ಗಾಂಧೀಜಿಗೆ ನೆಮ್ಮದಿ ಕೊಡುತ್ತಿದ್ದ ಸರ್ಪಗಂಧಿ
ಹಿಂದಿರುಗಿ ನೋಡಿದಾಗ
ಡಾ.ನಾ.ಸೋಮೇಶ್ವರ
ಅಲೆಗ್ಸಾಂಡರ್ ದಿ ಗ್ರೇಟ್ ಭಾರತಕ್ಕೆ ದಂಡೆತ್ತಿ ಬಂದಾಗ, ಆತನು ಸೈನ್ಯಾಧಿಪತಿ ‘ಟಾಲು- ಸೋಟರ್’ ವಿಷಬಾಣಕ್ಕೆ ತುತ್ತಾಗಿ ಸಾಯುವ ಸ್ಥಿತಿ ತಲುಪಿದಾಗ ಸರ್ಪಗಂಧಿಯ ಬೇರು ಆತನ ಜೀವವನ್ನು ಉಳಿಸಿತಂತೆ. ಹೀಗೆ ಸರ್ಪಗಂಧಿಯ ಪರಿಚಯವು ಪಾಶ್ಚಾತ್ಯ ಜಗತ್ತಿಗಾ ಯಿತು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಪ್ರತಿ ದಿನ ಸರಾಸರಿ 18 ಕಿಮೀ ನಡೆಯುತ್ತಿದ್ದರು. ಹೀಗೆ 1918ರಿಂದ 1948ರವರೆಗೆ, ಸುಮಾರು 36 ವರ್ಷಗಳ ಕಾಲ 79000 ಕಿಮೀ ನಡೆದರು. ನಮ್ಮ ಭೂಮಿಯ ಸುತ್ತಳತೆಯು 12742 ಕಿಮೀ. ಅಂದರೆಗಾಂಧೀಜಿಯವರು ನಮ್ಮ ಭೂಮಿಯನ್ನು ಆರು ಸಲ ಪ್ರದಕ್ಷಿಣೆ ಮಾಡಿದರೆನ್ನಬಹುದು.
ಹಾಗಾಗಿ ಗಾಂಧೀಜಿಯವರ ಶಾರೀರಿಕ ಆರೋಗ್ಯವು ಚೆನ್ನಾಗಿಯೇ ಇತ್ತು. ಆದರೆ ಸ್ವಾತಂತ್ರ್ಯ ಹೋರಾಟದ ಒತ್ತಡವು ಅವರ ಮನಸ್ಸಿನ ಮೇಲಾಗಿತ್ತು. ಅಕ್ಟೋಬರ್ 26, 1937ರಂದು ಗಾಂಧೀಜಿಯವರ ರಕ್ತದೊತ್ತಡವು 194/130 ಇದ್ದರೆ, ಫೆಬ್ರವರಿ 19, 1940 ರಂದು 220/110 ಇತ್ತು. ಆಗ ಅತಿರಕ್ತದೊತ್ತಡವು ಅವರನ್ನು ಕಾಡು ತ್ತಿತ್ತು. ಈ ಅತಿರಕ್ತದ ಒತ್ತಡಕ್ಕೆ ಮಾನಸಿಕ ಒತ್ತಡಗಳು ಎಷ್ಟರಮಟ್ಟಿಗೆ ಕಾರಣವಾಗಿದ್ದವು ಎನ್ನುವುದನ್ನು ಹೇಳುವುದು ಕಷ್ಟ.
ಹಾಗಾಗಿ ಗಾಂಧೀಜಿಯವರು ತಮ್ಮ ರಕ್ತದೊತ್ತಡ ನಿಯಂತ್ರಣಕ್ಕೂ ಹಾಗೂ ಮನಸ್ಸಿನ ಪ್ರಶಾಂತತೆಗೂ ನಿತ್ಯ ಸರ್ಪಗಂಧಿ ಬೇರಿನ ಸಾರವನ್ನು ಸೇವಿಸುತ್ತಿದ್ದರು. ಸರ್ಪಗಂಧಿಯ ವೈಜ್ಞಾನಿಕ ನಾಮಧೇಯ‘ರವಾಲಿಯ ಸರ್ಪೆಂಟಿನ’. ಇಂಡಿಯನ್ ಸ್ನೇಕ್ ರೂಟ್, ಡೆಲ್ ಪೆಪ್ಪರ್, ಸೆರ್ಪೆಂಟೈನ್ ವುಡ್ ಇತರ ಹೆಸರುಗಳು. ಭಾರತೀಯರಿಗೆ ‘ಸರ್ಪಗಂಧಿ’ ಎನ್ನುವ ಹೆಸರಿನ ಜತೆಗೆ ಪಾತಾಳಗಂಧಿ, ಸೂತ್ರ ನಾಭಿ, ಪಾತಾಳಗರುಡ ಮತ್ತು ಚಂದ್ರಿಕಾ ಎಂಬ ಹೆಸರಿನಿಂದಲೂ ಪರಿಚಿತ. ಇದರ ತವರು ಭಾರತದಿಂದ ಇಂಡೋನೇಷ್ಯಾ ವರೆಗಿನ ಪ್ರದೇಶ.
