ಪೆಟ್ರೋಲ್-ಕೋವಿಡ್ ಅವಲೋಕನ
ಶಿಶಿರ ಕಾಲ
ಶಿಶಿರ್‌ ಹೆಗಡೆ
@.
ತೈಲ ಉತ್ಪಾದನೆಯಲ್ಲಿ ಭಾರತದ್ದು 20 ನೇ ಸ್ಥಾನ, ಬಳಕೆಯಲ್ಲಿ ಮೂರನೇ ಸ್ಥಾನ. ದೇಶದಲ್ಲಿ ಉತ್ಪಾದನೆಯಾಗುವ ಶೇ.16 ರಷ್ಟು ಪೆಟ್ರೊಲ್ ಬಳಕೆಯಾದರೆ ಉಳಿದ ಭಾಗವನ್ನು ವಿದೇಶಿಗಳಿಂದ ಖರೀದಿಸಬೇಕಾದ ಸ್ಥಿತಿ!
ಕೋವಿಡ್ ಈ ಸ್ಥಿತಿಗೆ ಭಾರತ ಬಿಡಿ, ಬಹುಶಃ ಯಾವ ದೇಶವೂ ತಯಾರಿರುವುದು ಅಸಾಧ್ಯದ ಮಾತು. ತಯಾರಾಗಿರದಿದ್ದೇ ಸರಿ. ಏಕೆಂದರೆ ಇದಕ್ಕೆ ತಯಾರಾ ಗಿರುವಷ್ಟು ಖರ್ಚನ್ನು ನಿಭಾಯಿಸುವ ಶಕ್ತಿ ಯಾವ ದೇಶಕ್ಕೂ ಇಲ್ಲ. ಹಾಗೆ ತಯಾರಾಗಿ ಏನೂ ಆಗದಿದ್ದರೆ ಅದೆಲ್ಲ ಹೊಳೆಯಲ್ಲಿ ತೊಳೆದ ಹುಣಸೆ ಹಣ್ಣು. ಹಾಗಾಗಿ ಇದೆಲ್ಲವೂ ಹೀಗೆಯೇ ಬಂದಹಾಗೆ ಸ್ವೀಕರಿಸಬೇಕು, ಪರಿಣಾಮವನ್ನು ಎಲ್ಲರೂ, ಎಲ್ಲ ದೇಶದವರೂ ಸೇರಿ ಅನುಭವಿಸಲೇಬೇಕು.
ಇಲ್ಲಿ ಸಮಸ್ಯೆ ಕೇವಲ ವೈರಸ್, ಸಾವು ಇವುಗಳದ್ದಲ್ಲ. ಇಂದಿನ ಜಗತ್ತು ವಸುದೈವ ಕುಟುಂಬವೇ. ಇದು ಸರಿ ಯಾಗಿ ಅರ್ಥವಾಗುವುದು ನಾವು ಅಂತಾರಾಷ್ಟ್ರೀಯ ಸರಬರಾಜು ವ್ಯವಸ್ಥೆ, ಅದರಲ್ಲಿ ಕರೋನಾದಿಂದಾಗಿ ಆದ ಬದಲಾವಣೆಗಳನ್ನು ಗಮನಿಸಿದಾಗ. ಈ ಸರಬರಾಜು ವ್ಯವಸ್ಥೆ ಮನುಷ್ಯನ, ದೇಶದ, ಸ್ಥಳದ ಅವಶ್ಯಕತೆಯನ್ನಾ ಧರಿಸಿ ಅದೆಷ್ಟೋ ದಶಕದಿಂದ ನಿಧಾನವಾಗಿ ಬೆಳೆದು ನಿಂತು ಬದುಕಿಗೆ ಕೊಂಡಿಯಾಗಿದೆ. ಉದಾಹರಣೆಗೆ ಎರಡು ದಶಕದ ಹಿಂದೆ ಅಮೆರಿಕಾದ ದೊಡ್ಡ ಎರಡು ಐಸ್ಕ್ರೀಮ್ ಕಂಪನಿಗಳು ವೆನಿಲಾವನ್ನು ಮಡಗಾಸ್ಕರ್‌ನಿಂದ ಆಮದು ಕಡಿತಗೊಳಿಸಿ ಭಾರತದತ್ತ ಮುಖಮಾಡಿದ್ದವು.
