ಸಂಪ್ರದಾಯ, ಸಂಸ್ಕೃತಿ ಉಳಿಸಿದ ಮಲೆನಾಡಿಗರು
ಮಿಶ್ರಾ ಕೃಷಿ
ಕವಿತಾ ಮಿಶ್ರಾ
@.
ಅವರು ಷಹರದ ಜನರಂತೆ ಮನೆಯಲ್ಲಿ ಊಟ ಹಾಕಲು ಭಯ ಪಡುವವರಲ್ಲ, ನೀವೇನಾದರೂ ಮಲೆನಾಡಿನಲ್ಲಿ ಒಬ್ಬರೆ ಓಡಾಡುತ್ತಿದ್ದರೆ ನಿಮ್ಮ ಬಗ್ಗೆ ವಿಚಾರಿಸಿನಿಮ್ಮನ್ನು ಉಪಚರಿಸಲಿಲ್ಲವೆಂದರೆ ಹೇಳಿ. ನಮ್ಮ ನಾಡಿನ ಸಂಸ್ಕೃತಿ ಸಂಪ್ರದಾಯವನ್ನು ನೀವು ತಿಳಿಯಬೇಕೆಂದಿದ್ದರೆ ಒಮ್ಮೆ ಮಲೆನಾಡಿಗೆ ಭೇಟಿ ಕೊಟ್ಟು ನೋಡಿ.
ಅಲ್ಲಿಯ ಜನರು ಹಣಕ್ಕಾಗಿ ಕೆಲಸ ಮಾಡುವವರಲ್ಲ ಅಥವಾ ಯಾರದ್ದೋ ಹೊಟ್ಟೆ ತುಂಬಿಸಲು ಇನ್ನೊಬ್ಬರ ಕೆಳಗೆ ಕೆಲಸ ಮಾಡುತ್ತ ಬೇಕೆಂತಲೇ ಬಕೆಟ್ ಹಿಡಿದು ಹಣ ಮಾಡುವವರೂ ಅಲ್ಲ. ಅವರು ನಿಸ್ವಾರ್ಥ ಪ್ರೀತಿಯಿಂದ ತಮ್ಮ ಹೊಟ್ಟೆಯ ಜತೆಗೆ ಇನ್ನೊಬ್ಬರ ಹೊಟ್ಟೆಯನ್ನೂ ತುಂಬಿಸುವವರು. ಅವರೇ ಮಲೆನಾಡಿಗರು.ನೀವು ಮಲೆನಾಡಿನ ಯಾವುದೇ ಮನೆಗೆ ಹೋಗಿ. ನೀವು ಅಪರಿಚಿತರೇ ಆಗಿರಿ ಅಥವಾ ಪರಿಚಿತರೇ ಆಗಿರಿ. ಆ ಮನೆಯವರು ನಿಮ್ಮನ್ನು ಮೊದಲು ಕೇಳುವ ಪ್ರಶ್ನೆ ಯೇನು ಗೊತ್ತೆ? ‘ಊಟ ಆಯ್ತಾ? ಆಸರಿಗೆ (ಬಾಯಾರಿಕೆ ತಣಿಸಲು) ಬೇಕಾ? ಸುಸ್ತಾಗಿದೆಯಾ? ವಿಶ್ರಾಂತಿ ಮಾಡ್ತೀರಾ?’ ಹೀಗೆ… ನಮಗೆ ದಣಿವಿಲ್ಲ ಅಂತ ಹೇಳಿದ ಮೇಲೆ ಅವರು ನಮ್ಮ ಊರು, ಬಂದ ಕಾರಣ ಇವುಗಳ ಬಗ್ಗೆ ವಿಚಾರಿಸುತ್ತಾರೆ.