ಇದರ ಬೇರು 30 ಸೆಂ.ಮೀ.-50 ಸೆಂ.ಮೀ.ಉದ್ದದ್ದು, ಬಳುಕುವ ಹಾವಿನಂತೆ ಕಾಣುತ್ತದೆ. ಹಾಗಾಗಿ ಇದಕ್ಕೆ ಇಂಡಿಯನ್ ಸ್ನೇಕ್ ರೂಟ್ ಎಂಬ ಹೆಸರು ಬಂದಿದೆ. ಭಾರತದಲ್ಲಿ ಸರ್ಪಗಂಧಿಯನ್ನು ಅನಾದಿ ಕಾಲದಿಂದಲೂ ನಾನಾ ಚಿಕಿತ್ಸೆಯಲ್ಲಿ ಬಳಸುತ್ತಿರುವುದನ್ನು ನಾವು ಕಾಣಬಹುದು. ಭಾವಪ್ರಕಾಶ ನಿಘಂಟು ಹಾವು, ಜೇಡ, ಚೇಳು, ಇಲಿಯ ಕಡಿತದ ವಿಷಳಿಸಲು, ಜ್ವರ ನಿಯಂತ್ರಣಕ್ಕೆ, ಗಾಯಗಳನ್ನು ಗುಣಪಡಿಸುವುದಕ್ಕೆ ಮತ್ತು ಕರುಳಹುಳುಗಳ ನಿವಾರಣೆಗೆ ಇದನ್ನು ಬಳಸಬಹುದು ಎನ್ನುತ್ತದೆ. ಅಲ್ಲದೆ ಹೊಟ್ಟೆಮನೋವಿಗೆ, ಮಲೇರಿಯ ನಿಯಂತ್ರಣಕ್ಕೆ, ಮಾನಸಿಕ ರೋಗಗಳ ನಿಯಂತ್ರಣಕ್ಕೆ ಬಳಸುತ್ತ ಬಂದಿರುವ ದಾಖಲೆಯುಂಟು.
ಅಲೆಗ್ಸಾಂಡರ್ ದಿ ಗ್ರೇಟ್ ಭಾರತಕ್ಕೆ ದಂಡೆತ್ತಿ ಬಂದಾಗ, ಆತನು ಸೈನ್ಯಾಧಿಪತಿ ‘ಟಾಲು- ಸೋಟರ್’ ವಿಷಬಾಣಕ್ಕೆ ತುತ್ತಾಗಿ ಸಾಯುವ ಸ್ಥಿತಿ ತಲುಪಿದಾಗ ಸರ್ಪಗಂಧಿಯ ಬೇರು ಆತನ ಜೀವವನ್ನು ಉಳಿಸಿತಂತೆ. ‘ಗಾರ್ಸಿಯ ಡಿ ಓಟರ್’ ಎನ್ನುವ ಪೋರ್ಚುಗೀಸ್ ವೈದ್ಯ 1534ರಲ್ಲಿ ಭಾರತಕ್ಕೆ ಬಂದಿದ್ದ. ಈತನು 1563ರಲ್ಲಿ ಉಷ್ಣವಲಯದ ರೋಗಗಳ (ಟ್ರಾಪಿಕಲ್ ಡಿಸೀಸಸ್) ಬಗ್ಗೆ, ಭಾರತೀಯ ಸಂಬಾರ ಪದಾರ್ಥಗಳ ಬಗ್ಗೆ ಹಾಗೂ ಭಾರತೀಯ ಮೂಲಿಕೆಗಳ ಬಗ್ಗೆ ಒಂದು ಪುಸ್ತಕವನ್ನು ಬರೆದ. ಈ ಪುಸ್ತಕದಲ್ಲಿ ಸರ್ಪಗಂಧಿಯ ಬಗ್ಗೆ ಬರೆದ. ಹೀಗೆ ಸರ್ಪಗಂಧಿಯ ಪರಿಚಯವು ಪಾಶ್ಚಾತ್ಯ ಜಗತ್ತಿಗಾಯಿತು.
