ಸುಬ್ಬುಲಕ್ಷ್ಮೀಯ ಸುಪ್ರಭಾತದೊಂದಿಗೆ ಬಿಚ್ಚಿಕೊಳ್ಳುವ ಬೆಳಗು !
ಯಶೋ ಬೆಳಗು
ಯಶೋಮತಿ ಬೆಳಗೆರೆ
@.
ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ವಿಶ್ವವೇ ದಕ್ಷಿಣ ಭಾರತದೆಡೆಗೆ ಹೆಮ್ಮೆಯಿಂದ ನೋಡುವಂತೆ ಮಾಡಿ, ಇಂದು ಎಲ್ಲರ ಮನೆಯ ಸುಪ್ರಭಾತವಾಗಿರುವ ಸುಬ್ಬು ಲಕ್ಷ್ಮೀ ಸದಾ ಜೀವಂತ. ಸುಪ್ರಭಾತವನ್ನು ಹದಿನೈದನೇ ಶತಮಾನದಿಂದಲೂ ಸ್ತೋತ್ರ ರೂಪವಾಗಿ ಹೇಳುತ್ತ ಬಂದಿದ್ದರೂ ಮೆರುಗು ನೀಡಿ ವಿಶ್ವವಿಖ್ಯಾತ ಗೊಳಿಸಿದ್ದು ಸುಬ್ಬುಲಕ್ಷ್ಮೀಯವರ ದನಿಯೇ!
ಮುಂಜಾನೆಯ ಕೊರೆವ ಚಳಿಯಲಿ ಮಗನನ್ನು ಎಬ್ಬಿಸಿ ಬೂಸ್ಟ್ ಎನ್ನುವ ಸೀಕ್ರೆಟ್ ಎನರ್ಜಿಯನ್ನು ಕುಡಿಯಲು ಕೊಟ್ಟು ಮಬ್ಬು ಬೆಳಕಿನಲ್ಲೇ ಫುಟ್ಬಾಲ್ ಕೋರ್ಟಿಗೆ ಕರೆದುಕೊಂಡು ಹೋಗುವಾಗ ಅವನು ಗೆಳೆಯನೊಂದಿಗೆ ಹರಟುತ್ತಿದ್ದರೆ ನಾನು ಕಾರಿನ ಸ್ಟೀರಿಯೋದಲ್ಲಿ ಎಂ. ಎಸ್.ಸುಬ್ಬುಲಕ್ಷ್ಮೀಯ ಸುಪ್ರಭಾತಕ್ಕೆ ಟ್ಯೂನ್ ಮಾಡಿಕೊಂಡು ದಾರಿಯುದ್ದಕ್ಕೂ ಕೇಳುತ್ತಾ ಹೋಗುತ್ತೇನೆ. ಆ ದನಿಯಲ್ಲಿಯೇ ಅದೆಂಥದ್ದೋ ಮೋಡಿಯಿದೆ.
ಸುಪ್ರಭಾತದೊಂದಿಗೆ ಬೆಳಗು ಬಿಚ್ಚಿಕೊಳ್ಳುವುದನ್ನು ನೋಡುವುದೇ ಒಂದು ಚೆಂದ. ರೇಡಿಯೋದಲ್ಲಿ ಸುಪ್ರಭಾತ ಹಾಕಿ ಅಮ್ಮ ಮನೆಯ ಇತರೆ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದ ಚಿತ್ರಗಳು ಕಣ್ಮುಂದೆ ಕದಲತೊಡಗುತ್ತದೆ. ನಿದ್ರೆಯ ಮಂಪರು ಹಾರಿ ಹೋಗಿ ಮನಸಿನೊಳಗೆ ಹೊಸ ಚೈತನ್ಯ ಹೊಕ್ಕಂತಾಗುತ್ತದೆ. ಅದೇ ಸುಪ್ರಭಾತವನ್ನು ನೂರಾರು ಜನ ನೂರಾರು ರೀತಿ ಹಾಡಿದ್ದರೂ ಎಂ.ಎಸ್. ಸುಬ್ಬುಲಕ್ಷ್ಮೀಯವರ ಸುಪ್ರಭಾತ ಮಾತ್ರ ಅಂದಿನಿಂದ ಇಂದಿನವರೆಗೂ ಬದಲಾಗದೆ ಅದೇ ಸೆಳೆತವನ್ನು ಉಳಿಸಿಕೊಂಡಿದೆ.
