ಸಿಂಪಲ್ಲಾಗಿ ಒಂದು ಪೆನ್ಸಿಲ್ ಸ್ಟೋರಿ…
ವಿದೇಶವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್
@.
ವಿಶ್ವದ ಹೆಚ್ಚು ಪೆನ್ಸಿಲ್ ಉತ್ಪಾದಿಸುವ ದೇಶಗಳ ಪಟ್ಟಿಯಲ್ಲಿ ಚೀನಾ, ಜರ್ಮನಿ ಮತ್ತು ಬ್ರೆಜಿಲ್ ಸ್ಥಾನ ಪಡೆದಿವೆ. ಈ ಕಂಪನಿಗಳೆಲ್ಲ ಸರಕಾರದಿಂದ ದೊಡ್ಡಮೊತ್ತದ ಧನ ಸಹಾಯ ಪಡೆದಿವೆ. ಹಿಂದೂಸ್ಥಾನ್ ಪೆನ್ಸಿಲ್ ಸಂಸ್ಥೆ ಇದುವರೆಗೆ ಸರಕಾರದಿಂದ ಯಾವ ಸಹಾಯವನ್ನೂ ಕೇಳಿಲ್ಲ ಎನ್ನುವುದು ಅದರ ಅಗ್ಗಳಿಕೆ.
ಒಮ್ಮೆ ಪೆನ್ಸಿಲ್ ತಯಾರಿಸಿದವನೊಬ್ಬ ಪೆಟ್ಟಿಗೆಯಲ್ಲಿ ತುಂಬುವ ಮೊದಲು ಅದಕ್ಕೆ ಹೇಳಿದನಂತೆ, ನಿಮ್ಮನ್ನು ಈ ಜಗತ್ತಿಗೆ ಕಳಿಸುವ ಮೊದಲು ನೀವು ತಿಳಿದುಕೊಳ್ಳಬೇಕಾದ ಐದು ಪ್ರಮುಖ ಅಂಶಗಳಿವೆ. ಅದನ್ನು ನೆನಪಿನಲ್ಲಿಟ್ಟು ಪಾಲಿಸಿದರೆ ನೀವು ಅತ್ಯುತ್ತಮ ಪೆನ್ಸಿಲ್ ಎಂದು ಹೆಸರುವಾಸಿಯಾಗುತ್ತೀರಿ.
ಮೊದಲನೆಯದಾಗಿ, ನೀವು ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಯಾವುದಾದರೂ ಒಳ್ಳೆಯ ಕೈ ನಿಮ್ಮನ್ನು ಹಿಡಿಯಬೇಕು, ಅದಕ್ಕೆ ನೀವು ಅನುಮತಿ ಕೊಡಬೇಕು. ಎರಡನೆಯದಾಗಿ, ನೀವು ತೀಕ್ಷ್ಣತೆ ಕಳೆದುಕೊಂಡರೆ, ಆಗಾಗ ನಿಮ್ಮನ್ನು ಮೊನಚುಗೊಳಿಸಲಾಗುತ್ತದೆ. ಆಗ ಎಷ್ಟೇ ನೋವಾದರೂ ಸಹಿಸಿಕೊಳ್ಳ ಬೇಕು. ಮೂರನೆಯದಾಗಿ, ನೀವು ಮಾಡಿದ ಯಾವುದೇ ತಪ್ಪನ್ನು ನೀವು ತಿದ್ದಿಕೊಳ್ಳಲು ಅವಕಾಶ ಇರುತ್ತದೆ.
ನಾಲ್ಕನೆಯದಾಗಿ, ನಿಮ್ಮ ಒಳಗಿನ ಭಾಗ ಅತ್ಯಂತ ಸತ್ತ್ವಯುತವಾದದ್ದೇ ವಿನಾ ಹೊರಗಿನದ್ದಲ್ಲ. ಕೊನೆಯ ದಾಗಿ, ಯಾವ ಮೇಲ್ಮೈನಲ್ಲಿ ಬಳಸಿದರೂ ನೀವು ನಿಮ್ಮ ಗುರುತನ್ನು ಬಿಟ್ಟು ಬರಬೇಕು ಮತ್ತು ಕೊನೆಯವರೆಗೂ ನೀವು ಬರೆಯುತ್ತಲೇ ಇರಬೇಕು. ಒಪ್ಪಿದ ಪೆನ್ಸಿಲ್ ಪೆಟ್ಟಿಗೆಯನ್ನು ಸೇರಿಕೊಂಡಿತು. ಈಗ ಪೆನ್ಸಿಲ್ ಜಾಗದಲ್ಲಿ ನಿಮ್ಮನ್ನು ಇಟ್ಟುಕೊಂಡು ನೋಡಿ. ನೀವು ಅನೇಕ ಮಹತ್ತರವಾದ ಕೆಲಸ ಮಾಡಿ ಹೆಸರು ಗಳಿಸಲು ಸಾಧ್ಯ. ಆದರೆ ದೇವರು ಅಥವಾ ಯಾವುದಾದರೂ ಮಹಾನುಭಾವರು ನಿಮ್ಮ ಕೈ ಹಿಡಿಯಬೇಕು. ನಿಮ್ಮ ಜೀವನದಲ್ಲಿ ಬರುವ ನೋವನ್ನು, ಕಷ್ಟಗಳನ್ನು ಸಹಿಸಿಕೊಂಡರೆ ಇನ್ನಷ್ಟು ಬಲಾಢ್ಯರಾಗುತ್ತೀರಿ.
