ಮನುಷ್ಯನ ನಡವಳಿಕೆಯೂ ಭೂಕಂಪಕ್ಕೆ ಕಾರಣ !
ಪ್ರಾಣೇಶ್ ಪ್ರಪಂಚ
ಗಂಗಾವತಿ ಪ್ರಾಣೇಶ್
ನಮ್ಮಲ್ಲಿ ಅನೇಕರು ನಾನು ಬರೆದದ್ದೇ ಕಾವ್ಯ, ಸಾಹಿತ್ಯ, ಇನ್ನೊಬ್ಬರದನ್ನು ನಾನೇಕೆ ಓದಲಿ, ಅವರು ನಾನು ಬರೆದದ್ದನ್ನು ಓದುತ್ತಾರೇನು? ಎಂದೇ ಪ್ರಶ್ನಿಸು ತ್ತಾರೆ. ಇಂಥವರು ತಾಯಿ ಗರ್ಭದಿಂದ ಬಂದವರಲ್ಲ, ಟೆಸ್ಟ್‌ಟ್ಯೂಬ್ ಬೇಬಿಗಳೆಂದು ಕೈ ಮುಗಿದು ಮುಂದೆ ಸಾಗಬೇಕಷ್ಟೆ.
ಡಾ.ಕಬ್ಬಿನಾಲೆಯವರ ಬಗೆಗೆ ಹೋದ ವಾರದ ಲೇಖನದ ಸೊಗಸನ್ನು ಮೆಚ್ಚಿ ಅನೇಕ ಸಹೃದಯ ಮಿತ್ರರು ಅವರ ಕೃತಿಗಳನ್ನು ಓದುವ ಇಂಗಿತ ವ್ಯಕ್ತಪಡಿ ಸಿರುವುದು ಸಂತಸ ತಂದಿದೆ. ಓದುವ ಹವ್ಯಾಸ, ಹವ್ಯಾಸಗಳಿಗೆಲ್ಲ ರಾಜನಂತಿರುವುದು ನನ್ನ ಸ್ವಾನುಭವಕ್ಕೆ ಬಂದ ಸಂಗತಿ.
ಮಾತ್ರವಲ್ಲ ಇದು ಬರೆಯುವ ಪ್ರೇರಣೆಯನ್ನೂ ನೀಡುತ್ತದೆ ಎಂಬುದು ನನ್ನ ಅನುಭವ. ಹಾಗೆಯೇ ಇನ್ನೊಬ್ಬ ರನ್ನು ಮೆಚ್ಚುವ, ಅವರನ್ನು ಪ್ರಶಂಸಿಸುವ, ಅವರ ಪರವಾಗಿ ಮಾತನಾಡುವ ಗುಣಗಳನ್ನೂ ವಧಿಸುತ್ತದೆ. ನನಗಿಂತಲೂ ಬುದ್ಧಿವಂತರಿದ್ದಾರೆಂಬ ನಯವಂತಿಕೆಯನ್ನೂ ತಂದುಕೊಡುತ್ತದೆ. ಇನ್ನೊಬ್ಬರನ್ನು ಓದುವುದು, ಮೆಚ್ಚುವುದು ನಮಗರಿಯದಂತೆಯೇ ಅಭಿವೃದ್ದಿಯ ಮೆಟ್ಟಿಲು ಹತ್ತುವಲ್ಲಿ ಸಹಾಯ ಮಾಡುತ್ತದೆ.
ನಮ್ಮಲ್ಲಿ ಅನೇಕರು ನಾನು ಬರೆದದ್ದೇ ಕಾವ್ಯ, ಸಾಹಿತ್ಯ, ಇನ್ನೊಬ್ಬರದನ್ನು ನಾನೇಕೆ ಓದಲಿ, ಅವರು ನಾನು ಬರೆದದ್ದನ್ನು ಓದುತ್ತಾರೇನು? ಎಂದೇ ಪ್ರಶ್ನಿಸುತ್ತಾರೆ. ಇಂಥವರು ತಾಯಿ ಗರ್ಭದಿಂದ ಬಂದವರಲ್ಲ, ಟೆಸ್ಟ್‌ ಟ್ಯೂಬ್ ಬೇಬಿಗಳೆಂದು ಕೈ ಮುಗಿದು ಮುಂದೆ ಸಾಗಬೇಕಷ್ಟೆ. ಆಯುಷ್ಯ ಇದ್ದ ಮಗು ಹೇಗಾದರೂ, ಏನಾದರೂ ಹೇಗೆ ಬದುಕುತ್ತ ದೆಯೋ, ಹಾಗೆಯೇ ಸತ್ವ, ಆಳ, ಅನುಭವ ಇದ್ದ, ಇರುವ ಕೃತಿಗಳು ಚಿರಂಜೀಗಳಾಗುತ್ತವೆ. ಅನೇಕ ಬರಹಗಾರರು ನನಗೆ ತಮ್ಮ ಪುಸ್ತಕಗಳನ್ನು ಕೊಡುತ್ತಾರೆ. ಅವರನ್ನು ನಾನು ಕೇಳುವುದು ಒಂದೇ ಪ್ರಶ್ನೆ, ‘ನೀವು ಯಾವ ಲೇಖಕನನ್ನು ಮೆಚ್ಚುತ್ತೀರಿ, ಯಾವ ಲೇಖನಗಳನ್ನು ಓದುತ್ತೀರಿ?’ ಎಂದೇ ಕೇಳುತ್ತೇನೆ.