ಹೊಳೆವ ವಜ್ರದ ಮೂಗುತಿಯೊಂದಿಗೆ, ಕಾಂಚಿಪುರಮ್ ಸೀರೆಯುಟ್ಟು, ತುರುಬಿನಲ್ಲಿ ಮಲ್ಲಿಗೆ ಮುಡಿದು, ಬೈ ತಲೆಯ ಕೆಳಗೆ ಹಣೆಯ ಮೇಲೆ ಕಾಸಗಲದ ಕುಂಕುಮ ವಿಟ್ಟು ಶೃತಿ ಹಿಡಿದು ಶಂಕರಾಚಾರ್ಯರಿಂದ ರಚಿತವಾದ ಭಜಗೋವಿಂದಮ್ ಮೂಢಮತೇ ಎಂದು ಹಾಡತೊಡಗಿದರೆ ಆ ದೇವಲೋಕವೇ ಧರೆಗಿಳಿ ದಂತಹ ಅನುಭವ ದೊಂದಿಗೆ ಸಂಗೀತದೊಂದಿಗೆ ತನ್ಮಯರಾಗಿ ದೇವದರ್ಶನ ಮಾಡಿಸುವ ಅಭೂತ ಕಲಾನಿಧಿಯಾದ ಎಂ.ಎಸ್. ಸುಬ್ಬುಲಕ್ಷ್ಮೀಯವರನ್ನು ಸಂಗೀತ ಸಾಮ್ರಾಟ ರಾದ ಉಸ್ತಾದ್ ಬಡೇ ಗುಲಾಮ್ ಅಲಿ ಖಾನ್ ಅವರು ಸುಸ್ವರಲಕ್ಷ್ಮೀ ಎಂದು ತುಂಬು ಆಭಿಮಾನದಿಂದ ಹೊಗಳಿದ್ದರು. ಸ್ವತಃ ಭಾರತ ಕೋಗಿಲೆ ಬಿರು ದಾಂಕಿತರಾದ ಸರೋಜಿನಿ ನಾಯ್ಡು   Indiaಎಂದು ಕರೆದರೆ, ಕಲಾ ತಪಸ್ವಿನಿ ಎಂದರು ಲತಾ ಮಂಗೇಶ್ಕರ್. ಸಂಗೀತ ಸಾಮ್ರಾಜ್ಞೆಯ ಎದರು ನಾನೊಬ್ಬ ಯಕಶ್ಚಿತ್ ಪ್ರಧಾನಮಂತ್ರಿಯಷ್ಟೆ ಎಂದು ಹೊಗಳಿ ಕೊಂಡಾಡಿದ್ದರು ಪಂಡಿತ್ ಜವಹರಲಾಲ್ ನೆಹರು.