ರವಾಲಿಯ ಸರ್ಪೆಂಟಿನ ಎನ್ನುವ ವೈಜ್ಞಾನಿಕ ನಾಮಧೇಯದಲ್ಲಿ ‘ರವಾಲಿಯ’ ಎನ್ನುವ ಕುಲನಾಮಕ್ಕೆ ಕಾರಣ 16ನೆಯ ಶತಮಾನದ ಜರ್ಮನ್ ವೈದ್ಯ ಡಾ. ಲಿಯೋನಾರ್ಡ್ ರವಾಲ್. ಈತನು ಡಿ ಓಟರ್ ಪುಸ್ತಕವನ್ನು ಓದಿ ಭಾರತಕ್ಕೆ ಪ್ರವಾಸ ಬಂದ. ಸರ್ಪಗಂಧಿ  ಮೂಲಿಕೆಯನ್ನು ಅಧ್ಯಯನ ಮಾಡಿದ. ಆ ಸಸ್ಯವನ್ನು ಯೂರೋ ಪಿಗೆ ತೆಗೆದುಕೊಂಡು ಹೋಗಿ, ಯೂರೋಪಿಯನ್ನರಿಗೆ ಪರಿಚಯ ಮಾಡಿಕೊಟ್ಟ. ಹಾಗಾಗಿ ಈತನ ಗೌರವಾರ್ಥ ಈ ಸಸ್ಯಕ್ಕೆ ‘ರವಾಲಿಯ’ ಎನ್ನುವ ಕುಲನಾಮವನ್ನಿಟ್ಟರು. ಇನ್ನು ‘ಸರ್ಪೆಂಟಿನ’ ಎನ್ನುವ ಪ್ರಭೇದ ನಾಮಕ್ಕೆ ಕಾರಣ, ಹಾವನ್ನು ಹೋಲುವ ಬೇರಿನ ರಚನೆ.
ಸರ್ ರಾಮನಾಥ್ ಚೋಪ್ರ (1882-1973) ಅಂದಿನ ಭಾರತೀಯ ವೈದ್ಯಕೀಯ ಸೇವೆಯಲ್ಲಿದ್ದು, ‘ಭಾರತೀಯ ಔಷಧಜ್ಞಾನದ ಪಿತಾ ಮಹ’ ಎಂದು ಹೆಸರಾ ಗಿದ್ದರು. ನಿವೃತ್ತಿಯ ನಂತರ ‘ಕಲಕತ್ತ ಸ್ಕೂಲ್ ಆಫ್ ಟ್ರಾಪಿಕಲ್ ಮೆಡಿಸಿನ್’ ಸಂಸ್ಥೆಯಲ್ಲಿ ಔಷಧ ವಿಜ್ಞಾನದ ಪ್ರಾಚಾರ್ಯರಾಗಿ ಕೆಲಸಕ್ಕೆ ಸೇರಿದರು. ಚೋಪ್ರ ರವರು ಭಾರತೀಯ ಮೂಲಿಕೆಗಳು ಹಾಗೂ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಲ್ಲಿ ಪ್ರಚಲಿತದಲ್ಲಿದ್ದ ಔಷಧಗಳ ಬಗ್ಗೆ ಆಧುನಿಕ ವಿಜ್ಞಾನದ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿದರು.