ಕೆಲವರು ಹಲವರ ಹೆಸರುಗಳನ್ನು ಹೇಳುತ್ತಾರೆ. ಇನ್ನು ಕೆಲವರು ‘ನಾನು ಯಾರದನ್ನೂ ಓದಿಲ್ಲ, ಓದುವುದೂ ಇಲ್ಲ’ ಎಂದೇ ಹೇಳುತ್ತಾರೆ. ‘ಅನಾಥೋ ದೈವ ರಕ್ಷಕ’ ಎಂದುಕೊಂಡು ಸುಮ್ಮನಾಗುತ್ತೇನೆ. ಓದದೇ ಬರೆಯು ವವನು ತಾಯಿತಂದೆಗಳಿಲ್ಲದೇ ಹುಟ್ಟಿದ್ದೇನೆ ಎಂದಂತೆ. ನಾನು ಚಿಕ್ಕವನಿದ್ದಾಗ ಶಾಲೆಗೆ ಹೋಗಲು ಬಲು ಹಠ ಮಾಡುತ್ತಿದ್ದೆನಂತೆ. ಕಳ್ಳಾಟ, ಇಲ್ಲದ ಜ್ವರ, ಹೊಟ್ಟೆನೋವು, ತಲೆತಿರುಗುತ್ತದೆಯೆಂಬ ಅಭಿನಯ, ಚಳಿ ಜ್ವರದ ನಟನೆ, ಸುಮ್ಮನೆ ನಡುಗುವುದು ಇತ್ಯಾದಿ ಇತ್ಯಾದಿ. ನನ್ನ ಹೆಣ್ಣು ತಾತ ಅಂದರೆ ತಾಯಿಯ ತಂದೆ ಶಾಮರಾವ್ ಹೆಂಗರುಳಿನಾತ, ಆತ ಈ ಕಳ್ಳಾಟವನ್ನು ತಿಳಿಯದೇ ‘ಹೌದೇ? ಬಿಟ್ಟುಬಿಡು’ ಎಂದು ಹಾಸಿ, ಹೊದಿಸಿ, ಮಲಗಿಸಿ ಬಿಡುತ್ತಿದ್ದನಂತೆ.
ಆದರೆ ನನ್ನ ತಾಯಿಯ ದೊಡ್ಡಮ್ಮ ಅಂಬಕ್ಕ ಮಡಿಹೆಂಗಸು ಸಾಕ್ಷಾತ್ ರಾಕ್ಷಸಿ, ಕರಕರ ಹಲ್ಲು ಕಡಿಯುತ್ತ ಬಂದು ನನ್ನ ತಾತನನ್ನು ಬೈದು, ನನ್ನ ಹೊದಿಕೆ ಕಿತ್ತೆ ಸೆದು ಅನಾಮತ್ತು ನನ್ನನ್ನು ಎತ್ತಿಕೊಂಡು ಮನೆಯ ಪಕ್ಕದಲ್ಲಿಯೇ ಸಿದ್ದಾಪುರ ದವರ ಬಂಕದಲ್ಲಿ ನಡೆಯುತ್ತಿದ್ದ ಅಯ್ಯನವರ ಶಾಲೆಯಲ್ಲಿ ಒಯ್ದು ಹುರಿಮೀಸೆ, ಕೆಂಪುಕಣ್ಣಿನ, ಕರಿ ಹಾಗೂ ಉದ್ದನೆಯ ಮುಖದ, ಏರು ಬಾಚಿದ ಕೂದಲುಳ್ಳ ಮಾಸ್ತರ್ ಮುಂದೆ ನನ್ನನ್ನು ಅಕ್ಷರಶಃ ಕುಕ್ಕುರುಬಡಿದು ಹಿಂತಿರುಗಿ ನೋಡದೇದಪದಪ ಹೆಜ್ಜೆ ಇಡುತ್ತ ಹೋಗಿಯೇ ಬಿಡುತ್ತಿದ್ದಳು.
