ಮಕ್ಕಳು ವಿವೇಕನಂತಾಗಲು ಆ ದಿನ ಪೂರಕವೇ ?
ತನ್ನಿಮಿತ್ತ
ನಾಗಶ್ರೀ ತ್ಯಾಗರಾಜ್ ಎನ್‌.
ಈ ದಿನಕ್ಕೆ ಆ ದಿನ ಬೇಕೇ ಬೇಕು ತಾನೆ? ಮನೆಯ ಮಕ್ಕಳು ಸ್ವಾಮಿ ವಿವೇಕಾನಂದರಂತಾಗಲು, ಮೊದಲು ನಾವು ಅವರ ತಂದೆ-ತಾಯಿ, ಅಜ್ಜ-ಅಜ್ಜಿಯ ರಂತಾಗೋಣ. ಆಗ ಮಾತ್ರ ಸ್ವಾಮಿ ವಿವೇಕಾನಂದರುಗಳು ಮನೆ-ಮನದಲ್ಲಿ ಮೂಡಲು ಸಾಧ್ಯ. ಹೌದಲ್ಲವೇ?
‘ಮೂರು ವರ್ಷದಲ್ಲಿ ಕಲಿತದ್ದು, ನೂರು ವರ್ಷಕ್ಕೆ ಬಾಳಿಸಿತು’ ಎಂಬ ಮಾತೊಂದಿದೆ. ಬಾಲ್ಯದಲ್ಲಿ ಕಲಿತ ಸಂಸ್ಕಾರವೇ ನಮ್ಮ ಬದುಕಿನ ಮುಂದಿನ ದಿಕ್ಕನ್ನೂ, ಮಾರ್ಗವನ್ನೂ ಹಾಗೂ ನಡವಳಿಕೆಗಳನ್ನೂ ಬಿಂಬಿಸುತ್ತದೆಂಬುದು ಇದರ ಅರ್ಥ. ಆ ಮಾರ್ಗದಲ್ಲಿ ಸಾಗಿದ ಒಂದು ತುಂಟ ಹಾಗೂ ಚೇಷ್ಟಿತ ಮಗು ಮುಂದೆವಿಶ್ವವಿಜೇತನೂ ಆಗಬಲ್ಲುದು. ಇದಕ್ಕೆ ಸಾಕ್ಷಿಯೇ ನಮ್ಮ ಸ್ವಾಮಿ ವಿವೇಕಾನಂದ. ಪರಿವ್ರಾಜಕನಾಗಿದ್ದರೂ, ಪರಮ ತ್ಯಾಗ ಜೀವನ ನಡೆಸುತ್ತಿದ್ದರೂ, ನಿಸ್ವಾರ್ಥಭಾವನೆಯಿಂದ ಕಾರ್ಯನಿರ್ವಹಿಸುತ್ತಿದ್ದರೂ ಅವರಲ್ಲಿದ್ದ ಕ್ಷಾತ್ರ ತೇಜಸ್ಸು, ವೀರತನ, ದಿಟ್ಟತನ ಪ್ರತೀ ಭಾರತೀಯನನ್ನೂ ಬಡಿದೆಚ್ಚರಿಸಿದೆ ಹಾಗೂ ಇನ್ನೂ ಆ ಬಡಿದೆಚ್ಚರಿಸುವ ಕಾರ್ಯ ಸಾಗಿಯೇ ಇದೆ.