ಓಪನ್ ಆಗಿ ಹೇಳ್ತೀನಿ, ಷಹರದ ಯಾವುದೇ ಮನೆಗೆ ಹೋಗಿ, ಒಳಗಿಂದಲೇ ಬಾಗಿಲ ಕಿಂಡಿಯಿಂದ ಹೊರಗಡೆ ಯಾರು ನಿಂತಿದ್ದಾರೆ(?!) ಅಂತ ನೋಡಿ ನಂತರ ‘ಯಾರು?’ ಅಂತ ಪ್ರಶ್ನೆ ಮಾಡುತ್ತಾರೆ. ಆಮೇಲೆ ಅಂಜುತ್ತಲೇ ಬಾಗಿಲು ತೆರೆದು ಏನಾಗಬೇಕಿತ್ತು? ಅಂತ ಕೇಳುತ್ತಾರೆ. ಇದು ತಪ್ಪು ಅಂತಲ್ಲ. ಷಹರಗಳಲ್ಲಿ ಹೆಣ್ಣಿಗೆ ಅಷ್ಟು ಅಭದ್ರತೆ ಕಾಡುತ್ತಿರುವುದೂ ಹೌದು ಬಿಡಿ. ಷಹರದಲ್ಲಿ ಮತ್ತು ಮಲೆನಾಡಿನಲ್ಲಿ ವಿಳಾಸವನ್ನು ಹುಡುಕಿ ಹೋಗು ವುದು ತುಂಬಾನೇ ಭಿನ್ನ- ವಿಭಿನ್ನ. ಷಹರ ಗಳಲ್ಲಿ ನಾವು ಯಾವುದೇ ಭಾಗಕ್ಕೆ ಹೋಗಬೇಕಾರೆ ಲೊಕೇಷನ್ ಹಾಕಿದರೆ ಮುಗಿದೇಹೋಯ್ತು. ನಾವು ಸಾಗುವುದನ್ನು ಬಿಟ್ಟರೆ ನಮ್ಮ ತಲೆಗೆ ಇನ್ನು ಯಾವುದೇ ಕೆಲಸ ಇರುವು ದಿಲ್ಲ. ಅದೇ ನೀವೇನಾದರೂ ಮಲೆನಾಡಿನಲ್ಲಿ ದಾರಿ ಹುಡುಕುವ ಪ್ರಯತ್ನಕ್ಕೆ ಕೈ ಹಾಕಿದರೆ, ಯಾಕಾದರೂ ಇಲ್ಲಿ ಬಂದೆನಪ್ಪಾ!
ದೇವರೇ… ಅಂತ ಅನಿಸೋದ್ರಲ್ಲಿ ನಿಸ್ಸಂಶಯ. ನಾವು ಯಾರದ್ದೋ ಮನೆಗೆ ಹೋಗಬೇಕು ಅಂತ ಇಟ್ಟುಕೊಳ್ಳೋಣ, ಅವರೇ ನಮಗೆ ಕರೆ ಮಾಡಿ ಬರುವ ದಾರಿಯನ್ನೂ ಹೇಳಿರುತ್ತಾರೆ. ‘ಮೊದಲು ಸಾಗರದಿಂದ ಒಂದೇ ದಾರಿಯಲ್ಲಿ ಬಂದು ನಂತರ ಆ ಊರು ಬರುತ್ತೆ, ಅಲ್ಲಿ ಬಲಕ್ಕೆ ತಿರುಗಬೇಡಿ. ನಮ್ಮ ಮನೆಗೆ ಬರುವ ದಾರಿ ಅದಲ್ಲ. ಹಾಗೇ ಒಂದು ಇಪ್ಪತ್ತು ಕಿಲೋಮೀಟರ್ ದೂರ ಬಂದರೆ ಚೂರೀಕಟ್ಟೆ ಹೆಸರಿನ ಇನ್ನೊಂದು ಊರು ಸಿಗುತ್ತದೆ. ಅಲ್ಲಿಂದ ಬಲಕ್ಕೆ ತಿರುಗಿ ಒಂದೇ ದಾರಿಯಲ್ಲಿ ಬಂದರೆ ಸಿದ್ದಾಪೂರ. ಅದೇ ದಾರಿಯಲ್ಲಿ ಬರುತ್ತಿರುವಾಗ ಒಂದು ಅಡ್ಡದಾರಿ ಸಿಗುತ್ತೆ.
