ಎಲ್ಲರ ದುಡ್ಡು, ಎಡಚರ ಜಾತ್ರೆ
ರಾವ್ ಭಾಜಿ
ಪಿ.ಎಂ.ವಿಜಯೇಂದ್ರ ರಾವ್
@.
ಪಕ್ಕದ ಕುಕ್ಕರಹಳ್ಳಿ ಕೆರೆ ತನ್ನ ನೈರ್ಮಲ್ಯ ಕಳೆದುಕೊಂಡಿದ್ದರೂ, ರಂಗಾಯಣಕ್ಕೆ ತನ್ನದೇ ಮಹತ್ವವಿದೆ. ಕೆರೆಯ ನೈರ್ಮಲ್ಯ ಹಾಳಾಗಿದ್ದು ಸಮರ್ಥ ಉಸ್ತು ವಾರಿಯ ಕೊರತೆಯಿಂದ. ರಂಗಾಯಣದ ವಾತಾವರಣ ಕಳೆಗುಂದಿದ್ದೂ ಮೇಲುಸ್ತುವಾರಿಯ ಅಭಾವದಿಂದ.
ಪಿತೃಕಾರ್ಯದಲ್ಲಿ ತೊಡಗಿದವರ ಅನುಭವಕ್ಕೆ ಇದು ಬಂದಿರುತ್ತದೆ. ಪಿಂಡಪ್ರದಾನ ಮಾಡುವಾಗ ಪಿತೃಗಳಿಗೆ ಇಟ್ಟ ಅನ್ನ-ಎಳ್ಳುಗಳ ಉಂಡೆಗಳತ್ತ ಕಾಗೆಯೊಂದು ಹಾರಿಬರುತ್ತದೆ. ಅದರ ಕಾ ಕಾ ಆಹ್ವಾನಕ್ಕೆ ಮತ್ತೊಂದು, ಮಗದೊಂದು… ಹೀಗೆ ಹತ್ತಾರು ಕಾಗೆಗಳು ಕೂಡಿಕೊಳ್ಳುತ್ತವೆ. ಅವುಗಳಲ್ಲಿ ಯಾವುದೋ ಒಂದು ಕಾಗೆಪಿಂಡಕ್ಕೆ ಕೊಕ್ಕು ಕೂಡಿಸುವವರೆಗೂ ಉಳಿದ ಕಾಗೆಗಳು ಹತ್ತಿರ ಸೇರುವುದಿಲ್ಲ.
ಬೆಂಗಳೂರಿನ ದಂಡುಪ್ರದೇಶಕ್ಕೆ ಹೋಗುವುದೆಂದರೆ ಯುವಜನರಿಗೆ ಸಂಭ್ರಮ. ಹೊಸವರ್ಷಕ್ಕಷ್ಟೇ ಅಲ್ಲ, ಉಳಿದ ಯಾವುದೇ ಸಂದರ್ಭದಲ್ಲೂ ಅಲ್ಲಿಗೆ ಕಾಲಿಡುವುದೆಂದರೆ ಪಾಶ್ಚಿಮಾತ್ಯ ದೇಶಕ್ಕೆ ಹೊರಡಲು ತಯಾರಿ ನಡೆಸುವ ಸಡಗರ. ನನ್ನ ತಾರುಣ್ಯದಲ್ಲಿ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆಗಳಿಗೆ ಎಡತಾಕುತ್ತಿದ್ದೆ. ಇಂಗ್ಲಿಷ್ ಸಿನಿಮಾ ನೋಡಿ, ಇಂಡಿಯನ್ ಕಾಫಿ ಹೌಸ್‌ನಲ್ಲಿ ದೋಸೆ, ಕಟ್ಲೆಟ್ ತಿಂದು ಕಾಫಿ ಕುಡಿದರೆ ಜೀವನ ಪಾವನ. ಉಳಿದ ಬಹುತೇಕ ಗಿರಾಕಿಗಳು ನನ್ನ ಭಾಷೆಯವರೇ ಆಗಿದ್ದರೂ ಇಂಗ್ಲಿಷ್‌ನಲ್ಲಿ ಮಾತಾಡಿದರಷ್ಟೆ ಪರಿಸರಕ್ಕೆ ಹೊಂದಿಕೊಳ್ಳುತ್ತೀರೇನೋ ಎನ್ನುವ ಅಲಿಖಿತ ನಿಯಮವನ್ನು ಹೆಗಲ ಮೇಲೆ ಹೇರಿದಂಥ ಅನುಭವಾಗುತ್ತಿತ್ತು.
