ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ಸ್ನೇಹ ಇತ್ತು: ಡಾ.ದೊಡ್ಡರಂಗೇಗೌಡ
ನನ್ನ ಮತ್ತು ಚಂಪಾ ನಡುವೆ ಹಲವು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದವು. ಅವರು ನನಗೆ ಏನೇ ಹೇಳಿದರೂ ನಾನೂ ಅದಕ್ಕೆ ಸರಿಯಾಗಿಯೇ ಟಾಂಗ್ ಕೊಡುತ್ತಿದ್ದೆ. ಇವುಗಳೇನೇ ಇದ್ದರೂ ನಮ್ಮಿಬ್ಬರ ಸ್ನೇಹಕ್ಕೆ ಯಾವತ್ತೂ ಚ್ಯುತಿ ಬಾರಲಿಲ್ಲ.
ನಾವಿಬ್ಬರೂ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇವೆ ಎಂದು ಅಗಲಿದ ಗೆಳೆಯನ ಬಗ್ಗೆ ಹಿರಿಯ ಸಾಹಿತಿ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ದೊಡ್ಡರಂಗೇಗೌಡ ಅಭಿಮಾನದಿಂದ ಹೇಳಿದರು. ಚಂಪಾ ಒಡನಾಟದ ಬಗ್ಗೆ ‘ವಿಶ್ವವಾಣಿ’ಯೊಂದಿಗೆ ಅವರು ಮಾತನಾಡಿದ್ದು ಹೀಗೆ…
1964ರಲ್ಲಿ ಹುಬ್ಬಳ್ಳಿಯ ರೈಲ್ವೆ ಮೇಲ್ ಸರ್ವೀಸ್‌ನಲ್ಲಿ ನಾನು ಉದ್ಯೋಗದಲ್ಲಿದ್ದೆ. ಆಗ ಪ್ರತಿ ಗುರುವಾರ ರಜೆ ಸಿಗುತ್ತಿದ್ದು, ಮೊದಲಿಗೆ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಯವರ ಮನೆಗೆ ಹೋಗಿ ಆಶೀರ್ವಾದ ಪಡೆದು, ಅರ್ಧ ಗಂಟೆ ಅವರ ಮಾತು ಕೇಳು ತ್ತಿದ್ದೆ. ತದನಂತರ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಹೋಗುತ್ತಿದ್ದು, ಅಲ್ಲಿ ಚಂಪಾ, ಗಿರಡ್ಡಿ ಗೋವಿಂದರಾಜು, ಸಿದ್ದಲಿಂಗ ಪಟ್ಟಣಶೆಟ್ಟಿ ಸಿಗುತ್ತಿದ್ದರು.
ಈ ಮೂವರೂ ಆಗಷ್ಟೇ ಸಂಕ್ರಮಣ ಎಂಬ ಪತ್ರಿಕೆ ಆರಂಭಿಸಿದ್ದರು. ನನ್ನ ಪ್ರಾರಂಭದ ಪದ್ಯಗಳನ್ನು ಸಂಕ್ರಮಣದಲ್ಲಿ ಪ್ರಕಟಿಸುವ ಮೂಲಕ ಚಂಪಾ ನನ್ನನ್ನು ಪ್ರೋತ್ಸಾಹಿಸುವು ದರಲ್ಲಿ ಒಬ್ಬರಾದರು. ನಾನು ಆರ್‌ಎಂಎಸ್ (ಕೇಂದ್ರ ಸರಕಾರಿ ಉದ್ಯೋಗ)ನಲ್ಲಿದ್ದ ಕಾರಣ ಮನುಜ ಮಧುಗಿರಿ ಕಾವ್ಯನಾಮದಲ್ಲಿ ಪದ್ಯಗಳನ್ನು ಬರೆಯುತ್ತಿದ್ದೆ. ಹೀಗೆ ಚಂಪಾ ಜತೆ ನಿಕಟವಾದ ಪರಿಚಯ ಮೊನ್ನೆ ಅವರು ಕಾಯಿಲೆ ಬೀಳುವವರೆಗೂ ಸಂಪರ್ಕ ಮುಂದುವರಿದಿತ್ತು.
ನವ್ಯ ಕಾವ್ಯದ ಹೊಸ ಅಲೆ ಎದ್ದಾಗ, ಮುಂಚೂಣಿಯಲ್ಲಿ ಯು.ಆರ್.ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಚಂದ್ರಶೇಖರ ಕಂಬಾರ,ನಿಸಾರ್ ಅಹಮದ್, ಚಂಪಾ ಇವರೆಲ್ಲರೂ ಇದ್ದು, ನಾವೆಲ್ಲ ನವ್ಯದ ದಾರಿ ತುಳಿಯಲಿಕ್ಕೆ ಬಹಳ ಕಾರಣರಾಗಿದ್ದಾರೆ. ಅವರ ಮಾತುಗಳುಯಾವಾಗಲೂ ಚುರುಕು, ಕಟಕಿ, ವಿಡಂಬನೆ, ವ್ಯಂಗ್ಯ ಮತ್ತು ತುಂಟತನದಿಂದ ಕೂಡಿತ್ತು. ಚಂಪಾ ಗಟ್ಟಿಗ, ನೇರ ಮಾತುಗಳನ್ನಾಡು ತ್ತಿದ್ದರು. ಮನಸ್ಸಿನಲ್ಲಿ ಏನನ್ನೂ ಬಚ್ಚಿಟ್ಟುಕೊಳ್ಳದೇ, ಸಿಡಿಗುಂಡಿನಂತೆ ಸ್ಫೋಟವಾಗುತ್ತಿದ್ದುದ್ದೇ ಜಾಸ್ತಿ. ಎದುರಿಗಿನವರು ಎಂತಹ ದೊಡ್ಡ ವ್ಯಕ್ತಿಯಾದರೂ ಸರಿ, ವೇದಿಕೆಯಾಗಲೀ ಅಥವಾ ನಿಜ ಜೀವನದಲ್ಲಾಗಲೀ ನೇರವಾಗಿಯೇ ಹೇಳುತ್ತಿದ್ದರು.
ಖಂಡಿತವಾದಿ ಲೋಕ ವಿರೋಧಿ ಅಲ್ಲವೇ? ಹಾಗೆಯೇ ಇವರೂ. ಈ ಹಿನ್ನೆಲೆಯಲ್ಲಿ ನಾನು ‘ಚಿಟಕು ಮುಳ್ಳಿನ ಚಂಪಾ’ ಅಂತಲೇ ಪದ್ಯ ಬರೆದಿದ್ದೆ. ಟಿಂಗರಬುಡ್ಡಣ್ಣ, ನೀ ಕೊಡೆ ನಾ ಬಿಡೆಯಂತಹ ಹಲವಾರು ನಾಟಕಗಳ ಮೂಲಕ ಬೇಕಾದಷ್ಟು ಗುದ್ದು ಕೊಟ್ಟಿದ್ದಾರೆ.ಅಲ್ಲದೇ, ಮೂಢನಂಬಿಕೆಗಳ ವಿರೋಧಿ, ವೈಚಾರಿಕ ಸಾಹಿತ್ಯದಲ್ಲಿ ನಂಬಿಕೆಯಿಟ್ಟಿದ್ದರು. ಒಳ್ಳೊಳ್ಳೆ ಸಂಪಾದಕೀಯಗಳನ್ನು ಬರೆಯು ತ್ತಿದ್ದರು. ಅವರ ಮತ್ತೊಂದು ಗುಣವೆಂದರೆ, ಎಲ್ಲರ ಮಾತುಗಳನ್ನೂ ಕೇಳುವ ಸೌಜನ್ಯತೆ. ಯಾವಾಗಲೂ ಅವರ ಜೇಬಿನಲ್ಲಿ ಪುಟ್ಟ ಪುಸ್ತಕ ಇಟ್ಟುಕೊಂಡು, ಎಲ್ಲರ ಮಾತುಗಳನ್ನೂ ಗುರುತು ಮಾಡಿಕೊಂಡು, ಅವನ್ನು ಸಂಕಲನ ರೂಪದಲ್ಲಿ ಹೊರತರುತ್ತಿದ್ದರು.