ಅಲ್ಲಿಂದ ಸೀದಾ ಬಂದರೆ ನಮ್ಮ ಮನೆ ಕಾಣುತ್ತೆ’. ಹೀಗೆ ಲ್ಯಾಂಡ್ ಮಾರ್ಕ್ ಹೇಳಿರುತ್ತಾರೆ. ಆದರೆ ಅಲ್ಲಿ ನಡೆಯುವ ಸಂಗತಿ ಬೇರೆಯೇ ಆಗಿರುತ್ತದೆ. ನಾವು ಅವರು ಹೇಳಿದ ದಾರಿಯಲ್ಲಿಯೇ ಬರುತ್ತಿರುತ್ತೇವೆ. ಅವರು ಹೇಳಿದ ಊರುಗಳ ಬೋರ್ಡನ್ನು ಹುಡುಕುತ್ತಿದ್ದರೆ ಆ ಊರಿನ ಬೋರ್ಡುಗಳು ಅಳಿಸಿಹೋಗಿರುತ್ತದೆ. ನಾವು ಹೋಗಬೇಕಾದ ಊರಿನ ಹೆಸರನ್ನು ಕೇಳಿದರೆ, ‘ಇದೇ ಹೆಸರಿನ ಎರಡು ಮೂರು ಊರುಗಳಿವೆ. ನೀವು ಯಾವ ಊರಿಗೆ ಹೋಗಬೇಕು’ ಅಂತ ಮರು ಪ್ರಶ್ನಿಸುತ್ತಾರೆ. ಯಾರ ಮನೆಗೆ ಹೋಗುತ್ತಿದ್ದೇವೋ ಅವರಿಗೇ ಕರೆ ಮಾಡಿ ಕೇಳೋಣವೆಂದರೆ, ನಾವು ನಿಂತ ಜಾಗದಲ್ಲಿ ‘ನೋ ಸಿಗ್ನಲ್’!. ಯಾರಿಗೆ ಏನಂತ ಹೇಳೋಕಾಗುತ್ತೆ? ಊರಿಗೆ ಹೋಗುವ ಪ್ರಯತ್ನವನ್ನು ಪ್ರಾರಂಭಿಸಿದ್ದು ನಾವೇ ಅಂದಮೇಲೆ ಗುರಿಯನ್ನು ತಲುಪಬೇಕಾದವರೂ ನಾವೇ ಆಗಿರುತ್ತೇವೆ.
ಸರಿ… ಬೆಂಗಳೂರಿನಿಂದ ಸುಮಾರು ಎಂಟು ತಾಸು ಪ್ರಯಾಣ ಮಾಡಿದ ನಂತರ ಕಾಣಲಿದ್ದ ಹಳ್ಳಿಯನ್ನು ಹನ್ನೆರಡು ತಾಸುಗಳಾದ ನಂತರ ಆವಿಷ್ಕಾರಮಾಡಿದ್ದಾಯಿತು. ಹಳ್ಳಿಯೇನೋ ಸಿಕ್ಕಾಯಿತು. ಮಲೆನಾಡಿನ ಭಾಗಗಳಲ್ಲಿ ಮನೆಯನ್ನು ಹುಡಕಬೇಕೆಂದರೆ ಅದಕ್ಕೆ ಅಂತಹಾ ಗಟ್ಟಿಮನಸಿನವರೇ ಆಗಿರಬೇಕು. ನೀವೇ ಒಮ್ಮೆ ಊಹಿಸಿ ನೋಡಿ, ಎತ್ತ ನೋಡಿದರೂ ಜಟಿಲವಾದ ಕಾನನ, ಆಗ ತಾನೇ ಇಳಿಯುತ್ತಿರುವ ಸೂರ್ಯ, ನಮಗೆ ಭಯಬೀಳಿಸುವುದಕ್ಕೆಂದೇ ಅಲ್ಲಲ್ಲಿ ಕಾಣಿಸಿಕೊಳ್ಳುವ ಕಾಡುಕೋಣ, ಕಾಡುಹಂದಿಗಳ ಹಿಂಡು, ದೂರದಲ್ಲೆಲ್ಲೋ ಕೂಗುವ ಕತ್ತೆ ಕಿರುಬ… ನಾವು ಮತ್ತು ಕಾರು.