ನೀವು ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ನಿಮಗೆ ಅವಕಾಶ ಇದ್ದೇ ಇರುತ್ತದೆ. ನಿಮ್ಮ ಅಂತಃಸತ್ವವೇ ನಿಮ್ಮ ಶಕ್ತಿ. ನೀವು ಮಾಡುವ ಕೆಲಸದಲ್ಲಿ ನಿಮ್ಮ ಗುರುತು ಬಿಡಬೇಕು ಮತ್ತು ಕೊನೆಯವರೆಗೆ ನಿಮ್ಮ ಕೆಲಸ ಮಾಡುತ್ತಲೇ ಇರಬೇಕು. ಈ ಕತೆಯನ್ನು ಬಹುತೇಕ ಎಲ್ಲರೂ ಕೇಳಿದವರೇ. ಇದೊಂದು ಪೆನ್ಸಿಲ್ ಹೇಳಿಕೊಡುವ ಜನಪ್ರಿಯ ನೀತಿ ಪಾಠ. ಪ್ರಸಿದ್ಧ ಲೇಖಕ ಪೌಲೊ ಕೊಯೆಲೊ ತನ್ನ     ನಲ್ಲಿ ಈ ಕಥೆಯನ್ನು ಬಳಸಿಕೊಂಡಾಗಿನಿಂದ ಅದು ಇನ್ನಷ್ಟು ಲೋಕಪ್ರಿಯವಾಯಿತು.
ಇದು ಯಾರು ಹೇಳಿದ ಕತೆಯೋ ಗೊತ್ತಿಲ್ಲ. ಖಂಡಿತವಾಗಿಯೂ 1795 ರಲ್ಲಿ ಮೊದಲ ಪೆನ್ಸಿಲ್ ತಯಾರಿಸಿದ ಫ್ರಾನ್ಸ್‌ನ ವಿಜ್ಞಾನಿ ನಿಕೋಲಸ್ ಜಾಬ್ಸ್ ಹೇಳಿದ್ದಲ್ಲ. ಗ್ರಾಫೈಟ್, ಜೇಡಿಮಣ್ಣು ಮತ್ತು ನೀತಿನ ಮಿಶ್ರಣ ಮಾಡಿ, ಅದನ್ನು ಭಟ್ಟಿಯಲ್ಲಿಟ್ಟು ಸುಟ್ಟು ಪೆನ್ಸಿಲ್ ತಯಾರಿಸಿದವನಿಗೆ ಅಷ್ಟೊಂದು ಪುರುಸೊತ್ತಾದರೂ ಎಲ್ಲಿಂದಸಿಗಬೇಕು? ಆದರೂ ಕತೆ ಚೆನ್ನಾಗಿದೆ, ಅನುಕರಣೀಯವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಚಿಕ್ಕವರಾಗಿದ್ದಾಗ ನಾವು ಬಳಸುತ್ತಿದ್ದ, ನಮಗೆ ಆಪ್ತವಾಗಿದ್ದ ಪೆನ್ಸಿಲ್ ಎಂದರೆ ಕೆಂಪು ಮತ್ತು ಕಪ್ಪುಪಟ್ಟಿಯ ನಟರಾಜ್ ಪೆನ್ಸಿಲ್. ಬಿಟ್ಟರೆ ಅಪ್ಸರಾ ಪೆನ್ಸಿಲ್. ಆ ಕಾಲದಲ್ಲಿ ಅಪ್ಸರಾ ಬಳಸುತ್ತಿದ್ದವರು ಸ್ವಲ್ಪ ಡೌಲು ಹೊಡೆಯುತ್ತಿದ್ದರು ಎಂಬುದೂ ನಿಜ. ಏಕೆಂದರೆ, ನಟರಾಜ್ ಪೆನ್ಸಿಲ್‌ಗಿಂತ ಅಪ್ಸರಾದ ಬೆಲೆ ಸ್ವಲ್ಪ ಹೆಚ್ಚು ಎಂಬ ಕಾರಣಕ್ಕಾಗಿ ಅದೊಂದು ಲಕ್ಸುರಿ. ಆಗ ಈ ಎರಡನ್ನೂ ತಯಾರಿಸುತ್ತಿದ್ದುದು ಒಂದೇ ಕಂಪನಿ ಎಂದು ತಿಳಿದಿರಲಿಲ್ಲ. ಇದೂ ಒಂದು ರೀತಿಯ ವ್ಯಾಪಾರದತಂತ್ರ ಎನ್ನುವುದು ತಿಳಿಯಲು ಕೆಲವು ವರ್ಷಗಳೇ ಬೇಕಾಯಿತು. ಕೆಲವು ಕಂಪನಿಗಳು ಇಂದಿಗೂ ಈ ತಂತ್ರವನ್ನು ಅಳವಡಿಸಿಕೊಂಡಿವೆ. ಉದಾಹರಣೆಗೆಹೇಳುವುದಾದರೆ, ಕೊಲ್ಲಿ ರಾಷ್ಟ್ರಗಳಲ್ಲಿ, ಟೊಯೋಟಾ ಸಂಸ್ಥೆ ಮೇಲ್ವರ್ಗದವರಿಗಾಗಿ ಲೆಕ್ಸಸ್, ನಿಸ್ಸಾನ್ ಸಂಸ್ಥೆ ಇನಿನಿಟಿ ಹೆಸರಿನಲ್ಲಿ ವಾಹನಗಳನ್ನು ಮಾರು ಕಟ್ಟೆಗೆ ಬಿಟ್ಟಂತೆ.
ಈ ತಂತ್ರವನ್ನು ವಿಶ್ವದಾದ್ಯಂತ ಚಹಾ, ಕಾಫಿ, ಚಾಕಲೇಟ್, ಬಿಸ್ಕತ್ತು ತಯಾರಿಸುವ ಸಂಸ್ಥೆಗಳೂ ಸೇರಿದಂತೆ ಅನೇಕರು ಅನುಸರಿಸಿಕೊಂಡು ಬಂದಿದ್ದಾರೆ.ಅಷ್ಟು ದೂರ ಏಕೆ, ಒಂದೇ ಬೀದಿಯಲ್ಲಿ, ಒಂದೇ ಬಗೆಯ ವಸ್ತು ಮಾರಾಟಮಾಡುವ, ಬೇರೆ ಬೇರೆ ಹೆಸರಿನ ಅಂಗಡಿಗಳ ಮಾಲೀಕರು ಒಬ್ಬರೇ ಆಗಿರುವ  ಉದಾ ಹರಣೆ ನಮ್ಮಲ್ಲಿ ಸಾಕಷ್ಟಿದೆ. ಅದೆಲ್ಲ ಈಗ ಅರ್ಥವಾಗುತ್ತಿದೆ. ಆದರೆ ಇಂದಿಗೂ ಅರ್ಥವಾಗದ ಸಂಗತಿಯೆಂದರೆ, ಪೆನ್ಸಿಲ್‌ಗೆ ನಟರಾಜ ಅಥವಾ ಅಪ್ಸರಾ ಎಂಬ ಹೆಸರು ಏಕೆ? ಆ ಹೆಸರಿಗೂ, ಬರವಣಿಗೆಗೂ ಅಥವಾ ಚಿತ್ರಕ್ಕೂ ಏನು ಸಂಬಂಧ? ಶಾರದಾ, ಸರಸ್ವತಿ ಎಂದು ಹೆಸರಿಡಬಹುದಾಗಿತ್ತು.
