲವಿಕೆಯಿಂದ ಶಾಲೆಗಳಲ್ಲಿ ಕಲಿಯುವ ಮನಃಸ್ಥಿತಿಯನ್ನು ರೂಢಿಸಿಕೊಂಡ ಮಗುವೊಂದು, ಏಕಾಏಕಿ ಏಕಾಂಗಿ ಯಾಗಿ ಕುಳಿತು ಪಾಠ ಕೇಳುವ ಪರಿಸ್ಥಿತಿಯ ಮನಃಸ್ಥಿತಿಗೆ ಒಗ್ಗಲು ಸಾಧ್ಯವೇ? ಮಕ್ಕಳ ಮನೋ ಭೂಮಿಕೆಯಲ್ಲಿ ಏಕಾಂತತೆ ಮೂಡಿಸುವ ಅಕರಾಳ ವಿಕರಾಳ ಭಾವನೆಗಳು ಮುಂದೆ ಮಗುವನ್ನು ಯಾವ ರೀತಿ ರೂಪಿಸಬಹುದು ಎಂಬ ಪ್ರಶ್ನೆಗಳಿಗೆ ಮನಶ್ಶಾಸ್ತ್ರತಜ್ಞರು ಉತ್ತರಿಸಬೇಕಿದೆ.
ಇನ್ನು ಮಕ್ಕಳು ಅಮ್ಮಂದಿರ ಮಾತನ್ನು ಗಣನೆಗೆ ತೆಗೆದುಕೊಳ್ಳದೆ ಆನ್‌ಲೈನ್ ತರಗತಿ ಸಂದರ್ಭದಲ್ಲಿ ಮೆನೆಗೆ ಬಂದುಹೋದವರು, ಅಕ್ಕಪಕ್ಕದವರ ಜತೆಗಿನ ಮಾತಿನತ್ತ ಗಮನ ಹರಿಸುವುದು, ದಿನಸಿ ತರಕಾರಿ ತರಲು ಅಂಗಡಿಗೆ ಹೋದರೆ ತರಗತಿಗಳನ್ನು ಮೊಟಕುಗೊಳಿಸಿ ತಾನೂ ಜತೆಯಲ್ಲಿ ಬರುತ್ತೇನೆಂದು ಹಟ ಮಾಡುವುದು ಮಾಮೂಲಿಯಾಗಿದೆ ಎಂದು ಅನೇಕ ಅಮ್ಮಂದಿರ ದೂರು. ಎಲ್ಲವನ್ನೂ ನಿಭಾಯಿಸುತ್ತೇನೆಂದರೂ 6-9 ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳ ಕೈಗೆ ಸ್ವತಂತ್ರವಾಗಿ ಫೋನನ್ನು ಕೊಡಲು ಪೋಷಕರು ಸಿದ್ಧರಿಲ್ಲ. ಏಕೆಂದರೆ ಕಳೆದ ೨ ವರ್ಷಗಳಿಂದ ಮಕ್ಕಳಲ್ಲಿ ಆಗಿರುವ ಅಸಹಜ ನಡವಳಿಕೆ ಇದಕ್ಕೆ ಕಾರಣ. ಗೇಮ್ ಗಳಿಗೆ, ಸಿನಿಮಾಗಳಿಗೆ, ಅಶ್ಲೀಲ ವಿಡಿಯೋಗಳಿಗೆ ಮತ್ತು ಕೆಲವರು ಚಾಟಿಂಗ್‌ಗೆ ಆಡಿಕ್ಟ್ ಆಗುತ್ತಿದ್ದಾರೆ. ಮಕ್ಕಳು ತಪ್ಪುದಾರಿ ತುಳಿಯಲು ಇದೇ ಕಾರಣವಾಗುತ್ತಿದೆ.
ಪೋಷಕರು ಫೋನಿನ ರೀಚಾರ್ಜ್ ಮಾಡಿಸಲಿಲ್ಲವೆಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಇತ್ತೀಚೆಗೆ ನಾವು ಪತ್ರಿಕೆಗಳಲ್ಲಿ ಓದಿದ್ದೇವೆ. ತರಗತಿಗಳು ನಡೆಯುವ ಸಂದರ್ಭದಲ್ಲೂ ಕೆಲವು ಮಕ್ಕಳು ಫೋನಿನಲ್ಲಿ ತಲ್ಲೀನವಾಗಿರುವುದನ್ನು ಕಂಡುಹಿಡಿದು, ಅವರ ಪೋಷಕರನ್ನು ಕರೆದು ಎಚ್ಚರಿಸು ತ್ತಿರುವುದು ಅನೇಕ ಶಾಲೆಗಳಲ್ಲಿ ನಿತ್ಯ ಸಂಗತಿ. ತರಗತಿಗಳು ನಡೆಯುತ್ತಿರುವಾಗಲೂ ಪಾಠಗಳ ಕಡೆ ಗಮನ ಕೊಡದೆ ಮಕ್ಕಳು ಅನ್ಯಮನಸ್ಕ ರಾಗಿರುವುದು ಅನೇಕ ಕಡೆ ಕಂಡುಬರುತ್ತಿದೆ.