ನೀವೇನಾದರೂ ಈ ಪ್ರದೇಶಕ್ಕೆ ಹೊಸಬರಾಗಿದ್ದು, ಅಲ್ಲಿಗೆ ಹೋಗಿ ಬಂದ ನಂತರ ನಿಮ್ಮ ತಲೆಯಲ್ಲೊಂದು ಥ್ರಿಲ್ಲರ್ ಕಥೆಯನ್ನು ಬರೆಯುವ ಆಸೆ ಬರದೇ ಇರಲಾರದು. ಅದೇ ದುರ್ಗಮವಾದ ದಾರಿಯಲ್ಲಿ ಸಾಗುತ್ತಿದ್ದೀರಿ, ದೂರದಲ್ಲೆಲ್ಲೋ ಒಂದು ವಿದ್ಯುತ್ ದೀಪ ಕಾಣುತ್ತದೆ. ಊಹುಂ… ಅಲ್ಲಿನ್ನೂ ಬೀದಿ ದೀಪಗಳು ಕಾಣಸಿಗುವುದಿಲ್ಲ. ಅಥವಾ ಬಸ್‌ಗಳು ಓಡಾಡುವುದಿಲ್ಲ. ಅದು ಯಾರದ್ದೋ ಮನೆಯಲ್ಲಿ ಹಾಕಿದ ವಿದ್ಯುತ್ ದೀಪ. ಮಳೆಗಾಲದಲ್ಲಿ ನಮ್ಮ ಕಾರ್‌ಗಳೂ ಮುಂದೆ ಸಾಗುವುದಿಲ್ಲ. ನಿಮ್ಮ ತಲೆಯಲ್ಲಿ ಈಗ ಸುಳಿದಾಡುತ್ತಿರಬಹುದು. ಈ ಪರಿಸರದಲ್ಲಿರುವ ಜನರು ಅದೆಷ್ಟು ಹಿಂದುಳಿದಿರಬಹುದು? ಅದೆಷ್ಟು ಅನಾಗರೀಕರಾಗಿರ ಬಹುದು? ದೀಪ ಉರಿಯುತ್ತಿರುವಲ್ಲಿ ಕಾರು ಸಾಗಿ ಮನೆಯೊಂದರ ಎದುರು ನಿಂತಾಗ, ನೀವು ಹುಡುಕುತ್ತಿರುವುದು ಅದೇ ಮನೆಯನ್ನು ಅಂತ ತಿಳಿದಾಗ ಆ ಸಂತೋಷವನ್ನು ಅಕ್ಷರಗಳಲ್ಲಿ ಅಥವಾ ಮಾತಿನಲ್ಲಿ ಹೇಳುವುದು ತುಂಬಾನೇ ಕಷ್ಟ ಬಿಡಿ.
ಮನೆಯ ಎದುರು ಹೋಗುತ್ತಿದ್ದಂತೆ ಮತ್ತೆ ಪ್ರಶ್ನೆಗಳು ಕಾಡುವುದಕ್ಕೆ ಪ್ರಾರಂಭವಾಗುತ್ತದೆ. ಈ ಹಳ್ಳಿಯೊಳಗೆ ಬರುತ್ತಿರುವಾಗ ನಮ್ಮ ತಲೆಗೆ ಬಂದಿದ್ದ ಅನಿಸಿಕೆ ಗಳು ಮತ್ತೆ ಮೇಲುಕೆಳಗಾಗತೊಡಗುತ್ತದೆ. ನಮ್ಮ ವಾಹನ ಬರುತ್ತಿರುವುದನ್ನು ದೂರದಿಂದಲೇ ನೋಡಿದ ಹುಡುಗಿಯೊಬ್ಬಳು ಆ ರಾತ್ರಿಯಲ್ಲಿ ಯಾವುದೇ ಭಯವಿಲ್ಲದೆ ಬಾಗಿಲನ್ನು ತೆರೆದು ತುಸುನಗೆಯನ್ನು ಬೀರುತ್ತ ನಿಂತಿರುತ್ತಾಳೆ. ನಾವು ಕಾರಿನಿಂದ ಇಳಿದು ಬರುವಾಗ ಅವಳು ಮಾತನಾಡಿಸುವ ಬಗೆ ಅದು ನಿಜಕ್ಕೂ ಊಹೆ ಮಾಡಲಾಗದು. ಆ ಹೆಣ್ಣಿಗೆ ನಮ್ಮ ಪರಿಚಯವೇ ಇಲ್ಲದಿದ್ದರೂ, ‘ಮಾತನಾಡಿಸಿದೆ’ ಅಂತ ಹೇಳಿ ‘ಒಳಗೆ ಬನ್ನಿ’ ಅಂತ ಹೇಳುತ್ತಾಳೆ. ಅದು ನಾವುಸಾಗಿ ಬಂದಿದ್ದ ಹನ್ನೆರಡು ತಾಸುಗಳ ಸುಸ್ತನ್ನೂ ಮೀರಿಸುವಂತಹದ್ದು.