ಬೇಡ, ಲೇಖಕ್, ಚಿತ್ರಕಾರ, ಕಲಾಕಾರ ಅಥವಾ  ,  ,   ಹೀಗೆ ಅದಕ್ಕೆ ಹೊಂದುವ ಅಥವಾ ಹತ್ತಿರವಾಗುವ ಹೆಸರಿಡ ಬಹುದಿತ್ತಲ್ಲ. ಇರಲಿ, ಈ ಅಹವಾಲನ್ನು ಕೇಳುವವರೂ ಇಲ್ಲ, ಯಾರ ಮುಂದೆ ಹೇಳಿಕೊಳ್ಳುವಷ್ಟು ಗಂಭೀರವಾದದ್ದೂ ಅಲ್ಲ ಬಿಡಿ. ಗಮನಿಸಬೇಕಾದದ್ದು ಬೇರೆಯೇ ಇದೆ. ಭಾರತಕ್ಕೆ ಸ್ವಾತಂತ್ರ್ಯ ಸಿಗುವುದಕ್ಕಿಂತ ಮೊದಲು ಗುಂಡುಸೂಜಿಯಿಂದ ಹಿಡಿದು ಮದ್ದುಗುಂಡಿನವರೆಗೆ ಬಹುತೇಕ ವಸ್ತುಗಳೆಲ್ಲ ವಿದೇಶದಿಂದಲೇ ಆಮದಾಗುತ್ತಿದ್ದವು. ಪೆನ್ಸಿಲ್ ಕೂಡ ಅದಕ್ಕೆ ಹೊರತಾಗಿರಲಿಲ್ಲ.
ಆ ಕಾಲದಲ್ಲಿ ಜನಸಾಮಾನ್ಯರು ಲೇಖನಿಗಿಂತ ಪೆನ್ಸಿಲನ್ನೇ ಹೆಚ್ಚು ಬಳಸುತ್ತಿದ್ದರು. ಭಾರತಕ್ಕೆ ಜರ್ಮನಿ ಮತ್ತು ಜಪಾನ್ ದೇಶದಿಂದ ಪೆನ್ಸಿಲ್ ಆಮದಾಗುತ್ತಿತ್ತು.1939- 40ರ ವೇಳೆಗೆ ನಮ್ಮ ದೇಶ ವರ್ಷಕ್ಕೆ ಸುಮಾರು ಆರೂವರೆ ಲಕ್ಷ ರೂಪಾಯಿ ಮೌಲ್ಯದ ಪೆನ್ಸಿಲ್ ಆಮದು ಮಾಡಿಕೊಳ್ಳುತ್ತಿತ್ತು. ವಿಶ್ವಮಹಾಯುದ್ಧದ ಸಂದರ್ಭದಲ್ಲಿ ಅದೂ ನಿಂತುಹೋಯಿತು. ಆಗ ಕೆಲವು ಭಾರತೀಯರು ಕಲ್ಕತ್ತಾ, ದೆಹಲಿ ಮೊದಲಾದ ನಗರಗಳಲ್ಲಿ ಪೆನ್ಸಿಲ್ ತಯಾರಿಸುವ ಸಣ್ಣ ಉದ್ಯಮವನ್ನು ಆರಂಭಿಸಿದರು. ವಿಶ್ವ ಯುದ್ಧ ಮುಗಿದ ನಂತರ, ಪುನಃ ವಿದೇಶದಿಂದ ಸರಕುಗಳು ಬರಲಾರಂಭಿಸಿದವು.
ಪೆನ್ಸಿಲ್ ಆಮದು ಮಾಡಿಕೊಳ್ಳದಂತೆ ದೇಶೀಯ ಉದ್ಯಮಿಗಳು ಬ್ರಿಟಿಷ್ ಸರಕಾರದ ಮುಂದೆ ಬೇಡಿಕೆ ಇಟ್ಟರು. ಭಾರತದಲ್ಲಿ ತಯಾರಾಗುತ್ತಿದ್ದ ಸರಕು ವಿದೇಶ ದಲ್ಲಿ ತಯಾರಾಗುತ್ತಿದ್ದ ಪೆನ್ಸಿಲ್‌ಗಳಷ್ಟು ಗಟ್ಟಿಮುಟ್ಟಾಗಿರದೆ, ಬೇಗ ಮುರಿದು ಹೋಗುತ್ತಿದ್ದುದರಿಂದ, ಜನರ ಒಲವೂ ವಿದೇಶಿ ಪೆನ್ಸಿಲ್ ಕಡೆಗೇ ಇತ್ತು. ಆ ಕಾರಣ ದಿಂದ ಬ್ರಿಟಿಷರು ಭಾರತೀಯ ಉದ್ಯಮಿಗಳ ಬೇಡಿಕೆಯನ್ನು ಮನ್ನಿಸಲಿಲ್ಲ. ಅಲ್ಲಿಗೆ ಭಾರತದಲ್ಲಿ ಪೆನ್ಸಿಲ್ ಉದ್ಯಮ ಮುಚ್ಚಿಹೋಯಿತು.