ಅಯ್ಯನೇರ ಮಾಸ್ತರ ಮೊದಲ ಎರಡು ನಿಮಿಷ ರಮಿಸಿದಂತೆ ಮಾಡುತ್ತ ನನ್ನ ಎಳೆಯ ಕೈಬೆರಳುಗಳನ್ನು ನೀವುತ್ತಿದ್ದರು. ನಾನು ಎದ್ದುಹೋಗಲು ಪ್ರಯತ್ನಿಸು ತ್ತಿದ್ದಂತೆಯೇ, ಕರ್ಕಶ ಕಂಠದಲ್ಲಿ ‘ಯಾಕಲೇ ಆಚಾರಿ.. ಗಪ್’ ಎಂದು ಕಣ್ಣು ಕೆಕ್ಕರಿಸಿದರೆ ಥಂಡಾ ಹೊಡೆಯುತ್ತಿದ್ದೆ. ಇಲ್ಲದಿದ್ದರೆ ನೀವುತ್ತಿದ್ದ ನನ್ನ ಎಳೆಯ ಕೈಬೆರಳು ಗಳನ್ನೆ ಹಿಂದಕ್ಕೆ ಬಾಗಿಸಿ ಮುರಿಯುವಂತೆ ಮಾಡುತ್ತಿದ್ದ, ನನ್ನ ನೋವಿಗೆ ನಾನು ಕೂರಲೇಬೇಕಾಗಿತ್ತು. ಆಯಿತು ಸಂಜೆ ನಾಲ್ಕೂವರೆವರೆಗೆ ನಾನಲ್ಲಿ ಖೈದಿ. ಅಂದು ನಾನು ಇಷ್ಟು ಹಿಂಸೆ ಪಟ್ಟು ಓದು, ಬರೆಯುವುದನ್ನು ಕಲಿತಿದ್ದರಿಂದಲೇ ಇಂದು ರಸಗವಳದಂತಹ ಕನ್ನಡ ಕೃತಿಗಳನ್ನು ಓದುತ್ತಿದ್ದೇನೆ.
ಡಾ. ಕಬ್ಬಿನಾಲೆಯವರ ಕೃತಿಗಳನ್ನು ಓದುವಾಗ ನಾನು ಅಕ್ಷರ ಕಲಿತದಕ್ಕೂ ಸಾರ್ಥಕ ಎನಿಸಿದ್ದೇ ಇಂಥ ಓದುವ ಭಾಗ್ಯಕ್ಕೆ. ಇವರ ‘ಕನಕ ತರಂಗಿಣಿ’ ಪುಸ್ತಕದಲ್ಲಿ ‘ಯಾತ್ರಾ ಪಲ್ಲ’ ಅಧ್ಯಾಯದಲ್ಲಿ ಒಮ್ಮೆ ಒಂದು ರಾತ್ರಿ ಭೂಕಂಪನವಾಗುತ್ತದೆ. ಆಗ ಭೂಕಂಪ ಹೇಗೆ ಆಗುತ್ತದೆ ಎಂಬುದರ ಬಗೆಗಿನ ವಿವರಣೆ ಇದೆಯಲ್ಲ ಅದ್ಭುತ. ಕೇವಲ ವೈಜ್ಞಾನಿಕವಾಗಿ ಗುಡುಗು, ಸಿಡಿಲು, ಬರ, ಭೂಕಂಪ, ನೆರೆಹಾವಳಿ, ಪ್ಲೇಗು, ಕಾಲರಾ, ಕರೋನಾಗಳನ್ನು ವಿಮರ್ಶಿಸುವ ನಾವು ಇಂಥ ಪ್ರಾಕೃತಿಕ ಕೋಪಗಳ ಹಿಂದೆ ಮಾನವನ ಮನಃಸ್ಥಿತಿ, ನ್ಯಾಯ, ನೀತಿ, ಧರ್ಮ, ಪರೋಪಕಾರ, ಸಹಬಾಳ್ವೆ, ಯಜ್ಞ ಹವನ, ಹೋಮ, ಮಂತ್ರ, ಪ್ರಾರ್ಥನೆಗಳೂ ಪರಿಣಾಮ ಬೀರುತ್ತವೆಂಬುದನ್ನು ಮರೆತೆ ಬಿಡುತ್ತೇವೆ.