ಆಗ ಶಿರಸಿ, ಅರೆ ಮಲೆನಾಡಿನ ರೈತರೆಲ್ಲ ವೆನಿ ಬೆಳೆಯಲು ಶುರು ಮಾಡಿದರು. ಅವರಿಗೆ ಬೆಲೆ, ಲೋಕಲ್ ಎಪಿಎಂಸಿ ಬೇಡಿಕೆ ಅಷ್ಟೇ ಗೊತ್ತು. ಅವರು ಬೆಳೆದದ್ದು ಎಲ್ಲಿಗೆ ಹೋಗುತ್ತದೆ ಎಂಬಿತ್ಯಾದಿಯೆಲ್ಲ ಅಪ್ರಸ್ತುತ. ಆ ಭಾಗದ ರೈತರೆಲ್ಲ ಒಮ್ಮಿಂದೊಮ್ಮೆಲೆ ವೆನಿ ಬೆಳೆಯಲು ಶುರುಮಾಡಿದರು. ಆದರೆ ಆಮೇಲೆ ಗುಣಮಟ್ಟ ಸರಿಯಿಲ್ಲ ಎಂದು ಮತ್ತೆ ಆ ಕಂಪನಿಗಳು ಮಡಗಾಸ್ಕರ್‌ನತ್ತ ಹೊರಳಿದಾಗ ಶಿರಸಿಯ ರೈತನ ವೆನಿ ಕೇಳುವವರೇ ಇರದಂತಾಯಿತು. ಹೀಗೆ ಇಂದಿನ ಜಗತ್ತಿನಲ್ಲಿ ಎಲ್ಲಿಂದೆ ಕನೆಕ್ಷನ್ನು. ಎಲ್ಲಿಯೋ ಕೂತ ಯಾರದ್ದೇ ಒಬ್ಬನ ನಿರ್ಧಾರ ಇನ್ನೆಲ್ಲಿಯೋ, ಯಾರಿಗೋ ಪರಿಣಾಮ ಬೀರುತ್ತದೆ. ಹೀಗಾಗಿ ಈ ಈ ಬೆಲೆ ಏರಿಕೆ ಇಳಿಕೆಯ ಅಂದಾಜು ಹತ್ತುವು ದಿಲ್ಲ.
ಕರೋನಾ ವೈರಸ್ ನಿಧಾನವಾಗಿ ಸಮಯ ತೆಗೆದುಕೊಂಡು ದೇಶದಿಂದ ದೇಶಕ್ಕೆ ಹರಡಿದ್ದರೆ ಇದರ ಪರಿಣಾಮ ಈ ರೀತಿಯದ್ದಾಗಿರುತ್ತಿರಲಿಲ್ಲ. ವ್ಯವಸ್ಥೆ ಅದಕ್ಕನು ಗುಣವಾಗಿ ಅಡ್ಜಸ್ಟ್ ಆಗುತ್ತಿತ್ತು. ಆದರೆ ಕರೋನಾ ಬಂದ ವೇಗಕ್ಕೆ ಮನಷ್ಯ ತನ್ನ ಜೀವನವನ್ನು ಬದಲಾಯಿಸಿಕೊಳ್ಳಬೇಕಾಯಿತು. ಈ ಬದಲಾವಣೆ ಯಿಂದ ಜಾಗತಿಕ ವ್ಯವಸ್ಥೆ, ರಾಜಕೀಯ, ಮಣ್ಣು ಮಸಣ ಎಲ್ಲವೂ ಅತ್ಯಲ್ಪ ಕಾಲದಲ್ಲಿ ಬದಲಾಗಿ ಹೋಯಿತು. ಅದರಲ್ಲಿ ಅತಿ ಹೆಚ್ಚು ಹಿಂದೆಮುಂದೆ ಆಗಿದ್ದು ತೀರಾ ಸಂಕೀರ್ಣ ಸರಬರಾಜು ವ್ಯವಸ್ಥೆಯಾದ ಪೆಟ್ರೋಲಿಯಂ.