ಇಷ್ಟೆಲ್ಲ ದಿಗ್ಗಜರಿಂದ ಹೊಗಳಿಸಿಕೊಂಡರೂ ಆರಕ್ಕೇರದೆ, ಮೂರಕ್ಕಿಳಿಯದೆ ತಮ್ಮ ಸಂಗೀತ ಸೇವೆಯಲ್ಲಿ ಅದೇ ತನ್ಮಯತೆಯಿಂದ ತೊಡಗಿಕೊಳ್ಳುತ್ತಿದ್ದ ಎಂ. ಎಸ್. ಸುಬ್ಬುಲಕ್ಷ್ಮೀಯವರ ಮನೆಯಲ್ಲಿ ಅಜ್ಜಿಯ ಕಾಲದಿಂದಲೂ ಸಂಗೀತ ನಲಿದಾಡುತ್ತ ಒಲಿದಿದೆ. ದೇವದಾಸಿ ಮನೆತನವರಾದ ತಾಯಿ ಷಣ್ಮುಖವಡಿವು ಅಮ್ಮಾಳ್ ವೀಣಾ ಪ್ರವೀಣೆಯಾದರೆ, ಅವರ ಅಜ್ಜಿ ಅಕ್ಕಮ್ಮಾಳ್ ವಯಲಿನ್ ವಾದಕರಾಗಿದ್ದರು. ಎಂ. ಎಸ್. ಸುಬ್ಬುಲಕ್ಷ್ಮೀಯವರ ಪೂರ್ಣ ಹೆಸರು ಮಧುರೈ ಷಣ್ಮುಖವಡಿವು ಸುಬ್ಬುಲಕ್ಷ್ಮೀ ಎಂದು.
ಸೆಪ್ಟಂಬರ್ ಹದಿನಾರು1916ನೇ ಇಸವಿಯಂದು ಮಧುರೈನಲ್ಲಿ ಜನಿಸಿದ ಸುಬ್ಬುಲಕ್ಷ್ಮೀಯವರಿಗೆ ಸಂಗೀತ ಕ್ಷೇತ್ರದಲ್ಲಿ ಮೊಟ್ಟಮೊದಲ ಬಾರಿಗೆ ಪಡೆದ ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿ ಎಂಬ ಹಿರಿಮೆಯ ಗರಿ 1998ರಲ್ಲಿ ಅವರ ಮುಡಿಗೇರಿತ್ತು. ಅಷ್ಟೇ ಅಲ್ಲದೆ, 1954ರಲ್ಲೇ ಪದ್ಮಭೂಷಣ ಪ್ರಶಸ್ತಿ, ಏಶಿಯಾ ಖಂಡದಲ್ಲೇ ವಿಶಿಷ್ಟ ಪಾರಿತೋಷಕವಾದ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಪಡೆದ ಮೊಟ್ಟಮೊದಲ ಸಂಗೀತಗಾರ್ತಿ ಕೂಡ! ಎಂ. ಎಸ್.ಸುಬ್ಬುಲಕ್ಷ್ಮೀಯವರು ತಮ್ಮ ಸಂಗೀತದ ಮೂಲಕ ಕರ್ನಾಟಕ ಸಂಗೀತ ಲೋಕವನ್ನು ವಿಶ್ವವಿಖ್ಯಾತಿಗೊಳಿಸಿ ಹುಟ್ಟಿದ ಮನೆಗೆ, ಬೆಳೆದ ನಾಡಿಗೆ ಘನತೆಯನ್ನು ತಂದುಕೊಟ್ಟರು.
ಕಲಿಕೆಯಲ್ಲಿ ನಿಪುಣೆಯಾಗಿದ್ದ ಎಂ.ಎಸ್.ಗೆ ಆರಂಭ ದಲ್ಲಿ ಅಮ್ಮನೇ ಗುರುವಾಗಿದ್ದರು. ಆನಂತರ ಸೆಮ್ಮನಗುದಿ ಶ್ರೀನಿವಾಸ ಅಯ್ಯರ್ ರ ಬಳಿ ಕರ್ನಾಟಕ ಸಂಗೀತವನ್ನು ಕಲಿಯುವ ಜತೆಜತೆಯಲ್ಲೇ ಪಂಡಿತ್ ನಾರಾಯಣ ರಾವ್ ವ್ಯಾಸರ ಬಳಿ ಹಿಂದೂಸ್ಥಾನಿ ಸಂಗೀತವನ್ನೂ ಕಲಿಯುತ್ತಾ ಎರಡೂ ಪ್ರಕಾರಗಳಲ್ಲಿ ಪರಿಣಿತರಾಗುತ್ತಾರೆ. ದೇವದಾಸಿ ಮನೆತನವಾದ್ದರಿಂದ ಸಂಗೀತ ಸಭೆಗಳನ್ನು, ಸಂಗೀತ ವೇದಿಕೆಗಳನ್ನು ಬಹಳ ಚಿಕ್ಕ ವಯಸ್ಸಿನಿಂದಲೇ ನೋಡುತ್ತಾಬೆಳೆಯುತ್ತಾರೆ. ಹೀಗಾಗಿ ಪ್ರಖ್ಯಾತ ಸಂಗೀತಗಾರರೆಲ್ಲ ಅವರಿಗೆ ಚಿರಪರಿಚಿತರು!
