ಚಂಪಾ ಎಂಬ ಶಾಲ್ಮಲೆ
ಡಾ.ಪ್ರಕಾಶ ಗ.ಖಾಡೆ
ಉಳಿದ ನದಿಗಳ ಹಾಗೆ ನೀನಲ್ಲ ಶಾಲ್ಮಲೆನಿನ್ನ ಕಂಡವರಿಲ್ಲ ನಿನ್ನೊಳಗೆ ಮೈಯತೊಳಕೊಂಡವರಿಲ್ಲನಿನ್ನ ಉಂಡವರಿಲ್ಲ ನಿನ್ನೊಳಗೆ ಕಳಕೊಂಡವರಿಲ್ಲಉಗಮವೆಲ್ಲೋ ನಿನ್ನದು ನಿನ್ನ ಸಂಗಮವೆಲ್ಲೋನೀನು ಹರಿಯುತ್ತಿರುವುದು ಮಾತ್ರ ಒಂದೇಖರೆ.ಬಹುಶಃನಾನು ಬದುಕಬೇಕೆಂದಿರುವ ಬದುಕಿನಂತೆನಾನು ಬರೆಯಬೇಕೆಂದಿರುವ ಕಾವ್ಯದಂತೆ.ಚಂಪಾ (೧೯೯೦)
ಹೌದು, ಚಂಪಾ ಶಾಲ್ಮಲೆಯಂತೆ ಬದುಕಿದರು ಮತ್ತು ಶಾಲ್ಮಲೆಯಂತೆ ನಮ್ಮೊಡನೆ ಸದಾ ಇರುತ್ತಾರೆ. ಚಂಪಾ ಅವರದು ಆಕರ್ಷಕ ವ್ಯಕ್ತಿತ್ವ. ಅವರ ಮಾತು ಉತ್ತರ ಕರ್ನಾಟಕದ ಜವಾರಿ ಭಾಷೆ. ತಾನು ಇಂಗ್ಲಿಷ್ ಪ್ರಾಧ್ಯಾಪಕರಾದರೂ, ವಿದೇಶಕ್ಕೆ ಹೋಗಿ ಇಂಗ್ಲಿಷ್ಸಾಹಿತ್ಯ ಓದಿಕೊಂಡು ಬಂದರೂ ಅವರು ಈ ನೆಲದ ಶಕ್ತಿ, ಸೌಂದರ್ಯವನ್ನು ತಮ್ಮ ಮಾತು ಮತ್ತು ಕೃತಿಗಳಲ್ಲಿ ಸಾಧಿಸಿಕೊಂಡುಬಂದರು. ಅವರಲ್ಲಿ ಸದಾ ಹೊಸತನವನ್ನು ಶೋಧಿಸುವ ಮತ್ತು ಹೊಸತನವನ್ನು ಸೃಷ್ಟಿಸುವ ಅಪಾರ ಸೃಜನಶೀಲತೆ ಇತ್ತು.  ಬರವಣಿಗೆ ಯಲ್ಲಿ ಅವರು ಯಾವ ನಿಷ್ಠುರವಾಗಿ ಬರೆಯುತ್ತಿದ್ದರು ಮತ್ತು ಹಾಗೇನೆ ಬದುಕಿದ್ದರು.
ಚಂಪಾ ಅವರ ಬರವಣಿಗೆ ಕುತೂಹಲದಿಂದ ಓದಿಸಿಕೊಂಡು ಹೋಗುವಂಥದು. ವ್ಯಂಗ್ಯ ವಿಡಂಬಣೆ ಮೂಲಕ ಕನ್ನಡ ಸಾಹಿತ್ಯಕ್ಕೆ ಹೊಸ ಭಾಷೆಯನ್ನು ಕೊಟ್ಟರು. ಸಮಕಾಲೀನ ಬದುಕು, ಸಿದ್ದಾಂತ, ಸಾಹಿತಿಗಳು ಮತ್ತು ರಾಜಕಾರಣಿಗಳು ಅವರ ಎಡಬಿಡಂಗಿತನ ಕುರಿತು ಬರೆಯುವಾಗ ಅವರ ಭಾಷೆಯ ವ್ಯಂಗ್ಯದ ಕಸುವು ಯಾರೂ ಅರ್ಥಮಾಡಿ ಕೊಳ್ಳುವಂಥದು. ತಿಳಿಹಾಸ್ಯ ಬೆರೆತ ಧಾರವಾಡ ಪ್ರಾದೇಶಿಕ ಸೊಗಡು ಅವರ ಬರವಣಿಗೆಯ ಜೀವದ್ರವ್ಯವಾಗಿದೆ.