ಕರೋನಾ ಬಂದ ಹೊಸತರಲ್ಲಿ ಜಗತ್ತು ಪೆಟ್ರೋಲ್ ಬಳಕೆಯನ್ನು ಒಮ್ಮಿಂದೊಮ್ಮೆಲೆ ಕಡಿಮೆ ಮಾಡಿಬಿಟ್ಟಿತ್ತಲ್ಲ. ಪೆಟ್ರೋಲ್ ಅತಿ ಹೆಚ್ಚು ಬಳಸುವ ದೇಶಗಳಲ್ಲಿ ಒಂದಾದ ಚೀನಾದಲ್ಲಿ ಕರೋನ ಶುರುವಾಗಿದ್ದು. ನಂತರ ಹರಡಿದ್ದು ಇನ್ನೊಂದು ಅತಿ ಹೆಚ್ಚು ಪೆಟ್ರೋಲ್ ಬಳಸುವ ಅಮೆರಿಕಾ ದಲ್ಲಿ. ತದನಂತರ ಮೂರನೆಯ ಬಳಕೆಯ ಭಾರತಕ್ಕೆ. ಕರೋನಾ ಹರಡಿದಲ್ಲ ಪೆಟ್ರೋಲ್ ಬಳಕೆ ಕುಸಿಯಿತು. 2020-2021ರಅವಽಯಲ್ಲಿ ಜಗತ್ತು ಬಳಸಿದ ಪೆಟ್ರೋಲ್ ದಶಕದ ಹಿಂದೆ ಬಳಸಿ ದಷ್ಟು ಎನ್ನುವುದು ಲೆಕ್ಕ. ಒಟ್ಟಾರೆ ಒಮ್ಮಿಂದೊಮ್ಮೆಲೆ ಕುಸಿದ ಬೇಡಿಕೆ. ಪೆಟ್ರೋಲ್ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನೆಗೆಟಿವ್ ಆಗಿತ್ತು ಎನ್ನುವಸುದ್ದಿ ಹಿಂದಿನ ವರ್ಷ ಕೇಳಿರಬಹುದು. ಅದರರ್ಥ ಪೆಟ್ರೋಲ್ ಪುಕ್ಸಟ್ಟೆ ಲಭ್ಯ, ಪೆಟ್ರೋಲ್ ತೆಗೆದುಕೊಂಡರೆ ದುಡ್ಡು ಮೇಲಿಂದ ಕೊಡುತ್ತಾರೆ ಎಂದಾಗಿರಲಿಲ್ಲ.