ಊಹು… ಆ ಎಳೆಯ ಹೆಣ್ಣಿನ ಉಪಚಾರ ಅಲ್ಲಿಗೇ ನಿಂತಿರುವುದಿಲ್ಲ, ನಾವು ಮನೆಗೆ ಪ್ರವೇಶಿಸುವ ಮೊದಲು, ಆಕೆಯೇ ಒಳಗೆ ಹೋಗಿ ಒಂದು ತಂಬಿಗೆ ನೀರನ್ನು ತಂದು ಕಾಲು ತೊಳೆಯಲು ನೀಡುತ್ತಾಳೆ. ನಾವು ಮನೆಯ ಒಳಗೆ ಹೋಗಿ ಆಸೀನರಾದ ನಂತರ ಮನೆಯ ಹಿರಿಯರನ್ನು ಕರೆದು ಮಾತಿಗೆ ಅನುವು ಮಾಡಿ ಕೊಡುತ್ತಾಳೆ. ಆದರೆ ನಾವು ಯಾರು? ಎತ್ತ ಅನ್ನೋ ದು ತಿಳಿಯದೆಯೇ ಈ ಹುಡುಗಿ ಅಷ್ಟು ಉಪಚಾರವನ್ನು ಮಾಡಿದಳಲ್ಲ! ಅಂತ ನಮಗೆ ಅನಿಸು ವಷ್ಟರಲ್ಲಿ ಮನೆಯ ಉಳಿದ ಸದಸ್ಯರ ಉಪಚಾರ ಪ್ರಾರಂಭವಾಗುತ್ತದೆ.
ಅದು ಈ ಹುಡುಗಿ ಉಪಚರಿಸಿದ ಎರಡರಷ್ಟು… ಆಗ ನಮ್ಮ ಮನಃಪಟಲದಲ್ಲಿ ಮೂಡುವ ಪ್ರಶ್ನೆ… ‘ನಿಜವಾಗಿಯೂ ಈ ಭಾಗದ ಜನರು ಅನಾಗರಿಕರು ಅಂತ ಅಂದುಕೊಂಡಿದ್ದ ನಾವೇ ಅನಾಗರಿಕರು.’ ಹೌದು ಸುತ್ತ ಹತ್ತು ಕಿಲೋಮೀಟರ್ ಸಾಗಿದರೂ ಅಲ್ಲಿ ಯಾವುದೇ ಬಸ್ ಪ್ರಯಾಣಿಸುವುದಿಲ್ಲ. ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗಬೇಕಾದರೆ ಕನಿಷ್ಠ ಒಂದು ಕಿಲೋಮೀಟರ್ ಸಾಗಲೇಬೇಕು. ಆದರೂ ಅಲ್ಲಿನ ಹೆಣ್ಣುಮಕ್ಕಳು ಆ ರಾತ್ರಿಯಲ್ಲಿ ನಿರ್ಭೀತಿಯಿಂದ ಬಾಗಿಲು ತೆರೆದು ಬಂದವರನ್ನು ಸ್ವಾಗತ ಮಾಡುತ್ತಾರಲ್ಲ; ಅವರಿಗೊಂದು ಸಲಾಂ. ಇನ್ನು ಹಳ್ಳಿಗಳೆಂದರೆ ಅಶಿಕ್ಷಿತರು ಎನ್ನುವ ಭಾವನೆ ಷಹರದ ಅನೇಕ ಜನರ ತಲೆಯಲ್ಲಿಛಾಪೊತ್ತಿದೆ. ಆದರೆ ಈ ಭಾಗದ ಜನತೆಯ ಜತೆ ನೀವು ಯಾವುದೇ ಭಾಷೆಯಲ್ಲಿ ಮಾತನಾಡಿದರೂ ಮನೆಯ ಯಾವುದಾದರೂ ಒಬ್ಬ ಸದಸ್ಯ ನೀವುಮಾತನಾಡಿದ ಭಾಷೆಯಲ್ಲಿ ಮಾತನಾಡುತ್ತಾನೆ.