ತಿರುಚನಾಪಳ್ಳಿಯ ಪ್ರಸಿದ್ಧ ರಾಕ್-ರ್ಟ್ದೇವಾಲಯದಲ್ಲಿ ತಮ್ಮ ಹನ್ನೊಂದನೇ ವಯಸ್ಸಿನಲ್ಲಿಯೆ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕವಾಗಿ ನಮ್ಮ ಕರ್ನಾಟಕದ ರಾಜಕಾರಣಿ ಹಾಗೂ ಚಲನಚಿತ್ರ ನಟರಾಗಿದ್ದ ಅಂಬರೀಶ್ ಅವರ ತಾತ ಪ್ರಖ್ಯಾತ ಮೈಸೂರು ಚೌಡಯ್ಯನವರ ಪಿಟೀಲು ವಾದನ ಹಾಗೂ ದಕ್ಷಿಣಾಮೂರ್ತಿ ಪಿಳ್ಳೈ ರವರ ಮೃದಂಗಂನ ಸಾಥ್ ನೊಂದಿಗೆ ಸಂಗೀತ ಪ್ರದರ್ಶನ ನೀಡಿದ್ದರು.
ನೋಡಲು ದೇವಕಳೆಯೊಂದಿಗೆ ಲಕ್ಷಣವಾಗಿದ್ದ .ಎಸ್.ತಾರುಣ್ಯಕ್ಕೆ ಕಾಲಿಟ್ಟಾಗ ತನ್ನಮ್ಮ ನೋಡಿದ ಶ್ರೀಮಂತ ವರನನ್ನು ಧಿಕ್ಕರಿಸಿ, ಶ್ರೀಮಂತಿಕೆಗಿಂತ ಪ್ರೀತಿಗೆಒತ್ತುಕೊಡುವ ತನ್ನಿಚ್ಛೆಯ ವರನೊಂದಿಗೆ ಬದುಕು ಕಟ್ಟಿಕೊಳ್ಳುವ ಕನಸಿನೊಂದಿಗೆ ಮನೆಯಿಂದ ಓಡಿಹೋಗಿದ್ದರಂತೆ. ಸ್ನೇಹದೊಂದಿಗೆ ಪರಿಚಯವಾದ ಸದಾಶಿವನ್ ಅವರೆಡೆಗೆ ಭಾವನೆಗಳು ಅರಳಿ ಪ್ರೀತಿ ಮೂಡಿದ ನಾಲ್ಕು ವರುಷಗಳ ನಂತರ1936ರಲ್ಲಿ ಅಷ್ಟರಲ್ಲಾಗಲೇ ವಿವಾಹಿತರಾಗಿ, ಮಕ್ಕಳ ತಂದೆ ಯಾಗಿದ್ದ ಸದಾಶಿವನ್‌ರನ್ನೇ ವರಿಸುತ್ತಾರೆ. ತನ್ನ ಪತಿಯ ಮೊದಲ ಪತ್ನಿಯ ಮಕ್ಕಳನ್ನು ಸಾಕಷ್ಟು ಪ್ರೀತಿ ವಾತ್ಸಲ್ಯಗಳಿಂದ ಕಾಣುತ್ತಿದ್ದ ಎಂ.ಎಸ್. ಅವರನ್ನು ಅವಲ್ಲ ಅಷ್ಟೇ ಪ್ರೀತಿಯಿಂದ ಅಮ್ಮು ಪಾಟಿ ಎಂದು ಕರೆಯುತ್ತಿದ್ದರು.
