ಪಾದಯಾತ್ರೆ ಆರಂಭಿಸಿ, ಕೈಕಟ್ಟಿಸಿಕೊಂಡ ಕಾಂಗ್ರೆಸ್
ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
.@.
ಇಡೀ ಪಾದಯಾತ್ರೆಯನ್ನು ಗಮನಿಸಿದರೆ ನಾಯಕರಲ್ಲಿ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದೆ. ಇಡೀ ಪಾದಯಾತ್ರೆಯ ತಯಾರಿಯನ್ನು ಡಿ.ಕೆ. ಶಿವಕುಮಾರ್ ಒಬ್ಬರೇ ನಿರ್ವಹಣೆ ಮಾಡಿರುವುದರಿಂದ ‘ಡಿಕೆಶಿ ಕೇಂದ್ರಿತ’ವಾಗುತ್ತಿದೆ.
ಪಾದಯಾತ್ರೆ, ರಥಯಾತ್ರೆಯ ಮೂಲಕ ಅಧಿಕಾರ ಚುಕ್ಕಾಣಿ ಹಿಡಿಯುವುದು ರಾಜಕೀಯ ಪಕ್ಷಗಳ ಹೊಸ ತಂತ್ರವೇನಲ್ಲ. ಕಾಂಗ್ರೆಸ್‌ನಿಂದಲೇ ನಡೆದ ಪಾಂಚ ಜನ್ಯ ಯಾತ್ರೆ, ಗಣಿಧಣಿಗಳ ವಿರುದ್ಧದ ಬಳ್ಳಾರಿ ಪಾದಯಾತ್ರೆ, ನಮ್ಮ ನಡೆ ಕೃಷ್ಣೆಯ ಕಡೆ ಇರಬಹುದು ಅಥವಾ ಬಿಜೆಪಿಯ ಎಲ್.ಕೆ ಆಡ್ವಾಣಿ ಅವರ ರಾಮಜನ್ಮಭೂಮಿಯ ರಥಯಾತ್ರೆ ಇರಬಹುದು. ಈ ಎಲ್ಲವೂ ಒಂದಲ್ಲ ಒಂದು ಆ ಪಕ್ಷಕ್ಕೆ ಅಧಿಕಾರವನ್ನು ತಂದು ಕೊಡುವಲ್ಲಿ ಪ್ರಮುಖ ಪಾತ್ರವನ್ನೇ ವಹಿಸಿದ್ದವು. ಇದೇ ಹುಮ್ಮಸ್ಸಿನಲ್ಲಿ ಮುಂದಿನ ಒಂದುವರೆ ವರ್ಷದಲ್ಲಿ ಎದು ರಾಗಲಿರುವ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು, ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಯನ್ನು ಆರಂಭಿಸಿದರು.
ಆದರೆ ಇದು ನಿಜಕ್ಕೂ ಜನರಿಗೆ ರೀಚ್ ಆಗಿದೆಯಾ ಎನ್ನುವ ಪ್ರಶ್ನೆಗಳು ಶುರುವಾಗುತ್ತಿದೆ. ಹೌದು, ಮೇಕೆದಾಟು ಜಲಾಶಯದ ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಭಾನುವಾರದಿಂದ ಪಾದಯಾತ್ರೆಯನ್ನು ಆರಂಭಿಸಿದೆ. ಈ ಪಾದಯಾತ್ರೆಗೆ ಆರಂಭದಿಂದಲೂ, ಪರ ಧ್ವನಿಗಿಂತ ಹೆಚ್ಚಾಗಿ ವಿರೋಧದ ಧ್ವನಿಯೇ ಕೇಳಿಬಂದಿತ್ತು.ಆಡಳಿತರೂಢ ಬಿಜೆಪಿ, ಪ್ರತಿಪಕ್ಷದಲ್ಲಿರುವ ಜೆಡಿಎಸ್ ಸೇರಿದಂತೆ ಅನೇಕರು ಕರೋನಾ ಸಮಯದಲ್ಲಿ ಈ ಪಾದ ಯಾತ್ರೆ ಬೇಡ ಎನ್ನುವ ವಿರೋಧದ ಮಾತನ್ನೇ ಹೇರಿದರು.