ನಾನು ಪ್ರಬುದ್ಧನಾದ ಮೇಲೆ ಆ ನಿಯಮಗಳನ್ನು ಉಲ್ಲಂಘಿಸತೊಡಗಿದೆ. ವಿಶೇಷವಾಗಿ ಬಫೆ () ಯಲ್ಲಿ, ಇಂಗ್ಲಿಷ್ ಮತ್ತುಫೋರ್ಕ್ಬಳಸುವುದಕ್ಕೆ ತಡಕಾಡುವ ಕೆಲವಾದರೂ ಗ್ರಾಹಕರು ಪ್ರಭಾವಿತರಾಗಿ ಕನ್ನಡ ಮತ್ತು ಕೈ ಬಳಸುವುದನ್ನು ನೋಡಿದ್ದೇನೆ. ಬರವಣಿಗೆಯ ಮೂಲಕ ಸಾಧಿಸಲಾಗದ ಶಸ್ತ್ರತ್ಯಾಗ(!)ದ ಪುಟ್ಟ ಕ್ರಾಂತಿಯನ್ನು ಹೊಟೆಲ್‌ಗಳಲ್ಲಿ ಸಾಧಿಸುವ ಅರೆಪಾವಿನ ಸಮಾಧಾನ ನನ್ನದು. ಇಂಥದ್ದೇ ಒಂದು ಅಲಿಖಿತ ನಿಯಮ ಭಾರತದ ಮಾಧ್ಯಮಲೋಕದಲ್ಲಿದೆ. ಮಾಧ್ಯಮಲೋಕದಲ್ಲಿರುವುದರಿಂದ ಅದು ಬೇರೆಡೆಗೂ ವಿಸ್ತರಿಸಿದೆ, ಹರಡುತ್ತಲೇ ಇದೆ. ಆ ಅಲಿಖಿತ ನಿಯಮಕ್ಕನು ಸಾರವಾಗಿ, ಮಾಧ್ಯಮಲೋಕವನ್ನು ಪ್ರವೇಶಿಸುವವರು ಎಡಪಂಥದ ಪ್ರಭಾವಕ್ಕೊಳಗಾಗುತ್ತಾರೆ.
ಅಲ್ಲಿ, ಯಾರೂ ಯಾರಿಗೂ ನೀನು ಎಡಚಿಂತನೆಯನ್ನು ಬೆಳೆಸಿಕೋ ಎಂದು ಹೇಳುವುದಿಲ್ಲ, ಹೇಳಿಕೊಡುವುದಿಲ್ಲ. ಆದರೂ, ಬರುವ ಬಹುತೇಕರು ತಮಗರಿ ವಿಲ್ಲದಂತೆ ಎಡಪಂಥದ ಪ್ರಭಾವ ವಲಯದೊಳಕ್ಕೆ ಸಿಲುಕುತ್ತಾರೆ. ವಿಧ್ಯುಕ್ತವಾಗಿ ದೀಕ್ಷೆ ಪಡೆಯುತ್ತಾರೆ ಅಂತಲ್ಲ, ಮಾರ್ಕ್ಸ್ ಯಾರೆಂದು ತಿಳಿಯದೆಯೇ ಮಾರ್ಕ್ಸ್ ಮಾಟಕ್ಕೆ ಬಲಿಯಾಗಿಬಿಡುತ್ತಾರೆ. ಹಾಗಂತ ಅವರೆಲ್ಲರೂ ಮಾರ್ಕ್ಸ್ ಸಿದ್ಧಾಂತವನ್ನು ಅರೆದು ಕುಡಿದುಬಿಡುತ್ತಾರೆ ಅಂತಲ್ಲ. ಹಣದ ಆಕರ್ಷಣೆಯಿಂದ ಜೂಜಿನ ಹಿಂದೆಮುಂದೆ ತಿಳಿಯದವರು ಬಾಜಿ ಕಟ್ಟುತ್ತ ಹೋಗಿ ರೇಸ್ ವ್ಯಸನಕ್ಕೆ ಬೀಳುವ ಅಮಾಯಕರ ಹಾಗೆ.