ಸರ್ಪಗಂಧಿಯಲ್ಲಿದ್ದ ಪಟುರಾಸಾಯನಿಕಗಳ ವಿಶ್ಲೇಷಣೆಯನ್ನು ಮಾಡಿ, ಅದರಲ್ಲಿರುವ ಆಲ್ಕಲಾಯ್ಡುಗಳು ರಕ್ತದ ಏರೊತ್ತಡವನ್ನು ನಿಯಂತ್ರಿಸುತ್ತವೆ ಎನ್ನುವುದನ್ನು ತೋರಿಸಿ, 1933ರಲ್ಲಿ ಪ್ರಬಂಧವನ್ನು ಪ್ರಕಟಿಸಿದರು. ಅಂದಿನ ದಿನಗಳಲ್ಲಿ ನಾಟಿವೈದ್ಯರು ‘ಪಾಗಲೋಂ ಕಿ ದವಾ’ ಎಂಬ ಹೆಸರಿನಲ್ಲಿ ಸರ್ಪಗಂಽ ಬೇರಿನ ಪುಡಿಯನ್ನು ನೀಡುತ್ತಿದ್ದರು. ಇದು ಕೆಲವು ಮನೋರೋಗಿಗಳಲ್ಲಿ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತಿತ್ತು. ಅವರ ಉದ್ರಿಕ್ತ ನಡವಳಿಕೆಯೆಲ್ಲ ಮಾಯವಾಗಿ ಶಾಂತರಾಗುತ್ತಿದ್ದರು.(ಸರ್ಪಗಂಧಿಗೆ ‘ಚಂದ್ರಿಕ’ ಎಂಬ ಹೆಸರು ಬರಲು ಈ ಶಾಮಕ ಗುಣವೇ ಕಾರಣ. ಚಂದ್ರನಿಗೂ ಮನಸ್ಸಿಗೂ ಸಂಬಂಧವಿದೆಯೆನ್ನುವುದು ಭಾರತೀಯ ನಂಬಿಕೆ) ಹಾಗಾಗಿ ಚೋಪ್ರ ತಂಡದವರು ‘ಶಾಮಕ’ಗೆ ಕಾರಣವಾಗುವ ಘಟಕವನ್ನು ಪ್ರತ್ಯೇಕಿಸಲು ಪ್ರಯತ್ನಿಸಿದರು. ವಿಶ್ಲೇಷಣೆಯಲ್ಲಿ ‘ಓಲಿಯೊ ರೆಸಿನ್’ ಎನ್ನುವ ಭಾಗವು ನಿರುಪಯುಕ್ತ ಎಂದು ಭಾವಿಸಿ ಅಲಕ್ಷ್ಯವನ್ನು ತೋರಿದರು. ಆದರೆ ಶಾಮಕ ಗುಣಕ್ಕೆ ಕಾರಣವಾಗಿದ್ದ ರಾಸಾಯನಿಕ ಘಟಕವು ಆ ನಿರುಪಯುಕ್ತ ಭಾಗದಲ್ಲಿಯೇ ಇತ್ತು! ಭಾರತೀಯ ವೈದ್ಯ ಪದ್ಮಭೂಷಣ ರುಸ್ತಮ್ ಜಾಲ್ ವಕೀಲ್ (1911-1974) ಸರ್ಪಗಂಧಿಯ ವೈಜ್ಞಾನಿಕ ಉಪಯೋಗವನ್ನು ಪಾಶ್ಚಾತ್ಯ ವೈದ್ಯಕೀಯಕ್ಕೆ ಪರಿಚಯ ಮಾಡಿಕೊಟ್ಟ ಮೊದಲ ವೈದ್ಯ.
1939-49ರವರೆಗೆ, ಹತ್ತು ವರ್ಷಗಳ ಕಾಲ 50 ರೋಗಿಗಳ ರಕ್ತದ ಏರೊತ್ತಡವನ್ನು ಸರ್ಪಗಂಧಿಬೇರನ್ನು ನೀಡಿ ನಿಯಂತ್ರಿಸಿದ. ಈ ಬಗ್ಗೆ ಒಂದು ಪ್ರಬಂಧವನ್ನು 1949ರಲ್ಲಿ ಬ್ರಿಟಿಶ್ ಮೆಡಿಕಲ್ ಜರ್ನಲ್ ನಿಯತಕಾಲಿಕದಲ್ಲಿ ಪ್ರಕಟಿಸಿದ. ವಕೀಲ್ ನಡೆಸಿದ  ಫಲಿತಾಂಶವು ಅದ್ಭುತವಾಗಿತ್ತು. ನಂತರ ಇದೇ ವಿಷಯವನ್ನು ಕುರಿತು೧೦೦ಕ್ಕೂ ಹೆಚ್ಚು ಪ್ರಬಂಧಗಳು ಪ್ರಕಟವಾದವು.