ಒಂದು ಹಂತದಲ್ಲಿ ಪಾದಯಾತ್ರೆ ಆರಂಭಿಸಿದ ದಿನವೇ ಎಲ್ಲ ಕಾಂಗ್ರೆಸ್ ನಾಯಕರನ್ನು ಬಂಧಿಸಿ, ಪಾದಯಾತ್ರೆ ಕಥೆ ಮುಗಿಸುವ ಯೋಚನೆಯನ್ನು ಸರಕಾರ ಮಾಡಿತ್ತು. ಆದರೆ ಅಂತಿಮ ಕ್ಷಣದಲ್ಲಿ ಸರಕಾರ ಇದ್ಯಾವುದು ಬೇಡ, ಅವರ ಪಾದಯಾತ್ರೆ ಅವರು ಮಾಡಲಿ, ಕಾನೂನಾತ್ಮಕ ಕ್ರಮವನ್ನು ತಗೆದುಕೊಳ್ಳೋಣ ಎನ್ನುವ ನಿರ್ಧಾರಕ್ಕೆ ಬಂದಿದೆ. ಆದರೆ ಈ ನಿರ್ಧಾರದ ಹಿಂದೆ ‘ಕಾಂಗ್ರೆಸ್ ಬಂಡವಾಳ ಬಯಲು ಮಾಡುವುದೇ ಆಗಿತ್ತು’ ಎನ್ನುವ ವಾದಕ್ಕೆ ಇಂಬು ಸಿಗುತ್ತಿದೆ. ಭಾನುವಾರ ಅದ್ಧೂರಿ ಕಾರ್ಯಕ್ರಮದಲ್ಲಿ ಉದ್ಘಾಟನೆಯಾದ ಪಾದಯಾತ್ರೆಗೆ ಯಾವುದೇ ಅಡೆತಡೆ ಇರಬಾರದು ಎನ್ನುವ ಕಾರಣಕ್ಕೆ ಕಾಂಗ್ರೆಸ್ ಹೈಟೆಕ್ ವ್ಯವಸ್ಥೆಯನ್ನು ಮಾಡಿತ್ತು.
ಮೊದಲ ಎರಡು ದಿನ ಪಾದಯಾತ್ರೆಯಲ್ಲಿ ಸಾವಿರಾರೂ ಜನ ಸೇರಿದ್ದಾರೆ. ಆದರೂ, ಎಲ್ಲೋ ಒಂದು ಕಡೆ ಇದ್ಯಾವುದು ವರ್ಕ್‌ಔಟ್ ಆಗಿಲ್ಲ ಎಂಬ ಮಾತನ್ನು ಕಾಂಗ್ರೆಸ್‌ನವರೇ ಹೇಳುತ್ತಿದ್ದಾರೆ. ಇದಕ್ಕೆ ಕಾರಣ ನೋಡುವುದಾದರೆ, ರಾಜ್ಯದಲ್ಲಿ ಕರೋನಾ ಸೋಂಕು ಏರಿಕೆಯಾಗುತ್ತಿದೆ. ಅದರಲ್ಲಿಯೂ ಬೆಂಗಳೂರು ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಸೋಂಕು ಏರಿದೆ. ಆದರೂ ಜನರನ್ನು ಕಟ್ಟಿಕೊಂಡು, ಕರೋನಾದ ಎಲ್ಲ ಸಂಸ್ಕೃತಿ (ಮಾಸ್ಕ್, ಸಾಮಾಜಿಕ ಅಂತರ)ವನ್ನು ಮರೆತು ಪಾದ ಯಾತ್ರೆ ಮಾಡುತ್ತಿರುವುದು ನೋಡಿದಾಗ, ‘ಮೇಕೆದಾಟು ಯೋಜನೆಗೆ ಆಗ್ರಹಿಸುವ ಉತ್ಸಾಹದಲ್ಲಿ ಸೋಂಕು ಹೆಚ್ಚಿಸಲಾಗುತ್ತಿದೆ’ ಎನ್ನುವ ಮಾತುಗಳು ಜನರ ಬಾಯಲ್ಲಿ ಕೇಳಿಬರುವಂತಾಗಿದೆ.