ಕನ್ನಡದಲ್ಲಿ ಕಾರ್ನಾಡ, ಕಂಬಾರ, ಲಂಕೇಶರಂತೆ ಚಂಪಾ ತಮ್ಮ ನಾಟಕಗಳ ಮೂಲಕ ಕನ್ನಡಕ್ಕೆ ಹೊಸತನ ತಂದರು. ಚಂಪಾ ಅವರ ನಾಟಕಗಳ ಕಥಾ ವಸ್ತುಗಳು ತಮ್ಮನ್ನು ತಾವು ತೆರೆದುಕೊಳ್ಳಹೋಗುವುದಿಲ್ಲ, ವಾಚ್ಯವೆನಿಸುವುದಿಲ್ಲ, ಒಂದರ್ಥದಲ್ಲಿ ಅಸಂಗ ತವೂ ಅಲ್ಲ, ನಿಗೂಢ ನೆಲೆಯ ಅರ್ಥವನ್ನು ಹೊತ್ತುಕೊಂಡು ಅಷ್ಟೇ ಗಾಢವಾಗಿ ಪ್ರೇಕ್ಷಕರನ್ನು ಕಾಡುವ ವಸ್ತುಗಳುಳ್ಳ ನಾಟಕಗಳಾಗಿವೆ. ಚಂಪಾ ಅವರ ಕೊಡೆಗಳು, ಟಿಂಗರ ಬುಡ್ಡಣ್ಣ ನಾಟಕಗಳು ಯಾವ ಕಾಲಕ್ಕೂ ಸಲ್ಲುವಂಥವು.
ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಅವರು ಹೊರತರುತ್ತಿದ್ದ ಸಂಕ್ರಮಣ ಪತ್ರಿಕೆಯೂ ಒಂದು ರೀತಿಯಲ್ಲಿ ಸಾಹಿತಿಗಳ ತವರು ಮನೆಯಂತೆ ಇತ್ತು, ಇವತ್ತು ಖ್ಯಾತ ನಾಮರೆಲ್ಲಾ ತಮ್ಮ ಮೊದಲ ಬರಹಗಳನ್ನು ಪ್ರಕಟಿಸಿದ್ದು ಸಂಕ್ರಮಣವೇ. ಸಂಕ್ರಮಣದ ಮೂಲಕ ಒಂದು ಸಾಹಿತ್ಯಪತ್ರಿಕೆಯನ್ನಷ್ಟೇ ನಡೆಸಲಿಲ್ಲ, ಅವರು ಒಂದು ಸಾಹಿತ್ಯ ಪಡೆಯನ್ನೇ ಕಟ್ಟಿದರು. ಧಾರವಾಡ ವಿಶ್ವವಿದ್ಯಾಲಯವನ್ನು ಒಂದು ಪ್ರಖರ ಚಿಂತನೆಯ ನೆಲೆಯಾಗಿ ರೂಪಿಸಿದರು, ಸಾಹಿತ್ಯ ಜನಸಾಮಾನ್ಯರಿಗಾಗಿ ಮಿಡಿಯಬೇಕೆಂದು ಅವರು ಬಯಸಿದರು.
ಬಂಡಾಯ ಸಾಹಿತ್ಯ ಸಂಘಟನೆಗೆ ಚಾಲನೆ ನೀಡಿ ಕನ್ನಡ ಸಾಹಿತ್ಯದ ಮಗ್ಗಲು ಬದಲಿಸಿದರು. ಹೊಸಗನ್ನಡ ನವ್ಯದ ನಂತರ ಬಂಡಾಯ ಸಾಹಿತ್ಯ ಚಳುವಳಿಯ ಸಂಘಟಕರಾಗಿ, ನೇತಾರರಾಗಿ ಸಾಹಿತ್ಯಿಕ, ಸಾಂಸ್ಕೃತಿಕ ಲೋಕಕ್ಕೆ ಹೊಸ ಆಯಾಮ ತಂದು ಕೊಟ್ಟರು. ಒಂದೆಡೆ ಬರಗೂರು ರಾಮಚಂದ್ರಪ್ಪನವರು, ಇನ್ನೊಂದೆಡೆ ಚೆನ್ನಣ್ಣ ವಾಲೀಕಾರ ಅವರು ಬಂಡಾಯ ಸಂಘಟಣೆಗೆ ಹೆಗಲಾಗಿದ್ದರೆ ಚಂದ್ರ ಶೇಖರ ಪಾಟೀಲರು ನಮ್ಮ ಉತ್ತರ ಕರ್ನಾಟಕದ ಲೇಖಕರಿಗೆ ಒಂದು ಮಾದರಿಯಾಗಿದ್ದರು.