ಪೆಟ್ರೋಲ್ ಖರೀದಿಸುವ ಕಂಪನಿಗಳು ಸಾಮಾನ್ಯವಾಗಿ ಆಯಾ ದಿನದ ರೇಟ್ ಕೊಟ್ಟು ಅಂಗಡಿಗೆ ಹೋಗಿ ಕೊತ್ತುಂಬರಿ ಸೊಪ್ಪು ತಂದಂತೆ ವ್ಯವಹರಿಸುವುದಿಲ್ಲ. ಬೆಲೆ ನಿಗದಿಯಾಗುವುದು ಫ್ಯೂಚರ್ ರೇಟ್‌ನಲ್ಲಿ. ಎಂದರೆ ಮುಂದಿನ ಆರು ತಿಂಗಳಿನ ಬೆಲೆಯ ಅಂದಾಜನ್ನು ಈಗಲೇ ಗೊತ್ತು ಮಾಡಿ, ಪಟ್ಟಿ ಹಚ್ಚಿ ನಡೆಯುವ ವ್ಯವಹಾರ. ಆ ಕಾರಣಕ್ಕೆ ಕರೋನಾ ಬಂದು ಲಾಕ್‌ಡೌನ್ ಆದ ಮಾರನೆಯ ದಿನ ಪೆಟ್ರೋಲ್ ಖರೀದಿಸುವವರಿಲ್ಲ ಎಂದು ಬೆಲೆ ಬಿದ್ದು ಬಿಡಲಿಲ್ಲ. ಮುಂದಿನ ಆರು ತಿಂಗಳ ವ್ಯವಹಾರ ಹಿಂದೆ ನಿಗದಿಯಾದದ್ದು. ಹಾಗಾಗಿ ಪೆಟ್ರೋಲ್ ಉತ್ಪಾದನೆಯ ದೇಶಗಳಿಗೆ ಬೇಡಿಕೆ ಕಡಿಮೆಯಾಗಲಿಲ್ಲ. ಅದಲ್ಲದೇ ಜಗತ್ತಿನ ಎಲ್ಲ ಪೆಟ್ರೋಲ್ ಕಂಪನಿಗಳೂ ಕರೋನಾ ಹೋಗಿ ಬಿಡಬಹುದು ಎಂದು ಮತ್ತಿನ್ನೊಂದು ಆರು ತಿಂಗಳ ವ್ಯವಹಾರವನ್ನೂ ಮಾಡಿಬಿಟ್ಟವು.
ಯಾವಾಗ ಇದೆಲ್ಲ ಕುಸಿದ ಬೇಡಿಕೆ ಒಂದು ವರ್ಷದಿಂದಾಚೆಯೂ ಹಾಗೆಯೇ ಮುಂದುವರೆಯಿತೋ, ಆಗ ಹೊರತೆಗೆದ ಪೆಟ್ರೋಲ್ ಬೇಡಿಕೆಗಿಂತ ಜಾಸ್ತಿಯಾದದ್ದ ರಿಂದ ಅಲ್ಲಿಂದ ಮುಂದಿನ ಆರು ತಿಂಗಳ ಬೆಲೆ (ಫ್ಯೂಚರ್) ನೆಗೆಟಿವ್ ನಂಬರ್ ತಲುಪಿತ್ತು. ಇಂಥದ್ದೊಂದು ಸ್ಥಿತಿಯಲ್ಲಿ ಒಪೆಕ್ ರಾಷ್ಟ್ರಗಳಿಗೆ ಬಚಾವ್ಆಗಬೇಕೆಂದರೆ ಇದನ್ನು ನಿಭಾಯಿಸಲೇ ಬೇಕಾದ ಸ್ಥಿತಿ. ವಸ್ತು ಯಾವುದೇ ಇರಲಿ ಡಿಮ್ಯಾಂಡ್ ಕಡಿಮೆಯಾದಾಗ ಕೃತಕವಾಗಿ ಸಪ್ಲೈನ ಕೊರತೆಯನ್ನು ನಿರ್ಮಿಸ ದಿದ್ದಲ್ಲಿ ಬೆಲೆ ಕುಸಿಯಲೇ ಬೇಕು ಅಲ್ವೇ? ಆದರೆ ಪೆಟ್ರೋಲ್ ಬೆಲೆ ಹಾಗಾಗಲೇ ಇಲ್ಲ, ಇದಕ್ಕೆ ಕಾರಣ ಪಟ್ರೋಲ್ ಉತ್ಪಾದಿಸುವ ದೇಶಗಳು ಕಟ್ಟಿಕೊಂಡ ಒಪೆಕ್ ಎಂಬ ಒಕ್ಕೂಟ. ಒಂದು ವೇಳೆ ಒಪೆಕ್ ರಾಷ್ಟ್ರಗಳು ಹೀಗೊಂದು ಕೂಟ ಮಾಡಿಕೊಂಡು ಒಮ್ಮತ ದಿಂದ ಪೆಟ್ರೋಲ್ ಉತ್ಪಾದನೆ ಕಡಿಮೆ ಮಾಡದಿದ್ದಲ್ಲಿಪೆಟ್ರೋಲ್ ಬೆಲೆ ಇಪ್ಪತ್ತು ರುಪಾಯಿಗೆ ಕುಸಿದುಬಿಡಬಹುದಿತ್ತು.