ಸ್ವಾತಂತ್ರ್ಯ ಸಿಕ್ಕು ಕೆಲ ವರ್ಷಗಳ ನಂತರ ಮೂರು ಮಿತ್ರರು ಮತ್ತೊಮ್ಮೆ ಪೆನ್ಸಿಲ್ ತಯಾರಿಸುವ ಸಾಹಸಕ್ಕೆ ಕೈ ಹಾಕಿದರು. ಬಿ.ಜೆ. ಸಾಂಘವಿ, ರಾಮನಾಥ್ ಮೆಹ್ರಾ ಮತ್ತು ಮನ್ಸುಖಾನಿ ಜರ್ಮನಿಗೆ ತೆರಳಿ, ಪೆನ್ಸಿಲ್ ತಯಾರಿಸುವ ತಂತ್ರಜ್ಞಾನ ಕಲಿತರು. ಭಾರತಕ್ಕೆ ಹಿಂತಿರುಗಿ,1958ರಲ್ಲಿ ಮುಂಬೈನಲ್ಲಿ ‘ಹಿಂದೂ ಸ್ತಾನ್ ಪೆನ್ಸಿಲ್ ಪ್ರೈವೇಟ್ ಲಿಮಿಟೆಡ್’ ಕಂಪನಿ ಆರಂಭಿಸಿದರು. ಅಲ್ಲಿಂದ, ಭಾರತದಲ್ಲಿ ವಿದೇಶಕ್ಕಿಂತ ಗಟ್ಟುಮುಟ್ಟಾದ ಪೆನ್ಸಿಲ್ ಕಡಿಮೆ ಬೆಲೆಗೆ ಸಿಗುವಂತಾ ಯಿತು.
ಕ್ರಮೇಣ ಮಾರುಕಟ್ಟೆಯಲ್ಲಿ ಎರಡು ರೀತಿಯ ಗ್ರಾಹಕರಿದ್ದುದನ್ನು ಗಮನಿಸಿದ ಸಂಸ್ಥೆ, ಅಪ್ಸರಾ ಎಂಬ ಹೆಸರಿನಲ್ಲಿ, ಗುಣಮಟ್ಟದಲ್ಲಿ ಸ್ವಲ್ಪ ಹೆಚ್ಚಾಗಿರುವ ಪೆನ್ಸಿಲ್ ತಯಾರಿಸಲು ಆರಂಭಿಸಿತು. ಮೊದಲು ಚಿತ್ರ ಬಿಡಿಸುವವರು ಇದನ್ನು ಇಷ್ಟಪಟ್ಟರು. ನಂತರ, ಸಾಮಾನ್ಯರಿಗಿಂತ ಸ್ವಲ್ಪ ಮೇಲ್ದರ್ಜೆಯ ಜನರು ಇದನ್ನು ಕೊಳ್ಳಲು ಆರಂಭಿಸಿದರು. ಹೀಗೆ ಎರಡೂ ವರ್ಗದ ಗ್ರಾಹಕರ ಬೇಡಿಕೆಯನ್ನು ಒಂದೇ ಸಂಸ್ಥೆ ಪೂರೈಸಿತು. ನಂತರದ ದಿನಗಳಲ್ಲಿ ಸಂಸ್ಥೆ ಎರೇಸರ್ರ‍್ಸ್,ಶಾರ್ಪ್ನರ‍್ಸ್, ಪೆನ್ನು, ಅಳತೆ ಪಟ್ಟಿ ಮೊದಲಾದವುಗಳ ತಯಾರಿಕೆಯಲ್ಲೂ ತನ್ನನ್ನು ತೊಡಗಿಸಿಕೊಂಡಿತು.