ಹಾಗಾಗಿಯೇ ಸ್ವಾಮಿ ಪುರುಷೋತ್ತಮಾನಂದರು ‘ವೀರಸಂನ್ಯಾಸಿ ವಿವೇಕಾನಂದ’ ಎಂಬ ಪುಸ್ತಕ ಬರೆದದ್ದು. ಇಂತಹ ವೀರತನ ಅದೆಲ್ಲಿಂದ ಜನ್ಯವಾಯಿತು ಎಂಬುದಕ್ಕೆ ಅದೇ ಪುಸ್ತಕದಲ್ಲಿ ನೀಡಿರುವ ಒಂದು ಸಂಗತಿ ಯನ್ನು ನಾವು ತಿಳಿಯಬೇಕು. ಸ್ವಾಮಿ ವಿವೇಕಾನಂದರ ಪೂರ್ವಾಶ್ರಮ, ದತ್ತ ಕುಟುಂಬ. ಪೂರ್ವಾಶ್ರಮದ ಹೆಸರು ನರೇಂದ್ರ. ನರೇಂದ್ರನು ಹೇಗೆ ವಿಶ್ವನಾಥ ದತ್ತ ಹಾಗೂ ಭುವನೇಶ್ವರಿ ದೇವಿಗೆ ಏಕಮಾತ್ರ ಪುತ್ರನೋ! ಹಾಗೆಯೇ ಈ ವಿಶ್ವನಾಥ ದತ್ತನೂ ದುರ್ಗಾಪ್ರಸಾದ ಹಾಗೂ ಶ್ಯಾಮಸುಂದರಿಯ ಏಕ ಮಾತ್ರ ಪುತ್ರ. ನರೇಂದ್ರನ ತಾತನ ಹೆಸರು ದುರ್ಗಾಪ್ರಸಾದ.
ಹಾಗಾಗಿಯೇ ಏನೋ? ಈ ನರೇಂದ್ರ, ದುರ್ಗೆಯ ಪ್ರತಿರೂಪವಾದ ಕಾಳಿಯನ್ನು ತನ್ನ ಆರಾಧ್ಯದೈವವಾಗಿ ಪೂಜಿಸುತ್ತಿದ್ದ ಪರಮ ಪೂಜ್ಯ ಶ್ರೀರಾಮಕೃಷ್ಣ ಪರಮಹಂಸರ ಸಂಪ್ರೀತಿಯ ಹುಡುಗನಾಗಿದ್ದು. ಅದೇನೆ ಇರಲಿ! ಈ ದುರ್ಗಾಪ್ರಸಾದರದ್ದು ಕೂಡ ಸಂನ್ಯಾಸದ ಮನೋಭಾವವೇ. ಪೋಷಕರ ಒತ್ತಾಯದ ಮೇರೆಗೆ ಇಪ್ಪತ್ತೈದು ವರುಷದವರೆಗೆ ಸಂಸಾರದಲ್ಲಿದ್ದವರು, ವಿಶ್ವನಾಥನನ್ನು ಗಂಡುಮಗುವಾಗಿ ಪಡೆದರು. ಆ ವೇಳೆಗಾಗಲೇ ತೀವ್ರವಾಗಿದ್ದ ವೈರಾಗ್ಯದ ಮನೋಭಾವ, ಅವರನ್ನು ಸಂನ್ಯಾಸತ್ವಕ್ಕೆ ಪ್ರೇರೇಪಿಸಿತು.
ಹಾಗಾಗಿ ಅವರು ಸಂಸಾರ ತೊರೆದು, ಕಾಶಿಗೆ ತೆರಳಿ, ಸಂನ್ಯಾಸತ್ವ ಸ್ವೀಕರಿಸಿ ಅಲ್ಲಿಯೇ ನೆಲೆ ನಿಂತರು. ಪತ್ನಿ ಶ್ಯಾಮಸುಂದರಿ, ಮಗುವಿನ ಪಾಲನೆಪೋಷಣೆಯಲ್ಲಿ ತೊಡಗಿಕೊಂಡಳು. ಈಕೆ ಸ್ವಭಾವತಃ ಧೈರ್ಯಶಾಲಿನಿ, ದೈವಭಕ್ತೆ. ಎಷ್ಟೇ ಆದರೂ ಒಬ್ಬ ಪುರುಷ ಎಲ್ಲವನ್ನೂ ತೊರೆದು ವೈರಾಗ್ಯಕ್ಕೆ ಸಾಗುವಷ್ಟು ಸುಲಭದ ಮಾರ್ಗ ಹೆಣ್ಣಿಗೆ ದೊರೆತಿಲ್ಲ. ಅದು ತನಗೆ ತಾನೇ ಹಾಕಿಕೊಂಡ ಪರಿಧಿಯಲ್ಲಿ ಬದುಕುತ್ತಿರುವವರು ಅವಳು. ಕವಯಿತ್ರಿ ಶಾಂತಾ ಜಯಾನಂದ್ ಅವರ ಕವಿತೆಯೊಂದು ಇಲ್ಲಿ ನೆನಪಾಗುತ್ತದೆ.