ಸದಾಶಿವನ್ ರವರು ಕೂಡ ಎಂ.ಎಸ್.ರನ್ನು ಬಹಳ ಗೌರವಯುತವಾಗಿ ನಡೆಸಿಕೊಂಡು ಅವರನ್ನು ಸಿನೆಮಾದಲ್ಲಿ ನಟಿಸಲು ಸಹಕರಿಸುತ್ತಾರೆ. ಹೀಗಾಗಿ ಕೇವಲ ಸಂಗೀತಗಾರ್ತಿಯಾಗಷ್ಟೇ ಅಲ್ಲದೆ ನಟಿಯಾಗಿಯೂ ಮೆರೆದವರು ನಮ್ಮೆಲ್ಲರ ಪ್ರೀತಿಯ ಕುಂಜಮ್ಮ ಅರ್ಥಾತ್ ಸುಬ್ಬುಲಕ್ಷ್ಮೀ. 1938ರಲ್ಲಿ ಪ್ರೇಮಚಂದ್ರರ ಬಾಜಾರ್ ಎ ಹುಸ್ನ್ ಎನ್ನುವ ಕಥೆಯಿಂದ ಪ್ರೇರಿತವಾದ ಹರೆಯದ ಹುಡುಗಿಯರನ್ನು ವಿವಾಹವಾಗುವ ವಯಸ್ಕರ ಕಥಾಹಂದರವಿದ್ದ ಸಮಕಾಲೀನ ಸಾಮಾಜಿಕ ಚಿತ್ರ ಸೇವಾಸದನಮ್ ಎನ್ನುವ ತಮಿಳು ಚಲನಚಿತ್ರದಲ್ಲಿ ನಟಿಸುತ್ತಾರೆ. ಅದರಲ್ಲಿ ಹರೆಯದ ಮನದ ಬೇಗೆಗಳಿಂದ ಬಳಲುವ ನಾಯಕಿಯ ಪಾತ್ರವಾಗಿ ಎಂ.ಎಸ್. ನಟಿಸಿದರೆ, ವಯಸ್ಕ ಪತಿಯ ಮಾನಸಿಕ ತೊಳಲಾಟದಿಂದ ನರಳುವ ನಾಯಕನ ಪಾತ್ರ ದಲ್ಲಿ ಎಫ್.ಜಿ.ನಟೇಶ ಅಯ್ಯರ್ ನಟಿಸಿದ ಚಿತ್ರ ಸಾಕಷ್ಟುಚರ್ಚೆಗೆ ಒಳಪಟ್ಟ ಸಿನೆಮಾ ಆಗಿ ಭಾರೀ ಯಶಸ್ಸು ಕಾಣುತ್ತದೆ. ಆ ಕಾಲಕ್ಕೆ ಮಾರ್ಕ್ಸ್ ವಾದಿಯಾಗಿದ್ದ ಎನ್.ಶಂಕರಯ್ಯರವರು ಇದೊಂದು ಅಸಾಮಾನ್ಯ ಚಿತ್ರ ಎಂದು ಉದ್ಗರಿಸುತ್ತಾರೆ.