ಪೆಟ್ರೋಲ್ ಬೆಲೆ ಭವಿಷ್ಯದ ಲೆಕ್ಕದಲ್ಲಿ ವ್ಯವಹಾರವಾಗುವುದರಿಂದ ಪೆಟ್ರೋಲ್ ಉತ್ಪಾದಿಸುವ ದೇಶಗಳೆಲ್ಲ ಕರೋನಾದಿಂದ ಉತ್ಪಾದನೆ ಕಡಿತಗೊಳಿಸಿದವು.ಇದರಿಂದ ಹೊಡೆತ ತಿಂದದ್ದು, ತಿನ್ನುತ್ತಿರುವುದು ಭಾರತವೂ ಸೇರಿದಂತೆ ಪೆಟ್ರೋಲ್ ಪರಾವಲಂಬಿ ದೇಶಗಳು. ಇಂದು ಜಗತ್ತಿನ ಅತಿಹೆಚ್ಚು ಪೆಟ್ರೋಲಿಯಂ ಉತ್ಪಾದಿಸುವ ಹಾಗೂ ಬಳಸುವ ದೇಶ ಅಮೆರಿಕಾ. ಉತ್ಪಾದನೆಯಲ್ಲಿ ಎರಡನೆಯದು ಸೌದಿ ಅರೇಬಿಯಾ, ಮೂರನೆಯದು ರಷ್ಯಾ ಹಾಗೂ ನಾಲ್ಕನೇಯದ್ದು ಚೀನಾ. ಅಮೆರಿಕಾ ಜಗತ್ತಿನ 20.3% ಪೆಟ್ರೋಲಿಯಂ ಬಳಸಿದರೆ, ಎರಡನೆಯ ಅತಿ ಹೆಚ್ಚು ಬಳಸುವ ದೇಶ ಚೀನಾ. ಆದರೆ ಭಾರತದ ಪರಿಸ್ಥಿತಿಯೇ ಬೇರೆ.
ನಮ್ಮಲ್ಲಿರುವುದು ಜಗತ್ತಿನ ಪೆಟ್ರೋಲ್ ರಿಸರ್ವ್‌ನ ಶೇ.1ಕ್ಕಿಂತ ಕಡಿಮೆ. ಭಾರತ ಉತ್ಪಾದನೆಯಲ್ಲಿ ಇಪ್ಪತ್ತನೇ ಸ್ಥಾನ ಹಾಗೂ ಬಳಕೆಯಲ್ಲಿ ಮೂರನೇ ಸ್ಥಾನ. ನಮ್ಮಲ್ಲಿಯೇ ಉತ್ಪಾದನೆಯಾಗುವ ಪೆಟ್ರೋಲ್ ಶೇ.16ರಷ್ಟು ಬಳಕೆಯಾದರೆ ಉಳಿದ ಶೇ.೮೪ರಷ್ಟು ವಿದೇಶದಿಂದ ಖರೀದಿಸಬೇಕಾದ ಸ್ಥಿತಿ. ಇದೆಲ್ಲದರಿಂದಾಗಿ ಭಾರತದಲ್ಲಿ ಪೆಟ್ರೋಲ್ ಬೆಲೆ ಏರಲೇಬೇಕಾದದ್ದು ಅನಿವಾರ್ಯ.