ಸರ್ಪಗಂಧಿಯಲ್ಲಿ ಆಲ್ಕೋಹಾಲ್, ಶುಗರ್ಸ್, ಗ್ಲೈಕೋಸೈಡ್ಸ್, ಫ್ಯಾಟಿಆಸಿಡ್ಸ್, ಫ್ಲೇವನಾಯ್ಡ್ಸ್,ಫೈಟೋಸ್ಟೀರಾಲ್ಸ್, ಓಲಿಯೊರೆಸಿನ್ಸ್, ಸ್ಟೀರಾಯ್ಡ್ಸ್, ಟ್ಯಾನಿನ್ಸ್ ಮತ್ತು ಆಲ್ಕಲಾಯ್ಡ್ಸ್ ಎಂಬ ರಾಸಾಯನಿಕಗಳಿವೆ. ಸರ್ಪಗಂಽಯ ಔಷಧಿಯ ಗುಣಗಳಿಗೆ ಆಲ್ಕಲಾಯ್ಡುಗಳು ಕಾರಣವಾಗಿದ್ದವು. ಸಸ್ಯಗಳು ತಮ್ಮ ಸಹಜ ಬೆಳವಣಿಗೆಗೆ ಉತ್ಪಾದಿಸುವ ರಾಸಾಯನಿಕಗಳನ್ನು ಚಯಾಪಚಯ ಪ್ರಾಥುಕ ಉತ್ಪನ್ನಗಳು (ಪ್ರೈಮರಿ ಮೆಟಬೊಲೈಟ್ಸ್) ಎನ್ನುವರು. ಹಾಗೆಯೇ ಸಸ್ಯಗಳ ಬೆಳವಣಿಗೆಗೆ ಅಗತ್ಯವಿಲ್ಲದ ಕೆಲವು ರಾಸಾಯನಿಕಗಳನ್ನು ಚಯಾಪಚಯ ದ್ವಿತೀಯಕ ಉತ್ಪನ್ನಗಳು (ಸೆಕಂಡರಿ ಮೆಟಬೊಲೈಟ್ಸ್) ಎನ್ನುವರು. ಈ ವರ್ಗದ ರಾಸಾಯನಿಕಗಳು ಸಸ್ಯಗಳಿಗೆ ಬ್ಯಾಕ್ಟೀರಿಯ, ಶಿಲೀಂಧ್ರ ಮುಂತಾದ ಸೂಕ್ಷ್ಮಜೀವಿಗಳಿಂದ ರಕ್ಷಿಸುತ್ತವೆ.
ಸಸ್ಯಾಹಾರಿ ಪ್ರಾಣಿಗಳು ಗಿಡಗಳನ್ನು ತಿನ್ನದಂತೆ ನೋಡಿಕೊಳ್ಳುತ್ತವೆ. ಈ ರಾಸಾಯನಿಕಗಳು ಪ್ರಾಣಿಗಳಿಗೆ ರುಚಿಸುವುದಿಲ್ಲ, ಇಲ್ಲವೇ ವಿಷದ ಪರಿಣಾಮ ಬೀರಬಹುದು. ಇಂತಹ ರಾಸಾಯನಿಕಗಳಲ್ಲಿ ಆಲ್ಕಲಾಯ್ಡ್ಸ್ ಮನುಷ್ಯನು ಈ ಆಲ್ಕಲಾಯ್ಡುಗಳ ಗುಣಲಕ್ಷಣಗಳನ್ನು ಅಧ್ಯಯನ ಮಾಡಿ, ಅವುಗಳನ್ನು ಪ್ರತ್ಯೇಕಿಸಿ ಔಷಧಗಳನ್ನಾಗಿ ಬಳಸುತ್ತಿರುವುದು ಅವನ ಬುದ್ಧಿವಂತಿಕೆಗೆ ಸಾಕ್ಷಿಯಾಗಿದೆ. ಮಾರ್ಫಿನ್, ಸ್ಟ್ರಿಕ್ನಿನ್, ಕ್ವಿನೈನ್, ಎಫಿಡ್ರಿನ್, ನಿಕೋಟಿನ್, ಕೆಫೀನ್ ಮುಂತಾದವು ಆಲ್ಕಲಾಯ್ಡುಗಳಿಗೆ ಉತ್ತಮ ಉದಾಹರಣೆಗಳು.