ಯಾವುದೇ ಚಳವಳಿಯಾದರೂ ನನ್ನ ಲ್ಯಾಂಡ್‌ಲೈನ್‌ಗೆ ಫೊನ್ ಬಂದರೆ ಅದು ಚಂಪಾದೇ ಆಗಿರುತ್ತಿತ್ತು. ಕನ್ನಡಕ್ಕೆ ಅನ್ಯಾಯಆದಾಗ ಲೆಲ್ಲಾ ವಿರೋಧಿಸಿದ್ದೇವೆ. 3 ತಿಂಗಳ ಹಿಂದೆ ಟೌನ್‌ಹಾಲ್ ಮೆಟ್ಟಿಲ ಮೇಲೆ ಪ್ರತಿಭಟನಾ ರ‍್ಯಾಲಿಯೊಂದರಲ್ಲಿ ಪಾಲ್ಗೊಂಡಿದ್ದೆವು. 2-3 ವರ್ಷದ ಹಿಂದೆ ಶಿಕ್ಷಕರ ಭವನದಲ್ಲಿ 500-600 ಮಂದಿಯನ್ನು ಸೇರಿಸಿಕೊಂಡು ಸಂಕ್ರಮಣದ ಹಬ್ಬವನ್ನಾಚರಿಸಿದ್ದರು. ಆಗ ಚಂಪಾ, ನೀವೂ ಚೆನ್ನಾಗಿ ಹಾಡ್ತೀರಾ, ಹಾಡ್ರೀ ಎಂದಿದ್ದರು.
ನಾನು ಅಲ್ಲೇ ‘ವರ್ಗರಹಿತ ನಾಡು…’ ಎಂಬ ಪದ್ಯ ಬರೆದು ಹಾಡಿದ್ದೆ. ಇದನ್ನು ಅವರು ಮನಸಾರೆ ಮೆಚ್ಚಿಕೊಂಡಿದ್ದರು. ನೀವು ಲಂಕೇಶ್ ವಿರೋಽಯೇ ಎಂದು ನಾನೊಮ್ಮೆ ಕೇಳಿದಾಗ, ಹಂಗೇನಿಲ್ಲಾ? ಎಂದಿದ್ದರು. ಅಂದರೆ, ಬೇರೆಯವರು ಬರೆದದ್ದು ಸರಿಯಿಲ್ಲವೆಂದರೆ, ಮುಲಾಜಿಲ್ಲದೇ ನಿರ್ದಾಕ್ಷಿಣ್ಯವಾಗಿ ಕಟುವಾಗಿ ಹೇಳುತ್ತಿದ್ದ ಪತ್ರಕರ್ತನೂ ಆಗಿದ್ದರು. ಹಲವರಿಗೆ ವಿರೋಧಿಯಾದರೂ, ಒಳ್ಳೆಯಬರವಣಿಗೆ, ಗದ್ಯ, ನಾಟಕಗಳಿಂದ ಕನ್ನಡಿಗರ ಮನದಲ್ಲಿ ಚಂಪಾ ಶಾಶ್ವತವಾಗಿ ಇರುತ್ತಾರೆ.
ನಾನು ಯಾವುದೇ ಕಾಗದ, ಪತ್ರಗಳನ್ನು ಬರೆಯುವ ಮುಂಚೆ ‘ಓಂ’ ಎಂದು ಆರಂಭಿಸುತ್ತಿದ್ದೆ. ಇದನ್ನು ಚಂಪಾ ವಿರೋಧಿಸಿದರೂನನ್ನತನ, ಸ್ವಂತಿಕೆ ಮುಖ್ಯ ಎಂದು ನಾನೂ ಪ್ರತಿಪಾದಿಸುತ್ತಿದ್ದೆ. ನಾನು ವಿಧಾನಪರಿಷತ್ ಸದಸ್ಯನಾಗಿದ್ದಾಗ ಈ ಬಗ್ಗೆ ಅವರು ಪ್ರಜಾವಾಣಿಯಲ್ಲಿ ಕಟಕಿಯಾಡಿದ್ದರು. ಇದಕ್ಕೆ ಟಾಂಗ್ ನೀಡಿದ ನಾನೂ ಸುದೀರ್ಘ ಪತ್ರ ಬರೆದು, ಒಬ್ಬೊಬ್ಬರದು ಒಂದೊಂದುರೀತಿಯ ವೈಯಕ್ತಿಕ ಆಚರಣೆಗಳಿರುತ್ತವೆ. ನಮ್ಮ ಹಿಂದೂ ಸಂಪ್ರದಾಯದಂತೆ ನಾನು ಬರೆಯುತ್ತಿದ್ದೇನೆ. ಧೈರ್ಯವಿದ್ದರೆ, ಮುಂದಿನ ದಿನಗಳಲ್ಲಿ ಚಂಪಾ ಅವರೂ ‘ಓಂ’ ಎಂದು ಬರೆದು ಯಶಸ್ವಿಯಾಗಲಿ ಎಂದು ಸವಾಲು ಹಾಕಿದ್ದೆ.– ಡಾ. ದೊಡ್ಡರಂಗೇಗೌಡ ಹಿರಿಯ ಸಾಹಿತಿ