ಸುಲಭದಲ್ಲಿ ಸಿಗುತ್ತಿರುವ ಪೊರ್ನ್ ವಿಡಿಯೋಗಳ ಪ್ರಭಾವದಿಂದ ಗಂಡು- ಹೆಣ್ಣು ಮಕ್ಕಳು ಪರಸ್ಪರ ನೋಡುವ ನೋಟವೇ ಬದಲಾಗಿದೆ ಎಂಬುದು ಕೂಡಇತ್ತೀಚಿನ ವರದಿಗಳಿಂದ ತಿಳಿದು ಬರುತ್ತದೆ. ತಮ್ಮ ಶಾಲೆಯ ಸಹಪಾಠಿಗಳೊಂದಿಗೆ, ನೆರೆಹೊರೆಯವರೊಂದಿಗೆ ಅಥವಾ ಅನಾಮಿಕರೊಂದಿಗೆ ವಯೋ ಸಹಜ ಸೆಳೆತಕ್ಕೊಳಗಾಗಿ ಮಕ್ಕಳು ಗಂಟೆಗಟ್ಟಲೆ ಫೋನಿನಲ್ಲಿ ಮಾತನಾಡುತ್ತಿದ್ದಾರೆ. ಗೇಮ್‌ಗಳನ್ನು ಅನುಕರಿಸಲು ಹೋಗಿ ಅನೇಕ ಮಕ್ಕಳು ಸಾವನ್ನೂ ಅಪ್ಪಿದ್ದಾರೆ. ಮಕ್ಕಳ ಉಡುಗೆ-ತೊಡುಗೆ- ನಡಿಗೆ-ನಡವಳಿಕೆ ಮತ್ತು ಮಾತನಾಡುವ ಶೈಲಿಯೂ ಸಂಪೂರ್ಣ ಬದಲಾಗಿದೆ. ಎರಡು ವರ್ಷಗಳಿಂದ ಸರಿಯಾಗಿ ಶಾಲೆಗಳಿಲ್ಲದೇ ಓದು- ಬರವಣಿಗೆಯನ್ನು ಮರೆತ ಮಕ್ಕಳನ್ನು ಮತ್ತೆ ಮೊದಲಿನ ಹಳಿಗೆ ತರಲು ಶಿಕ್ಷಕರು ಪಡುತ್ತಿರುವ ಪಾಡಂತೂ ಯಾರಿಗೂ ಬೇಡ.
ಹರಡುತ್ತಿರುವ ಸಾಂಕ್ರಾಮಿಕ ನಿಯಂತ್ರಣಕ್ಕೆ ಸರಕಾರ ತೆಗೆದುಕೊಂಡಿರುವ ಈ ಕ್ರಮ ಮೇಲ್ನೋಟಕ್ಕೆ ಸರಿ ಎಂಬಂತೆ ಕಂಡರೂ, ಕೌಟುಂಬಿಕ, ಸಾಮಾಜಿಕ, ಶೈಕ್ಷಣಿಕ ದುಷ್ಪರಿಣಾಮಕ್ಕೆ ಕಾರಣವಾಗಿರುವುದಂತೂ ಸತ್ಯ. ಹಿಂದು- ಮುಂದು ಯೋಚಿಸದೇ ಸರಕಾರ ತೆಗೆದುಕೊಳ್ಳುವ ಒಂದು ತಪ್ಪು ನಿರ್ಧಾರ ಎಷ್ಟೊಂದುಅನಾಹುತಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ನಿರ್ಧಾರ ತೆಗೆದುಕೊಳ್ಳುವ ಮುನ್ನ ಶಾಲಾ ಆಡಳಿತ ಮಂಡಳಿಗಳು, ಮಕ್ಕಳ ಹಕ್ಕುಗಳ ಆಯೋಗ, ಶಿಕ್ಷಕರು ಮತ್ತು ಪೋಷಕರ ಅಭಿಪ್ರಾಯ ಸಂಗ್ರಹಿಸಬೇಕಿತ್ತು.