ಸರ್ಪಗಂಧಿಯಲ್ಲಿ ಸುಮಾರು 50 ಆಲ್ಕಲಾಯ್ಡ್‌ಗಳು ಇವೆ. ಸಸ್ಯದ ಎಲ್ಲ ಭಾಗಗಳಲ್ಲಿ ಆಲ್ಕಲಾಯ್ಡುಗಳು ಇವೆಯಾದರೂ, ಅತ್ಯಂತ ಹೆಚ್ಚಿನ ಪ್ರಮಾಣದ ಆಲ್ಕಲಾಯ್ಡುಗಳು ಬೇರಿನ ತೊಗಟೆಯಲ್ಲಿದ್ದವು. ಆಲ್ಕಲಾಯ್ಡುಗಳಲ್ಲಿ ಅಜಮಾಲಿನ್, ಅಜಮಾಲಿನೈನ್, ಅಜಮಾಲಿ ಸಿನ್, ರೆಸೆರ್ಪಿನ್, ರೆಸೆರ್ಪಿನೈನ್, ಸೆರ್ಪೆಂಟೈನ್, ಸರ್ಪೆಂಟಿನೈನ್, ಯೋಂಬಿನ್, ಯೋಂಬಿನೈನ್ ಮುಖ್ಯವಾದವು. ಇವುಗಳಲ್ಲಿ ರೆಸೆರ್ಪಿನ್ ಅತ್ಯಂತ ಪ್ರಧಾನ ಹಾಗೂ ಅತ್ಯಂತ ಪಟು ಘಟಕ ವಾಗಿತ್ತು. ಇದುವೇ ರಕ್ತದ ಏರೊತ್ತಡವನ್ನು ನಿಯಂತ್ರಣಕ್ಕೆ ತರುವ ರಾಸಾ ಯನಿಕವಾಗಿತ್ತು.
ರಕ್ತದ ಒತ್ತಡವನ್ನು ಎರಡು ಅಂಕಿಗಳಿಂದ ಸೂಚಿಸುವುದು ವಾಡಿಕೆ. ಅಂಶದಲ್ಲಿ ಬರೆಯುವ ಸಂಖ್ಯೆಯು ರಕ್ತದ ಸಂಕುಚನದೊತ್ತಡವನ್ನು (ಸಿಸ್ಟೋಲಿಕ್ ಪ್ರೆಶರ್) ತೋರಿಸಿದರೆ, ಛೇದದಲ್ಲಿ ಬರೆಯುವ ಸಂಖ್ಯೆಯು ರಕ್ತದ ಅಂಕುಚನದೊತ್ತಡವನ್ನು (ಡಯಾಸ್ಟೋಲಿಕ್ ಪ್ರೆಶರ್) ಸೂಚಿಸುತ್ತದೆ. ವಕೀಲ್ ಅವರ ಪ್ರಯೋಗದಲ್ಲಿ ಶೇ.85 ಜನರಲ್ಲಿ ಸಂಕುಚನದೊತ್ತಡವು ಹಾಗೂ ಶೇ.80 ಜನರಲ್ಲಿ ಅಂಕುಚನ ದೊತ್ತಡವು ಕಡಿಮೆಯಾಗಿತ್ತು. ವಕೀಲ್ ಅವರ ಸಂಶೋಧನೆಯಿಂದ ಪ್ರಭಾವಿತರಾದ ಶೇ.90 ಭಾರತೀಯ ವೈದ್ಯರು (60000) ಸರ್ಪಗಂಽಯನ್ನು ಬಳಸಲಾರಂಭಿಸಿದರು. ಭಾರತದಿಂದ ಒಣ ಸರ್ಪಗಂಧಿಯ ಗುಳಿಗೆಗಳು 17ದೇಶಗಳಿಗೆ ರಫ್ತಾಗಲಾರಂಭಿಸಿದರು.