ಈ ಹಿಂದೆ ಕಾಂಗ್ರೆಸ್ ಬಿಜೆಪಿ ಅಧಿಕಾರದಲ್ಲಿರುವಾಗಲೇ ‘ಬಳ್ಳಾರಿ ಪಾದಯಾತ್ರೆ, ‘ಕೃಷ್ಣೆಯ ಕಡೆ ನಮ್ಮ ನಡಿಗೆ’ ಎನ್ನುವ ಬೃಹತ್ ಪ್ರಮಾಣದ ಪಾದಯಾತ್ರೆ ಗಳನ್ನು ಹಮ್ಮಿಕೊಂಡಿತ್ತು. ಈ ಪಾದಯಾತ್ರೆಗೆ ಹೋಲಿಸಿದರೆ ಅವುಗಳ ಅಂತರವೂ ಹೆಚ್ಚಿತ್ತು. ಈ ಎರಡೂ ಪಾದಯಾತ್ರೆಯಿಂದ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಲಾಭವೂ ತಂದುಕೊಟ್ಟಿತ್ತು ಎಂದರೆ ತಪ್ಪಿಲ್ಲ. ಈ ಹಿಂದಿನ ಎರಡು ಪಾದಯಾತ್ರೆಯ ಲಾಭದ ಲೆಕ್ಕಾಚಾರದಲ್ಲಿಯೇ ಈ ಪಾದಯಾತ್ರೆ ಮಾಡಲು ಯೋಚಿಸಿತ್ತು. ಆದರೆ ಆ ಎರಡು ಪಾದಯಾತ್ರೆಗೆ ಹೋಲಿಸಿದರೆ, ಈ ಪಾದಯಾತ್ರೆಯಲ್ಲಿ ಹಿಂದೆ ಬೀಳಲು ಪ್ರಮುಖ ಕಾರಣ, ‘ಸಮಯ, ಸಂದರ್ಭ ಹಾಗೂ ಉದ್ದೇಶ’.ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ಆರಂಭಿಸಿದ್ದೇ ತಪ್ಪೇ? ಎನ್ನುವ ಪ್ರಶ್ನೆಗೆ ‘ಇಲ್ಲ’ ಎನ್ನಬಹುದು.
ಆದರೆ ಪುನಃ ಕರೋನಾ ಮೂರನೇ ಅಲೆ ಹೆಚ್ಚುತ್ತಿರುವ ಸಮಯದಲ್ಲಿ ಬೇಕಿತ್ತೇ? ಎನ್ನುವುದು ಈಗಿರುವ ಪ್ರಶ್ನೆ. ಇನ್ನು ಉದ್ದೇಶದಲ್ಲಿರುವ ಸಮಸ್ಯೆ ಬಗ್ಗೆ ಹೇಳುವ ಮೊದಲು, ಕಾಂಗ್ರೆಸ್‌ನ ಸಿದ್ಧತೆಯ ಬಗ್ಗೆಯೂ ನೋಡಬೇಕಿದೆ. ಮೇಕೆದಾಟು ಪಾದಯಾತ್ರೆಯ ಯೋಚನೆಯೇನು ಏಕಾಏಕಿ ಬಂದಿರುವುದಲ್ಲ. ಸುಮಾರು ಒಂದು ತಿಂಗಳ ಮೊದಲೇ ಪಾದಯಾತ್ರೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದರು. ಆದರೂ ಇಡೀ ಪಾದಯಾತ್ರೆಯನ್ನು ಸೂಕ್ಷ್ಮವಾಗಿ ಗಮನಿಸಿ ದರೆ, ನಾಯಕರಯಲ್ಲಿಯೇ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದೆ.