ನಟ್ಟಿರುಳ ರಾತ್ರಿಯಲಿ/ ಬದುಕು ಬೇಸರವೆನಿಸಿ/ ನೆಟ್ಟಗೆ ನಡೆದು ಹೋದೆ ನೀನು/ ಜ್ಞಾನೋದಯವನ್ನು ಅರಸುತ್ತಾ ನಾನು ನಿನ್ನ ಮಡದಿ/ ನಿನ್ನಂತೆ ನಡು ರಾತ್ರಿಯಲಿ/ ಬದುಕು ಬೇಸರವೆನಿಸಿದಾಗ/ ಮನೆಯ ಬಿಟ್ಟು ತೆರಳಬಹುದೇ? ನೀನೆಂದೆ ಸ್ವತಂತ್ರ ಸಂನ್ಯಾಸಿ/ ನಾನು ಅರಮನೆಯೆಂಬ/ ಸೆರೆಮನೆಯಲ್ಲಿ ಬಂಧಿ/ ನೀನು ಬುದ್ಧ ಲೋಕಮಾನ್ಯ/ ನಾನೊಬ್ಬಳು ತಾಯಿ ಅಷ್ಟೇ! ಇಷ್ಟಿದ್ದರೂ ಎಲ್ಲವನ್ನೂ ತನ್ನೊಡಲಿನಲ್ಲಿ ಇರಿಸಿಕೊಂಡೇ ಭಗವದ್ಗೀತೆಯಲ್ಲಿ ತಿಳಿಸಿದ ಸತ್ಯದ ಕರ್ಮಸಂನ್ಯಾಸ ಯೋಗದಲ್ಲಿ ಸಾಗುವ ಹಾದಿ ಆ ಹೆಣ್ಣಿಗೆ ತಿಳಿದಿದೆ. ಹಾಗಾಗಿಯೇ ಹೆಣ್ಣನ್ನು ಕ್ಷಮಯಾಧರಿತ್ರಿ ಎಂದಿರುವುದು. ನರೇಂದ್ರನ ಅಜ್ಜಿ  ಶ್ಯಾಮ ಸುಂದರಿ ಯದ್ದು ಅಂಥದ್ದೇ ಬದುಕು.
ನರೇಂದ್ರನ ತಂದೆ ವಿಶ್ವನಾಥ ಆಗಿನ್ನೂ ಚಿಕ್ಕ ಹುಡುಗ. ಶ್ಯಾಮಸುಂದರಿ ವಿಶ್ವನಾಥನೆಂಬ ಪುಟ್ಟ ಮಗುವಿನೊಂದಿಗೆ ಕಾಶೀಯಾತ್ರೆ ಹೊರಟಳು. ಆಗಿನ್ನೂ ರೈಲುದಾರಿ ಆಗಿರಲಿಲ್ಲ. ಆದುದರಿಂದ ಇವರ ಯಾತ್ರೆ ದೋಣಿಯಲ್ಲಿ ಸಾಗುತ್ತಿತ್ತು. ಕೋಲ್ಕತಾದಿಂದ ಕಾಶಿಗೆ ಸುಮಾರು ಐನೂರು ಮೈಲಿ. ಗಂಗೆಯ ಪವಿತ್ರ ನದಿಯ ಮೇಲೆ ದೋಣಿ ತೇಲುತ್ತಿತ್ತು. ಒಂದು ದಿನ ಬೆಳಗ್ಗೆ ಮಗು ವಿಶ್ವನಾಥನು ದೋಣಿಯ ಅಂಚಿನಲ್ಲಿ ಆಟವಾಡುತ್ತಿದ್ದವನು, ನದಿಯೊಳಗೆ ಬಿದ್ದು ಬಿಟ್ಟ! ತಾಯಿಯ ಮನಸ್ಸು, ಅದು ಎಂದಿದ್ದರೂ ಮಗುವಿನ ರಕ್ಷಣೆಗೆ ತನ್ನ ಪ್ರಾಣವನ್ನೂ ಲೆಕ್ಕಿಸುವುದಿಲ್ಲ. ಅಲ್ಲಿ – ಇಲ್ಲಿ ನೋಡದೇ, ತತತ್‌ಕ್ಷಣವೇ ತಾಯಿ ಶ್ಯಾಮಸುಂದರಿ ನದಿಯೊಳಗೆ ಹಾರಿಯೇ ಇಟ್ಟಳು.