ಇಂದು ಭಾರತದಲ್ಲಿ ಕ್ಯಾಮಲಿನ್, ಡೋಮ್ಸ್, ಸೇರಿದಂತೆ ಹಲವಾರು ಸಂಸ್ಥೆಗಳು ಪೆನ್ಸಿಲ್, ಪೆನ್ ಮತ್ತು ಕಚೇರಿಯಲ್ಲಿ ಬಳಸುವ ವಸ್ತುಗಳನ್ನು ತಯಾರಿಸುತ್ತಿವೆ. ಆದರೆ ಹಿಂದೂಸ್ತಾನ್ ಪೆನ್ಸಿಲ್ ಸಂಸ್ಥೆ ತನ್ನ ಸ್ಥಾನದಲ್ಲಿ ಗಟ್ಟಿಯಾಗಿ ಬೇರೂರಿ ನಿಂತಿದೆ. ಸಂಸ್ಥೆ ಪ್ರತಿನಿತ್ಯ ಎಷ್ಟು ಪೆನ್ಸಿಲ್ ತಯಾರಿಸುತ್ತಿದೆ ಎಂದು ತಿಳಿದರೆ ನಿಜಕ್ಕೂ ಬೆರಗೆನಿಸುತ್ತದೆ. ನಿಜ, ಸಂಸ್ಥೆ ಪ್ರತಿದಿನ 80 ಲಕ್ಷ ಅಪ್ಸರಾ ಮತ್ತು ನಟರಾಜ ಪೆನ್ಸಿಲ್ ತಯಾರಿಸುತ್ತಿದ್ದು, ಇದು ದೇಶದಲ್ಲಿ ತಯಾರಾಗುವ ಶೇಕಡಾಅರವತ್ತರಷ್ಟಾಗಿದೆ. ಅಷ್ಟೇ ಅಲ್ಲದೆ, 15 ಲಕ್ಷ ಶಾರ್ಪ್ನರ‍್ಸ್, ಇಪ್ಪತ್ತೈತೈದು ಲಕ್ಷ ಎರೇಸರ‍್ಸ್, ಎರಡು ಲಕ್ಷ ಅಳತೆ ಪಟ್ಟಿ ಮತ್ತು ಹತ್ತು ಲಕ್ಷ ಪೆನ್ ಕೂಡತಯಾರಿಸುತ್ತಿದೆ. ಸಂಸ್ಥೆ ಭಾರತದಾದ್ಯಂತ ಹನ್ನೆರಡು ಉತ್ಪಾದನಾ ಘಟಕಗಳನ್ನು ಹೊಂದಿದೆ. ಹದಿನೇಳು ಲಕ್ಷ ವಿತರರಕರು ಭಾರತದ ಹಳ್ಳಿಯ ಮೂಲೆ ಮೂಲೆಗೂ ಉತ್ಪನ್ನಗಳನ್ನು ತಲುಪಿಸುತ್ತಿದ್ದಾರೆ. ಸಂಸ್ಥೆ ಪ್ರತಿ ವರ್ಷ ಸರಿಸುಮಾರು 850 ರು.ಗಳ ವಹಿವಾಟು ನಡೆಸುತ್ತಿದೆ. ಭಾರದಲ್ಲಷ್ಟೇ ಅಲ್ಲದೆ, ಇನ್ನೂ 50 ದೇಶಗಳಿಗೆ ಸಂಸ್ಥೆ ತನ್ನ ಬಾಹುಗಳನ್ನು ಚಾಚಿದೆ.
ಈ ಸಂಸ್ಥೆಯ ಕೆಲವು ವಿಶೇಷತೆಗಳನ್ನು ಹೇಳಲೇಬೇಕು. ನಟರಾಜ್ ಅಥವಾ ಅಪ್ಸರಾ ಎರಡೂ ವಿಷಕಾರಿಯಲ್ಲದ, ಪರಿಸರ ಸ್ನೇಹಿ ಪೆನ್ಸಿಲ್‌ಗಳು. ಪೆನ್ಸಿಲ್ ತಯಾರಿಸಲು ಪ್ರಮುಖವಾಗಿ ಬೇಕಾದದ್ದು ಮರ. ಒಂದು ದೊಡ್ಡ ಮರ ಕಡಿದರೆ, ಸುಮಾರು ಒಂದೂವರೆ ಲಕ್ಷ ಪೆನ್ಸಿಲ್ ತಯಾರಿಸಲು ಯೋಗ್ಯ. ಖುಷಿಯ ಸಂಗತಿ ಏನೆಂದರೆ ಹಿಂದೂಸ್ತಾನ್ ಪೆನ್ಸಿಲ್ ಸಂಸ್ಥೆ ಪೆನ್ಸಿಲ್ ತಯಾರಿಸಲು ಅರಣ್ಯದ ಯಾವುದೇ ಮರ ಕಡಿಯುವುದಿಲ್ಲ. ತನಗೆ ಬೇಕಾದ ಮರವನ್ನು ತನ್ನದೇ ಭೂಮಿಯಲ್ಲಿ ಬೆಳೆಸುತ್ತದೆ. ಸ್ವಲ್ಪ ಪ್ರಮಾಣದ ಮರವನ್ನು ರೈತರಿಂದ ಖರೀದಿಸುತ್ತದೆ. ಸಂಸ್ಥೆಯನ್ನೇ ನಂಬಿಕೊಂಡು, ಅದಕ್ಕೆ ಬೇಕಾದ ಮರ ಬೆಳೆಸುವ ರೈತರೂಇದ್ದಾರೆ. ಅನೇಕ ವರ್ಷಗಳಿಂದ ಕಂಪನಿ ಮತ್ತು ರೈತರ ನಡುವಿನ ಈ ವ್ಯವಹಾರದ ಬಾಂಧವ್ಯ ಬೆಳೆದು ಬಂದಿದೆ.