ಇಡೀ ಪಾದಯಾತ್ರೆಯ ತಯಾರಿಯನ್ನು ಡಿ.ಕೆ. ಶಿವಕುಮಾರ್ ಒಬ್ಬರೇ ನಿರ್ವಹಣೆ ಮಾಡಿರುವುದರಿಂದ ಇಡೀ ಪಾದಯಾತ್ರೆ ‘ಡಿಕೆಶಿ ಕೇಂದ್ರಿತ’ವಾಗುತ್ತಿದೆ. ಈ ರೀತಿಯಾಗುತ್ತಿರುವುದರಿಂದ, ಬಹುತೇಕ ಹಿರಿಯ ನಾಯಕರು ನಾಮ್‌ಕೆವಸ್ತೆ ಹಾಜರಾತಿ ಹಾಕಿ ತಮ್ಮಷ್ಟಕ್ಕೇ ತಾವು ಹೋಗುತ್ತಿರುವುದು ಸಾಮಾನ್ಯವಾಗಿದೆ. ಇಡೀ ಪಾದಯಾತ್ರೆಯ ನಿರ್ವಹಣೆ ನೋಡಿದರೆ, ಪ್ರತಿಯೊಂದರಲ್ಲಿಯೂ ಡಿಕೆ ಉಪಸ್ಥಿತಿಯೇ ಹೆಚ್ಚಾಗಿದೆ. ಪಾದಯಾತ್ರೆ ಆರಂಭವಾಗುವ ಕೊನೆಯ ದಿನದವರೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಾಗಲಿ, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಎಚ್.ಕೆ. ಪಾಟೀಲ್, ಆರ್.ವಿ.ದೇಶಪಾಂಡೆ ಆಗಲಿ ಮಾತನಾಡ ಲಿಲ್ಲ.
ಇನ್ನು ಭಾನುವಾರದಿಂದ ಆರಂಭಗೊಂಡ ಪಾದಯಾತ್ರೆಯಲ್ಲಿ ಬಹುತೇಕ ನಾಯಕ ಅರ್ಧಕ್ಕೆ ನಿಲ್ಲಿಸುವ ಅಥವಾ ಅರ್ಧ ಹೊತ್ತು ಕಾರಲ್ಲಿ, ಇನ್ನರ್ಧ ಹೊತ್ತು ನಡಿಗೆಯ ಮೂಲಕ ದಾರಿ ಸವಿಸಿರುವುದನ್ನು ಎಲ್ಲರೂ ನೋಡಿದ್ದಾರೆ. ಈ ಮೂಲಕ ಮೊದಲ ದಿನವೇ, ನಾಯಕರು ನಿತ್ರಾಣರಾದರೂ ಎನ್ನುವ ಸಂದೇಶ ರವಾನೆಯಾಯಿತು. ಬಿಜೆಪಿ ಸರಕಾರಕ್ಕೂ ಬೇಕಿದಿದ್ದು ಇದಷ್ಟೆ. ‘ರಾಜರೋಷವಾಗಿ ಶುರುವಾದ ಪಾದಯಾತ್ರೆಯಲ್ಲಿ ಜನರಿದ್ದಾರೆ, ಸೌಲಭ್ಯಗಳಿವೆ ಎಲ್ಲವೂ ಇದೆ.ಆದರೆ ನಡೆಯಬೇಕಾದ ನಾಯಕರೇ ಇಲ್ಲ.’ ಎನ್ನುವ ಸಂದೇಶವನ್ನು ವ್ಯವಸ್ಥಿತವಾಗಿ ಬಿಜೆಪಿ ನಾಯಕರು ರವಾನಿಸುವಲ್ಲಿ ಯಶಸ್ವಿಯಾದರು.
ಸಿದ್ದರಾಮಯ್ಯ ಅವರು ಜ್ವರದಿಂದ ವಾಪಸಾಗಿದ್ದು, ಡಿ.ಕೆ.ಶಿವಕುಮಾರ್ ನಿತ್ರಾಣರಾಗಿ ಕುಳಿತ ದೃಶ್ಯಗಳು ‘ಬೆಂಕಿಗೆ ತುಪ್ಪ ಸುರಿದಂತಾಯಿತು’ ಅಷ್ಟೇ. ಆದರೆ ಇಷ್ಟು ಪ್ರಹಸನ, ಗಲಾಟೆ, ವಿವಾದ, ಅದ್ಧೂರಿಯುತವಾಗಿ ನಡೆಯುತ್ತಿರುವ ಈ ಪಾದಯಾತ್ರೆಯ ಉದ್ದೇಶದ ಬಗ್ಗೆಯೇ ಅನೇಕರಿಗೆ ಕ್ಲಾರಿಟಿ ಸಿಗುತ್ತಿಲ್ಲ. ಏಕೆಂದರೆ, ಮೇಕೆದಾಟು ಯೋಜನೆ ಮಾಡುವುದಿಲ್ಲ ಎಂದು ರಾಜ್ಯ ಸರಕಾರ ಎಲ್ಲಿಯೂ ಹೇಳಿಲ್ಲ. ಕೇಂದ್ರ ಸರಕಾರದ ಬಳಿಯಿರುವ ಈ ಯೋಜನೆಯ ಕಡತಕ್ಕೆ ಮೊದಲು ಅಡ್ಡಗಾಲು ಹಾಕಿರುವುದು ತಮಿಳುನಾಡು ಸರಕಾರ.