ಈಜು ಬರುತ್ತಿತೇ? ಎಂದರೆ ’ಇಲ್ಲ’ ಎಂಬುದೇ ಉತ್ತರ. ಮಗುವಿನ ರಕ್ಷಣೆಯೊಂದೇ ಅವಳ ಗುರಿಯಾಗಿದ್ದರಿಂದ, ಅವಳಿಗೆ ಬೇರೇನೂ ತೋಚಲಿಲ್ಲ. ಆಕೆಯ ದೈವಭಕ್ತಿಯ ಫಲವೇ ಎಂಬಂತೆ, ಸಕಾಲದಲ್ಲಿ ನೀರಿಗೆ ಧುಮುಕಿದ್ದರಿಂದ ಮಗುವಿನ ಕೈ ಆಕೆಗೆ ಸಿಕ್ಕಿತು. ಅದನ್ನು ಬಲವಾಗಿ ಹಿಡಿದುಕೊಂಡಳು. ಮಗುವೇನೋ ತನ್ನ ಕೈಗೆ ಸಿಕ್ಕಿದೆ! ಆದರೆ ದೋಣಿ ಸೇರುವುದು ಹೇಗೆ? ದೋಣಿಯೋ ಮುಂದೆ ಮುಂದೆ ಸಾಗುತ್ತಿದೆ. ಆದರೆ ಬುದ್ಧಿವಂತ ಹಾಗೂ ಪರಾಕ್ರಮಿ ಅಂಬಿಗರು ತಾಯಿ- ಮಗು ಇಬ್ಬರನ್ನೂ ರಕ್ಷಿಸಿ ಮೇಲೆ ತಂದರು.
ಇದೊಂದು ಪುಟ್ಟ ಘಟನೆ ಎನಿಸಿದರೂ, ತಾಯಿಯ ಧೈರ್ಯವನ್ನು ನಾವು ನೆನೆಯಲೇಬೇಕು. ಈಜು ಬಾರದಿದ್ದರೂ, ತಾನು ನೀರಿಗೆ ಧುಮುಕಿ ಮಗುವಿನಕೈಯನ್ನು ಬಲವಾಗಿ ಹಿಡಿದುಕೊಂಡದ್ದು ತಾಯಿಯ ಮನೋಧರ್ಮವನ್ನು ಸೂಚಿಸುತ್ತದೆ. ಅಂದು ಆಕೆ ಆ ಧೈರ್ಯ ಮಾಡದೇ ಹೋಗಿದ್ದರೆ, ವಿಶ್ವನಾಥನ ಗುರುತಾಗಲಿ, ಅವನಿಂದ ಮೂಡಿದ ನರೆಂದ್ರನ ಮಹತ್ತರ ಕಾರ್ಯವಾಗಲೀ, ನಮ್ಮ ಮುಂದೆ ಹೀಗೆ ಚೈತನ್ಯಭರಿತವಾಗಿ ನಿಲ್ಲುತ್ತಿರಲಿಲ್ಲ. ಶ್ಯಾಮಸುಂದರಿಯುಮಗು ವಿಶ್ವನಾಥನನ್ನು ಅದೆಷ್ಟು ಬಲವಾಗಿ ಹಿಡಿದುಕೊಂಡಿದ್ದಳೆಂದರೆ, ಆ ಹಿಡಿತದಿಂದ ಮಗುವಿನ ಮೈ ಮೇಲೆ ಉಂಟಾದ ಗುರುತು ಹಲವಾರು ವರ್ಷಗಳ ಕಾಲಇದ್ದವು. ಆದರೆ ಮನದ ಮೇಲೆ ಉಂಟಾದ ವಿಶ್ವಾಸದ ಗುರುತು ಶಾಶ್ವತವಾಗಿ ಉಳಿದುಕೊಂಡಿತು.