ಭೂಕಂಪ ಕೇವಲ ಗಣಿಗಾರಿಕೆ, ಪರಿಸರ ಮಾಲಿನ್ಯ, ಭೂಭಾರ ಹೆಚ್ಚಳ, ಬೃಹತ್ ಗಾತ್ರದ ಕಟ್ಟಡ, ವಾಹನಗಳ ಭರಾಟೆ, ಹೆಚ್ಚುತ್ತಿರುವ ಜನಸಂಖ್ಯೆ ಇತ್ಯಾದಿ ಗಳಿಂದ ಅಲ್ಲ ಎಂಬುದನ್ನು ಕನಕದಾಸರು ವ್ಯಾಸತೀರ್ಥರ ಪರಂಧಾಮದ ನಂತರ ತಿರುಪತಿಗೆ ಹೊರಡುತ್ತಾರೆ. ಅಲ್ಲಿ ತಲುಪಿದ ಮೇಲೆ, ಅಲ್ಲಿ ಆದದ್ದನ್ನು ಈ ರೀತಿ ಹೇಳುತ್ತಾರೆ.
ಹೊತ್ತು ಮುಳುಗಿತು ಸಂಜೆಗತ್ತಲಾಯಿತು
ಹೊತ್ತಿದವು ಒಂದರಿಂದೆರಡಾಗಿ ನಾಲ್ಕಾಗಿ ಮತ್ತೆ
ನೂರಾಗಿ ಸಾವಿರ ಲಕ್ಷ ತಾನಾಗಿ ಸುತ್ತಮುತ್ತದೊಳೆಲ್ಲಬೆಳಗಿರಲು ಲಕ್ಷದೀಪೋತ್ಸವದ ಸಡಗರವ ನೋಡುತ್ತ
ಶ್ರೀಹರಿಯನತ್ಯಧಿಕ ಭಕ್ತಿಯೊಳ್ ಕೊಂಡಾಡುತಿರಲಾಗ
ನಟ್ಟ ನಡುರಾತ್ರಿಯೊಳ್ ಭೂಮಿ ಕಂಪಿಸಲು ಕಂಗೆಟ್ಟಿತಾ ಭಕ್ತ ಜನ ಸಂದೋಹ ಭಯದಿಂದ ಒಟ್ಟಾಗಿ
ಹರಿಯ ನುತಿಸುವುದೆಂದು ಧೈರ್ಯಮಂಕೊಟ್ಟು ಹಾಡಿದನು ಕನಕ ||
ಮರೆತೆಯೇನೌ ತಾಯೆ ಮಡಿಲ ಮಕ್ಕಳನುಧರಣಿದೇಯ ಕಂಪಿಸಿದೆ ಏಕೆ ನೀನು || ಪ ||ವೇದ ಪಾರಂಗತರು ಹಾದಿತಪ್ಪಿದರೇನುಮೇದಿನೀಶರು ಜನರ ಬಾದಿಸಿದರೇನುಸಾಧುವೈಶ್ಯರು ಲಾಭಶೋಧನೆಯೊಳಿಹರೇನುಪಾದಜರು ಸ್ವಾರ್ಥವನು ಸಾಽಸದರೇನು ||ವಿದ್ಯಾವಿಶಾರದರು ವಿತ್ತ ಬಯಸಿದರೇನುಬುದ್ಧಿವಂತರು ಭಾವನಾಶೂನ್ಯರೇನುಮುದ್ದು ನಾರಿಯರೆಲ್ಲ ಕದ್ದು ಓಡಿದರೇನುಗೆದ್ದವರು ಬಿದ್ದವರ ನೋಯಿಸಿದರೇನು ||ನವಕೋಟಿ ನಾಯಕರು ನೀತಿ ಬಾಹಿರರೇನುಕುವಲಯದಿ ಕುಜನ ಸಂಕುಲ ಹೆಚ್ಚಿತೇನುಕವಿ ಕಲಾವಿದರೆಲ್ಲ ಕಪಟವಾಡಿದರೇನುಭುವಿಗೆ ಕೇಶವಧ್ಯಾನ ಭಂಗವಾಯಿತೇನು ||