ಅದಾಗಲೇ ಸೌದಿ ಮೊದಲಾದ ಮಿಡ್ಲ್ ಈಸ್ಟ್ ದೇಶಗಳು ಕಚ್ಚಾತೈಲದ ಉತ್ಪಾದನೆ ಕಡಿಮೆ ಮಾಡಿಬಿಟ್ಟಿದ್ದವು. ಬೇಡಿಕೆಗಿಂತ ಪೂರೈಕೆ, ಉತ್ಪಾದನೆ ಕಡಿಮೆ ಮಾಡಿದ್ದರಿಂದ ಬೆಲೆ ಏರುತ್ತಲಿತ್ತು. ಹಾಗಾಗಿ ಭಾರತ ತನ್ನ ಆಮದು ವ್ಯವಹಾರವನ್ನು ಬದಲಿಸಲೇ ಬೇಕಾದ, ಮಧ್ಯಪ್ರಾಚ್ಯ ದೇಶಗಳ ಮೇಲೆ ಅವಲಂಬನೆಯನ್ನು ಕಡಿಮೆಗೊಳಿಸುವ ಅನಿವಾರ್ಯತೆ ಅಲ್ಲಿ ನಿರ್ಮಾಣವಾಗಿತ್ತು. ಆ ಕಾರಣಕ್ಕೆ ಮೊದಲು ಆಮದು ಮಾಡಿಕೊಳ್ಳುತ್ತಿದ್ದ ದೇಶಗಳಾದ ಸೌದಿ, ಇರಾಕ್,  ಮೊದಲಾದ ದೇಶಗಳಿಂದ ಆಮದು ಕಡಿಮೆ ಮಾಡಿ ಅಮೆರಿಕಾ ಮತ್ತು ನೈಜೀರಿಯಾದಿಂದ ಆಮದು ಮಾಡಿಕೊಳ್ಳಲು ಭಾರತ ಶುರುಮಾಡಿತು.
ಭಾರತದಲ್ಲಿ ಅತಿ ಹೆಚ್ಚು ಅವಶ್ಯಕತೆ ಪೆಟ್ರೋಲ್‌ನದು. ಇಂದು ವಿಚಾರ, ಪೆಟ್ರೋಲ, ಡಿಸೈಲ್ ಇವೆಲ್ಲ ಕಚ್ಚಾತೈಲ ಪರಿಷ್ಕರಿಸಿದಾಗ ಸಿಗುವ ಉತ್ಪನ್ನಗಳು. ಆದರೆಎಲ್ಲ ದೇಶಗಳ ಕಚ್ಚಾತೈಲವೂ ಒಂದೇ ಅಲ್ಲ. ಅಮೆರಿಕಾ, ನೈಜೆರಿಯಾದ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳಲು ಇನ್ನೊಂದು ಕಾರಣ ಆ ದೇಶದ ಕಚ್ಚಾತೈಲ ಒಪೆಕ್ ದೇಶಗಳ ಕಚ್ಚಾತೈಲಕ್ಕಿಂತ ಹೆಚ್ಚು ಪೆಟ್ರೋಲ್ ಉತ್ಪಾದಿಸಲು ಸಾಧ್ಯ ಹಾಗೂ ಬೆಲೆ ಕೂಡ ಕಡಿಮೆ. ನೈಜೆರಿಯಾ ಮತ್ತು ಅಮೆರಿಕಾದಿಂದ ಭಾರತಕ್ಕೆ ತೈಲ ಸಮುದ್ರಮಾರ್ಗದಲ್ಲಿ ಬರಬೇಕು. ಹೀಗಾಗಿ ಅದು ಲಾಜಿಸ್ಟಿಕ್ ಕಾರಣದಿಂದ ತುಟ್ಟಿ.