ವಿಶ್ವನಾಥನು ಹತ್ತು ವರ್ಷದವನಿದ್ದಾಗ, ತಾಯಿ ಸಾಯುಜ್ಯ ಹೊಂದಿದಳು. ಹೀಗೆ ತಂದೆ ಸಂನ್ಯಾಸಿಯಾದ, ತಾಯಿ ಶಿವನ ಪಾದ. ಮಗ ತಬ್ಬಲಿಯಾದ. ಮನೆಯಲ್ಲಿ ದೊಡಪ್ಪನ ಸಂಸಾರವಿದ್ದರೂ, ಈತನ ಮೇಲೆ ಸದಾ ನಿರ್ಲಕ್ಷ್ಯ ಭಾವ. ವಿದ್ಯಾಭ್ಯಾಸದಲ್ಲಿ ಮಾತ್ರ ಸದಾ ಮುಂದು, ಅತ್ಯಂತ ಪ್ರತಿಭಾವಂತ ಹುಡುಗನಾಗಿ ಬೆಳೆದ. ಹದಿನಾರರ ತರುಣನಾಗಿದ್ದಾಗ, ಹತ್ತು ವರ್ಷದ ಭುವನೇಶ್ವರಿ ದೇವಿಯೊಂದಿಗೆ ವಿವಾಹವಾಯಿತು. ನಂತರದಲ್ಲಿ ಕಾಶಿಯ ವೀರೇಶ್ವರನ ವರಪ್ರಸಾದವಾಗಿ ದೊರೆತ ಕಂದನೇ ನರೇಂದ್ರ, ವಿಶ್ವ ವಿಜೇತ ಸ್ವಾಮಿ ವಿವೇಕಾನಂದ. ಆದರೆ ಮನೆತನದ ಸಂಸ್ಕಾರಗಳು ಹೇಗೆ ಒಬ್ಬ ಮನುಷ್ಯನನ್ನು ಸಂಪೂರ್ಣ ಮಾಡಬಲ್ಲದು ಎಂಬುದಕ್ಕೆ ಇಲ್ಲಿ ನೀಡಿದ ಸಂಗತಿಯೇ ಉದಾಹರಣೆ.
ಅವಿಭಕ್ತ ಕುಟುಂಬದಲ್ಲಿ ವಿಶ್ವನಾಥ ಬೆಳೆದಿದ್ದರೂ, ತನಗೆ ನಡೆಸಿದ್ದ ತಾರತಮ್ಯವನ್ನು ಆತ ಕ್ಷಮಿಸಿದ, ಆದರೆ ಮರೆಯಲಿಲ್ಲ. ಊಟ- ತಿಂಡಿ, ಹಣ-ಕಾಸು, ಆಸ್ತಿ ಹೀಗೆ ಎಲ್ಲದರಲ್ಲೂ ತಾರತಮ್ಯ ತಾಂಡವವಾಡಿತ್ತು. ಕಾರಣ ಈತ ತಬ್ಬಲಿಯೆಂದು. ಆದರೂ ತಾನು ಸ್ವಂತವಾಗಿ ವಕೀಲಿ ವೃತ್ತಿಯನ್ನು ಕೈಗೊಂಡು ಊರಿನಲ್ಲಿ ಅನುಕೂಲಸ್ಥನಾಗಿ ಬಾಳಿದ. ಬೆಳೆಯುವ ಮಕ್ಕಳಿಗೆ ಯೋಗ್ಯ ರೀತಿಯಲ್ಲಿ ಚೆನ್ನಾಗಿ ತಿನ್ನಿಸಬೇಕು, ಇಲ್ಲದಿದ್ದರೆ ಮಕ್ಕಳ ಬುದ್ಧಿ ಶಕ್ತಿ ವೃದ್ಧಿಯಾಗುವುದಿಲ್ಲ ಎಂಬುದು ವಿಶ್ವನಾಥನ ನಂಬಿಕೆ. ಆದ್ದರಿಂದ ನರೇಂದ್ರನಿಗೆ ಒಳ್ಳೆಯ ಪೌಷ್ಟಿಕ ಆಹಾರ ನೀಡುವಲ್ಲಿ ಸ್ವಲ್ಪವೂ ಹಿಂದೆ ಮುಂದೆ ನೋಡಲಿಲ್ಲ.