ಇದರ ನಂತರ ಶಕುಂತಲೈ, ಸಾವಿತ್ರಿ, ಮೀರಾ, 1000 ತಲೈ ವಾಂಗಿ ಅಪೂರ್ವ ಚಿಂತಾಮಣಿ ಎಂಬ ಚಿತ್ರಗಳಲ್ಲೂ ಸಹ ಸ್ತ್ರೀ ಪ್ರಧಾನ ಪಾತ್ರಗಳಲ್ಲಿ ಮುಖ್ಯ ಭೂಮಿಕೆಯಾಗಿ ನಟಿಸುತ್ತಾರೆ. ಅಷ್ಟೇ ಅಲ್ಲದೆ ಸಂಸ್ಕೃತಿಕ ರಾಯಭಾರಿಯಾಗಿ ಲಂಡನ್, ನ್ಯೂಯಾರ್ಕ್, ಕೆನಡ, ಮುಂತಾದ ಸಾಕಷ್ಟು ದೇಶಗಳಿಗೆ ಭೇಟಿ ನೀಡಿಹೊರನಾಡಿನ ಸಂಗೀತ ಪ್ರಿಯರ ಮನತಣಿಸುತ್ತಾರೆ. ಅದೆಲ್ಲ ಏನೇ ಇದ್ದರೂ ಎಂ.ಎಸ್. ಸುಬ್ಬುಲಕ್ಷ್ಮೀ ಎಂದ ಕೂಡಲೇ ನಮಗೆಲ್ಲ ಮೊದಲು ನೆನಪಿಗೆ ಬರುವುದುಕೌಸಲ್ಯ ಸುಪ್ರಜಾ ರಾಮ ಪೂರ್ವ ಸಂಧ್ಯಾ ಪ್ರವರ್ತತೆ…. ಎಂದು ಹಾಡುತ್ತಾ ದೇವರೊಂದಿಗೆ ಜಗತ್ತನ್ನು ಎಚ್ಚರಗೊಳಿಸುವ ವೆಂಕಟೇಶ ಸುಪ್ರಭಾತಮ್!
ಹರ್ಷವರ್ಧನನಿಂದ ರಚಿತವಾದ ಗೌತಮ ಬುದ್ಧನ ಸುಪ್ರಭಾತಮ್, ಶ್ರೀರಂಗಂ ನ ರಂಗನಾಥನ ಸುಪ್ರಭಾತ, ಧರ್ಮಸ್ಥಳದ ಮಂಜುನಾಥನ ಸುಪ್ರಭಾತ ಹೀಗೆ ನಾನಾ ದೇವರುಗಳ ನಾನಾ ಸುಪ್ರಭಾತಗಳಿದ್ದರೂ ವೆಂಕಟೇಶ ಸುಪ್ರಭಾತಮ್‌ಗೆ ಅದರದೇ ಆದ ವಿಶೇಷತೆಯಿದೆ. ಕಾರಣ, ಅದು ರುಗ್ವೇದಗಳ ಕಾಲ ದೊಂದಿಗೆ ತಳುಕು ಹಾಕಿಕೊಂಡಿರುವುದು. ಹೇಳುತ್ತಿರುವುದು ವೆಂಕಟೇಶನಿಗೆ ಸುಪ್ರಭಾತ! ಆದರೆ ಇಲ್ಲಿ ಕೌಸಲ್ಯ ಪುತ್ರನಾದ ರಾಮನೇಕೆ? ಅನ್ನುವ ಅನುಮಾನ ಮೂಡಿದಾಗ ಗೂಗಲ್‌ನಲ್ಲಿ ಅದರ ಬಗ್ಗೆ ಮಾಹಿತಿ ಕಲೆಹಾಕಲು ಆರಂಭಿಸಿದೆ. ಇನ್ನಷ್ಟು ಹುಡುಕಾಟ ನಡೆಸಿದಾಗ ಬೆಂಗಳೂರು ನಿವಾಸಿಯಾದ ವೆಂಕಟೇಶ ಪಾರ್ಥಸಾರಥಿಯವರು ಬರೆದ ಅದ್ಭುತವಾದ ಪುಸ್ತಕ ‘      ಕಣ್ಣಿಗೆ ಬಿತ್ತು.