ಮೇಕೆದಾಟುವಿನತ್ತ ಪಾದಯಾತ್ರೆಯ ಪ್ರಯುಕ್ತ ದಾಪುಗಾಲು ಹಾಕಿದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರ ನಡಿಗೆಯಲ್ಲಿ ಸ್ವಲ್ಪ ಏರುಪೇರಾಗಿದೆ; ದಣಿದಿರಬೇಕು. ಯಾವುದೇ ಪ್ರತಿಭಟನಾಕಾರರನ್ನು ಪಕ್ಕಕ್ಕೆ ಕರೆದು ಪ್ರತಿಭಟನೆಯ ಉದ್ದೇಶವೇನೆಂದು ಕೇಳಿ. ಗೊತ್ತಿಲ್ಲ ಎಂದು ಉತ್ತರಿಸಿದರೆ ನನಗಂತೂ ಆಶ್ಚರ್ಯವಾಗುವುದಿಲ್ಲ. ಮಾರ್ಕ್ಸ್‌ನ ಕಾಲದೇಶಗಳ ಪರಿಚಯವೇ ಇರದವರು ದಾಡಿಮೀಸೆಗಳನ್ನು ಹುಲುಸಾಗಿ ಬೆಳೆಸುತ್ತಾರೆ. ಜುಬ್ಬಾ ಧರಿಸಲೆಂದು ಯಾರೂ ಉಪದೇಶ ನೀಡುವುದಿಲ್ಲ. ಆದರೂ ಹೆಗ್ಗೋಡಿನದ್ದು ಒಂದು ಕುರ್ತಾ ಮೈಮೇಲೆ ಬೀಳಬೇಕು.
ಓದಿರಲಿ, ಓದಿಲ್ಲದಿರಲಿ ಮಾರ್ಕ್ವೀಜ್ ಹೆಸರು ಉದುರಿಸಿದರಷ್ಟೇ ಅವನು ಒಳಗೆ, ಇಲ್ಲದಿದ್ದರೆ ಮುಟ್ಟಿಸಿಕೊಳ್ಳಬಾರದವ. ಪತ್ರಿಕಾರಂಗವನ್ನು ಪ್ರವೇಶಿಸಿದ ಹೊಸತರಲ್ಲಿ ನಾನೂ ಪ್ರಖರ ಕಮ್ಯುನಿಸ್ಟ್ ಅಶೋಕ್ ಮಿತ್ರ ಅವರ ಬರವಣಿಗೆಯಿಂದ ಪ್ರೇರಿತನಾಗಿದ್ದೆ. ಭಾರತ ಸರಕಾರಕ್ಕೆ ಮುಖ್ಯ ವಿತ್ತೀಯ ಸಲಹೆಗಾರರು ಹಾಗೂ ಪಶ್ಚಿಮ ಬಂಗಾಳದ ಹಣಕಾಸು ಸಚಿವರೂ ಆಗಿದ್ದ ಅಶೋಕ್ ಪತ್ರಕರ್ತರೂ ಹೌದು. ಅದ್ಭುತ ಬರವಣಿಗೆ. ಡೆಕ್ಕನ್ ಹೆರಾಲ್ಡ್‌ನಲ್ಲಿ ಬುಧವಾರ ಪ್ರಕಟ ವಾಗುತ್ತಿದ್ದ ಅವರ ಅಂಕಣವನ್ನು ನಾನು ತಪ್ಪಿಸಿದ್ದಿಲ್ಲ. ಈಗಲೂ ಅರುಂಧತಿ ರಾಯ್‌ರ ಲೇಖನಗಳನ್ನು ಮೆಚ್ಚಿಕೊಳ್ಳುತ್ತೇನೆ.