ಬೇಡವಾದ ವಿಷಯಕ್ಕೆ ಹೆಸರಾದ ಕಾಶ್ಮೀರದ ಪುಲ್ವಾಮಾ ನಮಗೆಲ್ಲ ಗೊತ್ತೇ ಇದೆ. ಅದೇ ಪುಲ್ವಾಮಾ ಜಿಲ್ಲೆಯ ದಕ್ಷಿಣದಲ್ಲಿಊಕೂಎಂಬ ಗ್ರಾಮವಿದೆ. ಸುಮಾರು 250 ಮನೆಗಳಿರುವ ಆ ಗ್ರಾಮಕ್ಕೆ ’ಪೆನ್ಸಿಲ್ ಗಾವ್’ (ಪೆನ್ಸಿಲ್ ಗ್ರಾಮ) ಎಂದೂ ಕರೆಯುತ್ತಾರೆ. ಸಂಸ್ಥೆ ಅಲ್ಲಿ ಪೆನ್ಸಿಲ್ ತಯಾರಿಸುವ ಮೂರು ಘಟಕಗಳನ್ನುಸ್ಥಾಪಿಸಿದ್ದು, ಶೇಕಡಾ ಅರವತ್ತರಷ್ಟನ್ನು ಅವೇ ಪೂರೈಸುತ್ತವೆ. ಆ ಗ್ರಾಮದ ಎಲ್ಲ ಮನೆಯವರೂ ಬಹುತೇಕ ಈ ಸಂಸ್ಥೆಗಾಗಿಯೇ ದುಡಿಯುತ್ತಿದ್ದಾರೆ.
ವಿಶ್ವದ ಹೆಚ್ಚು ಪೆನ್ಸಿಲ್ ಉತ್ಪಾದಿಸುವ ದೇಶಗಳ ಪಟ್ಟಿಯಲ್ಲಿ ಚೀನಾ, ಜರ್ಮನಿ ಮತ್ತು ಬ್ರೆಜಿಲ್ ಸ್ಥಾನ ಪಡೆದಿವೆ. ಆ ದೇಶದಲ್ಲಿ ಪೆನ್ಸಿಲ್ ತಯಾರಿಸುವ ಕಂಪನಿಗಳೆಲ್ಲ ಸರಕಾರದಿಂದ ದೊಡ್ಡ ಮೊತ್ತದ ಧನ ಸಹಾಯವನ್ನು ಪಡೆಯುತ್ತವೆ. ಹಿಂದೂಸ್ಥಾನ್ ಪೆನ್ಸಿಲ್ ಸಂಸ್ಥೆ ಇದುವರೆಗೆ ಸರಕಾರದಿಂದ ಯಾವ ಸಹಾಯವನ್ನೂ ಕೇಳಿಲ್ಲ ಎನ್ನುವುದು ಅದರ ಅಗ್ಗಳಿಕೆ. ನೀರು, ಆಹಾರ, ವಸತಿ, ಔಷಧಗಳಿಗೇ ಬೇಕಾದಷ್ಟು ಸಹಾಯ ನೀಡಲು ಸಾಧ್ಯವಾಗದ ಸಂದರ್ಭದಲ್ಲಿ, ಸರಕಾರ ಪೆನ್ಸಿಲ್‌ಗೆ ಯಾವ ರೀತಿಯ ಸಹಾಯ ಮಾಡೀತು ಎನ್ನುವುದು ಬೇರೆ ವಿಷಯ ಬಿಡಿ.