ರಾಜಕಾರಣಿಯ ಕಪಟತನವನ್ನು, ಸ್ವಾಮಿಜಿಗಳ ಲಂಪಟತನವನ್ನು ಅವರೆಂದೂ ಸಹಿಸಲಿಲ್ಲ. ತಮ್ಮ ಹೋರಾಟಗಳ ಮೂಲಕ ಕಳೆದ ಶತಮಾನದ ಕೊನೆಯ ದಶಕಗಳಲ್ಲಿ ಅವರು ಹುಟ್ಟು ಹಾಕಿದ ವೈಚಾರಿಕ ಕ್ರಾಂತಿ, ಕರ್ನಾಟಕವನ್ನು ವೈಚಾರಿಕ ಕರ್ನಾಟಕವಾಗಿಕಟ್ಟುವಲ್ಲಿ ನೆರವಾದವು. ಸಾಹಿತ್ಯಕ್ಕಷ್ಟೇ ಅವರ ಹೋರಾಟಗಳು ಸೀಮಿತವಾಗಿರಲಿಲ್ಲ ಕನ್ನಡ ನಾಡು ನುಡಿ, ನೆಲ ಜಲ, ಸಮಾಜ, ಧರ್ಮ, ಶಿಕ್ಷಣ, ರಾಜಕೀಯ, ಭಾಷೆ ಯಾವುದೇ ಇರಲಿ ಎಲ್ಲದಲ್ಲಿಯೂ ಅನ್ಯಾಯ, ಪಕ್ಷಪಾತ, ಶೋಷಣೆ ಕಂಡರೆ ತೀವ್ರವಾಗಿ ಹೋರಾಟಕ್ಕೆಅಣಿಯಾಗುತ್ತಿದ್ದರು. ಅವರ ಹೋರಾಟಕ್ಕೆ ಒಂದು ಶಕ್ತಿಯಿತ್ತು.
ಗೋಕಾಕ ಚಳವಳಿ ಸಂದರ್ಭದ ಹೋರಾಟ, ‘ಕನ್ನಡ ಕನ್ನಡ ಬರಿ ನನ್ನ ಸಂಗಡ’ ಎನ್ನುತ್ತಲೆ ಮಾತೃಭಾಷೆಯ ಆದ್ಯತೆಗಾಗಿ ಉಸಿರಿರು ವವರೆಗೂ ದುಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿ ಪ್ರಭುತ್ವದ ಹಿಡಿತವನ್ನು ಬಿಡಿಸಿಕೊಂಡು ಅವರು ನಡೆಸಿಕೊಟ್ಟಶಿವಮೊಗ್ಗ ಮೊದಲಾದ ಸಮ್ಮೇಳನಗಳು ಒಂದು ಮಾದರಿಯಾಗಿದ್ದವು. ಪ್ರೊ.ಚಂಪಾ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಗಿದ್ದಾಗಲೂ ಯಾರ ಬಿಡೆ ಮುರುವತ್ತುಗಳನ್ನಿಟ್ಟುಕೊಳ್ಳದೇ ಕನ್ನಡವನ್ನು ಆಡಳಿತ ಭಾಷೆಯಾಗಿ ಗಟ್ಟಿಗೊಳಿಸಿದರು.
ಕನ್ನಡ ಬೇಡದವರು, ಕನ್ನಡಿಗರಿಗೂ ಬೇಡ ಎಂದು ಸಾರಿದರು. ಧಾರವಾಡದ ಮಣ್ಣು ಬೇಂದ್ರೆ, ಪಾಪು, ಕಣವಿ ಅವರನ್ನು ನಾಡಿಗೆ ನೀಡಿದಂತೆ ಚಿರಕಾಲ ನೆನಪಿನಲ್ಲಿ ಉಳಿಯುವಂತೆ ಚಂಪಾ ಧಾರವಾಡದ ಹೆಸರಿನಲ್ಲಿ ಹೆಸರಾದರು.