ಸುಪ್ರಭಾತಮ್ ನ ಪ್ರತಿ ಚರಣವನ್ನೂ ಸಾಕಷ್ಟು ವಿವರವಾಗಿ ವಿವರಿಸಿದ್ದಾರೆ. ವಿಷ್ಣುವಿನ ಪರಮಭಕ್ತರಾಗಿದ್ದ ಪ್ರತಿವಾದಿ ಭಯಂಕರ ಅಣ್ಣ ಎನ್ನುವ ತೆಲುಗು ಕವಿಸುಪ್ರಭಾತಮ್‌ನ ಕರ್ತೃ! ಯೋಗನಿದ್ರೆಯಲ್ಲಿರುವ ವಿಷ್ಣುವನ್ನು ಎಚ್ಚರಗೊಳಿಸಲು ತನ್ನ ಮಗುವನ್ನು ತಾಯಿ ಎಚ್ಚರಗೊಳಿಸುವಂತೆ ತನ್ನ ದೈವವನ್ನು ಪ್ರೀತಿಯಿಂದಅವನ ಕಲ್ಯಾಣ ಗುಣಗಳನ್ನು ಹೊಗಳುತ್ತಾ ಮೆಲ್ಲಮೆಲ್ಲಗೆ ಏಳಿಸುವ ಪರಿಯೇ ಅನನ್ಯ! ಅಷ್ಟೇ ಅಲ್ಲದೆ ಇವರ ವೆಂಕಟೇಶ ಸ್ತೋತ್ರಮ್, ವೆಂಕಟೇಶ ಪ್ರಪತ್ತಿ, ವೆಂಕಟೇಶ ಮಗಳಾಸನಮ್ ಗಳ ಮೂಲಕ ತಿರುಮಲದ ಕಟೇಶನಿಗೆ ಪ್ರತಿನಿತ್ಯ ಸ್ತೋತ್ರಾಭಿಷೇಕ ಮಾಡಲಾಗುತ್ತದೆ.
ಪುರುಷರೂಪಿಯಾದ ವಿಷ್ಣುವು ಸೃಷ್ಟಿಯ ಸಂಕೇತ! ಹೀಗಾಗಿ ಈ ಸೃಷ್ಟಿಯನ್ನು ಸದಾಕಾಲ ಸಂರಕ್ಷಿಸುವಂತೆ ಅವನನ್ನು ಪರಿಪರಿಯಾಗಿ ಪ್ರಾರ್ಥಿಸುವುದು ರುಗ್ವೇದದ ಕಾಲದಿಂದಲೂ ನಡೆದುಬಂದ ರೂಢಿ! ರಾಮ ವಿಷ್ಣು ಸ್ವರೂಪಿಯೇ ಆದ್ದರಿಂದ ವಾಲ್ಮೀಕಿಯ ರಾಮಾಯಣದ ಬಾಲಕಾಂಡದ ಕೌಸಲ್ಯಾ ಪುತ್ರ ರಾಮ ನಿಂದ ಸುಪ್ರಭಾತದ ಮೊದಲ ಚರಣವನ್ನು ಆರಿಸಿಕೊಳ್ಳಲಾಗಿದೆ. ಸುಪ್ರಭಾತವನ್ನು ಹದಿನೈದನೇ ಶತಮಾನದಿಂದಲೂ ಸ್ತೋತ್ರ ರೂಪವಾಗಿ ಹೇಳುತ್ತ ಬಂದಿದ್ದರೂ ಅದಕ್ಕೆ ಮೆರುಗು ನೀಡಿ ವಿಶ್ವವಿಖ್ಯಾತಗೊಳಿಸಿದ್ದು ಮಾತ್ರ ಎಂ.ಎಸ್. ಸುಬ್ಬುಲಕ್ಷ್ಮೀಯವರ ದನಿಯೇ! ಸಾಕಷ್ಟುಶಾಸ್ತ್ರೀಯಸಂಗೀತದ ನಡುವೆ, ಭಜನೆ, ಭಕ್ತಿಗೀತೆಗಳನ್ನು ಹಾಡಿದ್ದರೂ ಸುಪ್ರಭಾತವೆಂದೊಡನೆ ನೆನಪಾಗುವುದು ನಮ್ಮ ಎಂ.ಎಸ್. ಸುಬ್ಬುಲಕ್ಷ್ಮೀಯೇ!