ನ್ಯಾಯಾಧೀಕರಣ ಸೇರಿದಂತೆ ಎಲ್ಲ ಅಡೆತಡೆಗಳನ್ನು ಮೀರಿದ್ದರೂ, ಈಗಲೂ ತಮಿಳುನಾಡು ಸರಕಾರ ಮೇಕೆದಾಟು ಜಲಾಶಯ ನಿರ್ಮಾಣವಾಗಬಾರದುಎಂದು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದೆ. ಇಷ್ಟಾದರೂ ಬಿಜೆಪಿ ನಾಯಕರು ಪದೇಪದೆ ಈ ಯೋಜನೆಯನ್ನು ಜಾರಿಗೊಳಿಸಿಯೇ ಸಿದ್ಧ ಎನ್ನುವ ವಿಶ್ವಾಸದ ಮಾತುಗಳನ್ನು ಹೇಳುತ್ತಿದ್ದಾರೆ. ನಿಜ ಹೇಳಬೇಕು ಎಂದರೆ ಈ ಹೇಳಿಕೆಗಳೂ ರಾಜಕೀಯ ಪ್ರೇರಿತ. ಏಕೆಂದರೆ, ಹಲವು ವರ್ಷಗಳ ಹಿಂದೆಯೇ ಕರ್ನಾಟಕ ಸರಕಾರದ ಅರಣ್ಯ ಇಲಾಖೆಯೇ ಈ ಯೋಜನೆ ಕಾರ್ಯಸಾಧುವಲ್ಲ ಎನ್ನುವ ಹಿಂಬರಹವನ್ನು ಕೊಟ್ಟಿರುವ ದಾಖಲೆಗಳಿವೆ. ಈ ರೀತಿಯ ಅಭಿಪ್ರಾಯವನ್ನುಅರಣ್ಯ ಇಲಾಖೆ ನೀಡಲು ಪ್ರಮುಖ ಕಾರಣ, ಮೇಕೆದಾಟು ಜಲಾಶಯ ನಿರ್ಮಾಣದಿಂದ ಆ ಭಾಗ ಅರಣ್ಯ ಪ್ರದೇಶ ಮುಳುಗಡೆಯಾಗುತ್ತದೆ. ಆದ್ದರಿಂದ ಈ ಜಲಾಶಯಕ್ಕೆ ಅನುಮತಿ ನೀಡುವುದಿಲ್ಲ ಎನ್ನುವ ಸ್ಪಷ್ಟ ಮಾತನ್ನು ಅರಣ್ಯ ಇಲಾಖೆ ಹೇಳಿದೆ.