ನನ್ನನ್ನು ಆಕರ್ಷಿಸುವುದು ಅವರ ವಿಚಾರಧಾರೆಯಲ್ಲ, ಭಾಷಾ ಶೈಲಿ. ಕಸದಲ್ಲೂ ರಸವಿದೆ ಎಂದು ನಂಬುವುದರಿಂದ ರಸದ ಪ್ರಯೋಜನವನ್ನು ಮಾತ್ರ ಪಡೆಯುತ್ತೇನೆ. ಕಬ್ಬಿಣದ ಹುಡಿ ಮತ್ತು ಮರಳಿನ ಮಿಶ್ರಣದ ಬಳಿ ಹಿಡಿದ ಆಯಸ್ಕಾಂತ ಮರಳನ್ನು ಮುಟ್ಟುವುದಿಲ್ಲ. ಮರಳನ್ನು ಅಲ್ಲಿಯೇ ಬಿಡೋಣ. ಮಾರ್ಕ್ಸ್ ಮತ್ತು ಏಂಜೆಲ್ಸ್‌ನರನ್ನು ಓದದ ಮರುಳರು ದುರುಳರಾಗಿ ಪರಿವರ್ತನೆಗೊಂಡು ಸಮಾಜ ಕಂಟಕರಾಗುವ ವಿದ್ಯಮಾನ ದತ್ತ ಗಮನಹರಿಸೋಣ. ನೆಹರು ಮತ್ತು ಅಬುಲ್ ಕಲಾಂ ಆಜಾದ್‌ರ ಪ್ರೇರಿತ ಅಜೆಂಡಾದ ಬುನಾದಿಯ ಮೇಲೆ ನಿರ್ಮಿತವಾದ ನಮ್ಮ ವ್ಯವಸ್ಥೆಯ ಎಲ್ಲ ಆಯಕಟ್ಟಿನ ಸ್ಥಾನಗಳಲ್ಲಿ ಕಮ್ಯುನಿಷ್ಟರು ಕೆಂಪು ಟವೆಲ್ ಹಾಸಿಬಿಟ್ಟಿದ್ದಾರೆ.
(ಓದಿಕೊಂಡ) ಕಮ್ಯುನಿಷ್ಟರಿಗಿಂತ ಹೆಚ್ಚು ತಾವು ಎಡಪಂಥೀಯ ಸಾಹಿತ್ಯವನ್ನು ಓದಿಕೊಂಡಿದ್ದೇನೆ ಎಂದು ಎಸ್ ಎಲ್ ಭೈರಪ್ಪನವರು ಹೇಳುತ್ತಿರುತ್ತಾರೆ.ಎಲ್ಲಿ ಕೆದಕಿದರೆ, ಏನು ಬರಬಹುದೆಂಬ ಲೆಕ್ಕಾಚಾರ ಮರುಳ ಮಾರ್ಕ್ಸಿಸ್ಟರಿಗೂ ಕರಗತವಾಗಿರುತ್ತದೆ. ಕಾದಂಬರಿಯ ಅಮೀರ ಮತ್ತುಶಾಸ್ತ್ರಿಪಾತ್ರಧಾರಿಗಳನ್ನು ಹೋಲುವ ನಿಜಜೀವನದ ಅವಕಾಶವಾದಿಗಳು ನಿಮಗೆ ಮಾಧ್ಯಮದಲ್ಲೂ, ಕಲಾರಂಗದಲ್ಲೂ ಕಾಲುಕಾಲಿಗೆ ಸಿಗುತ್ತಾರೆ.
ಮಾಧ್ಯಮ ಮತ್ತು ಕಲೆಗಳೆರಡರ ಮೂಲ ಉದ್ದೇಶವೂ ಸತ್ಯಶೋಧನೆ. ಸತ್ಯ ಮತ್ತು ಸ್ವಾರ್ಥ ಕಬ್ಬಿಣದ ತುರಿ ಮತ್ತು ಮರಳಿನಂತೆ. ಒಟ್ಟಿಗೆ ಇರಲಾರವು. ಒಂದೇ ಪಲ್ಲಂಗವನ್ನು ಹಂಚಿಕೊಂಡು ಆತ್ಮ ಬೆಸುಗೆಯಾಗದ ಕೂಡಾವಳಿಯಂತೆ. ಸಂಪರ್ಕದಲ್ಲಿದ್ದ ಮಾತ್ರಕ್ಕೆ ಸಂಬಂಧ ಸಾಧಿಸಲಾಗದು. ಸ್ವಾರ್ಥದ ಚಹರೆ ಮುಚ್ಚುವು ದಕ್ಕೆ ಮುಖದ ತುಂಬಾ ದಾಡಿ. ಭೈರಪ್ಪನವರ ಕೃತಿಗಳ ಜನಪ್ರಿಯತೆಗೆ ಇರುವ ಕಾರಣಗಳಲ್ಲಿ ಮುಖ್ಯವಾದದ್ದು ಅವುಗಳ ನಿರಂತರ ಸತ್ಯಶೋಧನೆ ಮತ್ತು ಸತ್ಯದರ್ಶನ. ಆ ಪ್ರಾಮಾಣಿಕ ಶೋಧನೆಯ ದರ್ಯದ ಕಾಣ್ಕೆಯೂ ಇದೆ.