ಸಾಕಷ್ಟು ಕ್ರಿಯಾಶೀಲರಾಗಿದ್ದ ಸುಬ್ಬುಲಕ್ಷ್ಮೀಯವರಿಗೆ ಆಸರೆಯಾಗಿ ಅವರೆಲ್ಲ ಕನಸುಗಳನ್ನು ಪೊರೆದವರು ಅವರ ಬಾಳಸಂಗಾತಿ ಕಲ್ಕಿ ಸದಾಶಿವಮ್.1997ರಲ್ಲಿ ಕಲ್ಕಿ ಸದಾಶಿವಮ್ ರವರು ವಿಧಿವಶರಾದ ನಂತರ ಸುಬ್ಬುಲಕ್ಷ್ಮೀಯವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಾಡುವುದನ್ನು ಶಾಶ್ವತವಾಗಿನಿಲ್ಲಿಸಿಬಿಟ್ಟರು. ಅದಾದ ಏಳು ವರುಷಗಳ ನಂತರ ಡಿಸೆಂಬರ್ ೧೧ ೨೦೦೪ರಂದು ತಾವೂ ಸಹ ದೈಹಿಕವಾಗಿ ಈ ಜಗತ್ತಿನಿಂದ ನಿರ್ಗಮಿಸುತ್ತಾರೆ. ಅವರ ಅಂತಿಮ ದರ್ಶನಕ್ಕಾಗಿ ಅಂದಿನ ರಾಷ್ಟ್ರಪತಿಯಾಗಿ ಎಪಿಜೆ ಅಬ್ದುಲ್ ಕಲಾಮ್ ಆಗಮಿಸಿ ಅಂತಿಮ ನಮನಗಳನ್ನು ಸಲ್ಲಿಸಿದ್ದರು.
ಅವರು ತಮ್ಮ ಸಂಗೀತ ಕಾರ್ಯಕ್ರಮಗಳಿಂದ ಗಳಿಸಿದ ಹೆಚ್ಚಿನ ಹಣವನ್ನೆಲ್ಲ ದಾನ-ಧರ್ಮಗಳಿಗಾಗಿ ಮೀಸಲಿಟ್ಟಿದ್ದರು. ಅವರ ಅನನ್ಯ ಸೇವೆಯನ್ನು ನೆನೆದು ತಿರುಪತಿ ಅರ್ಬನ್ ಡೆವಲೆಪ್ ಮೆಂಟ್ ಅಥಾರಿಟಿ ಅವರ ಕಂಚಿನ ಪ್ರತಿಮೆಯನ್ನು ದೇವಾಲಯದ ಆವರಣದ ಪೂರ್ಣಕುಂಭ ವೃತ್ತದಲ್ಲಿ ಸ್ಥಾಪಿಸಲಾಯಿತು. ಅದನ್ನುಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೈ.ಎಸ್. ರಾಜಶೇಖರ ರೆಡ್ಡಿಯವರು ಅನಾವರಣಗೊಳಿಸಿದ್ದರು. ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ವಿಶ್ವವೇ ದಕ್ಷಿಣಭಾರತದೆಡೆಗೆ ಹೆಮ್ಮೆಯಿಂದ ನೋಡುವಂತೆ ಮಾಡಿ, ಇಂದು ಎಲ್ಲರ ಮನೆಯ ನಿತ್ಯ ಸುಪ್ರಭಾತವಾಗಿರುವ ಎಂ.ಎಸ್. ಸುಬ್ಬುಲಕ್ಷ್ಮೀ ನಮ್ಮೊಡನೆ ಸದಾಜೀವಂತವಾಗಿದ್ದಾರೆ.