ಕ್ಯಾಂಮ್ಸ ಸಂಘಟನೆಯ ಕಾರ್ಯದರ್ಶಿ ಡಿ.ಶಶಿಕುಮಾರ್ ಹೇಳುವಂತೆಮಕ್ಕಳನ್ನು ಮನೆಗಳಲ್ಲಿರಿಸಿ, ಹೊರಗೆ ಕೆಲಸಕ್ಕೆ ಹೋಗಿ ಬರುವ ಪೋಷಕರಿಂದಕೊರೋನಾ ಮಕ್ಕಳಿಗೆ ದಾಟುವುದಿಲ್ಲವೇ? ಹಾಗೆ ನೋಡಿದರೆ ಶಾಲೆಯೊಂದನ್ನು ಬಿಟ್ಟು ಉಳಿದೆಲ್ಲೆಡೆ ಮಕ್ಕಳು ಕಾಣುತ್ತಿದ್ದಾರೆ. ಹೊರಗೆ ಪಾಲನೆಯಾಗುತ್ತಿರುವು ದಕ್ಕಿಂತ ಹೆಚ್ಚು ಮಾರ್ಗಸೂಚಿ ಪಾಲನೆ ಶಾಲೆಗಳಲ್ಲಾಗುತ್ತಿತ್ತು. ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಯ ಸಂಘಟನೆಗಳು ಪ್ರಾಮಾಣಿಕವಾಗಿ ಕೋವಿಡ್ ನಿಯಂತ್ರಣ ಮಾಡಿ ಎಂದು ಸರಕಾರವನ್ನು ಒತ್ತಾಯಿಸಿದಾಗ, ಯಾವುದೇ ಜವಾಬ್ದಾರಿ ಹಾಗೂ ಇಚ್ಛಾಶಕ್ತಿ ಪ್ರದರ್ಶಿಸದೇ ಈಗ ತರಗತಿಗಳನ್ನು ಸ್ಥಗಿತ ಮಾಡಿರುವುದು ದುರ್ದೈವ.
ಕಳೆದ ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿದ್ದ ೨ ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಕೊರೋನಾ ಸೋಂಕು ತಗುಲಿರುವುದು, ಶಾಲೆಗಳನ್ನು ತೆರೆಯುವುದರಿಂದ ಮಕ್ಕಳಿಗೆ ಕೊರೊನಾ ಸೋಂಕು ಹರಡುತ್ತದೆ ಎಂಬ ಸರಕಾರದ ಅಭಿಪ್ರಾಯಕ್ಕೆ  ತಿರಿಕ್ತವಾದದ್ದು. ಶಿಕ್ಷಣ ಸಚಿವರು ಯಾವುದೇ ಕಾರಣಕ್ಕೂ ಶಾಲೆಗಳನ್ನು ಮುಚ್ಚುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ದಿನವೇ ಅದಕ್ಕೆ ವ್ಯತಿರಿಕ್ತವಾಗಿ ನಿರ್ಧಾರ ತೆಗೆದುಕೊಂಡಿರುವುದು ನಿಜಕ್ಕೂ ಅಸಮಂಜಸ. ಈಗಾಗಲೇ ತಜ್ಞರು ಮಕ್ಕಳಿಗೆ ಹೆಚ್ಚಿನ ಸ್ವರೂಪದಲ್ಲಿ ಸಮಸ್ಯೆ ಉಂಟಾಗುವುದಿಲ್ಲ ಎಂದಿದ್ದಾರೆ. ದೊಡ್ಡವರಿಗಿಂತ ಮಕ್ಕಳಲ್ಲಿಯೇ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ ಎಂಬಸಾಮಾನ್ಯ eನವೂ ಇಲ್ಲದೆ, ಮಕ್ಕಳ ಆರೊಗ್ಯದ ಕುಂಟು ನೆಪವನ್ನೊಡ್ಡಿ, ಉಳಿದ ಎಲ್ಲವನ್ನೂ ಯಥಾಸ್ಥಿತಿಯಲ್ಲಿ ಕಾಯ್ದುಕೊಂಡು, ಕೇವಲ ಶಾಲಾ ಮಕ್ಕಳ ಮೇಲೆ ಕೆಂಗಣ್ಣು ಬೀರುತ್ತಿರುವುದರ ಹಿಂದಿನ ಉದ್ದೇಶವಾದರೂ ಏನು? ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿ, ಸುರಕ್ಷಾನಿಯಮಗಳನ್ನುಪಾಲಿಸಬೇಕೆಂಬ ಎಚ್ಚರಿಕೆಯೊಂದಿಗೆ ಶಾಲೆಗಳನ್ನು ಎಂದಿನಂತೆ ನಡೆಸಲು ಅನುವು ಮಾಡಿಕೊಡಬೇಕೆಂಬುದು ಬಹುಜನ ಪೋಷಕರಅಭಿಪ್ರಾಯ.