ಇವರು ಕೇವಲ ಊಟಕ್ಕಾಗಿ ಈ ಪ್ರದೇಶವನ್ನು ಆರಿಸಿಕೊಂಡವರಲ್ಲ… ಮನಃಶಾಂತಿಗಾಗಿ ಇಲ್ಲಿ ಬಂದವರು. ಇನ್ನು ಆ ಊರಿನ ಮನೆಗಳಿಗೆ ಭೇಟಿ ನೀಡುತ್ತಾ ಹೋದರೆ ಒಂದೊಂದು ಮನೆಯ ಉಪಚಾರವೂ ಒಂದೊಂದು ರೀತಿಯಲ್ಲಿ ಸಂತೋಷವನ್ನೇ ನೀಡುತ್ತದೆ. ನಾವು ಷಹರದ ಯಾವುದೇ ಮನೆಗೆ ಹೋದರೂ, ಅವರ ಮನೆಯವರು ಆಫೀಸಿನಿಂದ ಬಂದ ನಂತರ ಮತು ಕಥೆ ಇತ್ಯಾದಿ. ಆದರೆ ಇಲ್ಲಿಯವರು ಹಾಗಲ್ಲ, ಮೊದಲು ಮಾತು- ಕತೆ ಉಪಚಾರ. ಅದೆಲ್ಲ ಮುಗಿದ ಬಳಿಕ ಅತಿಥಿ ಯಾರೇ ಆಗಿರಲಿ, ಇವರ ಮನೆಯ ತೋಟದ ದರ್ಶನ ಕಡ್ಡಾಯ. ಈ ಭಾಗಗಳಲ್ಲಿ ಸಮೃದ್ಧವಾಗಿ ಅಡಕೆಯನ್ನು ಬೆಳೆಯುವುದರಿಂದ, ಉಪಚಾರದ ನಂತರ ಅಡಕೆ ತೋಟಕ್ಕೆ ಕರೆದುಕೊಂಡು ಹೋಗಿ ದರದ ಬಗ್ಗೆ ಚರ್ಚೆಯನ್ನು ಮಾಡದೇ ಇದ್ದರೆ ಅವರು ಮಲೆನಾಡಿಗರೇ ಅಲ್ಲ.
ಇಲ್ಲಿಯ ಜನರು ಸಾಂಪ್ರದಾಯಿಕವಾಗಿ ಅಡಕೆ ಕೃಷಿಯನ್ನು ಮಾಡುತ್ತಿದ್ದರೂ ಅಡಕೆ ತೋಟದ ಶಿಸ್ತು ತುಂಬಾನೇ ಸುಂದರ. ನಮ್ಮ ಮನೆಗಳಲ್ಲಿ ಟೈಲ್ಸ್‌ಗಳು ಎಷ್ಟು ಸ್ವಚ್ಛವಾಗಿರುತ್ತದೆಯೋ ಇಲ್ಲಿಯ ತೋಟಗಳೂ ಅಷ್ಟೇ ಶುದ್ಧವಾಗಿರುತ್ತವೆ. ಇನ್ನು ಕೆಲವು ಭಾಗದ ತೋಟಗಳು ಸಂಪೂರ್ಣವಾಗಿ ಹುಲ್ಲುಗಿಡಗಳಿಂದ ತುಂಬಿದ್ದರೂಅವುಗಳನ್ನು ನಂತರ ಗೊಬ್ಬರಕ್ಕಾಗಿ ಉಪಯೋಗಿಸಲಾಗುತ್ತೆ. ತೋಟದ ಮಧ್ಯೆ ಬೆಳೆಯುವ ಕೋಕೋ, ಅರಿಶಿಣ, ಏಲಕ್ಕಿ, ಕಾಳುಮೆಣಸು, ಇವೆಲ್ಲಾ ಇಲ್ಲಿಯ ಉಪಬೆಳೆಗಳು. ತೋಟದ ಧ್ಯೆ ಕಾಣುವ ನಾಗರ, ಚೌಡಿ, ಜಟಕಾ, ರಾಹುವೇ ಇಲ್ಲಿಯ ವಾಚ್‌ಮನ್‌ಗಳು. ಅದೇನೇ ಹೇಳಿದ್ರೂ ನೀವು ಈ ಭಾಗವನ್ನ ಕೇವಲ ಬರೆದಿದ್ದನ್ನು ಓದಿದರೆ ಅಥವಾ ಯಾರೋ ಹೇಳಿದ್ದನ್ನು ಕೇಳಿದರೆ ನಿಮ್ಮ ಮನಸ್ಸು ತಣಿಯುವುದಿಲ್ಲ.