ಇನ್ನೊಂದು ಕುತೂಹಲಕಾರಿ ಘಟನೆಯೆಂದರೆ, ಸಂಸ್ಥೆ ಗ್ರಾಹಕರ ನ್ಯಾಯಾಲಯದ ಕಟಕಟೆಯಲ್ಲಿ ನಿಂತದ್ದು. 2013ರಲ್ಲಿ ಬೆಂಗಳೂರಿನ ಕಾನೂನು ವಿದ್ಯಾರ್ಥಿಚಿರಾಯು ಜೈನ್, ಹಿಂದೂಸ್ಥಾನ್ ಪೆನ್ಸಿಲ್ ಸಂಸ್ಥೆ ತಯಾರಿಸುವ ಬಣ್ಣದ ಪೆನ್ಸಿಲ್ ವಿಷಯದಲ್ಲಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದ. ಸಂಸ್ಥೆ ತಯಾರಿಸುವ ಸ್ಕಿನ್ ಕಲರ್ (ಚರ್ಮದ ಬಣ್ಣ) ಪೆನ್ಸಿಲ್ ಅವನ ಚರ್ಮದ ಬಣ್ಣಕ್ಕಿಂತ ಕ್ಷೀಣವಾಗಿದೆ ಎಂಬುದು ಅವನ ವಾದವಾಗಿತ್ತು. ಸಾಮಾನ್ಯವಾಗಿ ಭಾರತೀಯರು ಗೋಧಿ ಬಣ್ಣದ ಚರ್ಮ ಹೊಂದಿದ್ದು, ಇದು ಜನಾಂಗೀಯ ಮತ್ತು ವರ್ಣಬೇಧ ಕಲ್ಪನೆಯ ಪ್ರಚಾರ ಮಾಡಿದಂತೆ ಎಂಬುದು ಅವನ ನಿಲುವಾಗಿತ್ತು. ಅದಕ್ಕಾಗಿ ಆತ ಒಂದು ಲಕ್ಷರೂಪಾಯಿಯ ಪರಿಹಾರವನ್ನೂ ಕೇಳಿದ್ದ. ಆ ಮೊತ್ತವನ್ನು ವರ್ಣಭೇದ ನೀತಿಯ ವಿರುದ್ಧ ಹೋರಾಟದ ಪ್ರಚಾರಕ್ಕೆ ಬಳಸುವುದಾಗಿಯೂ ಹೇಳಿದ್ದ. ನಂತರ ಏನಾಯಿತೋ ಗೊತ್ತಿಲ್ಲ, ನ್ಯಾಯಾಲಯದ ತೀರ್ಪು ಇನ್ನೂ ಬಂದಂತಿಲ್ಲ!
ಒಂದು ಸಂಸ್ಥೆಯನ್ನು ನಡೆಸುವಾಗ ಇಂತಹ ಸಣ್ಣ ಪುಟ್ಟ ವಿಷಯಗಳೆಲ್ಲ ಇದ್ದದ್ದೇ. ಬೆಲೆ ಕಡಿಮೆಯಾದರೂ, ಲೇಖನಿಗಿಂತ ದೊಡ್ದ ನೀತಿಪಾಠವನ್ನು ಪೆನ್ಸಿಲ್ ಹೇಳಿಕೊಡುತ್ತದೆ. ಪೆನ್ಸಿಲ್ ಹಿಡಿಯದ ಬೆರಳುಗಳು ವಿರಳ. ಶಾಲೆಗೆ ಹೋದ ಮಕ್ಕಳಂತೂ ಪೆನ್ಸಿಲ್ ಹಿಡಿಯದಿರಲು ಸಾಧ್ಯವಿಲ್ಲ. ಗಣಿತ ಮಾಡುವಾಗ, ಚಿತ್ರಬಿಡಿಸುವಾಗ ಲೇಖನಿಗಿಂತ ಪೆನ್ಸಿಲ್ ಬಳಸುವುದೇ ಹೆಚ್ಚು. ಅದು ಸೂಕ್ತವೂ ಹೌದು. ಪೆನ್ಸಿಲ್, ಜತೆಗೊಂದು ಎರೇಸರ‍್ಸ್(ರಬ್ಬರ್) ಇದ್ದರೆ ತಪ್ಪನ್ನು ಕೂಡಲೇ ತಿದ್ದಬಹುದಲ್ಲ! ಅದಕ್ಕೇ ಪೆನ್ಸಿಲ್ ನೊಂದಿಗೆ ಅವಿನಾಭಾವ ಸಂಬಂಧ, ಅದು ಮೊದಲ ಪ್ರೀತಿ. ಈಗಲೂ ಪೆನ್ಸಿಲ್ ಕೈಯಲ್ಲಿ ಹಿಡಿದರೆ ಬಾಲ್ಯದ ಅನೇಕ ನೆನಪುಗಳುಮರುಕಳಿಸುತ್ತವೆ. ನನಗೂ, ನಿಮಗೂ!