ಹೀಗೆ ಈ ಹೊಸ ವ್ಯವಹಾರದಿಂದ ಬೆಲೆ ಹೆಚ್ಚೆನಿಸಿದರೂ ಇದು ಒಪೆಕ್ ರಾಷ್ಟ್ರಗಳನ್ನಷ್ಟೇ ಅವಲಂಬಿಸಿದ್ದಲ್ಲಿ ಇನ್ನಷ್ಟು ದುಬಾರಿಯಾಗುತ್ತಿತ್ತು. ಹಾಗಂತ ಇಂದು ಭಾರತ ಕೇವಲ ಅಮೆರಿಕಾ ಮತ್ತು ನೈಜೆರಿಯಾವನ್ನಷ್ಟೇ ಅವಲಂಬಿಸಿದೆ ಎಂದು ತಪ್ಪಾಗಿ ತಿಳಿಯಬೇಡಿ. ಇಂದಿಗೂ ಇರಾಕ್ ನಂಬರ್ ಒನ್. ಆದರೆ ಎರಡನೆ ಯದು ಅಮೆರಿಕಾ, ಮೂರನೆಯದು ನೈಜೇರಿಯಾ, ನಾಲ್ಕನೆಯದು ಸೌದಿ. ಇದೊಂದು ಭಾರತದ ತೀರಾ ಲೆಕ್ಕಾಚಾರದ ನಡೆ. ಮಿಡ್ಲ್ ಈಸ್ಟ್ ನಿಂದ ಆಮಾದಾ ಗುತ್ತಿದ್ದ ಕಚ್ಚಾ ತೈಲದಲ್ಲಿ ಡಿಸೈಲ್ ಉತ್ಪನ್ನದ ಪ್ರಮಾಣ ಜಾಸ್ತಿ ಆದರೆ ಭಾರತದಲ್ಲಿ ಡಿಸೈಲ್ ಅವಶ್ಯಕತೆ ಸಾಂಕ್ರಾಮಿಕದಿಂದ ತಗ್ಗಿದ್ದಕ್ಕಾಗಿ ಇದು ಕೂಡ ಅಮೆರಿಕಾ ಮತ್ತು ನೈಜೆರಿಯಾದತ್ತ ಹೊರಳುವಂತೆ ಮಾಡಿತು ಎನ್ನುವ ಅನಿಸಿಕೆಯಿದೆ.
ಕಚ್ಚಾತೈಲಕ್ಕೆ ಒಂದೇ ದೇಶವನ್ನು ಅವಲಂಬಿಸುವುದು ಮೂರ್ಖತನ. ಆ ದಡ್ಡತನವನ್ನು ಮಾಡಿದ್ದು ಯುರೋಪಿಯನ್ ದೇಶಗಳು. ಯುರೋಪಿಯನ್ ಒಕ್ಕೂಟದ ದೇಶಗಳಿಗೆ ಶೇ.42 ಕಚ್ಚಾತೈಲ ಒದಗಿಸುವುದು ರಷ್ಯಾ. ಎರಡನೇ ಮಹಾಯುದ್ಧ ಮುಗಿದ ನಂತರ, 1960ರ ನಂತರ ಯುರೋಪ್ ರಷ್ಯಾದಿಂದ ಕಚ್ಚಾತೈಲ ಆಮದು ಮಾಡಿಕೊಳ್ಳಲು ಶುರುಮಾಡಿದ್ದು. ರಷ್ಯಾದ ಸೈಬೀರಿಯಾ ತೈಲ ನಿಕ್ಷೇಪದಿಂದ ಭೂಮಾರ್ಗವಾಗಿ ಬೆಲಾರುಸ್, ಪೋಲೆಂಡ್, ಜರ್ಮನಿ, ಉಕ್ರೈನ್, ರೊಮೇನಿಯಾ ಮೊದಲಾದ ದೇಶಗಳಿಗೆ ಸಾಗಿಸಲು ಪೈಪಲೈನ್‌ಗಳಿವೆ. ಅಲ್ಲಿ ಪರಿಷ್ಕರಿಸಿ ಯೂರೋಪಿನ ಉಳಿದ ದೇಶಗಳಿಗೆ ಪೆಟ್ರೋಲ್ ಉತ್ಪನ್ನಗಳು ರವಾನೆ ಯಾಗುತ್ತವೆ. ಬಹುತೇಕ ಯುರೋಪ್ ತೈಲಕ್ಕೆ ನೆಚ್ಚಿಕೊಂಡಿದ್ದು ರಷ್ಯಾವನ್ನೆ.