ಎಂಬುದಾಗಿ ಹಾಡಿದ ಈ ಕನಕದಾಸರ ನುಡಿಗಳಲ್ಲಿ ಭೂಕಂಪನಕ್ಕೆ ಕಾರಣ ವೇದ-ಶಾಸ ಬಲ್ಲವರು ಹಾದಿತಪ್ಪಿ ಅನ್ಯಾಯಕ್ಕಿಳಿದರೆ, ನಮ್ಮನ್ನಾಳುವವರು ಹಾದಿ ತಪ್ಪಿ, ಜನರ ದುಡ್ಡನ್ನು ತಾವೇ ನುಂಗಿದರೆ, ವ್ಯಾಪಾರಿಗಳು ಕೇವಲ ಲಾಭದಾಸೆಗೆ ನಿಂತರೆ, ಸ್ವಾಮಿಗಳೆನಿಸಿಕೊಂಡವರೂ ಸ್ವಾರ್ಥಕ್ಕೆ ನಿಂತು ಹಣ, ವಾಹನ, ಆಡಂಬರಗಳಿಗೆ ಮನಸೋತರೇನು, ಓದಿಕೊಂಡವರೇ ತಮ್ಮ ವಿದ್ಯೆಗಳನ್ನು ಮಾರಿಕೊಂಡು ಹಣಗಳಿಸಲು ನಿಂತರೆ, ಬುದ್ಧಿಜೀವಿಗಳು, ವಿಚಾರವಾದಿಗಳು, ಧರ್ಮ, ಭಾವನೆಗಳಿಗೆ ಬೆಲೆ ಕೊಡದೇ ತಮಗೆ ಸರಕಾರ ಕೊಡುವ ಸೌಲಭ್ಯಗಳಿಗೆ ಸೋತು ಭಾವನೆಗಳೇನು, ಬುದ್ಧಿಯೇ ಇಲ್ಲದಂತಾದರೆ, ಮುದ್ದು ಸುಂದರ ನಾರಿಯರು ವರ್ಣ ಸಂಕರ ಮಾಡಿ ಕಂಡವರ ಹಿಂದೆ ಓಡಿದರೇನು, ಗೆದ್ದವರೆಲ್ಲ ಸೋತವರನ್ನು ಕಂಡು ಅಪಹಾಸ್ಯ ಮಾಡಿ ನಕ್ಕು ನೋಯಿಸಿದರೇನು, ಕವಿ,ಕಲಾವಿದರು ತಮ್ಮ ಕಲೆಯ ಮೂಲಕ ಜನರ ದಾರಿ ತಪ್ಪಿಸಿದರೇನು? ಭೂಮಿ ಮೇಲಿರುವ ಜನ ದೇವರನ್ನೇ ಮರೆತರೇನು? ನೋಡಿದಿರಾ ಈ ಎಲ್ಲಾ ಕಾರಣ ಗಳೂ ಭೂಮಿ ಕಂಪಿಸುವುದಕ್ಕೆ ಕಾರಣ.
ಇದರಲ್ಲಿ ಯಾವುದೂ ಸುಳ್ಳಿಲ್ಲ, ಇವೆಲ್ಲ ನಿತ್ಯ ನಡೆಯುತ್ತಿವೆ. ಭೂಕಂಪನವೇನು, ಪ್ರಳಯವಾಗಿ ಕೊಚ್ಚಿ ಹೋದರೂ ಆಶ್ಚರ್ಯವಿಲ್ಲ ಅಲ್ಲವೇ? ಇಷ್ಟು ಅಂಗೈ ನೆಲ್ಲಿಕಾಯಿಯಂತೆ ಧರ್ಮ ಸ್ಪಷ್ಟವಿರುವಾಗ ನಾವು ನಮಗಾಗುವ ಪ್ರಾಕೃತಿಕ ಕೋಪಗಳಿಗೆ ಕಾರಣವನ್ನು ಜ್ಞಾನದ ಮೂಲಕವೇ ಹುಡುಕುತ್ತಿದ್ದೇವೆ. ಅದುಬಿಟ್ಟು ನಾವು ಧರ್ಮ, ಮಾನವೀಯತೆ ಬಿಟ್ಟು ನಡೆಯುತ್ತೇವೆಂದರೆ, ಇಂಥವರನ್ನೂ ಕಾಪಾಡುವ ದೇವರೇ ಇನ್ನೂ ಹುಟ್ಟಿಲ್ಲವೆನ್ನಬೇಕಷ್ಟೆ