ರೆಸೆರ್ಪಿನ್‌ಯುಕ್ತ ಗುಳಿಗೆಯನ್ನು‘ಸೆರ್ಪಾಸಿಲ್’ ಹೆಸರಿನಲ್ಲಿ ಮಾರಾಟ ಮಾಡಿದರು. ಔಷಧ ಸೇವನೆಯನ್ನು ಆರಂಭಿಸಿದ 3-6 ದಿನಗಳ ನಂತರ ರಕ್ತದೊತ್ತಡವನ್ನು ಇಳಿಯುತ್ತಿತ್ತು. ಔಷಧ ಸೇವನೆಯನ್ನು ನಿಲ್ಲಿಸಿದ ನಂತರ 7-21 ದಿನಗಳಲ್ಲಿ ಪ್ರಭಾವವು ಇಳಿಯುತ್ತಿತ್ತು. ಇಂದಿನ ದಿನಗಳಲ್ಲಿ, ರಕ್ತದ ಏರೊತ್ತಡವನ್ನು ನಿಯಂತ್ರಿ ಸಲು ಶುದ್ಧ ರೆಸೆರ್ಪಿನ್ ಗುಳಿಗೆಗಳನ್ನು ಕೊಡುವುದು ಅಪರೂಪ. ರೆಸೆರ್ಪಿನ್ ಜತೆಯಲ್ಲಿ ಹೈಡ್ರೋಕ್ಲೋರ್‌ಥಯಾಜ಼ೈಡ್ ಎನ್ನುವ ಔಷಧವನ್ನು ಸೇರಿಸಿ ನೀಡುವುದು ಹೆಚ್ಚು. ಇದು ವಿಶ್ವ ರಕ್ತದೊತ್ತಡ ನಿಯಂತ್ರಕ ಔಷಧಗಳಲ್ಲಿ ೧೭ನೆಯ ಸ್ಥಾನದಲ್ಲಿದೆ.
ಸರ್ಪಗಂಧಿಯು ಮನೋರೋಗಿಗಳ ಉದ್ರಿಕ್ತ ಸ್ಥಿತಿಯನ್ನು ಶಮನಗೊಳಿಸುತ್ತಿದ್ದಾದರೂ, ಅದರ ಪಟು ರಾಸಾಯನಿಕವನ್ನು ಶುದ್ಧೀಕರಿಸಿ, ಗುಳಿಗೆಯ ರೂಪದಲ್ಲಿ ಬಿಡುಗಡೆ ಮಾಡುವ ಹೊತ್ತಿಗೆ, ಸರ್ಪಗಂಧಿಗಿಂತಲೂ ಉತ್ತಮವಾದ ಕ್ಲೋರ್‌ಪ್ರೋಮಾಜ಼ಿನ್ ಔಷಧವು ಆಗಲೇ ಲಭ್ಯವಿತ್ತು. ಹಾಗಾಗಿ ಸರ್ಪಗಂಧಿಯನ್ನು ರಕ್ತದ ಏರೊತ್ತಡವನ್ನು ಮಾತ್ರ ನಿಯಂತ್ರಿಸಲು ಇಂದು ಬಳಸುತ್ತಿರುವರು. ಆಟಿಸಂ, ಮೈಗ್ರೇನ್ ತಲೆನೋವು, ಹೃದ್ರೋಗ (ಕರೋನರಿ ಆರ್ಟರಿ ಡಿಸೀಸ್) ಸೋರಿ ಯಾಸಿಸ್ ಮುಂತಾದ ರೋಗಗಳಲ್ಲಿ ಸರ್ಪಗಂಧಿಯ ಘಟಕಗಳನ್ನು ಬಳಸುವ ಅಧ್ಯಯನಗಳು ನಡೆಯುತ್ತಿವೆ.
1930ರ ದಶಕದಲ್ಲಿ ಸ್ಕೀಜ಼ೋಫ್ರೀನಿಯ, ಬೈಪೋಲಾರ್ ಡಿಸಾರ್ಡರ್, ಅಪಸ್ಮಾರ, ಸೆಳವು, ನಿದ್ರಾಹೀನತೆ ಮುಂತಾದ ಮಾನಸಿಕ ಸಮಸ್ಯೆಗಳ ಚಿಕಿತ್ಸೆಯಲ್ಲಿ ಸರ್ಪಗಂಧಿಬೇರಿನ ಪುಡಿಯನ್ನು ಬಳಸುತ್ತಿದ್ದರು. ಆತಂಕವನ್ನು ನಿಯಂತ್ರಿಸಲು ಇಡೀ ಬೇರಿನ ಪುಡಿಯನ್ನು ಹಾಗೂ ರೆಸೆರ್ಪಿನ್‌ನನ್ನು ಪ್ರತ್ಯೇಕವಾಗಿ ನೀಡಿ ಪರೀಕ್ಷಿಸಿದಾಗ ಅವು ಏಕರೂಪದ ಪರಿನಾಮವನ್ನು ತೋರಿದವು. ಮೈಗ್ರೇನ್ ತಲೆ ನೋವನ್ನು ನಿಯಂತ್ರಿಸಲು ಉಪಯುಕ್ತವೆನ್ನಲಾಗಿದೆ.