ಒಂದು ವೇಳೆ ಸರಕಾರ ಈ ಎಲ್ಲವನ್ನು ಮೀರಿ ಮುಂದುವರಿದರೂ, ಹಸಿರು ನ್ಯಾಯಾಧೀಕರಣದಲ್ಲಿ ಇದೇ ವಿಷಯವನ್ನು ಇಟ್ಟುಕೊಂಡು ತಮಿಳುನಾಡು ಸರಕಾರಕ್ಯಾತೆ ತಗೆಯುವುದರಲ್ಲಿ ಅನುಮಾನವೇ ಇಲ್ಲ. ಅವರಿಗೆ ಈ ಯೋಜನೆಯಿಂದ ನಷ್ಟವಾಗದಿದ್ದರೂ, ರಾಜಕೀಯ ಲಾಭಕ್ಕಾಗಿ ವಿರೋಧಿಸುವುದು ಸಹಜ. ವಿರೋಧಿಸಲೇಬೇಕು. ಅದನ್ನು ಮಾಡುತ್ತಿದೆ. ಸರಕಾರ ಯೋಜನೆ ಕೈಗೆತ್ತಿಕೊಳ್ಳಲು ಸಿದ್ಧವಿದ್ದು, ತಾಂತ್ರಿಕ ಸಮಸ್ಯೆಗಳಿರುವುದರಿಂದ ತಡವಾಗುತ್ತಿದೆ ಎಂದು ಒಪ್ಪಿಕೊಂಡಿರುವಾಗ, ಈ ಯೋಜನೆಗೆ ವೇಗ ಕೊಡಿ ಎಂದು ಒತ್ತಾಯಿಸಲು ಈ ಪಾದಯಾತ್ರೆ ನಡೆಸಬೇಕಿತ್ತೇ? ಈ ಪಾದಯಾತ್ರೆಯಿಂದ ಸುಪ್ರೀಂ ಕೋರ್ಟ್ ತನ್ನನಿಲುವನ್ನು ಬದಲಾಯಿಸಿಕೊಂಡಿದ್ದರೆ ಅಥವಾ ಹಸಿರು ನ್ಯಾಯಾಧೀಕರಣ ಒಪ್ಪಿಕೊಂಡಿದ್ದರೆ ಇಲ್ಲವೇ ಕೇಂದ್ರ ಸರಕಾರ ಕೂಡಲೇ ಗೆಜೆಟೆ ನೊಟಿಫಿಕೇಷನ್ ಹೊರಡಿಸಿದ್ದರೆ ಇದ್ಯಾವುದು ಅಲ್ಲದೇ ತಮಿಳುನಾಡು ಸರಕಾರ ಈ ಯೋಜನೆ ತಮ್ಮ ಅಭ್ಯಂತರವಿಲ್ಲ ಎಂದು ಹೇಳುವುದಾದರೆ ಕರೋನಾ ಸಂಕಷ್ಟದ ಸಮಯ ದಲ್ಲಿಯೂ ಪಾದಯಾತ್ರೆ ಮಾಡುವುದರಲ್ಲಿ ಅರ್ಥವಿತ್ತು.
ಆದರೆ ಇದ್ಯಾವುದು ಆಗುವುದಿಲ್ಲ ಎನ್ನುವುದು ಗೊತ್ತಿದ್ದರೂ ಈ ಆತಂಕದ ಸಮಯದಲ್ಲಿ ಮಾಡುವ ಅವಸರವೇನಿತ್ತು ಎನ್ನುವುದೇ ಅನೇಕರ ಪ್ರಶ್ನೆ. ಈ ಎಲ್ಲ ಸವಾಲುಗಳ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಗೊತ್ತಿಲ್ಲರಲಿಲ್ಲ ಎಂದಲ್ಲ. ಆದರೆ ಸರಕಾರದ ವಿರುದ್ಧ ಹಳೇ ಮೈಸೂರು ಭಾಗದಲ್ಲಿ ವಿರೋಧಿ ಅಲೆ ಸೃಷ್ಟಿಸಬಹುದುಹಾಗೂ ಪ್ರತಿಪಕ್ಷವಾಗಿ ಕಾಂಗ್ರೆಸ್ ಐಡೆಂಟಿಟಿಯನ್ನು ಹೇಳುವ ಒಂದೇ ಕಾರಣಕ್ಕೆ ಪಾದಯಾತ್ರೆ ಆರಂಭಿಸಿದ್ದಾರೆ. ಆದರೆ ಪಾದ ಯಾತ್ರೆ ಆರಂಭವಾದ ಮೊದಲ ಎರಡು ದಿನಕ್ಕೆ ಕಾಂಗ್ರೆಸ್‌ನ ಬಹುತೇಕ ನಾಯಕರು ಸುಸ್ತಾಗಿದ್ದು, ಇನ್ನುಳಿದ ಎಂಟತ್ತು ದಿನ ಯಾವ ರೀತಿ ಸಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.