ಇಂದಿನ ಮಕ್ಕಳ ಊಟದ ಕಡೆಗೆ ನಾವು ಯೋಚಿಸಿದರೆ ತಿಳಿಯುತ್ತದೆ. ಮಕ್ಕಳಿಗಾಗಿ ಅಪಾರ ಆಸ್ತಿ ಮಾಡಿಟ್ಟು ಹೋಗುವುದು ಅಗತ್ಯವೂ ಅಲ್ಲ, ಯೋಗ್ಯವೂ ಅಲ್ಲ;ಬದಲಾಗಿ ಅವರಿಗೆ ಶ್ರೇಷ್ಠ ಜೀವನಕ್ರಮವನ್ನು ಕಲಿಸಿಕೊಡಬೇಕು. ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು. ಅವರಲ್ಲಿ ಆರೋಗ್ಯಶಾಲಿಯಾದ ಶರೀರ ಸಂಪತ್ತನ್ನುಬೆಳೆಸಬೇಕು; ಹೀಗೆ ಮಾಡಿ ಅವರನ್ನು ಅವರ ಪಾಡಿಗೆ ಬಿಟ್ಟುಬಿಟ್ಟರೆ ಮುಂದೆ ತಮ್ಮ ಜೀವನವನ್ನು ತಾವೇ ಚೆನ್ನಾಗಿ ನಿರ್ವಹಿಸಿಕೊಳ್ಳುತ್ತಾರೆ. ನಿಜಕ್ಕೂ ಇದೊಂದು ಗಮನಾರ್ಹ ಕ್ರಾಂತಿಕಾರಿ ಭಾವನೆಯೇ ಸರಿ. ಪ್ರತಿರೂಪವಾಗಿ ಆತ ನಮಗೆಲ್ಲ ನೀಡಿದ ಉಡುಗೊರೆಯೇ ವೀರ, ಧೀರ, ದಿಟ್ಟ ತ್ಯಾಗ ಭಾವಜೀವದ ನರೇಂದ್ರ. ವಿಶ್ವನಾಥನ ಈ ಧ್ಯೇಯವು ಚಾಚೂತಪ್ಪದೇ ಎಲ್ಲವೂ ನರೇಂದ್ರನೊಳಗೆ ಅಂತರ್ಗತಗೊಂಡಿತ್ತು.
ಮುಂದಿನ ನರೇಂದ್ರನ ಜೀವನವು, ಸ್ವಾಮಿ ವಿವೇಕಾನಂದರಾದಾಗಲೂ ಕೂಡ ಆ ವೀರತನದ ಭಾವ, ಕ್ಷಾತ್ರ ತೇಜಸ್ಸು, ಇದ್ದುದೆಲ್ಲವನು ಪರರಿಗೆ ನೀಡುವ ಪರಮ ತ್ಯಾಗ, ಕುಟಿಲತೆ-ಜಟಿಲತೆಯ ನಡುವೆ ನಡೆವ ಬುದ್ಧಿವಂತಿಕೆ, ಎಲ್ಲರೊಡನೆ ಸಮಾನವಾಗಿ ತಾನೇ ಎಂಬಂತೆ ಬೆರೆವ ಭಾವ, ಮತ-ಧರ್ಮಗಳಲ್ಲಿ ವಿಶಾಲ ದೃಷ್ಟಿಕೋನ ಹೊಂದಿ, ಅಪಾರ ಜ್ಞಾನ ಹೊಂದುವ ಮನಸ್ಸು ತಂದೆಯಿಂದ ಬಳುವಳಿಯಾಗಿ ಬಂದಿತು. ಮುಂದೆ ಈ ಗುಣಗಳೆಲ್ಲ ಶ್ರೀರಾಮಕೃಷ್ಣ ಪರಮಹಂಸರಮುಂದೆ ಸೈ ಎನಿಸಿಕೊಳ್ಳಲು ಅಡಿಪಾಯವೇ ಆಗಿತ್ತು ಎಂದರೆ ಉತ್ಪ್ರೇಕ್ಷೆಯಾಗದು.