ಸತ್ಯ ಮತ್ತು ಸೌಂದರ್ಯ ಕಬ್ಬಿಣ-ಮರಳಿನ ಮಿಶ್ರಣದಂತಲ್ಲ. ಅವು ಗಂಡಭೇರುಂಡದಂತೆ, ಒಂದೇ ದೇಹವನ್ನು ಹಂಚಿಕೊಂಡ ಎರಡು ಪರಿಕಲ್ಪನೆಗಳು. ಸ್ವಾರ್ಥವಿದ್ದೆಡೆ ಸತ್ಯ ಪಲಾಯನವಾಗುತ್ತದೆ. ಸತ್ಯವಿಲ್ಲದೆಡೆ ಸೌಂದರ್ಯ ಸುಳಿದಾಡದು. ಭೈರಪ್ಪನವರ ಜನಪ್ರಿಯತೆಯನ್ನು ಸಹಿಸಲಾಗದ ಸಾಹಿತಿಗಳ ಉರಿಉದ್ಭವವಾಗುವುದೇ ಅವರ ತಳಭಾಗದಲ್ಲಿ. ಅವರು ಸತ್ಯವನ್ನರಗಿಸಿಕೊಳ್ಳಲಾರರು, ಸೌಂದರ್ಯವನ್ನು ಎವೆಯಿಕ್ಕದೆ ದೃಷ್ಟಿಸಲಾರರು. ಈರ್ಷ್ಯೆಯಿಂದ ಬೆಂದು ಹೋದ ಮನಸ್ಸಿನಿಂದ ಅದಾವ ಸಾಹಿತ್ಯ ಹೊರಬಂದೀತು.
ಸಾಹಿತ್ಯದ ಮಾತಿರಲಿ, ವಸ್ತುನಿಷ್ಠ ವಿಮರ್ಶೆಯೂ ಅವರಿಂದ ಅಸಾಧ್ಯ. ಭೈರಪ್ಪನವರು ಬರೆದದ್ದೆಲ್ಲವೂ ಶ್ರೇಷ್ಠವೇ? ಅದನ್ನು ಅಲ್ಲ ಎಂದು ಹೇಳಲು, ಹೇಳಿ ಪಂಥಮುಕ್ತ ಓದುಗರನ್ನು ತಲುಪುವ ಸಾಮರ್ಥ್ಯವನ್ನೇ ಈ ಸಾಹಿತಿಗಳು ಕಳೆದುಕೊಂಡಿದ್ದಾರೆ. ಏಕೆಂದರೆ, ಅವರ ವಿರೋಧಕ್ಕೆ ತಾತ್ವಿಕ ಬಲವೇ ಇಲ್ಲ. ದುರ್ಬಲ ಸಾಹಿತಿಗಳೆಂಬ ಉದುರಿಹೋದ ಹಂಚಿಕಡ್ಡಿಗಳನ್ನು ಒಟ್ಟುಗೂಡಿಸುವುದು ಮಾರ್ಕ್ಸ್ ವಾದವೆಂಬ ಒಂದೂವರೆ ಮೊಳದ ಹುರಿ. ಭೈರಪ್ಪನವರ ಸಾಹಿತ್ಯ ವಿಮರ್ಶೆಗೆ ಲೇಖನಿ ಬಳಕೆಯಾಗದೆ ಈ ಹಳೆಯ ಪೊರಕೆಯನ್ನು ಬಳಸಲಾಗುತ್ತದೆ.