ನಿಜವಾಗಿ ಆಸ್ವಾದನೆಯನ್ನು ಮಾಡಬೇಕಾದರೆ ನೀವು ಈ ಭಾಗದ ಜನರ ಮನೆಗಳಲ್ಲಿ ಒಂದೆರಡು ದಿನಗಳ ಕಾಲ ಉಳಿಯಬೇಕು. ಅವರು ಷಹರದ ಜನರಂತೆಮನೆಯಲ್ಲಿ ಊಟ ಹಾಕಲು ಭಯ ಪಡುವವರಲ್ಲ, ನೀವೇನಾದರೂ ಮಲೆನಾಡಿನಲ್ಲಿ ಒಬ್ಬರೆ ಓಡಾಡುತ್ತಿದ್ದರೆ ನಿಮ್ಮ ಬಗ್ಗೆ ವಿಚಾರಿಸಿ ನಿಮ್ಮನ್ನು ಉಪಚರಿಸಲಿಲ್ಲ ವೆಂದರೆ ಹೇಳಿ. ನಮ್ಮ ನಾಡಿನ ಸಂಸ್ಕೃತಿ ಸಂಪ್ರದಾಯವನ್ನು ನೀವು ನಿಜವಾಗಿಯೂ ತಿಳಿಯಬೇಕೆಂದಿದ್ದರೆ ಒಮ್ಮೆ ಮಲೆನಾಡಿಗೆ ಭೇಟಿ ಕೊಟ್ಟು ಅಲ್ಲಿಯ ಜನರನ್ನು ಅಧ್ಯಯನ ಮಾಡಿದರೆ ನೂರಾರು ಓಡಾಡುವ ಎನ್‌ಸೈಕ್ಲೋಪೀಡಿಯಾಗಳ ದರ್ಶನದ ಭಾಗ್ಯಮ್ಮದಾಗಬಹುದು.
ಹಾ… ಇನ್ನೊಂದು ಮಾತು, ನೀವೇನಾದರೂ ಈ ಭಾಗಕ್ಕೆ ಹೋದಾಗ ಇಲ್ಲಿಯ ಜನರ ಜೀವನ ಪ್ರೀತಿಯನ್ನೊಮ್ಮೆ ಗಮನಿಸೇಬೇಕು. ಈ ಭಾಗಕ್ಕೆ ಸೇರಿದ್ದ ಪಂಪ ಸುಮ್ಮನೆ ಹೇಳಿದ್ದಲ್ಲ, ಚಾಗದ ಬೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ ಳ್ಗಾರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ ನಾಗಿಯುಮೇನೋ ತೀರ್ದಪುದೆ ತೀರದೊಡಂ ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್… ಎಂದು. ಈ ವಾಕ್ಯವನ್ನು ಆತ ಸಮಸ್ತ ಕರ್ನಾಟಕವನ್ನು ತಲೆಯಲ್ಲಿರಿಸಿಕೊಂಡು ಹೇಳಿದ್ದಾದರೂ ಮಲೆನಾಡಿನಲ್ಲಿ ಆತ ಅನುಭವಿಸಿ ಬರೆದಿದ್ದ ಅನ್ನುವುದು ಸತ್ಯ.
ನೋವಿನ ಸಂಗತಿಯೆಂದರೆ ಇಲ್ಲಿನ ಶಾಲೆಗಳು ಮುಚ್ಚುತ್ತಿವೆ, ಯುವಕರೆಲ್ಲಾ ಷಹರ ಸೇರಿ ತಂದೆ ತಾಯಂದಿರು ಮಾತ್ರವೇ ಇರುವಂತಾಗಿಬಿಟ್ಟಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ಶಾಲೆಗಳು ವೃದ್ಧಾಶ್ರಮಗಳಾಗಿ ಪರಿವರ್ತನೆಗೊಂಡರೂ ಅದರಲ್ಲಿ ಅತಿಶಯೋಕ್ತಿ ಇಲ್ಲ, ಮನೆಯ ಮಕ್ಕಳು ತಂದೆ ತಾಯಂದಿರಿಗೆ, ‘ನೀವೂ ನಮ್ಮಡನೆ ಬಂದು ಇದ್ದುಬಿಡಿ’ ಅಂತ ಹೇಳುತ್ತಾರಾದರೂ ಪರಂಪರಾಗತವಾಗಿ ಬಂದ, ಅನ್ನವನ್ನು ಹಾಕಿ ಮಕ್ಕಳನ್ನು ಸಲುಹಿದ ಈ ಭೂಮಿಯನ್ನು ಬಿಟ್ಟುಇನ್ನೆಲ್ಲೋ ಹೋಗಿ ಭೂಮಿಯನ್ನು ಅನಾಥರನ್ನಾಗಿ ಮಾಡುವ ಜಾಯಮಾನ ಇವರದ್ದಲ್ಲ