ನಂತರದಲ್ಲಿ ಮಧ್ಯಪ್ರಾಚ್ಯ ದೇಶಗಳು. ಈಗ ಆಗಿದ್ದೇನೆಂದರೆ ಒಪೆಕ್ ಪ್ಲಸ್ ದೇಶವಾದ ರಷ್ಯಾ ಒಮ್ಮೆಗೆ ತೈಲೋತ್ಪಾದನೆ ಕಡಿಮೆ ಮಾಡಿಬಿಟ್ಟಿದೆ. ಈ ದೇಶಗಳಲ್ಲಿ ಕೆಲವು ಲ್ಯಾಂಡ್ ಲೋಕ್ ದೇಶಗಳು. ಎಂದರೆ ಇಲ್ಲಿ ಸಮುದ್ರ ತಟಗಳಿಲ್ಲ, ಬಂದರುಗಳಿಲ್ಲ. ಹಾಗಾಗಿ ಭಾರತದಂತೆ ಇನ್ನೊಂದು ದೇಶದತ್ತ ಹೊರಳುವ ಅವಕಾಶ ಅಷ್ಟು ಸುಲಭವಲ್ಲ. ಇಲ್ಲಿ ಬೆಲೆ ಹೆಚ್ಚಿತೆಂದು ಇನ್ನೊಂದು ದೇಶದ ಜೊತೆ ಖರೀದಿಗೆ ನಿಂತರೆ ಅದರ ಸಾಗಣೆಯ ಖರ್ಚು ಕೂಡ ಜಾಸ್ತಿಯಾಗಿ ಅಲ್ಲಿಂದಲ್ಲಿಗಾಗುತ್ತದೆ. ಆ ಕಾರಣಕ್ಕೆ ಯುರೋಪ್ ದೇಶಗಳಲ್ಲಿ ಕಚ್ಚಾತೈಲಕ್ಕೆ ತಗಲುವ ವೆಚ್ಚ ಕಳೆದೆರಡು ವರ್ಷದಲ್ಲಿ ಶೇ.397 ಹೆಚ್ಚಿದೆ. ಯುರೋಪ್ ದೇಶಗಳು ರಷ್ಯಾದ ಈ ಕತ್ತು ಹಿಚುಕುವ ಕೆಲಸವನ್ನು ಇಂದು ಖಂಡಿಸುತ್ತಿವೆ. ಪುಟಿನ್ ಕ್ಯಾರೇ ಅನ್ನುತ್ತಿಲ್ಲ.
ಮಧ್ಯಪ್ರಾಚ್ಯ ದೇಶಗಳು ಮಾತ್ರ ಈ ಒಂದು ಮಳೆಗಾಲ ಕಳೆದರೆ ಬಚಾವು ಎನ್ನುವ ರೀತಿಯಲ್ಲಿ ಉಸಿರುಗಟ್ಟಿ, ತೈಲೋತ್ಪಾದನೆ ಸೀಮಿತಗೊಳಿಸಿವೆ. ಉತ್ಪಾದನೆ ಯಾಗುವ ತೈಲವನ್ನು ಹೆಚ್ಚಿಗೆ ದುಡ್ಡು ಕೊಟ್ಟವರಿಗೆ ಮಾರುತ್ತಿವೆ. ಇಂತಹ ಸ್ಥಿತಿಯಲ್ಲಿ ಅಮೆರಿಕಾ ಕೂಡಾ ಹೀಗೆ ಮಾಡಬಹುದಿತ್ತು, ಆದರೆ ಮಾಡಲಿಲ್ಲ. ಈಗ ಹೇಳಿ – ಪೆಟ್ರೋಲ್ ಬೆಲೆ ಏರಿದ್ದು, ಏರಿಸಿದ್ದು ಮೋದಿಯೇ? ಪೂರೈಕೆ ಹೆಚ್ಚಾಗಿ ಬಳಕೆ ಕಡಿಮೆಯಾದರೆ ಬೆಲೆ ಕಡಿಮೆಯಾಗಬೇಕಲ್ಲ ಎಂದು ಮೊಂಡು ವಾದ ಮಾಡು ವವರಿಗೆ ಏನನ್ನಬೇಕು?