ಅವರಿಗೆ ಬಲಪಂಥೀಯ ಗುಮ್ಮನೆಂಬ ವೇಷ ತೊಡಿಸಿ ಸದೆಬಡಿವ ತಂತ್ರ ಸವಕಲಾದರೂ ಬಳಕೆಯಲ್ಲಿದೆ. ಅರೆಬರೆ ಸಾಹಿತಿಗಳಿಗೆ ವೇದಿಕೆ ಒದಗಿಸಲು ಎಡಪಂಥೀಯ ದುರುಳರೂ, ಮರುಳರೂ ಮಾಧ್ಯಮವನ್ನಾವರಿಸಿದ್ದಾರೆ. ಹಿಂದೂ ಮಂದಿರಗಳ ಲೂಟಿಯ ಜತೆಜತೆಗೆ ಅಲ್ಲಿಯ ಕೆತ್ತನೆಗಳನ್ನು ಭಗ್ನಗೊಳಿಸಿದ ದಾಳಿಕೋರರ ಮನಸ್ಥಿತಿಗೂ, ಈ ಭೈರಪ್ಪ ವಿರೋಧಿ ಬಣಕ್ಕೂ ವ್ಯತ್ಯಾಸವಿಲ್ಲ. ಶಿಲೆಗಳಲ್ಲಿನ ಸೌಂದರ್ಯ ಮುಘಲರನ್ನು ಕೆಣಕಿದರೆ ಭೈರಪ್ಪನವರ ಸಾಹಿತ್ಯಿಕ ಸೌಂದರ್ಯ ಇವರ ನಿದ್ದೆಗೆಡಿಸುತ್ತದೆ. ಭೈರಪ್ಪನವರ ಕಾದಂಬರಿಯನ್ನು ವಸ್ತುನಿಷ್ಠವಾಗಿ ವಿಮರ್ಶೆ ಮಾಡಿ ಅದರ ಮೌಲ್ಯವನ್ನು ಎತ್ತಿಹಿಡಿಯುವವರೂ ಇವರ ಅಳಿದುಳಿದ ಸ್ಥಿಮಿತವನ್ನು ಕೆಡಿಸುವ ಬಲಪಂಥೀಯರಾಗಿ ಕಾಣುತ್ತಾರೆ.
ಭಾರತದಲ್ಲಿ ಮತ್ತು ನೆರೆರಾಷ್ಟ್ರಗಳಲ್ಲಿನ ಭಾರತೀಯ ಮೂಲದ ಹಿಂದೂಗಳ ಇಂದಿನ ಸ್ಥಿತಿಗತಿ ಕುರಿತು ಮಾತನಾಡಿದಷ್ಟೂ ಹೇಳುವುದಕ್ಕಿನ್ನೂ ಉಳಿದಿರುತ್ತದೆ. ಇಂಗ್ಲೆಂಡಿನಲ್ಲಿ, ಸ್ಥಳೀಯರೇ ಕಾಲಿಡಲಿಕ್ಕಾಗದ ಪ್ರದೇಶಗಳಿವೆ. ಅಲ್ಲಿ ಮುಸ್ಲಿಮರದ್ದೇ ಪ್ರಾಬಲ್ಯ, ಅವರದ್ದೇ ಪಾಳೇಗಾರಿಕೆ. ನಾಟಕ ಕರ್ನಾಟಕ ರಂಗಾಯಣ ಅಸ್ತಿತ್ವಕ್ಕೆ ಬಂದ ದಶಕಗಳ ಕಾಲ ಎಡಚರದ್ದೇ ಅಲ್ಲಿ ಪಾರುಪತ್ಯ. ಸ್ಥಳೀಯರೇ ಆದ ಭೈರಪ್ಪನವರು ಯಾವುದೇ ಪಂಥಕ್ಕೆ ಸೇರಿದವರಲ್ಲ. ಆದರೆ, ಅದೂ ಅವರ ಕೃತಿಗಳಿಗೆ ಒಂದು ರೀತಿಯ ನೋ-ಗೋ ಝೋನ್ ಆಗಿಯೇ ಇತ್ತು. ರೂಪಾಂತರಗೊಂಡ ಅವರ ಮೇರುಕೃತಿ ‘ಪರ್ವ’ ರಂಗಾಯಣಕ್ಕೆ ಪ್ರವೇಶ ಪಡೆಯಲು ದಶಕಗಳೇ ಬೇಕಾದವು. ಅವರ ವಿರೋಽಗಳ ಆ ಭಾಗದ ಉರಿಗೆ ಮುಲಾಮಿಲ್ಲದಾಗಿದೆ.