ಒಬ್ಬ ಅಪ್ಪಟ ದೇಶಭಕ್ತ, ಧರ್ಮವೆಂಬುದರ ಬಗ್ಗೆ ನಿಜವಾದ ಅರಿವು ಮೂಡಿಸಿದ ಸಂತ, ವಿಶ್ವವಿಜೇತ, ವೀರಸಂನ್ಯಾಸಿಯ ಜನ್ಮ ದಿನಾಚರಣಿಯ ನಿಮಿತ್ತ, ಆಜನ್ಮಕ್ಕೆ ಕಾರಣವಾದ ಆ ವಂಶವನ್ನೂ, ಅವರುಗಳ ಮನೋಸ್ಥೈರ್ಯವನ್ನೂ ಅರಿಯುವುದು ನಮ್ಮ ಇಂದಿನ ಅಗತ್ಯ. ಆ ಮೂಲಕ ಮನೆ-ಮನೆಯಲ್ಲೂ ನರೇಂದ್ರರು ಜನ್ಮ ತಾಳಬೇಕಾದರೆ, ತಂದೆ- ವಿಶ್ವನಾಥನಂಥವರು, ತಾಯಿ-ಭುವನೇಶ್ವರಿಯಂಥವರು, ಅಜ್ಜ-ದುರ್ಗಾ ಪ್ರಸಾದರಂಥವರು, ಅಜ್ಜಿ-ಶ್ಯಾಮ ಸುಂದರಿಯಂಥವರು ಇರಲೇಬೇಕು. ಹಾಗಾಗಿ ಇಂದು ನಾವು ಸ್ವಾಮಿ ವಿವೇಕಾನಂದರನ್ನು ನೆನೆಯುತ್ತಿದ್ದೇವೆಂದರೆ, ಅಂದು ನರೇಂದ್ರನಿಗೆ ದೊರೆತ ಸಂಸ್ಕಾರ ಗಳೂ ಪೂರಕವಾಗಿದ್ದವು. ಈ ದಿನಕ್ಕೆ ಆ ದಿನ ಬೇಕೇ ಬೇಕು ತಾನೆ? ಮನೆಯ ಮಕ್ಕಳು ಸ್ವಾಮಿ ವಿವೇಕಾನಂದರಂತಾಗಲು, ಮೊದಲು ನಾವು ಅವರ ತಂದೆ-ತಾಯಿ, ಅಜ್ಜ-ಅಜ್ಜಿಯರಂತಾಗೋಣ.
ಆಗ ಮಾತ್ರ ಸ್ವಾಮಿ ವಿವೇಕಾನಂದರುಗಳು ಮನೆ-ಮನದಲ್ಲಿ ಮೂಡಲು ಸಾಧ್ಯ. ಹೌದಲ್ಲವೇ? ಯಾರು ಈ ಸ್ವಾಮಿ ವಿವೇಕಾನಂದ ?ಸ್ವಾ – ಸ್ವಾರ್ಥವಿಲ್ಲದೇಮಿ – ಮಿಂಚಿನ ಸಂದೇಶ ಹರಿಸಿವಿ – ವಿಶ್ವದ ಕಣ್ಣು ತೆರೆಸಿವೇ – ವೇದಾಂತ ತತ್ವ ಅರುಹಿದಕಾ – ಕಾಲದ ಮಹತ್ವ ತಿಳಿಸುತ್ತಾನ- ನಂದಾದೀಪದಂತೆ ಭಾರತದಲ್ಲಿ ಬಾಳಿ ಬೆಳಗಿದದ – ಧರ್ಮಾತ್ಮ.