ಭೈರಪ್ಪನವರ ತಗ್ಗದ ಜನಪ್ರಿಯತೆ ಒಂದೆಡೆ, ತಮ್ಮ ಪಾರುಪತ್ಯದ ಗಡಿಯನ್ನು ಅತಿಕ್ರಮಿಸಿ ಪರ್ವ ಪ್ರದರ್ಶನಗೊಂಡಿತಲ್ಲ ಎಂಬ ಒಳಗುದಿ ಮತ್ತೊಂದೆಡೆ. ಸಾರ್ವಜನಿಕರ ಸ್ವತ್ತಾದ ರಂಗಾಯಣ ಸೇರಬೇಕಾದ್ದು ಯಾವ ಪಂಥಕ್ಕೂ ಅಲ್ಲ. ಕಲೆಯ ಕೇಂದ್ರವಾದ ಆ ಸಂಸ್ಥೆ ಎಲ್ಲರಿಗೂ ಸೇರಿದ್ದು. ಪಕ್ಕದ ಕುಕ್ಕರಹಳ್ಳಿ ಕೆರೆ ತನ್ನ ನೈರ್ಮಲ್ಯವನ್ನು ಕಳೆದು ಕೊಂಡಿದ್ದರೂ, ರಂಗಾಯಣಕ್ಕೆ ತನ್ನದೇ ಮಹತ್ವವಿದೆ. ಕೆರೆಯ ನೈರ್ಮಲ್ಯ ಹಾಳಾಗಿದ್ದು ಸಮರ್ಥ ಉಸ್ತುವಾರಿಯ ಕೊರತೆಯಿಂದ. ರಂಗಾಯಣದ ವಾತಾವರಣ ಕಳೆಗುಂದಿದ್ದೂ ಮೇಲುಸ್ತುವಾರಿಯ ಅಭಾವದಿಂದ. ಅದು ಯಾವ ಒಂದು ವ್ಯಕ್ತಿಯ ಅಥವಾ ಗುಂಪಿನ ಜಾಗೀರಲ್ಲ.
ರಂಗಾಯಣದ ಒಂದಿಬ್ಬರು ನಿರ್ದೇಶಕರಿಗೆ – ಪ್ರಸನ್ನ ಮತ್ತು ಬಸವಲಿಂಗಯ್ಯ – ವರ್ಷದಲ್ಲಿ ಒಂದಾದರೂ ನಾಟಕವನ್ನು ಇಂಟರ್ನೆಟ್ ಮೂಲಕ ಪ್ರಸಾರ ಮಾಡಿರೆಂದು ಸಲಹೆ ನೀಡಿದ್ದೆ. ಅದಕ್ಕೆ ವೇದಿಕೆ ಒದಗಿಸುವುದಾಗಿ ಹೇಳಿದ್ದೆ. ಅವರಿಬ್ಬರೂ ಆಸಕ್ತಿ ತೋರಿಸಲಿಲ್ಲ. ಪ್ರಸನ್ನರಂತೂ ಮಡಿವಂತಿಕೆ ತೋರಿದರು. ರಂಗಭೂಮಿಗೆ ಅದರದ್ದೇ ಆದ ಪಾವಿತ್ರ್ಯತೆ ಇದೆ ಎಂದರು. ಪ್ರಯಾಣದಮ್ಮೆ ಸಿಕ್ಕಿ, ಭೈರಪ್ಪನವರಂತೆ ಯು.ಆರ್. ಅನಂತ ಮೂರ್ತಿಯೂ ಆರ್.ಎಸ್‌ಎಸ್ ಮನೋಭೂಮಿಕೆಯುಳ್ಳವರೆಂದರು. ಆಗ ನನಗನ್ನಿಸಿತು.
ನನ್ನ ಹೆಸರಲ್ಲಿ ರಾವ್ ಇರುವುದರಿಂದ ಬಹುಶಃ ರಂಗಾಯಣದ ಪಾವಿತ್ರ್ಯ ನಾನೂ ಧಕ್ಕೆ ತರುತ್ತೇನೆಂದು ಅವರ ಲೆಕ್ಕಾಚಾರವಿದ್ದಿರಬಹುದೆಂದು. ರಂಗಾಯಣದಲ್ಲಿ ಎಡಪಂಥೀಯರಿಗಷ್ಟೇ ಮಣೆ ಎಂಬ ಅಲಿಖಿತ ನಿಯಮ ಕಿತ್ತೊಗೆಯಲು ಎಲ್ಲ ಕಲಾಭಿಮಾನಿಗಳು ದನಿ ಎತ್ತಬೇಕಾಗಿದೆ. ನಾನಂತೂ ಕೂಗಲಾರಂಭಿಸಿದ್ದೇನೆ –ಕಾ ಕಾ ಕಾ ಕಾ.